ನೌಕಾ ಸಚಿವಾಲಯ
azadi ka amrit mahotsav

ನವಮಂಗಳೂರು ಬಂದರಿನ ಸುವರ್ಣ ಮಹೋತ್ಸವದಲ್ಲಿ ಕೇಂದ್ರ ಸಚಿವರಾದ ಶ್ರೀ ಸರ್ಬಾನಂದ ಸೋನೋವಾಲ್ ಅವರು ₹1,500 ಕೋಟಿ ಮೌಲ್ಯದ ಯೋಜನೆಗಳನ್ನು ಅನಾವರಣಗೊಳಿಸಿದರು; 16 ಮೂಲಸೌಕರ್ಯ ಮತ್ತು 113 ಸಿ.ಎಸ್‌.ಆರ್ ಯೋಜನೆಗಳು ಇದರಲ್ಲಿ ಸೇರಿವೆ


ನವೀಕೃತ ಮಂಗಳೂರು ಮೆರೈನ್ ಕಾಲೇಜು ಮತ್ತು ತಂತ್ರಜ್ಞಾನ ಸಂಸ್ಥೆಯ ಕ್ಯಾಂಪಸ್ ಅನ್ನು ಶ್ರೀ ಸರ್ಬಾನಂದ ಸೋನೋವಾಲ್ ಉದ್ಘಾಟಿಸಿದರು; ಜಾಗತಿಕ ಸಾಗರ ಶಕ್ತಿಯಾಗಿ ಭಾರತದ ಹೊರಹೊಮ್ಮುವಿಕೆಯನ್ನು ಉಲ್ಲೇಖಿಸಿದರು

“2030ರ ವೇಳೆಗೆ, ಪ್ರತಿ ಐದು ಜಾಗತಿಕ ನಾವಿಕರಲ್ಲಿ ಒಬ್ಬರು ಭಾರತೀಯರಾಗುತ್ತಾರೆ:” ಶ್ರೀ ಸರ್ಬಾನಂದ ಸೋನೋವಾಲ್

“ಭಾರತ ಸಾಗರ ಸಪ್ತಾಹದಲ್ಲಿ ನವಮಂಗಳೂರು ಬಂದರು ಪ್ರಾಧಿಕಾರ ₹52,000 ಕೋಟಿ ಒಪ್ಪಂದಗಳಿಗೆ ಸಹಿ ಹಾಕಿದೆ”: ಶ್ರೀ ಸರ್ಬಾನಂದ ಸೋನೋವಾಲ್

"ನವ ಮಂಗಳೂರು ಬಂದರು 2047ರ ವೇಳೆಗೆ 100 ಮಿಲಿಯನ್ ಟನ್ ಸರಕುಗಳನ್ನು ನಿರ್ವಹಿಸುವ ಗುರಿ ಹೊಂದಿದೆ": ಶ್ರೀ ಸೋನೋವಾಲ್

Posted On: 13 NOV 2025 8:33PM by PIB Bengaluru

ಭಾರತದ ಪ್ರಮುಖ ಕಡಲ ಹೆಬ್ಬಾಗಿಲುಗಳಲ್ಲಿ ಒಂದಾದ ನವ ಮಂಗಳೂರು ಬಂದರು ಪ್ರಾಧಿಕಾರದ (ಎನ್‌.ಎಂ.ಪಿ.ಎ) 50ನೇ ವಾರ್ಷಿಕೋತ್ಸವದ ಅಂಗವಾಗಿ ಮಂಗಳೂರಿನಲ್ಲಿ ನಡೆದ ಸುವರ್ಣ ಮಹೋತ್ಸವ ಆಚರಣೆಯಲ್ಲಿ ಕೇಂದ್ರ ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವರಾದ ಶ್ರೀ ಸರ್ಬಾನಂದ ಸೋನೋವಾಲ್ ಅವರು ಭಾಗವಹಿಸಿದರು. ಈ ಕಾರ್ಯಕ್ರಮದಲ್ಲಿ ₹1,500 ಕೋಟಿ ಮೌಲ್ಯದ 16 ಪ್ರಮುಖ ಮೂಲಸೌಕರ್ಯ ಯೋಜನೆಗಳು ಮತ್ತು 113 ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (ಸಿ.ಎಸ್‌.ಆರ್) ಉಪಕ್ರಮಗಳ ಉದ್ಘಾಟನೆ, ಸಮರ್ಪಣೆ ಮತ್ತು ಶಂಕುಸ್ಥಾಪನೆಯೂ ನಡೆಯಿತು.

ಈ ಆಚರಣೆಯು ಎನ್‌.ಎಂ.ಪಿ.ಎ ಯ ಗಮನಾರ್ಹ ಪ್ರಯಾಣ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೂರದರ್ಶಿ ನಾಯಕತ್ವದಲ್ಲಿ ಪ್ರಾದೇಶಿಕ ಹೆಬ್ಬಾಗಿಲಿನಿಂದ ತಾಂತ್ರಿಕವಾಗಿ ಮುಂದುವರಿದ ಮತ್ತು ಜಾಗತಿಕವಾಗಿ ಸ್ಪರ್ಧಾತ್ಮಕ ಕಡಲ ಕೇಂದ್ರವಾಗಿ ಅದರ ರೂಪಾಂತರವನ್ನು ಉಲ್ಲೇಖಿಸಿತು.

ಸಭೆಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವರಾದ ಸರ್ಬಾನಂದ ಸೋನೋವಾಲ್, "ಈ ಸುವರ್ಣ ಮಹೋತ್ಸವ ಕೇವಲ ಒಂದು ಸಂಸ್ಥೆಯ ಆಚರಣೆಯಲ್ಲ; ಇದು ಒಂದು ದೃಷ್ಟಿಕೋನದ ಆಚರಣೆ" ಎಂದು ಹೇಳಿದರು. "ನಮ್ಮ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ, ಆತ್ಮನಿರ್ಭರ ಭಾರತದ ದೃಷ್ಟಿಕೋನವು ಭಾರತದ ಕಡಲ ಪರಂಪರೆಯ ಬಲದ ಮೇಲೆ ನಿರ್ಮಿಸಲ್ಪಟ್ಟಿದೆ ಮತ್ತು ನಾವೀನ್ಯತೆ, ಸಮೃದ್ಧಿ ಮತ್ತು ಜಾಗತಿಕ ನಾಯಕತ್ವದ ಭವಿಷ್ಯದತ್ತ ವಿಶ್ವಾಸದಿಂದ ಸಾಗುತ್ತಿದೆ" ಎಂದು ಅವರು ಹೇಳಿದರು.

ಇತ್ತೀಚೆಗೆ ಮುಂಬೈನಲ್ಲಿ ನಡೆದ ಭಾರತ ಸಾಗರ ಸಪ್ತಾಹ (ಇಂಡಿಯಾ ಮ್ಯಾರಿಟೈಮ್ ವೀಕ್) 2025 ರಲ್ಲಿ, ಭಾರತದ ಕಡಲ ವಲಯದಲ್ಲಿ ₹12 ಲಕ್ಷ ಕೋಟಿಗೂ ಹೆಚ್ಚು ಮೌಲ್ಯದ ಒಪ್ಪಂದಗಳಿಗೆ ಸಹಿ ಹಾಕಲಾಯಿತು, ಅದರಲ್ಲಿ ₹52,000 ಕೋಟಿ ಎನ್‌.ಎಂ.ಪಿ.ಎ ಯಿಂದ ಆಗಿವೆ. ಇದು ನಮ್ಮ ದೇಶದ ವಿಕಸನಗೊಳ್ಳುತ್ತಿರುವ ಸಾಗರ ಪರಿಸರ ವ್ಯವಸ್ಥೆಯಲ್ಲಿ ಹೂಡಿಕೆದಾರರ ವಿಶ್ವಾಸ ಹೆಚ್ಚುತ್ತಿರುವುದರ ಬಲವಾದ ಸಂಕೇತವಾಗಿದೆ ಎಂದು ಶ್ರೀ ಸರ್ಬಾನಂದ ಸೋನೋವಾಲ್ ಹೇಳಿದರು.

ನವೀಕೃತ ಮಂಗಳೂರು ಮೆರೈನ್ ಕಾಲೇಜು ಮತ್ತು ತಂತ್ರಜ್ಞಾನ (ಎಂ.ಎಂ.ಸಿ.ಟಿ) ಸಂಸ್ಥೆಯ ಕ್ಯಾಂಪಸ್ ಅನ್ನು ಕೇಂದ್ರ ಸಚಿವರು ಉದ್ಘಾಟಿಸಿದರು, ಇದು ಭಾರತದ ಅಗ್ರ ಮೂರು ಕಡಲ ರಾಷ್ಟ್ರವಾಗುವ ಪ್ರಯಾಣದಲ್ಲಿ ಒಂದು ಮೈಲಿಗಲ್ಲು ಎಂದು ಅವರು ಬಣ್ಣಿಸಿದರು.

ಕೆಡೆಟ್‌ ಗಳು, ಅಧ್ಯಾಪಕರು ಮತ್ತು ಕಡಲ ಉದ್ಯಮದ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಸೋನೋವಾಲ್, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತದ ಕಡಲ ಪರಿವರ್ತನೆಯು ಸುಸ್ಥಿರತೆ, ನಾವೀನ್ಯತೆ ಮತ್ತು ಜಾಗತಿಕ ನಾಯಕತ್ವದ ದೃಷ್ಟಿಕೋನವನ್ನು ಆಧರಿಸಿದೆ ಎಂದು ಹೇಳಿದರು.

"ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಾಗರಗಳು ನಮ್ಮನ್ನು ಜಗತ್ತಿನೊಂದಿಗೆ ಸಂಪರ್ಕಿಸುತ್ತವೆ ಮತ್ತು ಭಾರತದ ಅಭಿವೃದ್ಧಿಯ ಭವಿಷ್ಯವು ಅದರ ಕಡಲ ಬಲದ ಮೇಲೆ ಅವಲಂಬಿತವಾಗಿದೆ ಎಂದು ಆಗಾಗ್ಗೆ ಹೇಳುತ್ತಿರುತ್ತಾರೆ" ಎಂದು ಸಚಿವರು ಹೇಳಿದರು. "ಅವರ ದೂರದರ್ಶಿ ನಾಯಕತ್ವದಲ್ಲಿ, ಭಾರತವು ವಿಶ್ವದ ಅಗ್ರ ಮೂರು ಕಡಲ ರಾಷ್ಟ್ರಗಳಲ್ಲಿ ಒಂದಾಗಿ ಹೊರಹೊಮ್ಮಲು ಹೊಸ ಹಾದಿಯನ್ನು ರೂಪಿಸುತ್ತಿದೆ" ಎಂದು ಅವರು ಹೇಳಿದರು.

