ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ
ಭಾರತದ ಮಾನವ ಬಾಹ್ಯಾಕಾಶ ಹಾರಾಟ ಸಂಶೋಧನೆ ಮುನ್ನಡೆಸಲು 2025ರ ಬಾಹ್ಯಾಕಾಶ ಶೃಂಗಸಭೆಗೆ ಕೈಜೋಡಿಸಿದ ಸಿ ಎಸ್ ಐ ಅರ್ ಮತ್ತು ಇಸ್ರೋ
Posted On:
14 NOV 2025 1:01PM by PIB Bengaluru
ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (ಸಿಎಸ್ ಐಆರ್) ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಜಂಟಿಯಾಗಿ ಸಿ ಎಸ್ ಐ ಅರ್ -ಇಸ್ರೋ (CSIR-ISRO) ಬಾಹ್ಯಾಕಾಶ ಶೃಂಗಸಭೆ 2025 ಅನ್ನು 2025ರ ನವೆಂಬರ್ 17 ರಂದು ಬೆಂಗಳೂರಿನ ಹೋಟೆಲ್ ರಾಡಿಸನ್ ಬ್ಲೂ ಏಟ್ರಿಯಾದಲ್ಲಿ ಆಯೋಜಿಸಲಿವೆ. ಈ ಕಾರ್ಯಕ್ರಮವು ಭಾರತದ ಪ್ರಮುಖ ವೈಜ್ಞಾನಿಕ ಮತ್ತು ಬಾಹ್ಯಾಕಾಶ ಸಂಸ್ಥೆಗಳ ನಡುವಿನ ಸಹಕಾರವನ್ನು ಬಲವರ್ಧನೆಗೊಳಿಸುವ ಗುರಿ ಹೊಂದಿದೆ. ಜತೆಗೆ ಇದು ಮಾನವ ಬಾಹ್ಯಾಕಾಶ ಹಾರಾಟ ಸಂಶೋಧನೆ, ಸೂಕ್ಷ್ಮ ಗುರುತ್ವಾಕರ್ಷಣೆಯ ಅಧ್ಯಯನಗಳು ಮತ್ತು ಬಾಹ್ಯಾಕಾಶ ಅನ್ವೇಷಣೆಯಲ್ಲಿ ಭಾರತದ ಸ್ವಾವಲಂಬನೆಯ ದೂರದೃಷ್ಟಿಗೆ ಹೊಂದಿಕೆಯಾಗುವ ಬಾಹ್ಯಾಕಾಶ ತಂತ್ರಜ್ಞಾನದ ನಾವೀನ್ಯತೆಗಳನ್ನು ಮುನ್ನಡೆಸುತ್ತದೆ.
ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಇಲಾಖೆಯ (ಡಿಎಸ್ ಐಆರ್) ಕಾರ್ಯದರ್ಶಿ ಮತ್ತು ಸಿಎಸ್ ಐಅರ್ ನ ಮಹಾನಿರ್ದೇಶಕರಾದ ಡಾ. ಎನ್. ಕಲೈಸೆಲ್ವಿ ಮತ್ತು ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿ ಮತ್ತು ಇಸ್ರೋ ಅಧ್ಯಕ್ಷ ಡಾ. ವಿ. ನಾರಾಯಣನ್ ಅವರ ನೇತೃತ್ವದಲ್ಲಿ ಸಭೆಯನ್ನು ಆಯೋಜಿಸಲಾಗಿದೆ. ವಿಜ್ಞಾನಿಗಳು, ತಂತ್ರಜ್ಞರು, ಗಗನಯಾತ್ರಿಗಳು