ಹಣಕಾಸು ಸಚಿವಾಲಯ
azadi ka amrit mahotsav

ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಇಂದು ನವದೆಹಲಿಯಲ್ಲಿ ಸರಕು ಮತ್ತು ಸೇವಾ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ (ಜಿ ಎಸ್‌ ಟಿ ಎ ಟಿ) ಗೆ ಚಾಲನೆ ನೀಡಿದರು


ಜಿ ಎಸ್‌ ಟಿ ಎ ಟಿ ಯು ಭವಿಷ್ಯಕ್ಕೆ ಬದಲಾವಣೆ, ಸುಧಾರಣೆ ಮತ್ತು ಹೊಂದಿಕೊಳ್ಳುವಿಕೆಯನ್ನು ಮುಂದುವರಿಸುವ ನಮ್ಮ ದೃಢಸಂಕಲ್ಪದ ಫಲಿತಾಂಶವಾಗಿದೆ: ಕೇಂದ್ರ ಹಣಕಾಸು ಸಚಿವರು

ಸರಳ ಭಾಷೆಯಲ್ಲಿ ಪಾರಿಭಾಷಿಕ ಆಡಂಬರ - ಮುಕ್ತ ನಿರ್ಧಾರಗಳು; ಸರಳೀಕೃತ ಸ್ವರೂಪಗಳು ಮತ್ತು ಪರಿಶೀಲನಾಪಟ್ಟಿಗಳು; ಡಿಜಿಟಲ್-ಬೈ-ಡೀಫಾಲ್ಟ್ ಫೈಲಿಂಗ್‌ ಗಳು ಮತ್ತು ವರ್ಚುವಲ್ ವಿಚಾರಣೆಗಳು; ಮತ್ತು ಪಟ್ಟಿ, ವಿಚಾರಣೆ ಮತ್ತು ತೀರ್ಪಿಗಾಗಿ ಸಮಯ ಮಾನದಂಡಗಳ ಮೇಲೆ ಜಿ ಎಸ್‌ ಟಿ ಎ ಟಿ ಗಮನಹರಿಸಬೇಕು: ಹಣಕಾಸು ಸಚಿವರಾದ ಶ್ರೀಮತಿ ಸೀತಾರಾಮನ್

ಜಿ ಎಸ್‌ ಟಿ ಎ ಟಿ ಸರಳತೆಗೆ ಕಾರಣವಾಗಬೇಕು, ಕಾನೂನು ಸಂಘರ್ಷಗಳನ್ನು ಕಡಿಮೆ ಮಾಡಬೇಕು, ಸರಳತೆಯನ್ನು ತರಬೇಕು ಮತ್ತು ಮೊಕದ್ದಮೆ ವಿಳಂಬಗಳನ್ನು ಸಕ್ರಿಯವಾಗಿ ಪರಿಹರಿಸಬೇಕು ಇದರಿಂದ ನಗದು ಹರಿವು ವೇಗಗೊಳ್ಳುತ್ತದೆ, ಎಂ ಎಸ್‌ ಎಂ ಇ ಗಳು ಮತ್ತು ರಫ್ತುದಾರರು ವಿಶ್ವಾಸದಿಂದ ಹೂಡಿಕೆ ಮಾಡುತ್ತಾರೆ ಮತ್ತು ನಾಗರಿಕರು ಈ ವ್ಯವಸ್ಥೆಯ ಪ್ರಯೋಜನಗಳನ್ನು ಪಡೆಯುತ್ತಾರೆ: ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್

ಪ್ರಧಾನ ಮಂತ್ರಿಯವರ 'ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ' ದಿಂದ ಪ್ರೇರಿತರಾಗಿ, ಭಾರತವು ಗುರಿಯಿಟ್ಟುಕೊಂಡ ಉಪಕ್ರಮಗಳೊಂದಿಗೆ ಸ್ಪಷ್ಟತೆಯತ್ತ ಸಾಗಿದೆ ಮತ್ತು ತಂತ್ರಜ್ಞಾನವು ಭಾರತದ ಸುಧಾರಣಾ ಪ್ರಯಾಣದ ಕೇಂದ್ರಬಿಂದುವಾಗಿದೆ: ಹಣಕಾಸು ರಾಜ್ಯ ಸಚಿವರು

ನ್ಯಾಯವು ತ್ವರಿತ ಮತ್ತು ನ್ಯಾಯಯುತವಾಗಿರುತ್ತದೆ ಎಂಬ ನಂಬಿಕೆಯನ್ನು ಬಲವಾದ ಮೇಲ್ಮನವಿ ಕಾರ್ಯವಿಧಾನವು ಹುಟ್ಟುಹಾಕುತ್ತದೆ: ಹಣಕಾಸು ರಾಜ್ಯ ಸಚಿವ ಶ್ರೀ ಚೌಧರಿ

ಪ್ರತಿಯೊಬ್ಬ ತೆರಿಗೆದಾರರ ಮನವಿಯನ್ನು ಆಲಿಸಲಾಗುತ್ತದೆ, ಹಕ್ಕುಗಳನ್ನು ರಕ್ಷಿಸಲಾಗುತ್ತದೆ, ನ್ಯಾಯದಲ್ಲಿ ಯಾವುದೇ ವಿಳಂಬವಾಗುವುದಿಲ್ಲ ಎಂಬುದನ್ನು ಜಿ ಎಸ್ ಟಿ ಎ ಟಿ ಖಚಿತಪಡಿಸುತ್ತದೆ: ಶ್ರೀ ಪಂಕಜ್ ಚೌಧರಿ

ಜಿ ಎಸ್ ಟಿ ಉತ್ತಮ ಮತ್ತು ಸರಳ ತೆರಿಗೆ ಮಾತ್ರವಲ್ಲ, ನ್ಯಾಯಯುತ ಮತ್ತು ವಿಶ್ವಾಸಾರ್ಹ ತೆರಿಗೆ ವ್ಯವಸ್ಥೆಯೂ ಆಗಿದೆ: ಹಣಕಾಸು ರಾಜ್ಯ ಸಚಿವರು

ಜಿ ಎಸ್ ಟಿ ಮೇಲ್ಮನವಿ ನ್ಯಾಯಮಂಡಳಿಯ ಸಕಾಲಿಕ ಸ್ಥಾಪನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಕಾರವು ಪ್ರಮುಖ ಪಾತ್ರ ವಹಿಸಿದೆ: ನ್ಯಾಯಮೂರ್ತಿ ಸಂಜಯ ಕುಮಾರ್ ಮಿಶ್ರಾ

ಜಿ ಎಸ್ ಟಿ ಎ ಟಿ ವ್ಯಾಖ್ಯಾನದಲ್ಲಿ ಏಕರೂಪತೆ, ಫಲಿತಾಂಶಗಳಲ್ಲಿ ಮುನ್ನೋಟವನ್ನು ಒದಗಿಸುತ್ತದೆ ಮತ್ತು ಮೇಲ್ಮನವಿ ಪ್ರಕ್ರಿಯೆಯ ವಿಶ್ವಾಸಾರ್ಹತೆಯನ್ನು ಹೆಚ್ಚಿಸಲು ವಿಶಿಷ್ಟವಾದ, ರಾಷ್ಟ್ರವ್ಯಾಪಿ ವೇದಿಕೆಯನ್ನು ಒದಗಿಸುತ್ತದೆ: ಕಂದಾಯ ಕಾರ್ಯದರ್ಶಿ