ಮಂಗಳೂರಿನಲ್ಲಿ ಎನ್‌.ಎಂ.ಪಿ.ಎ ಮಂಜೂರು ಮಾಡಿದ ಭೂಮಿಯಲ್ಲಿ ₹9.51 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಮರ್ಕೆಂಟೈಲ್ ಮೆರೈನ್ ಇಲಾಖೆಯ (ಎಂ.ಎಂ.ಡಿ) ಹೊಸ ಕಚೇರಿ ಕಟ್ಟಡವನ್ನು ಸಚಿವರು ಉದ್ಘಾಟಿಸಿದರು. ಈ ಸೌಲಭ್ಯವು ಕರ್ನಾಟಕ ಮತ್ತು ನೆರೆಯ ರಾಜ್ಯಗಳ ನಾವಿಕರಿಗೆ ಅರ್ಹತಾ ಪರೀಕ್ಷೆಗಳನ್ನು ನಡೆಸುತ್ತದೆ, ಇದು ದಾಖಲಾತಿ ಮತ್ತು ಪ್ರಮಾಣೀಕರಣಕ್ಕಾಗಿ ಅವರ ಪ್ರಯಾಣದ ಹೊರೆಯನ್ನು ಕಡಿಮೆ ಮಾಡುತ್ತದೆ.

ಎಂ.ಎಂ.ಸಿ.ಟಿ ಯ ವಿಶ್ವ ದರ್ಜೆಯ ಮೂಲಸೌಕರ್ಯ, ಸಿಮ್ಯುಲೇಟರ್‌ ಗಳು ಮತ್ತು ಶಿಪ್-ಆನ್-ಕ್ಯಾಂಪಸ್ ತರಬೇತಿಯ ಬಗ್ಗೆ ಮಾತನಾಡಿದ ಶ್ರೀ ಸೋನೋವಾಲ್ ಕಡಲ ಶಿಕ್ಷಣದಲ್ಲಿ ಅದರ ಪಾತ್ರವನ್ನು ಶ್ಲಾಘಿಸಿದರು. "ಎಂ.ಎಂ.ಸಿ.ಟಿ ಯಂತಹ ಸಂಸ್ಥೆಗಳು ಉತ್ತಮ ಗುಣಮಟ್ಟದ ಕಡಲ ವೃತ್ತಿಪರರನ್ನು ಉತ್ಪಾದಿಸುತ್ತಿವೆ ಮತ್ತು ಸ್ಕಿಲ್ ಇಂಡಿಯಾ ಮತ್ತು ಮೇಕ್ ಇನ್ ಇಂಡಿಯಾದ ಮನೋಭಾವವನ್ನು ಪ್ರತಿಬಿಂಬಿಸುತ್ತಿವೆ" ಎಂದು ಶ್ರೀ ಸೋನೋವಾಲ್ ಹೇಳಿದರು.

ವಿಶ್ವದ ಅತಿದೊಡ್ಡ ಕಂಟೇನರ್ ಶಿಪ್ಪಿಂಗ್ ಲೈನ್ ಆಗಿರುವ ಮೆಡಿಟರೇನಿಯನ್ ಶಿಪ್ಪಿಂಗ್ ಕಂಪನಿ (ಎಂ.ಎಸ್‌.ಸಿ)ಯನ್ನು ಎಂ.ಎಂ.ಸಿ.ಟಿ ಜೊತೆಗಿನ ಸಹಯೋಗಕ್ಕಾಗಿ ಶ್ರೀ ಸೋನೋವಾಲ್ ಶ್ಲಾಘಿಸಿದರು. ಎಂ.ಎಸ್‌.ಸಿ 900ಕ್ಕೂ ಹೆಚ್ಚು ಹಡಗುಗಳನ್ನು ನಿರ್ವಹಿಸುತ್ತದೆ, 18,000 ಭಾರತೀಯ ನಾವಿಕರನ್ನು ಹೊಂದಿದೆ ಮತ್ತು ಭಾರತದಿಂದ ವಾರ್ಷಿಕವಾಗಿ 2.5 ಮಿಲಿಯನ್ ಟಿ.ಇ.ಯು ಎಕ್ಸಿಮ್ ಸಂಚಾರವನ್ನು ನಿರ್ವಹಿಸುತ್ತದೆ. "ಎಂ.ಎಂ.ಸಿ.ಟಿ ಜೊತೆಗಿನ ಎಂ ಎಸ್‌ ಸಿ ಯ ಪಾಲುದಾರಿಕೆಯು ಯುವ ಭಾರತೀಯ ನಾವಿಕರಿಗೆ ಜಾಗತಿಕ ಗುಣಮಟ್ಟದ ತರಬೇತಿ ಮತ್ತು ಅವಕಾಶಗಳನ್ನು ಖಚಿತಪಡಿಸುತ್ತದೆ" ಎಂದು ಶ್ರೀ ಸೋನೋವಾಲ್ ಹೇಳಿದರು.

ಬಂದರಿನ ಐದು ದಶಕಗಳ ಪ್ರಯಾಣ ಕುರಿತು ಮಾತನಾಡಿದ ಕೇಂದ್ರ ಸಚಿವರು, 1975 ರಲ್ಲಿ ನಾಲ್ಕು ಬರ್ತ್‌ ಗಳು ಮತ್ತು 90,000 ಟನ್ ಸರಕು ಸಾಗಣೆಯೊಂದಿಗೆ ಸಾಧಾರಣ ಆರಂಭ ಕಂಡ ಎನ್‌.ಎಂ.ಪಿ.ಎ, 16 ಬರ್ತ್‌ ಗಳು ಮತ್ತು ಸಿಂಗಲ್ ಪಾಯಿಂಟ್ ಮೂರಿಂಗ್ ಸೌಲಭ್ಯದೊಂದಿಗೆ ಪ್ರಗತಿಯ ಶಕ್ತಿ ಕೇಂದ್ರವಾಗಿ ಬೆಳೆದಿದೆ, ವಾರ್ಷಿಕವಾಗಿ 46 ಮಿಲಿಯನ್ ಟನ್‌ ಗಳಿಗೂ ಹೆಚ್ಚು ಸರಕು ಸಾಗಣೆಯನ್ನು ನಿರ್ವಹಿಸುತ್ತದೆ. 74 ಮಿಲಿಯನ್ ಟನ್‌ ಗಳ ಬಳಸಬಹುದಾದ ಸಾಮರ್ಥ್ಯವನ್ನು ಹೊಂದಿರುವ ಈ ಬಂದರು, 2047ರ ವೇಳೆಗೆ 100 ಮಿಲಿಯನ್ ಟನ್‌ ಗಳನ್ನು ತಲುಪುವ ಗುರಿಯನ್ನು ಹೊಂದಿದೆ ಎಂದು ಹೇಳಿದರು.

