ಕೃಷಿ ಸಚಿವಾಲಯ
azadi ka amrit mahotsav

ಅತಿವೃಷ್ಟಿ ಮತ್ತು ನೆರೆ ಪೀಡಿತ ರಾಜ್ಯಗಳಾದ ಹಿಮಾಚಲ ಪ್ರದೇಶ, ಪಂಜಾಬ್ ಮತ್ತು ಉತ್ತರಾಖಂಡದ ರೈತರಿಗೆ ʻಪಿ.ಎಂ.-ಕಿಸಾನ್ʼ ಯೋಜನೆಯ 21ನೇ ಕಂತನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಬಿಡುಗಡೆ ಮಾಡಿದ ಕೇಂದ್ರ ಕೃಷಿ ಸಚಿವರು


ಮೂರು ರಾಜ್ಯಗಳ 27 ಲಕ್ಷಕ್ಕೂ ಹೆಚ್ಚು ರೈತರಿಗೆ 540 ಕೋಟಿ ರೂ.ಗೂ ಅಧಿಕ ಹಣ ವರ್ಗಾವಣೆ

ಪ್ರಕಟಣಾ ದಿನಾಂಕ: 26 SEP 2025 2:49PM by PIB Bengaluru

ʻಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿʼ(ಪಿ.ಎಂ.-ಕಿಸಾನ್) ಯೋಜನೆಯ 21ನೇ ಕಂತಿನ ಬಿಡುಗಡೆಯನ್ನು ಮಾನ್ಯ ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಇಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಘೋಷಿಸಿದರು. ಇತ್ತೀಚಿಗೆ ಪ್ರವಾಹ ಮತ್ತು ಭೂಕುಸಿತದಿಂದ ತೀವ್ರವಾಗಿ ಬಾಧಿತವಾಗಿರುವ ಹಿಮಾಚಲ ಪ್ರದೇಶ, ಪಂಜಾಬ್ ಮತ್ತು ಉತ್ತರಾಖಂಡದ ರೈತರಿಗೆ ಈ ಕಂತಿನಲ್ಲಿ ವಿಶೇಷವಾಗಿ ಆದ್ಯತೆ ನೀಡಲಾಗಿದೆ. ಗೌರವಾನ್ವಿತ ಕೃಷಿ ಸಚಿವರು, ಸಂಸದರು, ಶಾಸಕರು ಮತ್ತು ಹಿಮಾಚಲ ಪ್ರದೇಶ, ಪಂಜಾಬ್ ಮತ್ತು ಉತ್ತರಾಖಂಡದ ಹಿರಿಯ ಅಧಿಕಾರಿಗಳು ಹಾಗೂ ರೈತ ಸಂಘಟನೆಗಳ ಪ್ರತಿನಿಧಿಗಳು ಈ ಕಾರ್ಯಕ್ರಮದಲ್ಲಿ ವರ್ಚುವಲ್ ಆಗಿ ಭಾಗವಹಿಸಿದರು.

