ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಹರಿಯಾಣದ ಕುರುಕ್ಷೇತ್ರದಲ್ಲಿ ನೂತನ ಕ್ರಿಮಿನಲ್ ಕಾನೂನುಗಳ ಕುರಿತ ರಾಜ್ಯಮಟ್ಟದ ಪ್ರದರ್ಶನವನ್ನು ಉದ್ಘಾಟಿಸಿದರು ಮತ್ತು ಸುಮಾರು ರೂ. 900 ಕೋಟಿ ಮೌಲ್ಯದ ಹರಿಯಾಣ ಸರ್ಕಾರದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿ, ಶಂಕುಸ್ಥಾಪನೆ ನೆರವೇರಿಸಿದರು


ನಮ್ಮ ಸರ್ಕಾರಗಳು ಹರಿಯಾಣದ ಅಭಿವೃದ್ಧಿಗೆ ಯಾವುದೇ ಕೊರತೆಯಾಗದಂತೆ ಶ್ರಮಿಸಿವೆ ಮತ್ತು ಇದೇ ಮೊದಲ ಬಾರಿಗೆ, ಹರಿಯಾಣ ಸರ್ಕಾರವು ಸಂಕುಚಿತ ದೃಷ್ಟಿಕೋನದಿಂದ ಮುಕ್ತವಾಗಿ, ಪ್ರತಿಯೊಂದು ಜಿಲ್ಲೆ ಮತ್ತು ಸಮುದಾಯಕ್ಕೆ ಆಡಳಿತ ನೀಡುವ ಕೆಲಸ ಮಾಡಿದೆ

ಒಂದು ಕಾಲದಲ್ಲಿ ಸ್ವಜನಪಕ್ಷಪಾತದ ಮೂಲಕ ಉದ್ಯೋಗ ಹಂಚಿಕೆಗೆ ಕುಖ್ಯಾತವಾಗಿದ್ದ ಹರಿಯಾಣದಂತಹ ರಾಜ್ಯದಲ್ಲಿ, ಇಂದು 'ಪರ್ಚಿ' ಅಥವಾ 'ಖರ್ಚಿ' ಇಲ್ಲದೆ, ಕೇವಲ ಅರ್ಹತೆಯ ಆಧಾರದ ಮೇಲೆ ಉದ್ಯೋಗಗಳನ್ನು ನೀಡಲಾಗುತ್ತಿದೆ. ಇದು ನಮ್ಮ ಸರ್ಕಾರದ ಒಂದು ಪ್ರಮುಖ ಸಾಧನೆಯಾಗಿದೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನೀಡಿದ 'ನಾಗರಿಕರು ಮೊದಲು, ಘನತೆ ಮೊದಲು ಮತ್ತು ನ್ಯಾಯ ಮೊದಲು' ಎಂಬ ಮೂಲ ತತ್ವಗಳು ನೂತನ ಅಪರಾಧ ಕಾನೂನುಗಳ ಅಡಿಪಾಯವಾಗಿವೆ

ಹೊಸ ಕಾನೂನುಗಳಿಂದಾಗಿ, ಹರಿಯಾಣದ ಅಪರಾಧ ಸಾಬೀತು ಪ್ರಮಾಣವು ಶೇ. 40ರಿಂದ ಶೇ. 80ಕ್ಕೆ ದ್ವಿಗುಣಗೊಂಡಿದೆ. ಇದಕ್ಕಾಗಿ ಹರಿಯಾಣ ಸರ್ಕಾರವು ಅಭಿನಂದನೆಗೆ ಅರ್ಹವಾಗಿದೆ

ಹರಿಯಾಣದಲ್ಲಿ, ಶೇ. 71ರಷ್ಟು ದೋಷಾರೋಪ ಪಟ್ಟಿಗಳನ್ನು 60 ದಿನಗಳಲ್ಲಿ ಮತ್ತು ಶೇ. 83ರಷ್ಟನ್ನು 90 ದಿನಗಳಲ್ಲಿ ಸಲ್ಲಿಸಲಾಗಿದೆ, ಇದು ಆರಂಭಿಕ ಯಶಸ್ಸನ್ನು ಸೂಚಿಸುತ್ತದೆ