ತೆರಿಗೆದಾರರು ಮತ್ತು ವೃತ್ತಿಪರರು ಆನ್ ಲೈನ್ ನಲ್ಲಿ ಮೇಲ್ಮನವಿಗಳನ್ನು ಸಲ್ಲಿಸಲು, ಪ್ರಕರಣಗಳ ಪ್ರಗತಿಯನ್ನು ಪತ್ತೆಹಚ್ಚಲು ಮತ್ತು ಡಿಜಿಟಲ್ ಮೋಡ್ ಮೂಲಕ ವಿಚಾರಣೆಗಳಲ್ಲಿ ಭಾಗವಹಿಸಲು ಜಿ ಎಸ್ ಟಿ ಎ ಟಿ ಇ-ಕೋರ್ಟ್ ಗಳ ಪೋರ್ಟಲ್ ಅನ್ನು ಅನಾವರಣಗೊಳಿಸಲಾಯಿತು

Posted On: 24 SEP 2025 9:20PM by PIB Bengaluru

ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಇಂದು ನವದೆಹಲಿಯಲ್ಲಿ ಸರಕು ಮತ್ತು ಸೇವಾ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ (ಜಿ ಎಸ್‌ ಟಿ ಎ ಟಿ) ಗೆ ಔಪಚಾರಿಕವಾಗಿ ಚಾಲನೆ ನೀಡಿದರು.

ಜಿ ಎಸ್‌ ಟಿ ಎ ಟಿ ಜಾರಿಗೆ ಬರುವುದು ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆಯ ವಿಕಸನದಲ್ಲಿ ಒಂದು ಪ್ರಮುಖ ಮೈಲಿಗಲ್ಲಾಗಿದೆ ಮತ್ತು ದೇಶದಲ್ಲಿ ಪರೋಕ್ಷ ತೆರಿಗೆ ವಿವಾದ ಪರಿಹಾರಕ್ಕಾಗಿ ಸಾಂಸ್ಥಿಕ ಚೌಕಟ್ಟನ್ನು ಬಲಪಡಿಸುತ್ತದೆ.

ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಶ್ರೀ ಪಂಕಜ್ ಚೌಧರಿ, ಜಿ ಎಸ್‌ ಟಿ ಎ ಟಿ ಅಧ್ಯಕ್ಷ ನ್ಯಾಯಮೂರ್ತಿ ಶ್ರೀ ಸಂಜಯ್ ಕುಮಾರ್ ಮಿಶ್ರಾ, ಹರಿಯಾಣ ರಾಜ್ಯದ ಸಚಿವ ಶ್ರೀ ರಾವ್ ನರಬೀರ್ ಸಿಂಗ್, ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳು, ರಾಜ್ಯ ಮತ್ತು ಕೇಂದ್ರ ಜಿ ಎಸ್‌ ಟಿ ರಚನೆಗಳ ಅಧಿಕಾರಿಗಳು, ಕಾನೂನು ಕ್ಷೇತ್ರದ ಗಣ್ಯರು ಮತ್ತು ವ್ಯಾಪಾರ ಮತ್ತು ಕೈಗಾರಿಕಾ ಪ್ರತಿನಿಧಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕೇಂದ್ರ ಹಣಕಾಸು ಸಚಿವರು ತಮ್ಮ ಭಾಷಣದಲ್ಲಿ, ಸರಕು ಮತ್ತು ಸೇವಾ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ (ಜಿ ಎಸ್‌ ಟಿ ಎ ಟಿ) ಸ್ಥಾಪನೆಯು ಕೇವಲ ಸಾಂಸ್ಥಿಕ ಮೈಲಿಗಲ್ಲು ಮಾತ್ರವಲ್ಲ - ಕಳೆದ ಎಂಟು ವರ್ಷಗಳಲ್ಲಿ ಜಿ ಎಸ್‌ ಟಿ ಎಲ್ಲಿಯವರೆಗೆ ತಲುಪಿದೆ ಎಂಬುದರ ಸಂಕೇತವಾಗಿದೆ ಮತ್ತು ಅದನ್ನು ಬಲಾಯಿಸುವ, ಸುಧಾರಿಸುವ ಮತ್ತು ಭವಿಷ್ಯಕ್ಕೆ ಹೊಂದಿಕೊಳ್ಳುವ ನಮ್ಮ ದೃಢಸಂಕಲ್ಪದ ಪ್ರಬಲ ಜ್ಞಾಪನೆಯಾಗಿದೆ ಎಂದು ಹೇಳಿದರು.

ಜಿ ಎಸ್ ಟಿ ಅನುಷ್ಠಾನದ ಹಿಂದಿನ ಮಾರ್ಗದರ್ಶಿ ಕಲ್ಪನೆಯೆಂದರೆ ಏಕತೆ - 'ನೀತಿಯಲ್ಲಿ ಏಕತೆ', 'ಅನುಸರಣೆಯಲ್ಲಿ ಏಕತೆ' ಮತ್ತು 'ಆರ್ಥಿಕ ಉದ್ದೇಶದಲ್ಲಿ ಏಕತೆ' ಎಂದು ಅವರು ಹೇಳಿದರು.

ಜಿ ಎಸ್‌ ಟಿ ಮಂಡಳಿಯು ಪ್ರಾರಂಭವಾದಾಗಿನಿಂದ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಕೆಲಸ ಮಾಡುತ್ತಾ, ವ್ಯವಸ್ಥೆಯನ್ನು ಪರಿಷ್ಕರಿಸಿದೆ ಮತ್ತು ಬಲಪಡಿಸಿದೆ. ಜಿ ಎಸ್‌ ಟಿ ವಿಶ್ವಾಸಾರ್ಹ ಆದಾಯದ ಮೂಲವಾಗಿ ಬೆಳೆದಿದೆ, ತೆರಿಗೆ ನೆಲೆಯನ್ನು ವಿಸ್ತರಿಸಿದೆ, ಔಪಚಾರಿಕೀಕರಣವನ್ನು ಪ್ರೋತ್ಸಾಹಿಸಿದೆ ಮತ್ತು ಭಾರತದ ಬೆಳವಣಿಗೆಯ ಕಥೆಯ ಅಡಿಪಾಯವಾಗಿದೆ ಎಂದು ಕೇಂದ್ರ ಹಣಕಾಸು ಸಚಿವರು ಹೇಳಿದರು.