ಮತ್ತು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳ ಪ್ರತಿನಿಧಿಗಳು ಸೇರಿದಂತೆ ಸುಮಾರು 150 ರಿಂದ 200 ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಇದೆ. ಬೆಂಗಳೂರಿನಲ್ಲಿರುವ ಫ್ರಾನ್ಸ್ ಕಾನ್ಸುಲ್ ಜನರಲ್, ಡಿ ಆರ್ ಡಿ ಒ, ಇಸ್ರೋ, ಐ ಐ ಎಸ್ ಸಿ, ಐಎಎಫ್ ನ ಅಧಿಕಾರಿಗಳು ಮತ್ತು ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ (ಇ ಎಸ್ ಎ), ಜಪಾನ್ ಏರೋಸ್ಪೇಸ್ ಎಕ್ಸ್‌ಪ್ಲೋರೇಶನ್ ಏಜೆನ್ಸಿ (ಜೆಎಎಕ್ಸ್ ಎ) ಮತ್ತು ಫ್ರೆಂಚ್ ಬಾಹ್ಯಾಕಾಶ ಸಂಸ್ಥೆ (ಸಿ ಎನ್ ಇ ಎಸ್) ನ ತಜ್ಞರು ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಸಿ ಎಸ್ ಐ ಅರ್ -ಇಸ್ರೋ ಬಾಹ್ಯಾಕಾಶ ಶೃಂಗಸಭೆ 2025, ಇಸ್ರೋದ ಮಿಷನ್-ಆಧಾರಿತ ತಾಂತ್ರಿಕ ಅಗತ್ಯಗಳೊಂದಿಗೆ ಸಿಎಸ್ ಐಆರ್ ನ ಬಹುಶಿಸ್ತೀಯ ಸಂಶೋಧನೆಯನ್ನು ಸಂಯೋಜಿಸುವತ್ತ ಗಮನಹರಿಸುತ್ತದೆ. ಸಮ್ಮೇಳನವು ಮಾನವ ಬಾಹ್ಯಾಕಾಶ ಹಾರಾಟ ಶರೀರಶಾಸ್ತ್ರ, ಜೈವಿಕ ವೈದ್ಯಕೀಯ ಉಪಕರಣಗಳು, ಮೆಟೀರಿಯಲ್ ಸೈನ್ಸ್, ಸೂಕ್ಷ್ಮ ಗುರುತ್ವಾಕರ್ಷಣೆಯಲ್ಲಿ ಜೀವ ವಿಜ್ಞಾನಗಳು ಮತ್ತು ಬಾಹ್ಯಾಕಾಶ ನೌಕೆ ನಿರ್ವಹಣೆ ಮತ್ತು ಕಾರ್ಯಾಚರಣೆಗಾಗಿ ಸುಧಾರಿತ ವ್ಯವಸ್ಥೆಗಳಂತಹ ಸಹಯೋಗದ ಪ್ರಮುಖ ಕ್ಷೇತ್ರಗಳನ್ನು ಒಳಗೊಂಡಿದೆ. ಬಾಹ್ಯಾಕಾಶದಲ್ಲಿ ಸಸ್ಯಗಳ ಬೆಳವಣಿಗೆ, ಬಾಹ್ಯಾಕಾಶ ಆಹಾರದ ಅಭಿವೃದ್ಧಿ, ಮೈಕ್ರೋಫ್ಲೂಯಿಡಿಕ್ಸ್, ಸೆರಾಮಿಕ್ ಮೆಟಾಮೆಟೀರಿಯಲ್ಸ್ ಮತ್ತು ಸೂಕ್ಷ್ಮಜೀವಿಯ ತುಕ್ಕು ತಡೆಗಟ್ಟುವಿಕೆಯಂತಹ ಕ್ಷೇತ್ರಗಳಲ್ಲಿನ ನಾವೀನ್ಯತೆಗಳನ್ನು ಸಹ ಅನ್ವೇಷಿಸುವ ಕುರಿತು ಚರ್ಚೆಗಳು ನಡೆಯಲಿವೆ.