ಎನ್‌.ಎಂ.ಪಿ.ಎ ಭಾರತದ ಅತಿದೊಡ್ಡ ಕಾಫಿ ರಫ್ತುದಾರ ಮತ್ತು ಎಲ್‌.ಪಿ.ಜಿ ಯ ಎರಡನೇ ಅತಿದೊಡ್ಡ ಆಮದುದಾರನಾಗಿದೆ, ಅದರ ಕಾರ್ಯಾಚರಣೆಗಳಲ್ಲಿ ಶೇ.92 ರಷ್ಟು ಯಾಂತ್ರೀಕೃತಗೊಂಡಿದ್ದು, ಲಾಜಿಸ್ಟಿಕ್ಸ್ ದಕ್ಷತೆ ಮತ್ತು ಸುರಕ್ಷತೆಯನ್ನು ಹೆಚ್ಚಿಸುವುದರ ಜೊತೆಗೆ ವ್ಯಾಪಾರ ಮಾಡುವ ಸುಲಭತೆಯನ್ನು ಹೆಚ್ಚಿಸಿದೆ ಎಂದು ಸಚಿವರು ಹೇಳಿದರು. ಕರ್ನಾಟಕ, ಕೇರಳ ಮತ್ತು ತಮಿಳುನಾಡಿನಲ್ಲಿ ಕೈಗಾರಿಕೆಗಳಿಗೆ ಈ ಬಂದರು ಪ್ರಮುಖ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದೆ ಮತ್ತು ಕ್ರೂಸ್ ಪ್ರವಾಸೋದ್ಯಮದಲ್ಲಿ ಅದರ ಬೆಳೆಯುತ್ತಿರುವ ಪಾತ್ರವು ಪ್ರವಾಸೋದ್ಯಮ, ಆತಿಥ್ಯ ಮತ್ತು ಸಣ್ಣ-ಪ್ರಮಾಣದ ಉದ್ಯಮಗಳ ಮೂಲಕ ಸ್ಥಳೀಯ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಿದೆ ಎಂದು ಅವರು ಹೇಳಿದರು.

ಸುಸ್ಥಿರತೆಗೆ ಎನ್‌.ಎಂ.ಪಿ.ಎ ಯ ಬದ್ಧತೆಯನ್ನು ಶ್ರೀ ಸೋನೋವಾಲ್ ಒತ್ತಿ ಹೇಳಿದರು, ಇದು ಶೇ.100 ರಷ್ಟು ಸೌರಶಕ್ತಿ ಚಾಲಿತವಾಗಿದೆ, ಪರಿಸರದ ಮೇಲೆ ಪರಿಣಾಮ ಕಡಿಮೆ ಮಾಡಲು ಡಿಜಿಟಲ್ ವ್ಯವಸ್ಥೆಗಳನ್ನು ಅಳವಡಿಸಿಕೊಂಡಿದೆ ಮತ್ತು ಹಸಿರು ಲಾಜಿಸ್ಟಿಕ್ಸ್ ಕೇಂದ್ರವಾಗಿ ತನ್ನನ್ನು ತಾನು ಸ್ಥಾಪಿಸಿಕೊಳ್ಳಲು ಹರಿತ್‌ ಕಾರ್ಗೋ ರಿಯಾಯಿತಿ ನೀತಿಯನ್ನು ಪ್ರಾರಂಭಿಸಿದೆ ಎಂದು ಹೇಳಿದರು. "ಎನ್‌.ಎಂ.ಪಿ.ಎ ಯ ಹಸಿರು ಉಪಕ್ರಮಗಳು ಸುಸ್ಥಿರ ಅಭಿವೃದ್ಧಿ ಮತ್ತು ಕಡಲ ನಾವೀನ್ಯತೆಗೆ ಭಾರತದ ಬದ್ಧತೆಯನ್ನು ಉದಾಹರಿಸುತ್ತವೆ" ಎಂದು ಶ್ರೀ ಸೋನೋವಾಲ್ ಹೇಳಿದರು.

ಸಮಾರಂಭದಲ್ಲಿ, ಕೇಂದ್ರ ಸಚಿವರು ₹1,500 ಕೋಟಿ ಮೌಲ್ಯದ ಬಹು ಮೂಲಸೌಕರ್ಯ ಮತ್ತು ಸಿ.ಎಸ್.ಆರ್ ಯೋಜನೆಗಳನ್ನು ಉದ್ಘಾಟಿಸಿದರು, ಇದರಲ್ಲಿ ಪಿ.ಪಿ.ಪಿ ಮಾದರಿಯಡಿಯಲ್ಲಿ ನಿರ್ಮಿಸಲಾದ 150 ಹಾಸಿಗೆಗಳ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯೂ ಸೇರಿದೆ. ಇದು ಭಾರತದ ಪ್ರಮುಖ ಬಂದರುಗಳಲ್ಲಿ ಈ ರೀತಿಯ ಮೊದಲನೆಯ ಆಸ್ಪತ್ರೆಯಾಗಿದೆ. ಈ ಆಸ್ಪತ್ರೆಯು ಬಂದರು ಉದ್ಯೋಗಿಗಳು ಮತ್ತು ಹತ್ತಿರದ ಸಮುದಾಯಗಳಿಗೆ ಆರೋಗ್ಯ ಸೇವೆಗಳನ್ನು ಒದಗಿಸುತ್ತದೆ, ಇದರಲ್ಲಿ ಆಯುಷ್ಮಾನ್ ಭಾರತ್ ವ್ಯಾಪ್ತಿಯೂ ಸೇರಿದೆ.

