ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
azadi ka amrit mahotsav

ಆಹಾರ ಸಂಗ್ರಹಣೆ, ಲಾಜಿಸ್ಟಿಕ್ಸ್ ಮತ್ತು ಸಾರ್ವಜನಿಕ ವಿತರಣಾ ವ್ಯವಸ್ಥೆ ಬಲವರ್ಧನೆಗೆ ಪ್ರಮುಖ ಡಿಜಿಟಲ್ ಸುಧಾರಣೆಗಳನ್ನು ಘೋಷಿಸಿದ ಕೇಂದ್ರ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ


ಸರ್ಕಾರದ ಸಮಗ್ರ 'ಗತಿ ಶಕ್ತಿ' ಆಶಯದಂತೆ, ಲಾಜಿಸ್ಟಿಕ್ಸ್ ವೆಚ್ಚ ತಗ್ಗಿಸಲು ಮತ್ತು ದಕ್ಷತೆ ಹೆಚ್ಚಿಸಲು ಡಿಜಿಟಲ್ ವ್ಯವಸ್ಥೆಗಳ ಜಾರಿ

ಪಿ.ಡಿ.ಎಸ್ (PDS) ವ್ಯವಸ್ಥೆಯ ಬಲವರ್ಧನೆ ಮತ್ತು ಕಟ್ಟಕಡೆಯ ಬಡವರನ್ನು ತಲುಪುವಲ್ಲಿ ತಂತ್ರಜ್ಞಾನದ ಮಹತ್ವವನ್ನು ಸಾರಿ ಹೇಳಿದ ಕೇಂದ್ರ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ

ಸಾರ್ವಜನಿಕ ವಿತರಣೆಯಲ್ಲಿ ನಿಖರತೆ, ವೇಗ ಮತ್ತು ಹೊಣೆಗಾರಿಕೆಯನ್ನು ಹೆಚ್ಚಿಸಲು 'ಸ್ಮಾರ್ಟ್ ಉಗ್ರಾಣ' ಉಪಕ್ರಮಗಳು

Posted On: 18 NOV 2025 4:47PM by PIB Bengaluru

ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರು ಇಂದು, ಉಗ್ರಾಣ ಕಾರ್ಯಾಚರಣೆಗಳ ಆಧುನೀಕರಣ, ಪೂರೈಕೆ ಸರಪಳಿಯ ದಕ್ಷತೆ ಹೆಚ್ಚಳ ಮತ್ತು ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ (PDS) ಪಾರದರ್ಶಕತೆಯನ್ನು ತರುವ ಗುರಿಯನ್ನು ಹೊಂದಿರುವ ಹಲವು 'ಡಿಜಿಟಲ್ ಉಪಕ್ರಮ'ಗಳಿಗೆ ಚಾಲನೆ ನೀಡಿದರು. ಈ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರು, ಆಹಾರ ಮತ್ತು ಸಾರ್ವಜನಿಕ ವಿತರಣಾ ವಲಯದಲ್ಲಿ ಡಿಜಿಟಲ್ ಬದಲಾವಣೆಗಳನ್ನು ತರುವ ನಿಟ್ಟಿನಲ್ಲಿ ಸಚಿವಾಲಯದ ನಿರಂತರ ಪ್ರಯತ್ನಗಳನ್ನು ಈ ವೇಳೆ ಒತ್ತಿ ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಪ್ರಲ್ಹಾದ್ ಜೋಶಿ ಅವರು, "ಲಾಜಿಸ್ಟಿಕ್ಸ್ ವೆಚ್ಚ (ಸಾಗಣೆ ವೆಚ್ಚ) ಮತ್ತು ಸರಕು ನಿರ್ವಹಣಾ ಸಮಯವನ್ನು ಕಡಿಮೆ ಮಾಡುವುದು ಪ್ರಧಾನ ಮಂತ್ರಿ ಅವರ ಪ್ರಮುಖ ರಾಷ್ಟ್ರೀಯ ಆದ್ಯತೆಯಾಗಿದೆ. ಇಂದಿನ ಈ ಹೊಸ ಉಪಕ್ರಮಗಳು ಸರ್ಕಾರದ ಆ ಧ್ಯೇಯಕ್ಕೆ ಬೆಂಬಲ ನೀಡುತ್ತವೆ," ಎಂದು ಹೇಳಿದರು. 'ಪಿಎಂ ಗತಿ ಶಕ್ತಿ' ಯೋಜನೆಯು ಸಾರಿಗೆಯ ವಿವಿಧ ವಿಧಾನಗಳನ್ನು ಏಕೀಕೃತಗೊಳಿಸಿದೆ ಮತ್ತು ಸಮಗ್ರ ಲಾಜಿಸ್ಟಿಕ್ಸ್ ಪರಿಸರ ವ್ಯವಸ್ಥೆಗೆ ಭದ್ರ ಅಡಿಪಾಯ ಹಾಕಿದೆ ಎಂದು ಅವರು ಅಭಿಪ್ರಾಯಪಟ್ಟರು. ನಾಯಕತ್ವದ ವಿಶ್ವಾಸಾರ್ಹತೆ, ನೀತಿಯ ಸ್ಥಿರತೆ ಮತ್ತು ನಿರಂತರತೆಯೇ ನಾಗರಿಕರಲ್ಲಿ ನಂಬಿಕೆಯನ್ನು ಮೂಡಿಸುತ್ತದೆ ಎಂದು ಅವರು ತಿಳಿಸಿದರು. ಈ ದೃಷ್ಟಿಕೋನಕ್ಕೆ ಅನುಗುಣವಾಗಿ, 'ಭಂಡಾರನ್ 360' ನಂತಹ ಡಿಜಿಟಲ್ ಪ್ಲಾಟ್ ಫಾರ್ಮ್ ಗಳು ದೇಶಾದ್ಯಂತ ಪೂರೈಕೆ ಸರಪಳಿಯ ದಕ್ಷತೆಯನ್ನು ಇನ್ನಷ್ಟು ಬಲಪಡಿಸಲಿವೆ ಮತ್ತು ತಂತ್ರಜ್ಞಾನವು ಸೇವಾ ವಿತರಣೆಯಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸಲಿದೆ ಎಂದು ಅವರು ಹೇಳಿದರು.

ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯ ಪಾಲುದಾರರ ನಡುವಿನ ಸುಧಾರಿತ ಸಮನ್ವಯ ಹಾಗೂ 'ಕೃತಕ ಬುದ್ಧಿಮತ್ತೆ' (AI) ಆಧಾರಿತ ವ್ಯವಸ್ಥೆಗಳ ನೆರವಿನಿಂದ, ಸಬ್ಸಿಡಿ ಆಹಾರ ಧಾನ್ಯಗಳು ಬಡ ಕುಟುಂಬಗಳಿಗೆ ಹೆಚ್ಚು ನಿಖರವಾಗಿ, ತ್ವರಿತವಾಗಿ ಮತ್ತು ಮುಖ್ಯವಾಗಿ ಘನತೆಯಿಂದ ತಲುಪುವುದನ್ನು ಖಾತ್ರಿಪಡಿಸಬಹುದು," ಎಂದು ಅವರು ತಿಳಿಸಿದರು. ತಂತ್ರಜ್ಞಾನದ ಪಾತ್ರದ ಮೇಲೆ ಒತ್ತು ನೀಡಿದ ಕೇಂದ್ರ ಸಚಿವರು, "ವ್ಯವಸ್ಥೆ ಎಷ್ಟೇ ಆಧುನಿಕವಾಗಿದ್ದರೂ, ಆ ತಂತ್ರಜ್ಞಾನದ ಹಿಂದೆ ಕೆಲಸ ಮಾಡುವ ಮನುಷ್ಯರು 'ಕರುಣೆ' ಮತ್ತು 'ಮಾನವೀಯ ಕಳಕಳಿ'ಯನ್ನು ಮೈಗೂಡಿಸಿಕೊಂಡಿರಬೇಕು. ಬುದ್ಧಿಯ ಜೊತೆಗೆ ಭಾವನೆಯೂ ಸೇರಿದಾಗ ಮಾತ್ರ ಸಮಾಜದ ಕಟ್ಟಕಡೆಯ ಬಡವರಿಗೂ  ಪಾರದರ್ಶಕ ಮತ್ತು ಪರಿಣಾಮಕಾರಿ ಸೇವೆ ಒದಗಿಸಲು ಸಾಧ್ಯ," ಎಂದು ಕಿವಿಮಾತು ಹೇಳಿದರು.

