ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿ ಅವರು ಸೆಪ್ಟೆಂಬರ್ 25 ರಂದು ಉತ್ತರ ಪ್ರದೇಶ ಮತ್ತು ರಾಜಸ್ಥಾನಕ್ಕೆ ಭೇಟಿ ನೀಡಲಿದ್ದಾರೆ


ಬನ್ಸ್ವಾರಾದಲ್ಲಿ ₹ 1,22,100 ಕೋಟಿಗೂ ಅಧಿಕ ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಮಾಡಲಿದ್ದಾರೆ

ವಿದ್ಯುತ್ ವಲಯದ ಯೋಜನೆಗಳಲ್ಲಿ ₹ 91,770 ಕೋಟಿಗೂ ಅಧಿಕ ಮೌಲ್ಯದ ಸ್ವಚ್ಛ ಇಂಧನ ಮತ್ತು ಪ್ರಸರಣ ಯೋಜನೆಗಳು ಸೇರಿವೆ

ಅಣುಶಕ್ತಿ ವಲಯಕ್ಕೆ ಪ್ರಮುಖ ಉತ್ತೇಜನವಾಗಿ, ಮಹಿ ಬನ್ಸ್ವಾರಾ ರಾಜಸ್ಥಾನ ಅಣು ವಿದ್ಯುತ್ ಯೋಜನೆಗೆ ಪ್ರಧಾನಮಂತ್ರಿ ಶಂಕುಸ್ಥಾಪನೆ ಮಾಡಲಿದ್ದಾರೆ

ರಾಜಸ್ಥಾನ, ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಕರ್ನಾಟಕ ರಾಜ್ಯಗಳಲ್ಲಿ ₹ 16,050 ಕೋಟಿಗೂ ಅಧಿಕ ಮೌಲ್ಯದ ಪಿಎಂ ಕುಸುಮ್ (PM KUSUM) ಯೋಜನೆಗಳನ್ನು ಪ್ರಧಾನಮಂತ್ರಿ ಉದ್ಘಾಟಿಸಲಿದ್ದಾರೆ

ರಾಜಸ್ಥಾನದಿಂದ ಮೂರು ರೈಲುಗಳಿಗೆ ಪ್ರಧಾನಮಂತ್ರಿ ಹಸಿರು ನಿಶಾನೆ ತೋರಿಸಲಿದ್ದು, ಇದು ರಾಜ್ಯ ಮತ್ತು ಉತ್ತರದ ಪ್ರದೇಶಗಳ ನಡುವಿನ ಸಂಪರ್ಕವನ್ನು ಗಣನೀಯವಾಗಿ ಸುಧಾರಿಸಲಿದೆ

ರಾಜಸ್ಥಾನದ ಸರ್ಕಾರಿ ಇಲಾಖೆಗಳು ಮತ್ತು ಸಂಸ್ಥೆಗಳಲ್ಲಿ ಹೊಸದಾಗಿ ನೇಮಕಗೊಂಡ ಯುವಕರಿಗೆ ಪ್ರಧಾನಮಂತ್ರಿ ಅವರು 15,000 ಕ್ಕೂ ಹೆಚ್ಚು ನೇಮಕಾತಿ ಪತ್ರಗಳನ್ನು ವಿತರಿಸಲಿದ್ದಾರೆ

ಪ್ರಧಾನಮಂತ್ರಿಯವರು ಗ್ರೇಟರ್ ನೋಯ್ಡಾದಲ್ಲಿ ಉತ್ತರ ಪ್ರದೇಶ ಅಂತಾರಾಷ್ಟ್ರೀಯ ವ್ಯಾಪಾರ ಪ್ರದರ್ಶನ-2025 ಅನ್ನು ಉದ್ಘಾಟಿಸಲಿದ್ದಾರೆ

ಈ ವ್ಯಾಪಾರ ಪ್ರದರ್ಶನದ ಘೋಷವಾಕ್ಯ: "ಅತ್ಯುತ್ತಮ ಸಂಪನ್ಮೂಲ ಸಂಗ್ರಹ ಇಲ್ಲಿಂದ ಪ್ರಾರಂಭ"

