ಆಹಾರ ಸಂಸ್ಕರಣಾ ಉದ್ದಿಮೆಗಳ ಸಚಿವಾಲಯ
ʻವಿಶ್ವ ಆಹಾರ ಭಾರತ-2025ʼ ಕಾರ್ಯಕ್ರಮವನ್ನು ಉದ್ಘಾಟಿಸಿದ ಪ್ರಧಾನಮಂತ್ರಿ
ʻವಿಶ್ವ ಆಹಾರ ಭಾರತʼವು ಸಂದರ್ಭೋಚಿತ, ವಿಷಯಾಧಾರಿತ ಮತ್ತು ಸೃಜನಶೀಲ ಕಾರ್ಯಕ್ರಮವಾಗಿ ಹೊರಹೊಮ್ಮಿದೆ: ಗೌರವಾನ್ವಿತ ಪ್ರಧಾನಮಂತ್ರಿ
ಆಹಾರ ಸಂಸ್ಕರಣಾ ಕ್ಷೇತ್ರದ ಪ್ರಮುಖ ದೇಶೀಯ ಮತ್ತು ಜಾಗತಿಕ ಕಂಪನಿಗಳೊಂದಿಗೆ 76,000 ಕೋಟಿ ರೂ.ಗಳ ಒಪ್ಪಂದಗಳಿಗೆ ಸಹಿ ಹಾಕಲು ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯ ಅನುಕೂಲ ಮಾಡಿಕೊಟ್ಟಿದೆ
Posted On:
27 SEP 2025 9:39AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2025ರ ಸೆಪ್ಟೆಂಬರ್ 25 ರಂದು ನವದೆಹಲಿಯ ಭಾರತ್ ಮಂಟಪದಲ್ಲಿ ʻವಿಶ್ವ ಆಹಾರ ಭಾರತ-2025’ರ ನಾಲ್ಕನೇ ಆವೃತ್ತಿಯನ್ನು ಉದ್ಘಾಟಿಸಿದರು. ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯ ಆಯೋಜಿಸಿದ್ದ ಈ ಮಹತ್ವಾಕಾಂಕ್ಷೆಯ ಜಾಗತಿಕ ಕಾರ್ಯಕ್ರಮವು ಭಾರತವನ್ನು ಮತ್ತೊಮ್ಮೆ "ವಿಶ್ವದ ಆಹಾರ ಬುಟ್ಟಿ" ಎಂದು ಬಿಂಬಿಸಿತು ಮತ್ತು ಆಹಾರ ಸಂಸ್ಕರಣೆಯಲ್ಲಿ ದೇಶದ ನಾಯಕತ್ವವನ್ನು ಬಲಪಡಿಸಿತು. ʻವಿಶ್ವ ಆಹಾರ ಭಾರತʼದ ವಸ್ತುಪ್ರದರ್ಶನ ಪೆವಿಲಿಯನ್‌ಗೆ ಭೇಟಿ ನೀಡಿದ ಪ್ರಧಾನಮಂತ್ರಿಯವರು, ಪೌಷ್ಟಿಕತೆ, ತೈಲ ಬಳಕೆ ತಗ್ಗಿಸುವ ಹಾಗೂ ಪ್ಯಾಕೇಜಿಂಗ್‌ನಲ್ಲಿ ಆರೋಗ್ಯ ಅಂಶಗಳಿಗೆ ಹೆಚ್ಚಿನ ಒತ್ತು ನೀಡುತ್ತಿರುವ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು. ರಷ್ಯಾದ ಉಪ ಪ್ರಧಾನಮಂತ್ರಿ ಶ್ರೀ ಡಿಮಿಟ್ರಿ ಪಟ್ರುಶೆವ್, ಕೇಂದ್ರ ಸಚಿವರಾದ ಶ್ರೀ ಚಿರಾಗ್ ಪಾಸ್ವಾನ್ ಮತ್ತು ಶ್ರೀ ಪ್ರತಾಪರಾವ್ ಜಾಧವ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಉದ್ಘಾಟನಾ ಭಾಷಣದಲ್ಲಿ ಮಾತನಾಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, "ವಿಶ್ವ ಆಹಾರ ಭಾರತ ಕಾರ್ಯಕ್ರಮವು ಸಂದರ್ಭೋಚಿತ, ವಿಷಯಾಧಾರಿತ ಮತ್ತು ಸೃಜನಶೀಲ ಕಾರ್ಯಕ್ರಮವಾಗಿ ಹೊರಹೊಮ್ಮಿದೆ ಎಂದು ಹೇಳಿದರು. ಭಾರತದ ಅನನ್ಯ ಸಾಮರ್ಥ್ಯ, ವೈವಿಧ್ಯತೆ, ಬೇಡಿಕೆ ಮತ್ತು ಪ್ರಮಾಣವು ಜಾಗತಿಕ ಆಹಾರ ಆರ್ಥಿಕತೆಯಲ್ಲಿ ನಿರ್ಣಾಯಕವಾದ ಸ್ಪರ್ಧಾತ್ಮಕ ಅನುಕೂಲತೆಯನ್ನು ದೇಶಕ್ಕೆ ಒದಗಿಸಿವೆ. ಇಪ್ಪತ್ತೊಂದನೇ ಶತಮಾನವು ವಿಶ್ವದ ಮುಂದೆ ಅನೇಕ ಸವಾಲುಗಳನ್ನು ಒಡ್ಡಿದೆ. ಇಂತಹ ಸವಾಲುಗಳು ಉದ್ಭವಿಸಿದಾಗಲೆಲ್ಲಾ, ಭಾರತವು ಸಕಾರಾತ್ಮಕ ಪಾತ್ರ ವಹಿಸಲು ಮುಂದೆ ಬಂದಿದೆ ಮತ್ತು ಜಾಗತಿಕ ಆಹಾರ ಭದ್ರತೆಗೆ ನಿರಂತರವಾಗಿ ಕೊಡುಗೆ ನೀಡಿದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು.