ಭಾರತದ ಭವಿಷ್ಯದ ಕಡಲ ಕಾರ್ಯಸೂಚಿಯನ್ನು ಒತ್ತಿ ಹೇಳಿದ ಸಚಿವರು, ಮ್ಯಾರಿಟೈಮ್ ಇಂಡಿಯಾ ವಿಷನ್ 2030 (ಎಂ.ಐ.ವಿ 2030) ಮತ್ತು ಮ್ಯಾರಿಟೈಮ್ ಅಮೃತ ಕಾಲ ವಿಷನ್ 2047 (ಎಂ.ಎ.ಕೆ.ವಿ 2047) ಅಡಿಯಲ್ಲಿ, ಜಾಗತಿಕ ಸ್ಪರ್ಧಾತ್ಮಕತೆ, ಹಸಿರು ಪರಿವರ್ತನೆ ಮತ್ತು ಕರಾವಳಿ ಅಭಿವೃದ್ಧಿಯನ್ನು ಉತ್ತೇಜಿಸಲು ದೇಶಾದ್ಯಂತ ಬಂದರುಗಳನ್ನು ಆಧುನೀಕರಿಸಲಾಗುತ್ತಿದೆ ಎಂದು ಹೇಳಿದರು. "ನರೇಂದ್ರ ಮೋದಿ ಸರ್ಕಾರವು ಭಾರತಕ್ಕೆ ಎರಡು ಭವಿಷ್ಯದ ಕಡಲ ನೀಲನಕ್ಷೆಗಳನ್ನು ಒದಗಿಸಿದೆ – ಎಂ.ಐ.ವಿ 2030 ಮತ್ತು ಎಂಎಕೆವಿ 2047 – ಇವು ನಮ್ಮ ರಾಷ್ಟ್ರವನ್ನು ಜಾಗತಿಕ ಕಡಲ ನಾಯಕತ್ವದತ್ತ ಮುನ್ನಡೆಸುತ್ತಿವೆ" ಎಂದು ಶ್ರೀ ಸೋನೋವಾಲ್ ಹೇಳಿದರು.

ಎನ್‌.ಎಂ.ಪಿ.ಎ ಯ 2047ರ ಮಾಸ್ಟರ್ ಪ್ಲಾನ್ ಸರಕು ನಿರ್ವಹಣಾ ಸಾಮರ್ಥ್ಯವನ್ನು ದ್ವಿಗುಣಗೊಳಿಸುವುದು, ಇಂಗಾಲದ ತಟಸ್ಥತೆಯನ್ನು ಸಾಧಿಸುವುದು ಮತ್ತು ದಕ್ಷಿಣ ಭಾರತಕ್ಕೆ ಮಂಗಳೂರನ್ನು ಪ್ರಮುಖ ಲಾಜಿಸ್ಟಿಕ್ಸ್ ಮತ್ತು ಕ್ರೂಸ್ ಪ್ರವಾಸೋದ್ಯಮ ಕೇಂದ್ರವಾಗಿ ಸ್ಥಾಪಿಸುವುದನ್ನು ಉದ್ದೇಶಿಸಿದೆ ಎಂದು ಸಚಿವರು ಹೇಳಿದರು. ಡೀಪ್ ಡ್ರಾಫ್ಟ್ ಟರ್ಮಿನಲ್,ೆಲ್‌ ಎನ್‌ ಜಿ ಮೂಲಸೌಕರ್ಯ ಮತ್ತು ಸೀಪ್ಲೇನ್ ಮತ್ತು ಹೆಲಿ-ಟ್ಯಾಕ್ಸಿ ಸೌಲಭ್ಯಗಳೊಂದಿಗೆ ಹೊಸ ಔಟರ್ ಹಾರ್ಬರ್ ಕ್ರೂಸ್ ಟರ್ಮಿನಲ್ ಅನ್ನು ಅಭಿವೃದ್ಧಿಪಡಿಸಲು ಬಂದರು ಯೋಜಿಸಿದೆ ಎಂದು ಅವರು ಹೇಳಿದರು.