ಸುಧಾರಣೆ ನಿರಂತರ ಪ್ರಕ್ರಿಯೆಯಾಗಿದ್ದು, ಜಿ ಎಸ್ ಟಿ ಸರಳತೆ ಮತ್ತು ಸುಲಭ ಜೀವನ ತತ್ವದ ಸುತ್ತ ವಿಕಸನಗೊಳ್ಳಬೇಕು ಮತ್ತು ವಿಕಸನಗೊಳ್ಳುತ್ತಿದೆ ಎಂದು ಶ್ರೀಮತಿ ಸೀತಾರಾಮನ್ ಒತ್ತಿ ಹೇಳಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೆಂಪು ಕೋಟೆಯ ಪ್ರಾಂಗಣದಿಂದ ಮುಂದಿನ ಪೀಳಿಗೆಯ ಜಿ ಎಸ್ ಟಿ ಸುಧಾರಣೆಗಳನ್ನು ಘೋಷಿಸಿದ್ದಾರೆ ಎಂದು ಕೇಂದ್ರ ಹಣಕಾಸು ಸಚಿವರು ಹೇಳಿದರು. 'ನಾಗರಿಕ ದೇವೋ ಭವ' ತತ್ವವನ್ನು ಅನುಸರಿಸಿ, ಸಮಯ, ಸ್ಪಷ್ಟತೆ ಮತ್ತು ಉಳಿತಾಯಕ್ಕೆ ಆದ್ಯತೆ ನೀಡುವ 'ನಾಗರಿಕ-ಮೊದಲುʼ ವಿಧಾನದೊಂದಿಗೆ ನಾವು ಮುಂದೆ ಸಾಗುತ್ತಿದ್ದೇವೆ ಎಂದು ಅವರು ಹೇಳಿದರು. ಮುಂದಿನ ಪೀಳಿಗೆಯ ಜಿ ಎಸ್‌ ಟಿ  ನಿಖರವಾಗಿ ಅದನ್ನೇ ಮಾಡುತ್ತಿದೆ ಮತ್ತು ಈ ಹಬ್ಬದ ಋತುವಿನಲ್ಲಿ, ಇದು ಎಲ್ಲಾ ವಲಯಗಳು ಮತ್ತು ದೈನಂದಿನ ಜೀವನದಲ್ಲಿ ರಾಷ್ಟ್ರವ್ಯಾಪಿ ಜಿ ಎಸ್‌ ಟಿ  ಉಳಿತಾಯ ಉತ್ಸವಕ್ಕೆ ಕಾರಣವಾಗಿದೆ ಎಂದು ಅವರು ಹೇಳಿದರು.

'ನಾಗರಿಕ ದೇವೋ ಭವ'ದ ಸ್ಫೂರ್ತಿಯಲ್ಲಿ, ಜಿ ಎಸ್‌ ಟಿ ಎ ಟಿ ಬಗ್ಗೆ ನಮ್ಮ ಗಮನ ಸ್ಪಷ್ಟವಾಗಿರಬೇಕು ಎಂದು ಶ್ರೀಮತಿ ಸೀತಾರಾಮನ್ ಅವರು ಹೇಳಿದರು:

  • ಸರಳ ಭಾಷೆಯಲ್ಲಿ ಪಾರಿಭಾಷಿಕ ಆಡಂಬರ - ಮುಕ್ತ ನಿರ್ಧಾರಗಳು; ಸರಳೀಕೃತ ಸ್ವರೂಪಗಳು ಮತ್ತು ಪರಿಶೀಲನಾಪಟ್ಟಿಗಳು; ಡಿಜಿಟಲ್-ಬೈ-ಡೀಫಾಲ್ಟ್ ಫೈಲಿಂಗ್‌ ಗಳು ಮತ್ತು ವರ್ಚುವಲ್ ವಿಚಾರಣೆಗಳು; ಮತ್ತು ಪಟ್ಟಿ, ವಿಚಾರಣೆ ಮತ್ತು ತೀರ್ಪಿಗಾಗಿ ಸಮಯ ಮಾನದಂಡಗಳ ಮೇಲೆ ಜಿ ಎಸ್‌ ಟಿ ಎ ಟಿ ಗಮನಹರಿಸಬೇಕು.
  • ಜಿ ಎಸ್‌ ಟಿ ಎ ಟಿ ಸರಳತೆಗೆ ಕಾರಣವಾಗಬೇಕು, ಕಾನೂನು ಸಂಘರ್ಷಗಳನ್ನು ಕಡಿಮೆ ಮಾಡಬೇಕು, ಸರಳತೆಯನ್ನು ತರಬೇಕು ಮತ್ತು ಮೊಕದ್ದಮೆ ವಿಳಂಬಗಳನ್ನು ಸಕ್ರಿಯವಾಗಿ ಪರಿಹರಿಸಬೇಕು ಇದರಿಂದ ನಗದು ಹರಿವು ವೇಗಗೊಳ್ಳುತ್ತದೆ, ಎಂ ಎಸ್‌ ಎಂ ಇ ಗಳು ಮತ್ತು ರಫ್ತುದಾರರು ವಿಶ್ವಾಸದಿಂದ ಹೂಡಿಕೆ ಮಾಡುತ್ತಾರೆ ಮತ್ತು ನಾಗರಿಕರು ಈ ವ್ಯವಸ್ಥೆಯ ಪ್ರಯೋಜನಗಳನ್ನು ಪಡೆಯುತ್ತಾರೆ.

ತೆರಿಗೆದಾರರಿಗೆ ಸುಲಭ ಜೀವನವು ಫೈಲಿಂಗ್‌ ಮತ್ತು ಮರುಪಾವತಿಗಳನ್ನು ಮೀರಿ ವಿಸ್ತರಿಸುತ್ತದೆ, ಇದು ನ್ಯಾಯಯುತ, ಪರಿಣಾಮಕಾರಿ ವಿವಾದ ಪರಿಹಾರವನ್ನು ಒಳಗೊಂಡಿದೆ ಎಂದು ಕೇಂದ್ರ ಹಣಕಾಸು ಸಚಿವರು ಹೇಳಿದರು.

ಶ್ರೀಮತಿ ಸೀತಾರಾಮನ್ ಅವರು ಜಿ ಎಸ್‌ ಟಿ ಎ ಟಿ ಸುಧಾರಣಾ ಪ್ರಕ್ರಿಯೆಯ ಸ್ವಾಭಾವಿಕ ವಿಸ್ತರಣೆಯಾಗಿದೆ - ವ್ಯವಹಾರವನ್ನು ಸುಲಭಗೊಳಿಸುವತ್ತ ಗಮನಾರ್ಹ ಪ್ರಗತಿ ಮತ್ತು ನ್ಯಾಯಕ್ಕಾಗಿ ಒಂದು ಪ್ರಮುಖ ವೇದಿಕೆಯಾಗಿದೆ ಎಂದು ಹೇಳಿದರು. ಸರಳವಾಗಿ ಹೇಳುವುದಾದರೆ: ತೆರಿಗೆದಾರರು ವಿವಾದವನ್ನು ಹೊಂದಿರುವಾಗ, ಮೊದಲ ಮೇಲ್ಮನವಿ ತೆರಿಗೆ ಆಡಳಿತದೊಂದಿಗೆ ಇರುತ್ತದೆ. ಎರಡನೇ ಹಂತದಲ್ಲಿ, ಮೂಲ ಆದೇಶವು ಕೇಂದ್ರದಿಂದ ಬಂದಿರಲಿ ಅಥವಾ ರಾಜ್ಯದಿಂದ ಬಂದಿರಲಿ, ಮೇಲ್ಮನವಿಗಳು ಈಗ ಒಂದೇ ಸ್ವತಂತ್ರ ವೇದಿಕೆಯಲ್ಲಿ – ಜಿ ಎಸ್‌ ಟಿ ಎ ಟಿ ಯಲ್ಲಿ ಸಂಯೋಜಿತವಾಗುತ್ತವೆ ಎಂದು ಅವರು ಹೇಳಿದರು.