ಈ ಪರಿವರ್ತನೆಯ ಪ್ರಮುಖ ಭಾಗವೇ ಕೇಂದ್ರ ಉಗ್ರಾಣ ನಿಗಮದ (CWC) ಹೊಸ  ERP ಪ್ಲಾಟ್ ಫಾರ್ಮ್‌ ಆದ 'ಭಂಡಾರನ್ 360' (Bhandaran 360). ಇದು SAP S/4HANA ತಂತ್ರಜ್ಞಾನದ ಆಧಾರದ ಮೇಲೆ ರೂಪುಗೊಂಡಿದೆ. ನಿಗದಿತ ಸಮಯಕ್ಕಿಂತ ಮುಂಚಿತವಾಗಿಯೇ ಜಾರಿಗೊಂಡಿರುವ ಈ ವ್ಯವಸ್ಥೆಯು; ಮಾನವ ಸಂಪನ್ಮೂಲ (HR), ಹಣಕಾಸು, ಮಾರುಕಟ್ಟೆ, ಉಗ್ರಾಣ ನಿರ್ವಹಣೆ, ಗುತ್ತಿಗೆ ನಿರ್ವಹಣೆ ಮತ್ತು ಯೋಜನಾ ಉಸ್ತುವಾರಿಯಂತಹ 41 ವಿವಿಧ ಪ್ರಮುಖ ಕಾರ್ಯವಿಭಾಗಗಳನ್ನು (Modules) ಏಕೀಕೃತಗೊಳಿಸುತ್ತದೆ. ಅಲ್ಲದೆ, ಇದು ICEGATE, ಬಂದರು ವ್ಯವಸ್ಥೆಗಳು, FCI, NAFED, NCCF ಮತ್ತು WDRA ಸೇರಿದಂತೆ 35 ಬಾಹ್ಯ ಸಂಸ್ಥೆಗಳ ವ್ಯವಸ್ಥೆಗಳೊಂದಿಗೆ ನೇರ ಸಂಪರ್ಕ ಹೊಂದಿದೆ. ಇದರಿಂದಾಗಿ ಇಡೀ ಆಹಾರ ಸಂಗ್ರಹಣೆ ಮತ್ತು ಸಾಗಣೆ ವ್ಯವಸ್ಥೆಯಲ್ಲಿ ತಡೆರಹಿತ ಡಿಜಿಟಲ್ ಸಂಪರ್ಕ ಸಾಧ್ಯವಾಗಲಿದೆ.

ಹೊಸ ವ್ಯವಸ್ಥೆಯು ಕೆಳಗಿನ ಪ್ರಮುಖ ಸೌಲಭ್ಯಗಳನ್ನು ಪರಿಚಯಿಸುತ್ತಿದೆ:

  • ಭದ್ರತೆಯನ್ನು ಹೆಚ್ಚಿಸಲು ಮತ್ತು ಮನುಷ್ಯರ ಮೇಲಿನ ಅವಲಂಬನೆಯನ್ನು  ಕಡಿಮೆ ಮಾಡಲು 'ಸಿಂಗಲ್ ಸೈನ್-ಆನ್' ಮತ್ತು 'ಹುದ್ದೆ ಆಧಾರಿತ ಪ್ರವೇಶ' ಸೌಲಭ್ಯ.
  • ಸಂಪೂರ್ಣ ಮಾಹಿತಿಯ ಸುರಕ್ಷತೆಗಾಗಿ 'ಎಂಡ್-ಟು-ಎಂಡ್ ಎನ್ಕ್ರಿಪ್ಶನ್'  ಮತ್ತು ಪಾರದರ್ಶಕತೆಗಾಗಿ 'ಆಡಿಟ್ ಟ್ರೇಲ್ಸ್'.
  • ಕೆಳಹಂತದ ಉಗ್ರಾಣದಿಂದ ಹಿಡಿದು ಮೇಲ್ಮಟ್ಟದ ಕಾರ್ಪೊರೇಟ್ ಕಚೇರಿಯವರೆಗಿನ ಎಲ್ಲಾ ಕಾರ್ಯಾಚರಣೆಗಳನ್ನು ತೋರಿಸುವ 'ರಿಯಲ್-ಟೈಮ್ ಡ್ಯಾಶ್ ಬೋರ್ಡ್‌ ಗಳು.
  • ಕೆಲಸದ ಸಮಯವನ್ನು ತಗ್ಗಿಸಲು ಮತ್ತು ವೇಗ ಹೆಚ್ಚಿಸಲು 'ಚಾಟ್ ಬಾಟ್' ಹಾಗೂ RPA ತಂತ್ರಜ್ಞಾನದೊಂದಿಗೆ ಕೂಡಿದ ಸ್ವಯಂಚಾಲಿತ ಕಾರ್ಯಪ್ರವಾಹಗಳು.
  • ವೇಗವಾಗಿ ಮತ್ತು ನಿಖರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಕರಿಸುವ 'ಪ್ರಿಡಿಕ್ಟಿವ್ ಅನಾಲಿಟಿಕ್ಸ್' (ಭವಿಷ್ಯದ ಸಾಧ್ಯತೆಗಳನ್ನು ವಿಶ್ಲೇಷಿಸುವ ತಂತ್ರಜ್ಞಾನ).