प्रविष्टि तिथि: 24 SEP 2025 5:52PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 25 ರಂದು ಉತ್ತರ ಪ್ರದೇಶ ಮತ್ತು ರಾಜಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ಅವರು ಬೆಳಿಗ್ಗೆ 9:30ರ ಸುಮಾರಿಗೆ ಗ್ರೇಟರ್ ನೋಯ್ಡಾದಲ್ಲಿ “ಉತ್ತರ ಪ್ರದೇಶ ಅಂತಾರಾಷ್ಟ್ರೀಯ ವ್ಯಾಪಾರ ಪ್ರದರ್ಶನ-2025” ಅನ್ನು ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ನಂತರ, ನಂತರ, ಪ್ರಧಾನಮಂತ್ರಿಯವರು ರಾಜಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲಿ ಮಧ್ಯಾಹ್ನ ಸುಮಾರು 1:45 ಗಂಟೆಗೆ ಬನ್ಸ್ವಾರದಲ್ಲಿ ನಡೆಯುವ ಸಾರ್ವಜನಿಕ ಸಮಾರಂಭದಲ್ಲಿ, ₹1,22,100 ಕೋಟಿ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ ಹಾಗೂ ಹಲವು ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಅವರು 'ಪಿಎಂ-ಕುಸುಮ್' ಯೋಜನೆಯ ಫಲಾನುಭವಿಗಳೊಂದಿಗೆ ಸಂವಾದವನ್ನೂ ನಡೆಸಲಿದ್ದಾರೆ.

ಉತ್ತರ ಪ್ರದೇಶದಲ್ಲಿ ಪ್ರಧಾನಮಂತ್ರಿ

ಪ್ರಧಾನಮಂತ್ರಿಯವರು 'ಮೇಕ್ ಇನ್ ಇಂಡಿಯಾ', 'ವೋಕಲ್ ಫಾರ್ ಲೋಕಲ್' ಹಾಗೂ 'ಆತ್ಮನಿರ್ಭರ ಭಾರತ' ಪರಿಕಲ್ಪನೆಗಳ ಬದ್ಧತೆಗೆ ಅನುಗುಣವಾಗಿ, ಗೌತಮ ಬುದ್ಧ ನಗರ ಜಿಲ್ಲೆಯ ಗ್ರೇಟರ್ ನೋಯ್ಡಾದಲ್ಲಿ 'ಉತ್ತರ ಪ್ರದೇಶ ಅಂತರರಾಷ್ಟ್ರೀಯ ವಾಣಿಜ್ಯ ಪ್ರದರ್ಶನ-2025'ಕ್ಕೆ (UPITS-2025) ಚಾಲನೆ ನೀಡಲಿದ್ದಾರೆ.

"ಅತ್ಯುತ್ತಮ ಸಂಪನ್ಮೂಲ ಸಂಗ್ರಹ ಇಲ್ಲಿಂದ ಪ್ರಾರಂಭ" ಎಂಬ ವಿಷಯದಡಿ ಆಯೋಜಿಸಲಾಗಿರುವ ಈ ವಾಣಿಜ್ಯ ಮೇಳವು ಸೆಪ್ಟೆಂಬರ್ 25 ರಿಂದ 29 ರವರೆಗೆ ನಡೆಯಲಿದೆ. ಇದು ನಾವೀನ್ಯತೆ, ಏಕೀಕರಣ, ಮತ್ತು ಅಂತಾರಾಷ್ಟ್ರೀಕರಣ ಎಂಬ ಮೂರು ಪ್ರಮುಖ ಉದ್ದೇಶಗಳನ್ನು ಹೊಂದಿದೆ. ಮೂರು ಆಯಾಮಗಳ ಖರೀದಿದಾರರ ತಂತ್ರದ ಮೂಲಕ, ಇದು ಅಂತಾರಾಷ್ಟ್ರೀಯ ಖರೀದಿದಾರರು, ದೇಶೀಯ B2B (ವ್ಯವಹಾರ-ವ್ಯವಹಾರ) ಖರೀದಿದಾರರು ಮತ್ತು ದೇಶೀಯ B2C (ವ್ಯವಹಾರ-ಗ್ರಾಹಕ) ಖರೀದಿದಾರರನ್ನು ಗುರಿಯಾಗಿಸಲಿದೆ. ಇದು ರಫ್ತುದಾರರು, ಸಣ್ಣ ಉದ್ದಿಮೆಗಳು ಮತ್ತು ಗ್ರಾಹಕರಿಗೆ ಸಮಾನವಾದ ಅವಕಾಶಗಳನ್ನು ಒದಗಿಸುತ್ತದೆ.

