ಸಿಬ್ಬಂದಿ, ಸಾರ್ವಜನಿಕ ಅಹವಾಲು ಮತ್ತು ಪಿಂಚಣಿ ಸಚಿವಾಲಯ
azadi ka amrit mahotsav

ಮೂರು ದಿನಗಳ "ಉದಯೋನ್ಮುಖ ವಿಜ್ಞಾನ, ತಂತ್ರಜ್ಞಾನ, ನಾವಿನ್ಯತೆ ಸಮಾವೇಶ (ESTIC 2025)"ದಲ್ಲಿ ಖ್ಯಾತ ಅನಿವಾಸಿ ಭಾರತೀಯ ವಿಜ್ಞಾನಿಗಳು ಮತ್ತು ತಜ್ಞರೊಂದಿಗೆ "ವಿಕಸಿತ ಭಾರತಕ್ಕಾಗಿ ವೈಭವ ಮುನ್ನೋಟ" ಕುರಿತ ದುಂಡು ಮೇಜಿನ ಸಭೆಯಲ್ಲಿ ಡಾ. ಜಿತೇಂದ್ರ ಸಿಂಗ್ ಭಾಷಣ


"ನೀವು ಹೊರಗಿನವರಲ್ಲ - ಭಾರತದ ವೈಜ್ಞಾನಿಕ ಕುಟುಂಬದ ಭಾಗ" - ಡಾ. ಜಿತೇಂದ್ರ ಸಿಂಗ್

ಭಾರತ ಮತ್ತು ಜಾಗತಿಕ ಪ್ರತಿಭಾ ಕೂಟದ ನಡುವೆ ಜ್ಞಾನ, ನಾವಿನ್ಯತೆ ಮತ್ತು ಚಿಂತನೆಗಳ ನಿರಂತರ ಹಂಚಿಕೆಗಾಗಿ "ಪ್ರತಿಭಾ ಪಲಾಯನ" ಪರ್ವದಿಂದ ಪ್ರತಿಭಾ ಪಲಾಯನವಾಗದಂತೆ "ಜ್ಞಾನ ವಿನಿಮಯ"ದ ಮಾದರಿಯಾಗಿ ಭಾರತದ ವೈಜ್ಞಾನಿಕ ಸಮುದಾಯದ ಬಾಂಧವ್ಯ ಪರಿವರ್ತನೆಗೆ ಸಚಿವರ ಕರೆ

ಭಾರತದ ವಿಜ್ಞಾನ ಸಮುದಾಯಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಿರಂತರ ಸಂಪರ್ಕ - ಡಾ. ಜಿತೇಂದ್ರ ಸಿಂಗ್ ಅವರಿಂದ ಪುನರುಚ್ಚಾರ

ವಿಜ್ಞಾನ ಮತ್ತು ನಾವಿನ್ಯತೆಯ ಸುವರ್ಣ ಯುಗಕ್ಕೆ ಭಾರತದ ಪ್ರವೇಶ - ಸಚಿವರು 

Posted On: 04 NOV 2025 6:10PM by PIB Bengaluru

"ಉದಯೋನ್ಮುಖ ವಿಜ್ಞಾನ, ತಂತ್ರಜ್ಞಾನ, ನಾವಿನ್ಯತೆ ಸಮಾವೇಶ" (ESTIC 2025) ದಲ್ಲಿ ಖ್ಯಾತ ಅನಿವಾಸಿ ಭಾರತೀಯ ವಿಜ್ಞಾನಿಗಳು ಮತ್ತು ವಿದ್ವಾಂಸರೊಂದಿಗೆ ಮೂರು ದಿನಗಳ ದುಂಡು ಮೇಜಿನ ಸಭೆಯಲ್ಲಿ ಮಾತನಾಡಿದ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಡಾ. ಜಿತೇಂದ್ರ ಸಿಂಗ್ ಅವರು, "ನೀವು ಹೊರಗಿನವರಲ್ಲ - ನೀವು ಭಾರತೀಯ ವೈಜ್ಞಾನಿಕ ಕುಟುಂಬದ ಭಾಗ" ಎಂದು ಹೇಳಿದರು. 

ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ರಚನಾತ್ಮಕ ಸಲಹೆ ನೀಡಿರುವ ವಿಶ್ವದಾದ್ಯಂತದ ವೈಭವ್(VAIBHAV) ಸಹವರ್ತಿಗಳೊಂದಿಗೆ ಸಚಿವರು ಸಂವಾದ ನಡೆಸಿದರು.  

ಭಾರತ ಮತ್ತು ಜಾಗತಿಕ ಪ್ರತಿಭಾ ಕೂಟದ ನಡುವೆ ಜ್ಞಾನ, ನಾವಿನ್ಯತೆ ಮತ್ತು ಚಿಂತನೆಗಳ ಸುಗಮ ಹಂಚಿಕೆಗಾಗಿ "ಪ್ರತಿಭಾ ಪಲಾಯನ"ದ ಪರ್ವದಿಂದ ಪಲಾಯನ ತಡೆಗಟ್ಟುವ "ಜ್ಞಾನ ವಿನಿಮಯ"ದ ಮಾದರಿಯಾಗಿ ಭಾರತದ ವೈಜ್ಞಾನಿಕ ಸಮುದಾಯದೊಂದಿಗಿನ ತೊಡಗಿಸಿಕೊಳ್ಳುವಿಕೆಯ ಪರಿವರ್ತನೆಗೆ ಡಾ. ಜಿತೇಂದ್ರ ಸಿಂಗ್ ಕರೆ ನೀಡಿದರು.

ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಪ್ರೊ. ಅಜಯ್ ಕುಮಾರ್ ಸೂದ್ ಸಭೆಯನ್ನು ನಿರ್ವಹಿಸಿದ್ದು, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಪ್ರೊ. ಅಭಯ್ ಕರಂಡಿಕರ್ ಸ್ವಾಗತ ಭಾಷಣ ಮಾಡಿದರು.

ವೈಭವ್ ಫೆಲೋಶಿಪ್ ಮೂಲಕ ಅನಿವಾಸಿಯರ ತೊಡಗಿಸಿಕೊಳ್ಳುವಿಕೆಯನ್ನು ಸಾಂಸ್ಥಿಕಗೊಳಿಸುವ ಸರ್ಕಾರದ ಪ್ರಯತ್ನಗಳನ್ನು ಅಮೆರಿಕ, ಕೆನಡಾ, ಸ್ವೀಡನ್, ಆಸ್ಟ್ರೇಲಿಯಾ ಮುಂತಾದ ದೇಶಗಳ ವಿಶ್ವವಿದ್ಯಾಲಯಗಳು ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳನ್ನು ಪ್ರತಿನಿಧಿಸುವ ವೈಭವ್  ಸಹವರ್ತಿಗಳು ಶ್ಲಾಘಿಸಿದರು. ಭಾರತೀಯ ಸಂಸ್ಥೆಗಳು ಮತ್ತು ಜಾಗತಿಕ ಭಾರತೀಯ ಸಂಶೋಧಕರ ನಡುವಿನ ಸಹಯೋಗ ಸುಧಾರಣೆಗೆ ಪ್ರಾಯೋಗಿಕ ಆಲೋಚನೆಗಳನ್ನು ಅವರು ಹಂಚಿಕೊಂಡರು. 

ವಿದ್ಯಾರ್ಥಿಗಳ ಚಲನಶೀಲತೆಗಾಗಿ ಭಾರತೀಯ ವಿದ್ಯಾರ್ಥಿಗಳು ವಿದೇಶದಲ್ಲಿ ತಮ್ಮ ಮಾರ್ಗದರ್ಶಕರೊಂದಿಗೆ ಒಂದು ವರ್ಷ ಕೆಲಸ ಮಾಡಲು ಅನುವು ಮಾಡಿಕೊಡುವ ಮತ್ತು ಆತಿಥೇಯ ವಿಜ್ಞಾನಿಗಳು ವಿದೇಶಿ ವಿದ್ಯಾರ್ಥಿಗಳನ್ನು ಭಾರತದ ಪ್ರಯೋಗಾಲಯಗಳಿಗೆ ಕರೆತರಲು ಸಾಧ್ಯವಾಗಿಸುವ "ಪರಿಧಿಯನ್ನು ಮೀರಿದ ಮತ್ತು ಜಾಗತಿಕ ಪ್ರತಿಭೆ ಪೋಷಿಸುವ" ಎಂಬ ಹಲವರ ಅಭಿಮತವಿರುವ ರಚನಾತ್ಮಕ ಕಾರ್ಯವಿಧಾನವನ್ನು ಒದಗಿಸುವ ಬಗ್ಗೆ ಬಲವಾದ ಶಿಫಾರಸ್ಸು ಮಾಡಲಾಯಿತು.  