ನವೀಕರಿಸಿದ ಈ ವೇದಿಕೆಯು ಇನ್ನೂ ಹಲವು ಹೊಸ ವೈಶಿಷ್ಟ್ಯಗಳನ್ನು ಸೇರ್ಪಡೆಗೊಳಿಸಿದೆ. ಅವುಗಳೆಂದರೆ: 'ಲೀಡ್ ಮತ್ತು ಮಾರುಕಟ್ಟೆ ನಿರ್ವಹಣೆ', 'ಏಕೀಕೃತ HRMS, ಯೋಜನಾ ನಿರ್ವಹಣೆ, 'ಸ್ಯಾಪ್ ಫಿಕೋ' (SAP FICO), 'ಸ್ಮಾರ್ಟ್ ಸಾಮಗ್ರಿ ನಿರ್ವಹಣೆ', ಬಯೋಮೆಟ್ರಿಕ್ ಮತ್ತು ಜಿಯೋ-ಟ್ಯಾಗ್ ಆಧಾರಿತ ಹಾಜರಾತಿ, ಅಳತೆ ಪುಸ್ತಕಗಳಿಗಾಗಿ ಮೊಬೈಲ್ ಆ್ಯಪ್ ಮತ್ತು ಬಲಪಡಿಸಲಾದ ಗುತ್ತಿಗೆ ಉಸ್ತುವಾರಿ ವ್ಯವಸ್ಥೆ.

ಈ ಸುಧಾರಣೆಗಳು ಎಲ್ಲಾ CWC ಉಗ್ರಾಣಗಳಲ್ಲಿನ ಕಾರ್ಯಾಚರಣೆಗಳನ್ನು ಏಕರೂಪಗೊಳಿಸುತ್ತವೆ. ಅಲ್ಲದೆ, ಇವು ಸಂಸ್ಥೆಯ ತ್ವರಿತ ವಿಸ್ತರಣೆ, ಉತ್ತಮ ಸೇವಾ ಗುಣಮಟ್ಟ ಮತ್ತು ಸುಧಾರಿತ ಹೊಣೆಗಾರಿಕೆಗೆ ಬೆಂಬಲ ನೀಡುತ್ತವೆ. ಇದು ರೈತರು, ರೈತ ಉತ್ಪಾದಕ ಸಂಸ್ಥೆಗಳು (FPOs), ಸಹಕಾರಿ ಸಂಘಗಳು, ವರ್ತಕರು, ಸಣ್ಣ ಮತ್ತು ಮಧ್ಯಮ ಉದ್ಯಮಗಳು (MSME) ಹಾಗೂ ಇ-ಕಾಮರ್ಸ್ ಸಂಸ್ಥೆಗಳು ಸೇರಿದಂತೆ ಬೃಹತ್ ಉದ್ಯಮಗಳಿಗೆ 'ಸುಲಭ ವಾಣಿಜ್ಯ ವಹಿವಾಟು' ಮತ್ತು 'ಸುಲಭ ಜೀವನ' ನಡೆಸಲು ಸಹಾಯ ಮಾಡುತ್ತದೆ.

ಕಂಟೈನರ್ ಮತ್ತು ಸರಕು ನಿರ್ವಹಣೆಯನ್ನು ಸ್ವಯಂಚಾಲಿತಗೊಳಿಸಲು 'ಸ್ಮಾರ್ಟ್ EXIM ವೇರ್‌ಹೌಸ್ ಸಿಸ್ಟಮ್'

'ಡಿಜಿಟಲ್ ರೂಪಾಂತರ 2.0' ಅಡಿಯಲ್ಲಿ, CWC ಸಂಸ್ಥೆಯು ಕಂಟೈನರ್ ಫ್ರೈಟ್ ಸ್ಟೇಷನ್ ಗಳು (CFS/ICD) ಮತ್ತು ಸಾಮಾನ್ಯ ಉಗ್ರಾಣಗಳಿಗಾಗಿ 'ಸ್ಮಾರ್ಟ್ EXIM ವೇರ್‌ ಹೌಸ್ ಸಿಸ್ಟಮ್ 'ಅನ್ನು ಪರಿಚಯಿಸಿದೆ. ಈ ವ್ಯವಸ್ಥೆಯು ಪ್ರಮುಖ ಪ್ರಕ್ರಿಯೆಗಳನ್ನು ಸ್ವಯಂಚಾಲಿತಗೊಳಿಸಲು AI, IoT, ಫಾಸ್ಟ್ ಟ್ಯಾಗ್, OCR/ANPR, GNSS ಮತ್ತು ಇತರ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸುತ್ತದೆ.