ಈ ಕಾರ್ಯಕ್ರಮದಲ್ಲಿ ಭಾರತದ ಮೊದಲ ಗಗನಯಾತ್ರಿ ವಿಂಗ್ ಕಮಾಂಡರ್ ರಾಕೇಶ್ ಶರ್ಮ (ನಿವೃತ್ತ) ಮತ್ತು ಇಸ್ರೋ ಗಗನಯಾತ್ರಿ ಗ್ರೂಪ್ ಕ್ಯಾಪ್ಟನ್ ಪ್ರಶಾಂತ್ ಬಿ ನಾಯರ್ ಸೇರಿದಂತೆ ಭಾರತೀಯ ಗಗನಯಾತ್ರಿಗಳಿಂದ ಅನುಭವ ಹಂಚಿಕೊಳ್ಳುವ ಗೋಷ್ಠಿಗಳು ನಡೆಯಲಿವೆ. ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆಯ ಗಗನಯಾತ್ರಿ ಮತ್ತು ನಾಸಾದ ಬಾಹ್ಯಾಕಾಶ ನೌಕೆಯ ಕಾರ್ಯಾಚರಣೆಗಳ ಅನುಭವಿ ಶ್ರೀ ಜೀನ್-ಫ್ರಾಂಕೋಯಿಸ್ ಕ್ಲರ್ವಾಯ್ ಅವರ ವಿಶೇಷ ವೀಡಿಯೊ ಸಂದೇಶವನ್ನು ಸಹ ಪ್ರಸ್ತುತಪಡಿಸಲಾಗುವುದು. ಇಎಸ್ಎ, ಜೆಎಎಕ್ಸ್ ಎ, ಸಿಎನ್ ಇಎಸ್ ಮತ್ತು ಫ್ರೆಂಚ್ ಸಂಶೋಧನಾ ಸಂಸ್ಥೆಗಳ ಅಂತಾರಾಷ್ಟ್ರೀಯ ತಜ್ಞರು ಬಾಹ್ಯಾಕಾಶ ಶರೀರಶಾಸ್ತ್ರ, ಜೈವಿಕ ಎಂಜಿನಿಯರಿಂಗ್ ಮತ್ತು ಬಾಹ್ಯಾಕಾಶ ಆಧಾರಿತ ತಂತ್ರಜ್ಞಾನಗಳ ಮಾನವೀಯ ಅನ್ವಯಿಕೆಗಳ ಕುರಿತ ಗೋಷ್ಠಿಗಳಿಗೆ ಕೊಡುಗೆ ನೀಡಲಿದ್ದಾರೆ.
ಬೆಂಗಳೂರಿನ ರಾಷ್ಟ್ರೀಯ ಏರೋಸ್ಪೇಸ್ ಪ್ರಯೋಗಾಲಯಗಳು (ಸಿ ಎಸ್ ಐ ಆರ್ -ಎನ್ ಎ ಎಲ್) ಈ ಕಾರ್ಯಕ್ರಮದ ನೋಡಲ್ ಸಂಘಟನಾ ಸಂಸ್ಥೆಯಾಗಿದೆ. ಸಿ ಎಸ್ ಐ ಅರ್ ಅಡಿಯಲ್ಲಿ ಭಾರತದ ಪ್ರಮುಖ ಏರೋಸ್ಪೇಸ್ ಸಂಶೋಧನಾ ಸಂಸ್ಥೆಯಾಗಿರುವ ಎನ್ ಎ ಎಲ್ ರಾಷ್ಟ್ರದ ಬಾಹ್ಯಾಕಾಶ ಮತ್ತು ರಕ್ಷಣಾ ಕಾರ್ಯಕ್ರಮಗಳಿಗೆ ಗಮನಾರ್ಹ ಕೊಡುಗೆಗಳನ್ನು ನೀಡುತ್ತಿದೆ. ವಾಯುಬಲವಿಜ್ಞಾನ, ಸ್ಟ್ರಕ್ಚರಲ್ ಡಿಸೈನ್, ಏರೋಸ್ಪೇಸ್ ವಸ್ತುಗಳು ಮತ್ತು ಹಾರಾಟ ಪರೀಕ್ಷೆಯಲ್ಲಿನ ಅದರ ಪರಿಣತಿಯು ಮಿಷನ್ ಯಶಸ್ಸಿಗೆ ಅಗತ್ಯವಾದ ಸ್ಥಳೀಯ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವಲ್ಲಿ ಇಸ್ರೋ ಮತ್ತು ಡಿ ಆರ್ ಡಿ ಒ ಅನ್ನು ಬೆಂಬಲಿಸುತ್ತದೆ. ಹಗುರವಾದ ಸಂಯೋಜಿತ ವಸ್ತುಗಳು, ಸುಧಾರಿತ ಏರ್‌ಫ್ರೇಮ್ ರಚನೆಗಳು ಮತ್ತು ಸಿಮ್ಯುಲೇಶನ್ ವ್ಯವಸ್ಥೆಗಳನ್ನು ರಚಿಸುವಲ್ಲಿ ಎನ್ ಎಎಲ್ ನ ನಿರಂತರ ಪ್ರಯತ್ನಗಳು ಭಾರತದ ಏರೋಸ್ಪೇಸ್ ಮತ್ತು ಬಾಹ್ಯಾಕಾಶ ಎಂಜಿನಿಯರಿಂಗ್ ಸಾಮರ್ಥ್ಯಗಳನ್ನು ಬಲವರ್ಧನೆಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ.
