ಉಪರಾಷ್ಟ್ರಪತಿಗಳ ಕಾರ್ಯಾಲಯ
ಉಪರಾಷ್ಟ್ರಪತಿ ಶ್ರೀ ಸಿ.ಪಿ. ರಾಧಾಕೃಷ್ಣನ್ ಅವರು ಮೈಸೂರಿನ ಜೆ.ಎಸ್.ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ 16ನೇ ಘಟಿಕೋತ್ಸವದಲ್ಲಿ ಭಾಗವಹಿಸಿದರು
ನಮ್ಯತೆ ಮತ್ತು ಅಂತರಶಿಸ್ತೀಯ ಕಲಿಕೆಯ ಮೂಲಕ ವಿದ್ಯಾರ್ಥಿಗಳನ್ನು ಸಬಲೀಕರಣಗೊಳಿಸುವಲ್ಲಿ ಎನ್.ಇ.ಪಿ 2020ರ ಪಾತ್ರವನ್ನು ಉಪರಾಷ್ಟ್ರಪತಿ ಅವರು ಉಲ್ಲೇಖಿಸಿದರು
ಜ್ಞಾನ ಮತ್ತು ವಿನಮ್ರತೆಯಿಂದ ವಿಕಸಿತ ಭಾರತ 2047ಕ್ಕೆ ಕೊಡುಗೆ ನೀಡುವಂತೆ ಪದವೀಧರರಿಗೆ ಉಪರಾಷ್ಟ್ರಪತಿ ಅವರು ಕರೆ ನೀಡಿದರು
ಕರ್ನಾಟಕದ ಶ್ರೀಮಂತ ಪರಂಪರೆ ಮತ್ತು ಶಾಸ್ತ್ರೀಯ ಭಾಷೆಯಾಗಿ ಕನ್ನಡದ ಸ್ಥಾನಮಾನವನ್ನು ಉಪರಾಷ್ಟ್ರಪತಿ ಅವರು ಶ್ಲಾಘಿಸಿದರು
Posted On:
09 NOV 2025 5:46PM by PIB Bengaluru
ಉಪರಾಷ್ಟ್ರಪತಿ ಶ್ರೀ ಸಿ.ಪಿ. ರಾಧಾಕೃಷ್ಣನ್ ಅವರು ಇಂದು ಮೈಸೂರಿನ ಶ್ರೀ ಶಿವರಾತ್ರೀಶ್ವರ ನಗರದಲ್ಲಿ ನಡೆದ ಜೆ.ಎಸ್.ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ (ಜೆ.ಎಸ್.ಎಸ್ ಎ.ಎಚ್.ಇ.ಆರ್)ನ 16ನೇ ಘಟಿಕೋತ್ಸವದಲ್ಲಿ ಭಾಗವಹಿಸಿದರು.
ಉಪರಾಷ್ಟ್ರಪತಿ ಅವರು ತಮ್ಮ ಘಟಿಕೋತ್ಸವ ಭಾಷಣದಲ್ಲಿ, ಯಶಸ್ಸಿನ ಕೀಲಿಯಾಗಿ ನಿರಂತರತೆಯ ಮಹತ್ವವನ್ನು ಒತ್ತಿ ಹೇಳಿದರು. ಪ್ರತಿಯೊಬ್ಬ ಪದವೀಧರರು ತಮ್ಮ ವಿಶಿಷ್ಟ ಪ್ರತಿಭೆಯನ್ನು ಗುರುತಿಸಿಕೊಳ್ಳುವಂತೆ ಮತ್ತು ತಮ್ಮ ಸಾಧನೆಯ ಲಯಕ್ಕೆ ಅನುಗುಣವಾಗಿ ವೈಯಕ್ತಿಕ ಗುರಿಗಳನ್ನು ಹೊಂದುವಂತೆ ಕರೆ ನೀಡಿದರು. ಸ್ವಾಮಿ ವಿವೇಕಾನಂದರ ಅಮರವಾಣಿಯನ್ನು ಸ್ಮರಿಸಿದ ಉಪರಾಷ್ಟ್ರಪತಿ ಅವರು, ಪದವೀಧರರಿಗೆ "ಏಳಿ, ಎಚ್ಚರಗೊಳ್ಳಿ ಮತ್ತು ಗುರಿ ಮುಟ್ಟುವವರೆಗೆ ನಿಲ್ಲಬೇಡಿ" ಎಂದು ಪ್ರೇರೇಪಿಸಿದರು, ಸವಾಲುಗಳ ಎದುರು ಪರಿಶ್ರಮ ಮತ್ತು ದೃಢತೆಯನ್ನು ಒತ್ತಿ ಹೇಳಿದರು.