UPITS-2025, ಒಂದೇ ವೇದಿಕೆಯಲ್ಲಿ ರಾಜ್ಯದ ವೈವಿಧ್ಯಮಯ ಕರಕುಶಲ ಸಂಪ್ರದಾಯಗಳು, ಆಧುನಿಕ ಕೈಗಾರಿಕೆಗಳು, ಸದೃಢ MSMEಗಳು (ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳು) ಹಾಗೂ ಉದಯೋನ್ಮುಖ ಉದ್ಯಮಿಗಳನ್ನು ಪ್ರದರ್ಶಿಸಲಿದೆ. ಕರಕುಶಲ, ಜವಳಿ, ಚರ್ಮ, ಕೃಷಿ, ಆಹಾರ ಸಂಸ್ಕರಣೆ, ಐಟಿ, ಎಲೆಕ್ಟ್ರಾನಿಕ್ಸ್, ಆಯುಷ್ ಸೇರಿದಂತೆ ಪ್ರಮುಖ ವಲಯಗಳು ಇಲ್ಲಿ ಪಾಲ್ಗೊಳ್ಳಲಿವೆ. ಜೊತೆಗೆ, ಉತ್ತರ ಪ್ರದೇಶದ ಶ್ರೀಮಂತ ಕಲೆ, ಸಂಸ್ಕೃತಿ ಮತ್ತು ಪಾಕಪದ್ಧತಿಯನ್ನೂ ಒಂದೇ ಸೂರಿನಡಿ ಅನಾವರಣಗೊಳಿಸಲಿದೆ.

ಈ ಮೇಳದಲ್ಲಿ ರಷ್ಯಾ 'ಪಾಲುದಾರ ರಾಷ್ಟ್ರ'ವಾಗಿ ಭಾಗವಹಿಸುತ್ತಿದ್ದು, ಇದು ದ್ವಿಪಕ್ಷೀಯ ವ್ಯಾಪಾರ, ತಂತ್ರಜ್ಞಾನ ವಿನಿಮಯ ಮತ್ತು ದೀರ್ಘಕಾಲೀನ ಸಹಕಾರಕ್ಕೆ ಹೊಸ ಅವಕಾಶಗಳನ್ನು ತೆರೆಯುವ ಮೂಲಕ ಕಾರ್ಯತಂತ್ರದ ಮಹತ್ವವನ್ನು ಹೆಚ್ಚಿಸಿದೆ. ಈ ಬೃಹತ್ ವಾಣಿಜ್ಯ ಪ್ರದರ್ಶನದಲ್ಲಿ 2,400ಕ್ಕೂ ಹೆಚ್ಚು ಪ್ರದರ್ಶಕರು, 1,25,000 B2B ಸಂದರ್ಶಕರು ಹಾಗೂ 4,50,000 B2C ಸಂದರ್ಶಕರು ಭಾಗವಹಿಸುವ ನಿರೀಕ್ಷೆಯಿದೆ.

ರಾಜಸ್ಥಾನದಲ್ಲಿ ಪ್ರಧಾನಮಂತ್ರಿ

ಪ್ರಧಾನಮಂತ್ರಿಯವರು ಇಂದು ರಾಜಸ್ಥಾನದ ಬನ್ಸ್ವಾರಾದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ₹1,22,100 ಕೋಟಿಗೂ ಅಧಿಕ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ ಮತ್ತು ಹಲವು ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ.

