ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
azadi ka amrit mahotsav

ವಿಜ್ಞಾನಾಧಾರಿತ ಸೌರ ಮ್ಯಾಪಿಂಗ್ ಮತ್ತು ತರಬೇತಿ ಉಪಕ್ರಮಗಳ ಮೂಲಕ ಭಾರತವು ಸ್ವಾವಲಂಬಿ ಶುದ್ಧ ಇಂಧನ ಭವಿಷ್ಯವನ್ನು ನಿರ್ಮಿಸುತ್ತಿದೆ: ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ


ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ ಅವರು ಸೌರ ಕೋಶ ಮತ್ತು ಮಾಡ್ಯೂಲ್ ಉತ್ಪಾದನೆ ಕುರಿತ ಮೊದಲ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿದರು

ನವೀಕರಿಸಬಹುದಾದ ಇಂಧನ ಸಚಿವಾಲಯವು (MNRE) ನವೀಕರಿಸಿದ ಸೌರಶಕ್ತಿ ಸಾಮರ್ಥ್ಯ ಮೌಲ್ಯಮಾಪನ ವರದಿಯನ್ನು ಬಿಡುಗಡೆ ಮಾಡಿದೆ; ಈ ವರದಿಯ ಪ್ರಕಾರ, ಭಾರತದಲ್ಲಿ 3,343 ಗಿಗಾವ್ಯಾಟ್ (GW) ಸೌರಶಕ್ತಿ ಸಾಮರ್ಥ್ಯವಿದೆ ಎಂದು ಅಂದಾಜಿಸಲಾಗಿದೆ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ಸಹಭಾಗಿತ್ವದಲ್ಲಿ, ಭೌಗೋಳಿಕ ಮತ್ತು ಬಹು-ಮಾನದಂಡಗಳ ವಿಧಾನದೊಂದಿಗೆ ಸೌರಶಕ್ತಿ ಸಾಮರ್ಥ್ಯದ ಮ್ಯಾಪಿಂಗ್‌ ನಲ್ಲಿ ಇದು ಒಂದು ಹೊಸ ಹೆಜ್ಜೆಯಾಗಿದೆ

'ನಾರಿ ಶಕ್ತಿ' ಮುಂಚೂಣಿಯಲ್ಲಿ: ಅಂತಾರಾಷ್ಟ್ರೀಯ ಸೌರ ತರಬೇತಿ ಕಾರ್ಯಕ್ರಮದ ಅಡಿಯಲ್ಲಿ 15 ರಾಷ್ಟ್ರಗಳಿಂದ ಬಂದ 28 ಮಹಿಳಾ ತರಬೇತುದಾರರೊಂದಿಗೆ ಸಚಿವರು ಸಂವಾದ ನಡೆಸಿದರು

प्रविष्टि तिथि: 23 SEP 2025 6:46PM by PIB Bengaluru

ಕೇಂದ್ರ ನವೀಕರಿಸಬಹುದಾದ ಇಂಧನ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರು, ಸೌರ ಶಕ್ತಿ ಸಾಮರ್ಥ್ಯ ವರದಿಯನ್ನು ಬಿಡುಗಡೆ ಮಾಡಿ, ಸೇವಾ ಪರ್ವದ ಅಂಗವಾಗಿ ಗುರುಗ್ರಾಮದ ರಾಷ್ಟ್ರೀಯ ಸೌರ ಶಕ್ತಿ ಸಂಸ್ಥೆಯಲ್ಲಿ ಮೊದಲ ಸೌರ ಕೋಶ ಮತ್ತು ಮಾಡ್ಯೂಲ್ ಉತ್ಪಾದನಾ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಕಾರ್ಯಕ್ರಮಗಳ ಮೂಲಕ ಭಾರತವು ಶುದ್ಧ ಇಂಧನ ಕ್ಷೇತ್ರದಲ್ಲಿ ಹೊಸ ಅಧ್ಯಾಯವನ್ನು ಬರೆಯುತ್ತಿದೆ ಎಂದು ಹೇಳಿದರು.