ಮೋದಿ ಸರ್ಕಾರದ ಅಡಿಯಲ್ಲಿ, ಪೊಲೀಸರು ಈಗ ಲಾಠಿಗಳ ಬದಲು ಡೇಟಾದೊಂದಿಗೆ ಮತ್ತು ಥರ್ಡ್-ಡಿಗ್ರಿ (ಕಠಿಣ ಶಿಕ್ಷೆಯ ವಿಚಾರಣೆ) ವಿಧಾನಗಳ ಬದಲು ವೈಜ್ಞಾನಿಕ ಸಾಕ್ಷ್ಯಗಳೊಂದಿಗೆ ಕೆಲಸ ಮಾಡುತ್ತಿದ್ದಾರೆ

ಹೊಸ ಕಾನೂನುಗಳ ಕಮೂಲಕ, ಅಪರಾಧ ನ್ಯಾಯ ವ್ಯವಸ್ಥೆಯ ಐದು ಸ್ತಂಭಗಳಾದ ಪೊಲೀಸ್, ಜೈಲುಗಳು, ನ್ಯಾಯಾಂಗ, ಪ್ರಾಸಿಕ್ಯೂಷನ್ ಮತ್ತು ವಿಧಿವಿಜ್ಞಾನವನ್ನು ಆನ್‌ಲೈನ್‌ನಲ್ಲಿ ಪರಸ್ಪರ ಸಂಪರ್ಕಿಸಲಾಗಿದೆ

ಹೊಸ ಕಾನೂನುಗಳಲ್ಲಿ ಇ-ಎಫ್‌ ಐ ಆರ್ ಗೆ ಅವಕಾಶವಿರುವುದರಿಂದ, ಮಹಿಳೆಯರು ಎಫ್‌ ಐ ಆರ್ ದಾಖಲಿಸಲು ಪೊಲೀಸ್ ಠಾಣೆಗಳಿಗೆ ಭೇಟಿ ನೀಡುವ ಅಗತ್ಯವಿಲ್ಲ

ಹೊಸ ಕಾನೂನುಗಳ ಅಡಿಯಲ್ಲಿ, ವಿದೇಶಕ್ಕೆ ಪರಾರಿಯಾದ ಅಪರಾಧಿಗಳ ಗೈರುಹಾಜರಿಯಲ್ಲಿ ವಿಚಾರಣೆ ನಡೆಸಬಹುದು

ಗೃಹ ಸಚಿವಾಲಯದ ತರಬೇತಿ ಕಾರ್ಯಕ್ರಮದ ಅಡಿಯಲ್ಲಿ 14.8 ಲಕ್ಷ ಪೊಲೀಸ್ ಸಿಬ್ಬಂದಿ, 42,000 ಜೈಲು ಅಧಿಕಾರಿಗಳು, 19,000 ನ್ಯಾಯಾಲಯ ಸಂಬಂಧಿತ ಸಿಬ್ಬಂದಿ, ಮತ್ತು 11,000 ಪಬ್ಲಿಕ್ ಪ್ರಾಸಿಕ್ಯೂಟರ್‌ ಗಳಿಗೆ ತರಬೇತಿ ನೀಡಲಾಗಿದೆ

140 ಕೋಟಿ ಭಾರತೀಯರು ಸ್ವದೇಶಿ ಉತ್ಪನ್ನಗಳನ್ನು ಅಳವಡಿಸಿಕೊಂಡರೆ, ಭಾರತವು ವಿಶ್ವದ ಅತಿದೊಡ್ಡ ಮಾರುಕಟ್ಟೆಯಾಗಲಿದೆ ಮತ್ತು ನಮ್ಮ ಆರ್ಥಿಕತೆಯು ಜಾಗತಿಕವಾಗಿ ಅಗ್ರ ಆರ್ಥಿಕತೆಗಳಲ್ಲಿ ಒಂದೆಂದು ಪರಿಗಣಿಸಲ್ಪಡುತ್ತದೆ

2047ರ ವೇಳೆಗೆ, ಜಾಗತಿಕವಾಗಿ ಪ್ರತಿಯೊಂದು ಕ್ಷೇತ್ರದಲ್ಲಿ ಭಾರತವನ್ನು ಶ್ರೇಷ್ಠವಾಗಿಸುವ ಮಾರ್ಗವು 'ಸ್ವದೇಶಿ' ಸಂಕಲ್ಪದ ಮೂಲಕವೇ ಹಾದುಹೋಗುತ್ತದೆ