ಜಿ ಎಸ್‌ ಟಿ ಎ ಟಿ ಕಾರ್ಯರೂಪಕ್ಕೆ ತರುವುದನ್ನು ಮಹತ್ವದ ಮೈಲಿಗಲ್ಲು ಎಂದು ಬಣ್ಣಿಸಿದ ಕೇಂದ್ರ ಹಣಕಾಸು ಸಚಿವರು, 2017 ರಲ್ಲಿ 'ಒಂದು ರಾಷ್ಟ್ರ, ಒಂದು ತೆರಿಗೆ, ಒಂದು ಮಾರುಕಟ್ಟೆ' ಎಂದು ಪ್ರಾರಂಭವಾದದ್ದು ಈಗ 'ಒಂದು ರಾಷ್ಟ್ರ, ನ್ಯಾಯಸಮ್ಮತತೆ ಮತ್ತು ನಿಶ್ಚಿತತೆಗಾಗಿ ಒಂದು ವೇದಿಕೆ'ಯಾಗಿ ವಿಕಸನಗೊಂಡಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಪಂಕಜ್ ಚೌಧರಿ, ಇದು ಕೇವಲ ಹೊಸ ವ್ಯವಸ್ಥೆಯ ಬಂಡವಾಳೀಕರಣವಲ್ಲ, ಬದಲಾಗಿ ಗೌರವಾನ್ವಿತ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ನಿರಂತರ ಬೆಂಬಲವನ್ನು ಪಡೆದ ಸುಧಾರಣೆಗಳನ್ನು ಇನ್ನಷ್ಟು ಆಳಗೊಳಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿದರು. ಈ ಸುಧಾರಣೆಗಳು ಆಡಳಿತವನ್ನು ಹೆಚ್ಚು ಪಾರದರ್ಶಕವಾಗಿಸುವ, ನಾಗರಿಕರನ್ನು ಸಬಲೀಕರಣಗೊಳಿಸುವ ಮತ್ತು ವ್ಯವಹಾರಗಳನ್ನು ಬಲಪಡಿಸುವ ಗುರಿಯನ್ನು ಹೊಂದಿವೆ ಎಂದು ಅವರು ಹೇಳಿದರು.

ಕಳೆದ ಹಲವಾರು ವರ್ಷಗಳಿಂದ, ಸರ್ಕಾರವು ವ್ಯವಸ್ಥೆಯನ್ನು ಇನ್ನಷ್ಟು ಸುಧಾರಿಸಲು ಪ್ರಯತ್ನಗಳನ್ನು ಮಾಡಿದೆ, ಇದು ಸರಳ, ನ್ಯಾಯಯುತ ಮತ್ತು ಹೆಚ್ಚು ತಂತ್ರಜ್ಞಾನ ಆಧಾರಿತವಾಗಿದೆ ಎಂದು ಕೇಂದ್ರ ರಾಜ್ಯ ಸಚಿವರು ಹೇಳಿದರು. ಪ್ರಧಾನ ಮಂತ್ರಿಯವರ "ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ" ಎಂಬ ಘೋಷಣೆಯಿಂದ ಪ್ರೇರಿತರಾಗಿ, ನಾವು ಉದ್ದೇಶಿತ ಉಪಕ್ರಮಗಳೊಂದಿಗೆ ಸ್ಪಷ್ಟತೆಯತ್ತ ಸಾಗಿದ್ದೇವೆ. ತಂತ್ರಜ್ಞಾನವು ಈ ಪ್ರಯಾಣದ ಕೇಂದ್ರಭಾಗದಲ್ಲಿದೆ. ರಿಟರ್ನ್ ಫೈಲಿಂಗ್, ಇ-ಇನ್ವಾಯ್ಸಿಂಗ್ ಮತ್ತು ಆನ್‌ಲೈನ್ ಮರುಪಾವತಿಗಳಂತಹ ಡಿಜಿಟಲ್ ವ್ಯವಸ್ಥೆಗಳು ತೆರಿಗೆದಾರರ ಮೇಲಿನ ಹೊರೆಯನ್ನು ಕಡಿಮೆ ಮಾಡುವುದಲ್ಲದೆ, ಸರ್ಕಾರ ಮತ್ತು ಸಾರ್ವಜನಿಕರ ನಡುವೆ ವಿಶ್ವಾಸವನ್ನು ಬಲಪಡಿಸಿವೆ ಎಂದು ಅವರು ಹೇಳಿದರು.

