ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ
ಕರ್ನಾಟಕದ ಬೆಂಗಳೂರಿನಲ್ಲಿ ಮಗಳ ಸಾವಿನ ನಂತರ ತಂದೆಯೊಬ್ಬರು ಆಂಬ್ಯುಲೆನ್ಸ್ ಚಾಲಕ, ಪೊಲೀಸ್, ಚಿತಾಗಾರ ಸಿಬ್ಬಂದಿ ಮತ್ತು ಪಾಲಿಕೆ ಅಧಿಕಾರಿಗಳಿಗೆ ಲಂಚ ಪಾವತಿಸಿದ ಘಟನೆಯನ್ನು ಭಾರತದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು (NHRC) ಸ್ವಯಂಪ್ರೇರಿತವಾಗಿ ಗಣನೆಗೆ ತೆಗೆದುಕೊಂಡಿದೆ
ಈ ಕುರಿತು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ ನೋಟಿಸ್ ಜಾರಿ ಮಾಡಲಾಗಿದ್ದು, ಎರಡು ವಾರಗಳ ಒಳಗೆ ವಿವರವಾದ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ
Posted On:
04 NOV 2025 2:50PM by PIB Bengaluru
ಕರ್ನಾಟಕದ ಬೆಂಗಳೂರಿನಲ್ಲಿ, ತಮ್ಮ ಏಕೈಕ ಪುತ್ರಿಯ ನಿಧನದಿಂದ ದುಃಖತಪ್ತರಾಗಿದ್ದ 64 ವರ್ಷದ ತಂದೆಯೊಬ್ಬರಿಗೆ, ಮಗಳ ಅಂತಿಮ ಸಂಸ್ಕಾರಕ್ಕಾಗಿ ಆಂಬ್ಯುಲೆನ್ಸ್ ಚಾಲಕ, ಪೊಲೀಸರು, ಚಿತಾಗಾರ ಸಿಬ್ಬಂದಿ ಮತ್ತು ಪಾಲಿಕೆಯ ಅಧಿಕಾರಿಗಳಿಗೆ ಪ್ರತಿ ಹಂತದಲ್ಲೂ ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ ಎಂಬ ಮಾಧ್ಯಮ ವರದಿಯೊಂದನ್ನು ಭಾರತದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC) ಸ್ವಯಂಪ್ರೇರಿತವಾಗಿ ಗಣನೆಗೆ ತೆಗೆದುಕೊಂಡಿದೆ. ಅಕ್ಟೋಬರ್ 30, 2025 ರಂದು ಪ್ರಕಟವಾದ ಈ ಮಾಧ್ಯಮ ವರದಿಯ ಪ್ರಕಾರ, ಗೌರವಯುತವಾಗಿ ನಡೆಯಬೇಕಾಗಿದ್ದ ಅಂತಿಮ ವಿದಾಯವು ಭ್ರಷ್ಟಾಚಾರ, ಅಧಿಕಾರಶಾಹಿ ಮತ್ತು ಅಮಾನವೀಯತೆಯ ದುಃಸ್ವಪ್ನವಾಗಿ ಮಾರ್ಪಟ್ಟಿದೆ.
ಈ ಸುದ್ದಿ ವರದಿಯಲ್ಲಿನ ಅಂಶಗಳು ನಿಜವೇ ಆಗಿದ್ದಲ್ಲಿ, ಇದು ಮಾನವ ಹಕ್ಕುಗಳ ಗಂಭೀರ ಉಲ್ಲಂಘನೆಯ ವಿಷಯವಾಗುತ್ತದೆ ಎಂದು ಆಯೋಗವು (NHRC) ಅಭಿಪ್ರಾಯಪಟ್ಟಿದೆ. ಆದ್ದರಿಂದ, ಆಯೋಗವು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ (DGP) ನೋಟಿಸ್ ಜಾರಿ ಮಾಡಿದ್ದು, ಈ ವಿಷಯದ ಕುರಿತು ಎರಡು ವಾರಗಳ ಒಳಗೆ ವಿವರವಾದ ವರದಿಯನ್ನು ಸಲ್ಲಿಸುವಂತೆ ಸೂಚಿಸಿದೆ.