Posted On: 03 OCT 2025 7:18PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಹರಿಯಾಣದ ಕುರುಕ್ಷೇತ್ರದಲ್ಲಿ ಹೊಸ ಕ್ರಿಮಿನಲ್ ಕಾನೂನುಗಳ ಕುರಿತ ರಾಜ್ಯ ಮಟ್ಟದ ಪ್ರದರ್ಶನವನ್ನು ಉದ್ಘಾಟಿಸಿದರು. ಜೊತೆಗೆ, ಅವರು ಹರಿಯಾಣ ಸರ್ಕಾರದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆಯನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಹರಿಯಾಣದ ಮುಖ್ಯಮಂತ್ರಿ ಶ್ರೀ ನಾಯಬ್ ಸಿಂಗ್ ಸೈನಿ, ಕೇಂದ್ರ ಗೃಹ ಕಾರ್ಯದರ್ಶಿ ಶ್ರೀ ಗೋವಿಂದ್ ಮೋಹನ್ ಮತ್ತು ಇತರ ಹಲವು ಗಣ್ಯರು ಉಪಸ್ಥಿತರಿದ್ದರು

1000807609.jpg

ತಮ್ಮ ಭಾಷಣದಲ್ಲಿ, ಕೇಂದ್ರ ಗೃಹ  ಮತ್ತು ಸಹಕಾರ ಸಚಿವರು, ನಾಯಬ್ ಸಿಂಗ್ ಸೈನಿ ಅವರ ಸರ್ಕಾರವು ಇಂದು ಸುಮಾರು 900 ಕೋಟಿ ರೂಪಾಯಿ ಮೌಲ್ಯದ 4 ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದ್ದು, 8 ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಿದೆ ಎಂದು ಹೇಳಿದರು. ಮುಂದುವರಿಸಿ ಮಾತನಾಡುತ್ತ, "ಸತತ ಮೂರನೇ ಬಾರಿಗೆ ಹರಿಯಾಣದ ಜನರು ನಮಗೆ ಬಹುಮತ ನೀಡಿದ್ದಾರೆ ಮತ್ತು ನಮ್ಮ ಸರ್ಕಾರಗಳು ಹರಿಯಾಣದ ಅಭಿವೃದ್ಧಿಗೆ ಯಾವುದೇ ಕೊರತೆಯಾಗದಂತೆ ಶ್ರಮಿಸಿವೆ. ಹರಿಯಾಣದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ, ನಮ್ಮ ಸರ್ಕಾರವು ಸಂಕುಚಿತ ದೃಷ್ಟಿಕೋನಗಳಿಂದ ಮುಕ್ತವಾಗಿ, ಪ್ರತಿಯೊಂದು ಜಿಲ್ಲೆ ಮತ್ತು ಸಮುದಾಯಕ್ಕೆ ಆಡಳಿತ ನೀಡುವ ವಿಶಾಲ ದೃಷ್ಟಿಕೋನದಿಂದ ಕೆಲಸ ಮಾಡಿದೆ" ಎಂದರು. ಶ್ರೀ ಶಾ ಅವರು, "ಒಂದು ಕಾಲದಲ್ಲಿ ಸ್ವಜನಪಕ್ಷಪಾತದ ಮೂಲಕ ಉದ್ಯೋಗ ಹಂಚಿಕೆಗೆ ಕುಖ್ಯಾತವಾಗಿದ್ದ ಹರಿಯಾಣದಂತಹ ರಾಜ್ಯದಲ್ಲಿ, ಇಂದು 'ಖರ್ಚಿ' (ಲಂಚ) ಅಥವಾ 'ಪರ್ಚಿ' (ನೆಪೋಟಿಸಂ/ಸ್ವಜನ ಪಕ್ಷಪಾತ) ಇಲ್ಲದೆ, ಕೇವಲ ಅರ್ಹತೆಯ ಆಧಾರದ ಮೇಲೆ ಉದ್ಯೋಗಗಳನ್ನು ನೀಡಲಾಗುತ್ತಿದೆ. ಇದು ನಮ್ಮ ಸರ್ಕಾರದ ಒಂದು ಪ್ರಮುಖ ಸಾಧನೆಯಾಗಿದೆ" ಎಂದು ಹೇಳಿದರು.

