ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗುಜರಾತ್‌ನ ಭಾವನಗರದಲ್ಲಿ 'ಸಮುದ್ರದಿಂದ ಸಮೃದ್ಧಿ' ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು, 34,200 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ನೆರವೇರಿಸಿದರು
ಜಗತ್ತಿನಲ್ಲಿ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಗಾಗಿ, ಭಾರತ ಸ್ವಾವಲಂಬಿಯಾಗಬೇಕು: ಪ್ರಧಾನಮಂತ್ರಿ
ಚಿಪ್‌ಗಳು ಅಥವಾ ಹಡಗುಗಳು, ನಾವು ಅವುಗಳನ್ನು ಭಾರತದಲ್ಲಿಯೇ ತಯಾರಿಸಬೇಕು: ಪ್ರಧಾನಮಂತ್ರಿ
ಭಾರತದ ಕಡಲ ವಲಯವನ್ನು ಬಲಪಡಿಸಲು ಐತಿಹಾಸಿಕ ನಿರ್ಧಾರ ತೆಗೆದುಕೊಳ್ಳಲಾಗಿದೆ, ಸರ್ಕಾರವು ಈಗ ದೊಡ್ಡ ಹಡಗುಗಳನ್ನು ಮೂಲಸೌಕರ್ಯವೆಂದು ಗುರುತಿಸುತ್ತದೆ: ಪ್ರಧಾನಮಂತ್ರಿ
ಭಾರತದ ಕರಾವಳಿಗಳು ರಾಷ್ಟ್ರದ ಸಮೃದ್ಧಿಗೆ ದ್ವಾರಗಳಾಗಲಿವೆ: ಪ್ರಧಾನಮಂತ್ರಿ
Posted On:
20 SEP 2025 1:40PM by PIB Bengaluru
ಗುಜರಾತ್‌ನ ಭಾವನಗರದಲ್ಲಿ ಇಂದು 34,200 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಅಭಿವೃದ್ಧಿ ಕಾಮಗಾರಿಗಳಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು. 'ಸಮುದ್ರದಿಂದ ಸಮೃದ್ಧಿ' ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ಎಲ್ಲಾ ಗಣ್ಯರು ಮತ್ತು ಜನರನ್ನು ಸ್ವಾಗತಿಸಿದರು. ಸೆಪ್ಟೆಂಬರ್ 17 ರಂದು ತಮಗೆ ಕಳುಹಿಸಲಾದ ಹುಟ್ಟುಹಬ್ಬದ ಶುಭಾಶಯಗಳನ್ನು ಸ್ವೀಕರಿಸಿದ ಪ್ರಧಾನಮಂತ್ರಿ, ಜನರಿಂದ ಪಡೆದ ಪ್ರೀತಿಯು ಶಕ್ತಿಯ ದೊಡ್ಡ ಮೂಲವಾಗಿದೆ ಎಂದು ಹೇಳಿದರು, ರಾಷ್ಟ್ರವು ವಿಶ್ವಕರ್ಮ ಜಯಂತಿಯಿಂದ ಗಾಂಧಿ ಜಯಂತಿಯವರೆಗೆ, ಅಂದರೆ ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 2 ರವರೆಗೆ ಸೇವಾ ಪಖ್ವಾಡವನ್ನು ಆಚರಿಸುತ್ತಿದೆ ಎಂದು ಅವರು ಎತ್ತಿ ತೋರಿಸಿದರು. ಕಳೆದ 2-3 ದಿನಗಳಲ್ಲಿ ಗುಜರಾತ್‌ನಲ್ಲಿ ಹಲವಾರು ಸೇವಾ-ಆಧಾರಿತ ಚಟುವಟಿಕೆಗಳು ನಡೆದಿವೆ ಎಂದು ಅವರು ಹೇಳಿದರು. ನೂರಾರು ಸ್ಥಳಗಳಲ್ಲಿ ರಕ್ತದಾನ ಶಿಬಿರಗಳನ್ನು ಆಯೋಜಿಸಲಾಗಿದೆ, ಇಲ್ಲಿಯವರೆಗೆ ಒಂದು ಲಕ್ಷ ವ್ಯಕ್ತಿಗಳು ರಕ್ತದಾನ ಮಾಡಿದ್ದಾರೆ ಎಂಬುದರತ್ತ ಪ್ರಧಾನಮಂತ್ರಿ ಗಮನ ಸೆಳೆದರು. ಹಲವಾರು ನಗರಗಳಲ್ಲಿ ಸ್ವಚ್ಛತಾ ಅಭಿಯಾನಗಳನ್ನು ನಡೆಸಲಾಗಿದ್ದು, ಲಕ್ಷಾಂತರ ನಾಗರಿಕರು ಸಕ್ರಿಯವಾಗಿ ಭಾಗವಹಿಸಿದ್ದಾರೆ ಎಂದು ಅವರು ಹೇಳಿದರು. ರಾಜ್ಯಾದ್ಯಂತ 30,000 ಕ್ಕೂ ಹೆಚ್ಚು ಆರೋಗ್ಯ ಶಿಬಿರಗಳನ್ನು ಸ್ಥಾಪಿಸಲಾಗಿದ್ದು, ಸಾರ್ವಜನಿಕರಿಗೆ ಮತ್ತು ವಿಶೇಷವಾಗಿ ಮಹಿಳೆಯರಿಗೆ ವೈದ್ಯಕೀಯ ತಪಾಸಣೆ ಮತ್ತು ಚಿಕಿತ್ಸೆಯನ್ನು ಒದಗಿಸಲಾಗುತ್ತಿದೆ ಎಂದು ಶ್ರೀ ಮೋದಿ ಮಾಹಿತಿ ನೀಡಿದರು. ದೇಶಾದ್ಯಂತ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಪ್ರತಿಯೊಬ್ಬರಿಗೂ ಅವರು ತಮ್ಮ ಮೆಚ್ಚುಗೆ ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸಿದರು.
ಪ್ರಧಾನಮಂತ್ರಿ ಅವರು ಕೃಷ್ಣಕುಮಾರ್‌ಸಿನ್ಹ್ ಜೀ ಅವರಿಗೆ ಗೌರವ ಸಲ್ಲಿಸುವ ಮೂಲಕ ಪ್ರಾರಂಭಿಸಿದರು, ಅವರ ಉದಾತ್ತ ಪರಂಪರೆಯನ್ನು ಸ್ಮರಿಸಿದರು ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಧ್ಯೇಯದೊಂದಿಗೆ ಹೊಂದಿಕೊಂಡು ಭಾರತದ ಏಕತೆಗೆ ಕೃಷ್ಣಕುಮಾರ್‌ಸಿನ್ಹ್ ಅವರು ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು. ಅಂತಹ ಮಹಾನ್ ದೇಶಭಕ್ತರಿಂದ ಪ್ರೇರಿತರಾಗಿ, ರಾಷ್ಟ್ರವು ಏಕತೆಯ ಮನೋಭಾವವನ್ನು ಬಲಪಡಿಸುವುದನ್ನು ಮುಂದುವರೆಸಿದೆ ಎಂದು ಅವರು ಒತ್ತಿ ಹೇಳಿದರು. ಈ ಸಾಮೂಹಿಕ ಪ್ರಯತ್ನಗಳ ಮೂಲಕ ಏಕ ಭಾರತ, ಶ್ರೇಷ್ಠ ಭಾರತ ಎಂಬ ಸಂಕಲ್ಪವನ್ನು ಬಲಪಡಿಸಲಾಗುತ್ತಿದೆ ಎಂದೂ ಪ್ರಧಾನಮಂತ್ರಿ ಅವರು ಹೇಳಿದರು.
