ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
2025ರ ಸೆಪ್ಟೆಂಬರ್ 15 ರಿಂದ 19 ರವರೆಗೆ ಅಂತಾರಾಷ್ಟ್ರೀಯ ಎಲೆಕ್ಟ್ರೋಟೆಕ್ನಿಕಲ್ ಆಯೋಗದ (ಐ.ಇ.ಸಿ)ಯ 89 ನೇ ವಾರ್ಷಿಕ ಸಭೆಯನ್ನು ಆಯೋಜಿಸಲಿರುವ ಭಾರತ
ಶ್ರೀ ಪ್ರಲ್ಹಾದ್ ಜೋಶಿ ಅವರಿಂದ 89 ನೇ ಐ.ಇ.ಸಿ ವಾರ್ಷಿಕ ಸಭೆ ಉದ್ಘಾಟನೆ; ನವದೆಹಲಿಯ ಭಾರತ್ ಮಂಟಪದಲ್ಲಿ ಐ.ಇ.ಸಿ ಜಿ.ಎಂ. ವಸ್ತು ಪ್ರದರ್ಶನವನ್ನು ಉದ್ಘಾಟಿಸಲಿರುವ ಶ್ರೀ ಪಿಯೂಷ್ ಗೋಯಲ್
100 ಕ್ಕೂ ಅಧಿಕ ದೇಶಗಳು ಮತ್ತು 2 ಸಾವಿರಕ್ಕೂ ಅಧಿಕ ಜಾಗತಿಕ ತಜ್ಞರು ಭಾಗಿ
ಕಡಿಮೆ ವೋಲ್ಟೇಜ್ ಡೈರೆಕ್ಟ್ ಕರೆಂಟ್ ನಲ್ಲಿ (ಎಲ್.ವಿ.ಡಿ.ಸಿ) ಪ್ರಮಾಣೀಕರಣಕ್ಕಾಗಿ ಜಾಗತಿಕ ಸಚಿವಾಲಯವಾಗಿ ಕಾರ್ಯನಿರ್ವಹಿಸಲಿರುವ ಭಾರತ
Posted On:
14 SEP 2025 11:11AM by PIB Bengaluru
ಭಾರತವು ಅಂತಾರಾಷ್ಟ್ರೀಯ ಎಲೆಕ್ಟ್ರೋಟೆಕ್ನಿಕಲ್ ಆಯೋಗದ (ಐ.ಇ.ಸಿ) 89 ನೇ ವಾರ್ಷಿಕ ಸಭೆಯನ್ನು 2025ರ ಸೆಪ್ಟೆಂಬರ್ 15 ರಿಂದ 19 ರವರೆಗೆ ನವದೆಹಲಿಯ ಭಾರತ ಮಂಟಪದಲ್ಲಿ ಆಯೋಜಿಸಲಿದೆ ಎಂದು ಭಾರತೀಯ ಮಾನಕ ಬ್ಯೂರೋ (ಬಿ.ಐ.ಎಸ್) ಪ್ರಕಟಿಸಿದೆ. ಈ ಕಾರ್ಯಕ್ರಮವು 100 ಕ್ಕೂ ಅಧಿಕ ದೇಶಗಳಿಂದ 2ಸಾವಿರಕ್ಕೂ ಅಧಿಕ ತಜ್ಞರನ್ನು ಒಗೂಡಿಸುತ್ತದೆ. ಅವರು ಸುಸ್ಥಿರ, ಸಂಪೂರ್ಣ ವಿದ್ಯುತ್ ಮತ್ತು ಸಂಪರ್ಕಿತ ಜಗತ್ತನ್ನು ಬೆಳೆಸುವ ಅಂತಾರಾಷ್ಟ್ರೀಯ ಎಲೆಕ್ಟ್ರೋಟೆಕ್ನಿಕಲ್ ಮಾನದಂಡಗಳನ್ನು ಹೊಂದಿಸುವ ಕುರಿತು ಚರ್ಚೆ ನಡೆಸಲಿದ್ದಾರೆ. ಭಾರತವು ಹಿಂದೆ 1960, 1997 ಮತ್ತು 2013 ರಲ್ಲಿ ಪ್ರತಿಷ್ಠಿತ ಐ.ಇ.ಸಿ ವಾರ್ಷಿಕ ಸಭೆಯನ್ನು ಆಯೋಜಿಸಿತ್ತು, ಇದೀಗ ನಾಲ್ಕನೇ ಬಾರಿಗೆ ಮತ್ತೆ ಆಯೋಜನೆ ಮಾಡುತ್ತಿದೆ.
ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಮತ್ತು ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರು ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ. ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾದ ಶ್ರೀ ಪಿಯೂಷ್ ಗೋಯಲ್ ಭಾರತ್ ಮಂಟಪದಲ್ಲಿ ಐ.ಇ.ಸಿ ಜಿ.ಎಂ. ವಸ್ತು ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. ಈ ಪ್ರದರ್ಶನವು ಭಾರತದ ಎಲೆಕ್ಟ್ರೋಟೆಕ್ನಿಕಲ್ ವಿಭಾಗದಲ್ಲಿ ಅತಿ ದೊಡ್ಡದಾಗಿದ್ದು, ವಿದ್ಯುತ್ ಸಾಗಾಣೆ, ಸ್ಮಾರ್ಟ್ ಲೈಟಿಂಗ್, ಎಲೆಕ್ಟ್ರಾನಿಕ್ಸ್ ಮತ್ತು ಐ.ಟಿ. ಉತ್ಪಾದನೆಯಲ್ಲಿ ನಾವೀನ್ಯತೆಗಳನ್ನು ಪ್ರದರ್ಶಿಸುತ್ತದೆ ಮತ್ತು ಭಾರತೀಯ ನವೋದ್ಯಮಗಳಿಗೆ ಜಾಗತಿಕ ನೆಟ್‌ವರ್ಕಿಂಗ್ ಗೆ ವೇದಿಕೆ ಒದಗಿಸುತ್ತದೆ.
ಶುದ್ಧ ಮತ್ತು ಮಾಲಿನ್ಯ-ಮುಕ್ತ ಇಂಧನ ಪರಿಹಾರಗಳಿಗೆ ನಿರ್ಣಾಯಕ ಕ್ಷೇತ್ರವಾದ ಕಡಿಮೆ ವೋಲ್ಟೇಜ್ ಡೈರೆಕ್ಟ್ ಕರೆಂಟ್ (ಎಲ್.ವಿ.ಡಿ.ಸಿ) ಕ್ಷೇತ್ರದಲ್ಲಿ ಭಾರತವು ಪ್ರಮಾಣೀಕರಣಕ್ಕಾಗಿ ಜಾಗತಿಕ ಸಚಿವಾಲಯವಾಗಿಯೂ ಕಾರ್ಯನಿರ್ವಹಿಸಲಿದೆ. ಐ.ಇ.ಸಿ ಉಪಾಧ್ಯಕ್ಷರಾದ ಶ್ರೀ ವಿಮಲ್ ಮಹೇಂದ್ರು, ಐ.ಇ.ಸಿ ಸದಸ್ಯತ್ವವು ವಿಶ್ವದ ಜನಸಂಖ್ಯೆಯ ಶೇ.99ರಷ್ಟನ್ನು ಪ್ರತಿನಿಧಿಸುವ ಸುಮಾರು 170 ದೇಶಗಳನ್ನು ಒಳಗೊಂಡಿದೆ ಮತ್ತು ಜಾಗತಿಕ ಮೌಲ್ಯದ ವ್ಯಾಪಾರದ ಸುಮಾರು ಶೇ.20 ರಷ್ಟು ಪರಿಣಾಮ ಬೀರುತ್ತದೆ ಎಂದು ಪ್ರಮುಖವಾಗಿ ಪ್ರಸ್ತಾಪಿಸಿದರು. ಎಲ್.ವಿ.ಡಿ.ಸಿ ಪ್ರಮಾಣೀಕರಣದಲ್ಲಿ ಭಾರತದ ನಾಯಕತ್ವವು ಶುದ್ಧ ತಂತ್ರಜ್ಞಾನ ಮಾನದಂಡಗಳನ್ನು ಅಭಿವೃದ್ಧಿಪಡಿಸುವ ಜಾಗತಿಕ ಪ್ರಯತ್ನಗಳನ್ನು ಬಲವರ್ಧನೆಗೊಳಿಸುತ್ತದೆ ಎಂದು ಹೇಳಿದರು.