ಇದರ ಪ್ರಮುಖ ಅಂಶಗಳು ಹೀಗಿವೆ:

  • ಇದು ಬಂದರು ಮತ್ತು ರೈಲ್ವೆ ವ್ಯವಸ್ಥೆಗಳೊಂದಿಗೆ ಸಂಯೋಜಿತವಾಗಿದ್ದು, ವಾಹನ ಮತ್ತು ಕಂಟೈನರ್ ವಿವರಗಳನ್ನು ಸ್ವಯಂಚಾಲಿತವಾಗಿ ಪಡೆದುಕೊಳ್ಳುತ್ತದೆ. ಫಾಸ್ಟ್ ಟ್ಯಾಗ್‌ ಆಧಾರಿತ ಪ್ರವೇಶ ಮತ್ತು ದಾಖಲೆಗಳ ಸ್ವಯಂ ಸೃಷ್ಟಿಗೆ ಇದು ಸಹಕಾರಿ.
  • ಇದು ಕಂಟೈನರ್ ಗಳು ಮತ್ತು ಉಪಕರಣಗಳ ರಿಯಲ್‌ -ಟೈಮ್ ಟ್ರ್ಯಾಕಿಂಗ್ ಒದಗಿಸುತ್ತದೆ ಮತ್ತು ಯಾರ್ಡ್ ನ ಒಳಗೆ ಸರಕುಗಳ ಚಲನೆಯನ್ನು ಅತ್ಯುತ್ತಮವಾಗಿಸಲು ಸಹಾಯ ಮಾಡುತ್ತದೆ.
  • ಇದು ನೈಜ ಸಮಯದಲ್ಲಿ ಸರಕುಗಳನ್ನು ಎಣಿಕೆ ಮತ್ತು ಟ್ರ್ಯಾಕ್ ಮಾಡುತ್ತದೆ. ಅಲ್ಲದೆ, ERP-WMS ಏಕೀಕರಣದೊಂದಿಗೆ ದಾಖಲೆಗಳನ್ನು ಸ್ವಯಂಚಾಲಿತವಾಗಿ ನವೀಕರಿಸುತ್ತದೆ.

ಈ ಉಪಕರಣಗಳು ಮಾನವ ಹಸ್ತಕ್ಷೇಪವನ್ನು ಕಡಿಮೆ ಮಾಡುತ್ತವೆ, ಸರಕು ನಿರ್ವಹಣೆಯನ್ನು ವೇಗಗೊಳಿಸುತ್ತವೆ ಮತ್ತು ಲಾಜಿಸ್ಟಿಕ್ಸ್ ಕಾರ್ಯಾಚರಣೆಗಳಲ್ಲಿ ಸಂಪೂರ್ಣ ಪಾರದರ್ಶಕತೆಯನ್ನು ತರುತ್ತವೆ. ಜೊತೆಗೆ, ಇವು ಸರಕು ಸಾಗಣೆ ಸಮಯ ಮತ್ತು ನೌಕರರ ಉತ್ಪಾದಕತೆ ಸಾಮರ್ಥವನ್ನು ಸುಧಾರಿಸುತ್ತವೆ.

ಏಕೀಕೃತ ಮತ್ತು ಮೊಬೈಲ್ ಸ್ನೇಹಿ ಪೂರೈಕೆ ಸರಪಳಿ ಕಾರ್ಯಾಚರಣೆಗಾಗಿ FCI ನಿಂದ 'ಅನ್ನ ದರ್ಪಣ' ಜಾರಿ

ಭಾರತೀಯ ಆಹಾರ ನಿಗಮವು (FCI), 'ಅನ್ನ ದರ್ಪಣ' (ANNA DARPAN) ಎಂಬ ಹೊಸ ವ್ಯವಸ್ಥೆಯನ್ನು ಪರಿಚಯಿಸಿದೆ. ಇದು ಮೈಕ್ರೋಸರ್ವಿಸಸ್ ಆಧಾರಿತ ಪ್ಲಾಟ್ ಫಾರ್ಮ್‌ ಆಗಿದ್ದು, ಪ್ರಸ್ತುತ ಜಾರಿಯಲ್ಲಿರುವ 'ಡಿಪೋ ಆನ್ ಲೈನ್ ಸಿಸ್ಟಮ್' ಬದಲಿಗೆ ಇದನ್ನು ತರಲಾಗಿದೆ. 'ಅನ್ನ ದರ್ಪಣ'ವು ಧಾನ್ಯ ಖರೀದಿ , ಸಂಗ್ರಹಣೆ, ಸಾಗಾಟ, ಮಾರಾಟ, ಗುಣಮಟ್ಟ ಪರಿಶೀಲನೆ, ಕಾರ್ಮಿಕ ನಿರ್ವಹಣೆ ಮತ್ತು ಗುತ್ತಿಗೆ ಉಸ್ತುವಾರಿಯಂತಹ ಪ್ರಮುಖ ಚಟುವಟಿಕೆಗಳನ್ನು ಒಂದೇ ಸಮಗ್ರ ವ್ಯವಸ್ಥೆಯಡಿ ಬೆಸೆಯುತ್ತದೆ. ಇದು FCI ಮತ್ತು DFPD (ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ) ಇಲಾಖೆಗಳೆರಡಕ್ಕೂ 'ಏಕೈಕ ಮತ್ತು ವಿಶ್ವಾಸಾರ್ಹ ಮಾಹಿತಿಯ ಮೂಲವಾಗಿ' ಕಾರ್ಯನಿರ್ವಹಿಸಲಿದೆ.