ಜಿ ಎಸ್‌ ಟಿ ಮೇಲ್ಮನವಿ ನ್ಯಾಯಮಂಡಳಿಯ ಪ್ರಾರಂಭವು ವಿವಾದ ಪರಿಹಾರವನ್ನು ಸರಳಗೊಳಿಸುವ ಮತ್ತು ಸುಗಮಗೊಳಿಸುವ ಈ ಪ್ರಯಾಣದಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ. ಇದು ವಿವಾದ ಪರಿಹಾರಕ್ಕಾಗಿ ಏಕರೂಪ, ಪಾರದರ್ಶಕ ಮತ್ತು ವಿಶ್ವಾಸಾರ್ಹ ವೇದಿಕೆಯನ್ನು ಒದಗಿಸುತ್ತದೆ. ಇದು ಅಸ್ಪಷ್ಟತೆಯನ್ನು ಕಡಿಮೆ ಮಾಡುತ್ತದೆ, ದೇಶಾದ್ಯಂತ ಏಕರೂಪತೆಯನ್ನು ತರುತ್ತದೆ ಮತ್ತು ದೊಡ್ಡ ಮತ್ತು ಸಣ್ಣ ತೆರಿಗೆದಾರರು ನ್ಯಾಯಕ್ಕಾಗಿ ಹೆಚ್ಚು ಸಮಯ ಕಾಯಬೇಕಾಗಿಲ್ಲ ಎಂದು ಖಚಿತಪಡಿಸುತ್ತದೆ. ಹೆಚ್ಚು ಮುಖ್ಯವಾಗಿ, ಈ ಸುಧಾರಣೆಯು ಕೇವಲ ಸಂಖ್ಯೆಗಳು ಅಥವಾ ಪ್ರಕ್ರಿಯೆಗಳಿಗೆ ಸಂಬಂಧಿಸಿದ್ದಲ್ಲ; ಇದು ಸಾರ್ವಜನಿಕರಿಗೆ ಸಂಬಂಧಿಸಿದೆ. ಸಾಮಾನ್ಯ ನಾಗರಿಕರಿಗೆ, ಜಿ ಎಸ್‌ ಟಿ ಎಂದರೆ ಸುಲಭ ತೆರಿಗೆ ಮತ್ತು ನ್ಯಾಯಯುತ ಬೆಲೆಗಳು. ಸಣ್ಣ ವ್ಯವಹಾರಗಳಿಗೆ, ಇದು ಕಡಿಮೆ ದಾಖಲೆಗಳನ್ನು ಮತ್ತು ಬೆಳವಣಿಗೆಯ ಮೇಲೆ ಕೇಂದ್ರೀಕರಿಸಲು ಹೆಚ್ಚಿನ ಸಮಯವನ್ನು ನೀಡುತ್ತದೆ. ನವೋದ್ಯಮಗಳು ಮತ್ತು ಉದ್ಯಮಿಗಳಿಗೆ, ಇದು ಸಂಕೀರ್ಣ ತೆರಿಗೆ ರಚನೆಗಳ ನಿರ್ಬಂಧಗಳಿಲ್ಲದೆ ದೊಡ್ಡ ಕನಸು ಕಾಣುವ ಸ್ವಾತಂತ್ರ್ಯವನ್ನು ನೀಡುತ್ತದೆ ಮತ್ತು ಒಟ್ಟಾರೆಯಾಗಿ ನಮ್ಮ ಆರ್ಥಿಕತೆಗೆ, ಇದರ ಪರಿಣಾಮವು ಗಮನಾರ್ಹವಾಗಿದೆ ಎಂದು ಶ್ರೀ ಚೌಧರಿ ಹೇಳಿದರು.

ಬಲವಾದ ಮೇಲ್ಮನವಿ ಕಾರ್ಯವಿಧಾನವು ನ್ಯಾಯವನ್ನು ತ್ವರಿತವಾಗಿ ಮತ್ತು ನಿಷ್ಪಕ್ಷಪಾತವಾಗಿ ನೀಡಲಾಗುತ್ತದೆ ಎಂಬ ವಿಶ್ವಾಸವನ್ನು ತುಂಬುತ್ತದೆ ಎಂದು ಕೇಂದ್ರ ರಾಜ್ಯ ಸಚಿವರು ಒತ್ತಿ ಹೇಳಿದರು. ದೊಡ್ಡ ಮತ್ತು ಸಣ್ಣ ಎರಡೂ ವ್ಯವಹಾರಗಳಿಗೆ, ಅವರು ಅಂತ್ಯವಿಲ್ಲದ ಮೊಕದ್ದಮೆಗಳಲ್ಲಿ ಸಿಲುಕಿಕೊಳ್ಳುವುದಿಲ್ಲ ಎಂದು ಇದು ಭರವಸೆ ನೀಡುತ್ತದೆ. ಇದು ಹೂಡಿಕೆದಾರರಿಗೆ ಭಾರತವು ದೊಡ್ಡ ಮಾರುಕಟ್ಟೆ ಮಾತ್ರವಲ್ಲ, ವಿಶ್ವಾಸಾರ್ಹ ಮತ್ತು ನ್ಯಾಯಯುತ ಮಾರುಕಟ್ಟೆಯಾಗಿದೆ ಎಂದು ಸ್ಪಷ್ಟಪಡಿಸುತ್ತದೆ. ಮುಖ್ಯವಾಗಿ, ಇದು ನಾಗರಿಕರು ಮತ್ತು ಸರ್ಕಾರದ ನಡುವಿನ ನಂಬಿಕೆಯನ್ನು ಬಲಪಡಿಸುತ್ತದೆ. ಇಂದು, ಭಾರತವನ್ನು ವಿಶ್ವಾದ್ಯಂತ ಉದಯೋನ್ಮುಖ ಆರ್ಥಿಕ ಶಕ್ತಿಯಾಗಿ ನೋಡಲಾಗುತ್ತಿದೆ. ಈ ವಿಶ್ವಾಸವು ಇತ್ತೀಚಿನ ವರ್ಷಗಳಲ್ಲಿ ನಾವು ಕೈಗೊಂಡ ಸುಧಾರಣೆಗಳನ್ನು ಆಧರಿಸಿದೆ ಎಂದು ಅವರು ಹೇಳಿದರು.

ಜಿ ಎಸ್ ಟಿ ಮೇಲ್ಮನವಿ ವ್ಯವಸ್ಥೆಯನ್ನು ಪರಿಚಯಿಸುವುದರೊಂದಿಗೆ, ಪ್ರತಿಯೊಬ್ಬ ತೆರಿಗೆದಾರರ ಮನವಿಯನ್ನು ಆಲಿಸಲಾಗುವುದು, ಅವರ ಹಕ್ಕುಗಳನ್ನು ರಕ್ಷಿಸಲಾಗುವುದು ಮತ್ತು ನ್ಯಾಯದಲ್ಲಿ ಯಾವುದೇ ವಿಳಂಬವಾಗುವುದಿಲ್ಲ ಎಂದು ನಾವು ಭರವಸೆ ನೀಡುತ್ತೇವೆ ಎಂದು ಶ್ರೀ ಚೌಧರಿ ಹೇಳಿದರು. ಹೀಗಾಗಿ, ನಾವು ಜಿ ಎಸ್‌ ಟಿ ಯನ್ನು ಉತ್ತಮ ಮತ್ತು ಸರಳ ತೆರಿಗೆಯನ್ನಾಗಿ ಮಾತ್ರವಲ್ಲದೆ, ನವ ಭಾರತಕ್ಕೆ ನ್ಯಾಯಯುತ ಮತ್ತು ವಿಶ್ವಾಸಾರ್ಹ ತೆರಿಗೆ ವ್ಯವಸ್ಥೆಯಾಗಿಯೂ ಮಾಡುತ್ತೇವೆ. ಈ ಸುಧಾರಣೆಗಳನ್ನು ರೂಪಿಸುವಲ್ಲಿ ಮತ್ತು ಮಾರ್ಗದರ್ಶನ ನೀಡುವಲ್ಲಿ ಜಿ ಎಸ್‌ ಟಿ  ಮಂಡಳಿ ಮತ್ತು ಅದರ ಗೌರವಾನ್ವಿತ ಸದಸ್ಯರ ಪಾತ್ರ ಅತ್ಯಂತ ಮುಖ್ಯವಾಗಿದೆ. ಜಿ ಎಸ್‌ ಟಿ  ರಾಷ್ಟ್ರೀಯ ಆದ್ಯತೆಗಳು ಮತ್ತು ರಾಜ್ಯಗಳು ಮತ್ತು ನಾಗರಿಕರ ಅಗತ್ಯಗಳನ್ನು ಸಮತೋಲನಗೊಳಿಸುವ ವ್ಯವಸ್ಥೆಯಾಗಿ ಹೊರಹೊಮ್ಮುವುದನ್ನು ಖಚಿತಪಡಿಸಿಕೊಳ್ಳಲು ಸಹಕಾರಿ ಒಕ್ಕೂಟ ವ್ಯವಸ್ಥೆಯ ಮನೋಭಾವದಲ್ಲಿ ಮಂಡಳಿ ಕೆಲಸ ಮಾಡಿದೆ ಎಂದು ಕೇಂದ್ರ ರಾಜ್ಯ ಸಚಿವರು ಹೇಳಿದರು.