ಬಿ.ಐ.ಎಸ್ ನ ಮಹಾನಿರ್ದೇಶಕ ಶ್ರೀ ಪ್ರಮೋದ್ ಕುಮಾರ್ ತಿವಾರಿ, ವಿದ್ಯಾರ್ಥಿ ಅಧ್ಯಾಯಗಳು ಮತ್ತು ಯುವ ವೃತ್ತಿಪರರನ್ನು ಕೈಗಾರಿಕೆಗಳು ಮತ್ತು ಮಾನದಂಡಗಳ ಅಭಿವೃದ್ಧಿ ಪ್ರಕ್ರಿಯೆಗೆ ಒಡ್ಡಿಕೊಳ್ಳುವ ರಚನಾತ್ಮಕ ಆರು ತಿಂಗಳ ಇಂಟರ್ನ್‌ಶಿಪ್ ಕಾರ್ಯಕ್ರಮದ ಮೂಲಕ ಶೈಕ್ಷಣಿಕ ಕ್ಷೇತ್ರದೊಂದಿಗೆ ಗುಣಮಟ್ಟ ಮತ್ತು ಪ್ರಮಾಣೀಕರಣವನ್ನು ಸಂಯೋಜಿಸುವ ಬ್ಯೂರೋದ ಪ್ರಯತ್ನಗಳನ್ನು ಒತ್ತಿ ಹೇಳಿದರು. ಐ.ಇ.ಸಿ ಯುವ ವೃತ್ತಿಪರರ ಕಾರ್ಯಕ್ರಮದಡಿಯಲ್ಲಿ ಮುಂದಿನ ಪೀಳಿಗೆಯ ತಂತ್ರಜ್ಞಾನ ನಾಯಕರನ್ನು ಸಿದ್ಧಪಡಿಸಲು ವಿಶ್ವದಾದ್ಯಂತ 93 ಯುವ ವೃತ್ತಿಪರರು ಕಾರ್ಯಾಗಾರಗಳು, ಶಿಬಿರಗಳು ಮತ್ತು ಉದ್ಯಮ ಭೇಟಿಗಳಲ್ಲಿ ಭಾಗವಹಿಸಲಿದ್ದಾರೆ. ಸುದ್ದಿಗೋಷ್ಠಿಯ ವೇಳೆ ಬಿ.ಐ.ಎಸ್ ನ ನಿಯೋಜಿತ ಮಹಾನಿರ್ದೇಶಕ ಶ್ರೀ ಸಂಜಯ್ ಗರ್ಗ್ ಸಹ ಉಪಸ್ಥಿತರಿದ್ದರು. ಬಿ.ಐ.ಎಸ್ ನ ಉಪ ಮಹಾನಿರ್ದೇಶಕ ಶ್ರೀ ಚಂದನ್ ಬಹಲ್, ಐ.ಇ.ಸಿ ಜಿ.ಎಂ. 2025 ರ ಸಮಯದಲ್ಲಿ ನಡೆಯುತ್ತಿರುವ ವಿವಿಧ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು ಮತ್ತು ಈ ಜಾಗತಿಕ ಸಭೆಯನ್ನು ಆಯೋಜಿಸುವುದು ನಾವೀನ್ಯತೆ, ಸುಸ್ಥಿರತೆ ಮತ್ತು ಗುಣಮಟ್ಟದ ಮೂಲಸೌಕರ್ಯದಲ್ಲಿ ಭಾರತದ ನಾಯಕತ್ವವನ್ನು ಬಲಪಡಿಸುತ್ತದೆ ಎಂದು ಹೇಳಿದರು.