ಭಾರತದ ವಿದ್ಯುತ್ ವಲಯವನ್ನು ಪರಿವರ್ತಿಸಿ, ಎಲ್ಲರಿಗೂ ಕೈಗೆಟುಕುವ, ವಿಶ್ವಾಸಾರ್ಹ ಮತ್ತು ಸುಸ್ಥಿರ ವಿದ್ಯುತ್ ಪೂರೈಕೆಯನ್ನು ಖಚಿತಪಡಿಸುವ ತಮ್ಮ ಬದ್ಧತೆಗೆ ಅನುಗುಣವಾಗಿ, ಪ್ರಧಾನಮಂತ್ರಿಯವರು ಸುಮಾರು ₹42,000 ಕೋಟಿ ವೆಚ್ಚದ 'ಅಣುಶಕ್ತಿ ವಿದ್ಯುತ್ ನಿಗಮ ಲಿಮಿಟೆಡ್'ನ (ASHVINI) 'ಮಾಹಿ ಬನ್ಸ್ವಾರಾ ರಾಜಸ್ಥಾನ ಅಣು ವಿದ್ಯುತ್ ಯೋಜನೆ'ಗೆ (4X700 MW) ಶಿಲಾನ್ಯಾಸ ನೆರವೇರಿಸಲಿದ್ದಾರೆ. ಇದು ದೇಶದ ಅತಿದೊಡ್ಡ ಪರಮಾಣು ಸ್ಥಾವರಗಳಲ್ಲಿ ಒಂದಾಗಲಿದ್ದು, ವಿಶ್ವಾಸಾರ್ಹ ಬೇಸ್-ಲೋಡ್ ಶಕ್ತಿಯನ್ನು ಪೂರೈಸಲಿದೆ. ಜೊತೆಗೆ, ಪರಿಸರ ಸಂರಕ್ಷಣೆ ಮತ್ತು ವಿಕಸಿಸುತ್ತಿರುವ ಪರಮಾಣು ಶಕ್ತಿ ಕ್ಷೇತ್ರದಲ್ಲಿ ಭಾರತದ ಸ್ಥಾನವನ್ನು ಇದು ಮತ್ತಷ್ಟು ಬಲಪಡಿಸಲಿದೆ. 'ಆತ್ಮನಿರ್ಭರ ಭಾರತ'ದ ಆಶಯವನ್ನು ಮುಂದುವರಿಸುತ್ತಾ, ಈ ಯೋಜನೆಯು NPCIL ನಿಂದ ವಿನ್ಯಾಸಗೊಳಿಸಲ್ಪಟ್ಟ ಮತ್ತು ಅಭಿವೃದ್ಧಿಪಡಿಸಲಾದ ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ನಾಲ್ಕು ಸ್ವದೇಶಿ 700 MW ಒತ್ತಡಯುಕ್ತ ಭಾರಿ ನೀರಿನ ರಿಯಾಕ್ಟರ್‌ ಗಳನ್ನು (PHWR) ಒಳಗೊಂಡಿದೆ. ಇದು ಭಾರತದ 'ಫ್ಲೀಟ್ ಮೋಡ್' ಉಪಕ್ರಮದ ಭಾಗವಾಗಿದ್ದು, ಇದರ ಅಡಿಯಲ್ಲಿ ಏಕರೂಪದ ವಿನ್ಯಾಸ ಮತ್ತು ಖರೀದಿ ಯೋಜನೆಗಳೊಂದಿಗೆ ದೇಶಾದ್ಯಂತ ಹತ್ತು 700 MW ಸಾಮರ್ಥ್ಯದ ರಿಯಾಕ್ಟರ್‌ ಗಳನ್ನು ನಿರ್ಮಿಸಲಾಗುತ್ತಿದೆ. ಈ ಯೋಜನೆಯು ವೆಚ್ಚ-ಪರಿಣಾಮಕಾರಿತ್ವ, ತ್ವರಿತ ಅನುಷ್ಠಾನ ಮತ್ತು ಕ್ರೋಢೀಕೃತ ಕಾರ್ಯಾಚರಣೆಯ ಪರಿಣತಿಯನ್ನು ತರಲಿದೆ.

ಭಾರತದ ಶುದ್ಧ ಇಂಧನ ಮೂಲಸೌಕರ್ಯಕ್ಕೆ ದೊಡ್ಡ ಉತ್ತೇಜನ ನೀಡುವ ನಿಟ್ಟಿನಲ್ಲಿ, ಪ್ರಧಾನಿಯವರು ರಾಜಸ್ಥಾನದಲ್ಲಿ ಸುಮಾರು ₹19,210 ಕೋಟಿ ಮೌಲ್ಯದ ಹಸಿರು ಇಂಧನ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ ಮತ್ತು ಶಿಲಾನ್ಯಾಸ ನೆರವೇರಿಸಲಿದ್ದಾರೆ. ಅವರು ಫಲೋಡಿ, ಜೈಸಲ್ಮೇರ್, ಜಾಲೋರ್, ಸಿಕರ್ ಸೇರಿದಂತೆ ಹಲವೆಡೆ ಸೌರ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ಜೊತೆಗೆ, ಬಿಕಾನೇರ್‌ ನಲ್ಲಿ ಸೌರ ಯೋಜನೆಗೆ ಶಿಲಾನ್ಯಾಸವನ್ನೂ ನೆರವೇರಿಸಲಿದ್ದಾರೆ. ಇದಲ್ಲದೆ, ಅವರು ಆಂಧ್ರಪ್ರದೇಶದ ರಾಮಗಿರಿಯಲ್ಲಿ ಸ್ಥಾಪನೆಯಾಗಲಿರುವ ಸೋಲಾರ್ ಪಾರ್ಕ್‌ಗೂ ಶಿಲಾನ್ಯಾಸ ಮಾಡಲಿದ್ದಾರೆ. ಈ ಯೋಜನೆಗಳು ಭಾರತದ ಶುದ್ಧ ಇಂಧನ ಸಾಮರ್ಥ್ಯಕ್ಕೆ ಗಣನೀಯ ಕೊಡುಗೆ ನೀಡಲಿವೆ. ಇವು ಅಪಾರ ಪ್ರಮಾಣದ ಹಸಿರು ವಿದ್ಯುತ್ ಉತ್ಪಾದಿಸುವುದರ ಜೊತೆಗೆ, ಲಕ್ಷಾಂತರ ಟನ್ ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಯನ್ನು ತಡೆಯಲಿವೆ.