ಅವರು ಎಂ ಎನ್‌ ಆರ್‌ ಇ (MNRE) ಪ್ರಧಾನ ಕಚೇರಿಯಲ್ಲಿ ನಡೆದ ಸಭೆಯಲ್ಲಿ "ಭಾರತದ ಸೌರ ಪಿವಿ ಸಾಮರ್ಥ್ಯದ ಮೌಲ್ಯಮಾಪನ (ನೆಲದ ಮೇಲೆ ಅಳವಡಿಸಲಾದ)" ಎಂಬ ವರದಿಯನ್ನು ಬಿಡುಗಡೆ ಮಾಡಿ, ತರಬೇತಿ ಕಾರ್ಯಕ್ರಮಕ್ಕೆ ಔಪಚಾರಿಕವಾಗಿ ಚಾಲನೆ ನೀಡಿದರು. 2030ರ ವೇಳೆಗೆ 500 ಗಿಗಾವ್ಯಾಟ್ (GW) ಪಳೆಯುಳಿಕೆಯೇತರ ಇಂಧನ ಸಾಮರ್ಥ್ಯವನ್ನು ಸಾಧಿಸುವ, 2047ರ ವೇಳೆಗೆ ಇಂಧನ ಸ್ವಾವಲಂಬನೆ ಮತ್ತು 2070ರ ವೇಳೆಗೆ ನಿವ್ವಳ-ಶೂನ್ಯ ಗುರಿಯನ್ನು ತಲುಪುವ ಭಾರತದ ಸಂಕಲ್ಪಕ್ಕೆ ಈ ಉಪಕ್ರಮಗಳು ನಿರ್ಣಾಯಕ ಹೆಜ್ಜೆಗಳಾಗಿವೆ ಎಂದು ಶ್ರೀ ಜೋಶಿಯವರು ಒತ್ತಿ ಹೇಳಿದರು.

ಭಾರತವು ಈಗಾಗಲೇ 250 ಗಿಗಾವ್ಯಾಟ್‌ಗಿಂತ ಹೆಚ್ಚು ಪಳೆಯುಳಿಕೆಯೇತರ ಇಂಧನ ಸಾಮರ್ಥ್ಯವನ್ನು ದಾಟಿದ್ದು, 2030ರ ಗಡುವಿಗಿಂತ ಐದು ವರ್ಷ ಮುಂಚಿತವಾಗಿ ಎನ್‌ ಡಿ ಸಿ (NDC) ಗುರಿಯಾದ ಶೇ.50ರಷ್ಟು ಪಳೆಯುಳಿಕೆಯೇತರ ಇಂಧನ ಸಾಮರ್ಥ್ಯದ ಪಾಲನ್ನು ಸಾಧಿಸಿದೆ ಎಂದು ಸಚಿವರು ತಿಳಿಸಿದರು. ʻಆತ್ಮನಿರ್ಭರ ಭಾರತʼದ ದೂರದೃಷ್ಟಿಯಂತೆ, ಭಾರತವು ವಾರ್ಷಿಕವಾಗಿ 100 ಗಿಗಾವ್ಯಾಟ್‌ ಗಿಂತ ಹೆಚ್ಚು ಸೌರ ಪಿವಿ ಮಾಡ್ಯೂಲ್ ಸಾಮರ್ಥ್ಯ ಮತ್ತು 20 ಗಿಗಾವ್ಯಾಟ್‌ಗಿಂತ ಹೆಚ್ಚು ಗಾಳಿ ಟರ್ಬೈನ್ ತಯಾರಿಸುವ ಸಾಮರ್ಥ್ಯದೊಂದಿಗೆ ಬಲವಾದ ದೇಶೀಯ ಉತ್ಪಾದನಾ ನೆಲೆಯನ್ನು ಸೃಷ್ಟಿಸಿದೆ ಎಂದು ಅವರು ಹೇಳಿದರು.