ನವರಾತ್ರಿಯ ಶುಭ ಹಬ್ಬ ಪ್ರಾರಂಭವಾಗಲಿರುವ ಸಮಯದಲ್ಲಿ ತಾವು ಭಾವನಗರಕ್ಕೆ ಆಗಮಿಸಿದ್ದನ್ನು ಉಲ್ಲೇಖಿಸಿದ ಶ್ರೀ ಮೋದಿ, ಜಿ.ಎಸ್.ಟಿ ಕಡಿತದಿಂದಾಗಿ ಮಾರುಕಟ್ಟೆಗಳು ಹೆಚ್ಚಿನ ಚೈತನ್ಯ ಮತ್ತು ಹಬ್ಬದ ಉತ್ಸಾಹಕ್ಕೆ ಸಾಕ್ಷಿಯಾಗಲಿವೆ ಎಂದು ಹೇಳಿದರು. ಈ ಸಂಭ್ರಮಾಚರಣೆಯ ವಾತಾವರಣದಲ್ಲಿ, ರಾಷ್ಟ್ರವು ಸಮುದ್ರದಿಂದ ಸಮೃದ್ಧಿಯ ಭವ್ಯ ಹಬ್ಬವನ್ನು ಆಚರಿಸುತ್ತಿದೆ ಎಂದು ಪ್ರಧಾನಮಂತ್ರಿ ಅವರು ಒತ್ತಿ ಹೇಳಿದರು. 21ನೇ ಶತಮಾನದ ಭಾರತವು ಸಾಗರವನ್ನು ಅವಕಾಶಗಳ ಪ್ರಮುಖ ಮಾರ್ಗವಾಗಿ ನೋಡುತ್ತದೆ ಎಂದು ಅವರು ನುಡಿದರು. ಸಾವಿರಾರು ಕೋಟಿ ಮೌಲ್ಯದ ಯೋಜನೆಗಳನ್ನು ಇದೀಗ ಉದ್ಘಾಟಿಸಲಾಗಿದೆ ಮತ್ತು ಬಂದರು ನೇತೃತ್ವದ ಅಭಿವೃದ್ಧಿಯನ್ನು ವೇಗಗೊಳಿಸಲು ಅಡಿಪಾಯ ಹಾಕಲಾಗಿದೆ ಎಂದು ಶ್ರೀ ಮೋದಿ ಮಾಹಿತಿ ನೀಡಿದರು. ಕ್ರೂಸ್ ಪ್ರವಾಸೋದ್ಯಮವನ್ನು ಉತ್ತೇಜಿಸಲು, ಮುಂಬೈಯಲ್ಲಿ ಅಂತರರಾಷ್ಟ್ರೀಯ ಕ್ರೂಸ್ ಟರ್ಮಿನಲ್ ಅನ್ನು ಇಂದು ಉದ್ಘಾಟಿಸಲಾಗಿದೆ ಎಂದು ಅವರು ಹೇಳಿದರು. ಭಾವನಗರ ಮತ್ತು ಗುಜರಾತ್‌ಗೆ ಸಂಬಂಧಿಸಿದ ಅಭಿವೃದ್ಧಿ ಯೋಜನೆಗಳು ಸಹ ಪ್ರಾರಂಭವಾಗಿರುವುದನ್ನು ಗಮನಿಸಿದ ಪ್ರಧಾನಿ, ಎಲ್ಲಾ ನಾಗರಿಕರು ಮತ್ತು ಗುಜರಾತ್ ಜನರಿಗೆ ತಮ್ಮ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿದರು.
"ಭಾರತ ಜಾಗತಿಕ ಸಹೋದರತ್ವದ ಮನೋಭಾವದೊಂದಿಗೆ ಮುಂದುವರಿಯುತ್ತಿದೆ ಮತ್ತು ಭಾರತಕ್ಕೆ ಇಂದು ಜಗತ್ತಿನಲ್ಲಿ ಯಾವುದೇ ಪ್ರಮುಖ ಶತ್ರುಗಳಿಲ್ಲ, ಆದರೆ ವಾಸ್ತವವಾಗಿ, ಭಾರತದ ಅತಿದೊಡ್ಡ ಶತ್ರು ಇತರ ರಾಷ್ಟ್ರಗಳ ಮೇಲಿನ ಅವಲಂಬನೆಯಾಗಿದೆ" ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು, ಈ ಅವಲಂಬನೆಯನ್ನು ಸಾಮೂಹಿಕವಾಗಿ ಸೋಲಿಸಬೇಕು ಎಂದು ಒತ್ತಿ ಹೇಳಿದರು. ಹೆಚ್ಚಿನ ವಿದೇಶಿ ಅವಲಂಬನೆಯು ಹೆಚ್ಚಿನ ರಾಷ್ಟ್ರೀಯ ವೈಫಲ್ಯಕ್ಕೆ ಕಾರಣವಾಗುತ್ತದೆ ಎಂದು ಅವರು ಪುನರುಚ್ಚರಿಸಿದರು. ಜಾಗತಿಕ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಗಾಗಿ, ವಿಶ್ವದ ಅತ್ಯಂತ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವು ಸ್ವಾವಲಂಬಿಯಾಗಬೇಕು. ಇತರರ ಮೇಲಿನ ಅವಲಂಬನೆಯು ರಾಷ್ಟ್ರೀಯ ಸ್ವಾಭಿಮಾನದ ಜೊತೆ ರಾಜಿ ಮಾಡಿಕೊಳ್ಳುವಂತೆ ಮಾಡುತ್ತದೆ ಎಂದು ಅವರು ಎಚ್ಚರಿಸಿದರು. 140 ಕೋಟಿ ಭಾರತೀಯರ ಭವಿಷ್ಯವನ್ನು ಬಾಹ್ಯ ಶಕ್ತಿಗಳ ಕೈಗೆ ಕೊಡಲಾಗುವುದಿಲ್ಲ. ಮತ್ತು ರಾಷ್ಟ್ರೀಯ ಅಭಿವೃದ್ಧಿಯ ಸಂಕಲ್ಪವು ವಿದೇಶಿ ಅವಲಂಬನೆಯನ್ನು ಆಧರಿಸಿರಬಾರದು ಎಂದು ಶ್ರೀ ಮೋದಿ ಪ್ರತಿಪಾದಿಸಿದರು. ಮುಂಬರುವ ಪೀಳಿಗೆಯ ಭವಿಷ್ಯವನ್ನು ಅಪಾಯಕ್ಕೆ ಸಿಲುಕಿಸಬಾರದು ಎಂದು ಅವರು ಒತ್ತಿ ಹೇಳಿದರು. ನೂರು ಸಮಸ್ಯೆಗಳಿಗೆ ಪರಿಹಾರವೆಂದರೆ ಆತ್ಮನಿರ್ಭರ ಭಾರತವನ್ನು ನಿರ್ಮಿಸುವುದು. ಇದನ್ನು ಸಾಧಿಸಲು, ಭಾರತವು ಸವಾಲುಗಳನ್ನು ಎದುರಿಸಬೇಕು, ಬಾಹ್ಯ ಅವಲಂಬನೆಯನ್ನು ಕಡಿಮೆ ಮಾಡಬೇಕು ಮತ್ತು ನಿಜವಾದ ಸ್ವಾವಲಂಬನೆಯನ್ನು ಪ್ರದರ್ಶಿಸಬೇಕು ಎಂದೂ ಅವರು ಪ್ರತಿಪಾದಿಸಿದರು.
ಭಾರತಕ್ಕೆ ಎಂದಿಗೂ ಸಾಮರ್ಥ್ಯದ ಕೊರತೆಯಿಲ್ಲ ಎಂದು ಒತ್ತಿ ಹೇಳಿದ ಶ್ರೀ ಮೋದಿ, ಸ್ವಾತಂತ್ರ್ಯದ ನಂತರ, ಆಗಿನ ಆಡಳಿತ ಪಕ್ಷವು ದೇಶದ ಅಂತರ್ಗತ ಸಾಮರ್ಥ್ಯಗಳನ್ನು ನಿರಂತರವಾಗಿ ನಿರ್ಲಕ್ಷಿಸಿದೆ ಎಂದು ಹೇಳಿದರು. ಇದರ ಪರಿಣಾಮವಾಗಿ, ಸ್ವಾತಂತ್ರ್ಯದ ಆರರಿಂದ ಏಳು ದಶಕಗಳ ನಂತರವೂ, ಭಾರತವು ನಿಜವಾಗಿಯೂ ಅದಕ್ಕೆ ಅರ್ಹವಾದ ಯಶಸ್ಸನ್ನು ಸಾಧಿಸಲು ಸಾಧ್ಯವಾಗಲಿಲ್ಲ ಎಂದರು. ಇದಕ್ಕೆ ಎರಡು ಪ್ರಮುಖ ಕಾರಣಗಳನ್ನು ಪ್ರಧಾನಮಂತ್ರಿ ಗುರುತಿಸಿದರು: ಪರವಾನಗಿ-ಕೋಟಾ ಆಡಳಿತದಲ್ಲಿ ದೀರ್ಘಕಾಲದ ಸಿಕ್ಕಿಹಾಕಿಕೊಳ್ಳುವಿಕೆ ಮತ್ತು ಜಾಗತಿಕ ಮಾರುಕಟ್ಟೆಗಳಿಂದ ಪ್ರತ್ಯೇಕತೆ. ಜಾಗತೀಕರಣದ ಯುಗ ಬಂದಾಗ, ಆಗಿನ ಆಡಳಿತ ಸರ್ಕಾರಗಳು ಆಮದುಗಳ ಮೇಲೆ ಮಾತ್ರ ಗಮನಹರಿಸಿದವು, ಇದು ಸಾವಿರಾರು ಕೋಟಿ ಮೌಲ್ಯದ ಹಗರಣಗಳಿಗೆ ಕಾರಣವಾಯಿತು ಎಂದು ಅವರು ಹೇಳಿದರು. ಈ ನೀತಿಗಳು ಭಾರತದ ಯುವಜನರಿಗೆ ಗಮನಾರ್ಹ ಹಾನಿಯನ್ನುಂಟುಮಾಡಿದವು ಮತ್ತು ರಾಷ್ಟ್ರದ ನಿಜವಾದ ಸಾಮರ್ಥ್ಯ ಹೊರಹೊಮ್ಮದಂತೆ ತಡೆದವು ಎಂದು ಶ್ರೀ ಮೋದಿ ಒತ್ತಿ ಹೇಳಿದರು.