ಪ್ರಧಾನಮಂತ್ರಿಯವರು ಇಂದು ಭಾರತ ಸರ್ಕಾರದ 'ನವೀಕರಿಸಬಹುದಾದ ಇಂಧನ ವಲಯ' (REZ) ಉಪಕ್ರಮದ ಅಡಿಯಲ್ಲಿ ₹13,180 ಕೋಟಿಗೂ ಅಧಿಕ ಮೌಲ್ಯದ ಮೂರು ವಿದ್ಯುತ್ ಪ್ರಸರಣ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಈ ಉಪಕ್ರಮವು 2030ರ ವೇಳೆಗೆ ಎಂಟು ರಾಜ್ಯಗಳಲ್ಲಿ 181.5 GW ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದೆ. ಈ ನವೀಕರಿಸಬಹುದಾದ ಶಕ್ತಿಯನ್ನು ಬೇಡಿಕೆಯ ಕೇಂದ್ರಗಳಿಗೆ ಸಮರ್ಪಕವಾಗಿ ತಲುಪಿಸಲು ಮತ್ತು ಗ್ರಿಡ್ ಸ್ಥಿರತೆಯನ್ನು ಹೆಚ್ಚಿಸಲು, ಪವರ್‌ಗ್ರಿಡ್ ಸಂಸ್ಥೆಯು ರಾಜಸ್ಥಾನ REZ ಗಾಗಿ ಪ್ರಮುಖ ಪ್ರಸರಣ ವ್ಯವಸ್ಥೆಗಳನ್ನು ಜಾರಿಗೊಳಿಸುತ್ತಿದೆ.

ಈ ಯೋಜನೆಗಳಲ್ಲಿ, ರಾಜಸ್ಥಾನದ ಬೇವಾರ್‌ ನಿಂದ ಮಧ್ಯಪ್ರದೇಶದ ಮಂದ್‌ ಸೌರ್‌ ವರೆಗೆ 765 KV ಪ್ರಸರಣ ಮಾರ್ಗ; ರಾಜಸ್ಥಾನದ ಸಿರೋಹಿಯಿಂದ ಮಧ್ಯಪ್ರದೇಶದ ಮಂದಸೌರ್ ಮತ್ತು ಖಾಂಡ್ವಾಗೆ ಪ್ರಸರಣ ಮಾರ್ಗ; ಹಾಗೂ ರಾಜಸ್ಥಾನದ ಬಿಕಾನೇರ್‌ನಿಂದ ಹರಿಯಾಣದ ಸಿವಾನಿ ಮತ್ತು ಫತೇಹಾಬಾದ್ ಹಾಗೂ ಪಂಜಾಬ್‌ನ ಪಟ್ರಾನ್‌ ವರೆಗೆ 765 KV ಮತ್ತು 400 KV ಪ್ರಸರಣ ಮಾರ್ಗಗಳ ನಿರ್ಮಾಣ ಮತ್ತು ಸಂಬಂಧಿತ ಸಬ್‌ ಸ್ಟೇಷನ್‌ಗಳ ವಿಸ್ತರಣೆ/ಸಾಮರ್ಥ್ಯ ವೃದ್ಧಿ ಕಾರ್ಯಗಳು ಸೇರಿವೆ. ಒಟ್ಟಾರೆಯಾಗಿ, ಈ ಯೋಜನೆಗಳು ರಾಜಸ್ಥಾನದ ಉತ್ಪಾದನಾ ಕೇಂದ್ರಗಳಿಂದ 15.5 GW ಹಸಿರು ಶಕ್ತಿಯನ್ನು ಭಾರತದಾದ್ಯಂತದ ಫಲಾನುಭವಿ ರಾಜ್ಯಗಳಲ್ಲಿನ ಬೇಡಿಕೆಯ ಕೇಂದ್ರಗಳಿಗೆ ಸುಗಮವಾಗಿ ವರ್ಗಾಯಿಸಲು ಅನುಕೂಲ ಮಾಡಿಕೊಡಲಿವೆ.

