ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
azadi ka amrit mahotsav

ಉತ್ತಮ ಗುಣಮಟ್ಟದ ಡಿಜಿಟಲ್ ಶಿಕ್ಷಣಕ್ಕೆ ಪ್ರವೇಶವನ್ನು ಎಲ್ಲರಿಗೂ ಮುಕ್ತವಾಗಿಸುವ ಉದ್ದೇಶದಿಂದ ವಿನ್ಯಾಸಗೊಳಿಸಲಾದ NIELIT ಡಿಜಿಟಲ್ ವಿಶ್ವವಿದ್ಯಾಲಯ ವೇದಿಕೆಗೆ ಕೇಂದ್ರ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಚಾಲನೆ ನೀಡಲಿದ್ದಾರೆ


DNHDD ಕೇಂದ್ರಾಡಳಿತ ಪ್ರದೇಶದ ಮುಜಫರ್‌ ಪುರ (ಬಿಹಾರ), ಬಾಲಸೋರ್ (ಒಡಿಶಾ), ತಿರುಪತಿ (ಆಂಧ್ರಪ್ರದೇಶ), ಲುಂಗ್ಲೈ (ಮಿಜೋರಾಂ) ಮತ್ತು ದಮನ್‌ ನಲ್ಲಿ ಐದು ಹೊಸ NIELIT ಕೇಂದ್ರಗಳನ್ನು ವರ್ಚುವಲ್ ಆಗಿ ಉದ್ಘಾಟಿಸಲಾಗುವುದು

NIELIT ಡಿಜಿಟಲ್ ವಿಶ್ವವಿದ್ಯಾಲಯವು ಯುವಜನರನ್ನು ಭವಿಷ್ಯಕ್ಕೆ ಸಿದ್ಧಗೊಳಿಸಲು ಕೃತಕ ಬುದ್ಧಿಮತ್ತೆ (AI), ಸೈಬರ್‌ ಸುರಕ್ಷತೆ, ಡೇಟಾ ಸೈನ್ಸ್, ಸೆಮಿಕಂಡಕ್ಟರ್‌ ಗಳು ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ನೀಡಲಿದೆ

ಡಿಜಿಟಲ್ ಜಗತ್ತಿನಲ್ಲಿನ ಕೌಶಲ್ಯದ ಅಂತರವನ್ನು ಕಡಿಮೆ ಮಾಡಲು, ದೇಶದ ಪ್ರಮುಖ ಉದ್ಯಮ ಪಾಲುದಾರರು ಶಿಕ್ಷಣ ಸಂಸ್ಥೆಗಳೊಂದಿಗೆ ಒಪ್ಪಂದ ಪತ್ರಗಳಿಗೆ ಸಹಿ ಹಾಕಲಿದ್ದಾರೆ, ಉದ್ಯಮದ ಅಗತ್ಯಗಳಿಗೆ ತಕ್ಕಂತೆ ಕೋರ್ಸ್‌ಗಳನ್ನು ವಿನ್ಯಾಸಗೊಳಿಸಲು ಈ ಸಹಯೋಗವು ಸಹಾಯ ಮಾಡಲಿದೆ

प्रविष्टि तिथि: 01 OCT 2025 2:35PM by PIB Bengaluru

ಉತ್ತಮ ಗುಣಮಟ್ಟದ ಡಿಜಿಟಲ್ ಶಿಕ್ಷಣಕ್ಕೆ ಪ್ರವೇಶವನ್ನು ಎಲ್ಲರಿಗೂ ಸಮಾನವಾಗಿ ಕಲ್ಪಿಸುವ ನಿಟ್ಟಿನಲ್ಲಿ ವಿನ್ಯಾಸಗೊಳಿಸಲಾಗಿರುವ NIELIT ಡಿಜಿಟಲ್ ವಿಶ್ವವಿದ್ಯಾಲಯ (NDU) ವೇದಿಕೆಯನ್ನು ಗೌರವಾನ್ವಿತ ಕೇಂದ್ರ ರೈಲ್ವೆ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಹಾಗೂ ವಾರ್ತಾ ಮತ್ತು ಪ್ರಸಾರ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ನಾಳೆ ನವದೆಹಲಿಯಲ್ಲಿ ಉದ್ಘಾಟಿಸಲಿದ್ದಾರೆ.