1000807236.jpg

ಬ್ರಿಟಿಷರು ಜಾರಿಗೊಳಿಸಿದ್ದ ಮೂರು ಅಪರಾಧ ಕಾನೂನುಗಳ ಬದಲಾಗಿ ಮೋದಿ ಸರ್ಕಾರವು ಜಾರಿಗೆ ತಂದಿರುವ ಮೂರು ಹೊಸ ಅಪರಾಧ ಕಾನೂನುಗಳ ಬಗ್ಗೆ ಮಾಹಿತಿ ನೀಡಲು ಇಂದು ಇಲ್ಲಿ ಭವ್ಯ ಪ್ರದರ್ಶನವನ್ನು ಆಯೋಜಿಸಲಾಗಿದೆ ಎಂದು ಶ್ರೀ ಅಮಿತ್ ಶಾ ಅವರು ಹೇಳಿದರು. 2026ರ ನಂತರ, ಪ್ರತಿಯೊಂದು ಎಫ್‌ ಐ ಆರ್ ಸುಮಾರು ಮೂರು ವರ್ಷಗಳಲ್ಲಿ ಸಂಪೂರ್ಣವಾಗಿ ಇತ್ಯರ್ಥಗೊಳ್ಳಲಿದೆ ಎಂದು ಗೃಹ ಸಚಿವರು ವಿಶ್ವಾಸ ವ್ಯಕ್ತಪಡಿಸಿದರು. ಹಳೆಯ ಕಾನೂನುಗಳನ್ನು ಬ್ರಿಟಿಷರು ತಮ್ಮ ವಸಾಹತುಶಾಹಿ ಆಡಳಿತವನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ರೂಪಿಸಿದ್ದರು ಎಂದು ಅವರು ಉಲ್ಲೇಖಿಸಿದರು. ನಾವು 1947ರ ಆಗಸ್ಟ್ 15 ರಂದು ಸ್ವಾತಂತ್ರ್ಯವನ್ನು ಪಡೆದರೂ, ಬ್ರಿಟಿಷ್ ಸಂಸತ್ತು ಜಾರಿಗೊಳಿಸಿದ್ದ ಕಾನೂನುಗಳಿಂದ ನಮಗೆ ಮುಕ್ತಿ ಸಿಕ್ಕಿರಲಿಲ್ಲ ಎಂದು ಶ್ರೀ ಶಾ ಅವರು ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನಾಯಕತ್ವದಲ್ಲಿ, ಬ್ರಿಟಿಷರ ಕಾಲದ ಮೂರು ಕಾನೂನುಗಳನ್ನು ರದ್ದುಗೊಳಿಸುವ ಮೂಲಕ 2024ರ ಜುಲೈ 1 ರಿಂದ 'ಭಾರತೀಯ ನ್ಯಾಯ ಸಂಹಿತೆ'ಯ ಹೊಸ ಯುಗ ಆರಂಭವಾಗಿದೆ. ಈ ಹೊಸ ಕಾನೂನುಗಳು ಶಿಕ್ಷೆ ನೀಡುವುದಕ್ಕಿಂತ ನ್ಯಾಯವನ್ನು ಖಾತ್ರಿಪಡಿಸುವುದನ್ನು ಮತ್ತು ನಮ್ಮ ಸಂವಿಧಾನವು ದೇಶದ ಬಡ ನಾಗರಿಕರಿಗೂ ನೀಡಿರುವ ಹಕ್ಕುಗಳನ್ನು ರಕ್ಷಿಸುವುದನ್ನು ಮುಖ್ಯ ಆಧಾರವಾಗಿ ಹೊಂದಿವೆ ಎಂದು ಅವರು ಒತ್ತಿ ಹೇಳಿದರು