ಕರ್ನಾಟಕದಲ್ಲಿ, ಸಾಗರಮಾಲಾ ಕಾರ್ಯಕ್ರಮದಡಿಯಲ್ಲಿ ₹6,526 ಕೋಟಿ ಮೌಲ್ಯದ 32 ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ, ಜೊತೆಗೆ ₹420.89 ಕೋಟಿ ಮೌಲ್ಯದ ಎಂಟು ಹೆಚ್ಚುವರಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಬಂದರು ಆಧಾರಿತ ಕೈಗಾರಿಕೆಗಳಿಗೆ 960 ಎಕರೆಗೂ ಹೆಚ್ಚು ಬಂದರು ಭೂಮಿಯನ್ನು ಹಂಚಿಕೆ ಮಾಡಲಾಗಿದೆ, ಇದು ವಾರ್ಷಿಕ ₹7,500 ಕೋಟಿ ಆದಾಯವನ್ನು ಗಳಿಸುವ ಮತ್ತು ₹68,000 ಕೋಟಿ ಮೌಲ್ಯದ ಹೂಡಿಕೆಗಳನ್ನು ಆಕರ್ಷಿಸುವ ನಿರೀಕ್ಷೆಯಿದೆ, ಇದು ಉದ್ಯೋಗ ಮತ್ತು ಪ್ರಾದೇಶಿಕ ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ. 320 ಕಿ.ಮೀ ಕರಾವಳಿ, ನವ ಮಂಗಳೂರು ಬಂದರು ಮತ್ತು 12 ಸಣ್ಣ ಬಂದರುಗಳನ್ನು ಹೊಂದಿರುವ ಕರ್ನಾಟಕದ ಕಾರ್ಯತಂತ್ರದ ಮಹತ್ವವನ್ನು ಅವರು ಒತ್ತಿ ಹೇಳಿದರು, ಇದನ್ನು ದಕ್ಷಿಣ ಭಾರತದ ಉದಯೋನ್ಮುಖ ಕಡಲ ಕೇಂದ್ರ ಎಂದು ಬಣ್ಣಿಸಿದರು.

"ನಮ್ಮ ಕಡಲ ಬೆಳವಣಿಗೆಯ ಕಥೆ ಕೇವಲ ಹಡಗುಗಳು ಮತ್ತು ಸರಕುಗಳ ಬಗ್ಗೆ ಅಲ್ಲ; ಅದು ಜನರು ಅಂದರೆ - ನಮ್ಮ ಮೀನುಗಾರರು, ಉದ್ಯಮಿಗಳು ಮತ್ತು ಕರಾವಳಿ ಸಮುದಾಯಗಳ ಬಗ್ಗೆ ಆಗಿದೆ" ಎಂದು ಶ್ರೀ ಸೋನೋವಾಲ್ ಹೇಳಿದರು, ಯುವಜನರು, ಮಹಿಳೆಯರು ಮತ್ತು ಸಾಂಪ್ರದಾಯಿಕ ಸಮುದ್ರ ಸಂಚಾರ ಕುಟುಂಬಗಳ ಸಬಲೀಕರಣಕ್ಕೆ ಸಹಾಯ ಮಾಡುವ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ ಮತ್ತು ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆಯಂತಹ ಸರ್ಕಾರಿ ಉಪಕ್ರಮಗಳನ್ನು ಅವರು ಒತ್ತಿ ಹೇಳಿದರು.

ಕಾರ್ಯಕ್ರಮದ ಕೊನೆಯಲ್ಲಿ, ಕಳೆದ ಐದು ದಶಕಗಳಲ್ಲಿ ಬಂದರಿನ ಯಶಸ್ಸಿಗೆ ಕಾರಣರಾದ ಎಲ್ಲಾ ದೂರದೃಷ್ಟಿಯ ನಾಯಕರು, ಆಡಳಿತಗಾರರು, ಉದ್ಯೋಗಿಗಳು ಮತ್ತು ಕಾರ್ಮಿಕರಿಗೆ ಕೇಂದ್ರ ಸಚಿವರು ಗೌರವ ಸಲ್ಲಿಸಿದರು. "ನವ ಮಂಗಳೂರು ಬಂದರು ಪಶ್ಚಿಮ ಕರಾವಳಿಯ ರತ್ನವಾಗಿ ನಿರಂತರವಾಗಿ ಹೊಳೆಯುತ್ತಿರಲಿ ಮತ್ತು ಭಾರತವನ್ನು ಸಮೃದ್ಧ ಮತ್ತು ಸ್ವಾವಲಂಬಿ ಕಡಲ ಭವಿಷ್ಯದತ್ತ ಕೊಂಡೊಯ್ಯಲಿ" ಎಂದು ಶ್ರೀ ಸೋನೊವಾಲ್ ಹೇಳಿದರು.

ಕಳೆದ ತಿಂಗಳು ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಉದ್ಘಾಟಿಸಿದ ಇಂಡಿಯಾ ಮ್ಯಾರಿಟೈಮ್ ವೀಕ್ 2025 ರ ಯಶಸ್ಸನ್ನು ಸಚಿವರು ಉಲ್ಲೇಖಿಸಿದರು, ಇದರಲ್ಲಿ 88 ದೇಶಗಳ ಪ್ರತಿನಿಧಿಗಳು, 11 ಜಾಗತಿಕ ಸಚಿವರು ಮತ್ತು 100,000 ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು. "ಈ ಕಾರ್ಯಕ್ರಮದಲ್ಲಿ ₹12 ಲಕ್ಷ ಕೋಟಿಗೂ ಹೆಚ್ಚು ಮೌಲ್ಯದ ಒಪ್ಪಂದಗಳಿಗೆ ಸಹಿ ಹಾಕಲಾಯಿತು, ಇದು ಭಾರತದ ಕಡಲ ನಾಯಕತ್ವದ ಮೇಲಿನ ವಿಶ್ವದ ವಿಶ್ವಾಸವನ್ನು ತೋರಿಸುತ್ತದೆ" ಎಂದು ಅವರು ಹೇಳಿದರು.