ಜಿ ಎಸ್‌ ಟಿ ಮೇಲ್ಮನವಿ ನ್ಯಾಯಮಂಡಳಿಯ ಕಾರ್ಯಾಚರಣೆಯು ಈ ದಿಕ್ಕಿನಲ್ಲಿ ಮತ್ತೊಂದು ಹೆಜ್ಜೆಯಾಗಿದೆ ಎಂದ ಶ್ರೀ ಚೌಧರಿ ಅವರು ಎಲ್ಲಾ ಪಾಲುದಾರರಿಗೆ ಶುಭ ಹಾರೈಸಿದರು ಮತ್ತು ಈ ಸಂಸ್ಥೆಯನ್ನು ಸಾಕಾರಗೊಳಿಸಲು ಶ್ರಮಿಸುತ್ತಿರುವ ಪ್ರತಿಯೊಬ್ಬರನ್ನು ಶ್ಲಾಘಿಸಿದರು. ಈ ಮೈಲಿಗಲ್ಲು ತಲುಪಿದ ನಂತರ, ತಂಡವು ಸಹಕಾರದ ಮನೋಭಾವದಿಂದ ಈ ಸಂಸ್ಥೆಯನ್ನು ಮುಂದುವರಿಸುವುದು ಅವಶ್ಯಕ ಎಂದು ಶ್ರೀ ಚೌಧರಿ ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ನ್ಯಾಯಮೂರ್ತಿ ಶ್ರೀ ಸಂಜಯ್ ಕುಮಾರ್ ಮಿಶ್ರಾ, ಜಿ ಎಸ್‌ ಟಿ ಅಡಿಯಲ್ಲಿ ಬಾಕಿ ಇರುವ ಮೇಲ್ಮನವಿಗಳನ್ನು ಪರಿಹರಿಸುವಲ್ಲಿ ಮತ್ತು ಭವಿಷ್ಯದ ವಿವಾದಗಳಿಗೆ ನ್ಯಾಯವನ್ನು ನೀಡುವಲ್ಲಿ ನ್ಯಾಯಮಂಡಳಿಯ ಪ್ರಮುಖ ಪಾತ್ರವನ್ನು ಒತ್ತಿ ಹೇಳಿದರು. ನ್ಯಾಯಮಂಡಳಿಯ ಸಕಾಲಿಕ ಸ್ಥಾಪನೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಕಾರವು ನಿರ್ಣಾಯಕವಾಗಿದೆ ಎಂದು ಅವರು ಒತ್ತಿ ಹೇಳಿದರು ಮತ್ತು ಭವಿಷ್ಯದಲ್ಲಿಯೂ ಅಂತಹ ಸಹಕಾರ ಮುಂದುವರಿಯುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಅರವಿಂದ ಶ್ರೀವಾಸ್ತವ, ಜಿ ಎಸ್‌ ಟಿ ಪ್ರಯಾಣದಲ್ಲಿ ಜಿ ಎಸ್‌ ಟಿ ಎ ಟಿ ನಿರ್ಣಾಯಕ ಘಟ್ಟದಲ್ಲಿ ಬರುತ್ತದೆ ಎಂದು ಹೇಳಿದರು. ಔಪಚಾರಿಕ ಮೇಲ್ಮನವಿ ಸಂಸ್ಥೆಯು ಎಲ್ಲಾ ಪಕ್ಷಗಳಿಗೆ ತಮ್ಮ ವಾದವನ್ನು ಮಂಡಿಸಲು ಸಮಾನ ಅವಕಾಶವನ್ನು ಒದಗಿಸುತ್ತದೆ ಮತ್ತು ಅಂತಹ ಸಮಸ್ಯೆಗಳನ್ನು ನ್ಯಾಯಯುತ ಮತ್ತು ಸ್ಥಿರವಾದ ರೀತಿಯಲ್ಲಿ ಪರಿಹರಿಸುವ ನಿರೀಕ್ಷೆಯಿದೆ ಎಂದು ಶ್ರೀ ಶ್ರೀವಾಸ್ತವ ಹೇಳಿದರು.

ಮೇಲ್ಮನವಿ ಪ್ರಕ್ರಿಯೆಗೆ ವ್ಯಾಖ್ಯಾನದಲ್ಲಿ ಏಕರೂಪತೆ, ಫಲಿತಾಂಶಗಳಲ್ಲಿ ಮುನ್ಸೂಚನೆ ಮತ್ತು ವಿಶ್ವಾಸಾರ್ಹತೆಯನ್ನು ತರುವ ವಿಶಿಷ್ಟ, ರಾಷ್ಟ್ರವ್ಯಾಪಿ ವೇದಿಕೆಯನ್ನು ನ್ಯಾಯಮಂಡಳಿ ಒದಗಿಸುತ್ತದೆ. ತೆರಿಗೆದಾರರು ಮತ್ತು ತೆರಿಗೆ ಆಡಳಿತದ ನಡುವಿನ ವಿಶ್ವಾಸವನ್ನು ಬಲಪಡಿಸಲು ಇದು ನಿರ್ಣಾಯಕವಾಗಿದೆ ಎಂದು ಕಂದಾಯ ಕಾರ್ಯದರ್ಶಿ ಒತ್ತಿ ಹೇಳಿದರು.

ಜಿ ಎಸ್‌ ಟಿ ಎ ಟಿ ವಿನ್ಯಾಸದ ಮೂರು ಪ್ರಮುಖ ಆಯಾಮಗಳನ್ನು ವಿವರಿಸಿದ ಕಂದಾಯ ಕಾರ್ಯದರ್ಶಿಯವರು ಮೂರು "S" ಗಳನ್ನು ಒತ್ತಿ ಹೇಳಿದರು: ರಚನೆ, ಪ್ರಮಾಣ ಮತ್ತು ಸಮನ್ವಯ (structure, scale, and synergy). ಇದರ ರಚನೆಯು ಸಮತೋಲಿತ ತೀರ್ಪುಗಳನ್ನು ನೀಡಲು ನ್ಯಾಯಾಂಗ ಮತ್ತು ತಾಂತ್ರಿಕ ಪರಿಣತಿಯನ್ನು ಸಂಯೋಜಿಸುತ್ತದೆ. ಇದರ ಪ್ರಮಾಣವು, ಸರಳ ಪ್ರಕರಣಗಳಿಗೆ ರಾಜ್ಯ ಪೀಠಗಳು ಮತ್ತು ಏಕ-ಸದಸ್ಯ ಪೀಠಗಳ ಸಾಧ್ಯತೆಯೊಂದಿಗೆ, ಪ್ರವೇಶಸಾಧ್ಯತೆ ಮತ್ತು ದಕ್ಷತೆಯನ್ನು ಖಚಿತಪಡಿಸುತ್ತದೆ. ಮತ್ತು ತಂತ್ರಜ್ಞಾನ, ಪ್ರಕ್ರಿಯೆ ಮತ್ತು ಮಾನವ ಪರಿಣತಿಯ ನಡುವೆ ಅದರ ಸಮನ್ವಯವು - ವೇಗ ಮತ್ತು ಆಳ ಎರಡರಲ್ಲೂ ನ್ಯಾಯವನ್ನು ನೀಡಲು ಅನುವು ಮಾಡಿಕೊಡುತ್ತದೆ.

