ವಾರ್ತಾ ಮತ್ತು ಪ್ರಸಾರ ಸಚಿವಾಲಯ
ʻಏಷ್ಯನ್ ಕಂಟೆಂಟ್ ಮತ್ತು ಫಿಲ್ಮ್ ಮಾರ್ಕೆಟ್ -2025ʼರಲ್ಲಿ ʻವೇವ್ಸ್ ಬಜಾರ್ - ಭಾರತ್ ಪೆವಿಲಿಯನ್ʼ ಅನ್ನು ಉದ್ಘಾಟಿಸುವ ಮೂಲಕ ʻಬುಸಾನ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವʼದಲ್ಲಿ ತನ್ನ ಸೃಜನಶೀಲ ಆರ್ಥಿಕತೆಯನ್ನು ಪ್ರದರ್ಶಿಸಿದ ಭಾರತ
ಭಾರತೀಯ ಚಲನಚಿತ್ರಗಳು, ಡಿಜಿಟಲ್ ಕಂಟೆಂಟ್ ಮತ್ತು ಉದಯೋನ್ಮುಖ ಮಾಧ್ಯಮ ತಂತ್ರಜ್ಞಾನಗಳನ್ನು ಈ ʻಪೆವಿಲಿಯನ್ʼ ಪ್ರದರ್ಶಿಸಲಿದ್ದು, ಮನರಂಜನಾ ಕ್ಷೇತ್ರದಲ್ಲಿ ಜಾಗತಿಕ ಪಾಲುದಾರಿಕೆಯನ್ನು ಬಲಪಡಿಸಲಿದೆ
Posted On:
20 SEP 2025 10:10PM by PIB Bengaluru
ಕೊರಿಯಾ ಗಣರಾಜ್ಯದ ಬುಸಾನ್‌ನಲ್ಲಿ ʻಬುಸಾನ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವʼದ(ಬಿ.ಐ.ಎಫ್.ಎಫ್) ನೇಪಥ್ಯದಲ್ಲಿ ನಡೆದ ʻಏಷ್ಯನ್ ಕಂಟೆಂಟ್ ಮತ್ತು ಫಿಲ್ಮ್ ಮಾರ್ಕೆಟ್ (ಎ.ಸಿ.ಎಫ್.ಎಂ)-2025ರಲ್ಲಿ ಭಾರತದ ʻವೇವ್ಸ್ ಬಜಾರ್ - ಭಾರತ್ ಪೆವಿಲಿಯನ್ʼಅನ್ನು 2025ರ ಸೆಪ್ಟೆಂಬರ್ 20 ರಂದು ಔಪಚಾರಿಕವಾಗಿ ಉದ್ಘಾಟಿಸಲಾಯಿತು.
ʻವೇವ್ಸ್ ಬಜಾರ್ʼ ಜನಸಂಪರ್ಕ ಕಾರ್ಯಕ್ರಮದ ಭಾಗವಾಗಿ ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಹಾಗೂ ಸಿಯೋಲ್‌ನ ಭಾರತೀಯ ರಾಯಭಾರ ಕಚೇರಿಗಳು ಜಂಟಿಯಾಗಿ ಈ ʻಪೆವಿಲಿಯನ್ʼ ಅನ್ನು ಸ್ಥಾಪಿಸಿವೆ. ಇದು ಭಾರತದ ರೋಮಾಂಚಕ ಮಾಧ್ಯಮ ಮತ್ತು ಮನರಂಜನಾ ಕ್ಷೇತ್ರವನ್ನು ಪ್ರದರ್ಶಿಸಲು, ಸಹ-ನಿರ್ಮಾಣಗಳನ್ನು ಉತ್ತೇಜಿಸಲು ಹಾಗೂ ಚಲನಚಿತ್ರ, ದೂರದರ್ಶನ, ಗೇಮಿಂಗ್ ಮತ್ತು ಉದಯೋನ್ಮುಖ ಸೃಜನಶೀಲ ತಂತ್ರಜ್ಞಾನಗಳಲ್ಲಿ ಅಂತರರಾಷ್ಟ್ರೀಯ ಸಹಯೋಗವನ್ನು ನಿರ್ಮಿಸಲು ಮೀಸಲಾದ ವಿಶೇಷ ವೇದಿಕೆಯಾಗಿದೆ. ನಿರಂತರ ಕಾರ್ಯಕ್ರಮಗಳು ಮತ್ತು ಅವಕಾಶಗಳನ್ನು ಪ್ರದರ್ಶಿಸಲು ಅನುವಾಗುವಂತೆ 2025ರ ಸೆಪ್ಟೆಂಬರ್ 23 ರವರೆಗೆ ನಾಲ್ಕು ದಿನಗಳ ಕಾಲ ʻಪೆವಿಲಿಯನ್ʼ ತೆರೆದಿರಲಿದೆ.
ಉದ್ಘಾಟನಾ ಸಮಾರಂಭದಲ್ಲಿ ಬುಸಾನ್ ಚಲನಚಿತ್ರ ಆಯೋಗದ ನಿರ್ದೇಶಕ ಶ್ರೀ ಕಾಂಗ್ ಸುಂಗ್ಕ್ಯು, ಬ್ರಿಟಿಷ್ ಫಿಲ್ಮ್ ಇನ್‌ಸ್ಟಿಟ್ಯೂಟ್ (ಬಿ.ಎಫ್.ಐ) ಅಂತರರಾಷ್ಟ್ರೀಯ ಮತ್ತು ಕೈಗಾರಿಕಾ ನೀತಿಯ ಮುಖ್ಯಸ್ಥೆ ಶ್ರೀಮತಿ ಅಗ್ನಿಸ್ಕಾ ಮೂಡಿ ಮತ್ತು ಇಟಾಲಿಯನ್ ಟ್ರೇಡ್ ಏಜೆನ್ಸಿಯ ಸಿಯೋಲ್ ವ್ಯಾಪಾರ ಆಯುಕ್ತ ಶ್ರೀ ಫರ್ಡಿನಾಂಡೊ ಗುಯೆಲಿ ಸೇರಿದಂತೆ ಪ್ರಮುಖ ಅಂತರರಾಷ್ಟ್ರೀಯ ಗಣ್ಯರು ಮತ್ತು ಉದ್ಯಮದ ನಾಯಕರು ಉಪಸ್ಥಿತರಿದ್ದರು.

