ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
azadi ka amrit mahotsav

2028ರ ವೇಳೆಗೆ ಸ್ವದೇಶಿ ಸೌರ ಕೋಶಗಳನ್ನು ತಯಾರಿಸುವ ಗುರಿಯನ್ನು ಭಾರತ ಹೊಂದಿದೆ; ದೇಶೀಯ ವೇಫರ್‌ ಗಳು ಮತ್ತು ಇಂಗೋಟ್‌ ಗಳತ್ತ ಸಾಗುತ್ತಿದೆ: ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ


ಭಾರತವು 251.5 ಗಿಗಾವ್ಯಾಟ್ ಪಳೆಯುಳಿಕೆಯೇತರ ಇಂಧನ ಸಾಮರ್ಥ್ಯವನ್ನು ದಾಟಿದೆ; 2030ರ 500 ಗಿಗಾವ್ಯಾಟ್ ಗುರಿಯ ಅರ್ಧಕ್ಕಿಂತ ಹೆಚ್ಚಿನದನ್ನು ಸಾಧಿಸಲಾಗಿದೆ: ಕೇಂದ್ರ ಸಚಿವರಾದ ಜೋಶಿ

ಪ್ರಧಾನ ಮಂತ್ರಿ ಸೂರ್ಯ ಘರ್‌ ಯೋಜನೆ ಅಡಿಯಲ್ಲಿ ಸುಮಾರು 20 ಲಕ್ಷ ಕುಟುಂಬಗಳು ಸಬಲೀಕರಣಗೊಂಡಿವೆ; ಪಿಎಂ-ಕುಸುಮ್‌ ನ ಎರಡನೇ ಹಂತವು ಮಾರ್ಚ್ 2026ರ ನಂತರ ಪ್ರಾರಂಭವಾಗಲಿದೆ

ಪಿಎಂ-ಕುಸುಮ್‌ ಮತ್ತು ಪಿ.ಎಂ.ಎಸ್‌.ಜಿ.ವೈ ಇಂಧನ ಸುರಕ್ಷತೆ, ಸುಸ್ಥಿರತೆ ಮತ್ತು ನಾಗರಿಕರ ಸಬಲೀಕರಣವನ್ನು ಖಚಿತಪಡಿಸಿಕೊಳ್ಳುವ ಸರ್ಕಾರದ ಧ್ಯೇಯದ ಹೃದಯಭಾಗವಾಗಿವೆ: ಕೇಂದ್ರ ರಾಜ್ಯ ಸಚಿವರಾದ ಶ್ರೀಪಾದ್ ನಾಯಕ್

ನವೀಕರಿಸಬಹುದಾದ ಇಂಧನದ ಕುರಿತು ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯವು (ಎಂ.ಎನ್‌.ಆರ್‌.ಇ) ರಾಜ್ಯ ಪರಿಶೀಲನಾ ಸಭೆಯನ್ನು ಆಯೋಜಿಸಿತು; ಅನುಷ್ಠಾನವನ್ನು ತ್ವರಿತಗೊಳಿಸಲು ಮತ್ತು ದೇಶೀಯ ಉದ್ಯಮವನ್ನು ಬೆಂಬಲಿಸಲು ರಾಜ್ಯಗಳನ್ನು ಒತ್ತಾಯಿಸಿತು