1000807326.jpg

ಹಿಂದೆ, ಜಾಮೀನು ಪಡೆಯಲು ಸಾಧ್ಯವಾಗದ ಕಾರಣ, ಅರೋಪಿಗಳು ತಪ್ಪಿತಸ್ಥನೆಂದು ತೀರ್ಮಾನವಾಗದೆ ವರ್ಷಗಟ್ಟಲೆ ಜೈಲಿನಲ್ಲಿ ಉಳಿಯುತ್ತಿದ್ದರು ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಆದರೆ ಈಗ, ಶಿಕ್ಷೆಯ ಮೂರನೇ ಒಂದು ಭಾಗವನ್ನು ಪೂರ್ಣಗೊಳಿಸಿದ ನಂತರ, ಪೊಲೀಸರೇ ಅವರ ಬಿಡುಗಡೆಗೆ ಮನವಿ ಮಾಡುತ್ತಾರೆ. ಹಿಂದೆ, ಹರಿಯಾಣದಲ್ಲಿ ಅಪರಾಧ ಸಾಬೀತು ಪ್ರಮಾಣ ಸುಮಾರು ಶೇ. 40ರಷ್ಟಿತ್ತು, ಆದರೆ ಹೊಸ ಕಾನೂನುಗಳ ಜಾರಿಯೊಂದಿಗೆ ಈ ಪ್ರಮಾಣವು ದ್ವಿಗುಣಗೊಂಡು, ಶೇ. 80ನ್ನು ಮೀರಿದೆ ಎಂದು ಶ್ರೀ ಶಾ ಹೇಳಿದರು. ಪ್ರಧಾನಮಂತ್ರಿ ಮೋದಿ ಅವರು ನೀಡಿದ 'ನಾಗರಿಕರು ಮೊದಲು, ಘನತೆ ಮೊದಲು ಮತ್ತು ನ್ಯಾಯ ಮೊದಲು' ಎಂಬ ಮೂರು ತತ್ವಗಳ ಆಧಾರದ ಮೇಲೆ ಹೊಸ ಕಾನೂನುಗಳನ್ನು ರೂಪಿಸಲಾಗಿದೆ ಎಂದು ಶ್ರೀ ಅಮಿತ್ ಶಾ ಅವರು ಹೇಳಿದರು.ಅಲ್ಲದೆ, "ಪ್ರಧಾನಮಂತ್ರಿ ಮೋದಿ ಅವರು ಭಾರತದ ಅನೇಕ ಕ್ಷೇತ್ರಗಳಲ್ಲಿ ಸುಧಾರಣೆಗಳನ್ನು ತಂದಿದ್ದರೂ, 21ನೇ ಶತಮಾನದ ಅತ್ಯಂತ ಮಹತ್ವದ ಸುಧಾರಣೆಯೆಂದರೆ ನಮ್ಮ ಅಪರಾಧ ನ್ಯಾಯ ವ್ಯವಸ್ಥೆಯ ಈ ಮೂರು ಹೊಸ ಕಾನೂನುಗಳು" ಎಂದರು. ಇಂದು ನಮ್ಮ ಪೊಲೀಸರು ಲಾಠಿಗಳ ಬದಲು ಡೇಟಾದೊಂದಿಗೆ ಮತ್ತು ಥರ್ಡ್-ಡಿಗ್ರಿ  ವಿಧಾನಗಳ ಬದಲು ವೈಜ್ಞಾನಿಕ ಸಾಕ್ಷ್ಯಗಳೊಂದಿಗೆ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಪ್ರಮುಖವಾಗಿ ತಿಳಿಸಿದರು. ಈ ಕಾನೂನುಗಳ ಮೂಲಕ, ಅಪರಾಧ ನ್ಯಾಯ ವ್ಯವಸ್ಥೆಯ ಐದು ಸ್ತಂಭಗಳಾದ ಪೊಲೀಸ್, ಜೈಲುಗಳು, ನ್ಯಾಯಾಂಗ, ಪ್ರಾಸಿಕ್ಯೂಷನ್ ಮತ್ತು ವಿಧಿವಿಜ್ಞಾನವನ್ನು ಆನ್‌ ಲೈನ್‌ ನಲ್ಲಿ ಪರಸ್ಪರ ಸಂಪರ್ಕಿಸಲಾಗಿದೆ. ಹೊಸ ಕಾನೂನುಗಳಲ್ಲಿ ಮಹಿಳೆಯರು ಮತ್ತು ಮಕ್ಕಳಿಗಾಗಿ ಪ್ರತ್ಯೇಕ ಅಧ್ಯಾಯವನ್ನು ಸೇರಿಸಲಾಗಿದೆ ಎಂದು ಶ್ರೀ ಶಾ ಹೇಳಿದರು. ಇ-ಎಫ್‌ ಐ ಆರ್ ಮತ್ತು ಶೂನ್ಯ ಎಫ್‌ ಐ ಆರ್ ಪರಿಚಯಿಸುವುದರಿಂದ, ಮಹಿಳೆಯರು ಇನ್ನು ಮುಂದೆ ಪೊಲೀಸ್ ಠಾಣೆಗಳಿಗೆ ಭೇಟಿ ನೀಡುವ ಅಗತ್ಯವಿಲ್ಲ. ಎಲ್ಲಾ ರೀತಿಯ ವಶಪಡಿಸಿಕೊಳ್ಳುವಿಕೆಗಳ ವೀಡಿಯೋಗ್ರಫಿಯನ್ನು ದೃಶ್ಯ ಚಿತ್ರೀಕರಣ) ಕಡ್ಡಾಯಗೊಳಿಸಲಾಗಿದೆ ಮತ್ತು ಸಾಕ್ಷ್ಯದ ಸಂರಕ್ಷಣಾ ಸರಪಳಿಯನ್ನು ಖಚಿತಪಡಿಸಲಾಗಿದೆ. ಹೆಚ್ಚುವರಿಯಾಗಿ, ಏಳು ವರ್ಷ ಅಥವಾ ಅದಕ್ಕಿಂತ ಹೆಚ್ಚು ಶಿಕ್ಷೆ ವಿಧಿಸಬಹುದಾದ ಎಲ್ಲಾ ಅಪರಾಧಗಳಿಗೆ ವಿಧಿವಿಜ್ಞಾನ ತನಿಖೆಯನ್ನು ಕಡ್ಡಾಯಗೊಳಿಸಲಾಗಿದೆ.