ಈ ನೂತನ ವೇದಿಕೆಯು ಯುವಜನರನ್ನು ಭವಿಷ್ಯಕ್ಕೆ ಸಿದ್ಧಗೊಳಿಸಲು, ಕೃತಕ ಬುದ್ಧಿಮತ್ತೆ (AI), ಸೈಬರ್ ಭದ್ರತೆ, ದತ್ತಾಂಶ ವಿಜ್ಞಾನ (Data Science), ಸೆಮಿಕಂಡಕ್ಟರ್‌ ಗಳು ಮತ್ತು ಸಂಬಂಧಿತ ವಿಶೇಷ ತಂತ್ರಜ್ಞಾನಗಳಲ್ಲಿ ಉದ್ಯಮ-ಕೇಂದ್ರಿತ ಕಾರ್ಯಕ್ರಮಗಳನ್ನು ನೀಡಲಿದೆ. ಇದಕ್ಕಾಗಿ, ಹೊಂದಿಕೊಳ್ಳುವ ಡಿಜಿಟಲ್ ಕಲಿಕಾ ವಿಧಾನಗಳು ಮತ್ತು ವರ್ಚುವಲ್ ಪ್ರಯೋಗಾಲಯಗಳ ಸೌಲಭ್ಯ ಇರಲಿದೆ.

ಈ ಸಂದರ್ಭದಲ್ಲಿ, ಕೇಂದ್ರ ಸಚಿವರು ಐದು ಹೊಸ NIELIT ಕೇಂದ್ರಗಳನ್ನು ವರ್ಚುವಲ್  ಮೂಲಕ ಲೋಕಾರ್ಪಣೆ ಮಾಡಲಿದ್ದಾರೆ. ಈ ಹೊಸ ಕೇಂದ್ರಗಳು ಮುಜಾಫರ್‌ಪುರ (ಬಿಹಾರ), ಬಾಲಸೋರ್ (ಒಡಿಶಾ), ತಿರುಪತಿ (ಆಂಧ್ರ ಪ್ರದೇಶ), ದಮನ್ (ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯು) ಮತ್ತು ಲುಂಗ್ಲೈ (ಮಿಜೋರಾಂ) ಗಳಲ್ಲಿ ಕಾರ್ಯಾರಂಭ ಮಾಡಲಿವೆ. ಈ ಕೇಂದ್ರಗಳ ಸೇರ್ಪಡೆಯೊಂದಿಗೆ, NIELIT ಸಂಸ್ಥೆಯು ಭಾರತದ ತಾಂತ್ರಿಕ ಪ್ರಗತಿಯಲ್ಲಿ ತನ್ನ ಪ್ರಮುಖ ಪಾತ್ರವನ್ನು ಮತ್ತಷ್ಟು ಬಲಪಡಿಸಲಿದೆ.

ಈ ಕಾರ್ಯಕ್ರಮದಲ್ಲಿ "ಶಿಕ್ಷಣದ ಡಿಜಿಟಲೀಕರಣದಲ್ಲಿ ಕೃತಕ ಬುದ್ಧಿಮತ್ತೆಯ ಪಾತ್ರ" ಎಂಬ ವಿಷಯದ ಕುರಿತು ಚರ್ಚಾಗೋಷ್ಠಿ ನಡೆಯಲಿದ್ದು, ಇದರಲ್ಲಿ ಶಿಕ್ಷಣ ಮತ್ತು ಉದ್ಯಮ ಕ್ಷೇತ್ರದ ಗಣ್ಯ ತಜ್ಞರು ಭಾಗವಹಿಸಲಿದ್ದಾರೆ. ಜೊತೆಗೆ, NIELIT ಮತ್ತು ಕಿಂಡ್ರಿಲ್ (Kyndryl) ಸಂಸ್ಥೆಗಳು ಜಂಟಿಯಾಗಿ ನಡೆಸಿದ DevSecOps ಕೋರ್ಸ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭವನ್ನು ಸಹ ಆಯೋಜಿಸಲಾಗಿದೆ.

ಹೆಚ್ಚುವರಿಯಾಗಿ, ಉದ್ಯಮ-ಶೈಕ್ಷಣಿಕ ಸಹಯೋಗವನ್ನು ಬಲಪಡಿಸಲು ಪ್ರಮುಖ ಉದ್ಯಮ ಪಾಲುದಾರರೊಂದಿಗೆ ಒಡಂಬಡಿಕೆ ಪತ್ರಗಳಿಗೆ (MoUs) ಸಹಿ ಹಾಕಲಾಗುವುದು.

ಈ ಮಹತ್ವದ ಕಾರ್ಯಕ್ರಮದಲ್ಲಿ ದೇಶಾದ್ಯಂತದ NIELIT ವಿದ್ಯಾರ್ಥಿಗಳು, ಹೆಸರಾಂತ ಶಿಕ್ಷಣ ತಜ್ಞರು ಮತ್ತು ತಂತ್ರಜ್ಞಾನ ತಜ್ಞರು ಸೇರಿದಂತೆ 1,500 ಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆಯಿದೆ. ಕಾರ್ಯಕ್ರಮದಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನದ ವಿವಿಧ ವಿಭಾಗಗಳಲ್ಲಿ NIELIT ನ ಕೌಶಲ್ಯ ಮತ್ತು ಕಲಿಕಾ ಮಾದರಿಗಳ ಸಾಮರ್ಥ್ಯವನ್ನು ಪ್ರದರ್ಶಿಸುವ ವಿಶೇಷ ಮಳಿಗೆಗಳನ್ನು ಸಹ ಸ್ಥಾಪಿಸಲಾಗುತ್ತದೆ.

