ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
azadi ka amrit mahotsav

ನಾಗರಿಕರನ್ನು ಸಬಲೀಕರಣಗೊಳಿಸಲು ಮತ್ತು ಗೌಪ್ಯತೆಯನ್ನು ಸಂರಕ್ಷಿಸಲು ಕೇಂದ್ರ ಸರ್ಕಾರವು ಡಿಜಿಟಲ್ ವೈಯಕ್ತಿಕ ದತ್ತಾಂಶ ಸಂರಕ್ಷಣೆ (ಡಿ.ಪಿ.ಡಿ.ಪಿ) ನಿಯಮಗಳನ್ನು ಪ್ರಕಟಿಸಿದೆ

Posted On: 14 NOV 2025 3:42PM by PIB Bengaluru

ಭಾರತ ಸರ್ಕಾರವು ಡಿಜಿಟಲ್ ವೈಯಕ್ತಿಕ ದತ್ತಾಂಶ ಸಂರಕ್ಷಣೆ (ಡಿ.ಪಿ.ಡಿ.ಪಿ) ನಿಯಮಗಳು, 2025 ಅನ್ನು ಅಧಿಸೂಚನೆ ಮಾಡಿದೆ, ಇದು ಡಿ.ಪಿ.ಡಿ.ಪಿ ಕಾಯ್ದೆ, 2023ರ ಸಂಪೂರ್ಣ ಕಾರ್ಯಾಚರಣೆಯನ್ನು ಗುರುತಿಸುತ್ತದೆ. ಒಟ್ಟಾಗಿ, ಕಾಯ್ದೆ ಮತ್ತು ನಿಯಮಗಳು ಡಿಜಿಟಲ್ ವೈಯಕ್ತಿಕ ದತ್ತಾಂಶದ ಜವಾಬ್ದಾರಿಯುತ ಬಳಕೆಗಾಗಿ ಸರಳ, ನಾಗರಿಕ-ಕೇಂದ್ರಿತ ಮತ್ತು ನಾವೀನ್ಯತೆ-ಸ್ನೇಹಿ ಚೌಕಟ್ಟನ್ನು ರಚಿಸುತ್ತವೆ.

ಆಗಸ್ಟ್ 11, 2023 ರಂದು ಸಂಸತ್ತಿನಿಂದ ಜಾರಿಗೆ ಬಂದ ಡಿ.ಪಿ.ಡಿ.ಪಿ ಕಾಯ್ದೆಯು ಡಿಜಿಟಲ್ ವೈಯಕ್ತಿಕ ದತ್ತಾಂಶವನ್ನು ರಕ್ಷಿಸಲು ಸಮಗ್ರ ಚೌಕಟ್ಟನ್ನು ಸ್ಥಾಪಿಸುತ್ತದೆ, ಅಂತಹ ದತ್ತಾಂಶವನ್ನು ನಿರ್ವಹಿಸುವ ಘಟಕಗಳ ಬಾಧ್ಯತೆಗಳನ್ನು (ಡೇಟಾ ಫಿಡ್ಯೂಷಿಯರಿಗಳು) ಮತ್ತು ವ್ಯಕ್ತಿಗಳ ಹಕ್ಕುಗಳು ಮತ್ತು ಕರ್ತವ್ಯಗಳನ್ನು (ಡೇಟಾ ಪ್ರಿನ್ಸಿಪಲ್ಗಳು) ನಿಗದಿಪಡಿಸುತ್ತದೆ. ಇದು ಸರಳ, ಪ್ರವೇಶಿಸಬಹುದಾದ, ತರ್ಕಬದ್ಧ ಮತ್ತು ಕಾರ್ಯಸಾಧ್ಯ - ಅರ್ಥಮಾಡಿಕೊಳ್ಳುವಿಕೆ ಮತ್ತು ಅನುಸರಣೆಯನ್ನು ಸುಲಭಗೊಳಿಸಲು ಸರಳ ಭಾಷೆ ಮತ್ತು ವಿವರಣೆಗಳನ್ನು ಬಳಸಿಕೊಂಡು ಸರಳ್ (ಎಸ್.ಎ.ಆರ್.ಎ.ಎಲ್) ವಿನ್ಯಾಸವನ್ನು ಇದು ಅನುಸರಿಸುತ್ತದೆ.