Posted On: 11 SEP 2025 3:43PM by PIB Bengaluru

2028ರ ವೇಳೆಗೆ ಸ್ವದೇಶಿ ಸೌರ ಕೋಶ ಉತ್ಪಾದನೆಯ ಗುರಿಯೊಂದಿಗೆ ಭಾರತವು ಸಂಪೂರ್ಣ ದೇಶೀಯ ಸೌರ ಮೌಲ್ಯ ಸರಪಳಿಯನ್ನು ನಿರ್ಮಿಸುವತ್ತ ಬಲವಾಗಿ ಸಾಗುತ್ತಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಘೋಷಿಸಿದ್ದಾರೆ. ನವೀಕರಿಸಬಹುದಾದ ಇಂಧನ ಕುರಿತು ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ ಆಯೋಜಿಸಿದ್ದ ರಾಜ್ಯ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಸಚಿವರು, ದೇಶವು ಈಗ ವೇಫರ್‌ ಗಳು ಮತ್ತು ಇಂಗೋಟ್‌ ಗಳಿಗೆ ದೇಶೀಯ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಲು ಮಾಡ್ಯೂಲ್‌ ಗಳನ್ನು ಮೀರಿ ಸಾಗುತ್ತಿದೆ, ಇದು ಸಂಪೂರ್ಣ ಸೌರ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ಭಾರತದೊಳಗೆ ಸ್ಥಾಪಿಸುವುದನ್ನು ಖಚಿತಪಡಿಸುತ್ತದೆ ಎಂದು ಹೇಳಿದರು. ಈ ಕ್ರಮವು ಆಮದುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದಲ್ಲದೆ, ಉದ್ಯೋಗ ಸೃಷ್ಟಿ, ಹೂಡಿಕೆಗಳನ್ನು ಹೆಚ್ಚಿಸುತ್ತದೆ ಮತ್ತು ಶುದ್ಧ ಇಂಧನ ಉತ್ಪಾದನೆಯಲ್ಲಿ ಜಾಗತಿಕ ನಾಯಕನಾಗಿ ಭಾರತದ ಸ್ಥಾನವನ್ನು ಬಲಪಡಿಸುತ್ತದೆ ಎಂದು ಸಚಿವರು ಹೇಳಿದರು.

ನವೀಕರಿಸಬಹುದಾದ ಇಂಧನ ಉಪಕ್ರಮಗಳನ್ನು ಮುನ್ನಡೆಸುವಲ್ಲಿ ರಾಜ್ಯಗಳ ಗಮನಾರ್ಹ ಪ್ರಯತ್ನಗಳನ್ನು ಶ್ರೀ ಜೋಶಿ ಅವರು ಶ್ಲಾಘಿಸಿದರು ಮತ್ತು ಈ ಕೊಡುಗೆಗಳು ಈ ವಲಯದಲ್ಲಿ ಜಾಗತಿಕ ನಾಯಕನಾಗಿ ಭಾರತದ ಸ್ಥಾನವನ್ನು ಭದ್ರಪಡಿಸುತ್ತಿವೆ ಎಂದು ಹೇಳಿದರು. 2030 ರ ವೇಳೆಗೆ 500 ಗಿಗಾವ್ಯಾಟ್ ಪಳೆಯುಳಿಕೆಯೇತರ ಇಂಧನ ಸಾಮರ್ಥ್ಯವನ್ನು ಸಾಧಿಸುವ ಭಾರತದ ಗುರಿಯನ್ನು ಈಗಾಗಲೇ ಅರ್ಧಕ್ಕಿಂತ ಹೆಚ್ಚು ಸಾಧಿಸಲಾಗಿದೆ ಮತ್ತು ದೇಶವು 251.5 ಗಿಗಾವ್ಯಾಟ್ ಪಳೆಯುಳಿಕೆಯೇತರ ಇಂಧನ ಸಾಮರ್ಥ್ಯವನ್ನು ದಾಟಿದೆ ಎಂದು ಅವರು ಹೇಳಿದರು. ಈ ಸಾಧನೆಯು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ದೂರದೃಷ್ಟಿಯ ನಾಯಕತ್ವಕ್ಕೆ ಸಾಕ್ಷಿಯಾಗಿದೆ ಎಂದು ಅವರು ಬಣ್ಣಿಸಿದರು, ಇದು ಭಾರತದ ಶುದ್ಧ ಇಂಧನ ಅಭಿವೃದ್ಧಿ ಮತ್ತು ನವೀಕರಿಸಬಹುದಾದ ಇಂಧನ ವಲಯದಲ್ಲಿ ದೇಶೀಯ ಉತ್ಪಾದನೆಯನ್ನು ಪರಿವರ್ತಿಸಿದೆ ಮತ್ತು ವಿಕಸಿತ ಭಾರತದತ್ತ ವೇಗವಾಗಿ ಸಾಗುತ್ತಿದೆ ಎಂದು ಅವರು ಹೇಳಿದರು.

