ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

31.12.2023 ರಂದು ‘ಮನ್ ಕಿ ಬಾತ್’ ನ 108ನೇ ಸಂಚಿಕೆಯಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಕನ್ನಡ ಅವತರಣಿಕೆ

Posted On: 31 DEC 2023 11:45AM by PIB Bengaluru

ನನ್ನ ಪ್ರೀತಿಯ ದೇಶವಾಸಿಗಳೇ, ನಮಸ್ಕಾರ. ‘ಮನ್ ಕಿ ಬಾತ್’ ಎಂದರೆ ನಿಮ್ಮನ್ನು ಭೇಟಿಯಾಗುವ ಒಂದು ಮಂಗಳಕರ ಅವಕಾಶ, ಮತ್ತು ನಿಮ್ಮ ಕುಟುಂಬ ಸದಸ್ಯರನ್ನು ಭೇಟಿಯಾದಾಗ, ಅದು ತುಂಬಾ ಸಂತೋಷವನ್ನು ನೀಡುತ್ತದೆ... ತುಂಬಾ ತೃಪ್ತಿಯನ್ನು ನೀಡುತ್ತದೆ. 'ಮನ್ ಕಿ ಬಾತ್' ಮೂಲಕ ನಿಮ್ಮನ್ನು ಭೇಟಿಯಾದ ನಂತರ ನನಗೆ ಇದೇ ಅನಿಸುತ್ತದೆ ಮತ್ತು ಇಂದು, ಇದು ನಮ್ಮ ಪಯಣದ 108 ನೇ ಸಂಚಿಕೆ. ನಮಗೆ 108 ಸಂಖ್ಯೆಯ ಮಹತ್ವ ಮತ್ತು ಅದರ ಪಾವಿತ್ರ್ಯತೆಯು ಆಳವಾದ ಅಧ್ಯಯನದ ವಿಷಯವಾಗಿದೆ. ಜಪಮಾಲೆಯಲ್ಲಿ 108 ಮಣಿಗಳು, 108 ಬಾರಿ ಜಪಿಸುವುದು, 108 ದೈವಿಕ ತಾಣಗಳು, ದೇವಾಲಯಗಳಲ್ಲಿ 108 ಮೆಟ್ಟಿಲುಗಳು, 108 ಗಂಟೆಗಳು, ಈ 108 ಸಂಖ್ಯೆಯು ಅಪಾರ ನಂಬಿಕೆಯೊಂದಿಗೆ ಸಂಬಂಧ ಹೊಂದಿದೆ. ಅದಕ್ಕಾಗಿಯೇ 'ಮನ್ ಕಿ ಬಾತ್' ನ 108 ನೇ ಸಂಚಿಕೆ ನನಗೆ ಇನ್ನಷ್ಟು ವಿಶೇಷವಾಗಿದೆ. ಈ 108 ಸಂಚಿಕೆಗಳಲ್ಲಿ, ನಾವು ಸಾರ್ವಜನಿಕ ಸಹಭಾಗಿತ್ವದ ಅನೇಕ ಉದಾಹರಣೆಗಳನ್ನು ನೋಡಿದ್ದೇವೆ ಮತ್ತು ಅವರಿಂದ ಸ್ಫೂರ್ತಿ ಪಡೆದಿದ್ದೇವೆ. ಈಗ ಈ ಮೈಲಿಗಲ್ಲನ್ನು ತಲುಪಿದ ನಂತರ, ನಾವು ಹೊಸ ಶಕ್ತಿ ಮತ್ತು ವೇಗವಾದ ಗತಿಯೊಂದಿಗೆ ಹೊಸದಾಗಿ ಮುಂದುವರಿಯಲು ಸಂಕಲ್ಪ ಮಾಡಬೇಕು. ಮತ್ತು ನಾಳೆಯ ಸೂರ್ಯೋದಯವು 2024 ರ ಮೊದಲ ಸೂರ್ಯೋದಯವಾಗಲಿದೆ ಎಂಬುದು ಎಷ್ಟು ಸಂತೋಷದ ಕಾಕತಾಳೀಯವಾಗಿದೆ - ನಾವು 2024 ರ ವರ್ಷವನ್ನು ಪ್ರವೇಶಿಸಿರುತ್ತೇವೆ. ನಿಮಗೆಲ್ಲರಿಗೂ 2024 ಕ್ಕೆ ಶುಭಾಶಯಗಳು.

ಸ್ನೇಹಿತರೇ, 'ಮನ್ ಕಿ ಬಾತ್' ಕೇಳಿದ ಅನೇಕ ಜನರು ನನಗೆ ಪತ್ರಗಳನ್ನು ಬರೆದಿದ್ದಾರೆ ಮತ್ತು ಅವರ ಸ್ಮರಣೀಯ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. 140 ಕೋಟಿ ಭಾರತೀಯರ ಶಕ್ತಿಯ ಕಾರಣದಿಂದಾಗಿ ಈ ವರ್ಷ, ನಮ್ಮ ದೇಶವು ಅನೇಕ ವಿಶೇಷ ಸಾಧನೆಗಳನ್ನು ಮಾಡಿದೆ. ಈ ವರ್ಷದಲ್ಲಿಯೇ, ವರ್ಷಗಳಿಂದ ಕಾಯುತ್ತಿದ್ದ 'ನಾರಿ ಶಕ್ತಿ ವಂದನ ಕಾಯಿದೆ' ಅಂಗೀಕಾರವಾಯಿತು.

ಭಾರತವು 5ನೇ ಅತಿದೊಡ್ಡ ಆರ್ಥಿಕತೆಯಾಗಿದ್ದರ ಬಗ್ಗೆ ಅನೇಕ ಜನರು ಪತ್ರಗಳನ್ನು ಬರೆದು ಸಂತೋಷ ವ್ಯಕ್ತಪಡಿಸಿದ್ದಾರೆ. ಜಿ20 ಶೃಂಗಸಭೆಯ ಯಶಸ್ಸನ್ನು ಅನೇಕ ಜನರು ನನಗೆ ನೆನಪಿಸಿದ್ದಾರೆ.

ಸ್ನೇಹಿತರೇ, ಇಂದು ಭಾರತದ ಪ್ರತಿಯೊಂದು ಮೂಲೆ ಆತ್ಮವಿಶ್ವಾಸದಿಂದ ತುಂಬಿದೆ, ಅಭಿವೃದ್ಧಿ ಹೊಂದಿದ ಭಾರತದ ಮನೋಭಾವದಿಂದ, ಆತ್ಮನಿರ್ಭರತೆಯ ಮನೋಭಾವದಿಂದ ಕೂಡಿದೆ. ನಾವು 2024 ರಲ್ಲಿಯೂ ಇದೇ ಮನೋಭಾವ ಮತ್ತು ವೇಗವನ್ನು ಕಾಪಾಡಿಕೊಳ್ಳಬೇಕು. ದೀಪಾವಳಿಯ ದಾಖಲೆ ವ್ಯವಹಾರವು ಪ್ರತಿ ಭಾರತೀಯನು 'ವೋಕಲ್ ಫಾರ್ ಲೋಕಲ್' ಮಂತ್ರಕ್ಕೆ ಪ್ರಾಮುಖ್ಯತೆ ನೀಡುತ್ತಿದ್ದಾನೆ ಎಂದು ಸಾಬೀತುಪಡಿಸಿತು.

ಸ್ನೇಹಿತರೇ, ಇಂದಿಗೂ ಅನೇಕ ಜನರು ಚಂದ್ರಯಾನ-3 ರ ಯಶಸ್ಸಿಗೆ ಸಂಬಂಧಿಸಿದ ಸಂದೇಶಗಳನ್ನು ನನಗೆ ಕಳುಹಿಸುತ್ತಿದ್ದಾರೆ. ನನ್ನಂತೆಯೇ, ನೀವು ಕೂಡ ನಮ್ಮ ವಿಜ್ಞಾನಿಗಳು ಮತ್ತು ವಿಶೇಷವಾಗಿ ಮಹಿಳಾ ವಿಜ್ಞಾನಿಗಳ ಬಗ್ಗೆ ಹೆಮ್ಮೆ ಪಡುತ್ತೀರಿ ಎಂದು ನನಗೆ ಗೊತ್ತಿದೆ.

ಸ್ನೇಹಿತರೇ, ನಾಟು-ನಾಟು ಆಸ್ಕರ್ ಗೆದ್ದಾಗ, ಇಡೀ ದೇಶವು ಉತ್ಸಾಹದಿಂದ ಹಿಗ್ಗಿತು. ‘ದಿ ಎಲಿಫೆಂಟ್ ವಿಸ್ಪರರ್ಸ್‌’ಗೆ ದೊರೆತ ಗೌರವದ ಬಗ್ಗೆ ಕೇಳಿ ಯಾರು ಸಂತೋಷಪಡಲಿಲ್ಲ? ಅವರ ಮೂಲಕ ಜಗತ್ತು ಭಾರತದ ಸೃಜನಶೀಲತೆಯನ್ನು ಕಂಡಿತು ಮತ್ತು ಪರಿಸರದೊಂದಿಗಿನ ನಮ್ಮ ಬಾಂಧವ್ಯವನ್ನು ಅರ್ಥಮಾಡಿಕೊಂಡಿತು. ಈ ವರ್ಷ ನಮ್ಮ ಕ್ರೀಡಾಪಟುಗಳು ಕ್ರೀಡೆಗಳಲ್ಲಿಯೂ ಅದ್ಭುತವಾಗಿ ಪ್ರದರ್ಶನ ನೀಡಿದರು. ನಮ್ಮ ಆಟಗಾರರು ಏಷ್ಯನ್ ಗೇಮ್ಸ್‌ನಲ್ಲಿ 107 ಪದಕಗಳನ್ನು ಮತ್ತು ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ 111 ಪದಕಗಳನ್ನು ಗೆದ್ದರು. ಕ್ರಿಕೆಟ್ ವಿಶ್ವಕಪ್‌ನಲ್ಲಿ ಭಾರತೀಯ ಆಟಗಾರರು ತಮ್ಮ ಪ್ರದರ್ಶನದಿಂದ ಎಲ್ಲರ ಹೃದಯವನ್ನು ಗೆದ್ದರು. ಅಂಡರ್-19 ಟಿ-20 ವಿಶ್ವಕಪ್‌ನಲ್ಲಿ ನಮ್ಮ ಮಹಿಳಾ ಕ್ರಿಕೆಟ್ ತಂಡದ ವಿಜಯವು ಬಹಳ ಸ್ಫೂರ್ತಿದಾಯಕವಾಗಿದೆ. ಇತರ ಹಲವು ಕ್ರೀಡೆಗಳಲ್ಲಿ ಆಟಗಾರರ ಸಾಧನೆಗಳು ದೇಶದ ಕೀರ್ತಿಯನ್ನು ಹೆಚ್ಚಿಸಿವೆ. ಈಗ ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ ನಡೆಯಲಿದೆ, ಅದಕ್ಕಾಗಿ ಇಡೀ ದೇಶವು ತನ್ನ ಆಟಗಾರರನ್ನು ಪ್ರೋತ್ಸಾಹಿಸುತ್ತಿದೆ.