ಭಾರತದ ಹಡಗು ನಿರ್ಮಾಣ ವಲಯವು ದೋಷಪೂರಿತ ನೀತಿಗಳಿಂದ ಉಂಟಾಗುವ ಹಾನಿಗೆ ಪ್ರಮುಖ ಉದಾಹರಣೆಯಾಗಿದೆ ಎಂದು ಶ್ರೀ ಮೋದಿ ಉಲ್ಲೇಖಿಸಿದರು. ಭಾರತವು ಐತಿಹಾಸಿಕವಾಗಿ ಪ್ರಮುಖ ಕಡಲ ಶಕ್ತಿಯಾಗಿದ್ದು, ವಿಶ್ವದ ಅತಿದೊಡ್ಡ ಹಡಗು ನಿರ್ಮಾಣ ಕೇಂದ್ರಗಳಲ್ಲಿ ಒಂದಾಗಿದೆ ಎಂದು ಅವರು ಹೇಳಿದರು. ಭಾರತದ ಕರಾವಳಿ ರಾಜ್ಯಗಳಲ್ಲಿ ನಿರ್ಮಿಸಲಾದ ಹಡಗುಗಳು ಒಂದು ಕಾಲದಲ್ಲಿ ದೇಶೀಯ ಮತ್ತು ಜಾಗತಿಕ ವ್ಯಾಪಾರವನ್ನು ನಡೆಸುತ್ತಿದ್ದವು. ಐವತ್ತು ವರ್ಷಗಳ ಹಿಂದೆಯೂ ಸಹ, ಭಾರತವು ದೇಶೀಯವಾಗಿ ನಿರ್ಮಿಸಲಾದ ಹಡಗುಗಳನ್ನು ಬಳಸುತ್ತಿತ್ತು, ಆಮದು-ರಫ್ತಿನ ಶೇಕಡಾ 40 ಕ್ಕಿಂತ ಹೆಚ್ಚು ಅವುಗಳ ಮೂಲಕವೇ ನಡೆಯುತ್ತಿತ್ತು. ಹಡಗು ನಿರ್ಮಾಣ ವಲಯವು ನಂತರ ಅವರ ದಾರಿತಪ್ಪಿದ ನೀತಿಗಳಿಗೆ ಬಲಿಯಾಯಿತು ಮತ್ತು ದೇಶೀಯ ಹಡಗು ನಿರ್ಮಾಣವನ್ನು ಬಲಪಡಿಸುವ ಬದಲು, ಅವರು ವಿದೇಶಿ ಹಡಗುಗಳಿಗೆ ಸರಕು ಸಾಗಣೆಯನ್ನು ಪಾವತಿಸಲು ಆದ್ಯತೆ ನೀಡಿದರು ಎಂದು ಹೇಳುವ ಮೂಲಕ ಪ್ರಧಾನಮಂತ್ರಿ ಪ್ರಸ್ತುತ ವಿರೋಧ ಪಕ್ಷವನ್ನು ಟೀಕಿಸಿದರು. ಇದು ಭಾರತದ ಹಡಗು ನಿರ್ಮಾಣ ಪರಿಸರ ವ್ಯವಸ್ಥೆಯ ಕುಸಿತಕ್ಕೆ ಮತ್ತು ವಿದೇಶಿ ಹಡಗುಗಳ ಮೇಲೆ ಬಲವಂತದ ಅವಲಂಬನೆಗೆ ಕಾರಣವಾಯಿತು. ಇದರ ಪರಿಣಾಮವಾಗಿ, ವ್ಯಾಪಾರದಲ್ಲಿ ಭಾರತೀಯ ಹಡಗುಗಳ ಪಾಲು ಶೇಕಡಾ 40 ರಿಂದ ಕೇವಲ ಶೇಕಡಾ 5 ಕ್ಕೆ ಇಳಿದಿದೆ. ಇಂದು, ಭಾರತದ ವ್ಯಾಪಾರದ ಶೇಕಡಾ 95 ರಷ್ಟು ವಿದೇಶಿ ಹಡಗುಗಳ ಮೇಲೆ ಅವಲಂಬಿತವಾಗಿದೆ - ಇದು ರಾಷ್ಟ್ರಕ್ಕೆ ಗಮನಾರ್ಹ ನಷ್ಟವನ್ನುಂಟುಮಾಡಿದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು.
ರಾಷ್ಟ್ರದ ಮುಂದೆ ಕೆಲವು ಅಂಕಿಅಂಶಗಳನ್ನು ಮಂಡಿಸಿದ ಶ್ರೀ ಮೋದಿ, ಭಾರತವು ವಿದೇಶಿ ಹಡಗು ಕಂಪನಿಗಳಿಗೆ ಪ್ರತಿ ವರ್ಷ ಸುಮಾರು 75 ಬಿಲಿಯನ್ ಡಾಲರ್‌ಗಳನ್ನು ಅಂದರೆ ಸುಮಾರು ಆರು ಲಕ್ಷ ಕೋಟಿ ರೂಪಾಯಿಗಳನ್ನು ಹಡಗು ಸೇವೆಗಳಿಗಾಗಿ ಪಾವತಿಸುತ್ತದೆ ಎಂಬುದನ್ನು ತಿಳಿದರೆ ನಾಗರಿಕರು ಆಘಾತಕ್ಕೊಳಗಾಗುತ್ತಾರೆ ಎಂದು ಹೇಳಿದರು. ಈ ಮೊತ್ತವು ಭಾರತದ ಪ್ರಸ್ತುತ ರಕ್ಷಣಾ ಬಜೆಟ್‌ಗೆ ಬಹುತೇಕ ಸಮನಾಗಿರುತ್ತದೆ ಎಂದು ಪ್ರಧಾನಮಂತ್ರಿ ಎತ್ತಿ ತೋರಿಸಿದರು. ಕಳೆದ ಏಳು ದಶಕಗಳಲ್ಲಿ ಇತರ ದೇಶಗಳಿಗೆ ಸರಕು ಸಾಗಣೆಯಾಗಿ ಎಷ್ಟು ಹಣವನ್ನು ಪಾವತಿಸಲಾಗಿದೆ ಎಂಬುದನ್ನು ಊಹಿಸುವಂತೆ ಅವರು ಸಾರ್ವಜನಿಕರನ್ನು ಕೇಳಿಕೊಂಡರು. ಈ ನಿಧಿಯ ಹೊರಹರಿವು ವಿದೇಶಗಳಲ್ಲಿ ಲಕ್ಷಾಂತರ ಉದ್ಯೋಗಗಳನ್ನು ಸೃಷ್ಟಿಸಿದೆ ಎಂಬುದರತ್ತ ಅವರು ಗಮನಸೆಳೆದರು. ಈ ವೆಚ್ಚದ ಒಂದು ಸಣ್ಣ ಭಾಗವನ್ನು ಹಿಂದಿನ ಸರ್ಕಾರಗಳು ಭಾರತದ ಹಡಗು ಉದ್ಯಮದಲ್ಲಿ ಹೂಡಿಕೆ ಮಾಡಿದ್ದರೆ, ಇಂದು ಜಗತ್ತು ಭಾರತೀಯ ಹಡಗುಗಳನ್ನು ಬಳಸುತ್ತಿತ್ತು ಮತ್ತು ಭಾರತವು ಹಡಗು ಸೇವೆಗಳಲ್ಲಿ ಲಕ್ಷ ಕೋಟಿಗಳನ್ನು ಗಳಿಸುತ್ತಿತ್ತು ಎಂದು ಶ್ರೀ ಮೋದಿ ಒತ್ತಿ ಹೇಳಿದರು.