ಈ ಮೂರು ರಾಜ್ಯಗಳು ಇತ್ತೀಚೆಗೆ ತೀವ್ರ ಪ್ರವಾಹ, ಭೂಕುಸಿತ ಮತ್ತು ವ್ಯಾಪಕ ಬೆಳೆ ನಷ್ಟಕ್ಕೆ ಗುರಿಯಾಗಿದ್ದು, ಕೃಷಿ ಕುಟುಂಬಗಳು ಅಪಾರ ಸಂಕಷ್ಟಕ್ಕೆ ತುತ್ತಾಗಿವೆ. ಈ ನಿಟ್ಟಿನಲ್ಲಿ, ʻಪಿ.ಎಂ.-ಕಿಸಾನ್ʼನ ಇಂದಿನ ಬಿಡುಗಡೆಯು ಇನ್ನೂ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಮೂರು ರಾಜ್ಯಗಳ ಸುಮಾರು 2.7 ಲಕ್ಷ ಮಹಿಳಾ ರೈತರು ಸೇರಿದಂತೆ 27 ಲಕ್ಷಕ್ಕೂ ಹೆಚ್ಚು ರೈತರ ಬ್ಯಾಂಕ್ ಖಾತೆಗಳಿಗೆ ಒಟ್ಟು 540 ಕೋಟಿ ರೂ.ಗಳನ್ನು ನೇರವಾಗಿ ವರ್ಗಾಯಿಸಲಾಗಿದೆ. ಈ ಬೆಂಬಲವು ಇತ್ತೀಚಿನ ವಿಪತ್ತುಗಳಿಂದ ಚೇತರಿಸಿಕೊಳ್ಳಲು ಕೆಲಸ ಮಾಡುತ್ತಿರುವ ರೈತರಿಗೆ ಸಮಯೋಚಿತ ಪರಿಹಾರವನ್ನು ಒದಗಿಸುವ ಗುರಿಯನ್ನು ಹೊಂದಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಪ್ರತಿಯೊಂದು ಪರಿಸ್ಥಿತಿಯಲ್ಲೂ ರೈತರ ಬೆಂಬಲಕ್ಕೆ ನಿಲ್ಲುವ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದರು. 2,000ರೂ.ಗಳ ಕಂತು ರೈತರಿಗೆ ತಕ್ಷಣದ ಮನೆಯ ಅಗತ್ಯಗಳನ್ನು ಪೂರೈಸಲು, ಮುಂದಿನ ಬಿತ್ತನೆ ಅವಧಿಗೆ ಬೀಜಗಳು ಮತ್ತು ರಸಗೊಬ್ಬರಗಳನ್ನು ಸಂಗ್ರಹಿಸಲು ನೆರವಾಗುತ್ತದೆ. ಜೊತೆಗೆ ಕೃಷಿಯನ್ನು ಪುನರಾರಂಭಿಸುವ ವಿಶ್ವಾಸವನ್ನು ಪುನಃಸ್ಥಾಪಿಸಲು ಸಹಾಯ ಮಾಡುತ್ತದೆ ಎಂದು ಅವರು ಒತ್ತಿ ಹೇಳಿದರು. ಈ ಕಂತಿನ ಬಿಡುಗಡೆಯು ಸರ್ಕಾರವು ಆರ್ಥಿಕ ಬೆಂಬಲದ ಹೊರತಾಗಿ, ಪ್ರತಿಯೊಬ್ಬ ರೈತರ ಬಗ್ಗೆ ಸರ್ಕಾರವು ಕಾಳಜಿ ವಹಿಸುತ್ತದೆ ಮತ್ತು ನೈಸರ್ಗಿಕ ಪ್ರತಿಕೂಲ ಪರಿಸ್ಥಿತಿಗಳ ವಿರುದ್ಧದ ಹೋರಾಟದಲ್ಲಿ ಯಾರನ್ನೂ ನಿರ್ಲಕ್ಷಿಸುವುದಿಲ್ಲ ಎಂಬ ಭರವಸೆಯನ್ನು ನೀಡುತ್ತದೆ ಎಂದು ಅವರು ಒತ್ತಿ ಹೇಳಿದರು.

ಮೂರು ಪ್ರವಾಹ ಪೀಡಿತ ರಾಜ್ಯಗಳ ರೈತರು ಎದುರಿಸುತ್ತಿರುವ ಕಷ್ಟಗಳು ಮತ್ತು ಈ ಅಗತ್ಯದ ಸಮಯದಲ್ಲಿ ಅವರನ್ನು ಬೆಂಬಲಿಸಲು ಸರ್ಕಾರ ಕೈಗೊಳ್ಳುತ್ತಿರುವ ಕ್ರಮಗಳನ್ನು ವಿವರಿಸುವ ಕಿರು ಸಾಕ್ಷ್ಯಚಿತ್ರವನ್ನೂ ವಿಡಿಯೋ ಕಾನ್ಫರೆನ್ಸ್ ನಲ್ಲಿ ಪ್ರದರ್ಶಿಸಲಾಯಿತು. ಈ ಕೆಳಗಿನ ಲಿಂಕ್ ಮೂಲಕ ಚಲನಚಿತ್ರವನ್ನು ನೋಡಬಹುದು. https://rb.gy/w673av