ಮುಂದಿನ ಪೀಳಿಗೆಯ ಮಾನದಂಡಗಳನ್ನು ರೂಪಿಸಲು 150 ಕ್ಕೂಅಧಿಕ ತಾಂತ್ರಿಕ ಮತ್ತು ನಿರ್ವಹಣಾ ಸಮಿತಿ ಗೋಷ್ಠಿಗಳು ವಾರ್ಷಿಕ ಸಭೆಯಲ್ಲಿ ನಡೆಯಲಿದ್ದು, ಪ್ರಮುಖ ಉದಯೋನ್ಮುಖ ಕ್ಷೇತ್ರಗಳಾದ: ಸುಸ್ಥಿರ ಜಗತ್ತನ್ನು ಪೋಷಿಸುವುದು (ಸೆಪ್ಟೆಂಬರ್ 15), ಕೃತಕ ಬುದ್ಧಿಮತ್ತೆ: ನಾವೀನ್ಯತೆಯಿಂದ ಭವಿಷ್ಯ ರೂಪಿಸುವುದು (ಸೆಪ್ಟೆಂಬರ್ 16), ಇ-ಚಲನಶೀಲತೆಯ ಭವಿಷ್ಯವನ್ನು ರೂಪಿಸುವುದು (ಸೆಪ್ಟೆಂಬರ್ 17) ಮತ್ತು ಮಾನದಂಡಗಳ ಮೂಲಕ ಎಲ್ಲರನ್ನೂ ಒಳಗೊಂಡ ಜಗತ್ತನ್ನು ನಿರ್ಮಿಸುವುದು ಮತ್ತು ಎಲ್ಲಾ-ವಿದ್ಯುತ್ ಮತ್ತು ಸಂಪರ್ಕಿತ ಸಮಾಜವನ್ನು ಸಕ್ರಿಯಗೊಳಿಸುವುದು (ಸೆಪ್ಟೆಂಬರ್ 18) ಮುಂತಾದವುಗಳ ಮೇಲೆ ಕೇಂದ್ರೀಕರಿಸುವ ಕಾರ್ಯಾಗಾರಗಳ ಸರಣಿಯನ್ನು ಆಯೋಜಿಸಲಾಗಿದೆ. ಐ.ಇ.ಸಿಯ ಸಂವಹನ ನಿರ್ದೇಶಕರಾದ ಶ್ರೀ ಜೇಮ್ಸ್ ವುಡ್, ಜಾಗತಿಕ ಸಮೀಕ್ಷೆಗಳು ಸ್ವಚ್ಛ ಮತ್ತು ಹಸಿರು ಪರಿಹಾರಗಳಿಗೆ ಅಗಾಧವಾದ ಸಾರ್ವಜನಿಕ ಬೆಂಬಲವನ್ನು ಸೂಚಿಸುತ್ತವೆ ಎಂದು ಹೇಳಿದರು, ಭಾರತವನ್ನು "ನಿಜವಾದ ಸುಸ್ಥಿರತೆಯ ಚಾಂಪಿಯನ್" ಎಂದು ಬಣ್ಣಿಸಿ, ಜಾಗತಿಕ ಸಂವಾದಕ್ಕೆ ನವದೆಹಲಿಯನ್ನು ಸೂಕ್ತ ಆತಿಥೇಯರನ್ನಾಗಿ ಮಾಡಿದೆ ಎಂದರು.