ಸಮ್ಮತಿ ಮತ್ತು ಪಾರದರ್ಶಕತೆ, ಉದ್ದೇಶ ಮಿತಿ, ಡೇಟಾ ಕಡಿಮೆಗೊಳಿಸುವಿಕೆ, ನಿಖರತೆ, ಸಂಗ್ರಹಣೆ ಮಿತಿ, ಭದ್ರತಾ ಸುರಕ್ಷತೆಗಳು ಮತ್ತು ಹೊಣೆಗಾರಿಕೆ ಸೇರಿದಂತೆ ಏಳು ಪ್ರಮುಖ ತತ್ವಗಳಿಂದ ಡಿಜಿಟಲ್ ವೈಯಕ್ತಿಕ ದತ್ತಾಂಶ ಸಂರಕ್ಷಣೆ (ಡಿ.ಪಿ.ಡಿ.ಪಿ) ನಿಯಮಗಳು, 2025ರ ಕಾಯಿದೆಯನ್ನು ನಿರ್ದೇಶಿಸಲಾಗಿದೆ.

ಸಮಗ್ರ ಮತ್ತು ಸಮಾಲೋಚನಾ ನಿಯಮ ರಚನೆ

ವ್ಯಾಪಕ ಪಾಲುದಾರರ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು, ಮೈಟಿ ಸಚಿವಾಲಯ ಸಾರ್ವಜನಿಕ ಅಭಿಪ್ರಾಯಗಳಿಗಾಗಿ ಕರಡು ಡಿಜಿಟಲ್ ವೈಯಕ್ತಿಕ ದತ್ತಾಂಶ ಸಂರಕ್ಷಣೆ (ಡಿ.ಪಿ.ಡಿ.ಪಿ) ನಿಯಮಗಳನ್ನು ಬಿಡುಗಡೆ ಮಾಡಿತು ಮತ್ತು ದೆಹಲಿ, ಮುಂಬೈ, ಗುವಾಹಟಿ, ಕೋಲ್ಕತ್ತಾ, ಹೈದರಾಬಾದ್, ಬೆಂಗಳೂರು ಮತ್ತು ಚೆನ್ನೈನಲ್ಲಿ ಸಮಾಲೋಚನೆಗಳನ್ನು ನಡೆಸಿತು. ಸ್ಟಾರ್ಟ್ಅಪ್ಗಳು, ಎಂ.ಎಸ್.‌ಎಂ.ಇ.ಗಳು, ಕೈಗಾರಿಕಾ ಸಂಸ್ಥೆಗಳು, ನಾಗರಿಕ ಸಮಾಜ ಮತ್ತು ಸರ್ಕಾರಿ ಇಲಾಖೆಗಳಿಂದ ಬಂದ ಮಾಹಿತಿಯು ಅಂತಿಮ, ಅಧಿಸೂಚಿತ ಡಿಜಿಟಲ್ ವೈಯಕ್ತಿಕ ದತ್ತಾಂಶ ಸಂರಕ್ಷಣೆ (ಡಿ.ಪಿ.ಡಿ.ಪಿ) ನಿಯಮಗಳನ್ನು ರೂಪಿಸಲಿದೆ.

ಹಂತ ಮತ್ತು ಪ್ರಾಯೋಗಿಕ ಅನುಷ್ಠಾನ

ಡಿಜಿಟಲ್ ವೈಯಕ್ತಿಕ ದತ್ತಾಂಶ ಸಂರಕ್ಷಣೆ (ಡಿ.ಪಿ.ಡಿ.ಪಿ) ನಿಯಮಗಳು 18 ತಿಂಗಳ ಹಂತ ಹಂತದ ಅನುಸರಣೆ ಸಮಯವನ್ನು ಒದಗಿಸುತ್ತದೆ, ಇದು ಸಂಸ್ಥೆಗಳಿಗೆ ಸುಗಮ ಪರಿವರ್ತನೆಗೆ ಸಮಯವನ್ನು ನೀಡುತ್ತದೆ. ವೈಯಕ್ತಿಕ ಡೇಟಾವನ್ನು ಸಂಗ್ರಹಿಸುವ ಮತ್ತು ಬಳಸುತ್ತಿರುವ ನಿರ್ದಿಷ್ಟ ಉದ್ದೇಶವನ್ನು ಪಾರದರ್ಶಕವಾಗಿ ವಿವರಿಸುವ ಸ್ವತಂತ್ರ, ಸ್ಪಷ್ಟ ಮತ್ತು ಸರಳ ಒಪ್ಪಿಗೆ ಸೂಚನೆಗಳನ್ನು ಡೇಟಾ ಫಿಡ್ಯೂಷಿಯರಿಗಳು ನೀಡಬೇಕಾಗುತ್ತದೆ. ಇದರಲ್ಲಿ, ಸಮ್ಮತಿ ವ್ಯವಸ್ಥಾಪಕರು - ವ್ಯಕ್ತಿಗಳು ತಮ್ಮ ಅನುಮತಿಗಳನ್ನು ನಿರ್ವಹಿಸಲು ಸಹಾಯ ಮಾಡುವ ಘಟಕಗಳು - ಭಾರತೀಯ ಕಂಪನಿಗಳಾಗಿರಬೇಕು.