ವಿದೇಶಿಯರ ಪ್ರಯಾಣ ಮತ್ತು ಸಮ್ಮೇಳನ ಅನುಮತಿಗಾಗಿನ ಸಮಸ್ಯೆ ನಿವಾರಣೆಗೆ ಕಾರ್ಯವಿಧಾನಗಳನ್ನು ಸುಲಲಿತಗೊಳಿಸುವ ಬಗ್ಗೆ ಅನೇಕ ಫೆಲೋಗಳು ಪದೇ ಪದೇ ಪ್ರಸ್ತಾಪಿಸಿದರು. ಭಾರತದಲ್ಲಿನ ವಿಜ್ಞಾನ ಕಾರ್ಯಕ್ರಮಗಳಿಗೆ ಅಂತಾರಾಷ್ಟ್ರೀಯ ಭಾಷಣಕಾರರನ್ನು ಆಹ್ವಾನಿಸಲು ಇರುವ ತೊಡಕಿನ ಪ್ರಕ್ರಿಯೆಗಳಿಂದ ಪಾಲ್ಗೊಳ್ಳುವಿಕೆಗೆ ಅಡ್ಡಿಯಾಗಿದೆ ಎಂದು ಅವರು ಗಮನಸೆಳೆದರು. ವೀಸಾ ಅನುಮತಿಗಳನ್ನು ಸರಳೀಕರಿಸಲು ಮತ್ತು ತ್ವರಿತ ಶೈಕ್ಷಣಿಕ ವಿನಿಮಯವನ್ನು ಸಕ್ರಿಯಗೊಳಿಸಲು ಜಾಗತಿಕ ಅಧ್ಯಾಪಕರ ಪೂರ್ವ ಅನುಮೋದಿತ ಪಟ್ಟಿಗಾಗಿ ಅನೇಕರು ಆಗ್ರಹಿಸಿದರು.

ಸುಸ್ಥಿರ ಸಹಯೋಗವು ಪಕ್ವವಾಗಲು ಮತ್ತು ಅಳೆಯಬಹುದಾದ ಫಲಿತಾಂಶಗಳನ್ನು ನೀಡುವಂತಾಗಲು ಸಾಕಷ್ಟು ಕಾಲಾವಕಾಶ ಅಗತ್ಯವಿದೆ ಎಂದು ತಿಳಿಸುತ್ತಾ, ವೈಭವ್ ಫೆಲೋಶಿಪ್ ಅನ್ನು ಮೂರರಿಂದ ಐದು ವರ್ಷಗಳಿಗೆ ವಿಸ್ತರಿಸುವ ಪ್ರಸ್ತಾಪವನ್ನು ವಿಜ್ಞಾನಿಗಳು ಮುಂದಿಟ್ಟರು. ನಿರಂತರತೆ ಮತ್ತು ಹೊಣೆಗಾರಿಕೆಯನ್ನು ಖಚಿತಪಡಿಸಿಕೊಳ್ಳಲು ಆರಂಭದಲ್ಲಿ ಎರಡು ವರ್ಷಗಳವರೆಗೆ ವಿಸ್ತರಣೆ ಮಾಡಬಹುದಾದ ಮೂರು ವರ್ಷಗಳು ಕಾರ್ಯಕ್ಷಮತೆ ಆಧರಿತ ಹಂತ ಹಂತದ ಮಾದರಿಯ ಬಗ್ಗೆ ಆಧುನಿಕ ನಿಸ್ತಂತು ವ್ಯವಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಸಹವರ್ತಿಯೊಬ್ಬರು ಸೂಚಿಸಿದರು. 