ಈ ತಿಂಗಳ ಆರಂಭದಲ್ಲಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಗೌರವಾನ್ವಿತ ಪ್ರಧಾನಮಂತ್ರಿ ಅವರು ಭೇಟಿ ನೀಡಿದ್ದನ್ನು ಸ್ಮರಿಸಿದ ಕೃಷಿ ಸಚಿವರು, “ಪ್ರಧಾನಮಂತ್ರಿ ಅವರು ಹಿಮಾಚಲ ಪ್ರದೇಶ, ಪಂಜಾಬ್ ಮತ್ತು ಉತ್ತರಾಖಂಡಕ್ಕೆ ಕ್ರಮವಾಗಿ 1500 ಕೋಟಿ ರೂ., 1600 ಕೋಟಿ ರೂ. ಮತ್ತು 1200 ಕೋಟಿ ರೂ.ಗಳ ಆರ್ಥಿಕ ನೆರವು ಸೇರಿದಂತೆ ಸಮಗ್ರ ಪರಿಹಾರ ಕ್ರಮಗಳನ್ನು ಘೋಷಿಸಿದ್ದರು. ಜೊತೆಗೆ ಮೃತರ ಕುಟುಂಬಗಳಿಗೆ ಪರಿಹಾರ ಮತ್ತು ಮಕ್ಕಳಿಗಾಗಿ ʻಪಿ.ಎಂ. ಕೇರ್ಸ್ʼ ಯೋಜನೆಯಡಿ ನೆರವು ನೀಡಿದ್ದರು. ʻಪಿ.ಎಂ.-ಕಿಸಾನ್ʼ ಯೋಜನೆಯ 21ನೇ ಕಂತಿನ ಬಿಡುಗಡೆಯು ಈ ಕ್ರಮಗಳನ್ನು ಆಧರಿಸಿದೆ ಮತ್ತು ರೈತ ಕುಟುಂಬಗಳಿಗೆ ಅವರ ಅಗತ್ಯದ ಸಮಯದಲ್ಲಿ ಸಮಯೋಚಿತ ನೆರವು ನೀಡುವ ಸರ್ಕಾರದ ಸಂಕಲ್ಪವನ್ನು ಪ್ರತಿಬಿಂಬಿಸುತ್ತದೆ,ʼʼ ಎಂದು ಹೇಳಿದರು.

ಈ ಕಂತಿನ ಬಿಡುಗಡೆಯೊಂದಿಗೆ, 2019ರ ಫೆಬ್ರವರಿ 24ರಂದು ಯೋಜನೆ ಪ್ರಾರಂಭವಾದಾಗಿನಿಂದ ಮೂರು ರಾಜ್ಯಗಳಿಗೆ ಪಿ.ಎಂ.-ಕಿಸಾನ್ ಅಡಿಯಲ್ಲಿ ಒಟ್ಟು ವಿತರಣೆಯು 13,626 ಕೋಟಿ ರೂ. ದಾಟಿದೆ. ಫಲಾನುಭವಿಗಳ ರಾಜ್ಯವಾರು ವಿವರಗಳು ಮತ್ತು 21ನೇ ಕಂತಿನಲ್ಲಿ ವರ್ಗಾವಣೆಯಾದ ಮೊತ್ತ ಈ ಕೆಳಗಿನಂತಿದೆ:

ಕೋಷ್ಟಕ 1: ರಾಜ್ಯವಾರು ಫಲಾನುಭವಿಗಳ ಸಂಖ್ಯೆ ಮತ್ತು ಪಿ.ಎಂ.-ಕಿಸಾನ್ ನ 21 ನೇ ಕಂತಿನಲ್ಲಿ ವರ್ಗಾಯಿಸಲಾದ ಮೊತ್ತ

ರಾಜ್ಯ 

ಫಲಾನುಭವಿಗಳ ಸಂಖ್ಯೆ 

ವರ್ಗಾವಣೆ ಮಾಡಿದ ಮೊತ್ತ  
(ಕೋಟಿ ರೂ.ಗಳಲ್ಲಿ) 

ಲಾಂಚ್ ಆಗಿನಿಂದ ವರ್ಗಾವಣೆಯಾದ ಒಟ್ಟು ಮೊತ್ತ (ಕೋಟಿ ರೂ.ಗಳಲ್ಲಿ) 

ಹಿಮಾಚಲ ಪ್ರದೇಶ 

8,01,045

160.21

3,631

ಪಂಜಾಬ್ 

11,09,895

221.98

6,553

ಉತ್ತರಾಖಂಡ 

7,89,128

157.83

3,442

21ನೇ ಕಂತಿನ ಸಕಾಲಿಕ ಬಿಡುಗಡೆಯು ಭಾರತ ಸರ್ಕಾರವು ತನ್ನ ರೈತರಿಗೆ, ವಿಶೇಷವಾಗಿ ನೈಸರ್ಗಿಕ ವಿಕೋಪಗಳು ಮತ್ತು ಜೀವನೋಪಾಯದ ಅಡಚಣೆಯಂತಹ ಸವಾಲನ್ನು ಎದುರಿಸುತ್ತಿರುವವರಿಗೆ ಅಚಲ ಬೆಂಬಲ ನೀಡುವುದನ್ನು ಒತ್ತಿಹೇಳುತ್ತದೆ.

 

*****


(ಪ್ರಕಟಣೆ ಐ.ಡಿ.: 2171765) ವಿಸಿಟರ್ ಕೌಂಟರ್ : 75
ಪ್ರಕಟಣೆಯನ್ನು ಇದರಲ್ಲಿ ಓದಿ: Odia , English , Urdu , हिन्दी , Punjabi