ಭಾರತ್ ಮಂಟಪದಲ್ಲಿ ಬಿ.ಐ.ಎಸ್ ಆಯೋಜಿಸಿರುವ ಐ.ಇ.ಸಿ ಜಿ.ಎಂ. ಪ್ರದರ್ಶನದಲ್ಲಿ ಪ್ರಮುಖ ಕೈಗಾರಿಕೆಗಳು, ಸಂಘಗಳು ಮತ್ತು ನವೋದ್ಯಮಗಳು ಸೇರಿದಂತೆ 75 ಪ್ರದರ್ಶಕರು ಭಾಗವಹಿಸಲಿದ್ದು, ಅಂತಾರಾಷ್ಟ್ರೀಯ ಮಾನದಂಡಗಳು ಉತ್ಪನ್ನ ಅಭಿವೃದ್ಧಿ ಮತ್ತು ನಾವೀನ್ಯತೆಯನ್ನು ಹೇಗೆ ನಡೆಸುತ್ತವೆ ಎಂಬುದನ್ನು ಪ್ರದರ್ಶಿಸಲಿವೆ. ಪ್ರದರ್ಶನವು 2025ರ ಸೆಪ್ಟೆಂಬರ್ 16 ರಿಂದ 19 ರವರೆಗೆ ಮಧ್ಯಾಹ್ನ 2:00 ರಿಂದ ಸಂಜೆ 6:00 ರವರೆಗೆ ಸಾರ್ವಜನಿಕರಿಗೆ ಪ್ರವೇಶವಿರುತ್ತದೆ, ಆದರೆ https://gm2025.iec.ch/ ನಲ್ಲಿ ಮೊದಲೇ ನೋಂದಣಿ ಮಾಡಿಕೊಳ್ಳುವ ಮೂಲಕ ಈ ಉಚಿತ ಪ್ರವೇಶ ಪಡೆಯಬಹುದಾಗಿದೆ. ಭೇಟಿ ನೀಡುವವರು ದ್ವಾರ ಸಂಖ್ಯೆ 10 ಮತ್ತು ದ್ವಾರ ಸಂಖ್ಯೆ 4ರ ಮೂಲಕ ಸ್ಥಳವನ್ನು ಪ್ರವೇಶಿಸಬಹುದು. ಶಾಲೆಗಳು ಮತ್ತು ಕಾಲೇಜುಗಳಿಂದ 2ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಪ್ರದರ್ಶನಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ.
“ಸುಸ್ಥಿರ ಜಗತ್ತನ್ನು ಬೆಳೆಸುವುದು’’ ಎಂಬ ಘೋಷವಾಕ್ಯಕ್ಕೆ ಅನುಗುಣವಾಗಿ ಬಿ.ಐ.ಎಸ್ ಮಂಟಪಕ್ಕೆ ಭೇಟಿ ನೀಡುವವರನ್ನು ಡಿಜಿಟಲ್ ಸುಸ್ಥಿರತೆಯ ಪ್ರತಿಜ್ಞೆಯನ್ನು ಸ್ವೀಕರಿಸಲು ಆಹ್ವಾನಿಸುತ್ತದೆ. ತೆಗೆದುಕೊಂಡ ಪ್ರತಿಯೊಂದು ಪ್ರತಿಜ್ಞೆಗೂ, ಬಿ.ಐ.ಎಸ್ ಭಾರತದಲ್ಲಿನ ತನ್ನ ಕಚೇರಿಗಳಲ್ಲಿ ಒಂದು ಸಸಿಯನ್ನು ನೆಡುತ್ತದೆ, ಆ ಮೂಲಕ ಪರಿಸರ ಸಂರಕ್ಷಣೆ ಮತ್ತು ಸುಸ್ಥಿರತೆಗೆ ತನ್ನ ಬದ್ಧತೆಯನ್ನು ಪುನರುಚ್ಚರಿಸುತ್ತದೆ.
1906 ರಲ್ಲಿ ಸ್ಥಾಪನೆಯಾದ ಅಂತಾರಾಷ್ಟ್ರೀಯ ಎಲೆಕ್ಟ್ರೋಟೆಕ್ನಿಕಲ್ ಆಯೋಗವು (ಐ.ಇ.ಸಿ) ವಿದ್ಯುತ್, ಎಲೆಕ್ಟ್ರಾನಿಕ್ ಮತ್ತು ಸಂಬಂಧಿತ ತಂತ್ರಜ್ಞಾನಗಳಿಗೆ ಅಂತಾರಾಷ್ಟ್ರೀಯ ಮಾನದಂಡಗಳನ್ನು ಅಭಿವೃದ್ಧಿಪಡಿಸುವಲ್ಲಿ ವಿಶ್ವದ ಪ್ರಮುಖ ಸಂಸ್ಥೆಯಾಗಿದ್ದು, ವಿಶ್ವಾದ್ಯಂತ 30,000 ತಜ್ಞರ ಜಾಲವನ್ನು ಹೊಂದಿದೆ.
****
(Release ID: 2166566)
Visitor Counter : 2