ಸಂಸ್ಕೃತಿ ಸಚಿವಾಲಯ
ಪ್ರಧಾನಮಂತ್ರಿ ಸ್ಮರಣಿಕೆಗಳ ಇ-ಹರಾಜು 2025ಕ್ಕೆ ದಕ್ಷಿಣ ಭಾರತದ ರಾಜ್ಯಗಳಿಂದ 100ಕ್ಕೂ ಹೆಚ್ಚು ವಿಶಿಷ್ಟ ವಸ್ತುಗಳು ಕೊಡುಗೆ
ಕೇರಳ, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣದ ಅತ್ಯುತ್ತಮ ಕಲೆ, ಶಿಲ್ಪಗಳು ಮತ್ತು ಕ್ರೀಡಾ ಸ್ಮರಣಿಕೆಗಳಿಂದ ನಮಾಮಿ ಗಂಗೆ ಯೋಜನೆಯನ್ನು ಬೆಂಬಲಿಸುವ ರಾಷ್ಟ್ರೀಯ ಹರಾಜು ಸಮೃದ್ಧ
Posted On:
19 SEP 2025 6:08PM by PIB Bengaluru
ಪ್ರಧಾನಮಂತ್ರಿ ಸ್ಮರಣಿಕೆಗಳ (ಪಿ.ಎಂ. ಮೆಮೆಂಟೋಸ್) ಇ-ಹರಾಜಿನ 7 ನೇ ಆವೃತ್ತಿಯು ದಕ್ಷಿಣ ಭಾರತದ ರೋಮಾಂಚಕ ಸಂಗ್ರಹವನ್ನು ಒಳಗೊಂಡಿದೆ. ಕೇರಳದ 15 ವಸ್ತುಗಳು, ಕರ್ನಾಟಕದ 22, ತಮಿಳುನಾಡಿನ 29, ಆಂಧ್ರಪ್ರದೇಶದ 27 ಮತ್ತು ತೆಲಂಗಾಣದ 7 ವಸ್ತುಗಳು ಹರಾಜಿನಲ್ಲಿದ್ದು, ಈ ಪ್ರದೇಶಗಳ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಕ್ರೀಡಾ ಸಾಧನೆಗಳನ್ನು ಪ್ರದರ್ಶಿಸಿದೆ. 2025ರ ಅಕ್ಟೋಬರ್ 2 ರವರೆಗೆ pmmementos.gov.in ನಲ್ಲಿಆನ್ಲೈನ್ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದಾಗಿದೆ.
ಆಂಧ್ರಪ್ರದೇಶದ ಸ್ಮರಣಿಕೆಗಳ ಪ್ರಮುಖ ಅಂಶಗಳು:
- ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಉಡುಗೊರೆಯಾಗಿ ನೀಡಲಾದ ವೆಂಕಟೇಶ್ವರ ದೇವರ ಮರದ ಉಬ್ಬು ಶಿಲ್ಪ. ನಂಬಿಕೆ ಮತ್ತು ಸಮೃದ್ಧಿಯ ಸಂಕೇತದ ಈ ಕಲಾಕೃತಿಯನ್ನು ಶ್ರೀಮಂತ ಕಂದು ಬಣ್ಣದ ಪ್ರದರ್ಶನ ಪೆಟ್ಟಿಗೆಯಲ್ಲಿರಿಸಲಾಗಿದ್ದು, ಇದು ಭಗವಂತ ಬಾಲಾಜಿಯ ದೈವಿಕ ಪ್ರಭಾವಳಿಯನ್ನು ಸೆರೆಹಿಡಿದಿದೆ.

- ಈ ಅತ್ಯುತ್ಕೃಷ್ಟ ತಂಜಾವೂರು ವರ್ಣಚಿತ್ರವು ದಕ್ಷಿಣ ಭಾರತದ ಆಧ್ಯಾತ್ಮಿಕ ಕಲಾತ್ಮಕತೆಯ ಉದಾಹರಣೆಯಾಗಿದೆ. ಅಪ್ರತಿಮ ದೈವ ಭಗವಾನ್ ವೆಂಕಟೇಶ್ವರ ಬಾಲಾಜಿಯ ಕಲಾಕೃತಿಯನ್ನು 22 ಕ್ಯಾರೆಟ್ ಚಿನ್ನದ ಹಾಳೆ ಮತ್ತು ಅರೆ-ಅಮೂಲ್ಯ ಹರಳುಗಳಿಂದ ಅಲಂಕರಿಸಲಾಗಿದೆ.

ಕೇರಳದ ಕಲಾಕೃತಿಯ ವಿಶೇಷಣಗಳು:
- ಆನೆ ಗಜೇಂದ್ರನ ಮೇಲೆ ವಿಷ್ಣು ದೇವರು ಸವಾರಿ ಮಾಡುತ್ತಿರುವ ಈ ಆಕರ್ಷಕ ಕಲಾಕೃತಿಯು ಸ್ವರ್ಣದಿಂದ ಅಲಂಕರಿಸಲ್ಪಟ್ಟಿದ್ದು ಪ್ರಸಿದ್ಧ ಪೌರಾಣಿಕ ಕಥೆ ಗಜೇಂದ್ರ ಮೋಕ್ಷದ ಕಥನವನ್ನು ಸಾರುತ್ತಿದೆ.