ವೈಯಕ್ತಿಕ ಡೇಟಾ ಉಲ್ಲಂಘನೆ ಅಧಿಸೂಚನೆಗಾಗಿ ಸ್ಪಷ್ಟ ಪ್ರೋಟೋಕಾಲ್ಗಳು

ವೈಯಕ್ತಿಕ ಡೇಟಾ ಉಲ್ಲಂಘನೆಯ ಸಂದರ್ಭದಲ್ಲಿ, ಡೇಟಾ ಫಿಡ್ಯೂಷಿಯರಿಗಳು ಪೀಡಿತ ವ್ಯಕ್ತಿಗಳಿಗೆ ಸರಳ ಭಾಷೆಯಲ್ಲಿ ಮಾಹಿತಿಯನ್ನು ತಿಳಿಸಬೇಕು, ಉಲ್ಲಂಘನೆಯ ಸ್ವರೂಪ ಮತ್ತು ಸಂಭವನೀಯ ಪರಿಣಾಮಗಳನ್ನು ವಿವರಿಸಬೇಕು, ಅದನ್ನು ಪರಿಹರಿಸಲು ತೆಗೆದುಕೊಂಡ ಕ್ರಮಗಳು ಮತ್ತು ಸಹಾಯಕ್ಕಾಗಿ ಸಂಪರ್ಕ ವಿವರಗಳನ್ನು ವಿವರಿಸಬೇಕು.

ಮಕ್ಕಳು ಮತ್ತು ಅಂಗವಿಕಲ ವ್ಯಕ್ತಿಗಳಿಗೆ ಸುರಕ್ಷತಾ ಕ್ರಮಗಳು

ಬಲವಾದ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು, ಆರೋಗ್ಯ ರಕ್ಷಣೆ, ಶಿಕ್ಷಣ ಮತ್ತು ನೈಜ-ಸಮಯದ ಸುರಕ್ಷತೆಯಂತಹ ಅಗತ್ಯ ಉದ್ದೇಶಗಳಿಗಾಗಿ ಸೀಮಿತ ವಿನಾಯಿತಿಗಳೊಂದಿಗೆ, ಮಕ್ಕಳ ವೈಯಕ್ತಿಕ ಡೇಟಾವನ್ನು ಪ್ರಕ್ರಿಯೆಗೊಳಿಸುವ ಮೊದಲು ಡೇಟಾ ಫಿಡ್ಯೂಷಿಯರಿಗಳು ಪರಿಶೀಲಿಸಬಹುದಾದ ಒಪ್ಪಿಗೆಯನ್ನು ಪಡೆಯಬೇಕು. ಬೆಂಬಲವಿದ್ದರೂ ಸಹ ಕಾನೂನು ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗದ ಅಂಗವಿಕಲ ವ್ಯಕ್ತಿಗಳಿಗೆ, ಅನ್ವಯವಾಗುವ ಕಾನೂನುಗಳ ಅಡಿಯಲ್ಲಿ ಪರಿಶೀಲಿಸಲಾದ ಕಾನೂನುಬದ್ಧ ಅವರ ಪೋಷಕರಿಂದ ಒಪ್ಪಿಗೆ ಬರಬೇಕು.