ಕಂದಾಯ ಇಲಾಖೆಯು ಜಿ ಎಸ್‌ ಟಿ ಎನ್‌ ಮತ್ತು ಎನ್‌ ಐ ಸಿ ಜೊತೆಗಿನ ಪಾಲುದಾರಿಕೆಯಲ್ಲಿ, ಜಿ ಎಸ್‌ ಟಿ ಎ ಟಿ ಕೆಲಸಕ್ಕೆ ಮೂಲದಿಂದಲೇ ಶಕ್ತಿ ತುಂಬುವ ಡಿಜಿಟಲ್ ವೇದಿಕೆಯನ್ನು ಅಭಿವೃದ್ಧಿಪಡಿಸಿದೆ ಎಂದು ಶ್ರೀ ಶ್ರೀವಾಸ್ತವ ಹೇಳಿದರು. ಇ-ಫೈಲಿಂಗ್, ಪ್ರಕರಣ ನಿರ್ವಹಣಾ ಪರಿಕರಗಳು ಮತ್ತು ಎಲೆಕ್ಟ್ರಾನಿಕ್ ನ್ಯಾಯಾಲಯ ಮಾಡ್ಯೂಲ್‌ ಗಳು ವಿಚಾರಣೆಗಳನ್ನು ಹೆಚ್ಚು ಸುವ್ಯವಸ್ಥಿತ ಮತ್ತು ಪಾರದರ್ಶಕವಾಗಿಸುತ್ತವೆ, ನಮ್ಮ ದೇಶದಲ್ಲಿ ನ್ಯಾಯಮಂಡಳಿ ಕಾರ್ಯನಿರ್ವಹಣೆಗೆ ಹೊಸ ಮಾನದಂಡಗಳನ್ನು ಸ್ಥಾಪಿಸುತ್ತದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಹಣಕಾಸು ಸಚಿವಾಲಯದ ಕಂದಾಯ ಇಲಾಖೆಯ ಜಂಟಿ ಕಾರ್ಯದರ್ಶಿ ಶ್ರೀ ಬಾಲಸುಬ್ರಮಣಿಯನ್ ಕೃಷ್ಣಮೂರ್ತಿ ಅವರು ಧನ್ಯವಾದಗಳನ್ನು ಅರ್ಪಿಸಿದರು.

ಉದ್ಘಾಟನೆಯ ಸಮಯದಲ್ಲಿ ಅನಾವರಣಗೊಂಡ ಪ್ರಮುಖ ವೈಶಿಷ್ಟ್ಯವೆಂದರೆ ಜಿ ಎಸ್‌ ಟಿ ಎ ಟಿ  ಇ-ಕೋರ್ಟ್ಸ್ ಪೋರ್ಟಲ್, ಇದನ್ನು ಸರಕು ಮತ್ತು ಸೇವಾ ತೆರಿಗೆ ಜಾಲ (ಜಿ ಎಸ್‌ ಟಿ ಎನ್) ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್‌ ಐ ಸಿ) ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದೆ. ಈ ಡಿಜಿಟಲ್ ವೇದಿಕೆಯು ತೆರಿಗೆದಾರರು ಮತ್ತು ವ್ಯವಹಾರಗಳು ಆನ್‌ಲೈನ್‌ ನಲ್ಲಿ ಮೇಲ್ಮನವಿಗಳನ್ನು ಸಲ್ಲಿಸಲು, ಪ್ರಕರಣಗಳ ಪ್ರಗತಿಯನ್ನು ಪತ್ತೆ ಹಚ್ಚಲು ಮತ್ತು ವಿಚಾರಣೆಗಳಲ್ಲಿ ಡಿಜಿಟಲ್ ರೂಪದಲ್ಲಿ ಭಾಗವಹಿಸಲು ಅನುವು ಮಾಡಿಕೊಡುತ್ತದೆ.

ಕಂದಾಯ ಇಲಾಖೆಯ ಅಡಿಯಲ್ಲಿರುವ ಇತರ ನ್ಯಾಯಮಂಡಳಿಗಳಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಎನ್‌ ಐ ಸಿ ಯ ಇ-ಕೋರ್ಟ್‌ ಗಳ ಮಾಡ್ಯೂಲ್‌ ನ ಯಶಸ್ಸಿನ ಆಧಾರದ ಮೇಲೆ ಈ ಪೋರ್ಟಲ್ ಜಿ ಎಸ್‌ ಟಿ ಎ ಟಿ  ಯ ದಕ್ಷತೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವ ನಿರೀಕ್ಷೆಯಿದೆ. ತೆರಿಗೆದಾರರಿಗೆ ಸುಗಮ ಮತ್ತು ಅನುಕೂಲಕರ ಫೈಲಿಂಗ್  ಅನುಭವವನ್ನು ಸಕ್ರಿಯಗೊಳಿಸಲು, ಜಿ ಎಸ್‌ ಟಿ ಎ ಟಿ ಜೂನ್ 30, 2026 ರವರೆಗೆ ಮೇಲ್ಮನವಿಗಳನ್ನು ಸಲ್ಲಿಸಲು ಅವಕಾಶ ನೀಡಿದೆ. ಈ ಕ್ರಮವು ತೆರಿಗೆದಾರರು, ವ್ಯಾಪಾರ ಸಂಸ್ಥೆಗಳು ಮತ್ತು ಸಲಹೆಗಾರರು ಕಾರ್ಯವಿಧಾನದ ತೊಂದರೆಗಳಿಲ್ಲದೆ ಕ್ರಮಬದ್ಧ ರೀತಿಯಲ್ಲಿ ತಮ್ಮ ಮೇಲ್ಮನವಿಗಳನ್ನು ಸಿದ್ಧಪಡಿಸಲು ಮತ್ತು ಸಲ್ಲಿಸಲು ಸಾಕಷ್ಟು ಸಮಯವನ್ನು ಹೊಂದಿರುವುದನ್ನು ಖಚಿತಪಡಿಸುತ್ತದೆ. ಜಿ ಎಸ್‌ ಟಿ ಎ ಟಿ ಪೋರ್ಟಲ್‌ ನಲ್ಲಿ (https://efiling.gstat.gov.in) ಲಭ್ಯವಿರುವ ಪದೇಪದೇ ಕೇಳುವ ಪ್ರಶ್ನೆಗಳು, ವಿವರಣಾತ್ಮಕ ಟಿಪ್ಪಣಿಗಳು ಮತ್ತು ಸೂಚನಾ ವೀಡಿಯೊಗಳು ಸೇರಿದಂತೆ ಬಳಕೆದಾರರಿಗೆ ಬೆಂಬಲ ನೀಡಲು ವ್ಯಾಪಕ ಮಾರ್ಗದರ್ಶನವನ್ನು ಸಹ ಒದಗಿಸಲಾಗಿದೆ. ಇದು ನೋಂದಣಿ, ಮೇಲ್ಮನವಿಗಳ ಫೈಲಿಂಗ್, ಡಿಜಿಟಲ್ ವಿಚಾರಣೆಗಳು ಮತ್ತು ಪ್ರಕರಣ ಟ್ರ್ಯಾಕಿಂಗ್‌ ನ ಅಂಶಗಳನ್ನು ಒಳಗೊಂಡಿದೆ.