ಇದರ ಪ್ರಮುಖ ವೈಶಿಷ್ಟ್ಯಗಳು ಹೀಗಿವೆ:

  • ಯಾವುದೇ ಸಮಯದಲ್ಲಿ ಮತ್ತು ಎಲ್ಲಿಂದಲಾದರೂ ಪ್ರವೇಶಿಸಲು ಅನುಕೂಲವಾಗುವಂತೆ ಇದನ್ನು 'ಮೊಬೈಲ್-ಫಸ್ಟ್' ಮಾದರಿಯಲ್ಲಿ ವಿನ್ಯಾಸಗೊಳಿಸಲಾಗಿದೆ.
  • ಏಕರೂಪದ ದತ್ತಾಂಶ ಲಭ್ಯತೆಗಾಗಿ ಆಂತರಿಕ ಮತ್ತು ಬಾಹ್ಯ ವ್ಯವಸ್ಥೆಗಳೊಂದಿಗೆ ಇದು ಸುಗಮವಾದ ಸಂಯೋಜನೆಯನ್ನು ಹೊಂದಿದೆ.
  • ಮಂಡಿಗಳು, ಡಿಪೋಗಳು, ರೈಲ್ವೆ ಗೂಡ್ಸ್ ಶೆಡ್ ಗಳು ಮತ್ತು ಕಚೇರಿಗಳ ಕಾರ್ಯಾಚರಣೆಯನ್ನು ಕ್ಷಣಕ್ಷಣಕ್ಕೂ ವೀಕ್ಷಿಸಲು 'ರಿಯಲ್-ಟೈಮ್ ಡ್ಯಾಶ್ ಬೋರ್ಡ್‌ ಗಳು' ಲಭ್ಯವಿವೆ.
  • ತ್ವರಿತ ನಿರ್ಧಾರಗಳನ್ನು ಕೈಗೊಳ್ಳಲು ಮತ್ತು ಪಾರದರ್ಶಕತೆಯನ್ನು ಹೆಚ್ಚಿಸಲು, ಇದು ಒಂದೇ ಮತ್ತು ವಿಶ್ವಾಸಾರ್ಹವಾದ ಮಾಹಿತಿಯ ಹರಿವನ್ನು ಒದಗಿಸುತ್ತದೆ.

ಈ ಪ್ಲಾಟ್ ಫಾರ್ಮ್‌, ಭಾರತದ ಆಹಾರ ಪೂರೈಕೆ ಸರಪಳಿಯ ದಕ್ಷತೆಯನ್ನು ಗಮನಾರ್ಹವಾಗಿ ಹೆಚ್ಚಿಸುವ ನಿರೀಕ್ಷೆಯಿದೆ.

ಸಾರ್ವಜನಿಕ ವಿತರಣಾ ವ್ಯವಸ್ಥೆ(PDS)ಯಲ್ಲಿ ನಾಗರಿಕರ ಪ್ರತಿಕ್ರಿಯೆಯನ್ನು ಬಲಪಡಿಸಲು 'ಆಶಾ' (ASHA) ಪ್ಲಾಟ್ ಫಾರ್ಮ್ ಜಾರಿ

ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯು 'ಆಶಾ' (ASHA - Anna Sahayata Holistic AI Solution) ಎಂಬ ಕೃತಕ ಬುದ್ಧಿಮತ್ತೆ ಆಧಾರಿತ ಹೊಸ ಪ್ಲಾಟ್ ಫಾರ್ಮ್‌ ಅನ್ನು ಪ್ರಾರಂಭಿಸಿದೆ. ಇದರ ಮೂಲಕ ಫಲಾನುಭವಿಗಳು ತಮಗೆ ಬರುವ ಸ್ವಯಂಚಾಲಿತ ಕರೆಗಳ ಮೂಲಕ ತಮ್ಮ ಆದ್ಯತೆಯ ಭಾಷೆಯಲ್ಲಿ ಪಡಿತರ ವಿತರಣೆಯ ಕುರಿತು ತಮ್ಮ ಹಂಚಿಕೊಳ್ಳಬಹುದು. ಪ್ರತಿಕ್ರಿಯೆಯನ್ನು ಹಂಚಿಕೊಳ್ಳಲು ಅನುವು ಮಾಡಿಕೊಡುತ್ತದೆ.