ಸ್ನೇಹಿತರೇ, ನಾವು ಒಟ್ಟಾಗಿ ಪ್ರಯತ್ನಿಸಿದಾಗಲೆಲ್ಲಾ, ಅದು ನಮ್ಮ ದೇಶದ ಅಭಿವೃದ್ಧಿ ಪಯಣದ ಮೇಲೆ ಬಹಳ ಧನಾತ್ಮಕ ಪರಿಣಾಮ ಬೀರಿದೆ. ನಾವು ‘ಆಜಾದಿ ಕಾ ಅಮೃತ್ ಮಹೋತ್ಸವ’ ಮತ್ತು ‘ಮೇರಿ ಮಾಟಿ ಮೇರಾ ದೇಶ್’ ನಂತಹ ಯಶಸ್ವಿ ಅಭಿಯಾನಗಳನ್ನು ಕಂಡಿದ್ದೇವೆ. ಅವುಗಳಲ್ಲಿ ಕೋಟ್ಯಂತರ ಜನರು ಭಾಗವಹಿಸಿರುವುದಕ್ಕೆ ನಾವೆಲ್ಲರೂ ಸಾಕ್ಷಿಯಾಗಿದ್ದೇವೆ. 70 ಸಾವಿರ ಅಮೃತ್ ಸರೋವರಗಳ ನಿರ್ಮಾಣವೂ ನಮ್ಮ ಸಾಮೂಹಿಕ ಸಾಧನೆಯಾಗಿದೆ.

ಸ್ನೇಹಿತರೇ, ನಾವೀನ್ಯತೆಗೆ ಪ್ರಾಮುಖ್ಯತೆ ನೀಡದ ದೇಶದ ಅಭಿವೃದ್ಧಿ ನಿಲ್ಲುತ್ತದೆ ಎಂದು ನಾನು ಯಾವಾಗಲೂ ನಂಬಿದ್ದೇನೆ. ಭಾರತವು ನಾವೀನ್ಯತೆ ಕೇಂದ್ರವಾಗುತ್ತಿರುವುದು ನಾವು ನಿಲ್ಲುವುದಿಲ್ಲ ಎಂಬುದರ ಸಂಕೇತವಾಗಿದೆ. 2015 ರಲ್ಲಿ ನಾವು ಜಾಗತಿಕ ನಾವೀನ್ಯತೆ ಸೂಚ್ಯಂಕದಲ್ಲಿ 81 ನೇ ಸ್ಥಾನದಲ್ಲಿದ್ದೆವು – ಇಂದು ನಮ್ಮ ಶ್ರೇಯಾಂಕ 40 ಆಗಿದೆ. ಈ ವರ್ಷ ಭಾರತದಲ್ಲಿ ದಾಖಲಾದ ಪೇಟೆಂಟ್‌ಗಳ ಸಂಖ್ಯೆ ಹೆಚ್ಚಿತ್ತು, ಅದರಲ್ಲಿ ಸುಮಾರು 60% ದೇಶೀಯ ನಿಧಿಗಳಿಂದ ಬಂದವು. ಈ ಬಾರಿ ಅತಿ ಹೆಚ್ಚು ಭಾರತೀಯ ವಿಶ್ವವಿದ್ಯಾಲಯಗಳು ಕ್ಯೂಎಸ್ ಏಷ್ಯಾ ವಿಶ್ವವಿದ್ಯಾಲಯ ಶ್ರೇಯಾಂಕಗಳಲ್ಲಿ ಸೇರಿವೆ. ನಾವು ಈ ಸಾಧನೆಗಳ ಪಟ್ಟಿಯನ್ನು ಮಾಡಲು ಪ್ರಾರಂಭಿಸಿದರೆ, ಅದನ್ನು ಎಂದಿಗೂ ಪೂರ್ಣಗೊಳಿಸಲಾಗುವುದಿಲ್ಲ. ಇದು ಭಾರತದ ಸಾಮರ್ಥ್ಯವು ಎಷ್ಟು ಪರಿಣಾಮಕಾರಿ ಎಂಬುದರ ಒಂದು ಝಲಕ್ ಮಾತ್ರ - ನಾವು ದೇಶದ ಈ ಯಶಸ್ಸುಗಳಿಂದ; ದೇಶದ ಜನರ ಈ ಸಾಧನೆಗಳಿಂದ ಸ್ಫೂರ್ತಿ ಪಡೆಯಬೇಕು; ಅವುಗಳ ಬಗ್ಗೆ ಹೆಮ್ಮೆ ಪಡಬೇಕು, ಹೊಸ ಸಂಕಲ್ಪಗಳನ್ನು ಮಾಡಬೇಕು. ಮತ್ತೊಮ್ಮೆ, ನಿಮಗೆಲ್ಲರಿಗೂ 2024 ರ ಶುಭಾಶಯಗಳು.

ನನ್ನ ಕುಟುಂಬ ಸದಸ್ಯರೇ, ಭಾರತದ ಬಗ್ಗೆ ಎಲ್ಲೆಡೆ ವ್ಯಾಪಿಸಿರುವ ಭರವಸೆ ಮತ್ತು ಉತ್ಸಾಹದ ಬಗ್ಗೆ ನಾವು ಈಗಷ್ಟೇ ಚರ್ಚಿಸಿದೆವು - ಈ ಭರವಸೆ ಮತ್ತು ನಿರೀಕ್ಷೆ ಬಹಳ ಉತ್ತಮವಾಗಿದೆ. ಭಾರತವು ಅಭಿವೃದ್ಧಿ ಹೊಂದಿದಾಗ, ಯುವಕರು ಹೆಚ್ಚು ಪ್ರಯೋಜನ ಪಡೆಯುತ್ತಾರೆ. ಆದರೆ ಅವರು ಸದೃಢರಾಗಿದ್ದರೆ ಯುವಕರು ಹೆಚ್ಚು ಪ್ರಯೋಜನ ಪಡೆಯುತ್ತಾರೆ.

ಇತ್ತೀಚಿನ ದಿನಗಳಲ್ಲಿ ಜೀವನಶೈಲಿಗೆ ಸಂಬಂಧಿಸಿದ ಕಾಯಿಲೆಗಳ ಬಗ್ಗೆ ಎಷ್ಟು ಚರ್ಚೆ ನಡೆಯುತ್ತಿದೆ ಎಂದು ನಾವು ನೋಡುತ್ತೇವೆ, ಇದು ನಮ್ಮೆಲ್ಲರಿಗೂ, ವಿಶೇಷವಾಗಿ ಯುವಕರಿಗೆ ಬಹಳ ಕಳವಳಕಾರಿ ವಿಷಯವಾಗಿದೆ. ಈ ‘ಮನ್ ಕಿ ಬಾತ್’ ಗಾಗಿ, ಫಿಟ್ ಇಂಡಿಯಾಗೆ ಸಂಬಂಧಿಸಿದ ವಿಷಯಗಳನ್ನು ಕಳುಹಿಸಲು ನಾನು ನಿಮ್ಮೆಲ್ಲರನ್ನೂ ವಿನಂತಿಸಿದ್ದೆ. ನೀವು ನೀಡಿದ ಪ್ರತಿಕ್ರಿಯೆ ನನಗೆ ಉತ್ಸಾಹ ತುಂಬಿದೆ. ಹೆಚ್ಚಿನ ಸಂಖ್ಯೆಯ ನವೋದ್ಯಮಗಳು ಸಹ ನನಗೆ ನಮೋ ಆ್ಯಪ್‌ನಲ್ಲಿ ತಮ್ಮ ಸಲಹೆಗಳನ್ನು ಕಳುಹಿಸಿವೆ; ಅವರು ತಮ್ಮ ಹಲವು ವಿಶಿಷ್ಟ ಪ್ರಯತ್ನಗಳ ಬಗ್ಗೆ ಚರ್ಚಿಸಿದ್ದಾರೆ.

ಸ್ನೇಹಿತರೇ, ಭಾರತದ ಪ್ರಯತ್ನಗಳ ಮೂಲಕ, 2023 ಅನ್ನು ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷವಾಗಿ ಆಚರಿಸಲಾಯಿತು. ಇದು ಈ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ನವೋದ್ಯಮಗಳಿಗೆ ಬಹಳಷ್ಟು ಅವಕಾಶಗಳನ್ನು ನೀಡಿದೆ; ಇವುಗಳಲ್ಲಿ ಲಕ್ನೋದಿಂದ ಪ್ರಾರಂಭವಾದ ‘ಕೀರೋಸ್ ಫುಡ್ಸ್’, ಪ್ರಯಾಗರಾಜ್‌ನ ‘ಗ್ರ್ಯಾಂಡ್-ಮಾ ಮಿಲೆಟ್ಸ್’ ಮತ್ತು ‘ನ್ಯೂಟ್ರಾಸ್ಯುಟಿಕಲ್ ರಿಚ್ ಆರ್ಗಾನಿಕ್ ಇಂಡಿಯಾ’ ನಂತಹ ಅನೇಕ ನವೋದ್ಯಮಗಳು ಸೇರಿವೆ. ಆಲ್ಪಿನೊ ಹೆಲ್ತ್ ಫುಡ್ಸ್, ಆರ್ಬೋರಿಯಲ್ ಮತ್ತು ಕೀರೋಸ್ ಫುಡ್ಸ್‌ಗೆ ಸಂಬಂಧಿಸಿದ ಯುವಕರು ಆರೋಗ್ಯಕರ ಆಹಾರ ಆಯ್ಕೆಗಳ ಬಗ್ಗೆ ಹೊಸ ನಾವೀನ್ಯತೆಗಳನ್ನು ಸಹ ಮಾಡುತ್ತಿದ್ದಾರೆ. ಬೆಂಗಳೂರಿನ ಅನ್ಬಾಕ್ಸ್ ಹೆಲ್ತ್‌ನೊಂದಿಗೆ ಸಂಬಂಧಿಸಿದ ಯುವಕರು ಅವರು ಜನರಿಗೆ ಅವರ ಇಷ್ಟದ ಆಹಾರವನ್ನು ಆಯ್ಕೆ ಮಾಡಲು ಹೇಗೆ ಸಹಾಯ ಮಾಡುತ್ತಿದ್ದಾರೆ ಎಂಬುದನ್ನು ಸಹ ವ್ಯಕ್ತಪಡಿಸಿದ್ದಾರೆ. ದೈಹಿಕ ಆರೋಗ್ಯದಲ್ಲಿ ಆಸಕ್ತಿ ಹೆಚ್ಚುತ್ತಿರುವ ರೀತಿಯಲ್ಲಿ, ಈ ಕ್ಷೇತ್ರಕ್ಕೆ ಸಂಬಂಧಿಸಿದ ತರಬೇತುದಾರರು ಮತ್ತು ತರಬೇತಿದಾರರ ಬೇಡಿಕೆಯೂ ಹೆಚ್ಚುತ್ತಿದೆ. ಜೋಗೋ ಟೆಕ್ನಾಲಜೀಸ್‌ನಂತಹ ಸ್ಟಾರ್ಟಪ್‌ಗಳು ಈ ಬೇಡಿಕೆಯನ್ನು ಪೂರೈಸಲು ಸಹಾಯ ಮಾಡುತ್ತಿವೆ.