ವರದಿ ಬಿಡುಗಡೆ: ಭಾರತದ ಸೌರ ಪಿ.ವಿ. ಸಾಮರ್ಥ್ಯದ ಮೌಲ್ಯಮಾಪನ (ಭೂ-ಆಧಾರಿತ)

ಭಾರತವು ವಿಶ್ವದಲ್ಲೇ ಅತ್ಯುತ್ತಮ ಸೌರ ಸಂಪನ್ಮೂಲವನ್ನು ಹೊಂದಿರುವ ದೇಶಗಳಲ್ಲಿ ಒಂದಾಗಿದೆ. ಇಲ್ಲಿ ದೇಶದ ಬಹುತೇಕ ಭಾಗಗಳಲ್ಲಿ ಸರಾಸರಿ ಸೌರ ವಿಕಿರಣವು (average irradiance) ಪ್ರತಿ ಚದರ ಮೀಟರ್‌ಗೆ ದಿನಕ್ಕೆ 3.5 ರಿಂದ 5.5 kWh ವರೆಗೆ ಇರುತ್ತದೆ. ಈ ಸದಾವಕಾಶವನ್ನು ಗುರುತಿಸಿ, ಕೇಂದ್ರ ನವೀನ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ (MNRE) ಅಡಿಯಲ್ಲಿ ಕಾರ್ಯನಿರ್ವಹಿಸುವ ಸ್ವಾಯತ್ತ ಸಂಸ್ಥೆಯಾದ ರಾಷ್ಟ್ರೀಯ ಸೌರಶಕ್ತಿ ಸಂಸ್ಥೆಯು (NISE), ಭಾರತದ ಭೂ-ಆಧಾರಿತ ಸೌರ ಪಿ.ವಿ. ಸಾಮರ್ಥ್ಯದ ಕುರಿತು ನವೀಕರಿಸಿದ, ವೈಜ್ಞಾನಿಕ ಮತ್ತು ಸ್ಥಳೀಯ ದತ್ತಾಂಶ ಆಧಾರಿತ ಮೌಲ್ಯಮಾಪನವನ್ನು ಕೈಗೊಂಡಿದೆ.

ಈ ಹೊಸ ವರದಿಯು, 2014ರಲ್ಲಿ ಅಂದಾಜಿಸಲಾಗಿದ್ದ 749 GWp (ಗಿಗಾವ್ಯಾಟ್ ಪೀಕ್) ಸಾಮರ್ಥ್ಯದ ವರದಿಯ ಮುಂದುವರಿದ ಭಾಗವಾಗಿದೆ. ಇದು ಹೈ-ರೆಸಲ್ಯೂಷನ್ GIS, ಉಪಗ್ರಹ-ಆಧಾರಿತ ಡೇಟಾಸೆಟ್‌ ಗಳು ಮತ್ತು ಸುಧಾರಿತ ಭೂ-ಬಳಕೆಯ ಮಾದರಿಗಳಂತಹ ಅತ್ಯಾಧುನಿಕ ಕಾರ್ಯವಿಧಾನಗಳನ್ನು ಒಳಗೊಂಡಿದೆ.

 

ಪ್ರಮುಖ ವಿಧಾನಗಳು:

•  ಸೌರ ವಿದ್ಯುತ್ ಸ್ಥಾವರಗಳಿಗೆ ಸೂಕ್ತ ಸ್ಥಳಗಳನ್ನು ಗುರುತಿಸಲು ಉನ್ನತ-ಮಟ್ಟದ ಭೌಗೋಳಿಕ-ಅವಕಾಶ ವಿಶ್ಲೇಷಣೆಯನ್ನು ಬಳಸಲಾಗಿದೆ.

• ಸೌರ ಫಲಕಗಳ ನಡುವಿನ ಅಂತರ, ನೆರಳು, ವಿದ್ಯುತ್ ಉಪಕೇಂದ್ರಗಳಿಗೆ ಮತ್ತು ರಸ್ತೆಗಳಿಗೆ ಇರುವ ದೂರದಂತಹ ಮೂಲಸೌಕರ್ಯ ಹಾಗೂ ತಾಂತ್ರಿಕ ವಿನ್ಯಾಸದ ಅಂಶಗಳನ್ನು ಒಳಗೊಂಡಿದೆ.

ಪ್ರಮುಖ ಅಂಶಗಳು:

• ಗುರುತಿಸಲಾದ ಎಲ್ಲಾ ಬೀಳುಭೂಮಿಯಲ್ಲಿ ಸುಮಾರು 6.69% ಅನ್ನು ಬಳಸಿಕೊಂಡು, ಸುಮಾರು 3,343 ಗಿಗಾವ್ಯಾಟ್ (GWp) ಸೌರಶಕ್ತಿ ಸಾಮರ್ಥ್ಯವನ್ನು ಸೃಷ್ಟಿಸಲು ಸಾಧ್ಯ.