ಭಾರತೀಯ ಪರಿಸ್ಥಿತಿಗಳಿಗೆ ಅನುಗುಣವಾಗಿ ವಿನ್ಯಾಸಗೊಳಿಸಲಾದ ಸ್ಥಳೀಯ ತಂತ್ರಜ್ಞಾನ ಪರಿಹರೋಪಾಯದ "ಭಾರತಕ್ಕಾಗಿನ ವ್ಯವಸ್ಥೆಗಳನ್ನು "ಅಭಿವೃದ್ಧಿಪಡಿಸುವ ಅಗತ್ಯದ ಬಗ್ಗೆಯೂ ಸಭೆಯಲ್ಲಿ ಪ್ರಮುಖವಾಗಿ ಚರ್ಚಿಸಲಾಯಿತು. ಕೇವಲ ಪ್ರಮುಖ ಸಂಶೋಧನೆಯ ಮೇಲೆ ಮಾತ್ರವಲ್ಲದೆ ಭಾರತದ ಪ್ರಮಾಣ, ಸಾಂದ್ರತೆ ಮತ್ತು ಕೈಗೆಟುಕುವ ಸವಾಲುಗಳಿಗೆ ಸೂಕ್ತವಾದ ನೈಜ-ಪ್ರಪಂಚದ ವ್ಯವಸ್ಥೆ-ನಿರ್ಮಾಣದ ಮೇಲೆಯೂ ಗಮನಹರಿಸುವ ಮಹತ್ವವನ್ನು 5G ಮತ್ತು 6G ತಂತ್ರಜ್ಞಾನದ ಸಂಶೋಧಕರು ಒತ್ತಿ ಹೇಳಿದರು. 

ಶೈಕ್ಷಣಿಕ ಸಂಶೋಧನೆಯನ್ನು ಕೈಗಾರಿಕಾ ನಾವಿನ್ಯತೆಯಾಗಿ ರೂಪಾಂತರಿಸಲು ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಅವಕಾಶಗಳನ್ನು ಹಲವರು ವಿವರಿಸಿದರು. ಸಾಂಪ್ರದಾಯಿಕ ಸಾರ್ವಜನಿಕ ಖಾಸಗಿ ಪಾಲುದಾರಿಕೆ (ಪಿಪಿಪಿ) ಗಳನ್ನು ಮೀರಿ ಗಡಿಯಾಚೆಗಿನ ಸಹಯೋಗಗಳನ್ನು ರೂಪಿಸಲು ಭಾರತೀಯ ನವೋದ್ಯಮಗಳು ಮತ್ತು ಕೈಗಾರಿಕೆಗಳನ್ನು ವಿದೇಶಿ ಪಾಲುದಾರರೊಂದಿಗೆ, ವಿಶೇಷವಾಗಿ ಉನ್ನತ ತಂತ್ರಜ್ಞಾನ ಮತ್ತು ಉತ್ಪಾದನಾ ಕ್ಷೇತ್ರದೊಂದಿಗೆ ಸಂಪರ್ಕಿಸುವ ಬಗ್ಗೆ ಅವರು ಸಲಹೆ ನೀಡಿದರು. 

ಸ್ವೀಡನ್ ನ ಫೆಲೋ ಒಬ್ಬರು ಭಾರತೀಯ ಪ್ರತಿಭೆಗಳ ಪಾಲುದಾರಿಕೆಯ ಮೂಲಕ ಯುರೋಪಿನಲ್ಲಿ ಬಳಕೆಯಾಗದ ಸಂಶೋಧನಾ ಮೂಲಸೌಕರ್ಯದ ಸಮರ್ಥ ಬಳಕೆಯ ಬಗೆಗಿನ ಉದಾಹರಣೆಯನ್ನು ನೀಡುತ್ತಾ, ಇಂತಹ ಸಹಯೋಗಗಳ ಮೂಲಕ ವಿದೇಶದಲ್ಲಿನ ವಿಶ್ವ ದರ್ಜೆಯ ಸೌಲಭ್ಯಗಳೊಂದಿಗೆ ಭಾರತದ ವೈಜ್ಞಾನಿಕ ಸಾಮರ್ಥ್ಯವನ್ನು ಸಂಯೋಜಿಸಬಹುದು ಎಂದು ವಿವರಿಸಿದರು. 