ಸ್ನೇಹಿತರೇ, ಇಂದು ದೈಹಿಕ ಆರೋಗ್ಯ ಮತ್ತು ಯೋಗಕ್ಷೇಮದ ಬಗ್ಗೆ ಬಹಳಷ್ಟು ಚರ್ಚೆ ನಡೆಯುತ್ತಿದೆ, ಆದರೆ ಅದಕ್ಕೆ ಸಂಬಂಧಿಸಿದ ಮತ್ತೊಂದು ಪ್ರಮುಖ ಅಂಶವೆಂದರೆ ಮಾನಸಿಕ ಆರೋಗ್ಯ. ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮವನ್ನು ಸುಧಾರಿಸಲು ಮುಂಬೈ ಮೂಲದ ಇನ್ಫಿ-ಹೀಲ್ ಮತ್ತು ಯುವರ್-ದೋಸ್ತ್  ನಂತಹ ನವೋದ್ಯಮಗಳು ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿದು ನನಗೆ ತುಂಬಾ ಸಂತೋಷವಾಗಿದೆ. ಅಷ್ಟೇ ಅಲ್ಲ, ಇಂದು ಕೃತಕ ಬುದ್ಧಿಮತ್ತೆಯಂತಹ ತಂತ್ರಜ್ಞಾನವನ್ನು ಸಹ ಇದಕ್ಕಾಗಿ ಬಳಸಲಾಗುತ್ತಿದೆ. ಸ್ನೇಹಿತರೇ, ನಾನು ಇಲ್ಲಿ ಕೆಲವೇ ಕೆಲವು ನವೋದ್ಯಮಗಳ ಹೆಸರನ್ನು ನಮೂದಿಸಬಹುದು, ಏಕೆಂದರೆ ಪಟ್ಟಿ ತುಂಬಾ ದೊಡ್ಡದಾಗಿದೆ. ಫಿಟ್ ಇಂಡಿಯಾದ ಕನಸನ್ನು ಸಾಕಾರಗೊಳಿಸಲು ನವೀನ ಆರೋಗ್ಯ ರಕ್ಷಣೆ ನವೋದ್ಯಮಗಳ ಬಗ್ಗೆ ನನಗೆ ಬರೆಯುತ್ತಿರಿ ಎಂದು ನಾನು ನಿಮ್ಮೆಲ್ಲರನ್ನೂ ವಿನಂತಿಸುತ್ತೇನೆ. ದೈಹಿಕ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಮಾತನಾಡುವ ಪ್ರಸಿದ್ಧ ವ್ಯಕ್ತಿಗಳ ಅನುಭವಗಳನ್ನು ಸಹ ನಾನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ.

ಮೊದಲ ಸಂದೇಶವು ಸದ್ಗುರು ಜಗ್ಗಿ ವಾಸುದೇವ್ ಅವರಿಂದ. ಅವರು ಫಿಟ್‌ನೆಸ್, ವಿಶೇಷವಾಗಿ ಮನಸ್ಸಿನ ಫಿಟ್‌ನೆಸ್, ಅಂದರೆ ಮಾನಸಿಕ ಆರೋಗ್ಯದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾರೆ.

****ಆಡಿಯೋ****

 ಈ ಮನ್ ಕಿ ಬಾತ್‌ನಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಮಾತನಾಡಲು ನಮಗೆ ವಿಶೇಷ ಅವಕಾಶ ದೊರೆತಿದೆ. ಮಾನಸಿಕ ಕಾಯಿಲೆಗಳು ಮತ್ತು ನಾವು ನಮ್ಮ ನರವೈಜ್ಞಾನಿಕ ವ್ಯವಸ್ಥೆಯನ್ನು ಹೇಗೆ ಇಟ್ಟುಕೊಳ್ಳುತ್ತೇವೆ ಎಂಬುದು ನೇರವಾಗಿ ಸಂಬಂಧಿಸಿದೆ. ನಾವು ನಮ್ಮ ನರವೈಜ್ಞಾನಿಕ ವ್ಯವಸ್ಥೆಯನ್ನು ಎಷ್ಟು ಜಾಗರೂಕವಾಗಿ, ಸ್ಥಿರವಾಗಿ ಮತ್ತು ಗೊಂದಲ ಮುಕ್ತವಾಗಿ ಇಟ್ಟುಕೊಳ್ಳುತ್ತೇವೆ ಎಂಬುದು ನಮ್ಮೊಳಗೆ ನಾವು ಎಷ್ಟು ಆಹ್ಲಾದಕರವಾಗಿರುತ್ತೇವೆ ಎಂಬುದನ್ನು ನಿರ್ಧರಿಸುತ್ತದೆ. ನಾವು ಶಾಂತಿ, ಪ್ರೀತಿ, ಸಂತೋಷ, ಪರಮಾನಂದ, ದುಃಖ, ಖಿನ್ನತೆ, ಉತ್ಸಾಹ ಎಂದು ಕರೆಯುವ ಎಲ್ಲದಕ್ಕೂ ರಾಸಾಯನಿಕ ಮತ್ತು ನರವೈಜ್ಞಾನಿಕ ಆಧಾರವಿದೆ. ಫಾರ್ಮಾಕಾಲಜಿ ಮೂಲತಃ ಹೊರಗಿನಿಂದ ರಾಸಾಯನಿಕಗಳನ್ನು ಸೇರಿಸುವ ಮೂಲಕ ದೇಹದೊಳಗಿನ ರಾಸಾಯನಿಕ ಅಸಮತೋಲನವನ್ನು ಸರಿಪಡಿಸಲು ಪ್ರಯತ್ನಿಸುತ್ತಿದೆ. ಮಾನಸಿಕ ಕಾಯಿಲೆಗಳನ್ನು ಈ ರೀತಿ ನಿರ್ವಹಿಸಲಾಗುತ್ತಿದೆ ಆದರೆ ವಿಪರೀತ ಪರಿಸ್ಥಿತಿಯಲ್ಲಿರುವಾಗ ಔಷಧಿಗಳ ರೂಪದಲ್ಲಿ ಹೊರಗಿನಿಂದ ರಾಸಾಯನಿಕಗಳನ್ನು ತೆಗೆದುಕೊಳ್ಳುವುದು ಅವಶ್ಯಕ ಎಂದು ನಾವು ಅರಿತುಕೊಳ್ಳಬೇಕು. ಆಂತರಿಕ ಮಾನಸಿಕ ಆರೋಗ್ಯ ಪರಿಸ್ಥಿತಿಗಾಗಿ ಅಥವಾ ನಮ್ಮೊಳಗೆ ಸಮಚಿತ್ತದ ಹೊಂದಾಣಿಕೆಗಾಗಿ, ಶಾಂತಿಯುತ, ಸಂತೋಷದ, ಪರಮಾನಂದಕ್ಕಾಗಿ ಕೆಲಸ ಮಾಡುವುದು ಪ್ರತಿ ವ್ಯಕ್ತಿಯ ಜೀವನಕ್ಕೆ; ಸಮಾಜದ ಸಾಂಸ್ಕೃತಿಕ ಜೀವನಕ್ಕೆ ಮತ್ತು ಪ್ರಪಂಚದಾದ್ಯಂತದ ರಾಷ್ಟ್ರಗಳು ಮತ್ತು ಇಡೀ ಮಾನವಕುಲಕ್ಕೆ ತರಬೇಕಾದ ವಿಷಯವಾಗಿದೆ. ನಮ್ಮ ಮಾನಸಿಕ ಆರೋಗ್ಯ, ನಮ್ಮ ವಿವೇಕವು ಒಂದು ದುರ್ಬಲ ಸವಲತ್ತು ಎಂದು ನಾವು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ; ನಾವು ಅದನ್ನು ರಕ್ಷಿಸಬೇಕು; ನಾವು ಅದನ್ನು ಪೋಷಿಸಬೇಕು. ಇದಕ್ಕಾಗಿ, ಯೋಗ ವ್ಯವಸ್ಥೆಯಲ್ಲಿ ಅನೇಕ ಹಂತದ ಅಭ್ಯಾಸಗಳಿವೆ - ಜನರು  ಒಂದು ನಿರ್ದಿಷ್ಟ ಸಮಚಿತ್ತತೆಯನ್ನು ಮತ್ತು ತಮ್ಮ ನರವೈಜ್ಞಾನಿಕ ವ್ಯವಸ್ಥೆಗೆ ಒಂದು ನಿರ್ದಿಷ್ಟ ಶಾಂತಿಯನ್ನು ತರಲು ಸರಳ ಅಭ್ಯಾಸಗಳಾಗಿ ಮಾಡಬಹುದಾದ ಸಂಪೂರ್ಣ ಆಂತರಿಕ ಪ್ರಕ್ರಿಯೆಗಳು. ಆಂತರಿಕ ಯೋಗಕ್ಷೇಮದ ತಂತ್ರಜ್ಞಾನಗಳನ್ನು ನಾವು ಯೋಗ ವಿಜ್ಞಾನಗಳು ಎಂದು ಕರೆಯುತ್ತೇವೆ. ಅದನ್ನು ನನಸಾಗಿಸೋಣ.

ಸಾಮಾನ್ಯವಾಗಿ, ಸದ್ಗುರು ಜಿ ತಮ್ಮ ಅಭಿಪ್ರಾಯಗಳನ್ನು ಅಂತಹ ಗಮನಾರ್ಹ ರೀತಿಯಲ್ಲಿ ಪ್ರಸ್ತುತಪಡಿಸುವುದಕ್ಕೆ ಹೆಸರುವಾಸಿಯಾಗಿದ್ದಾರೆ.

ಬನ್ನಿ, ಈಗ ಪ್ರಸಿದ್ಧ ಕ್ರಿಕೆಟ್ ಆಟಗಾರ್ತಿ ಹರ್ಮನ್‌ಪ್ರೀತ್ ಕೌರ್ ಜಿ ಅವರ ಮಾತನ್ನು ಕೇಳೋಣ.

*****ಆಡಿಯೋ*****

ನಮಸ್ಕಾರ. 'ಮನ್ ಕಿ ಬಾತ್' ಮೂಲಕ ನಾನು ನನ್ನ ದೇಶವಾಸಿಗಳೊಂದಿಗೆ ಮಾತನಾಡಲು ಬಯಸುತ್ತೇನೆ. ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಫಿಟ್ ಇಂಡಿಯಾ ಉಪಕ್ರಮವು ನನ್ನ ಫಿಟ್‌ನೆಸ್ ಮಂತ್ರವನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ಪ್ರೋತ್ಸಾಹಿಸಿದೆ. ನನ್ನ ಮೊದಲ ಸಲಹೆ ನಿಮಗೆಲ್ಲಾ 'ಕೆಟ್ಟ ಆಹಾರಕ್ರಮದಿಂದ ತರಬೇತಿಯನ್ನು ಮೀರಿಸಲು ಸಾಧ್ಯವಿಲ್ಲ'. ಇದರರ್ಥ ನೀವು ಯಾವಾಗ ತಿನ್ನುತ್ತೀರಿ ಮತ್ತು ಏನು ತಿನ್ನುತ್ತೀರಿ ಎಂಬುದರ ಬಗ್ಗೆ ಬಹಳ ಜಾಗರೂಕರಾಗಿರಬೇಕು. ಇತ್ತೀಚೆಗೆ, ಗೌರವಾನ್ವಿತ ಪ್ರಧಾನಮಂತ್ರಿ ಮೋದಿ ಅವರು ಎಲ್ಲರಿಗೂ ಸಜ್ಜೆ ತಿನ್ನಲು ಪ್ರೋತ್ಸಾಹಿಸಿದ್ದಾರೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಸುಸ್ಥಿರ ಕೃಷಿಗೆ ಸಹಾಯ ಮಾಡುತ್ತದೆ ಮತ್ತು ಸುಲಭವಾಗಿ ಜೀರ್ಣವಾಗುತ್ತದೆ. ನಿಯಮಿತ ವ್ಯಾಯಾಮ ಮತ್ತು 7 ಗಂಟೆಗಳ ಪೂರ್ಣ ನಿದ್ರೆ ದೇಹಕ್ಕೆ ಬಹಳ ಮುಖ್ಯ ಮತ್ತು ಸದೃಢವಾಗಿರಲು ಸಹಾಯ ಮಾಡುತ್ತದೆ. ಇದಕ್ಕೆ ಸಾಕಷ್ಟು ಶಿಸ್ತು ಮತ್ತು ಸ್ಥಿರತೆಯ ಅಗತ್ಯವಿರುತ್ತದೆ. ನೀವು ಫಲಿತಾಂಶಗಳನ್ನು ಪಡೆಯಲು ಪ್ರಾರಂಭಿಸಿದಾಗ, ನೀವು ಪ್ರತಿದಿನ ಸ್ವತಃ ವ್ಯಾಯಾಮ ಮಾಡಲು ಪ್ರಾರಂಭಿಸುತ್ತೀರಿ. ನಿಮ್ಮೆಲ್ಲರೊಂದಿಗೆ ಮಾತನಾಡಲು ಮತ್ತು ನನ್ನ ಫಿಟ್‌ನೆಸ್ ಮಂತ್ರವನ್ನು ಹಂಚಿಕೊಳ್ಳಲು ನನಗೆ ಅವಕಾಶ ನೀಡಿದ ಗೌರವಾನ್ವಿತ ಪ್ರಧಾನಮಂತ್ರಿಯವರಿಗೆ ಅನೇಕ ಧನ್ಯವಾದಗಳು.