ಭಾರತದ ಪರೋಕ್ಷ ತೆರಿಗೆ ವ್ಯವಸ್ಥೆಯ ನಿರಂತರ ವಿಕಸನದಲ್ಲಿ ಜಿ ಎಸ್‌ ಟಿ ಎ ಟಿ ಯ ಆರಂಭವು ಒಂದು ಮಹತ್ವದ ಹೆಜ್ಜೆಯಾಗಿದೆ. ಇದು ತೆರಿಗೆದಾರರಿಗೆ ನ್ಯಾಯವನ್ನು ಪಡೆಯಲು ವಿಶೇಷ  ವೇದಿಕೆಯನ್ನು ಒದಗಿಸುತ್ತದೆ ಮತ್ತು ಜಿ ಎಸ್‌ ಟಿ ಆಡಳಿತಕ್ಕೆ ಹೆಚ್ಚಿನ ಕ್ರಮಬದ್ಧತೆ, ಮುನ್ನೋಟ ಮತ್ತು ವಿಶ್ವಾಸಾರ್ಹತೆಯನ್ನು ತರುತ್ತದೆ. ಭಾರತದ ತೆರಿಗೆ ಆಡಳಿತವು ಸ್ಪಂದಿಸುವ, ಪಾರದರ್ಶಕವಾಗಿ ಮತ್ತು ವ್ಯವಹಾರ ಮಾಡುವ ಸುಲಭತೆಯ ತತ್ವಗಳಿಗೆ ಅನುಗುಣವಾಗಿರುವುದನ್ನು ಖಚಿತಪಡಿಸಿಕೊಳ್ಳುವಲ್ಲಿ ನ್ಯಾಯಮಂಡಳಿಯನ್ನು ಒಂದು ಮೂಲಾಧಾರ ಸಂಸ್ಥೆಯಾಗಿ ಕಲ್ಪಿಸಲಾಗಿದೆ.

ಜಿ ಎಸ್‌ ಟಿ ಎ ಟಿ ಬಗ್ಗೆ

ಸರಕು ಮತ್ತು ಸೇವಾ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ (ಜಿ ಎಸ್‌ ಟಿ ಎ ಟಿ) ಸರಕು ಮತ್ತು ಸೇವಾ ತೆರಿಗೆ ಕಾನೂನುಗಳ ಅಡಿಯಲ್ಲಿ ಸ್ಥಾಪಿಸಲಾದ ಶಾಸನಬದ್ಧ ಮೇಲ್ಮನವಿ ಸಂಸ್ಥೆಯಾಗಿದೆ. ಜಿ ಎಸ್‌ ಟಿ ಮೇಲ್ಮನವಿ ಪ್ರಾಧಿಕಾರಗಳು ಹೊರಡಿಸಿದ ಆದೇಶಗಳ ವಿರುದ್ಧದ ಮೇಲ್ಮನವಿಗಳನ್ನು ಆಲಿಸಲು ಮತ್ತು ತೆರಿಗೆದಾರರು ನ್ಯಾಯವನ್ನು ಪಡೆಯಲು ಸ್ವತಂತ್ರ ವೇದಿಕೆಯನ್ನು ಒದಗಿಸಲು ಇದನ್ನು ರಚಿಸಲಾಗಿದೆ. ನ್ಯಾಯಮಂಡಳಿಯು ನವದೆಹಲಿಯಲ್ಲಿರುವ ಪ್ರಧಾನ ಪೀಠ ಮತ್ತು ಭಾರತದಾದ್ಯಂತ 45 ಸ್ಥಳಗಳಲ್ಲಿ ನೆಲೆಗೊಂಡಿರುವ 31 ರಾಜ್ಯ ಪೀಠಗಳ ಮೂಲಕ ಕಾರ್ಯನಿರ್ವಹಿಸುತ್ತದೆ, ಇದು ಸುಲಭ ಮತ್ತು ರಾಷ್ಟ್ರವ್ಯಾಪಿ ಪ್ರವೇಶವನ್ನು ಖಚಿತಪಡಿಸುತ್ತದೆ.

ಜಿ ಎಸ್‌ ಟಿ ಎ ಟಿ ಯ ಪ್ರತಿಯೊಂದು ಪೀಠವು ಇಬ್ಬರು ನ್ಯಾಯಾಂಗ ಸದಸ್ಯರು, ಒಬ್ಬ ತಾಂತ್ರಿಕ ಸದಸ್ಯರು (ಕೇಂದ್ರ), ಮತ್ತು ಒಬ್ಬ ತಾಂತ್ರಿಕ ಸದಸ್ಯರು (ರಾಜ್ಯ) ಒಳಗೊಂಡಿದ್ದು, ಕೇಂದ್ರ ಮತ್ತು ರಾಜ್ಯ ಆಡಳಿತಗಳಿಂದ ನ್ಯಾಯಾಂಗ ಪರಿಣತಿ ಮತ್ತು ತಾಂತ್ರಿಕ ಜ್ಞಾನದ ಸಮತೋಲಿತ ಸಂಯೋಜನೆಯನ್ನು ಖಚಿತಪಡಿಸುತ್ತದೆ. ಈ ರಚನೆಯು ಸಹಕಾರಿ ಒಕ್ಕೂಟ ವ್ಯವಸ್ಥೆಯ ಮನೋಭಾವವನ್ನು ಪ್ರತಿಬಿಂಬಿಸುತ್ತದೆ ಮತ್ತು ನಿಷ್ಪಕ್ಷಪಾತ ಮತ್ತು ಸ್ಥಿರ ನಿರ್ಧಾರಗಳನ್ನು ನೀಡಲು ವಿನ್ಯಾಸಗೊಳಿಸಲಾಗಿದೆ.

 

*****


(Release ID: 2171044) Visitor Counter : 7
Read this release in: English , Urdu , Malayalam