ಇದಲ್ಲದೆ, ಪ್ರಧಾನಮಂತ್ರಿಯವರು ಜೈಸಲ್ಮೇರ್ ಮತ್ತು ಬಿಕಾನೇರ್‌ ನಲ್ಲಿ 220 KV ಸಾಮರ್ಥ್ಯದ ಮೂರು ಗ್ರಿಡ್ ಸಬ್‌ ಸ್ಟೇಷನ್‌ ಗಳಿಗೆ (GSS) ಮತ್ತು ಅದಕ್ಕೆ ಸಂಬಂಧಿಸಿದ ಮಾರ್ಗಗಳಿಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಅವರು ಬಾರ್ಮರ್ ಜಿಲ್ಲೆಯ ಶಿವ್‌ ನಲ್ಲಿ 220 KV ಗ್ರಿಡ್ ಸಬ್‌ಸ್ಟೇಷನ್‌ ಅನ್ನು ಉದ್ಘಾಟಿಸಲಿದ್ದಾರೆ. ₹490 ಕೋಟಿಗೂ ಅಧಿಕ ಮೌಲ್ಯದ ಈ ಯೋಜನೆಗಳು, ಈ ಪ್ರದೇಶದಲ್ಲಿ ಇಂಧನ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಗಣನೀಯವಾಗಿ ಕೊಡುಗೆ ನೀಡಲಿವೆ.

ರೈತರಿಗೆ ಸಬಲೀಕರಣ ಕಲ್ಪಿಸುವ ತಮ್ಮ ಬದ್ಧತೆಗೆ ಅನುಗುಣವಾಗಿ, ಪ್ರಧಾನಮಂತ್ರಿಯವರು ಪಿಎಂ-ಕುಸುಮ್ (ಪ್ರಧಾನ ಮಂತ್ರಿ ಕಿಸಾನ್ ಊರ್ಜಾ ಸುರಕ್ಷಾ ಏವಂ ಉತ್ಥಾನ ಮಹಾಭಿಯಾನ್) ಯೋಜನೆ (ಘಟಕ ಸಿ) ಅಡಿಯಲ್ಲಿ ರಾಜಸ್ಥಾನ, ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಕರ್ನಾಟಕ ರಾಜ್ಯಗಳಲ್ಲಿ ₹ 16,050 ಕೋಟಿಗೂ ಅಧಿಕ ಮೌಲ್ಯದ 3517 MW ನಷ್ಟು ಸಾಮರ್ಥ್ಯದ ಫೀಡರ್ ಮಟ್ಟದ ಸೌರೀಕರಣ (Feeder Level Solarization) ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ಕೃಷಿ ಫೀಡರ್‌ ಗಳನ್ನು ಸೌರೀಕರಣಗೊಳಿಸುವುದರಿಂದ ಲಕ್ಷಾಂತರ ರೈತರಿಗೆ ವಿದ್ಯುತ್ ವೆಚ್ಚವನ್ನು ಕಡಿಮೆ ಮಾಡುವುದು, ನೀರಾವರಿ ವೆಚ್ಚವನ್ನು ಕಡಿತಗೊಳಿಸುವುದು ಮತ್ತು ಗ್ರಾಮೀಣ ಇಂಧನ ಸ್ವಾವಲಂಬನೆಯನ್ನು ಉತ್ತೇಜಿಸುವ ಮೂಲಕ ಕೈಗೆಟುಕುವ, ವಿಶ್ವಾಸಾರ್ಹ ಮತ್ತು ಸುಸ್ಥಿರ ನೀರಾವರಿ ವಿದ್ಯುತ್ ಪೂರೈಕೆಯಾಗಲಿದೆ.

ಜಲ ಭದ್ರತೆಯ ಕುರಿತ ತಮ್ಮ ದೃಷ್ಟಿಕೋನವನ್ನು ಮುಂದುವರೆಸುತ್ತಾ, ರಾಮ್‌ ಜಲ್ ಸೇತು ಲಿಂಕ್ ಯೋಜನೆಗೆ ಒಂದು ಪ್ರಮುಖ ಉತ್ತೇಜನವಾಗಿ, ಪ್ರಧಾನಮಂತ್ರಿಯವರು ರಾಜಸ್ಥಾನದಲ್ಲಿ ₹ 20,830 ಕೋಟಿಗೂ ಅಧಿಕ ಮೌಲ್ಯದ ಹಲವು ಜಲಸಂಪನ್ಮೂಲ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಮಾಡಲಿದ್ದಾರೆ. ಅವರು ಇಸರ್ಡಾದಿಂದ ವಿವಿಧ ಫೀಡರ್‌ ಗಳ ನಿರ್ಮಾಣ, ಅಜ್ಮೀರ್ ಜಿಲ್ಲೆಯಲ್ಲಿ ಮೋರ್ ಸಾಗರ್ ಕೃತಕ ಜಲಾಶಯದ ನಿರ್ಮಾಣ ಮತ್ತು ಚಿತ್ತೋರ್‌ ಗಢದಿಂದ ಅದರ ಫೀಡರ್‌ ಗೆ ಶಂಕುಸ್ಥಾಪನೆ ಮಾಡಲಿದ್ದಾರೆ. ಇತರೆ ಕಾಮಗಾರಿಗಳಲ್ಲಿ ಬಿಸಲಪುರ ಅಣೆಕಟ್ಟಿನಲ್ಲಿ ಇಂಟೇಕ್ ಪಂಪ್ ಹೌಸ್, ಖಾರಿ ಫೀಡರ್‌ ನ ಪುನರುಜ್ಜೀವನ ಮತ್ತು ಇತರ ವಿವಿಧ ಫೀಡರ್ ಕಾಲುವೆ ಕಾಮಗಾರಿಗಳು ಸೇರಿವೆ. ಪ್ರಧಾನಮಂತ್ರಿಯವರು ಇಸಾರ್ದಾ ಅಣೆಕಟ್ಟು, ಧೋಲ್‌ ಪುರ ಲಿಫ್ಟ್ ಯೋಜನೆ, ತಕ್ಲಿ ಯೋಜನೆ ಸೇರಿದಂತೆ ಇತರ ಯೋಜನೆಗಳನ್ನು ಸಹ ಉದ್ಘಾಟಿಸಲಿದ್ದಾರೆ.