"2047 ರ ವೇಳೆಗೆ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಬೇಕಾದರೆ, ಅದು ಸ್ವಾವಲಂಬಿಯಾಗಬೇಕು, ಸ್ವಾವಲಂಬನೆಗೆ ಪರ್ಯಾಯವಿಲ್ಲ ಮತ್ತು ಎಲ್ಲಾ 140 ಕೋಟಿ ನಾಗರಿಕರು ಒಂದೇ ಸಂಕಲ್ಪಕ್ಕೆ ಬದ್ಧರಾಗಿರಬೇಕು - ಅದು ಚಿಪ್ಸ್ ಆಗಿರಲಿ ಅಥವಾ ಹಡಗುಗಳಾಗಿರಲಿ, ಅವುಗಳನ್ನು ಭಾರತದಲ್ಲಿಯೇ ತಯಾರಿಸಬೇಕು" ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು, ಈ ದೃಷ್ಟಿಕೋನದೊಂದಿಗೆ, ಭಾರತದ ಕಡಲ ವಲಯವು ಈಗ ಮುಂದಿನ ಪೀಳಿಗೆಯ ಸುಧಾರಣೆಗಳತ್ತ ಸಾಗುತ್ತಿದೆ ಎಂದು ಹೇಳಿದರು. ಇಂದಿನಿಂದ, ದೇಶದ ಎಲ್ಲಾ ಪ್ರಮುಖ ಬಂದರುಗಳನ್ನು ಬಹು ದಾಖಲೆಗಳು ಮತ್ತು ವಿಘಟಿತ ಪ್ರಕ್ರಿಯೆಗಳಿಂದ ಮುಕ್ತಗೊಳಿಸಲಾಗುವುದು ಎಂದು ಅವರು ಘೋಷಿಸಿದರು. 'ಒಂದು ರಾಷ್ಟ್ರ, ಒಂದು ದಾಖಲೆ' ಮತ್ತು 'ಒಂದು ರಾಷ್ಟ್ರ, ಒಂದು ಬಂದರು' ಪ್ರಕ್ರಿಯೆಯ ಅನುಷ್ಠಾನವು ವ್ಯಾಪಾರ ಮತ್ತು ವಾಣಿಜ್ಯವನ್ನು ಸರಳಗೊಳಿಸುತ್ತದೆ. ಇತ್ತೀಚಿನ ಮಳೆಗಾಲದ ಅಧಿವೇಶನದಲ್ಲಿ, ವಸಾಹತುಶಾಹಿ ಯುಗದ ಹಲವಾರು ಹಳೆಯ ಕಾನೂನುಗಳನ್ನು ತಿದ್ದುಪಡಿ ಮಾಡಲಾಗಿದೆ ಎಂದು ಶ್ರೀ ಮೋದಿ ಉಲ್ಲೇಖಿಸಿದರು. ಕಡಲ ವಲಯದಲ್ಲಿ ಸುಧಾರಣೆಗಳ ಸರಣಿಯನ್ನು ಪ್ರಾರಂಭಿಸಲಾಗಿದೆ ಮತ್ತು ಐದು ಕಡಲ ಕಾನೂನುಗಳನ್ನು ಹೊಸ ರೂಪದಲ್ಲಿ ಪರಿಚಯಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಈ ಕಾನೂನುಗಳು ಹಡಗು ಸಾಗಣೆ ಮತ್ತು ಬಂದರು ಆಡಳಿತದಲ್ಲಿ ಪ್ರಮುಖ ಬದಲಾವಣೆಗಳನ್ನು ತರುತ್ತವೆ ಎಂದವರು ನುಡಿದರು.
ಶತಮಾನಗಳಿಂದ ಭಾರತ ದೊಡ್ಡ ಹಡಗುಗಳನ್ನು ನಿರ್ಮಿಸುವಲ್ಲಿ ಪರಿಣತಿ ಹೊಂದಿದೆ ಎಂಬುದನ್ನು ಒತ್ತಿ ಹೇಳಿದ ಪ್ರಧಾನಮಂತ್ರಿ, ಮುಂದಿನ ಪೀಳಿಗೆಯ ಸುಧಾರಣೆಗಳು ಈ ಮರೆತುಹೋದ ಪರಂಪರೆಯನ್ನು ಪುನರುಜ್ಜೀವನಗೊಳಿಸಲು ಸಹಾಯ ಮಾಡುತ್ತವೆ ಎಂದು ಹೇಳಿದರು. ಕಳೆದ ದಶಕದಲ್ಲಿ, 40 ಕ್ಕೂ ಹೆಚ್ಚು ಹಡಗುಗಳು ಮತ್ತು ಜಲಾಂತರ್ಗಾಮಿ ನೌಕೆಗಳನ್ನು ನೌಕಾಪಡೆಗೆ ಸೇರಿಸಲಾಗಿದೆ ಮತ್ತು ಒಂದು ಅಥವಾ ಎರಡನ್ನು ಹೊರತುಪಡಿಸಿ, ಎಲ್ಲವನ್ನೂ ಭಾರತದಲ್ಲಿ ನಿರ್ಮಿಸಲಾಗಿದೆ ಎಂದು ಅವರು ಉಲ್ಲೇಖಿಸಿದರು. ಬೃಹತ್ ಐ.ಎನ್.ಎಸ್ ವಿಕ್ರಾಂತ್ ಅನ್ನು ಅದರ ಉತ್ಪಾದನೆಯಲ್ಲಿ ಬಳಸುವ ಉತ್ತಮ ಗುಣಮಟ್ಟದ ಉಕ್ಕನ್ನು ಒಳಗೊಂಡಂತೆ ದೇಶೀಯವಾಗಿ ನಿರ್ಮಿಸಲಾಗಿದೆ ಎಂಬುದರತ್ತ ಅವರು ಗಮನ ಸೆಳೆದರು. ಭಾರತವು ಸಾಮರ್ಥ್ಯವನ್ನು ಹೊಂದಿದೆ ಮತ್ತು ಯಾವುದೇ ಕೌಶಲ್ಯದ ಕೊರತೆ ಅದಕ್ಕಿಲ್ಲ ಎಂದು ಶ್ರೀ ಮೋದಿ ಒತ್ತಿ ಹೇಳಿದರು. ದೊಡ್ಡ ಹಡಗುಗಳನ್ನು ನಿರ್ಮಿಸಲು ಅಗತ್ಯವಿರುವ ರಾಜಕೀಯ ಇಚ್ಛಾಶಕ್ತಿ ದೃಢವಾಗಿದೆ ಎಂದು ಅವರು ರಾಷ್ಟ್ರಕ್ಕೆ ಭರವಸೆ ನೀಡಿದರು.
ಭಾರತದ ಕಡಲ ವಲಯವನ್ನು ಬಲಪಡಿಸಲು ನಿನ್ನೆ ಒಂದು ಐತಿಹಾಸಿಕ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಒತ್ತಿ ಹೇಳಿದ ಶ್ರೀ ಮೋದಿ, ದೊಡ್ಡ ಹಡಗುಗಳಿಗೆ ಮೂಲಸೌಕರ್ಯ ಸ್ಥಾನಮಾನವನ್ನು ನೀಡುವ ಪ್ರಮುಖ ನೀತಿ ಸುಧಾರಣೆಯನ್ನು ಘೋಷಿಸಿದರು. ಒಂದು ವಲಯವು ಮೂಲಸೌಕರ್ಯ ಮಾನ್ಯತೆಯನ್ನು ಪಡೆದಾಗ, ಅದು ಗಮನಾರ್ಹ ಪ್ರಯೋಜನಗಳನ್ನು ಪಡೆಯುತ್ತದೆ ಎಂದು ಅವರು ಹೇಳಿದರು. ಹಡಗು ನಿರ್ಮಾಣ ಕಂಪನಿಗಳು ಈಗ ಬ್ಯಾಂಕುಗಳಿಂದ ಸಾಲಗಳನ್ನು ಪಡೆಯುವುದು ಸುಲಭವಾಗುತ್ತದೆ ಮತ್ತು ಕಡಿಮೆ ಬಡ್ಡಿದರಗಳಿಂದ ಪ್ರಯೋಜನ ಪಡೆಯುತ್ತವೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಮೂಲಸೌಕರ್ಯ ಹಣಕಾಸಿಗೆ ಸಂಬಂಧಿಸಿದ ಎಲ್ಲಾ ಪ್ರಯೋಜನಗಳನ್ನು ಈಗ ಈ ಹಡಗು ನಿರ್ಮಾಣ ಉದ್ಯಮಗಳಿಗೆ ವಿಸ್ತರಿಸಲಾಗುವುದು. ಈ ನಿರ್ಧಾರವು ಭಾರತೀಯ ಹಡಗು ಕಂಪನಿಗಳ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡುತ್ತದೆ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಸ್ಪರ್ಧಿಸಲು ಸಹಾಯ ಮಾಡುತ್ತದೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು.