ಇದನ್ನು "ಭಾರತದ ಕಡಲ ಪುನರುಜ್ಜೀವನದ ಸುವರ್ಣ ಯುಗ" ಎಂದು ಬಣ್ಣಿಸಿದ ಶ್ರೀ ಸೋನೋವಾಲ್, ಈ ಅವಕಾಶವನ್ನು ಬಳಸಿಕೊಳ್ಳುವಂತೆ ಯುವ ಕೆಡೆಟ್‌ ಗಳಿಗೆ ಕರೆ ನೀಡಿದರು. "ನಮ್ಮ ಕ್ರಿಯಾಶೀಲ ಪ್ರಧಾನಮಂತ್ರಿ ಮೋದಿ ಅವರು ಹೇಳುವಂತೆ - ಇದು ಸರಿಯಾದ ಸಮಯ. ಪರಿಶ್ರಮದಿಂದ ಕೆಲಸ ಮಾಡಿ ಮತ್ತು ವಿಕಸಿತ ಭಾರತ ಮತ್ತು ಸ್ವಾವಲಂಬಿ ಭಾರತವನ್ನು ನಿರ್ಮಿಸಲು ಕೊಡುಗೆ ನೀಡಲು ಈ ಸುವರ್ಣ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಳ್ಳಿ. ಇವು ನಮ್ಮ ಪ್ರಧಾನ ಮಂತ್ರಿ ಅವರ ಕಡಲ ಪರಿವರ್ತನೆಗೆ ಬಲವಾದ ಬದ್ಧತೆಯ ಸ್ಪಷ್ಟ ಸಂಕೇತಗಳಾಗಿವೆ. ಈ ವಲಯದಲ್ಲಿ ನಮ್ಮ ಹೂಡಿಕೆ ಸಾಮರ್ಥ್ಯ ₹80 ಲಕ್ಷ ಕೋಟಿಗಳಿಗಿಂತ ಹೆಚ್ಚಿದ್ದು, ಮುಂಬರುವ ವರ್ಷಗಳಲ್ಲಿ 1.5 ಕೋಟಿಗೂ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ" ಎಂದು ಅವರು ಹೇಳಿದರು.

ಭಾರತವು ಈಗ ಮೂರನೇ ಅತಿದೊಡ್ಡ ಸಮುದ್ರಯಾನ ರಾಷ್ಟ್ರವಾಗಿದ್ದು, ಜಾಗತಿಕ ಕಾರ್ಯಪಡೆಯ ಸುಮಾರು ಶೇ.15 ರಷ್ಟು ಕೊಡುಗೆ ನೀಡಿದೆ ಎಂದು ಸಚಿವರು ಹೇಳಿದರು. 2014 ರಲ್ಲಿ 1.08 ಲಕ್ಷವಿದ್ದ ಭಾರತೀಯ ನಾವಿಕರ ಸಂಖ್ಯೆ ಇಂದು 3.2 ಲಕ್ಷಕ್ಕೆ ಏರಿದೆ. "2030 ರ ವೇಳೆಗೆ, ಪ್ರತಿ ಐದು ಜಾಗತಿಕ ನಾವಿಕರಲ್ಲಿ ಒಬ್ಬರು ಭಾರತೀಯರಾಗಿರುತ್ತಾರೆ" ಎಂದು ಅವರು ಹೇಳಿದರು. ಭಾರತೀಯ ಧ್ವಜದ ಅಡಿಯಲ್ಲಿ ಹಡಗುಗಳನ್ನು ನೋಂದಾಯಿಸಲು, ಬಂದರುಗಳು ಮತ್ತು ಹಡಗುಕಟ್ಟೆಗಳಲ್ಲಿ ಹೂಡಿಕೆ ಮಾಡಲು, ಭಾರತೀಯ ಕೆಡೆಟ್‌ ಗಳಿಗೆ ತರಬೇತಿಯನ್ನು ವಿಸ್ತರಿಸಲು ಜಾಗತಿಕ ಪಾಲುದಾರರನ್ನು ಸಚಿವರು ಆಹ್ವಾನಿಸಿದರು.