ಪ್ರಧಾನಮಂತ್ರಿ ಸೂರ್ಯ ಘರ್ ಮತ್ತು ಪ್ರಧಾನಮಂತ್ರಿ-ಕುಸುಮ್ ಅಡಿಯಲ್ಲಿ ಪ್ರಗತಿ

ಪ್ರಮುಖ ಯೋಜನೆಗಳ ಬಗ್ಗೆ ಒತ್ತಿ ಹೇಳಿದ ಸಚಿವರು, ಪ್ರಧಾನ ಮಂತ್ರಿ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆಯಿಂದ ಸುಮಾರು 20 ಲಕ್ಷ ಕುಟುಂಬಗಳು ಈಗಾಗಲೇ ಪ್ರಯೋಜನ ಪಡೆದಿವೆ ಎಂದು ಹೇಳಿದರು. ರಾಜ್ಯಗಳು ಮತ್ತು ಡಿಸ್ಕಾಂಗಳು ಕಟ್ಟುನಿಟ್ಟಾದ ಗುಣಮಟ್ಟದ ಅನುಸರಣೆಯನ್ನು ಖಚಿತಪಡಿಸಿಕೊಳ್ಳಬೇಕು, ಯಾವುದೇ ವಿಳಂಬವಿಲ್ಲದೆ ಒಪ್ಪಂದಗಳನ್ನು ಅಂತಿಮಗೊಳಿಸಬೇಕು ಮತ್ತು ಗ್ರಾಹಕರಿಗೆ ಸಾಧ್ಯವಾದಷ್ಟು ಉತ್ತಮ ದರಗಳನ್ನು ಒದಗಿಸಬೇಕು ಎಂದು ಅವರು ಒತ್ತಾಯಿಸಿದರು. ಪಿಎಂ-ಕುಸುಮ್‌ ಕುರಿತು ಮಾತನಾಡಿದ ಅವರು, ಆರಂಭಿಕ ಹಿಂಜರಿಕೆಯ ನಂತರ, ರಾಜ್ಯಗಳಲ್ಲಿ ಈ ಯೋಜನೆ ಈಗ ವೇಗವನ್ನು ಪಡೆದುಕೊಂಡಿದೆ, ರಾಜ್ಯಗಳ ಮುಖ್ಯಮಂತ್ರಿಗಳು ಹೆಚ್ಚುವರಿ ಹಂಚಿಕೆಗೆ ಒತ್ತಾಯಿಸುತ್ತಿದ್ದಾರೆ ಎಂದು ಅವರು ಹೇಳಿದರು. ಪ್ರಸ್ತುತ ಹಂತವು ಮಾರ್ಚ್ 2026 ರಲ್ಲಿ ಕೊನೆಗೊಂಡ ನಂತರ ಪಿಎಂ-ಕುಸುಮ್‌ ನ ಎರಡನೇ ಹಂತವನ್ನು ಪ್ರಾರಂಭಿಸಲಾಗುವುದು ಎಂದು ಅವರು ಘೋಷಿಸಿದರು.

ಉಚಿತ ವಿದ್ಯುತ್ ವಿಷಯದ ಬಗ್ಗೆ ಮಾತನಾಡಿದ ಶ್ರೀ ಜೋಶಿ, ಪ್ರಯೋಜನಗಳನ್ನು ಆರ್ಥಿಕವಾಗಿ ಸುಸ್ಥಿರ ರೀತಿಯಲ್ಲಿ ಒದಗಿಸಬೇಕು ಎಂದು ಹೇಳಿದರು. ಪ್ರಧಾನ ಮಂತ್ರಿ ಸೂರ್ಯಘರ್‌ ಯೋಜನೆಯ ಸುಮಾರು ಅರ್ಧದಷ್ಟು ಫಲಾನುಭವಿಗಳು ಶೂನ್ಯ ವಿದ್ಯುತ್ ಬಿಲ್‌ ಗಳನ್ನು ಪಡೆಯುತ್ತಿದ್ದಾರೆ. ಇದು ನಾಗರಿಕರಿಗೆ ಪರಿಹಾರವನ್ನು ದೀರ್ಘಾಕಾಲೀನ ಸುಸ್ಥಿರತೆಯೊಂದಿಗೆ ಸಂಯೋಜಿಸುವ ಮಾದರಿಯಾಗಿದೆ ಎಂದು ಅವರು ಹೇಳಿದರು.