ಅನಿವಾಸಿಯರು ಹಂಚಿಕೊಂಡ ಅನೇಕ ಪ್ರಾಯೋಗಿಕ ವಿಚಾರಗಳನ್ನು ಅಳವಡಿಸಿಕೊಳ್ಳಲು ಸರ್ಕಾರ ಉತ್ಸುಕವಾಗಿದೆ ಎಂದು ವ್ಯಾಪಕ ಸಲಹೆಗಳಿಗೆ ಡಾ. ಜಿತೇಂದ್ರ ಸಿಂಗ್ ಪ್ರತಿಕ್ರಿಯೆ ನೀಡಿದರು. ಅಂತಾರಾಷ್ಟ್ರೀಯ ಅಧ್ಯಾಪಕರ ಪ್ರಯಾಣ ಸುಲಭಗೊಳಿಸುವ ಮತ್ತು ಅನುಮೋದನೆ ಚೌಕಟ್ಟು ಮಹತ್ವದ ಹೆಜ್ಜೆಯಾಗಲಿದೆ ಎಂಬುದಕ್ಕೆ ಅವರು ಸಹಮತ ವ್ಯಕ್ತಪಡಿಸುತ್ತಾ, ಪೂರ್ವ ಅನುಮೋದಿತ ಅಧ್ಯಾಪಕರ ಪಟ್ಟಿಯ ಪ್ರಸ್ತಾವನೆ ಬಗ್ಗೆ ವಿದೇಶಾಂಗ ಸಚಿವಾಲಯದೊಂದಿಗೆ ಚರ್ಚಿಸಬಹುದು ಎಂದು ಹೇಳಿದರು. 

ಇತ್ತೀಚಿನ ವರ್ಷಗಳಲ್ಲಿ ಸಲ್ಲಿಸಲಾದ ಪೇಟೆಂಟ್ ಗಳ ಪೈಕಿ ಅರ್ಧಕ್ಕಿಂತ ಹೆಚ್ಚು ಪೇಟೆಂಟ್‌ ಗಳು ನಿವಾಸಿ ಭಾರತೀಯರಿಂದ ಸ್ವೀಕೃತವಾಗಿವೆ ಎಂಬ ಅಂಶವೂ ಸೇರಿದಂತೆ ಭಾರತದ ಹೆಚ್ಚುತ್ತಿರುವ ಸಂಶೋಧನಾ ಮತ್ತು ಅಭಿವೃದ್ಧಿ (ಆರ್ & ಡಿ) ಕಾರ್ಯಕ್ಷಮತೆಯ ಸ್ಪಷ್ಟ ಉದಾಹರಣೆಗಳನ್ನು ಸಚಿವರು ಉಲ್ಲೇಖಿಸಿದರು. ಕೋವಿಡ್ -19 ಲಸಿಕೆಯಿಂದ ಹಿಡಿದು ಸ್ಥಳೀಯ HPV ಮತ್ತು ಹಿಮೋಫಿಲಿಯಾ ಜೀನ್ ಚಿಕಿತ್ಸೆಯ ಪ್ರಗತಿಗಳವರೆಗೆ ಜೈವಿಕ ತಂತ್ರಜ್ಞಾನದಲ್ಲಿನ ಪ್ರಗತಿಗಳನ್ನು ಹಾಗೂ ಚಂದ್ರಯಾನ -3 ಮತ್ತು ಬಾಹ್ಯಾಕಾಶದಲ್ಲಿ ಸಸ್ಯ ಜೀವಶಾಸ್ತ್ರ ಪ್ರಯೋಗಗಳಂತಹ ಪ್ರಮುಖ ಸಾಧನೆಗಳನ್ನು ಅವರು ಉಲ್ಲೇಖಿಸಿದರು.