- ಕಥಕ್ಕಳಿಯ ಪ್ರತಿಮೆಯು ಕೇರಳದ ಸಾಂಪ್ರದಾಯಿಕ ನೃತ್ಯ ನಾಟಕ ಉಡುಗೆ ಮತ್ತು ಮೇಕಪ್ ಸಹಿತವಾಗಿ ಅಲ್ಲಿನ ಶಾಸ್ತ್ರೀಯ ಪ್ರದರ್ಶನ ಕಲೆಯ ಪ್ರತಿಬಿಂಬವಾಗಿದೆ.

ತಮಿಳುನಾಡಿನ ಕಲಾಕೃತಿಯ ವಿಶೇಷತೆಗಳು:
- ಭಾರತೀಯ ಪ್ಯಾರಾಲಿಂಪಿಕ್ ಹೈಜಂಪ್ ಪದಕ ವಿಜೇತರಾದ ಶ್ರೀ ಮರಿಯಪ್ಪನ್ ತಂಗವೇಲು ಅವರು ಕೊಡುಗೆಯಾಗಿ ನೀಡಿರುವ ಪಾದರಕ್ಷೆಯು ಸ್ಮರಣೀಯವಾದುದು.

- ಲೋಹದ ನಟರಾಜ ಪ್ರತಿಮೆಯು ಶಿವನ ಬ್ರಹ್ಮಾಂಡ ನೃತ್ಯವನ್ನು ಚಿತ್ರಿಸುತ್ತಾ, ಸಾಂಪ್ರದಾಯಿಕ ಸಂಕೇತ ಮತ್ತು ಕಲಾತ್ಮಕ ಕೌಶಲ್ಯದಿಂದ ಕೂಡಿದ್ದು ಅತ್ಯಂತ ಸೊಗಸಾಗಿದೆ.

ಕರ್ನಾಟಕದ ಸ್ಮರಣಿಕೆಗಳ ವೈಶಿಷ್ಟ್ಯಗಳು:
- 2024ರ ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಶ್ರೀ ಸುಹಾಸ್ ಸಿಂಗ್ ಅವರು ಉಡುಗೊರೆಯಾಗಿ ನೀಡಿದ ಬ್ಯಾಡ್ಮಿಂಟನ್ ರ‍್ಯಾಕೆಟ್ ಸ್ಮರಣಿಕೆಗಳು, ಕ್ರೀಡಾ ಶ್ರೇಷ್ಠತೆ ಮತ್ತು ನಿರಂತರ ಚೈತನ್ಯದ ಸಂಕೇತವಾಗಿದೆ.

- ಬಿದ್ರಿ ಕಲೆ (ಬೀದರ್ ನ ಲೋಹದ ಕರಕುಶಲ ಕಲೆ) ಯಲ್ಲಿ ಮೂಡಿಬಂದಿರುವ 12 ನೇ ಶತಮಾನದ ಪ್ರೇರಣಾದಾಯಕ ಕವಿ ಮತ್ತು ತತ್ವಜ್ಞಾನಿಯಾದ ಬಸವಣ್ಣನ ಸೊಗಸಾದ ಪ್ರತಿಮೆಯನ್ನು ಕೌಶಲ್ಯಪೂರ್ಣ ಲೋಹ ಕಲಾತ್ಮಕತೆಯಿಂದ ರಚಿಸಲಾಗಿದೆ.

ತೆಲಂಗಾಣದ ಕಲಾಕೃತಿಯ ಪ್ರಮುಖ ಅಂಶಗಳು:
- ಬತುಕಮ್ಮ ಹಬ್ಬವನ್ನು ಚಿತ್ರಿಸುವ ಚೆರಿಯಾಲ್ ಸ್ಕ್ರಾಲ್ ಪೇಂಟಿಂಗ್, ಮೋಟಿಫ್ ಗಳು ಮತ್ತು ನಿರೂಪಣಾ ಶೈಲಿಯಿಂದ ಸಮೃದ್ಧವಾಗಿದೆ.



- ಕಾಕತೀಯ ಕಲಾ ತೋರಣಂ (ವಾರಂಗಲ್ ಗೇಟ್) ನ ಬೆಳ್ಳಿ ಪ್ರತಿಕೃತಿಯು ತೆಲಂಗಾಣದ ವಾಸ್ತುಶಿಲ್ಪ ಪರಂಪರೆ ಮತ್ತು ಕರಕುಶಲತೆಯನ್ನು ಸಾರಿದೆ.

ಪಿ.ಎಂ. ಮೆಮೆಂಟೋಸ್ ಇ-ಹರಾಜು 2025 ರಲ್ಲಿ ದೇಶಾದ್ಯಂತ 1,300 ಕ್ಕೂ ಹೆಚ್ಚು ವಿಶಿಷ್ಟ ವಸ್ತುಗಳಿವೆ. ಹರಾಜಿನಿಂದ ಬರುವ ಸಂಪೂರ್ಣ ಆದಾಯವು ಗಂಗಾ ನದಿಯನ್ನು ಪುನರುಜ್ಜೀವನಗೊಳಿಸುವ ಭಾರತ ಸರ್ಕಾರದ ಪ್ರಮುಖ ಉಪಕ್ರಮವಾದ ನಮಾಮಿ ಗಂಗೆ ಯೋಜನೆಗೆ ವಿನಿಯೋಗವಾಗಲಿದೆ. www.pmmementos.gov.in ನಲ್ಲಿ ಹೆಚ್ಚಿನ ವಿವರಗಳನ್ನು ಪಡೆಯಬಹುದಾಗಿದೆ ಮತ್ತು ಹರಾಜಿನಲ್ಲಿ ಪಾಲ್ಗೊಳ್ಳಬಹುದಾಗಿದೆ.
****
(Release ID: 2168765)