• ರಾಜಸ್ಥಾನ ಮತ್ತು ಗುಜರಾತ್‌ನಂತಹ ಮರುಭೂಮಿ ಪ್ರದೇಶಗಳಲ್ಲದೆ, ಇತರ ಹಲವು ರಾಜ್ಯಗಳಲ್ಲಿ ಕೂಡ ನೆಲದ ಮೇಲೆ ಸ್ಥಾಪಿಸುವ ಸೌರ ವಿದ್ಯುತ್ ಸ್ಥಾವರಗಳಿಗೆ ಹೆಚ್ಚಿನ ಸಾಮರ್ಥ್ಯ ಇದೆ ಎಂದು ವರದಿ ತೋರಿಸಿದೆ.

• ಈ ಸಾಮರ್ಥ್ಯವು ದೇಶಾದ್ಯಂತ ಉತ್ತಮವಾಗಿ ಹಂಚಿಕೆಯಾಗಿದೆ. ರಾಜಸ್ಥಾನ, ಮಹಾರಾಷ್ಟ್ರ ಮತ್ತು ಗುಜರಾತ್‌ ನಂತಹ ರಾಜ್ಯಗಳಲ್ಲಿ ವಿಶಾಲವಾದ ಬೀಳುಭೂಮಿ ಮತ್ತು ಹೆಚ್ಚಿನ ಸೂರ್ಯನ ಬೆಳಕಿನಿಂದಾಗಿ ಹೆಚ್ಚಿನ ಸಾಮರ್ಥ್ಯವಿದ್ದರೆ, ಇತರ ಹಲವು ರಾಜ್ಯಗಳು ಕೂಡ ಉತ್ತಮ ಸೌರಶಕ್ತಿ ಸಾಮರ್ಥ್ಯ ಮತ್ತು ಭೂ ಬಳಕೆಯ ದಕ್ಷತೆಯಿಂದಾಗಿ ಗಣನೀಯ ಸಾಮರ್ಥ್ಯವನ್ನು ತೋರಿಸಿವೆ.

ಈ ಮೌಲ್ಯಮಾಪನವು ಯೋಜನಾ ಸ್ಥಳಗಳನ್ನು ಗುರುತಿಸಲು, ಮೂಲಸೌಕರ್ಯ ಅಭಿವೃದ್ಧಿಪಡಿಸಲು ಮತ್ತು ಖಾಸಗಿ ವಲಯದ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸಲು ಹೂಡಿಕೆ-ಸಿದ್ಧ ಚೌಕಟ್ಟನ್ನು ಒದಗಿಸುತ್ತದೆ. ಈ ಫಲಿತಾಂಶಗಳು COP26 ರಲ್ಲಿ ಘೋಷಿಸಲಾದ ಭಾರತದ ಪಂಚಾಮೃತ ಬದ್ಧತೆಗಳಿಗೆ ನೇರವಾಗಿ ಹೊಂದಿಕೆಯಾಗುತ್ತವೆ ಮತ್ತು 2047 ರ ವೇಳೆಗೆ ಇಂಧನ ಸ್ವಾತಂತ್ರ್ಯ ಮತ್ತು 2070 ರ ವೇಳೆಗೆ ನಿವ್ವಳ-ಶೂನ್ಯ ಹೊರಸೂಸುವಿಕೆಯ ರಾಷ್ಟ್ರೀಯ ದೀರ್ಘಾವಧಿಯ ಗುರಿಗಳನ್ನು ಬೆಂಬಲಿಸುತ್ತವೆ.