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾದ ಶ್ರೀ ನಿತಿನ್ ಗಡ್ಕರಿ ಮತ್ತು ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವರಾದ ಶ್ರೀ ಚಿರಾಗ್ ಪಾಸ್ವಾನ್ ಅವರ ಸಹ-ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ʻಸಿಇಒ ದುಂಡುಮೇಜಿನ ಸಭೆʼಯನ್ನು ಇಂದು ಆಯೋಜಿಸಲಾಗಿತ್ತು. ದುಂಡುಮೇಜಿನ ಸಭೆಯಲ್ಲಿ ಆಹಾರ ಸಂಸ್ಕರಣೆ ಮತ್ತು ರೈಲ್ವೆ ಖಾತೆ ಸಹಾಯಕ ಸಚಿವ ಶ್ರೀ ರವ್ನೀತ್ ಸಿಂಗ್ ಹಾಗೂ ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಸಚಿವಾಲಯಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಶ್ರೀ ನಿತಿನ್ ಗಡ್ಕರಿ ಅವರು ತಮ್ಮ ವಿಶೇಷ ಭಾಷಣದಲ್ಲಿ, “ದೇಶದ ಜಿಡಿಪಿಯಲ್ಲಿ ಕೃಷಿ ಸಂಸ್ಕರಣೆಯ ಪಾಲನ್ನು ಹೆಚ್ಚಿಸುವ ಮೂಲಕ ಮಾತ್ರ ಪ್ರಧಾನಮಂತ್ರಿಯವರ ʻಆತ್ಮನಿರ್ಭರ ಭಾರತʼದ ದೃಷ್ಟಿಕೋನವನ್ನು ಸಾಕಾರಗೊಳಿಸಬಹುದು,ʼʼ ಎಂದು ಹೇಳಿದರು. ಶ್ರೀ ಚಿರಾಗ್ ಪಾಸ್ವಾನ್ ಅವರು ಕಳೆದ ಆವೃತ್ತಿಯಿಂದ ಕೈಗೊಂಡ ಕ್ರಮಗಳ ಬಗ್ಗೆ ಮಾತನಾಡಿದರು. ಉದ್ಯಮ ಮತ್ತು ಸರ್ಕಾರದ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುವ ಭರವಸೆ ನೀಡಿದರು. ಬ್ರಿಟಾನಿಯಾ, ಪೆಪ್ಸಿಕೋ, ಅಮುಲ್, ಐಟಿಸಿ, ನೆಸ್ಲೆ, ಮೊಂಡೆಲೆಜ್, ಟಾಟಾ ಕನ್ಸ್ಯೂಮರ್ ಪ್ರಾಡಕ್ಟ್ಸ್, ಕೋಕಾ-ಕೋಲಾ ಮತ್ತು ಮಾರಿಕೊ ಸೇರಿದಂತೆ ಪ್ರಮುಖ ಕಂಪನಿಗಳ ʻಸಿಇಒʼಗಳು ತಮ್ಮ ಒಳನೋಟಗಳನ್ನು ಹಂಚಿಕೊಂಡರು.
ಮಣಿಪುರ ರಾಜ್ಯ, ರಷ್ಯಾ, ಗ್ರಾಮೀಣಾಭಿವೃದ್ಧಿ ಸಚಿವಾಲಯ, ʻಡಿಪಿಐಐಟಿʼ ಮತ್ತು ಭಾರತ ಸರ್ಕಾರದ ಪಶುಸಂಗೋಪನಾ ಇಲಾಖೆ ವತಿಯಿಂದ ಬೆಳಗ್ಗೆ ಭಾರತ ಮಂಟಪದಲ್ಲಿ ಜ್ಞಾನ ಅಧಿವೇಶನಗಳನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಮೊದಲ ದಿನದಂದು, ಆಹಾರ ಸಂಸ್ಕರಣಾ ಉದ್ಯಮಗಳ ಸಚಿವಾಲಯವು ಆಹಾರ ಸಂಸ್ಕರಣಾ ಕ್ಷೇತ್ರದ ಪ್ರಮುಖ ದೇಶೀಯ ಮತ್ತು ಜಾಗತಿಕ ಕಂಪನಿಗಳೊಂದಿಗೆ 76,000 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಒಪ್ಪಂದಗಳಿಗೆ ಸಹಿ ಹಾಕಲು ಅನುಕೂಲ ಮಾಡಿಕೊಟ್ಟಿತು. ಈ ಹೂಡಿಕೆಗಳು ಪಾನೀಯಗಳು, ಕ್ಷೀರ ಉತ್ಪನ್ನ ಮತ್ತು ಸಿಹಿತಿನಿಸು ಸೇರಿದಂತೆ ಪ್ರಮುಖ ಉಪ-ವಲಯಗಳಿಗೆ ಸಂಬಂಧಿಸಿದವಾಗಿದ್ದು ಗುಜರಾತ್, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದಿಂದ ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ಪಂಜಾಬ್, ಪಶ್ಚಿಮ ಬಂಗಾಳ ಮತ್ತು ಈಶಾನ್ಯ ಪ್ರದೇಶದವರೆಗೆ ವಿಶಾಲ ಪ್ರದೇಶಗಳಲ್ಲಿ ವ್ಯಾಪಿಸಿವೆ.
*****
(Release ID: 2172073)
Visitor Counter : 9