ಭಾರತದ ವೈಜ್ಞಾನಿಕ ಸಮುದಾಯದೊಂದಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಿರಂತರ ಸಂಪರ್ಕವನ್ನು ಪುನರುಚ್ಚರಿಸಿದ ಸಚಿವರು, "ನೀವು ಹೊರಗಿನವರಲ್ಲ - ನೀವು ಭಾರತದ ವೈಜ್ಞಾನಿಕ ಕುಟುಂಬದ ಭಾಗ" ಎಂದು ಹೇಳಿದರು. ಕೆಲವು ದಶಕಗಳ ಹಿಂದಿನಂತಿರದೇ, ಇಂದಿನ ಡಿಜಿಟಲ್ ಸಹಯೋಗ ಸಾಧನಗಳ ಬೆಳವಣಿಗೆಯೊಂದಿಗೆ, ಭಾರತೀಯ ಅನಿವಾಸಿ ವಿಜ್ಞಾನಿಗಳು ಬೇರೆ ದೇಶದಲ್ಲಿದ್ದರೂ ಕೂಡ ಭಾರತಕ್ಕೆ ಸುಲಭವಾಗಿ ಕೊಡುಗೆ ನೀಡುವ ಮತ್ತು ಕಾರ್ಯನಿರ್ವಹಿಸುವ ಆಯ್ಕೆ ಇದೆ ಎಂದು ಅವರು ಒತ್ತಿ ಹೇಳಿದರು. "ಇಂದಿನ ತಂತ್ರಜ್ಞಾನದೊಂದಿಗೆ, ನಿಮ್ಮ ಕೆಲಸವನ್ನು ನಿರ್ವಹಿಸಲು ನೀವು ನಿರಂತರವಾಗಿ ಒಂದೇ ಸ್ಥಳದಲ್ಲಿ ಭೌತಿಕವಾಗಿ ನೆಲೆಸಿರಬೇಕಾದ ಅಗತ್ಯವಿಲ್ಲ" ಎಂದು ಹೇಳಿದ ಅವರು, ಈ ಹೊಸ ಮಾದರಿಯು ಒಂದು ಮಹತ್ವದ ಬದಲಾವಣೆ ಎಂದು ಬಣ್ಣಿಸಿದರು.

"ನವೋದ್ಯಮವನ್ನು ಪ್ರಾರಂಭಿಸುವುದು ಸುಲಭ, ಆದರೆ ಅದನ್ನು ಉಳಿಸಿ ಮುಂದುವರಿಸಲು ಸದೃಢ ಕೈಗಾರಿಕಾ ಪಾಲುದಾರಿಕೆ ಅಗತ್ಯವಿದೆ" ಎಂದು ಹೇಳಿದ ಡಾ. ಜಿತೇಂದ್ರ ಸಿಂಗ್ ಅವರು, ವಿಜ್ಞಾನಿಗಳು ನಿರಂತರ ನಾವಿನ್ಯತೆಗಾಗಿ ಉದ್ಯಮ ಸಂಪರ್ಕಗಳನ್ನು ನಿರ್ಮಿಸಲು ಪೂರಕವಾಗಿ ಕಾರ್ಯನಿರ್ವಹಿಸುವಂತೆ ಹುರಿದುಂಬಿಸಿದರು. ಅರೋಮಾ ಮಿಷನ್ ಅಡಿಯಲ್ಲಿ ವೇಗವಾಗಿ ಬೆಳವಣಿಗೆ ಸಾಧಿಸಿದ ಮತ್ತು ಈಗ ಅಂತಾ ರಾಷ್ಟ್ರೀಯ ಒಪ್ಪಂದಗಳನ್ನು ಅನ್ವೇಷಿಸುತ್ತಿರುವ ಭಾರತದ ಲ್ಯಾವೆಂಡರ್ ಆಧಾರಿತ ಸ್ಟಾರ್ಟ್ಅಪ್ಗಳಂತಹ ಯಶಸ್ವಿ ಮಾದರಿಗಳ ಬಗ್ಗೆ ಅವರು ಗಮನಸೆಳೆದರು.