ಹರ್ಮನ್‌ಪ್ರೀತ್ ಅವರಂತಹ ಪ್ರತಿಭಾವಂತ ಆಟಗಾರ್ತಿಯ ಮಾತುಗಳು ನಿಮ್ಮೆಲ್ಲರಿಗೂ ಖಂಡಿತವಾಗಿಯೂ ಸ್ಫೂರ್ತಿ ನೀಡುತ್ತವೆ.

ಬನ್ನಿ, ಗ್ರ್ಯಾಂಡ್‌ಮಾಸ್ಟರ್ ವಿಶ್ವನಾಥನ್ ಆನಂದ್  ಅವರ ಮಾತನ್ನು ಕೇಳೋಣ. ನಮ್ಮ 'ಚೆಸ್' ಆಟಕ್ಕೆ ಮಾನಸಿಕ ಸದೃಢತೆ ಎಷ್ಟು ಮುಖ್ಯ ಎಂದು ನಮಗೆಲ್ಲರಿಗೂ ತಿಳಿದಿದೆ.

****ಆಡಿಯೋ**** 

ನಮಸ್ತೆ, ನಾನು ವಿಶ್ವನಾಥನ್ ಆನಂದ್. ನೀವು ನನ್ನ ಚೆಸ್ ಆಟವನ್ನು ನೋಡಿದ್ದೀರಿ ಮತ್ತು ನನ್ನನ್ನು ಆಗಾಗ್ಗೆ ಕೇಳಲಾಗುತ್ತದೆ, ನಿಮ್ಮ ಫಿಟ್‌ನೆಸ್ ದಿನಚರಿ ಏನು? ಈಗ ಚೆಸ್‌ಗೆ ಹೆಚ್ಚಿನ ಗಮನ ಮತ್ತು ತಾಳ್ಮೆ ಬೇಕು, ಆದ್ದರಿಂದ ನಾನು ಈ ಕೆಲವು ಅಭ್ಯಾಸಗಳನ್ನು ಪ್ರತಿದಿನ ಮಾಡುತ್ತೇನೆ, ಅದು ನನ್ನನ್ನು ಸದೃಢವಾಗಿ ಮತ್ತು ಚುರುಕಾಗಿರಿಸುತ್ತದೆ. ನಾನು ವಾರಕ್ಕೆ ಎರಡು ಬಾರಿ ಯೋಗ ಮಾಡುತ್ತೇನೆ, ವಾರಕ್ಕೆ ಎರಡು ಬಾರಿ ಕಾರ್ಡಿಯೋ ಮಾಡುತ್ತೇನೆ ಮತ್ತು ವಾರಕ್ಕೆ ಎರಡು ಬಾರಿ, ನಾನು ನಮ್ಯತೆ, ಸ್ಟ್ರೆಚಿಂಗ್, ತೂಕ ತರಬೇತಿಯ ಮೇಲೆ ಗಮನಹರಿಸುತ್ತೇನೆ ಮತ್ತು ನಾನು ವಾರಕ್ಕೆ ಒಂದು ದಿನ ರಜೆ ತೆಗೆದುಕೊಳ್ಳಲು ಬಯಸುತ್ತೇನೆ. ಇವೆಲ್ಲವೂ ಚೆಸ್‌ಗೆ ಬಹಳ ಮುಖ್ಯ. 6 ಅಥವಾ 7 ಗಂಟೆಗಳ ತೀವ್ರ ಮಾನಸಿಕ ಪ್ರಯತ್ನವನ್ನು ತಡೆದುಕೊಳ್ಳಲು ನಿಮಗೆ ಶಕ್ತಿ ಬೇಕು, ಆದರೆ ಆರಾಮವಾಗಿ ಕುಳಿತುಕೊಳ್ಳಲು ನಿಮಗೆ ನಮ್ಯತೆ ಇರಬೇಕು ಮತ್ತು ನಿಮ್ಮ ಉಸಿರಾಟವನ್ನು ನಿಯಂತ್ರಿಸುವ ಸಾಮರ್ಥ್ಯವು ಒಂದು ಸಮಸ್ಯೆಯ ಮೇಲೆ ಗಮನಹರಿಸಲು ಬಯಸಿದಾಗ ಸಹಾಯಕವಾಗಿದೆ, ಅದು ಸಾಮಾನ್ಯವಾಗಿ ಚೆಸ್ ಆಟವಾಗಿರುತ್ತದೆ. ನನ್ನ 'ಮನ್ ಕಿ ಬಾತ್' ಕೇಳುಗರಿಗೆ ನನ್ನ ಫಿಟ್‌ನೆಸ್ ಸಲಹೆಯೆಂದರೆ ಶಾಂತವಾಗಿರಿ ಮತ್ತು ಮುಂದಿರುವ ಕಾರ್ಯದ ಮೇಲೆ ಗಮನಹರಿಸಿ.

ನನಗೆ ಅತ್ಯುತ್ತಮ, ಮುಖ್ಯವಾದ ಫಿಟ್‌ನೆಸ್ ಸಲಹೆ ಎಂದರೆ ಒಳ್ಳೆಯ ರಾತ್ರಿ ನಿದ್ರೆ ಮಾಡುವುದು. ರಾತ್ರಿ ನಾಲ್ಕು ಮತ್ತು ಐದು ಗಂಟೆಗಳ ಕಾಲ ಮಲಗುವುದನ್ನು ಅಭ್ಯಾಸ ಮಾಡಿಕೊಳ್ಳಬೇಡಿ, ಏಳು ಅಥವಾ ಎಂಟು ಗಂಟೆಗಳು ಸಂಪೂರ್ಣ ಕನಿಷ್ಠ ಎಂದು ನಾನು ಭಾವಿಸುತ್ತೇನೆ, ಆದ್ದರಿಂದ ನಾವು ಸಾಧ್ಯವಾದಷ್ಟು ಒಳ್ಳೆಯ ರಾತ್ರಿ ನಿದ್ರೆ ಪಡೆಯಲು ಪ್ರಯತ್ನಿಸಬೇಕು, ಏಕೆಂದರೆ ಆಗ ಮಾತ್ರ ಮುಂದಿನ ದಿನ ನೀವು ಶಾಂತ ರೀತಿಯಲ್ಲಿ ದಿನವನ್ನು ಕಳೆಯಲು ಸಾಧ್ಯವಾಗುತ್ತದೆ. ನೀವು ಆವೇಗದ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ; ನಿಮ್ಮ ಭಾವನೆಗಳ ನಿಯಂತ್ರಣದಲ್ಲಿ ನೀವು ಇರುತ್ತೀರಿ. ನನಗೆ ನಿದ್ರೆಯೇ ಅತ್ಯಂತ ಮುಖ್ಯವಾದ ಫಿಟ್‌ನೆಸ್ ಸಲಹೆಯಾಗಿದೆ.

ಬನ್ನಿ, ಈಗ ಅಕ್ಷಯ್ ಕುಮಾರ್ ಅವರ ಮಾತನ್ನು ಕೇಳೋಣ.