1000807207.jpg

ಹೊಸ ಕ್ರಿಮಿನಲ್ ಕಾನೂನುಗಳಲ್ಲಿ ಮೊದಲ ಬಾರಿಗೆ ಭಯೋತ್ಪಾದನೆ, ಸಂಘಟಿತ ಅಪರಾಧ ಮತ್ತು ಗುಂಪು ಹತ್ಯೆಯಂತಹ ಅಪರಾಧಗಳನ್ನು ವ್ಯಾಖ್ಯಾನಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಹೆಚ್ಚುವರಿಯಾಗಿ, ಪೊಲೀಸ್, ನ್ಯಾಯಾಂಗ ಮತ್ತು ಪ್ರಾಸಿಕ್ಯೂಷನ್‌ ಗೆ ಇದೇ ಮೊದಲ ಬಾರಿಗೆ ಕಾಲಮಿತಿಯನ್ನು ನಿಗದಿಪಡಿಸಲಾಗಿದೆ. ದೇಶದಿಂದ ಪರಾರಿಯಾಗುವ ಅಪರಾಧಿಗಳಿಗಾಗಿ 'ಟ್ರಯಲ್ ಇನ್ ಅಬ್ಸೆನ್ಷಿಯಾ' (ಗೈರುಹಾಜರಿಯಲ್ಲಿ ವಿಚಾರಣೆ) ಅವಕಾಶವನ್ನು ಪರಿಚಯಿಸಲಾಗಿದೆ ಎಂದು ಅವರು ಹೇಳಿದರು. ಹೊಸ ಕ್ರಿಮಿನಲ್ ಕಾನೂನುಗಳು ಜಾರಿಯಾದ ಒಂದು ವರ್ಷದೊಳಗೆ, ಸುಮಾರು ಶೇ. 53ರಷ್ಟು ಎಫ್‌ಐಆರ್‌ಗಳಿಗೆ 60 ದಿನಗಳಲ್ಲಿ ಮತ್ತು ಶೇ. 65ರಷ್ಟು ಪ್ರಕರಣಗಳಿಗೆ 90 ದಿನಗಳಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ ಎಂದು ಶ್ರೀ ಶಾ ಅವರು ಗಮನಸೆಳೆದರು. ಹರಿಯಾಣದಲ್ಲಿ, ಶೇ. 71ರಷ್ಟು ದೋಷಾರೋಪ ಪಟ್ಟಿಗಳನ್ನು 60 ದಿನಗಳಲ್ಲಿ ಮತ್ತು ಶೇ. 83ರಷ್ಟನ್ನು 90 ದಿನಗಳಲ್ಲಿ ಸಲ್ಲಿಸಲಾಗಿದೆ, ಇದು ಆರಂಭಿಕ ಯಶಸ್ಸನ್ನು ಸೂಚಿಸುತ್ತದೆ.