ತಮಗೆ ಬರಬೇಕಾದ ಪೂರ್ಣ ಪ್ರಮಾಣದ ಪಡಿತರ ಸಿಕ್ಕಿದೆಯೇ, ಆಹಾರ ಧಾನ್ಯಗಳ ಗುಣಮಟ್ಟ ಹೇಗಿದೆ ಮತ್ತು ನ್ಯಾಯಬೆಲೆ ಅಂಗಡಿಗಳಲ್ಲಿ ಏನಾದರೂ ತೊಂದರೆ ಎದುರಾಯಿತೇ ಎಂಬುದನ್ನು ವರದಿ ಮಾಡಲು 'ಆಶಾ' ಫಲಾನುಭವಿಗಳಿಗೆ ಸಹಾಯ ಮಾಡುತ್ತದೆ. ಈ ವ್ಯವಸ್ಥೆಯು ಬಹುಭಾಷಾ ಅನುವಾದ, ಭಾವನಾತ್ಮಕ ವಿಶ್ಲೇಷಣೆ, ದೂರುಗಳ ಸ್ವಯಂಚಾಲಿತ ವರ್ಗೀಕರಣ ಮತ್ತು ಅಧಿಕಾರಿಗಳಿಗಾಗಿ ರಿಯಲ್-ಟೈಮ್ ಡ್ಯಾಶ್ ಬೋರ್ಡ್ಗಳನ್ನು ಒಳಗೊಂಡಿದೆ. ವಾಧ್ವಾನಿ ಫೌಂಡೇಶನ್ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾದ ಮತ್ತು ಭಾಷಿಣಿಯ (Bhashini) ಬಹುಭಾಷಾ AI ಮೂಲಸೌಕರ್ಯದ ಮೂಲಕ 'ಇಂಡಿಯಾ AI ಮಿಷನ್' ಬೆಂಬಲಿತವಾಗಿರುವ 'ಆಶಾ', ಪ್ರಸ್ತುತ ಭಾರತದಾದ್ಯಂತ ಪ್ರತಿ ತಿಂಗಳು 20 ಲಕ್ಷ ಫಲಾನುಭವಿಗಳನ್ನು ತಲುಪುತ್ತಿದೆ.

ಈ ಪ್ಲಾಟ್ ಫಾರ್ಮ್‌:

  • ಆಹಾರ ಭದ್ರತೆ ಮತ್ತು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (PMGKAY) ಅಡಿಯಲ್ಲಿ ಪಾರದರ್ಶಕತೆಯನ್ನು ಬಲಪಡಿಸುತ್ತದೆ.
  • ಅಕ್ರಮಗಳನ್ನು ತ್ವರಿತವಾಗಿ ಪತ್ತೆಹಚ್ಚಲು ಸಹಾಯ ಮಾಡುತ್ತದೆ.
  • ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ (PDS) ನಾಗರಿಕರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುತ್ತದೆ.
  • ಸಾಕ್ಷ್ಯಾಧಾರಿತ ನಿರ್ಧಾರಗಳನ್ನು ತೆಗೆದುಕೊಳ್ಳಲು ಬೆಂಬಲ ನೀಡುತ್ತದೆ.

ಆರಂಭದಲ್ಲಿ ಐದು ರಾಜ್ಯಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೆ ಬಂದ 'ಆಶಾ', ನಂತರ 15 ರಾಜ್ಯಗಳಿಗೆ ವಿಸ್ತರಿಸಲ್ಪಟ್ಟಿತು. ಮಾರ್ಚ್ 2026ರ ವೇಳೆಗೆ ಇದು ಎಲ್ಲಾ 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಸುಮಾರು 20 ಲಕ್ಷ ನಾಗರಿಕರನ್ನು ಪ್ರತಿ ತಿಂಗಳು ತಲುಪಲಿದೆ.