*****ಆಡಿಯೋ***** 

ನಮಸ್ಕಾರ, ನಾನು ಅಕ್ಷಯ್ ಕುಮಾರ್. ಮೊದಲನೆಯದಾಗಿ, ನಮ್ಮ ಗೌರವಾನ್ವಿತ ಪ್ರಧಾನಮಂತ್ರಿ ಅವರ 'ಮನ್ ಕಿ ಬಾತ್' ನಲ್ಲಿ ನಿಮ್ಮೊಂದಿಗೆ ನನ್ನ ಆಲೋಚನೆಗಳನ್ನು ಹಂಚಿಕೊಳ್ಳಲು ಅವಕಾಶ ನೀಡಿದಕ್ಕಾಗಿ ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ನಿಮಗೆಲ್ಲಾ ತಿಳಿದಿರುವಂತೆ, ಫಿಟ್‌ನೆಸ್ ಬಗ್ಗೆ ನನಗೆ ಎಷ್ಟು ಆಸಕ್ತಿ ಇದೆಯೋ, ನೈಸರ್ಗಿಕ ರೀತಿಯಲ್ಲಿ ಸದೃಢವಾಗಿರುವುದರ ಬಗ್ಗೆ ನನಗೆ ಅಷ್ಟೇ ಆಸಕ್ತಿ ಇದೆ. ಆಧುನಿಕ ಜಿಮ್‌ಗಿಂತ ನನಗೆ ಹೆಚ್ಚು ಇಷ್ಟವಾಗುವುದು ಹೊರಗೆ ಈಜುವುದು, ಬ್ಯಾಡ್ಮಿಂಟನ್ ಆಡುವುದು, ಮೆಟ್ಟಿಲುಗಳನ್ನು ಹತ್ತುವುದು, ಮುದ್ಗರ್ ಕ್ಲಬ್ ಬೆಲ್‌ನೊಂದಿಗೆ ವ್ಯಾಯಾಮ ಮಾಡುವುದು, ಉತ್ತಮ ಆರೋಗ್ಯಕರ ಆಹಾರವನ್ನು ತಿನ್ನುವುದು… ಉದಾಹರಣೆಗೆ ಶುದ್ಧ ತುಪ್ಪವನ್ನು ಸರಿಯಾದ ಪ್ರಮಾಣದಲ್ಲಿ ತಿಂದರೆ ಅದು ನಮಗೆ ಪ್ರಯೋಜನಕಾರಿಯಾಗಿದೆ ಎಂದು ನಾನು ನಂಬುತ್ತೇನೆ. ಆದರೆ ಅನೇಕ ಯುವಕರು ಮತ್ತು ಯುವತಿಯರು ದಪ್ಪ ಆಗಬಹುದೆಂಬ ಭಯದಿಂದ ತುಪ್ಪವನ್ನು ತಿನ್ನುವುದಿಲ್ಲ ಎಂದು ನಾನು ನೋಡುತ್ತೇನೆ. ನಮ್ಮ ಫಿಟ್‌ನೆಸ್‌ಗೆ ಯಾವುದು ಒಳ್ಳೆಯದು ಮತ್ತು ಯಾವುದು ಕೆಟ್ಟದು ಎಂದು ನಾವು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ನೀವು ವೈದ್ಯರ ಸಲಹೆಯ ಮೇರೆಗೆ ನಿಮ್ಮ ಜೀವನಶೈಲಿಯನ್ನು ಬದಲಾಯಿಸಬೇಕು ಮತ್ತು ಸಿನಿಮಾ ನಟನ ದೇಹವನ್ನು ನೋಡಿಯಲ್ಲ. ನಟರು ಸಾಮಾನ್ಯವಾಗಿ ಪರದೆಯ ಮೇಲೆ ಕಾಣುವಂತೆ ಇರುವುದಿಲ್ಲ. ಅನೇಕ ರೀತಿಯ ಫಿಲ್ಟರ್‌ಗಳು ಮತ್ತು ವಿಶೇಷ ಪರಿಣಾಮಗಳನ್ನು ಬಳಸಲಾಗುತ್ತದೆ ಮತ್ತು ಅವುಗಳನ್ನು ನೋಡಿದ ನಂತರ, ನಾವು ನಮ್ಮ ದೇಹವನ್ನು ಬದಲಾಯಿಸಲು ತಪ್ಪು ಅಡ್ಡದಾರಿಗಳನ್ನು ಹಿಡಿಯಲು ಆರಂಭಿಸಿದ್ದೇವೆ. ಇತ್ತೀಚಿನ ದಿನಗಳಲ್ಲಿ, ಅನೇಕ ಜನರು ಸ್ಟೀರಾಯ್ಡ್‌ಗಳನ್ನು ತೆಗೆದುಕೊಂಡು ಈ ಸಿಕ್ಸ್ ಪ್ಯಾಕ್ ಅಥವಾ ಎಂಟು ಪ್ಯಾಕ್‌ ಪಡೆಯುತ್ತಾರೆ. ಸ್ನೇಹಿತರೇ, ಅಂತಹ ಅಡ್ಡದಾರಿ‌ಗಳಿಂದ ದೇಹವು ಹೊರಗಿನಿಂದ ಉಬ್ಬುತ್ತದೆ ಆದರೆ ಒಳಗಿನಿಂದ ಟೊಳ್ಳಾಗಿ ಉಳಿಯುತ್ತದೆ. ಅಡ್ದದಾರಿ ನಿಮ್ಮ ಜೀವನವನ್ನು ಕಡಿಮೆ ಮಾಡಬಹುದು ಎಂಬುದನ್ನು ನೀವು ನೆನಪಿನಲ್ಲಿಡಿ. ನಿಮಗೆ ಅಡ್ದದಾರಿ ಅಗತ್ಯವಿಲ್ಲ, ನಿಮಗೆ ದೀರ್ಘಕಾಲೀನ ಫಿಟ್‌ನೆಸ್ ಅಗತ್ಯವಿದೆ. ಸ್ನೇಹಿತರೇ, ಫಿಟ್‌ನೆಸ್ ಒಂದು ರೀತಿಯ ತಪಸ್ಸು. ಇದು ಕ್ಷಣದಲ್ಲಿ ತಯಾರಾಗುವ ಕಾಫಿ ಅಥವಾ ಎರಡು ನಿಮಿಷದ ನೂಡಲ್ಸ್ ಅಲ್ಲ. ಈ ಹೊಸ ವರ್ಷದಲ್ಲಿ, ನೀವೇ ಪ್ರತಿಜ್ಞೆ ಮಾಡಿ… ಯಾವುದೇ ರಾಸಾಯನಿಕಗಳಿಲ್ಲ, ಯಾವುದೇ ಅಡ್ದದಾರಿ ಇಲ್ಲ, ವ್ಯಾಯಾಮ, ಯೋಗ, ಉತ್ತಮ ಆಹಾರ, ಸಮಯಕ್ಕೆ ಮಲಗುವುದು, ಸ್ವಲ್ಪ ಧ್ಯಾನ ಮತ್ತು ಮುಖ್ಯವಾಗಿ, ನೀವು ಕಾಣುವ ರೀತಿಯನ್ನು ಸಂತೋಷದಿಂದ ಸ್ವೀಕರಿಸಿ. ಇಂದಿನ ನಂತರ, ಫಿಲ್ಟರ್ ಜೀವನವನ್ನು ಬದುಕಬೇಡಿ, ಫಿಟ್ಟರ್ ಜೀವನವನ್ನು ಬದುಕಿ. ಕಾಳಜಿ ವಹಿಸಿ. ಜೈ ಮಹಾಕಾಲ.

ಈ ವಲಯದಲ್ಲಿ ಇನ್ನೂ ಅನೇಕ ನವೋದ್ಯಮಗಳಿವೆ, ಆದ್ದರಿಂದ ಈ ಕ್ಷೇತ್ರದಲ್ಲಿ ಅತ್ಯುತ್ತಮ ಕೆಲಸ ಮಾಡುತ್ತಿರುವ ಯುವ ನವೋದ್ಯಮ ಸಂಸ್ಥಾಪಕರೊಂದಿಗೆ ಚರ್ಚಿಸಲು ನಾನು ಯೋಚಿಸಿದೆ.

****ಆಡಿಯೋ****

ನಮಸ್ಕಾರ, ನನ್ನ ಹೆಸರು ರಿಷಭ್ ಮಲ್ಹೋತ್ರಾ ಮತ್ತು ನಾನು ಬೆಂಗಳೂರಿನಿಂದ ಬಂದಿದ್ದೇನೆ. 'ಮನ್ ಕಿ ಬಾತ್' ನಲ್ಲಿ ಫಿಟ್‌ನೆಸ್ ಬಗ್ಗೆ ಚರ್ಚಿಸಲಾಗುತ್ತಿದೆ ಎಂದು ತಿಳಿದು ನನಗೆ ತುಂಬಾ ಸಂತೋಷವಾಗಿದೆ. ನಾನು ಸ್ವತಃ ಫಿಟ್‌ನೆಸ್ ಜಗತ್ತಿಗೆ ಸೇರಿದವನು ಮತ್ತು ನಾವು ಬೆಂಗಳೂರಿನಲ್ಲಿ 'ತಗಡ ರಹೋ' ಎಂಬ ನವೋದ್ಯಮವನ್ನು ಹೊಂದಿದ್ದೇವೆ. ನಮ್ಮ ನವೋದ್ಯಮವನ್ನು ಭಾರತದ ಸಾಂಪ್ರದಾಯಿಕ ವ್ಯಾಯಾಮಗಳನ್ನು ಮುನ್ನಲೆಗೆ ತರಲು ರಚಿಸಲಾಗಿದೆ. ಭಾರತದ ಸಾಂಪ್ರದಾಯಿಕ ವ್ಯಾಯಾಮಗಳಲ್ಲಿ 'ಗದಾಯುದ್ಧದ ವ್ಯಾಯಾಮ' ಎಂಬ ಬಹಳ ಅದ್ಭುತವಾದ ವ್ಯಾಯಾಮವಿದೆ ಮತ್ತು ನಮ್ಮ ಸಂಪೂರ್ಣ ಗಮನ ಮೇಸ್ ಮತ್ತು ಮುದ್ಗರ್ ವ್ಯಾಯಾಮದ ಮೇಲೆ ಮಾತ್ರ ಇದೆ. ಗದೆಯಿಂದ ನೀವು ಎಲ್ಲಾ ತರಬೇತಿಯನ್ನು ಹೇಗೆ ಮಾಡುತ್ತೀರಿ ಎಂದು ಜನರಿಗೆ ತಿಳಿದು ಆಶ್ಚರ್ಯವಾಗುತ್ತದೆ. ಗದೆಯ ವ್ಯಾಯಾಮವು ಸಾವಿರಾರು ವರ್ಷಗಳಷ್ಟು ಹಳೆಯದು ಮತ್ತು ಇದನ್ನು ಭಾರತದಲ್ಲಿ ಸಾವಿರಾರು ವರ್ಷಗಳಿಂದ ಅಭ್ಯಾಸ ಮಾಡಲಾಗುತ್ತಿದೆ ಎಂದು ನಾನು ನಿಮಗೆ ಹೇಳಲು ಬಯಸುತ್ತೇನೆ. ನೀವು ಇದನ್ನು ದೊಡ್ಡ ಮತ್ತು ಸಣ್ಣ ಅಖಾಡಗಳಲ್ಲಿ ನೋಡಿರಬಹುದು ಮತ್ತು ನಮ್ಮ ನವೋದ್ಯಮ ಮೂಲಕ ನಾವು ಇದನ್ನು ಆಧುನಿಕ ರೂಪದಲ್ಲಿ ಮರಳಿ ತಂದಿದ್ದೇವೆ. ನಮಗೆ ಇಡೀ ದೇಶದಿಂದ ಬಹಳಷ್ಟು ಪ್ರೀತಿ ಮತ್ತು ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. 'ಮನ್ ಕಿ ಬಾತ್' ಮೂಲಕ ನಾನು ನಿಮಗೆ ಹೇಳಲು ಬಯಸುತ್ತೇನೆ, ಇದಲ್ಲದೆ, ಭಾರತದಲ್ಲಿ ಆರೋಗ್ಯ ಮತ್ತು ಫಿಟ್‌ನೆಸ್‌ಗೆ ಸಂಬಂಧಿಸಿದ ಅನೇಕ ಪ್ರಾಚೀನ ವ್ಯಾಯಾಮಗಳು ಮತ್ತು ವಿಧಾನಗಳಿವೆ, ಅದನ್ನು ನಾವು ಅಳವಡಿಸಿಕೊಳ್ಳಬೇಕು ಮತ್ತು ಜಗತ್ತಿನಲ್ಲಿ ಮತ್ತಷ್ಟು ಕಲಿಸಬೇಕು. ನಾನು ಫಿಟ್‌ನೆಸ್ ಜಗತ್ತಿಗೆ ಸೇರಿದವನು, ಆದ್ದರಿಂದ ನಾನು ನಿಮಗೆ ವೈಯಕ್ತಿಕ ಸಲಹೆ ನೀಡಲು ಬಯಸುತ್ತೇನೆ. ಗದೆಯ ವ್ಯಾಯಾಮದೊಂದಿಗೆ ನೀವು ನಿಮ್ಮ ಶಕ್ತಿ, ಸಾಮರ್ಥ್ಯ, ಭಂಗಿ ಮತ್ತು ನಿಮ್ಮ ಉಸಿರಾಟವನ್ನು ಸಹ ಸುಧಾರಿಸಬಹುದು, ಆದ್ದರಿಂದ ಗದೆಯ ವ್ಯಾಯಾಮವನ್ನು ಅಳವಡಿಸಿಕೊಳ್ಳಿ ಮತ್ತು ಅದನ್ನು ಮುನ್ನಡೆಸಿ. ಜೈ ಹಿಂದ್.

ಸ್ನೇಹಿತರೇ, ಪ್ರತಿಯೊಬ್ಬರೂ ತಮ್ಮದೇ ಆದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ ಆದರೆ ಪ್ರತಿಯೊಬ್ಬರಿಗೂ ಒಂದೇ ಮಂತ್ರವಿದೆ – 'ಆರೋಗ್ಯವಾಗಿರಿ, ಸದೃಢವಾಗಿರಿ'. 2024 ಅನ್ನು ಪ್ರಾರಂಭಿಸಲು ನಿಮ್ಮ ಸ್ವಂತ ಫಿಟ್‌ನೆಸ್‌ಗಿಂತ ದೊಡ್ಡ ಸಂಕಲ್ಪ ಇನ್ನೇನು ಇರಬಹುದು?