ಕರ್ನಾಟಕದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಕನ್ನಡವನ್ನು ಶಾಸ್ತ್ರೀಯ ಭಾಷೆಯಾಗಿ ಗುರುತಿಸಿರುವುದನ್ನು ಎತ್ತಿ ತೋರಿಸಿದ ಅವರು, ರಾಷ್ಟ್ರೀಯ ಶಿಕ್ಷಣ ನೀತಿ (ಎನ್.ಇ.ಪಿ 2020) ಅಂತರಶಿಸ್ತೀಯ ಕಲಿಕೆ ಮತ್ತು ನಮ್ಯತೆಗೆ ಒತ್ತು ನೀಡಿರುವುದನ್ನು ಶ್ಲಾಘಿಸಿದರು, ಇದು ಪರಿಶ್ರಮಪಡುವ ವಿದ್ಯಾರ್ಥಿಗಳಿಗೆ ಅಳವಡಿಕೆ ಮತ್ತು ಶ್ರೇಷ್ಠತೆಯನ್ನು ಸಾಧಿಸಲು ಬಲ ನೀಡುತ್ತದೆ ಎಂದು ಅವರು ಹೇಳಿದರು.
ಸಾಮಾಜಿಕ ಮಾಧ್ಯಮದ ವಿವೇಚನಾಯುಕ್ತ ಬಳಕೆಯನ್ನು ಉಪರಾಷ್ಟ್ರಪತಿ ಅವರು ಒತ್ತಿ ಹೇಳಿದರು, ಯುವ ಪದವೀಧರರು ಸ್ವಯಂ ಶಿಸ್ತನ್ನು ಕಾಪಾಡಿಕೊಳ್ಳಬೇಕು ಮತ್ತು ತಮ್ಮ ಆನ್‌ಲೈನ್ ಉಪಸ್ಥಿತಿಯನ್ನು ನೈಜ ಜಗತ್ತಿನ ಜವಾಬ್ದಾರಿಗಳೊಂದಿಗೆ ಸಮತೋಲನಗೊಳಿಸಬೇಕು ಎಂದು ಹೇಳಿದರು. ಅವರು ತಮ್ಮ ಹೆತ್ತವರಿಗೆ ಗೌರವ ಮತ್ತು ಗಮನವನ್ನು ತೋರಿಸಬೇಕು ಮತ್ತು ಇತರರ ನಕಾರಾತ್ಮಕ ಅಂಶಗಳ ಮೇಲೆ ಕೇಂದ್ರೀಕರಿಸುವ ಬದಲು ಅವರ ಸಕಾರಾತ್ಮಕ ಗುಣಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
"ಜ್ಞಾನವೇ ನಿಜವಾದ ಸಂಪತ್ತು" ಎಂಬ ಪ್ರಾಚೀನ ವಿವೇಕವನ್ನು ಉಲ್ಲೇಖಿಸಿದ ಉಪರಾಷ್ಟ್ರಪತಿ ಅವರು, ಪದವೀಧರರು ಜ್ಞಾನದ ಬೆಳಕನ್ನು ಹರಡಲು, ಭವಿಷ್ಯದ ಪೀಳಿಗೆಗೆ ಸ್ಫೂರ್ತಿ ನೀಡಲು ಮತ್ತು ವಿಕಸಿತ ಭಾರತ 2047ರ ದೃಷ್ಟಿಕೋನಕ್ಕೆ ಅನುಗುಣವಾಗಿ ರಾಷ್ಟ್ರ ನಿರ್ಮಾಣಕ್ಕೆ ವಿನಮ್ರವಾಗಿ ಮತ್ತು ನಿರ್ಣಾಯಕವಾಗಿ ಕೊಡುಗೆ ನೀಡಲು ಕರೆ ನೀಡಿದರು.
ಘಟಿಕೋತ್ಸವ ಸಮಾರಂಭದಲ್ಲಿ ಒಟ್ಟು 2,925 ವಿದ್ಯಾರ್ಥಿಗಳಿಗೆ ಪದವಿ, ಡಿಪ್ಲೊಮಾ ಮತ್ತು ಫೆಲೋಶಿಪ್ ಗಳನ್ನು ಪ್ರದಾನ ಮಾಡಲಾಯಿತು. ವಿವಿಧ ಶೈಕ್ಷಣಿಕ ವಿಭಾಗಗಳಿಂದ ಹದಿನಾರು ಚಿನ್ನದ ಪದಕ ವಿಜೇತರನ್ನು ಉಪರಾಷ್ಟ್ರಪತಿ ಅವರು ಸನ್ಮಾನಿಸಿದರು.
ಈ ಸಮಾರಂಭದಲ್ಲಿ ಕರ್ನಾಟಕದ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್, ಜೆ.ಎಸ್.ಎಸ್ ಎ.ಎಚ್.ಇ.ಆರ್ ನ ಕುಲಪತಿಗಳಾದ ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ, ಸುಪ್ರೀಂ ಕೋರ್ಟ್ ನ ಮಾಜಿ ನ್ಯಾಯಾಧೀಶರಾದ ನ್ಯಾಯಮೂರ್ತಿ ಶ್ರೀ ಶಿವರಾಜ್ ವಿ. ಪಾಟೀಲ್ ಮತ್ತಿತರ ಗಣ್ಯರು ಭಾಗವಹಿಸಿದ್ದರು.
*****
(Release ID: 2188077)
Visitor Counter : 35