ಭಾರತವನ್ನು ಪ್ರಮುಖ ಕಡಲ ಶಕ್ತಿಯಾಗಿ ಮಾಡಲು, ಸರ್ಕಾರವು ಮೂರು ಪ್ರಮುಖ ಯೋಜನೆಗಳಲ್ಲಿ ಕೆಲಸ ಮಾಡುತ್ತಿದೆ ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿ, ಈ ಉಪಕ್ರಮಗಳು ಹಡಗು ನಿರ್ಮಾಣ ವಲಯಕ್ಕೆ ಆರ್ಥಿಕ ಬೆಂಬಲವನ್ನು ಸರಾಗಗೊಳಿಸುತ್ತವೆ, ಹಡಗುಕಟ್ಟೆಗಳು ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಸಹಾಯ ಮಾಡುತ್ತವೆ ಮತ್ತು ವಿನ್ಯಾಸ ಹಾಗು ಗುಣಮಟ್ಟದ ಮಾನದಂಡಗಳನ್ನು ಸುಧಾರಿಸುತ್ತವೆ ಎಂದು ಹೇಳಿದರು. ಮುಂಬರುವ ವರ್ಷಗಳಲ್ಲಿ ಈ ಯೋಜನೆಗಳಲ್ಲಿ ₹70,000 ಕೋಟಿಗೂ ಹೆಚ್ಚು ಹೂಡಿಕೆ ಮಾಡಲಾಗುವುದು ಎಂದು ಅವರು ಮಾಹಿತಿ ನೀಡಿದರು.
2007 ರಲ್ಲಿ, ಗುಜರಾತ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ, ಹಡಗು ನಿರ್ಮಾಣ ಅವಕಾಶಗಳನ್ನು ಅನ್ವೇಷಿಸಲು ಗುಜರಾತ್‌ನಲ್ಲಿ ಒಂದು ಪ್ರಮುಖ ವಿಚಾರ ಸಂಕಿರಣವನ್ನು ನಡೆಸಲಾಗಿತ್ತು ಎಂದು ಶ್ರೀ ಮೋದಿ ನೆನಪಿಸಿಕೊಂಡರು, ಆ ಅವಧಿಯಲ್ಲಿ ಗುಜರಾತ್ ಹಡಗು ನಿರ್ಮಾಣ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಬೆಂಬಲ ನೀಡಿತು ಎಂದು ಅವರು ಹೇಳಿದರು. ಭಾರತವು ಈಗ ರಾಷ್ಟ್ರವ್ಯಾಪಿ ಹಡಗು ನಿರ್ಮಾಣವನ್ನು ಉತ್ತೇಜಿಸಲು ಸಮಗ್ರ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಅವರು ಹೇಳಿದರು. ಹಡಗು ನಿರ್ಮಾಣವು ಸಾಮಾನ್ಯ ಉದ್ಯಮವಲ್ಲ ಎಂದು ಅವರು ಒತ್ತಿ ಹೇಳಿದರು; ಜಾಗತಿಕವಾಗಿ ಇದನ್ನು "ಎಲ್ಲಾ ಕೈಗಾರಿಕೆಗಳ ತಾಯಿ" ಎಂದು ಕರೆಯಲಾಗುತ್ತದೆ ಏಕೆಂದರೆ ಇದು ಸಂಬಂಧಿತ ಬಹು ಮಿತ್ರ ವಲಯಗಳ ಬೆಳವಣಿಗೆಯನ್ನು ಚಾಲನೆ ಮಾಡುತ್ತದೆ. ಉಕ್ಕು, ಯಂತ್ರೋಪಕರಣಗಳು, ಎಲೆಕ್ಟ್ರಾನಿಕ್ಸ್, ಜವಳಿ, ಬಣ್ಣಗಳು ಮತ್ತು ಐಟಿ ವ್ಯವಸ್ಥೆಗಳಂತಹ ಕೈಗಾರಿಕೆಗಳು ಹಡಗು ವಲಯದಿಂದ ಬೆಂಬಲಿತವಾಗಿದೆ ಎಂದು ಪ್ರಧಾನಮಂತ್ರಿ ಉಲ್ಲೇಖಿಸಿದರು. ಇದು ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ (ಎಂ.ಎಸ್.ಎಂ.ಇ.-MSME) ಗಮನಾರ್ಹ ಪ್ರಯೋಜನಗಳನ್ನು ನೀಡುತ್ತದೆ ಎಂದು ಅವರು ಗಮನಿಸಿದರು. ಸಂಶೋಧನೆಯನ್ನು ಉಲ್ಲೇಖಿಸಿದ ಅವರು, ಹಡಗು ನಿರ್ಮಾಣದಲ್ಲಿ ಹೂಡಿಕೆ ಮಾಡುವ ಪ್ರತಿ ರೂಪಾಯಿ ಸುಮಾರು ಎರಡು ಪಟ್ಟು ಆರ್ಥಿಕ ಲಾಭವನ್ನು ನೀಡುತ್ತದೆ ಎಂದೂ ಹೇಳಿದರು. ಹಡಗು ನಿರ್ಮಾಣದಲ್ಲಿ ಸೃಷ್ಟಿಯಾಗುವ ಪ್ರತಿಯೊಂದು ಉದ್ಯೋಗವು ಪೂರೈಕೆ ಸರಪಳಿಯಲ್ಲಿ ಆರರಿಂದ ಏಳು ಹೊಸ ಉದ್ಯೋಗಗಳಿಗೆ ಕಾರಣವಾಗುತ್ತದೆ, ಅಂದರೆ 100 ಹಡಗು ನಿರ್ಮಾಣ ಉದ್ಯೋಗಗಳು ಸಂಬಂಧಿತ ವಲಯಗಳಲ್ಲಿ 600 ಕ್ಕೂ ಹೆಚ್ಚು ಉದ್ಯೋಗಗಳಿಗೆ ಕಾರಣವಾಗಬಹುದು, ಇದು ಹಡಗು ನಿರ್ಮಾಣ ಉದ್ಯಮದ ಬೃಹತ್ ಗುಣಕ ಪರಿಣಾಮವನ್ನು ಒತ್ತಿಹೇಳುತ್ತದೆ ಎಂದರು.
ಹಡಗು ನಿರ್ಮಾಣಕ್ಕೆ ಅಗತ್ಯವಾದ ಕೌಶಲ್ಯಗಳನ್ನು ಬಲಪಡಿಸಲು ಕೇಂದ್ರೀಕೃತ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಈ ಉಪಕ್ರಮದಲ್ಲಿ ಭಾರತದ ಕೈಗಾರಿಕಾ ತರಬೇತಿ ಸಂಸ್ಥೆಗಳು (ಐ.ಟಿ.ಐಗಳು) ಪ್ರಮುಖ ಪಾತ್ರ ವಹಿಸುತ್ತವೆ ಮತ್ತು ಕಡಲ ವಿಶ್ವವಿದ್ಯಾಲಯದ ಕೊಡುಗೆಯನ್ನು ಮತ್ತಷ್ಟು ವಿಸ್ತರಿಸಲಾಗುವುದು ಎಂದು ಅವರು ಹೇಳಿದರು. ಇತ್ತೀಚಿನ ವರ್ಷಗಳಲ್ಲಿ, ಕರಾವಳಿ ಪ್ರದೇಶಗಳಲ್ಲಿ ನೌಕಾಪಡೆ ಮತ್ತು ಎನ್.ಸಿ.ಸಿ ನಡುವಿನ ಸಮನ್ವಯದ ಮೂಲಕ ಹೊಸ ಚೌಕಟ್ಟುಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಶ್ರೀ ಮೋದಿ ಉಲ್ಲೇಖಿಸಿದರು. ಎನ್.ಸಿ.ಸಿ ಕೆಡೆಟ್‌ಗಳನ್ನು ಈಗ ನೌಕಾ ಪಾತ್ರಗಳಿಗೆ ಮಾತ್ರವಲ್ಲದೆ ವಾಣಿಜ್ಯ ಕಡಲ ವಲಯದಲ್ಲಿನ ಜವಾಬ್ದಾರಿಗಳಿಗೂ ಸಿದ್ಧಪಡಿಸಲಾಗುತ್ತದೆ ಎಂದು ಅವರು ಹೇಳಿದರು.