ಪಾರದರ್ಶಕತೆ ಮತ್ತು ಹೊಣೆಗಾರಿಕೆ ಕ್ರಮಗಳು

ವೈಯಕ್ತಿಕ ಡೇಟಾ ಸಂಸ್ಕರಣೆಯ ಬಗ್ಗೆ ಪ್ರಶ್ನೆಗಳನ್ನು ಮಾಡಲು ವ್ಯಕ್ತಿಗಳಿಗೆ ಸೂಕ್ತ ಸಹಾಯ ಮಾಡಲು ಡೇಟಾ ಫಿಡ್ಯೂಷಿಯರಿಗಳು ಗೊತ್ತುಪಡಿಸಿದ ಅಧಿಕಾರಿ ಅಥವಾ ಡೇಟಾ ಸಂರಕ್ಷಣಾ ಅಧಿಕಾರಿಯಂತಹವರು ಸಕಾಲಿಕವಾಗಿ ಸ್ಪಷ್ಟ ಸಂಪರ್ಕ ಮಾಹಿತಿಯನ್ನು ಪ್ರದರ್ಶಿಸಬೇಕು. ಮಹತ್ವದ ಡೇಟಾ ಫಿಡ್ಯೂಷಿಯರಿಗಳು ಸ್ವತಂತ್ರ ಲೆಕ್ಕಪರಿಶೋಧನೆಗಳು, ಪ್ರಭಾವದ ಮೌಲ್ಯಮಾಪನಗಳು ಮತ್ತು ನಿಯೋಜಿಸಲಾದ ತಂತ್ರಜ್ಞಾನಗಳಿಗೆ ಹೆಚ್ಚುವರಿ/ವರ್ಧಿತ ಬಾಧ್ಯತೆಗಳನ್ನು ಹೊಂದಿದ್ದಾರೆ. ಅಗತ್ಯವಿರುವಲ್ಲಿ ಸ್ಥಳೀಕರಣ ಸೇರಿದಂತೆ ಕೆಲವು ವರ್ಗಗಳ ಡೇಟಾದ ಮೇಲೆ ಅವರು ಸರ್ಕಾರ-ನಿರ್ದಿಷ್ಟಪಡಿಸಿದ ನಿರ್ಬಂಧಗಳನ್ನು ಸಹ ಅನುಸರಿಸಬೇಕು.

ಡೇಟಾ ಪ್ರಿನ್ಸಿಪಲ್ಗಳ ಹಕ್ಕುಗಳನ್ನು ಬಲಪಡಿಸುವುದು

ಡಿಜಿಟಲ್ ವೈಯಕ್ತಿಕ ದತ್ತಾಂಶ ಸಂರಕ್ಷಣೆ (ಡಿ.ಪಿ.ಡಿ.ಪಿ) ಚೌಕಟ್ಟು ವ್ಯಕ್ತಿಗಳು ತಮ್ಮ ವೈಯಕ್ತಿಕ ಡೇಟಾವನ್ನು ಪ್ರವೇಶಿಸಲು, ಸರಿಪಡಿಸಲು, ನವೀಕರಿಸಲು ಅಥವಾ ಅಳಿಸಲು/ರದ್ದುಗೊಳೀಸಲು ಮತ್ತು ಅವರ ಪರವಾಗಿ ಈ ಹಕ್ಕುಗಳನ್ನು ಚಲಾಯಿಸಲು ಇನ್ನೊಬ್ಬ ವ್ಯಕ್ತಿಯನ್ನು ನಾಮನಿರ್ದೇಶನ ಮಾಡುವ ಹಕ್ಕುಗಳನ್ನು ಇನ್ನೂ ಉತ್ತಮ ರೀತಿಯಲ್ಲಿ ಬಲಪಡಿಸುತ್ತದೆ. ಡೇಟಾ ಫಿಡ್ಯೂಷಿಯರಿಗಳು ಗರಿಷ್ಠ 90 ದಿನಗಳಲ್ಲಿ ಅಂತಹ ಎಲ್ಲಾ ವಿನಂತಿಗಳಿಗೆ ಪ್ರತಿಕ್ರಿಯಿಸಬೇಕು.

ಡಿಜಿಟಲ್-ಮೊದಲ ದತ್ತಾಂಶ ಸಂರಕ್ಷಣಾ ಮಂಡಳಿ

ಡೇಟಾ ಸಂರಕ್ಷಣಾ ಮಂಡಳಿಯು ಸಂಪೂರ್ಣ ಡಿಜಿಟಲ್ ಸಂಸ್ಥೆಯಾಗಿ ಕಾರ್ಯನಿರ್ವಹಿಸಲಿದ್ದು, ನಾಗರಿಕರು ಮೀಸಲಾದ ವೇದಿಕೆ ಮತ್ತು ಮೊಬೈಲ್ ಅಪ್ಲಿಕೇಶನ್ ಮೂಲಕ ಆನ್‌ಲೈನ್ ನಲ್ಲಿ ದೂರುಗಳನ್ನು ಸಲ್ಲಿಸಲು ಮತ್ತು ಟ್ರ್ಯಾಕ್ ಮಾಡಲು ಅನುವು ಮಾಡಿಕೊಡುತ್ತದೆ, ಪಾರದರ್ಶಕತೆ, ದಕ್ಷತೆ ಮತ್ತು ಜೀವನ ಸುಲಭತೆಯನ್ನು ಉತ್ತೇಜಿಸುತ್ತದೆ. ಅದರ ನಿರ್ಧಾರಗಳ ವಿರುದ್ಧ ಮೇಲ್ಮನವಿಗಳನ್ನು ಪರಿಹರಿಸಲು ಮೇಲ್ಮನವಿ ನ್ಯಾಯಮಂಡಳಿ( ಟಿ.ಡಿ.ಎಸ್.ಎ.ಟಿ)ಗಳು ಇರುತ್ತದೆ.