ಸೌರ ಕೋಶ ಮತ್ತು ಮಾಡ್ಯೂಲ್ ತಯಾರಿಕಾ ತರಬೇತಿ ಕಾರ್ಯಕ್ರಮದ ಉದ್ಘಾಟನೆ

ಗೌರವಾನ್ವಿತ ಸಚಿವರು ರಾಷ್ಟ್ರೀಯ ಸೌರಶಕ್ತಿ ಸಂಸ್ಥೆಯಲ್ಲಿ (NISE) ಆಯೋಜಿಸಲಾದ "ಸೌರ ಕೋಶ ಮತ್ತು ಮಾಡ್ಯೂಲ್ ತಯಾರಿಕೆ" ಕುರಿತ ಮೊದಲ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಭಾರತದ ಸೌರಶಕ್ತಿ ಉತ್ಪಾದನಾ ವಲಯವು ಈಗಾಗಲೇ 100 GW ಗಿಂತಲೂ ಅಧಿಕ ಸ್ಥಾಪಿತ ಮಾಡ್ಯೂಲ್ ತಯಾರಿಕಾ ಸಾಮರ್ಥ್ಯ ಮತ್ತು 15 GW ಗಿಂತಲೂ ಹೆಚ್ಚಿನ ಸೌರ ಕೋಶ ತಯಾರಿಕಾ ಸಾಮರ್ಥ್ಯವನ್ನು ಸಾಧಿಸಿದೆ. ಈ ಬೆಳವಣಿಗೆಗೆ ಅನುಗುಣವಾಗಿ ತಾಂತ್ರಿಕ ಸಾಮರ್ಥ್ಯವನ್ನು ಹೆಚ್ಚಿಸಲು ಮತ್ತು ನುರಿತ ಕಾರ್ಯಪಡೆಯನ್ನು ಅಭಿವೃದ್ಧಿಪಡಿಸಲು ಈ ತರಬೇತಿಯನ್ನು ವಿನ್ಯಾಸಗೊಳಿಸಲಾಗಿದೆ.

ಈ ಕೋರ್ಸ್, ಅತ್ಯಾಧುನಿಕ ಉತ್ಪಾದನಾ ಪ್ರಕ್ರಿಯೆಗಳು, ಗುಣಮಟ್ಟ ನಿಯಂತ್ರಣ ನಿಯಮಗಳು ಮತ್ತು ಜಾಗತಿಕ ಅತ್ಯುತ್ತಮ ಅಭ್ಯಾಸಗಳ ಬಗ್ಗೆ ಪ್ರಾಯೋಗಿಕ ತರಬೇತಿಯನ್ನು ನೀಡುತ್ತದೆ. ಆ ಮೂಲಕ, ಸ್ವಾವಲಂಬಿ ಮತ್ತು ಜಾಗತಿಕವಾಗಿ ಸ್ಪರ್ಧಾತ್ಮಕವಾದ ಸೌರ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ರಚಿಸಲು ಇದು ಸಹಕಾರಿಯಾಗಲಿದೆ.

 

ಮಹಿಳಾ ಸಬಲೀಕರಣ ಮತ್ತು ಅಂತಾರಾಷ್ಟ್ರೀಯ ಸಹಕಾರ

 

'ಮಹಿಳೆಯರಿಗಾಗಿ ಸೌರಶಕ್ತಿ ತಂತ್ರಜ್ಞಾನಗಳು ಮತ್ತು ಅನ್ವಯಗಳು' ಎಂಬ ಅಂತರಾಷ್ಟ್ರೀಯ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ 15 ದೇಶಗಳ 28 ಮಹಿಳಾ ತರಬೇತಿದಾರರೊಂದಿಗೆ ಸಚಿವರು ಸಂವಾದ ನಡೆಸಿದರು. ಭಾರತದ ಶುದ್ಧ ಇಂಧನದೆಡೆಗಿನ ಪಯಣವು ಕೇವಲ ತಂತ್ರಜ್ಞಾನಕ್ಕೆ ಸೀಮಿತವಾಗಿಲ್ಲ, ಬದಲಾಗಿ ಇದು ಜನರು ಮತ್ತು ಅವರ ಸಬಲೀಕರಣಕ್ಕೂ ಸಂಬಂಧಿಸಿದೆ ಎಂದು ಅವರು ಈ ಸಂದರ್ಭದಲ್ಲಿ ಒತ್ತಿ ಹೇಳಿದರು.