 

ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಮತ್ತು ವ್ಯವಹಾರ ಮಾಡುವ ಸುಲಭತೆಯನ್ನು ಬಲಪಡಿಸುವುದು

 

ಭಾರತವು ನಿಗದಿತ ಅವಧಿಗಿಂತ ಐದು ವರ್ಷ ಮುಂಚಿತವಾಗಿ ಪಳೆಯುಳಿಕೆಯೇತರ ಇಂಧನ ಮೂಲಗಳಿಂದ ಶೇ.50 ಸ್ಥಾಪಿತ ವಿದ್ಯುತ್ ಉತ್ಪಾದನೆಯ ಗುರಿಯನ್ನು ಸಾಧಿಸಿದೆ ಎಂದು ಸಚಿವರು ಒತ್ತಿ ಹೇಳಿದರು. ಆದಾಗ್ಯೂ, ಸಾಮರ್ಥ್ಯ ಸೇರ್ಪಡೆಯೊಂದಿಗೆ ದಕ್ಷ ಬಳಕೆಯೂ ಪೂರಕವಾಗಿರಬೇಕು ಎಂದು ಅವರು ಎಚ್ಚರಿಸಿದರು ಮತ್ತು ನವೀಕರಿಸಬಹುದಾದ ಇಂಧನ ಖರೀದಿ ಬಾಧ್ಯತೆಗಳು (ಆರ್‌ ಪಿ ಒ), ವಿದ್ಯುತ್ ಖರೀದಿ ಒಪ್ಪಂದಗಳು (ಪಿಪಿಎಗಳು) ಮತ್ತು ಭೂ ಹಂಚಿಕೆಯನ್ನು ಪಾರದರ್ಶಕ ರೀತಿಯಲ್ಲಿ ತ್ವರಿತಗೊಳಿಸುವಂತೆ ರಾಜ್ಯಗಳನ್ನು ಒತ್ತಾಯಿಸಿದರು. "ಸಕಾಲಿಕ ಕ್ರಮವು ಈ ವ್ಯವಸ್ಥೆಯ ಬೆನ್ನೆಲುಬಾಗಿದೆ. ದರಗಳು ಮತ್ತಷ್ಟು ಕಡಿಮೆಯಾಗುತ್ತವೆ ಎಂಬ ಭರವಸೆಯಿಂದ ನಾವು ಖರೀದಿಯನ್ನು ವಿಳಂಬ ಮಾಡುತ್ತಿದ್ದರೆ, ನಮಗೆ ದೊಡ್ಡದನ್ನು ಸಾಧಿಸಲು ಸಾಧ್ಯವಾಗುವುದಿಲ್ಲ" ಎಂದು ಸಚಿವರು ಹೇಳಿದರು.

ನವೀಕರಿಸಬಹುದಾದ ಇಂಧನ ವಲಯದಲ್ಲಿ ಏಕ-ಗವಾಕ್ಷಿ ಅನುಮತಿ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವ ಮೂಲಕ, ಅನುಸರಣೆಗಳನ್ನು ಕಡಿಮೆ ಮಾಡುವ ಮೂಲಕ ಮತ್ತು ಡೆವಲಪರ್‌ ಗಳು ಎದುರಿಸುತ್ತಿರುವ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಗಳನ್ನು ಪರಿಹರಿಸುವ ಮೂಲಕ ವ್ಯವಹಾರ ಮಾಡುವ ಸುಲಭತೆಯನ್ನು ಬಲಪಡಿಸಲು ಶ್ರೀ ಜೋಶಿ ರಾಜ್ಯಗಳಿಗೆ ಕರೆ ನೀಡಿದರು. ಹೂಡಿಕೆದಾರರ ವಿಶ್ವಾಸವು ರಾಜ್ಯ ಸರ್ಕಾರಗಳ ಸಕ್ರಿಯ ಸಹಕಾರವನ್ನು ಅವಲಂಬಿಸಿದೆ ಎಂದು ಅವರು ಒತ್ತಿ ಹೇಳಿದರು.