NIELIT ಬಗ್ಗೆ

ಭಾರತ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ (MeitY) ಅಧೀನದಲ್ಲಿರುವ ಸ್ವಾಯತ್ತ ವೈಜ್ಞಾನಿಕ ಸಂಸ್ಥೆಯಾದ ರಾಷ್ಟ್ರೀಯ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಂಸ್ಥೆ (NIELIT), ಭಾರತದಲ್ಲಿ ಕೌಶಲ್ಯಾಭಿವೃದ್ಧಿ ಮತ್ತು ಡಿಜಿಟಲ್ ಸಬಲೀಕರಣ ಕ್ಷೇತ್ರದಲ್ಲಿ ಅಗ್ರಗಣ್ಯ ಸಂಸ್ಥೆಯಾಗಿ ಗುರುತಿಸಿಕೊಂಡಿದೆ.

ತನ್ನ 56 NIELIT ಕೇಂದ್ರಗಳು, 750ಕ್ಕೂ ಅಧಿಕ ಮಾನ್ಯತೆ ಪಡೆದ ಸಂಸ್ಥೆಗಳು ಮತ್ತು 9,000ಕ್ಕೂ ಹೆಚ್ಚಿನ ಸೌಲಭ್ಯ ಕೇಂದ್ರಗಳ ಮೂಲಕ ದೇಶದಾದ್ಯಂತ ತನ್ನ ಬೃಹತ್ ಜಾಲವನ್ನು ಹೊಂದಿರುವ NIELIT, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ಸಂವಹನ ತಂತ್ರಜ್ಞಾನ (E&ICT) ವಲಯದ ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಲಕ್ಷಾಂತರ ವಿದ್ಯಾರ್ಥಿಗಳನ್ನು ಕೌಶಲ್ಯಯುತರನ್ನಾಗಿಸಿ ಪ್ರಮಾಣೀಕರಿಸಿದೆ.

ಶಿಕ್ಷಣ ಸಚಿವಾಲಯವು NIELIT ಸಂಸ್ಥೆಗೆ ವಿಶಿಷ್ಟ ಶ್ರೇಣಿಯ ಅಡಿಯಲ್ಲಿ "ಪರಿಗಣಿತ ವಿಶ್ವವಿದ್ಯಾಲಯ" (Deemed to be University) ಎಂಬ ಗೌರವಸ್ಥಾನವನ್ನು ನೀಡಿದೆ. ಪಂಜಾಬ್‌ ನ ರೋಪರ್‌ ನಲ್ಲಿ ಮುಖ್ಯ ಕ್ಯಾಂಪಸ್ ಹಾಗೂ ಐಜ್ವಾಲ್, ಅಗರ್ತಲಾ, ಔರಂಗಾಬಾದ್, ಕ್ಯಾಲಿಕಟ್, ಗೋರಖ್‌ ಪುರ, ಇಂಫಾಲ್, ಇಟಾನಗರ್, ಅಜ್ಮೀರ್ (ಕೇಕ್ರಿ), ಕೊಹಿಮಾ, ಪಾಟ್ನಾ ಮತ್ತು ಶ್ರೀನಗರಗಳಲ್ಲಿ ಹನ್ನೊಂದು ಘಟಕ ಕ್ಯಾಂಪಸ್‌ ಗಳನ್ನು ಹೊಂದಿರುವ ಈ ಸಂಸ್ಥೆಯು, ಡಿಜಿಟಲ್ ತಂತ್ರಜ್ಞಾನಗಳನ್ನು ಸದುಪಯೋಗಪಡಿಸಿಕೊಂಡು E&ICT ಕ್ಷೇತ್ರದ ಉನ್ನತ ಶಿಕ್ಷಣದಲ್ಲಿ ಕ್ರಾಂತಿಯನ್ನುಂಟು ಮಾಡುವುದನ್ನು ತನ್ನ ಪರಮೋಚ್ಛ ಗುರಿಯಾಗಿಸಿಕೊಂಡಿದೆ.

 

*****


(रिलीज़ आईडी: 2174062) आगंतुक पटल : 45
इस विज्ञप्ति को इन भाषाओं में पढ़ें: Malayalam , English , Urdu , हिन्दी , Punjabi , Telugu