ನನ್ನ ಕುಟುಂಬ ಸದಸ್ಯರೇ, ಕೆಲವು ದಿನಗಳ ಹಿಂದೆ ಕಾಶಿಯಲ್ಲಿ ಒಂದು ಪ್ರಯೋಗ ನಡೆಯಿತು, ಅದನ್ನು ನಾನು 'ಮನ್ ಕಿ ಬಾತ್' ಕೇಳುಗರೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ಕಾಶಿ-ತಮಿಳು ಸಂಗಮಂನಲ್ಲಿ ಭಾಗವಹಿಸಲು ತಮಿಳುನಾಡಿನಿಂದ ಸಾವಿರಾರು ಜನರು ಕಾಶಿಗೆ ತಲುಪಿದ್ದರು ಎಂದು ನಿಮಗೆ ತಿಳಿದಿದೆ. ಅಲ್ಲಿ ನಾನು ಮೊದಲ ಬಾರಿಗೆ ಅವರೊಂದಿಗೆ ಸಂವಹನ ನಡೆಸಲು ಕೃತಕ ಬುದ್ಧಿಮತ್ತೆ ಉಪಕರಣ ಭಾಷಿಣಿ ಅನ್ನು ಸಾರ್ವಜನಿಕವಾಗಿ ಬಳಸಿದೆ. ನಾನು ವೇದಿಕೆಯಿಂದ ಹಿಂದಿಯಲ್ಲಿ ಭಾಷಣ ಮಾಡುತ್ತಿದ್ದೆ ಆದರೆ ಎಐ ಉಪಕರಣ ಭಾಷಿಣಿಯ ಮೂಲಕ, ಅಲ್ಲಿ ಉಪಸ್ಥಿತರಿದ್ದ ತಮಿಳುನಾಡಿನ ಜನರು ನನ್ನ ಭಾಷಣವನ್ನು ತಮಿಳು ಭಾಷೆಯಲ್ಲಿ ಏಕಕಾಲದಲ್ಲಿ ಕೇಳುತ್ತಿದ್ದರು. ಈ ಪ್ರಯೋಗದ ಬಗ್ಗೆ ಕಾಶಿ-ತಮಿಳು ಸಂಗಮಂಗೆ ಬಂದ ಜನರು ಬಹಳ ಉತ್ಸುಕರಾಗಿದ್ದರು. ಒಂದು ಭಾಷೆಯಲ್ಲಿ ಭಾಷಣ ಮಾಡಲಾಗುವ ಮತ್ತು ಸಾರ್ವಜನಿಕರು ಅದೇ ಭಾಷಣವನ್ನು ತಮ್ಮದೇ ಭಾಷೆಯಲ್ಲಿ ನೈಜ ಸಮಯದಲ್ಲಿ ಕೇಳುವ ದಿನ ದೂರವಿಲ್ಲ. ಚಲನಚಿತ್ರಗಳಿಗೂ ಇದೇ ಆಗುತ್ತದೆ, ಅಲ್ಲಿ ಸಿನೆಮಾ ಹಾಲ್‌ನಲ್ಲಿ ಎಐ ಸಹಾಯದಿಂದ ಸಾರ್ವಜನಿಕರು ನೈಜ ಸಮಯದ ಅನುವಾದವನ್ನು ಕೇಳುತ್ತಾರೆ. ಈ ತಂತ್ರಜ್ಞಾನವನ್ನು ನಮ್ಮ ಶಾಲೆಗಳಲ್ಲಿ, ನಮ್ಮ ಆಸ್ಪತ್ರೆಗಳಲ್ಲಿ, ನಮ್ಮ ನ್ಯಾಯಾಲಯಗಳಲ್ಲಿ ವ್ಯಾಪಕವಾಗಿ ಬಳಸಲು ಪ್ರಾರಂಭಿಸಿದಾಗ ಎಷ್ಟು ದೊಡ್ಡ ಬದಲಾವಣೆ ಆಗಬಹುದು ಎಂದು ನೀವು ಊಹಿಸಬಹುದು. ನೈಜ ಸಮಯದ ಅನುವಾದಕ್ಕೆ ಸಂಬಂಧಿಸಿದ ಎಐ ಉಪಕರಣಗಳನ್ನು ಮತ್ತಷ್ಟು ಅನ್ವೇಷಿಸಲು ಮತ್ತು ಅವುಗಳನ್ನು 100% ದೋಷರಹಿತವಾಗಿಸಲು ನಾನು ಇಂದಿನ ಯುವ ಪೀಳಿಗೆಯನ್ನು ವಿನಂತಿಸುತ್ತೇನೆ.

ಸ್ನೇಹಿತರೇ, ಬದಲಾಗುತ್ತಿರುವ ಕಾಲದಲ್ಲಿ ನಾವು ನಮ್ಮ ಭಾಷೆಗಳನ್ನು ಉಳಿಸಬೇಕು ಮತ್ತು ಅವುಗಳನ್ನು ಉತ್ತೇಜಿಸಬೇಕು. ಈಗ ನಾನು ಜಾರ್ಖಂಡ್‌ನ ಒಂದು ಬುಡಕಟ್ಟು ಗ್ರಾಮದ ಬಗ್ಗೆ ನಿಮಗೆ ಹೇಳಲು ಬಯಸುತ್ತೇನೆ. ಈ ಗ್ರಾಮವು ತನ್ನ ಮಕ್ಕಳಿಗೆ ಅವರ ತಾಯ್ನಾಡಿನಲ್ಲಿ ಶಿಕ್ಷಣವನ್ನು ನೀಡಲು ವಿಶಿಷ್ಟ ಉಪಕ್ರಮವನ್ನು ಕೈಗೊಂಡಿದೆ. ಗರ್ವಾ ಜಿಲ್ಲೆಯ ಮಂಗ್ಲೋ ಗ್ರಾಮದಲ್ಲಿ ಮಕ್ಕಳಿಗೆ ಕುಡುಖ್ ಭಾಷೆಯಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಈ ಶಾಲೆಯ ಹೆಸರು, 'ಕಾರ್ತಿಕ್ ಒರಾಂವ್ ಆದಿವಾಸಿ ಕುಡುಖ್ ಶಾಲೆ'. ಈ ಶಾಲೆಯಲ್ಲಿ 300 ಬುಡಕಟ್ಟು ಮಕ್ಕಳು ಅಧ್ಯಯನ ಮಾಡುತ್ತಾರೆ. ಕುಡುಖ್ ಭಾಷೆಯು ಒರಾಂವ್ ಬುಡಕಟ್ಟು ಸಮುದಾಯದ ಮಾತೃಭಾಷೆಯಾಗಿದೆ. ಕುಡುಖ್ ಭಾಷೆ ತನ್ನದೇ ಆದ ಲಿಪಿಯನ್ನು ಸಹ ಹೊಂದಿದೆ, ಇದನ್ನು ತೋಲಾಂಗ್ ಸಿಕಿ ಎಂದು ಕರೆಯಲಾಗುತ್ತದೆ.

ಈ ಭಾಷೆ ಕ್ರಮೇಣ ಅಳಿವಿನಂಚಿಗೆ ಸಾಗುತ್ತಿತ್ತು; ಅದನ್ನು ಉಳಿಸಲು, ಈ ಸಮುದಾಯವು ಮಕ್ಕಳಿಗೆ ತಮ್ಮದೇ ಭಾಷೆಯಲ್ಲಿ ಶಿಕ್ಷಣ ನೀಡಲು ನಿರ್ಧರಿಸಿದೆ. ಈ ಶಾಲೆಯನ್ನು ಪ್ರಾರಂಭಿಸಿದ ಅರವಿಂದ್ ಒರಾಂವ್ ಅವರು, ಬುಡಕಟ್ಟು ಮಕ್ಕಳಿಗೆ ಇಂಗ್ಲಿಷ್ ಭಾಷೆಯಲ್ಲಿ ತೊಂದರೆ ಇತ್ತು, ಆದ್ದರಿಂದ ಅವರು ಗ್ರಾಮದ ಮಕ್ಕಳಿಗೆ ಅವರ ಮಾತೃಭಾಷೆಯಲ್ಲಿ ಕಲಿಸಲು ಪ್ರಾರಂಭಿಸಿದರು ಎಂದು ಹೇಳುತ್ತಾರೆ. ಅವರ ಪ್ರಯತ್ನಗಳು ಉತ್ತಮ ಫಲಿತಾಂಶಗಳನ್ನು ನೀಡಲು ಪ್ರಾರಂಭಿಸಿದಾಗ, ಗ್ರಾಮಸ್ಥರು ಸಹ ಅವರೊಂದಿಗೆ ಸೇರಿಕೊಂಡರು. ತಮ್ಮದೇ ಭಾಷೆಯಲ್ಲಿ ಅಧ್ಯಯನ ಮಾಡುವುದರಿಂದ, ಮಕ್ಕಳ ಕಲಿಕೆಯ ವೇಗವೂ ಹೆಚ್ಚಾಯಿತು. ನಮ್ಮ ದೇಶದಲ್ಲಿ, ಅನೇಕ ಮಕ್ಕಳು ಭಾಷಾ ತೊಂದರೆಗಳಿಂದಾಗಿ ಅರ್ಧದಲ್ಲಿಯೇ ಅಧ್ಯಯನವನ್ನು ಬಿಡುತ್ತಿದ್ದರು. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ಅಂತಹ ಕಷ್ಟಗಳನ್ನು ನಿವಾರಿಸಲು ಸಹ ಸಹಾಯ ಮಾಡುತ್ತಿದೆ. ಯಾವುದೇ ಮಗುವಿನ ಶಿಕ್ಷಣ ಮತ್ತು ಪ್ರಗತಿಯಲ್ಲಿ ಭಾಷೆ ಅಡ್ಡಿಯಾಗಬಾರದು ಎಂಬುದು ನಮ್ಮ ಪ್ರಯತ್ನವಾಗಿದೆ.

ಸ್ನೇಹಿತರೇ, ಅಸಾಮಾನ್ಯ ಹೆಣ್ಣುಮಕ್ಕಳು ಪ್ರತಿ ಯುಗದಲ್ಲಿಯೂ ನಮ್ಮ ಭಾರತ ಭೂಮಿಗೆ ಹೆಮ್ಮೆ ತಂದಿದ್ದಾರೆ. ಸಾವಿತ್ರಿಬಾಯಿ ಫುಲೆ ಅವರು ಮತ್ತು ರಾಣಿ ವೇಲು ನಾಚಿಯಾರ್ ಅವರು ದೇಶದ ಅಂತಹ ಇಬ್ಬರು ಪ್ರಕಾಶಮಾನ ವ್ಯಕ್ತಿಗಳು. ಅವರ ವ್ಯಕ್ತಿತ್ವವು ದೀಪಸ್ತಂಭದಂತಿದೆ, ಇದು ಪ್ರತಿ ಯುಗದಲ್ಲಿಯೂ ಮಹಿಳಾ ಶಕ್ತಿಗೆ ದಾರಿ ತೋರಿಸುತ್ತಲೇ ಇರುತ್ತದೆ. ಕೆಲವೇ ದಿನಗಳಲ್ಲಿ, ಜನವರಿ 3 ರಂದು, ನಾವೆಲ್ಲರೂ ಇಬ್ಬರ ಜನ್ಮದಿನಾಚರಣೆಯನ್ನು ಆಚರಿಸುತ್ತೇವೆ. ಸಾವಿತ್ರಿಬಾಯಿ ಫುಲೆ ಅವರ ಹೆಸರನ್ನು ಪ್ರಸ್ತಾಪಿಸಿದ ತಕ್ಷಣ, ನಮಗೆ ಮೊದಲು ಹೊಳೆಯುವುದು ಶಿಕ್ಷಣ ಮತ್ತು ಸಾಮಾಜಿಕ ಸುಧಾರಣಾ ಕ್ಷೇತ್ರದಲ್ಲಿ ಅವರ ಕೊಡುಗೆ. ಅವರು ಯಾವಾಗಲೂ ಮಹಿಳೆಯರು ಮತ್ತು ಅವಕಾಶವಂಚಿತರ ಶಿಕ್ಷಣಕ್ಕಾಗಿ ಬಲವಾಗಿ ಧ್ವನಿ ಎತ್ತಿದರು. ಅವರು ತಮ್ಮ ಸಮಯಕ್ಕಿಂತ ಬಹಳ ಮುಂದಿದ್ದರು ಮತ್ತು ತಪ್ಪು ಪದ್ಧತಿಗಳನ್ನು ವಿರೋಧಿಸುವಲ್ಲಿ ಯಾವಾಗಲೂ ಮುಂಚೂಣಿಯಲ್ಲಿದ್ದರು.