ಪವನ ವಿದ್ಯುತ್ ಉತ್ಪಾದನೆಗೆ ಸಮೃದ್ಧವಾಗಿರುವ ರಾಜ್ಯಗಳು ಹೊಸ ತಾಣಗಳ ಹಂಚಿಕೆ ಮತ್ತು ಪ್ರಸರಣ ಸಿದ್ಧತೆಗಾಗಿ ಸಮಯಕ್ಕೆ ಅನುಗುಣವಾಗಿ ಮಾರ್ಗಸೂಚಿಯನ್ನು ಸಿದ್ಧಪಡಿಸುವಂತೆ ಸಚಿವರು ಕರೆ ನೀಡಿದರು. ನವೀಕರಿಸಬಹುದಾದ ಇಂಧನ ಉಪಕರಣಗಳು ಮತ್ತು ಸೇವೆಗಳ ಮೇಲಿನ ಜಿ ಎಸ್‌ ಟಿ ದರವನ್ನು ಶೇ.12 ರಿಂದ ಶೇ.5 ಕ್ಕೆ ಇಳಿಸಿರುವುದನ್ನು ಅವರು ಸ್ವಾಗತಿಸಿದರು, ಇದು ಸೌರ, ಪವನ, ಜೈವಿಕ ಅನಿಲ ಮತ್ತು ತ್ಯಾಜ್ಯದಿಂದ ಇಂಧನ ವ್ಯವಸ್ಥೆಗಳನ್ನು ಹೆಚ್ಚು ಕೈಗೆಟುಕುವಂತೆ ಮಾಡುತ್ತದೆ. ಈ ತಂತ್ರಜ್ಞಾನಗಳನ್ನು ಹೆಚ್ಚು ಸಕ್ರಿಯವಾಗಿ ಉತ್ತೇಜಿಸಬೇಕು ಎಂದು ಅವರು ರಾಜ್ಯಗಳನ್ನು ಒತ್ತಾಯಿಸಿದರು.

ದೇಶೀಯ ತಯಾರಿಕೆಯ ಬಗ್ಗೆ ಮಾತನಾಡಿದ ಶ್ರೀ ಜೋಶಿ, ₹24,000 ಕೋಟಿ ವೆಚ್ಚದಲ್ಲಿ ಹೆಚ್ಚಿನ ದಕ್ಷತೆಯ ಸೌರ ಪಿವಿ ಮಾಡ್ಯೂಲ್‌ ಗಳಿಗಾಗಿ ಪಿ ಎಲ್‌ ಐ ಯೋಜನೆಯ ಯಶಸ್ಸನ್ನು ಎತ್ತಿ ತೋರಿಸಿದರು. ಭಾರತವು ಈಗ 100 ಗಿಗಾವ್ಯಾಟ್ ಮಾಡ್ಯೂಲ್ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ, ₹50,000 ಕೋಟಿ ಹೂಡಿಕೆಯಾಗಿದೆ ಮತ್ತು ಈ ಯೋಜನೆಯಡಿಯಲ್ಲಿ 12,600 ಕ್ಕೂ ಹೆಚ್ಚು ನೇರ ಉದ್ಯೋಗಗಳನ್ನು ಸೃಷ್ಟಿಸಲಾಗಿದೆ ಎಂದು ಅವರು ಹೇಳಿದರು.