ಇಂದಿನ ಭಾರತವು ವಿಶಿಷ್ಟ ವೇಗದೊಂದಿಗೆ ಮುಂದುವರಿಯುತ್ತಿದೆ ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿ, ರಾಷ್ಟ್ರವು ಮಹತ್ವಾಕಾಂಕ್ಷೆಯ ಗುರಿಗಳನ್ನು ಹೊಂದಿಸುವುದಲ್ಲದೆ ಅವುಗಳನ್ನು ನಿಗದಿತ ಸಮಯಕ್ಕಿಂತ ಮುಂಚಿತವಾಗಿಯೇ ಸಾಧಿಸುತ್ತದೆ ಎಂದು ಹೇಳಿದರು. ಸೌರ ವಲಯದಲ್ಲಿ, ಭಾರತವು ನಾಲ್ಕರಿಂದ ಐದು ವರ್ಷಗಳ ಮುಂಚಿತವಾಗಿ ತನ್ನ ಗುರಿಗಳನ್ನು ತಲುಪುತ್ತಿದೆ. ಹನ್ನೊಂದು ವರ್ಷಗಳ ಹಿಂದೆ ಬಂದರು ಆಧಾರಿತ ಅಭಿವೃದ್ಧಿಗಾಗಿ ನಿಗದಿಪಡಿಸಿದ ಉದ್ದೇಶಗಳು ಈಗ ಗಮನಾರ್ಹ ಯಶಸ್ಸನ್ನು ಸಾಧಿಸುತ್ತಿವೆ ಎಂದು ಶ್ರೀ ಮೋದಿ ಎತ್ತಿ ತೋರಿಸಿದರು. ದೊಡ್ಡ ಹಡಗುಗಳಿಗೆ ಅವಕಾಶ ಕಲ್ಪಿಸಲು ದೇಶಾದ್ಯಂತ ದೊಡ್ಡ ಬಂದರುಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಮತ್ತು ಸಾಗರಮಾಲಾದಂತಹ ಉಪಕ್ರಮಗಳ ಮೂಲಕ ಸಂಪರ್ಕವನ್ನು ಹೆಚ್ಚಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.
ಕಳೆದ ಹನ್ನೊಂದು ವರ್ಷಗಳಲ್ಲಿ ಭಾರತ ತನ್ನ ಬಂದರು ಸಾಮರ್ಥ್ಯವನ್ನು ದ್ವಿಗುಣಗೊಳಿಸಿದೆ ಎಂದು ಹೇಳಿದ ಶ್ರೀ ಮೋದಿ, 2014 ಕ್ಕಿಂತ ಮೊದಲು ಭಾರತದಲ್ಲಿ ಸರಾಸರಿ ಹಡಗು ತಿರುವು ಸಮಯ ಅಂದರೆ ಬಂದರಿನಲ್ಲಿ ಹಡಗಿನಿಂದ ಸರಕು ಇಳಿಸಲು ಮತ್ತು ಹಡಗಿಗೆ ಸರಕು ಹೇರಲು ತಗಲುವ ಒಟ್ಟು ಸಮಯ ಎರಡು ದಿನಗಳಾಗಿತ್ತು, ಆದರೆ ಇಂದು ಅದನ್ನು ಒಂದು ದಿನಕ್ಕಿಂತ ಕಡಿಮೆ ಮಾಡಲಾಗಿದೆ ಎಂದು ಉಲ್ಲೇಖಿಸಿದರು. ದೇಶಾದ್ಯಂತ ಹೊಸ ಮತ್ತು ದೊಡ್ಡ ಬಂದರುಗಳನ್ನು ನಿರ್ಮಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು. ಇತ್ತೀಚೆಗೆ, ಭಾರತದ ಮೊದಲ ಆಳ-ನೀರಿನ ಕಂಟೇನರ್ ಟ್ರಾನ್ಸ್‌ಶಿಪ್‌ಮೆಂಟ್ ಬಂದರು ಕೇರಳದಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ ಎಂದು ಅವರು ಹೇಳಿದರು. ಜೊತೆಗೆ, ಮಹಾರಾಷ್ಟ್ರದ ವಾಧವನ್ ಬಂದರನ್ನು ₹75,000 ಕೋಟಿಗಿಂತ ಹೆಚ್ಚಿನ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ ಮತ್ತು ಇದು ವಿಶ್ವದ ಅಗ್ರ ಹತ್ತು ಬಂದರುಗಳಲ್ಲಿ ಸ್ಥಾನ ಪಡೆಯಲಿದೆ ಎಂದು ಪ್ರಧಾನಮಂತ್ರಿ ಘೋಷಿಸಿದರು.
ಪ್ರಸ್ತುತ ಜಾಗತಿಕ ಕಡಲ ವ್ಯಾಪಾರದಲ್ಲಿ ಭಾರತದ ಪಾಲು ಶೇಕಡಾ 10 ರಷ್ಟಿದೆ ಎಂದು ಉಲ್ಲೇಖಿಸಿದ ಶ್ರೀ ಮೋದಿ, ಈ ಪಾಲನ್ನು ಹೆಚ್ಚಿಸುವ ಅಗತ್ಯವನ್ನು ಒತ್ತಿ ಹೇಳಿದರು ಮತ್ತು 2047 ರ ವೇಳೆಗೆ ಭಾರತವು ಜಾಗತಿಕ ಸಮುದ್ರ ವ್ಯಾಪಾರದಲ್ಲಿ ತನ್ನ ಭಾಗವಹಿಸುವಿಕೆಯನ್ನು ಮೂರು ಪಟ್ಟು ಹೆಚ್ಚಿಸುವ ಗುರಿಯನ್ನು ಹೊಂದಿದೆ - ಮತ್ತು ಅದನ್ನು ಸಾಧಿಸುತ್ತದೆ ಎಂದು ಘೋಷಿಸಿದರು.
ಕಡಲ ವ್ಯಾಪಾರ ವಿಸ್ತರಿಸಿದಂತೆ, ಭಾರತೀಯ ನಾವಿಕರ ಸಂಖ್ಯೆಯೂ ಹೆಚ್ಚುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಈ ವೃತ್ತಿಪರರನ್ನು ಹಡಗುಗಳನ್ನು ನಿರ್ವಹಿಸುವ, ಎಂಜಿನ್‌ಗಳು ಮತ್ತು ಯಂತ್ರೋಪಕರಣಗಳನ್ನು ನಿರ್ವಹಿಸುವ ಮತ್ತು ಸಮುದ್ರದಲ್ಲಿ ಸರಕು ಹೇರುವ ಮತ್ತು ಇಳಿಸುವ ಕಾರ್ಯಾಚರಣೆಗಳನ್ನು ನೋಡಿಕೊಳ್ಳುವ ಶ್ರಮಶೀಲ ವ್ಯಕ್ತಿಗಳು ಎಂದು ಅವರು ಬಣ್ಣಿಸಿದರು. ಒಂದು ದಶಕದ ಹಿಂದೆ, ಭಾರತದಲ್ಲಿ 1.25 ಲಕ್ಷಕ್ಕಿಂತ ಕಡಿಮೆ ನಾವಿಕರಿದ್ದರು. ಇಂದು, ಆ ಸಂಖ್ಯೆ ಮೂರು ಲಕ್ಷವನ್ನು ದಾಟಿದೆ. ಅತಿ ಹೆಚ್ಚು ನಾವಿಕರನ್ನು ಪೂರೈಸುವಲ್ಲಿ ಭಾರತವು ಈಗ ಜಾಗತಿಕವಾಗಿ ಅಗ್ರ ಮೂರು ದೇಶಗಳಲ್ಲಿ ಸ್ಥಾನ ಪಡೆದಿದೆ ಎಂದು ಶ್ರೀ ಮೋದಿ ಎತ್ತಿ ತೋರಿಸಿದರು ಮತ್ತು ಭಾರತದ ಬೆಳೆಯುತ್ತಿರುವ ಹಡಗು ನಿರ್ಮಾಣ ಉದ್ಯಮವು ಜಾಗತಿಕ ಸಾಮರ್ಥ್ಯಗಳನ್ನು ಬಲಪಡಿಸುತ್ತಿದೆ ಎಂದು ಹೇಳಿದರು.