ಶಿಕ್ಷಣದ ಮೂಲಕ ಸಮಾಜದ ಸಬಲೀಕರಣದಲ್ಲಿ ಅವರಿಗೆ ಆಳವಾದ ನಂಬಿಕೆ ಇತ್ತು. ಮಹಾತ್ಮ ಫುಲೆ ಅವರೊಂದಿಗೆ, ಅವರು ಹೆಣ್ಣುಮಕ್ಕಳಿಗಾಗಿ ಅನೇಕ ಶಾಲೆಗಳನ್ನು ಪ್ರಾರಂಭಿಸಿದರು. ಅವರ ಕವನಗಳು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದವು ಮತ್ತು ಆತ್ಮವಿಶ್ವಾಸವನ್ನು ತುಂಬುತ್ತಿದ್ದವು. ಅವರು ಯಾವಾಗಲೂ ಅಗತ್ಯವಿರುವಾಗ ಒಬ್ಬರಿಗೊಬ್ಬರು ಸಹಾಯ ಮಾಡಲು ಮತ್ತು ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕಲು ಜನರನ್ನು ಒತ್ತಾಯಿಸುತ್ತಿದ್ದರು. ಅವರ ದಯೆಯ ಪ್ರಮಾಣವನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಮಹಾರಾಷ್ಟ್ರದಲ್ಲಿ ಬರಗಾಲ ಬಂದಾಗ, ಸಾವಿತ್ರಿಬಾಯಿ ಮತ್ತು ಮಹಾತ್ಮ ಫುಲೆ ಅವರು ಅಗತ್ಯವಿರುವವರಿಗೆ ಸಹಾಯ ಮಾಡಲು ತಮ್ಮ ಮನೆಗಳ ಬಾಗಿಲು ತೆರೆದರು. ಸಾಮಾಜಿಕ ನ್ಯಾಯದ ಇಂತಹ ಉದಾಹರಣೆ ವಿರಳವಾಗಿ ಕಂಡುಬರುತ್ತದೆ. ಅಲ್ಲಿ ಭಯಂಕರ ಪ್ಲೇಗ್ ಹರಡಿದಾಗ, ಅವರು ಜನರ ಸೇವೆಗೆ ತಮ್ಮನ್ನು ತಾವು ತೊಡಗಿಸಿಕೊಂಡರು. ಈ ಎಲ್ಲಾ ಸಮಯದಲ್ಲಿ, ಅವರು ಸ್ವತಃ ಈ ರೋಗಕ್ಕೆ ಬಲಿಯಾದರು. ಮಾನವೀಯತೆಗೆ ಸಮರ್ಪಿತವಾದ ಅವರ ಜೀವನವು ಇಂದಿಗೂ ನಮ್ಮೆಲ್ಲರಿಗೂ ಸ್ಫೂರ್ತಿ ನೀಡುತ್ತಿದೆ.

ಸ್ನೇಹಿತರೇ, ರಾಣಿ ವೇಲು ನಾಚಿಯಾರ್ ಅವರ ಹೆಸರು ಕೂಡ ವಿದೇಶಿ ಆಡಳಿತದ ವಿರುದ್ಧ ಹೋರಾಡಿದ ದೇಶದ ಅನೇಕ ಮಹಾನ್ ವ್ಯಕ್ತಿಗಳಲ್ಲಿ ಒಬ್ಬರಾಗಿದೆ. ತಮಿಳುನಾಡಿನ ನನ್ನ ಸಹೋದರ ಸಹೋದರಿಯರು ಇಂದಿಗೂ ಅವಳನ್ನು ವೀರ ಮಂಗೈ ಅಂದರೆ ಧೈರ್ಯಶಾಲಿ ಮಹಿಳೆ ಎಂದು ನೆನಪಿಸಿಕೊಳ್ಳುತ್ತಾರೆ. ರಾಣಿ ವೇಲು ನಾಚಿಯಾರ್ ಬ್ರಿಟಿಷರ ವಿರುದ್ಧ ಹೋರಾಡಿದ ಧೈರ್ಯ ಮತ್ತು ಅವರು ಪ್ರದರ್ಶಿಸಿದ ಶೌರ್ಯವು ಬಹಳ ಸ್ಫೂರ್ತಿದಾಯಕವಾಗಿದೆ. ಅಲ್ಲಿ ರಾಜನಾಗಿದ್ದ ಅವಳ ಪತಿಯನ್ನು ಸಿವಗಂಗೈ ರಾಜ್ಯದ ಮೇಲಿನ ದಾಳಿಯ ಸಮಯದಲ್ಲಿ ಬ್ರಿಟಿಷರು ಕೊಂದರು. ರಾಣಿ ವೇಲು ನಾಚಿಯಾರ್ ಮತ್ತು ಅವಳ ಮಗಳು ಹೇಗೋ ಶತ್ರುಗಳಿಂದ ತಪ್ಪಿಸಿಕೊಂಡರು. ಅವರು ಮರುದು ಸಹೋದರರು ಜೊತೆ ಸಂಘಟನೆಯನ್ನು ನಿರ್ಮಿಸುವಲ್ಲಿ ಮತ್ತು ಸೈನ್ಯವನ್ನು ಬೆಳೆಸುವಲ್ಲಿ ಅನೇಕ ವರ್ಷಗಳ ಕಾಲ ನಿರತರಾಗಿದ್ದರು. ಅವರು ಪೂರ್ಣ ಸಿದ್ಧತೆಯೊಂದಿಗೆ ಬ್ರಿಟಿಷರ ವಿರುದ್ಧ ಯುದ್ಧವನ್ನು ಪ್ರಾರಂಭಿಸಿದರು ಮತ್ತು ಮಹಾ ಧೈರ್ಯ ಮತ್ತು ದೃಢ ಸಂಕಲ್ಪದಿಂದ ಹೋರಾಡಿದರು. ರಾಣಿ ವೇಲು ನಾಚಿಯಾರ್ ಅವರ ಸೈನ್ಯದಲ್ಲಿ ಮೊದಲ ಬಾರಿಗೆ ಎಲ್ಲಾ-ಮಹಿಳೆಯರ ಗುಂಪನ್ನು ರಚಿಸಿದವರಲ್ಲಿ ಸೇರಿದ್ದಾರೆ. ನಾನು ಈ ಇಬ್ಬರು ಧೈರ್ಯಶಾಲಿ ಮಹಿಳೆಯರಿಗೆ ನನ್ನ ಗೌರವವನ್ನು ಸಲ್ಲಿಸುತ್ತೇನೆ.

ನನ್ನ ಕುಟುಂಬ ಸದಸ್ಯರೇ, ಗುಜರಾತಿನಲ್ಲಿ ಡೈರೋ ಎಂಬ ಸಂಪ್ರದಾಯವಿದೆ. ರಾತ್ರಿಯಿಡೀ, ಸಾವಿರಾರು ಜನರು ಡೈರೋಗೆ ಸೇರುತ್ತಾರೆ ಮತ್ತು ಮನರಂಜನೆಯೊಂದಿಗೆ ಜ್ಞಾನವನ್ನು ಪಡೆಯುತ್ತಾರೆ. ಈ ಡೈರೋದಲ್ಲಿ, ಜಾನಪದ ಸಂಗೀತ, ಜಾನಪದ ಸಾಹಿತ್ಯ ಮತ್ತು ಹಾಸ್ಯದ ತ್ರಿಮೂರ್ತಿಗಳು ಪ್ರತಿಯೊಬ್ಬರ ಮನಸ್ಸನ್ನು ಸಂತೋಷದಿಂದ ತುಂಬುತ್ತದೆ. ಭಾಯಿ ಜಗದೀಶ್ ತ್ರಿವೇದಿ ಅವರು ಈ ಡೈರೋದ ಪ್ರಸಿದ್ಧ ಕಲಾವಿದರು. ಹಾಸ್ಯಗಾರನಾಗಿ, ಭಾಯಿ ಜಗದೀಶ್ ತ್ರಿವೇದಿ ಅವರು 30 ವರ್ಷಗಳಿಗೂ ಹೆಚ್ಚು ಕಾಲ ತಮ್ಮ ಪ್ರಭಾವವನ್ನು ಉಳಿಸಿಕೊಂಡಿದ್ದಾರೆ. ಇತ್ತೀಚೆಗೆ ನನಗೆ ಭಾಯಿ ಜಗದೀಶ್ ತ್ರಿವೇದಿ ಅವರಿಂದ ಒಂದು ಪತ್ರ ಬಂದಿದೆ ಮತ್ತು ಅದರೊಂದಿಗೆ ಅವರು ತಮ್ಮ ಒಂದು ಪುಸ್ತಕವನ್ನು ಸಹ ಕಳುಹಿಸಿದ್ದಾರೆ. ಪುಸ್ತಕದ ಹೆಸರು – ಸಾಮಾಜಿಕ ಸೇವೆಯ ಸಾಮಾಜಿಕ ಲೆಕ್ಕಪರಿಶೋಧನೆ . ಈ ಪುಸ್ತಕವು ಬಹಳ ವಿಶಿಷ್ಟವಾಗಿದೆ. ಅದರಲ್ಲಿರುವ ಖಾತೆಗಳೊಂದಿಗೆ, ಈ ಪುಸ್ತಕವು ಒಂದು ರೀತಿಯ ಬ್ಯಾಲೆನ್ಸ್ ಶೀಟ್ ಆಗಿದೆ. ಕಳೆದ 6 ವರ್ಷಗಳಲ್ಲಿ ಭಾಯಿ ಜಗದೀಶ್ ತ್ರಿವೇದಿ ಅವರು ನಿರ್ದಿಷ್ಟ ಕಾರ್ಯಕ್ರಮಗಳಿಂದ ಎಷ್ಟು ಆದಾಯವನ್ನು ಪಡೆದರು ಮತ್ತು ಅದನ್ನು ಎಲ್ಲಿ ಖರ್ಚು ಮಾಡಿದರು ಎಂಬುದರ ಸಂಪೂರ್ಣ ವಿವರವನ್ನು ಪುಸ್ತಕದಲ್ಲಿ ನೀಡಲಾಗಿದೆ. ಈ ಬ್ಯಾಲೆನ್ಸ್ ಶೀಟ್ ವಿಶಿಷ್ಟವಾಗಿದೆ ಏಕೆಂದರೆ ಅವರು ತಮ್ಮ ಸಂಪೂರ್ಣ ಆದಾಯವನ್ನು, ಪ್ರತಿ ರೂಪಾಯಿಯನ್ನು, ಸಮಾಜಕ್ಕಾಗಿ ಖರ್ಚು ಮಾಡಿದ್ದಾರೆ – ಶಾಲೆ, ಆಸ್ಪತ್ರೆ, ಗ್ರಂಥಾಲಯ, ಅಂಗವಿಕಲರಿಗೆ ಸಂಬಂಧಿಸಿದ ಸಂಸ್ಥೆಗಳು, ಸಾಮಾಜಿಕ ಸೇವೆ – ಸಂಪೂರ್ಣ 6 ವರ್ಷಗಳನ್ನು ಲೆಕ್ಕ ಹಾಕಲಾಗಿದೆ. ಪುಸ್ತಕದಲ್ಲಿ ಒಂದು ಕಡೆ ಬರೆದಿರುವಂತೆ, 2022 ರಲ್ಲಿ, ಅವರು ತಮ್ಮ ಕಾರ್ಯಕ್ರಮಗಳಿಂದ ಎರಡು ಕೋಟಿ ಮೂವತ್ತೈದು ಲಕ್ಷ ಎಂಬತ್ತೊಂಬತ್ತು ಸಾವಿರದ ಆರು ನೂರ ಎಪ್ಪತ್ತನಾಲ್ಕು ರೂಪಾಯಿಗಳನ್ನು ಗಳಿಸಿದರು ಮತ್ತು ಅವರು ಶಾಲೆ, ಆಸ್ಪತ್ರೆ, ಗ್ರಂಥಾಲಯಕ್ಕಾಗಿ ಎರಡು ಕೋಟಿ ಮೂವತ್ತೈದು ಲಕ್ಷ ಎಂಬತ್ತೊಂಬತ್ತು ಸಾವಿರದ ಆರು ನೂರ ಎಪ್ಪತ್ತನಾಲ್ಕು ರೂಪಾಯಿಗಳನ್ನು ಖರ್ಚು ಮಾಡಿದರು. ಅವರು ತಮ್ಮ ಬಳಿ ಒಂದು ರೂಪಾಯಿಯನ್ನು ಸಹ ಇಟ್ಟುಕೊಳ್ಳಲಿಲ್ಲ. ವಾಸ್ತವವಾಗಿ, ಇದರ ಹಿಂದೆ ಒಂದು ಆಸಕ್ತಿದಾಯಕ ಘಟನೆಯೂ ಇದೆ. ಒಮ್ಮೆ ಭಾಯಿ ಜಗದೀಶ್ ತ್ರಿವೇದಿ ಅವರು, 2017 ರಲ್ಲಿ ತಮಗೆ 50 ವರ್ಷ ತುಂಬಿದಾಗ, ತಮ್ಮ ಕಾರ್ಯಕ್ರಮಗಳಿಂದ ಬರುವ ಆದಾಯವನ್ನು ಮನೆಗೆ ತೆಗೆದುಕೊಂಡು ಹೋಗುವುದಿಲ್ಲ ಆದರೆ ಅದನ್ನು ಸಮಾಜಕ್ಕಾಗಿ ಖರ್ಚು ಮಾಡುತ್ತಾರೆ ಎಂದು ಹೇಳಿದರು. 2017 ರಿಂದ, ಅವರು ಸುಮಾರು 8.75 ಕೋಟಿ ರೂಪಾಯಿಗಳನ್ನು ಅಸಂಖ್ಯಾತ ಸಾಮಾಜಿಕ ಕೆಲಸಗಳಿಗೆ ಖರ್ಚು ಮಾಡಿದ್ದಾರೆ. ಒಬ್ಬ ಹಾಸ್ಯಗಾರ, ತನ್ನ ಮಾತುಗಳಿಂದ, ಎಲ್ಲರನ್ನೂ ನಗುವಂತೆ ಮಾಡುತ್ತಾನೆ. ಆದರೆ ಅವರು ತಮ್ಮೊಳಗೆ ಎಷ್ಟು ಭಾವನೆಗಳನ್ನು ಇಟ್ಟುಕೊಂಡಿದ್ದಾರೆ, ಇದನ್ನು ಭಾಯಿ ಜಗದೀಶ್ ತ್ರಿವೇದಿ ಅವರ ಜೀವನದಿಂದ ನೋಡಬಹುದು. ಅವರು ಮೂರು ಪಿಎಚ್‌ಡಿ ಪದವಿಗಳನ್ನು ಸಹ ಹೊಂದಿದ್ದಾರೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ಅವರು 75 ಪುಸ್ತಕಗಳನ್ನು ಬರೆದಿದ್ದಾರೆ, ಅವುಗಳಲ್ಲಿ ಹಲವು ಮೆಚ್ಚುಗೆಯನ್ನು ಪಡೆದಿವೆ. ಸಾಮಾಜಿಕ ಕೆಲಸಕ್ಕಾಗಿ ಅವರಿಗೆ ಅನೇಕ ಪ್ರಶಸ್ತಿಗಳನ್ನು ಸಹ ನೀಡಲಾಗಿದೆ. ಭಾಯಿ ಜಗದೀಶ್ ತ್ರಿವೇದಿ ಅವರ ಸಾಮಾಜಿಕ ಕೆಲಸಕ್ಕಾಗಿ ನಾನು ಅವರಿಗೆ ಶುಭ ಹಾರೈಸುತ್ತೇನೆ.