1000807306.jpg

ಕೇಂದ್ರ ಗೃಹ ಸಚಿವಾಲಯ, ಭಾರತ ಸರ್ಕಾರವು ತೀವ್ರ ತರಬೇತಿ ಕಾರ್ಯಕ್ರಮದ ಮೂಲಕ 14.8 ಲಕ್ಷ ಪೊಲೀಸ್ ಸಿಬ್ಬಂದಿಗೆ, 42,000 ಜೈಲು ಅಧಿಕಾರಿಗಳಿಗೆ, 19,000 ನ್ಯಾಯಾಲಯ ಸಂಬಂಧಿತ ಸಿಬ್ಬಂದಿಗೆ ಮತ್ತು 11,000 ಪಬ್ಲಿಕ್ ಪ್ರಾಸಿಕ್ಯೂಟರ್‌ ಗಳಿಗೆ ತರಬೇತಿ ನೀಡಿದೆ ಎಂದು ಶ್ರೀ ಅಮಿತ್ ಶಾ ಅವರು ಹೇಳಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನೀಡಿದ ಆತ್ಮನಿರ್ಭರತೆಯ ಕರೆಯು 2047ರ ವೇಳೆಗೆ ಶ್ರೇಷ್ಠ ಭಾರತವನ್ನು ನಿರ್ಮಿಸಲು ದಾರಿ ಮಾಡಿಕೊಡುತ್ತದೆ ಎಂದು ಕೇಂದ್ರ ಗೃಹ ಸಚಿವರು ಮತ್ತು ಸಹಕಾರ ಸಚಿವರು ಹೇಳಿದರು. 140 ಕೋಟಿ ಭಾರತೀಯರು ನಮ್ಮ ದೇಶದಲ್ಲಿ ತಯಾರಾದ ಉತ್ಪನ್ನಗಳನ್ನು ಖರೀದಿಸಿದರೆ, ಭಾರತವು ವಿಶ್ವದ ಅತಿದೊಡ್ಡ ಮಾರುಕಟ್ಟೆಯಾಗಲಿದ್ದು, ನಮ್ಮ ಆರ್ಥಿಕತೆಯು ಪ್ರಗತಿ ಸಾಧಿಸಲಿದೆ ಎಂದು ಅವರು ಹೇಳಿದರು. 2047ರ ವೇಳೆಗೆ, ಭಾರತವು ಜಾಗತಿಕವಾಗಿ ಪ್ರತಿಯೊಂದು ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುತ್ತದೆ ಮತ್ತು ಈ ಗುರಿಯನ್ನು ತಲುಪುವ ಮಾರ್ಗವು ಆತ್ಮನಿರ್ಭರತೆ ಮತ್ತು ಸ್ವದೇಶೀಕರಣದ ಮೂಲಕವೇ ಸಾಗುತ್ತದೆ ಎಂದು ಶ್ರೀ ಶಾ ಅವರು ಒತ್ತಿ ಹೇಳಿದರು. ದೇಶದೊಳಗೆ ಉತ್ಪಾದಿಸುವುದು, ಉತ್ಪಾದನೆಯನ್ನು ಹೆಚ್ಚಿಸುವುದು ಮತ್ತು ಪ್ರತಿಯೊಬ್ಬ ಭಾರತೀಯನು ಸ್ವದೇಶಿ ವಸ್ತುಗಳನ್ನು ಖರೀದಿಸುವುದೇ ಭಾರತವನ್ನು ವಿಶ್ವದಲ್ಲಿ ಅಗ್ರಸ್ಥಾನಕ್ಕೆ ಕೊಂಡೊಯ್ಯುವ ಪ್ರಮುಖ ಮಾರ್ಗವಾಗಿದೆ. ಈ ದೀಪಾವಳಿಯಂದು ಕೇವಲ ಭಾರತದಲ್ಲಿ ತಯಾರಾದ ಉತ್ಪನ್ನಗಳನ್ನು ಬಳಸುವುದಾಗಿ ಪ್ರತಿಜ್ಞೆ ಮಾಡುವಂತೆ ಶ್ರೀ ಶಾ ಅವರು ಹರಿಯಾಣದ ಜನರನ್ನು ಒತ್ತಾಯಿಸಿದರು, ಏಕೆಂದರೆ ಇದು ಪ್ರಧಾನಿ ಮೋದಿಯವರ ಆತ್ಮನಿರ್ಭರತೆಯ ದೃಷ್ಟಿಕೋನವನ್ನು ಈಡೇರಿಸುತ್ತದೆ ಎಂದು ಅವರು ಹೇಳಿದರು.

1000807519.jpg

 

*****


(Release ID: 2174680) Visitor Counter : 5