ವರದಿಗಳ ಪ್ರಕಾರ, ಬೆಂಗಳೂರು ನಗರದಲ್ಲಿ ಉದ್ಯೋಗದಲ್ಲಿದ್ದ ಐ.ಐ.ಟಿ ಮದ್ರಾಸ್ (IIT Madras) ಮತ್ತು ಐ.ಐ.ಎಂ ಅಹಮದಾಬಾದ್ ಪದವೀಧರೆಯೊಬ್ಬರು ಸೆಪ್ಟೆಂಬರ್ 18, 2025 ರಂದು ಮೆದುಳಿನ ರಕ್ತಸ್ರಾವದಿಂದ ನಿಧನರಾದರು. ಮಗಳ ಮರಣದ ನಂತರ ತಂದೆಯು ಆಂಬ್ಯುಲೆನ್ಸ್ಗೆ ಕರೆ ಮಾಡಿದಾಗ, ಆಂಬ್ಯುಲೆನ್ಸ್ ಚಾಲಕನು ಸೇವೆಗಾಗಿ ನಿಗದಿಗಿಂತ ಹೆಚ್ಚು ಹಣವನ್ನು ವಸೂಲಿ ಮಾಡಿದ್ದಾನೆ. ನಂತರ, ಮಗಳ ಸಾವಿನ ಬಗ್ಗೆ ಪೊಲೀಸರಿಗೆ ದೂರು ನೀಡಿದಾಗ, ಅವರು (ಪೊಲೀಸರು) ಕೇವಲ ಅಸಹಾನುಭೂತಿಯಿಂದ ವರ್ತಿಸಿದ್ದಲ್ಲದೆ, ಎಫ್.ಐ.ಆರ್ (FIR) ಮತ್ತು ಮರಣೋತ್ತರ ಪರೀಕ್ಷೆಯ ವರದಿಗಳ ಪ್ರತಿಗಳನ್ನು ನೀಡಲು ಲಂಚ ಪಡೆದ ನಂತರವೇ ಅವುಗಳನ್ನು ನೀಡಿದ್ದಾರೆ.
ಈ ಮಾಧ್ಯಮ ವರದಿಯ ಪ್ರಕಾರ, ಮೃತ ದೇಹದ ದಹನ ಸಂಸ್ಕಾರಕ್ಕೂ ಮುನ್ನ, ಮೃತ ಯುವತಿಯ ಕುಟುಂಬವು ಆಕೆಯ ಕಣ್ಣುಗಳನ್ನು ದಾನ ಮಾಡಿದೆ. ಚಿತಾಗಾರದಲ್ಲಿಯೂ ಸಹ ಹಣಕ್ಕಾಗಿ ಬೇಡಿಕೆ ಇಡಲಾಯಿತು, ಅದನ್ನೂ ಆ ತಂದೆ ಪಾವತಿಸಿದರು. ಇದಲ್ಲದೆ, ಮಹದೇವಪುರ ಪಾಲಿಕೆ ಅಧಿಕಾರಿಗಳಿಂದ ಮರಣ ಪ್ರಮಾಣಪತ್ರವನ್ನು ಪಡೆಯುವಲ್ಲಿಯೂ ಗಣನೀಯ ವಿಳಂಬವಾಯಿತು. ಹಿರಿಯ ಅಧಿಕಾರಿಯೊಬ್ಬರ ಮಧ್ಯಪ್ರವೇಶದ ಹೊರತಾಗಿಯೂ, ಆ ತಂದೆ ಲಂಚ ಪಾವತಿಸಿದ ನಂತರವೇ ಪ್ರಮಾಣಪತ್ರವನ್ನು ನೀಡಲಾಯಿತು.
*****
(Release ID: 2186243)
Visitor Counter : 6