ಎಲ್ಲರಿಗೂ ಸುರಕ್ಷಿತ ಮತ್ತು ಶುದ್ಧ ಕುಡಿಯುವ ನೀರು ಒದಗಿಸುವ ತಮ್ಮ ಬದ್ಧತೆಗೆ ಅನುಗುಣವಾಗಿ, ಪ್ರಧಾನಮಂತ್ರಿಯವರು ಪುನರುಜ್ಜೀವನ ಮತ್ತು ನಗರ ಪರಿವರ್ತನೆಗಾಗಿ ಅಟಲ್ ಮಿಷನ್ ಅಥವಾ ಅಮೃತ್ (AMRUT) 2.0 ಅಡಿಯಲ್ಲಿ ಬನ್ಸ್ವಾರಾ, ದುಂಗರಪುರ, ಉದಯಪುರ, ಸವಾಯಿ ಮಾಧೋಪುರ, ಚುರು, ಅಜ್ಮೀರ್, ಭಿಲ್ವಾರಾ ಜಿಲ್ಲೆಗಳು ಸೇರಿದಂತೆ ಇತರ ಜಿಲ್ಲೆಗಳಲ್ಲಿ ₹ 5,880 ಕೋಟಿಗೂ ಅಧಿಕ ಮೌಲ್ಯದ ಪ್ರಮುಖ ಕುಡಿಯುವ ನೀರು ಸರಬರಾಜು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ರಸ್ತೆ ಮೂಲಸೌಕರ್ಯಕ್ಕೆ ಪ್ರಮುಖ ಉತ್ತೇಜನ ನೀಡುವ ನಿಟ್ಟಿನಲ್ಲಿ, ಪ್ರಧಾನಮಂತ್ರಿಯವರು ಭರತಪುರ ನಗರದಲ್ಲಿ ಮೇಲ್ಸೇತುವೆಗಳ (Flyovers) ನಿರ್ಮಾಣ, ಬನಾಸ್ ನದಿಗೆ ಅಡ್ಡಲಾಗಿ ಸೇತುವೆ ಮತ್ತು 116 ಅಟಲ್ ಪ್ರಗತಿ ಪಥ (Atal Pragati Path) ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಲಿದ್ದಾರೆ. ಇದಲ್ಲದೆ, ಅವರು ಬಾರ್ಮರ್, ಅಜ್ಮೀರ್, ದುಂಗರಪುರ ಜಿಲ್ಲೆಗಳಲ್ಲಿ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಿಗೆ ಸಂಬಂಧಿಸಿದ ಹಲವು ರಸ್ತೆ ಯೋಜನೆಗಳನ್ನು ಉದ್ಘಾಟಿಸಿ ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ₹2,630 ಕೋಟಿಗೂ ಅಧಿಕ ಮೌಲ್ಯದ ಈ ಯೋಜನೆಗಳು ಪ್ರಾದೇಶಿಕ ರಸ್ತೆ ಸಂಪರ್ಕವನ್ನು ಸುಧಾರಿಸಿ, ಸುಗಮ ಸಂಚಾರಕ್ಕೆ ಮತ್ತು ರಸ್ತೆ ಸುರಕ್ಷತೆಯನ್ನು ಹೆಚ್ಚಿಸಲು ನೆರವಾಗಲಿವೆ.