ಕೇಂದ್ರ, ರಾಜ್ಯಗಳು, ಕೈಗಾರಿಕೆ ಮತ್ತು ನಾಗರಿಕರ ಸಾಮೂಹಿಕ ಕ್ರಮದ ಮೂಲಕ ಮಾತ್ರ ಭಾರತದ ಇಂಧನ ಪರಿವರ್ತನೆ ಯಶಸ್ವಿಯಾಗುತ್ತದೆ ಎಂದು ಶ್ರೀ ಜೋಶಿ ಒತ್ತಿ ಹೇಳಿದರು. ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದಿಂದ ಸಂಪೂರ್ಣ ಬೆಂಬಲದ ಭರವಸೆಯನ್ನು ಅವರು ನೀಡಿದರು ಮತ್ತು ನವೀಕರಿಸಬಹುದಾದ ಇಂಧನ ಅಭಿವೃದ್ಧಿಯನ್ನು ವೇಗಗೊಳಿಸಲು ಎಲ್ಲಾ ಪಾಲುದಾರರು ವಿಚಾರಗಳನ್ನು ಹಂಚಿಕೊಳ್ಳುವಂತೆ ಆಹ್ವಾನಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ರಾಜ್ಯ ಸಚಿವ ಶ್ರೀ ಶ್ರೀಪಾದ ನಾಯಕ್, ಪಿಎಂ-ಕುಸುಮ್ ಮತ್ತು ಪಿಎಂ ಸೂರ್ಯ ಘರ್: ಉಚಿತ ವಿದ್ಯುತ್ ಯೋಜನೆಗಳು ಇಂಧನ ಸುರಕ್ಷತೆ, ಸುಸ್ಥಿರತೆ ಮತ್ತು ನಾಗರಿಕರ ಸಬಲೀಕರಣವನ್ನು ಖಚಿತಪಡಿಸಿಕೊಳ್ಳುವ ನಮ್ಮ ಧ್ಯೇಯದ ಹೃದಯಭಾಗದಲ್ಲಿವೆ ಎಂದು ಹೇಳಿದರು. ಪಿಎಂ-ಕುಸುಮ್ ಯೋಜನೆಯು ನಮ್ಮ ರೈತರಿಗೆ ನಿಜವಾದ ಪರಿವರ್ತನಾ ಶಕ್ತಿಯಾಗಿದೆ ಎಂದು ಶ್ರೀ ನಾಯಕ್ ಹೇಳಿದರು. ಹಂಚಿಕೆಯಾದ 49 ಲಕ್ಷ ಸೌರ ಪಂಪ್‌ ಗಳಲ್ಲಿ, 16 ಲಕ್ಷಕ್ಕೂ ಹೆಚ್ಚು ಈಗಾಗಲೇ ಸ್ಥಾಪಿಸಲಾಗಿದೆ ಅಥವಾ ಸೌರೀಕರಣಗೊಂಡಿವೆ. ಇದು ವಾರ್ಷಿಕವಾಗಿ 1.3 ಬಿಲಿಯನ್ ಲೀಟರ್ ಡೀಸೆಲ್ ಬಳಕೆಯನ್ನು ಕಡಿಮೆ ಮಾಡಿದೆ, 40 ಮಿಲಿಯನ್ ಟನ್ ಇಂಗಾಲ ಹೊರಸೂಸುವಿಕೆಯನ್ನು ಕಡಿತಗೊಳಿಸಿದೆ ಮತ್ತು ಅಮೂಲ್ಯವಾದ ವಿದೇಶಿ ವಿನಿಮಯವನ್ನು ಉಳಿಸಿದೆ. ಪಿ ಎಂ ಎಸ್‌ ಜಿ ವೈ ನಲ್ಲಿ, ದಿನಕ್ಕೆ 4,500 ವ್ಯವಸ್ಥೆಗಳ ಸ್ಥಾಪನೆಗಳು ನಡೆಯುತ್ತಿವೆ, ಇದನ್ನು ದೇಶಾದ್ಯಂತ 18,000 ಕ್ಕೂ ಹೆಚ್ಚು ಮಾರಾಟಗಾರರು ಬೆಂಬಲಿಸುತ್ತಿದ್ದಾರೆ. ಪಿಎಂ ಕುಸುಮ್ ಮತ್ತು ಪಿ‌ ಎಂ ಎಸ್‌ ಜಿ ವೈ ಭಾರತದ ಇಂಧನ ಪರಿವರ್ತನೆಯ ಸ್ಫೂರ್ತಿಯನ್ನು ಪ್ರತಿನಿಧಿಸುತ್ತವೆ, ರೈತರು ಮತ್ತು ಮನೆಗಳನ್ನು ಸಬಲೀಕರಣಗೊಳಿಸುವುದು, ಇಂಗಾಲ ಹೊರಸೂಸುವಿಕೆಯನ್ನು ಕಡಿತಗೊಳಿಸುವುದು, ಉದ್ಯೋಗಗಳನ್ನು ಸೃಷ್ಟಿಸುವುದು ಮತ್ತು ನವೀಕರಿಸಬಹುದಾದ ಇಂಧನದಲ್ಲಿ ಭಾರತವನ್ನು ಜಾಗತಿಕ ನಾಯಕನನ್ನಾಗಿ ಇರಿಸುವುದನ್ನು ಪ್ರತಿನಿಧಿಸುತ್ತವೆ ಎಂದು ಸಚಿವರು ಹೇಳಿದರು.