ಪ್ರಧಾನಿ ಮೋದಿಯವರ 'ಸೋಲಾರ್ ದೀದಿ' ದೃಷ್ಟಿಕೋನವನ್ನು ಒತ್ತಿ ಹೇಳಿದ ಅವರು, ನವೀಕರಿಸಬಹುದಾದ ಇಂಧನ ಪಯಣದಲ್ಲಿ 'ನಾರಿ ಶಕ್ತಿ'ಯು ಮುಂಚೂಣಿಯಲ್ಲಿದೆ ಎಂದರು. ಅಲ್ಲದೆ, 'ಸೇವಾ ಪರ್ವ' ಮತ್ತು 'ನವರಾತ್ರಿ'ಯ ಶುಭ ಸಂದರ್ಭದಲ್ಲಿ ಈ ಕಾರ್ಯಕ್ರಮಗಳಿಗೆ ಚಾಲನೆ ನೀಡಿರುವುದರ ಮಹತ್ವವನ್ನು ಅವರು ಉಲ್ಲೇಖಿಸಿದರು. ಇದು ಸಾಮೂಹಿಕ ಸೇವೆಯ ಸ್ಫೂರ್ತಿ ಮತ್ತು ಭಾರತದ ಶುದ್ಧ ಇಂಧನ ಪಯಣವನ್ನು ಮುನ್ನಡೆಸುವಲ್ಲಿ ದೈವಿಕ ಸ್ತ್ರೀಶಕ್ತಿಯ ಬಲವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.

ನವೀಕರಿಸಿದ 'ಸೌರ ಪಿ.ವಿ. ಸಾಮರ್ಥ್ಯದ ಮೌಲ್ಯಮಾಪನ ವರದಿ'ಯ ಬಿಡುಗಡೆ ಮತ್ತು ಸೌರಶಕ್ತಿ ತಯಾರಿಕೆಯ ತರಬೇತಿ ಕಾರ್ಯಕ್ರಮದ ಉದ್ಘಾಟನೆಯ ಈ ದ್ವಿಮುಖ ಉಪಕ್ರಮಗಳು, ಭಾರತದ ನವೀಕರಿಸಬಹುದಾದ ಇಂಧನ ಪಯಣದಲ್ಲಿ ಒಂದು ನಿರ್ಣಾಯಕ ಕ್ಷಣವನ್ನು ಗುರುತಿಸುತ್ತವೆ ಎಂದು ಕೇಂದ್ರ ಸಚಿವರು ಹೇಳಿದರು. 'ವಿಕಸಿತ ಭಾರತ'ದ ದೃಷ್ಟಿಕೋನವನ್ನು ಸಾಕಾರಗೊಳಿಸಲು ಅಗತ್ಯವಿರುವ ವೈಜ್ಞಾನಿಕ ಮಾರ್ಗಸೂಚಿ, ನುರಿತ ಮಾನವಶಕ್ತಿ ಮತ್ತು ಉತ್ಪಾದನಾ ಸಾಮರ್ಥ್ಯವನ್ನು ಈ ಕ್ರಮಗಳು ಒದಗಿಸುತ್ತವೆ ಎಂದು ಅವರು ಒತ್ತಿ ಹೇಳಿದರು. ನಿರಂತರ ಪ್ರಯತ್ನಗಳು, ಜಾಗತಿಕ ಮತ್ತು ದೇಶೀಯ ಪಾಲುದಾರರ ಸಹಭಾಗಿತ್ವ, ಹಾಗೂ ನಾಗರಿಕರ ಸಕ್ರಿಯ ಭಾಗವಹಿಸುವಿಕೆಯೊಂದಿಗೆ, ಭಾರತವು ಇಂಧನ ಭದ್ರತೆ, ಆರ್ಥಿಕ ಬೆಳವಣಿಗೆ, ಮತ್ತು ಪರಿಸರ ಸುಸ್ಥಿರತೆಯನ್ನು ಖಾತ್ರಿಪಡಿಸಿಕೊಳ್ಳುವುದರ ಜೊತೆಗೆ, ಶುದ್ಧ ಇಂಧನ ಪರಿವರ್ತನೆಯಲ್ಲಿ ಜಾಗತಿಕ ನಾಯಕನಾಗಿ ಹೊರಹೊಮ್ಮಲು ಸಿದ್ಧವಾಗಿದೆ.

ಸಂಪೂರ್ಣ ವರದಿಯನ್ನು ನೋಡಲು : https://nise.res.in/wp-content/uploads/2025/09/Poster-and-Momento.pdf

 

 

*****
 


(रिलीज़ आईडी: 2170409) आगंतुक पटल : 24
इस विज्ञप्ति को इन भाषाओं में पढ़ें: English , Urdu , हिन्दी , Malayalam