ನನ್ನ ಕುಟುಂಬ ಸದಸ್ಯರೇ, ಅಯೋಧ್ಯೆಯಲ್ಲಿನ ರಾಮಮಂದಿರಕ್ಕೆ ಸಂಬಂಧಿಸಿದಂತೆ ಇಡೀ ದೇಶದಲ್ಲಿ ಉತ್ಸಾಹ ಮತ್ತು ಉಲ್ಲಾಸವಿದೆ. ಜನರು ತಮ್ಮ ಭಾವನೆಗಳನ್ನು ವಿವಿಧ ರೀತಿಯಲ್ಲಿ ವ್ಯಕ್ತಪಡಿಸುತ್ತಿದ್ದಾರೆ. ಕಳೆದ ಕೆಲವು ದಿನಗಳಲ್ಲಿ, ಶ್ರೀ ರಾಮ ಮತ್ತು ಅಯೋಧ್ಯೆಯ ಬಗ್ಗೆ ಅನೇಕ ಹೊಸ ಹಾಡುಗಳು ಮತ್ತು ಹೊಸ ಭಜನೆಗಳು ಸಂಯೋಜಿಸಲ್ಪಟ್ಟಿರುವುದನ್ನು ನೀವು ಗಮನಿಸಿರಬೇಕು. ಅನೇಕ ಜನರು ಹೊಸ ಕವಿತೆಗಳನ್ನು ಸಹ ಬರೆಯುತ್ತಿದ್ದಾರೆ. ಇದರಲ್ಲಿ ಅನೇಕ ಅನುಭವಿ ಕಲಾವಿದರು ಇದ್ದಾರೆ ಮತ್ತು ಯುವ ಕಲಾವಿದರು ಸಹ ಹೃದಯ ತಟ್ಟುವ ಭಜನೆಗಳನ್ನು ಸಂಯೋಜಿಸಿದ್ದಾರೆ. ನಾನು ನನ್ನ ಸಾಮಾಜಿಕ ಮಾಧ್ಯಮದಲ್ಲಿ ಕೆಲವು ಹಾಡುಗಳು ಮತ್ತು ಭಜನೆಗಳನ್ನು ಸಹ ಹಂಚಿಕೊಂಡಿದ್ದೇನೆ. ಕಲಾ ಜಗತ್ತು ತನ್ನದೇ ಆದ ವಿಶಿಷ್ಟ ಶೈಲಿಯಲ್ಲಿ ಈ ಐತಿಹಾಸಿಕ ಕ್ಷಣದಲ್ಲಿ ಭಾಗವಹಿಸುತ್ತಿದೆ ಎಂದು ತೋರುತ್ತಿದೆ. ಒಂದು ವಿಷಯ ನನ್ನ ಮನಸ್ಸಿಗೆ ಬರುತ್ತದೆ... ನಾವೆಲ್ಲರೂ ಅಂತಹ ಎಲ್ಲಾ ಸೃಷ್ಟಿಗಳನ್ನು ಒಂದು ಸಾಮಾನ್ಯ ಹ್ಯಾಶ್‌ಟ್ಯಾಗ್‌ನೊಂದಿಗೆ ಹಂಚಿಕೊಳ್ಳಬಹುದೇ? ನಿಮ್ಮ ಸೃಷ್ಟಿಗಳನ್ನು ಸಾಮಾಜಿಕ ಮಾಧ್ಯಮದಲ್ಲಿ #shriRamBhajan ಹ್ಯಾಶ್‌ಟ್ಯಾಗ್‌ನೊಂದಿಗೆ ಹಂಚಿಕೊಳ್ಳಲು ನಾನು ವಿನಂತಿಸುತ್ತೇನೆ. ಈ ಸಂಕಲನವು ಭಾವನೆಗಳು ಮತ್ತು ಭಕ್ತಿಯ ಪ್ರವಾಹವಾಗಿ ಮಾರ್ಪಡುತ್ತದೆ, ಇದರಲ್ಲಿ ಪ್ರತಿಯೊಬ್ಬರೂ ರಾಮನ ಮನೋಭಾವದಿಂದ ಮುಳುಗಿರುತ್ತಾರೆ.

ನನ್ನ ಪ್ರೀತಿಯ ದೇಶವಾಸಿಗಳೇ, ಇಂದು 'ಮನ್ ಕಿ ಬಾತ್' ನಲ್ಲಿ ನನ್ನೊಂದಿಗೆ ಇಷ್ಟೇ ಇದೆ. 2024 ಕೇವಲ ಕೆಲವು ಗಂಟೆಗಳ ದೂರದಲ್ಲಿದೆ. ಭಾರತದ ಸಾಧನೆಗಳು ಪ್ರತಿಯೊಬ್ಬ ಭಾರತೀಯನ ಸಾಧನೆಗಳಾಗಿವೆ. ನಾವು ಪಂಚ ಪ್ರಾಣಗಳನ್ನು ಗಮನದಲ್ಲಿಟ್ಟುಕೊಂಡು ಭಾರತದ ಅಭಿವೃದ್ಧಿಗಾಗಿ ನಿರಂತರವಾಗಿ ಕೆಲಸ ಮಾಡಬೇಕು. ನಾವು ಮಾಡುವ ಯಾವುದೇ ಕೆಲಸ, ನಾವು ತೆಗೆದುಕೊಳ್ಳುವ ಯಾವುದೇ ನಿರ್ಧಾರ, ನಮ್ಮ ಮೊದಲ ಮಾನದಂಡ ಇರಬೇಕು… ಇದರಿಂದ ದೇಶಕ್ಕೆ ಏನು ಸಿಗುತ್ತದೆ; ಇದು ದೇಶಕ್ಕೆ ಏನು ಪ್ರಯೋಜನವನ್ನು ತರುತ್ತದೆ. ರಾಷ್ಟ್ರ ಪ್ರಥಮ - ಇದಕ್ಕಿಂತ ದೊಡ್ಡ ಮಂತ್ರ ಬೇರೆ ಇಲ್ಲ. ಈ ಮಂತ್ರಕ್ಕೆ ಅಂಟಿಕೊಂಡು, ನಾವೆಲ್ಲಾ ಭಾರತೀಯರು ನಮ್ಮ ದೇಶವನ್ನು ಅಭಿವೃದ್ಧಿಪಡಿಸಿದ ಮತ್ತು ಆತ್ಮನಿರ್ಭರಗೊಳಿಸುತ್ತೇವೆ. 2024 ರಲ್ಲಿ ನೀವೆಲ್ಲರೂ ಹೊಸ ಎತ್ತರಗಳನ್ನು ತಲುಪಲಿ, ನೀವೆಲ್ಲರೂ ಆರೋಗ್ಯವಾಗಿರಿ, ಸದೃಢವಾಗಿರಿ, ಅತಿಯಾಗಿ ಸಂತೋಷವಾಗಿರಿ - ಇದು ನನ್ನ ಪ್ರಾರ್ಥನೆ. 2024 ರಲ್ಲಿ ನಾವು ಮತ್ತೊಮ್ಮೆ ದೇಶದ ಜನರ ಹೊಸ ಸಾಧನೆಗಳ ಬಗ್ಗೆ ಚರ್ಚಿಸುತ್ತೇವೆ.

ತುಂಬಾ ಧನ್ಯವಾದಗಳು.

 

*****
 


(Release ID: 2189569) Visitor Counter : 8