ಪಂಜಾಬಿನ ಮಲೌಟ್ ನಲ್ಲಿ 'ಸೈಲೋ' ಸಂಕೀರ್ಣಕ್ಕೆ ಚಾಲನೆ (ವರ್ಚುವಲ್ ಮೂಲಕ)

ಪಂಜಾಬಿನ ಮಲೌಟ್ ನಲ್ಲಿ ಹೊಸದಾಗಿ ಪ್ರಾರಂಭಿಸಲಾದ (1.5 ಲಕ್ಷ ಮೆಟ್ರಿಕ್ ಟನ್ ಸಾಮರ್ಥ್ಯದ) 'ಹಬ್ ಸೈಲೋ ಸಂಕೀರ್ಣ'ವು, ಆಹಾರ ಭದ್ರತೆ ಮತ್ತು ಪಿ ಡಿ ಎಸ್ (PDS) ದಕ್ಷತೆಗಾಗಿ ವಿಶ್ವದರ್ಜೆಯ ಶೇಖರಣಾ ಮೂಲಸೌಕರ್ಯವನ್ನು ಒದಗಿಸುವ ನಮ್ಮ ಸರ್ಕಾರದ ಬದ್ಧತೆಯನ್ನು ತೋರಿಸುತ್ತದೆ ಎಂದು ಕೇಂದ್ರ ಸಚಿವರು ಹೇಳಿದರು. ಈ ಉಕ್ಕಿನ ಸೈಲೋಗಳು ತೇವಾಂಶ, ಕೀಟಗಳು ಮತ್ತು ತಾಪಮಾನದ ಏರಿಳಿತಗಳಿಂದ ಧಾನ್ಯಗಳನ್ನು ಉತ್ತಮವಾಗಿ ರಕ್ಷಿಸುತ್ತವೆ, ಇದರಿಂದ ಹಾನಿ ಕಡಿಮೆಯಾಗಿ ಗುಣಮಟ್ಟ ಕಾಪಾಡಲ್ಪಡುತ್ತದೆ.

ವೈಜ್ಞಾನಿಕ ಮತ್ತು ನಷ್ಟ-ಮುಕ್ತ ಧಾನ್ಯ ಸಂಗ್ರಹಣೆಗಾಗಿ ನಿರ್ಮಿಸಲಾದ ಈ ಆಧುನಿಕ ಉಕ್ಕಿನ ಸೈಲೋ ಘಟಕವು, ಪಡಿತರ ಚೀಟಿದಾರರಿಗೆ ಉತ್ತಮ ಗುಣಮಟ್ಟದ ಆಹಾರ ಧಾನ್ಯಗಳು ತಲುಪುವುದನ್ನು ಖಾತ್ರಿಪಡಿಸುತ್ತದೆ. ಜೊತೆಗೆ ಇದು ಧಾನ್ಯಗಳ ಪೋಲು ಮತ್ತು ಹಾನಿಯನ್ನು ತಡೆಯುತ್ತದೆ. ಸಾಮಾನ್ಯ ಗೋದಾಮುಗಳಿಗೆ ಹೋಲಿಸಿದರೆ ಇದು ಕಡಿಮೆ ಜಾಗದಲ್ಲಿ ಹೆಚ್ಚಿನ ಶೇಖರಣಾ ಸಾಮರ್ಥ್ಯವನ್ನು ಒದಗಿಸುತ್ತದೆ. ಸ್ವಯಂಚಾಲಿತ ಲೋಡಿಂಗ್ ಮತ್ತು ಅನ್ಲೋಡಿಂಗ್ ಮೂಲಕ ದಕ್ಷತೆಯನ್ನು ಹೆಚ್ಚಿಸುತ್ತದೆ. ಅಲ್ಲದೆ, ಮಾನವ ಶ್ರಮ ಮತ್ತು ಕಟಾವಿನ ನಂತರದ ನಷ್ಟಗಳನ್ನು ಕಡಿಮೆ ಮಾಡುವ ಮೂಲಕ ಗಮನಾರ್ಹ ವೆಚ್ಚ ಉಳಿತಾಯ ಮಾಡುತ್ತದೆ.

ಈ ಕಾರ್ಯಕ್ರಮದಲ್ಲಿ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯ (DFPD) ಕಾರ್ಯದರ್ಶಿ ಶ್ರೀ ಸಂಜೀವ್ ಚೋಪ್ರಾ, ಶ್ರೀಮತಿ ಸಿ. ಶಿಖಾ ಮತ್ತು ಶ್ರೀಮತಿ ಅನಿತಾ ಕರ್ಣ್ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಗೂ ಪ್ರಮುಖ ಸಂಸ್ಥೆಗಳ ಮುಖ್ಯಸ್ಥರಾದ CWC ವ್ಯವಸ್ಥಾಪಕ ನಿರ್ದೇಶಕ ಶ್ರೀ ಸಂತೋಷ್ ಸಿನ್ಹಾ ಮತ್ತು FCI ವ್ಯವಸ್ಥಾಪಕ ನಿರ್ದೇಶಕ ಶ್ರೀ ಆಶುತೋಷ್ ಅಗ್ನಿಹೋತ್ರಿ ಅವರು ಉಪಸ್ಥಿತರಿದ್ದರು.

 

****

 

 


(Release ID: 2191379) Visitor Counter : 8