ವೈಭವ್ ಫೆಲೋಶಿಪ್ ಅವಧಿಯು ಕೇವಲ ಔಪಚಾರಿಕ ರಚನೆಯಾಗಿದ್ದು ತೊಡಗಿಸಿಕೊಳ್ಳುವಿಕೆಗೆ ಮಿತಿಯಲ್ಲ ಎಂದು ಅವರು ಸ್ಪಷ್ಟಪಡಿಸಿದರು. "ನಾವು ಗಾಂಧಿ ಜಯಂತಿಯಂದು ಮಾತ್ರ ಮಹಾತ್ಮ ಗಾಂಧಿಯವರನ್ನು ನೆನಪಿಸಿಕೊಳ್ಳುವುದಿಲ್ಲ, ಹಾಗೆಯೇ ಭಾರತದೊಂದಿಗಿನ ನಿಮ್ಮ ಸಂಪರ್ಕವು ಫೆಲೋಶಿಪ್ ಅವಧಿಯೊಂದಿಗೆ ಕೊನೆಗೊಳ್ಳಬಾರದು" ಎಂದು ಹೇಳಿದ ಅವರು, ವರ್ಚುಯಲ್ ಸಹಯೋಗಗಳು, ಜಂಟಿ ಯೋಜನೆಗಳು ಮತ್ತು ಮಾರ್ಗದರ್ಶನ ಜಾಲಗಳ ಮೂಲಕ ದೀರ್ಘಕಾಲೀನ ಸಂಬಂಧಗಳನ್ನು ಕಾಪಾಡಿಕೊಳ್ಳುವಂತೆ ಫೆಲೋಗಳಲ್ಲಿ ಮನವಿ ಮಾಡಿದರು.

ಗಡಿಗಳನ್ನು ಮೀರಿ ಸಂಪರ್ಕ ಸಾಧಿಸುವ ಸಾಮರ್ಥ್ಯದಲ್ಲಿ ವಿಜ್ಞಾನದ ಶಕ್ತಿ ಇದೆ.  2047ರ ವೇಳೆಗೆ ವಿಕಸಿತ ಭಾರತದ ಹಂಚಿತ ಗುರಿ ಸಾಕಾರಕ್ಕೆ ಭಾರತ ಮತ್ತು ಜಗತ್ತಿಗೆ "ಭಾರತದ ವೈಜ್ಞಾನಿಕ ಪುನರುಜ್ಜೀವನದ ರಾಯಭಾರಿಗಳಾಗಿ" ಕಾರ್ಯನಿರ್ವಹಿಸುವಂತೆ ಅವರು ಅನಿವಾಸಿ ವಿಜ್ಞಾನಿಗಳಿಗೆ ಮನವಿ ಮಾಡುತ್ತಾ ತಮ್ಮ ಭಾಷಣ ಮುಗಿಸಿದರು. 

ವೈಭವ್ ಚೌಕಟ್ಟಿನ ಅಡಿಯಲ್ಲಿ ಸಾಗರ ವಿಜ್ಞಾನ, ಬಾಹ್ಯಾಕಾಶ ತಂತ್ರಜ್ಞಾನ ಮತ್ತು ಉದಯೋನ್ಮುಖ ಸಂಶೋಧನಾ ಕ್ಷೇತ್ರಗಳ ನಡುವಿನ ಅಂತರಶಿಸ್ತೀಯ ಸಹಯೋಗಕ್ಕೆ ಹೆಚ್ಚುತ್ತಿರುವ ಅವಕಾಶಗಳ ಬಗ್ಗೆ ವಿವರಿಸುತ್ತಾ ಭೂ ವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ಡಾ. ಎಂ. ರವಿಚಂದ್ರನ್ ಮತ್ತು ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿ ಡಾ. ವಿ. ನಾರಾಯಣನ್ ಅವರು ಸಭೆಯಲ್ಲಿ ತಮ್ಮ ದೃಷ್ಟಿಕೋನಗಳನ್ನು ಹಂಚಿಕೊಂಡರು. 

ವೈಭವ್ ಉಪಕ್ರಮದ ಅಡಿಯಲ್ಲಿ ಜಾಗತಿಕ-ಭಾರತೀಯ ವೈಜ್ಞಾನಿಕ ಪಾಲುದಾರಿಕೆಯನ್ನು ಗಾಢಗೊಳಿಸುವ ಸರ್ಕಾರದ ಬದ್ಧತೆಯನ್ನು ಪ್ರತಿಪಾದಿಸುತ್ತಾ ಸಭೆಯಲ್ಲಿ ಪ್ರಸ್ತಾಪಿಸಿದ ವಿಚಾರಗಳನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಚೇರಿಯು ಮುಂದಿನ ಕ್ರಮಕ್ಕಾಗಿ ಪರಿಗಣಿಸಲಿದೆ ಎಂಬ ಭರವಸೆಯೊಂದಿಗೆ ಸಭೆ ಮುಕ್ತಾಯವಾಯಿತು.

 

*****


(Release ID: 2186470) Visitor Counter : 6