ಸರ್ಕಾರದ ಮ್ಯಾರಿಟೈಮ್ ಇಂಡಿಯಾ ವಿಷನ್ 2030 ಮತ್ತು ಮ್ಯಾರಿಟೈಮ್ ಅಮೃತಕಾಲ ವಿಷನ್ 2047 ಆಧುನೀಕರಣದ ನೀಲನಕ್ಷೆಗಳಾಗಿ ಕಾರ್ಯನಿರ್ವಹಿಸುತ್ತವೆ ಎಂದು ಕೇಂದ್ರ ಸಚಿವರು ಹೇಳಿದರು, ಬಂದರುಗಳು, ಲಾಜಿಸ್ಟಿಕ್ಸ್, ಒಳನಾಡಿನ ಜಲಮಾರ್ಗಗಳು ಮತ್ತು ಹಸಿರು ಸಾಗಣೆಯನ್ನು ಬಲಪಡಿಸಲು 300 ಕ್ಕೂ ಹೆಚ್ಚು ಕಾರ್ಯಸಾಧ್ಯ ಉಪಕ್ರಮಗಳನ್ನು ಹೊಂದಿದೆ ಎಂದು ಅವರು ಹೇಳಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕಳೆದ 11 ವರ್ಷಗಳಲ್ಲಿ ಸಾಧಿಸಿದ ಪ್ರಮುಖ ಮೈಲಿಗಲ್ಲುಗಳನ್ನು ಶ್ರೀ ಸೋನೋವಾಲ್ ಉಲ್ಲೇಖಿಸಿದರು, ಭಾರತದ ಕಡಲ ವಲಯವು ಗಮನಾರ್ಹ ಪರಿವರ್ತನೆ ಕಂಡಿದೆ ಎಂದು ಅವರು ಹೇಳಿದರು. ವಿಶ್ವದ 10 ಅತಿದೊಡ್ಡ ಬಂದರುಗಳಲ್ಲಿ ಒಂದಾಗಲು ಸಜ್ಜಾಗಿರುವ ₹76,000 ಕೋಟಿ ವೆಚ್ಚದ ವಾಧ್ವಾನ್ ಬಂದರು ಯೋಜನೆಯ ಉದ್ಘಾಟನೆ - ಹೈಡ್ರೋಜನ್ ಹಬ್‌ ಗಳ ಸ್ಥಾಪನೆ ಮತ್ತು ಹರಿತ್ ಸಾಗರ್ ಮತ್ತು ಹರಿತ್ ನೌಕಾ ಚೌಕಟ್ಟುಗಳ ಅಡಿಯಲ್ಲಿ ಹಸಿರು ಬಂದರು ಮತ್ತು ಹಡಗು ಮಾರ್ಗಸೂಚಿಗಳ ಪರಿಚಯವನ್ನು ಅವರು ಉಲ್ಲೇಖಿಸಿದರು. ಒಳನಾಡಿನ ಸರಕು ಸಾಗಣೆಯಲ್ಲಿ ಶೇ.700 ರಷ್ಟು ಏರಿಕೆ, ಕರಾವಳಿ ಸಾಗಣೆಯಲ್ಲಿ ಶೇ.200 ಏರಿಕೆ ಮತ್ತು ಹಡಗುಗಳ ಟರ್ನ್‌ಅರೌಂಡ್ ಸಮಯದಲ್ಲಿ ಆಗಿರುವ ಗಮನಾರ್ಹ ಕಡಿತವು ಅಮೆರಿಕ ಮತ್ತು ಜರ್ಮನಿಯಂತಹ ದೇಶಗಳಿಗಿಂತ ಉತ್ತಮವಾಗಿದೆ ಎಂದು ಅವರು ಹೇಳಿದರು. ಕ್ರೂಸ್ ಪ್ರವಾಸೋದ್ಯಮವು ಸುಮಾರು ಐದು ಪಟ್ಟು - 2014 ರಲ್ಲಿದ್ದ 84,000 ಪ್ರಯಾಣಿಕರಿಂದ ಕಳೆದ ವರ್ಷ ಸುಮಾರು 500,000 ಕ್ಕೆ – ವಿಸ್ತರಿಸಿದೆ. ಭಾರತದ ಬಂದರು ಸಾಮರ್ಥ್ಯವು 1,400 ಎಂಟಿಪಿಎಯಿಂದ 2,700 ಎಂಟಿಪಿಎಗೆ ದ್ವಿಗುಣಗೊಂಡಿದೆ ಮತ್ತು ಭಾರತೀಯ ಧ್ವಜದ ಟನ್ನೇಜ್‌ 10 ಎಂಜಿಟಿಯಿಂದ 13.52 ಎಂಜಿಟಿಗೆ ಬೆಳೆದಿದೆ ಎಂದು ಅವರು ಹೇಳಿದರು.

ಕೇಂದ್ರ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ, ಸಂಸದ ಶ್ರೀ ಬ್ರಿಜೇಶ್ ಚೌಟ, ಮಾಜಿ ಸಂಸದ ಮತ್ತು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಶ್ರೀ ನಳಿನ್ ಕುಮಾರ್ ಕಟೀಲ್, ಶಾಸಕರಾದ ಡಾ. ಭರತ್ ಶೆಟ್ಟಿ ಮತ್ತು ಶ್ರೀ ಡಿ. ವೇದವ್ಯಾಸ ಕಾಮತ್, ಶಿಪ್ಪಿಂಗ್ ಮಹಾನಿರ್ದೇಶಕ ಶ್ರೀ ಶ್ಯಾಮ್ ಜಗನ್ನಾಥನ್, ಎನ್‌ ಎಂ ಪಿ ಎ ಅಧ್ಯಕ್ಷ ಡಾ. ವೆಂಕಟ ರಾಮನ್ ಅಕ್ಕರಾಜು ಮತ್ತು ಉಪಾಧ್ಯಕ್ಷರಾದ ಎಸ್. ಶಾಂತಿ ಅವರು ಎನ್‌ ಎಂ ಪಿ ಎ ಯ ಸುವರ್ಣ ಮಹೋತ್ಸವ ಆಚರಣೆಯಲ್ಲಿ ಭಾಗವಹಿಸಿದ್ದರು.

ಎಂಎಂಸಿಟಿ ಕಾರ್ಯಕ್ರಮದಲ್ಲಿ ಸಂಸದ ಶ್ರೀ ಬ್ರಿಜೇಶ್ ಚೌಟ, ಶಾಸಕ ಡಾ. ಭರತ್ ಶೆಟ್ಟಿ, ಶಿಪ್ಪಿಂಗ್ ಮಹಾನಿರ್ದೇಶಕ ಶ್ರೀ ಶ್ಯಾಮ್ ಜಗನ್ನಾಥನ್, ಶಿಪ್ಪಿಂಗ್ ಹೆಚ್ಚುವರಿ ಮಹಾನಿರ್ದೇಶಕ ಶ್ರೀ ಸುಶೀಲ್ ಖೋಪ್ಡೆ, ಎಂ ಎಸ್‌ ಸಿ ಕ್ರೂಯಿಂಗ್ ಸರ್ವೀಸಸ್ ವ್ಯವಸ್ಥಾಪಕ ನಿರ್ದೇಶಕ ಕ್ಯಾಪ್ಟನ್ ಎಂ.ಪಿ. ಭಾಸಿನ್, ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವನಿತಾ, ಮತ್ತು ಸಿ ಎಮ್‌ ಸಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಮತ್ತು ಸಂಸ್ಥಾಪಕ ಶ್ರೀ ಎಸ್.ಐ. ನಾಥನ್ ಮತ್ತಿತರರು ಭಾಗವಹಿಸಿದ್ದರು.

 

*****


(Release ID: 2189882) Visitor Counter : 8
Read this release in: English , Tamil