ಪ್ರಧಾನಮಂತ್ರಿಯವರು ಭರತಪುರದಲ್ಲಿ 250 ಹಾಸಿಗೆಗಳ ಆರ್‌ ಬಿ ಎಂ ಆಸ್ಪತ್ರೆ, ಜೈಪುರದಲ್ಲಿ ಐಟಿ ಅಭಿವೃದ್ಧಿ ಮತ್ತು ಇ-ಆಡಳಿತ ಕೇಂದ್ರ (IT Development and E-Governance Centre), ಮಕ್ರಾನಾ ನಗರದಲ್ಲಿ ಸಂಸ್ಕರಣಾ ಘಟಕಗಳು ಮತ್ತು ಪಂಪಿಂಗ್ ಸ್ಟೇಷನ್‌ಗಳನ್ನು ಒಳಗೊಂಡ ಒಳಚರಂಡಿ ವ್ಯವಸ್ಥೆ, ಹಾಗೂ ಮಾಂಡವಾ ಮತ್ತು ಝುನ್‌ ಝುನೂ ಜಿಲ್ಲೆಗಳಲ್ಲಿ ಒಳಚರಂಡಿ ಮತ್ತು ನೀರು ಸರಬರಾಜು ಯೋಜನೆಗಳನ್ನು ಸಹ ಉದ್ಘಾಟಿಸಲಿದ್ದಾರೆ.

ರೈಲ್ವೆ ಸಂಪರ್ಕಕ್ಕೆ ಮತ್ತಷ್ಟು ಉತ್ತೇಜನ ನೀಡುವ ಸಲುವಾಗಿ, ಪ್ರಧಾನಮಂತ್ರಿಯವರು ಮೂರು ರೈಲುಗಳಿಗೆ ಹಸಿರು ನಿಶಾನೆ ತೋರಿಸಲಿದ್ದಾರೆ: ಬಿಕಾನೇರ್ ಮತ್ತು ದೆಹಲಿ ಕ್ಯಾಂಟ್ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು, ಜೋಧಪುರ ಮತ್ತು ದೆಹಲಿ ಕ್ಯಾಂಟ್ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಮತ್ತು ಉದಯಪುರ ಸಿಟಿ – ಚಂಡೀಗಢ ಎಕ್ಸ್‌ಪ್ರೆಸ್. ಈ ರೈಲುಗಳು ರಾಜಸ್ಥಾನ ಮತ್ತು ಇತರ ಉತ್ತರ ರಾಜ್ಯಗಳ ನಡುವಿನ ಸಂಪರ್ಕವನ್ನು ಗಣನೀಯವಾಗಿ ಸುಧಾರಿಸಲಿವೆ.

ಎಲ್ಲರಿಗೂ ಉದ್ಯೋಗ ಒದಗಿಸುವ ತಮ್ಮ ದೃಷ್ಟಿಕೋನವನ್ನು ಮುಂದುವರೆಸುತ್ತಾ, ಪ್ರಧಾನಮಂತ್ರಿಯವರು ರಾಜಸ್ಥಾನದ ಸರ್ಕಾರಿ ಇಲಾಖೆಗಳು ಮತ್ತು ಸಂಸ್ಥೆಗಳಲ್ಲಿ ಹೊಸದಾಗಿ ನೇಮಕಗೊಂಡ ಯುವಕರಿಗೆ 15,000 ಕ್ಕೂ ಹೆಚ್ಚು ನೇಮಕಾತಿ ಪತ್ರಗಳನ್ನು ವಿತರಿಸಲಿದ್ದಾರೆ. ಇದರಲ್ಲಿ 5770 ಕ್ಕೂ ಹೆಚ್ಚು ಪಶುಪಾಲಕರು, 4190 ಜೂನಿಯರ್ ಸಹಾಯಕರು, 1800 ಜೂನಿಯರ್ ಬೋಧಕರು, 1460 ಜೂನಿಯರ್ ಇಂಜಿನಿಯರ್‌ ಗಳು, 1200 ತೃತೀಯ ದರ್ಜೆ ಹಂತ-2 ಶಿಕ್ಷಕರು ಇತರೆ ಹುದ್ದೆಗಳಿಗೆ ನೇಮಕಗೊಂಡವರು ಸೇರಿದ್ದಾರೆ.

 

*****
 


(रिलीज़ आईडी: 2171041) आगंतुक पटल : 40
इस विज्ञप्ति को इन भाषाओं में पढ़ें: Marathi , Assamese , English , Urdu , हिन्दी , Manipuri , Bengali , Punjabi , Gujarati , Odia , Tamil , Telugu , Malayalam