ನಿಯಮಗಳು ನಾಗರಿಕರ ಗೌಪ್ಯತೆಯನ್ನು ರಕ್ಷಿಸುವುದು ಮತ್ತು ನಾವೀನ್ಯತೆ ಮತ್ತು ಬೆಳವಣಿಗೆಯನ್ನು ಉತ್ತೇಜಿಸುವ ನಡುವೆ ಎಚ್ಚರಿಕೆಯ ಸಮತೋಲನವನ್ನು ಸಾಧಿಸಲು ಪ್ರಯತ್ನಿಸುತ್ತವೆ. ಭಾರತದ ದತ್ತಾಂಶ ಆಡಳಿತ ಮಾದರಿಯು ನಾಗರಿಕ ಕಲ್ಯಾಣವನ್ನು ರಕ್ಷಿಸುವಾಗ ಆರ್ಥಿಕ ಅಭಿವೃದ್ಧಿಯನ್ನು ಪ್ರೋತ್ಸಾಹಿಸುತ್ತದೆ ಮತ್ತು ನವೋದ್ಯಮಗಳು ಮತ್ತು ಸಣ್ಣ ಉದ್ಯಮಗಳಿಗೆ ಅನುಕೂಲಕರ ಅನುಸರಣೆ ಆಡಳಿತವನ್ನು ಒದಗಿಸುತ್ತದೆ ಇದರಿಂದ ನಾವೀನ್ಯತೆ ಬಲವಾದ ದತ್ತಾಂಶ ಸಂರಕ್ಷಣಾ ಮಾನದಂಡಗಳ ಜೊತೆಗೆ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ.

ಸರಳೀಕೃತ ನಿಯಮಗಳು, ಸಾಕಷ್ಟು ಪರಿವರ್ತನೆಯ ಸಮಯ ಮತ್ತು ತಂತ್ರಜ್ಞಾನ-ತಟಸ್ಥ ವಿಧಾನದೊಂದಿಗೆ, ಡಿಜಿಟಲ್ ವೈಯಕ್ತಿಕ ದತ್ತಾಂಶ ಸಂರಕ್ಷಣೆ (ಡಿ.ಪಿ.ಡಿ.ಪಿ) ಕಾಯ್ದೆ ಮತ್ತು ನಿಯಮಗಳು ಗೌಪ್ಯತೆಯನ್ನು ಬಲಪಡಿಸುವ, ವಿಶ್ವಾಸವನ್ನು ಹೆಚ್ಚಿಸುವ ಮತ್ತು ಜವಾಬ್ದಾರಿಯುತ ನಾವೀನ್ಯತೆಯನ್ನು ಬೆಂಬಲಿಸುವ ಗುರಿಯನ್ನು ಹೊಂದಿವೆ. ಒಟ್ಟಾಗಿ, ಅವು ಭಾರತದ ಡಿಜಿಟಲ್ ಆರ್ಥಿಕತೆಯನ್ನು ಸುರಕ್ಷಿತ, ಸ್ಥಿತಿಸ್ಥಾಪಕ ಮತ್ತು ಜಾಗತಿಕವಾಗಿ ಸ್ಪರ್ಧಾತ್ಮಕವಾಗಿ ಇರಿಸಲು ಸಹಾಯ ಮಾಡುತ್ತವೆ.

ಡಿಜಿಟಲ್ ವೈಯಕ್ತಿಕ ದತ್ತಾಂಶ ಸಂರಕ್ಷಣೆ (ಡಿ.ಪಿ.ಡಿ.ಪಿ) ಕಾಯ್ದೆ, ಡಿಜಿಟಲ್ ವೈಯಕ್ತಿಕ ದತ್ತಾಂಶ ಸಂರಕ್ಷಣೆ (ಡಿ.ಪಿ.ಡಿ.ಪಿ) ನಿಯಮಗಳು ಮತ್ತು ಪಾಲುದಾರರ ಪ್ರತಿಕ್ರಿಯೆಯ ಸರಳ್ ಸಾರಾಂಶವು ಮೈಟಿ ಸಚಿವಾಲಯದ ವೆಬ್‌ಸೈಟ್ https://www.meity.gov.in/ ನಲ್ಲಿ ಸಂಪೂರ್ಣ ಉಚಿತವಾಗಿ ಲಭ್ಯವಿದೆ

 

*****


(Release ID: 2190081) Visitor Counter : 8