ಸಮಕಾಲೀನ ಭಾರತೀಯ ಚಿತ್ರರಂಗದ ಸೃಜನಶೀಲ ಶಕ್ತಿಯನ್ನು ಪ್ರತಿನಿಧಿಸುವ ಪ್ರಸಿದ್ಧ ಭಾರತೀಯ ಚಲನಚಿತ್ರ ನಿರ್ಮಾಪಕರಾದ ಶ್ರೀ ಅರ್ಫಿ ಲಾಂಬಾ, ಶ್ರೀ ಪ್ರದೀಪ್ ಕುರ್ಬಾ, ಶ್ರೀಮತಿ ತನ್ನಿಷ್ಠಾ ಚಟರ್ಜಿ ಹಾಗೂ ಇತರರು ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಭಾರತ ಸರ್ಕಾರದ ಪರವಾಗಿ, ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಜಂಟಿ ಕಾರ್ಯದರ್ಶಿ ಶ್ರೀ ಪ್ರಿಥುಲ್ ಕುಮಾರ್, ಸಿಯೋಲ್ ಭಾರತೀಯ ರಾಯಭಾರ ಕಚೇರಿಯ ಉಸ್ತುವಾರಿ ಅಧಿಕಾರಿ ಶ್ರೀ ನಿಶಿ ಕಾಂತ್ ಸಿಂಗ್ ಮತ್ತು ಇತರ ಹಿರಿಯ ಅಧಿಕಾರಿಗಳು ಸಮಾರಂಭದಲ್ಲಿ ಭಾಗವಹಿಸಿದರು, ಭಾರತವನ್ನು ಜಾಗತಿಕ ಕಂಟೆಂಟ್ ಕೇಂದ್ರವನ್ನಾಗಿ ಮಾಡುವ ಸರ್ಕಾರದ ಬದ್ಧತೆಯನ್ನು ಇವರು ಎತ್ತಿ ತೋರಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗಣ್ಯರು, ಜಾಗತಿಕ ಕಂಟೆಂಟ್ ಆರ್ಥಿಕತೆಯಲ್ಲಿ ಹೆಚ್ಚುತ್ತಿರುವ ಭಾರತದ ಪ್ರಾಮುಖ್ಯತೆ ಮತ್ತು ಭಾರತೀಯ ಸೃಷ್ಟಿಕರ್ತರು ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗಳ ನಡುವೆ ಕ್ರಿಯಾತ್ಮಕ ಸೇತುವೆಯನ್ನು ರಚಿಸುವಲ್ಲಿ ವೇವ್ಸ್ ಬಜಾರ್ ಪಾತ್ರವನ್ನು ಒತ್ತಿ ಹೇಳಿದರು.
ʻಪೆವಿಲಿಯನ್ʼ ಈ ಕೆಳಗಿನವುಗಳಿಗೆ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ:
● ಜಾಗತಿಕ ಖರೀದಿದಾರರಿಗೆ ಭಾರತೀಯ ಚಲನಚಿತ್ರಗಳು, ಕಥೆಗಳು ಮತ್ತು ಡಿಜಿಟಲ್ ಕಂಟೆಂಟ್ ಅನ್ನು ಪ್ರದರ್ಶಿಸುವುದು.
● ಭಾರತೀಯ ಮತ್ತು ಅಂತರರಾಷ್ಟ್ರೀಯ ಉತ್ಪಾದಕರು, ವಿತರಕರು ಮತ್ತು ಕಂಟೆಂಟ್ ವೇದಿಕೆಗಳ ನಡುವೆ ಬಿ.2.ಬಿ ಸಭೆಗಳನ್ನು ಸುಗಮಗೊಳಿಸುವುದು.
● ಅನಿಮೇಷನ್, ʻವಿ.ಎಫ್.ಎಕ್ಸ್ʼ, ಗೇಮಿಂಗ್ ಮತ್ತು ಇಮ್ಮರ್ಸಿವ್ ಕಥಾನಕದಂತಹ ಹೊಸ-ಯುಗದ ಕ್ಷೇತ್ರಗಳಲ್ಲಿ ಪಾಲುದಾರಿಕೆಯನ್ನು ಅನ್ವೇಷಿಸುವುದು.
ಈ ಉದ್ಘಾಟನೆಯು ಜಾಗತಿಕ ಚಲನಚಿತ್ರ ಮಾರುಕಟ್ಟೆಗಳಲ್ಲಿ ಭಾರತದ ಸಕ್ರಿಯ ಭಾಗವಹಿಸುವಿಕೆಯಲ್ಲಿ ಮತ್ತೊಂದು ಮೈಲಿಗಲ್ಲಾಗಿದೆ. ಇದು ಭಾರತದ ಸೃಜನಶೀಲ ಆರ್ಥಿಕತೆ ಹಾಗೂ ಮಾಧ್ಯಮ ಮತ್ತು ಮನರಂಜನೆಯಲ್ಲಿ ಅಂತರರಾಷ್ಟ್ರೀಯ ಸಹಯೋಗವನ್ನು ಮತ್ತಷ್ಟು ಬಲಪಡಿಸುತ್ತದೆ.
****
(Release ID: 2169167)