ಈ ಉಪಕ್ರಮದ ಮೂಲಕ, ಸಿ ಎಸ್ ಐ ಅರ್ ಮತ್ತು ಇಸ್ರೋ ವೈಜ್ಞಾನಿಕ ಸಂಸ್ಥೆಗಳಲ್ಲಿ ಬಲವಾದ ಸಂಶೋಧನಾ ಸಂಪರ್ಕಗಳನ್ನು ನಿರ್ಮಿಸಲು ಮತ್ತು ಸಾಮಾಜಿಕ ಪ್ರಯೋಜನಕ್ಕಾಗಿ ಬಾಹ್ಯಾಕಾಶ ಔಷಧ, ಮಾನವ ಅಂಶಗಳ ಎಂಜಿನಿಯರಿಂಗ್ ಮತ್ತು ಮಹತ್ವದ ಪರಿವರ್ತನಕಾರಿ ತಂತ್ರಜ್ಞಾನಗಳಲ್ಲಿ ನಾವೀನ್ಯತೆಯನ್ನು ಉತ್ತೇಜಿಸುವ ಪೂರಕ ವ್ಯವಸ್ಥೆಯನ್ನು ಬೆಳೆಸಲು ಪ್ರಯತ್ನಿಸುತ್ತವೆ. ಶೃಂಗಸಭೆಯ ವೇಳೆ ನಡೆಯುವ ಚರ್ಚೆಗಳು ಭವಿಷ್ಯದ ಮಾನವ ಬಾಹ್ಯಾಕಾಶ ಹಾರಾಟ ಕಾರ್ಯಾಚರಣೆಗಳಿಗೆ ಸಹಯೋಗದ ನೀಲನಕ್ಷೆಯನ್ನು ರೂಪಿಸುವ ಮತ್ತು ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಜಂಟಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಹೊಸ ಮಾರ್ಗಗಳನ್ನು ಗುರುತಿಸುವ ನಿರೀಕ್ಷೆಯಿದೆ.
ಸಿ ಎಸ್ ಐ ಆರ್- ಇಸ್ರೋ ಬಾಹ್ಯಾಕಾಶ ಶೃಂಗಸಭೆ 2025 ಭಾರತದ ವೈಜ್ಞಾನಿಕ ನಾವೀನ್ಯತೆ, ತಾಂತ್ರಿಕ ಸ್ವಾವಲಂಬನೆ ಮತ್ತು ಬಾಹ್ಯಾಕಾಶ ಸಂಶೋಧನೆಯಲ್ಲಿ ಅಂತಾರಾಷ್ಟ್ರೀಯ ಸಹಯೋಗವನ್ನು ಮುನ್ನಡೆಸುವಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ. ಇದು 2047 ರಲ್ಲಿ ವಿಕಸಿತ ಭಾರತ ನಿರ್ಮಾಣದ ದೂರದೃಷ್ಟಿಯನ್ನು ಸಾಧಿಸುವ ರಾಷ್ಟ್ರದ ವಿಶಾಲ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ, ಅಲ್ಲಿ ಜಾಗತಿಕ ಪ್ರಗತಿಯಲ್ಲಿ ಭಾರತೀಯ ವಿಜ್ಞಾನ ಮತ್ತು ತಂತ್ರಜ್ಞಾನವು ಪರಿವರ್ತನಾತ್ಮಕ ಪಾತ್ರವನ್ನು ವಹಿಸುವುದನ್ನು ಮುಂದುವರಿಸುತ್ತದೆ.
*****
(Release ID: 2190031)
Visitor Counter : 6