2070ರ ವೇಳೆಗೆ ನಿವ್ವಳ ಶೂನ್ಯ ಹೊರಸೂಸುವಿಕೆಯನ್ನು ಸಾಧಿಸಲು ಭಾರತದ ಹಸಿರು ಇಂಧನ ಪರಿವರ್ತನೆಯು ನಿರ್ಣಾಯಕವಾಗಿದೆ ಎಂದು ಎಂ ಎನ್‌ ಆರ್‌ ಇ ಕಾರ್ಯದರ್ಶಿ ಶ್ರೀ ಸಂತೋಷ್ ಕುಮಾರ್ ಸಾರಂಗಿ ಹೇಳಿದರು, 2047ರ ವೇಳೆಗೆ 1,800 ಗಿಗಾವ್ಯಾಟ್ ನವೀಕರಿಸಬಹುದಾದ ಇಂಧನ ಸಾಮರ್ಥ್ಯ ಮತ್ತು 2070 ರ ವೇಳೆಗೆ 5,000 ಗಿಗಾವ್ಯಾಟ್ ಇಂಧನ ಸೌಲಭ್ಯದ ಗುರಿಯೊಂದಿಗೆ. ಮಹಾರಾಷ್ಟ್ರದ ಪಿಎಂ-ಕುಸುಮ್ ಅನುಷ್ಠಾನ, ಗುಜರಾತಿನ ನವೀಕರಿಸಬಹುದಾದ ಕ್ಲಸ್ಟರ್‌ ಗಳು ಮತ್ತು ಕರ್ನಾಟಕದ ಭೂ ಸೌಲಭ್ಯದಂತಹ ಯಶಸ್ವಿ ರಾಜ್ಯ ಕ್ರಮಗಳನ್ನು ಅವರು ಎತ್ತಿ ತೋರಿಸಿದರು.

ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ ಆಯೋಜಿಸಿದ್ದ ಪರಿಶೀಲನಾ ಸಭೆಯಲ್ಲಿ ಪ್ರಧಾನ ಮಂತ್ರಿ ಸೂರ್ಯ ಘರ್ ಉಚಿತ ವಿದ್ಯುತ್‌ ಯೋಜನೆ ಮತ್ತು ಪಿಎಂ-ಕುಸುಮ್‌ ನ ರಾಜ್ಯವಾರು ಮೌಲ್ಯಮಾಪನ ನಡೆಯಿತು, ಇದರಲ್ಲಿ ರಾಜ್ಯಗಳು ತಮ್ಮ ಪ್ರಗತಿ ಮತ್ತು ಸವಾಲುಗಳನ್ನು ಪ್ರಸ್ತುತಪಡಿಸಿದವು. ನವೀಕರಿಸಬಹುದಾದ ಇಂಧನ ವಲಯದಲ್ಲಿನ ಪ್ರಸ್ತುತ ಸಮಸ್ಯೆಗಳ ಕುರಿತು ಕೈಗಾರಿಕಾ ಸಂಘಗಳು ವಿವರವಾದ ಪ್ರಸ್ತುತಿಗಳನ್ನು ನೀಡಿದವು. ಪಿಎಂ-ಕುಸುಮ್‌ 2.0 ವಿನ್ಯಾಸ ಮತ್ತು ಅನುಷ್ಠಾನದ ಕುರಿತು ಪಾಲುದಾರರೊಂದಿಗೆ ಸಮಾಲೋಚನೆಗಳನ್ನು ಸಹ ನಡೆಸಲಾಯಿತು. ದೇಶಾದ್ಯಂತ ನವೀಕರಿಸಬಹುದಾದ ಇಂಧನ ಅಳವಡಿಕೆಯನ್ನು ವೇಗಗೊಳಿಸಲು ರಾಜ್ಯ ಕ್ರಮ, ಉದ್ಯಮ ಸಲಹೆಗಳು ಮತ್ತು ನೀತಿ ಸುಧಾರಣೆಗಳನ್ನು ಒಟ್ಟುಗೂಡಿಸುವುದು ಈ ಚರ್ಚೆಗಳ ಉದ್ದೇಶವಾಗಿತ್ತು. ನವೀಕರಿಸಬಹುದಾದ ಇಂಧನ-ಸಮೃದ್ಧ ರಾಜ್ಯಗಳ ಪ್ರತಿನಿಧಿಗಳನ್ನು ಒಟ್ಟುಗೂಡಿಸಿ, ಪ್ರಗತಿಯನ್ನು ಪರಿಶೀಲಿಸಲು ಮತ್ತು ಭಾರತದ ಶುದ್ಧ ಇಂಧನ ಪರಿವರ್ತನೆಗಾಗಿ ಭವಿಷ್ಯದ ಮಾರ್ಗಸೂಚಿಯನ್ನು ರೂಪಿಸಲು ಸಭೆ ಆಯೋಜಿಸಲಾಗಿತ್ತು.

 

*****


(Release ID: 2165733) Visitor Counter : 2