ಭಾರತವು ತನ್ನ ಮೀನುಗಾರರು ಮತ್ತು ಪ್ರಾಚೀನ ಬಂದರು ನಗರಗಳಿಂದ ಸಂಕೇತಿಸಲ್ಪಟ್ಟ ಶ್ರೀಮಂತ ಕಡಲ ಪರಂಪರೆಯನ್ನು ಹೊಂದಿದೆ ಎಂಬುದನ್ನು ಒತ್ತಿ ಹೇಳಿದ ಶ್ರೀ ಮೋದಿ, ಭಾವನಗರ ಮತ್ತು ಸೌರಾಷ್ಟ್ರ ಪ್ರದೇಶವು ಈ ಪರಂಪರೆಯ ಪ್ರಮುಖ ಉದಾಹರಣೆಗಳಾಗಿವೆ ಎಂದು ಹೇಳಿದರು. ಭವಿಷ್ಯದ ಪೀಳಿಗೆ ಮತ್ತು ಜಗತ್ತಿಗೆ ಈ ಪರಂಪರೆಯನ್ನು ಸಂರಕ್ಷಿಸುವ ಮತ್ತು ಪ್ರದರ್ಶಿಸುವ ಮಹತ್ವವನ್ನು ಪ್ರಧಾನಮಂತ್ರಿ ಒತ್ತಿ ಹೇಳಿದರು. ಲೋಥಾಲ್‌ನಲ್ಲಿ ವಿಶ್ವ ದರ್ಜೆಯ ಕಡಲ ವಸ್ತುಸಂಗ್ರಹಾಲಯವನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಅವರು ಘೋಷಿಸಿದರು, ಇದು ಏಕತೆಯ ಪ್ರತಿಮೆಯಂತೆ, ಭಾರತದ ಗುರುತಿನ ಹೊಸ ಸಂಕೇತವಾಗಲಿದೆ. ಎಂದರು.
"ಭಾರತದ ಕರಾವಳಿಗಳು ರಾಷ್ಟ್ರೀಯ ಸಮೃದ್ಧಿಗೆ ದ್ವಾರಗಳಾಗಲಿವೆ" ಎಂದು ಪ್ರಧಾನಮಂತ್ರಿ ನುಡಿದರು. ಗುಜರಾತ್‌ನ ಕರಾವಳಿ ಮತ್ತೊಮ್ಮೆ ಈ ಪ್ರದೇಶಕ್ಕೆ ವರದಾನವಾಗಿದೆ ಎಂದು ಅವರು ಸಂತೋಷ ವ್ಯಕ್ತಪಡಿಸಿದರು. ಈ ಇಡೀ ಪ್ರದೇಶವು ಈಗ ದೇಶದಲ್ಲಿ ಬಂದರು ನೇತೃತ್ವದ ಅಭಿವೃದ್ಧಿಗೆ ಹೊಸ ಮಾನದಂಡವನ್ನು ಸ್ಥಾಪಿಸುತ್ತಿದೆ ಎಂದು ಅವರು ಹೇಳಿದರು. ಭಾರತದಲ್ಲಿ ಸಮುದ್ರ ಮಾರ್ಗಗಳ ಮೂಲಕ ಬರುವ ಸರಕುಗಳಲ್ಲಿ 40 ಪ್ರತಿಶತವನ್ನು ಗುಜರಾತ್‌ನ ಬಂದರುಗಳು ನಿರ್ವಹಿಸುತ್ತವೆ ಮತ್ತು ಈ ಬಂದರುಗಳು ಶೀಘ್ರದಲ್ಲೇ ಪ್ರತ್ಯೇಕವಾಗಿ ಮೀಸಲಾದ ಸರಕು ಕಾರಿಡಾರ್‌ನಿಂದ ಪ್ರಯೋಜನ ಪಡೆಯುತ್ತವೆ ಎಂದು ಶ್ರೀ ಮೋದಿ ಉಲ್ಲೇಖಿಸಿದರು, ಇದು ದೇಶದ ಇತರ ಭಾಗಗಳಿಗೆ ಸರಕುಗಳ ವೇಗದ ಸಾಗಣೆಗೆ ಅನುವು ಮಾಡಿಕೊಡುತ್ತದೆ ಮತ್ತು ಬಂದರು ದಕ್ಷತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದರು.
ಈ ಪ್ರದೇಶದಲ್ಲಿ ಹಡಗು ಒಡೆಯುವ ಶಕ್ತಿಶಾಲಿ ಪರಿಸರ ವ್ಯವಸ್ಥೆ ಹೊರಹೊಮ್ಮುತ್ತಿದ್ದು, ಅಲಂಗ್ ಹಡಗು ಒಡೆಯುವ ಯಾರ್ಡ್ ಒಂದು ಪ್ರಮುಖ ಉದಾಹರಣೆಯಾಗಿದೆ ಎಂದು ಶ್ರೀ ಮೋದಿ ಹೇಳಿದರು. ಈ ವಲಯವು ಯುವಜನರಿಗೆ ಗಮನಾರ್ಹ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿದೆ ಎಂದು ಅವರು ಹೇಳಿದರು.
ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು, ಎಲ್ಲಾ ಕ್ಷೇತ್ರಗಳಲ್ಲಿ ತ್ವರಿತ ಪ್ರಗತಿಯ ಅಗತ್ಯವಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಅಭಿವೃದ್ಧಿ ಹೊಂದಿದ ಭಾರತಕ್ಕೆ ಹಾದಿಯು ಸ್ವಾವಲಂಬನೆಯ ಮೂಲಕ ಸಾಗುತ್ತದೆ ಎಂಬುದನ್ನು ಅವರು ಪುನರುಚ್ಚರಿಸಿದರು. ನಾಗರಿಕರು ತಾವು ಖರೀದಿಸುವ ಯಾವುದೇ ವಸ್ತುವು ಸ್ಥಳೀಯವಾಗಿರಬೇಕು ಮತ್ತು ಅವರು ಮಾರಾಟ ಮಾಡುವ ಯಾವುದೇ ವಸ್ತುವು ಸ್ಥಳೀಯವಾಗಿರಬೇಕು ಎಂಬುದನ್ನು ನೆನಪಿನಲ್ಲಿಡಬೇಕೆಂದು ಅವರು ಆಗ್ರಹಿಸಿದರು. ಅಂಗಡಿ ಮಾಲೀಕರನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಮೋದಿ, "ಹೆಮ್ಮೆಯಿಂದ ಹೇಳಿ, ಇದು ಸ್ವದೇಶಿ" ಎಂದು ಬರೆದಿರುವ ಪೋಸ್ಟರ್‌ಗಳನ್ನು ತಮ್ಮ ಅಂಗಡಿಗಳಲ್ಲಿ ಪ್ರದರ್ಶಿಸಲು ಪ್ರೋತ್ಸಾಹಿಸಿದರು. ಈ ಸಾಮೂಹಿಕ ಪ್ರಯತ್ನವು ಪ್ರತಿಯೊಂದು ಹಬ್ಬವನ್ನು ಭಾರತದ ಸಮೃದ್ಧಿಯ ಆಚರಣೆಯಾಗಿ ಪರಿವರ್ತಿಸುತ್ತದೆ ಎಂದು ಹೇಳುವ ಮೂಲಕ ಅವರು ತಮ್ಮ ಮಾತುಗಳನ್ನು ಮುಕ್ತಾಯಗೊಳಿಸಿದರು ಮತ್ತು ನವರಾತ್ರಿಯ ಸಂದರ್ಭದಲ್ಲಿ ಎಲ್ಲರಿಗೂ ತಮ್ಮ ಶುಭಾಶಯಗಳನ್ನು ಕೋರಿದರು.
ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರಭಾಯಿ ಪಟೇಲ್, ಕೇಂದ್ರ ಸಚಿವರಾದ ಶ್ರೀ ಸಿ.ಆರ್. ಪಾಟಿಲ್, ಶ್ರೀ ಸರ್ಬಾನಂದ ಸೋನೋವಾಲ್, ಡಾ. ಮನ್ಸುಖ್ ಮಾಂಡವಿಯ, ಶ್ರೀ ಶಾಂತನು ಠಾಕೂರ್, ಶ್ರೀಮತಿ ನಿಮುಬೆನ್ ಬಂಭಾನಿಯಾ ಸೇರಿದಂತೆ ಇತರ ಗಣ್ಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಹಿನ್ನೆಲೆ
ಸಾಗರ ವಲಯಕ್ಕೆ ಪ್ರಮುಖ ಉತ್ತೇಜನ ನೀಡುವ ನಿಟ್ಟಿನಲ್ಲಿ, ಪ್ರಧಾನಮಂತ್ರಿ ಅವರು ಕಡಲ ವಲಯಕ್ಕೆ ಸಂಬಂಧಿಸಿ 34,200 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಇಂದಿರಾ ಡಾಕ್‌ನಲ್ಲಿ ಮುಂಬೈ ಅಂತರರಾಷ್ಟ್ರೀಯ ಕ್ರೂಸ್ ಟರ್ಮಿನಲ್ ಅನ್ನು ಉದ್ಘಾಟಿಸಿದರು. ಕೋಲ್ಕತ್ತಾದ ಶ್ಯಾಮ ಪ್ರಸಾದ್ ಮುಖರ್ಜಿ ಬಂದರಿನಲ್ಲಿ ಹೊಸ ಕಂಟೇನರ್ ಟರ್ಮಿನಲ್ ಮತ್ತು ಸಂಬಂಧಿತ ಸೌಲಭ್ಯಗಳಿಗೆ ಅವರು ಶಂಕುಸ್ಥಾಪನೆ ನೆರವೇರಿಸಿದರು. ಪಾರದೀಪ್ ಬಂದರಿನಲ್ಲಿ ಹೊಸ ಕಂಟೇನರ್ ಬರ್ತ್, ಸರಕು ನಿರ್ವಹಣಾ ಸೌಲಭ್ಯಗಳು ಮತ್ತು ಸಂಬಂಧಿತ ಅಭಿವೃದ್ಧಿಗಳು; ಟ್ಯೂನ ಟೆಕ್ರಾ ಮಲ್ಟಿ-ಕಾರ್ಗೋ ಟರ್ಮಿನಲ್; ಎನ್ನೋರ್‌ನ ಕಾಮರಾಜರ್ ಬಂದರಿನಲ್ಲಿ ಅಗ್ನಿಶಾಮಕ ಸೌಲಭ್ಯಗಳು ಮತ್ತು ಆಧುನಿಕ ರಸ್ತೆ ಸಂಪರ್ಕ; ಚೆನ್ನೈ ಬಂದರಿನಲ್ಲಿ ಸಮುದ್ರ ತಡೆಗೋಡೆಗಳು ಮತ್ತು ರೆವೆಟ್‌ಮೆಂಟ್‌ಗಳು ಸೇರಿದಂತೆ ಕರಾವಳಿ ರಕ್ಷಣಾ ಕಾರ್ಯಗಳು; ಕಾರ್ ನಿಕೋಬಾರ್ ದ್ವೀಪದಲ್ಲಿ ಸಮುದ್ರ ತಡೆಗೋಡೆಯ ನಿರ್ಮಾಣ; ಕಾಂಡ್ಲಾದ ದೀನದಯಾಳ್ ಬಂದರಿನಲ್ಲಿ ಬಹುಪಯೋಗಿ ಸರಕು ಬರ್ತ್ ಮತ್ತು ಹಸಿರು ಜೈವಿಕ-ಮೆಥನಾಲ್ ಸ್ಥಾವರ; ಮತ್ತು ಪಾಟ್ನಾ ಮತ್ತು ವಾರಣಾಸಿಯಲ್ಲಿ ಹಡಗು ದುರಸ್ತಿ ಸೌಲಭ್ಯಗಳಿಗೆ ಅವರು ಶಿಲಾನ್ಯಾಸ ಮಾಡಿದರು.
ಸಮಗ್ರ ಮತ್ತು ಸುಸ್ಥಿರ ಅಭಿವೃದ್ಧಿಯ ಬದ್ಧತೆಗೆ ಅನುಗುಣವಾಗಿ, ಪ್ರಧಾನಮಂತ್ರಿ ಅವರು ಗುಜರಾತ್‌ನ ವಿವಿಧ ವಲಯಗಳಿಗೆ ಪೂರಕವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ 26,354 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಬಹು ಯೋಜನೆಗಳನ್ನು ಉದ್ಘಾಟಿಸಿದರು ಮತ್ತು ಶಂಕುಸ್ಥಾಪನೆ ಮಾಡಿದರು. ಅವರು ಛಾರಾ ಬಂದರಿನಲ್ಲಿ ಎಚ್.ಪಿ.ಎಲ್.ಎನ್.ಜಿ. (HPLNG) ಮರುಅನಿಲೀಕರಣ ಟರ್ಮಿನಲ್, ಗುಜರಾತ್ ಐ.ಒ.ಸಿ.ಎಲ್ (IOCL) ಸಂಸ್ಕರಣಾಗಾರದಲ್ಲಿ ಅಕ್ರಿಲಿಕ್‌ಗಳು ಮತ್ತು ಆಕ್ಸೊ ಆಲ್ಕೋಹಾಲ್ ಯೋಜನೆ, 600 ಮೆ.ವಾ. ಗ್ರೀನ್ ಶೂ ಇನಿಶಿಯೇಟಿವ್, ರೈತರಿಗಾಗಿ ಪಿ.ಎಂ.-ಕುಸುಮ್ 475 ಮೆ.ವಾ. ಕಾಂಪೊನೆಂಟ್ ಸಿ ಸೌರ ಫೀಡರ್, 45 ಮೆ.ವಾ. ಬಡೇಲಿ ಸೌರ ಪಿ.ವಿ. ಯೋಜನೆ, ಧೋರ್ಡೋ ಗ್ರಾಮದ ಸಂಪೂರ್ಣ ಸೌರೀಕರಣ ಇತ್ಯಾದಿಗಳನ್ನು ಉದ್ಘಾಟಿಸಿದರು. ಭಾವನಗರದ ಸರ್ ಟಿ. ಜನರಲ್ ಆಸ್ಪತ್ರೆಯಲ್ಲಿ ವಿಸ್ತರಣೆಗಳು, ಜಾಮ್‌ನಗರದ ಗುರು ಗೋವಿಂದ್ ಸಿನ್ಹ್ ಸರ್ಕಾರಿ ಆಸ್ಪತ್ರೆ ವಿಸ್ತರಣೆ ಮತ್ತು 70 ಕಿ.ಮೀ. ರಾಷ್ಟ್ರೀಯ ಹೆದ್ದಾರಿಗಳ ಚತುಷ್ಪಥ ಸೇರಿದಂತೆ ಎಲ್.ಎನ್.ಜಿ. ಮೂಲಸೌಕರ್ಯ, ಹೆಚ್ಚುವರಿ ನವೀಕರಿಸಬಹುದಾದ ಇಂಧನ ಯೋಜನೆಗಳು, ಕರಾವಳಿ ಸಂರಕ್ಷಣಾ ಕಾರ್ಯಗಳು, ಹೆದ್ದಾರಿಗಳು ಮತ್ತು ಆರೋಗ್ಯ ಮತ್ತು ನಗರ ಸಾರಿಗೆ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.
ಸುಸ್ಥಿರ ಕೈಗಾರಿಕೀಕರಣ, ಸ್ಮಾರ್ಟ್ ಮೂಲಸೌಕರ್ಯ ಮತ್ತು ಜಾಗತಿಕ ಹೂಡಿಕೆಯ ಸುತ್ತ ನಿರ್ಮಿಸಲಾದ ಗ್ರೀನ್ ಫೀಲ್ಡ್ ಕೈಗಾರಿಕಾ ನಗರವಾಗಿ ಕಲ್ಪಿಸಲಾಗಿರುವ ಧೋಲೇರಾ ವಿಶೇಷ ಹೂಡಿಕೆ ಪ್ರದೇಶದ (ಡಿ.ಎಸ್.ಐ.ಆರ್.-DSIR) ವೈಮಾನಿಕ ಸಮೀಕ್ಷೆಯನ್ನು ಪ್ರಧಾನಮಂತ್ರಿ ಕೈಗೊಳ್ಳಲಿದ್ದಾರೆ. ಭಾರತದ ಪ್ರಾಚೀನ ಕಡಲ ಸಂಪ್ರದಾಯಗಳನ್ನು ಸಂಭ್ರಮಿಸಲು ಮತ್ತು ಸಂರಕ್ಷಿಸಲು ಹಾಗು ಪ್ರವಾಸೋದ್ಯಮ, ಸಂಶೋಧನೆ, ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿಯ ಕೇಂದ್ರವಾಗಿ ಕಾರ್ಯನಿರ್ವಹಿಸಲು ಸುಮಾರು 4,500 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ ಲೋಥಾಲ್‌ನಲ್ಲಿರುವ ರಾಷ್ಟ್ರೀಯ ಕಡಲ ಪರಂಪರೆಯ ಸಂಕೀರ್ಣ (ಎನ್.ಎಚ್.ಎಂ.ಸಿ.-NHMC)ಕ್ಕೆ ಭೇಟಿ ನೀಡಿ ಪ್ರಗತಿಯನ್ನು ಪರಿಶೀಲಿಸಲಿದ್ದಾರೆ.
*****
(Release ID: 2168976)