ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಗುಜರಾತ್‌ನ ಸನಂದ್ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು ₹66 ಕೋಟಿ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ನವದೆಹಲಿಯಿಂದ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ 


ರಾಧಾಕೃಷ್ಣನ್ ಅವರ ಆಯ್ಕೆಯೊಂದಿಗೆ, ಭಾರತದ ಸಾಂವಿಧಾನಿಕ ಕಚೇರಿಗಳು ದೇಶದ ಭೌಗೋಳಿಕ ಏಕತೆಗೆ ವಿಜಯವನ್ನು ಸಂಕೇತಿಸಿವೆ

ಇಂದು, ದೇಶದ ಸಾಂವಿಧಾನಿಕ ಸ್ಥಾನಗಳು ಪೂರ್ವ, ಪಶ್ಚಿಮ, ಉತ್ತರ ಮತ್ತು ದಕ್ಷಿಣದಿಂದ – ಅಂದರೆ ಭಾರತದ ಎಲ್ಲಾ ನಾಲ್ಕು ಪ್ರದೇಶಗಳಿಂದ ಪ್ರಾತಿನಿಧ್ಯವನ್ನು ಹೊಂದಿವೆ

2029ರ ವೇಳೆಗೆ, ಸನಂದ್ ವಿಧಾನಸಭಾ ಕ್ಷೇತ್ರದ ಒಂದು ಹಳ್ಳಿಯೂ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿರುವುದಿಲ್ಲ

ಮುಂಬರುವ ದಿನಗಳಲ್ಲಿ, ಸನಂದ್ ಇಡೀ ಗುಜರಾತ್ ರಾಜ್ಯದಲ್ಲಿ ಕೈಗಾರಿಕಾ ಕ್ಷೇತ್ರದಲ್ಲಿ ಅತ್ಯಂತ ಅಭಿವೃದ್ಧಿ ಹೊಂದಿದ ತಹಸಿಲ್ ಆಗಿ ಹೊರಹೊಮ್ಮಲಿದೆ

ಸನಂದ್‌ನಲ್ಲಿ ಸೆಮಿಕಂಡಕ್ಟರ್ ಘಟಕದ ಕೆಲಸ ಶೀಘ್ರದಲ್ಲೇ ಪ್ರಾರಂಭವಾಗಲಿದೆ

ಪ್ರಧಾನಮಂತ್ರಿ ಮೋದಿ ಅವರ "ಏಕ್ ಪೆಡ್ ಮಾ ಕೆ ನಾಮ್" ಅಭಿಯಾನದಡಿಯಲ್ಲಿ, ಪ್ರತಿ ಹಳ್ಳಿ, ಶಾಲೆ ಮತ್ತು ಪುರಸಭೆಯ ಖಾಲಿ ಇರುವ ಪ್ರದೇಶದಲ್ಲಿ ಗರಿಷ್ಠ ಗಿಡ ನೆಡುವಿಕೆಯನ್ನು ಕೈಗೊಳ್ಳಬೇಕು

ಇಡೀ ಗುಜರಾತ್ ರಾಜ್ಯದಲ್ಲಿ ಅತಿ ಹೆಚ್ಚು ಗಿಡಗಳನ್ನು ನೆಟ್ಟ ದಾಖಲೆಯನ್ನು ಗಾಂಧಿನಗರ ಲೋಕಸಭಾ ಕ್ಷೇತ್ರ ನಿರ್ಮಿಸಿದೆ

Posted On: 10 SEP 2025 9:03PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ನವದೆಹಲಿಯಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಗುಜರಾತ್‌ನ ಸನಂದ್ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು ₹66 ಕೋಟಿ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು.

ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ, ಇತರ ಚುನಾವಣೆಗಳಂತೆ, ನಿನ್ನೆ ನಡೆದ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಎನ್‌ಡಿಎ (ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ) ಅಭ್ಯರ್ಥಿ ಶ್ರೀ ಸಿ.ಪಿ. ರಾಧಾಕೃಷ್ಣನ್ ಅವರು ಅದ್ಭುತ ಗೆಲುವು ಸಾಧಿಸಿದ್ದಾರೆ ಎಂದು ಹೇಳಿದರು. ಶ್ರೀ ರಾಧಾಕೃಷ್ಣನ್ ಅವರ ಚುನಾವಣೆಯೊಂದಿಗೆ, ಭಾರತದ ಸಾಂವಿಧಾನಿಕ ಹುದ್ದೆಗಳು ದೇಶದ ಭೌಗೋಳಿಕ ಏಕತೆಯನ್ನು ಪ್ರತಿಬಿಂಬಿಸುತ್ತವೆ ಎಂಬುದರತ್ತ ಶ್ರೀ ಶಾ ಗಮನ ಸೆಳೆದರು. ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಪೂರ್ವ ಭಾರತವನ್ನು ಪ್ರತಿನಿಧಿಸುತ್ತಾರೆ, ಉಪರಾಷ್ಟ್ರಪತಿ ಶ್ರೀ ಸಿ.ಪಿ. ರಾಧಾಕೃಷ್ಣನ್ ದಕ್ಷಿಣ ಭಾರತವನ್ನು ಪ್ರತಿನಿಧಿಸುತ್ತಾರೆ ಮತ್ತು ಗುಜರಾತ್‌ನಿಂದ ಬಂದವರು ಮತ್ತು ವಾರಣಾಸಿಯಿಂದ ಚುನಾವಣೆಗಳಲ್ಲಿ ಗೆದ್ದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪಶ್ಚಿಮ ಮತ್ತು ಉತ್ತರ ಭಾರತವನ್ನು ಪ್ರತಿನಿಧಿಸುತ್ತಾರೆ ಎಂದು ಅವರು ಎತ್ತಿ ತೋರಿಸಿದರು. ಹೀಗಾಗಿ, ದೇಶದ ಸಾಂವಿಧಾನಿಕ ಸ್ಥಾನಗಳು ಎಲ್ಲಾ ನಾಲ್ಕು ದಿಕ್ಕುಗಳನ್ನು ಪ್ರತಿನಿಧಿಸುತ್ತವೆ - ಪೂರ್ವ, ಪಶ್ಚಿಮ, ಉತ್ತರ ಮತ್ತು ದಕ್ಷಿಣಗಳಿಗೆ ಅಲ್ಲಿ ಪ್ರಾತಿನಿಧ್ಯ ಸಂದಿದೆ ಎಂದರು.

ಕಳೆದ ಕೆಲವು ವರ್ಷಗಳಿಂದ ಸನಂದ್ ಅನ್ನು ಸ್ಪಷ್ಟ ಯೋಜನೆಯೊಂದಿಗೆ ಅಭಿವೃದ್ಧಿಪಡಿಸಲಾಗಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು. 2029ರ ವೇಳೆಗೆ, ಸನಂದ್ ವಿಧಾನಸಭಾ ಕ್ಷೇತ್ರದ ಯಾವುದೇ ಗ್ರಾಮವು ಮೂಲಭೂತ ಸೌಕರ್ಯಗಳ ಕೊರತೆಯನ್ನು ಹೊಂದಿರುವುದಿಲ್ಲ ಎಂದು ಅವರು ಹೇಳಿದರು. ಬಾವ್ಲಾ ಮತ್ತು ಸನಂದ್ ಪುರಸಭೆಗಳಲ್ಲಿನ ಸೌಲಭ್ಯಗಳ ಕೊರತೆಯನ್ನು ನೀಗಿಸಲು ಸಮಗ್ರ ಯೋಜನೆಯನ್ನು ಸಿದ್ಧಪಡಿಸಲಾಗಿದೆ ಎಂದು ಅವರು ಹೇಳಿದರು. ಈ ಪ್ರದೇಶದಲ್ಲಿ ರಸ್ತೆಗಳು, ಅರಣ್ಯೀಕರಣ, ಆರೋಗ್ಯ ರಕ್ಷಣೆ, ನೈರ್ಮಲ್ಯ ಮತ್ತು ಕುಡಿಯುವ ನೀರಿನಂತಹ ಸೌಲಭ್ಯಗಳನ್ನು ಬಲಪಡಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಧೋಲೇರಾ ವಿಶೇಷ ಹೂಡಿಕೆ ಪ್ರದೇಶವು ಕಾರ್ಯರೂಪಕ್ಕೆ ಬಂದ ನಂತರ ಮತ್ತು ಸನಂದ್ ಸುತ್ತಮುತ್ತಲಿನ ಕೈಗಾರಿಕಾ ಅಭಿವೃದ್ಧಿ ಯೋಜನೆಗಳು ಪೂರ್ಣಗೊಂಡ ನಂತರ, ಸನಂದ್ ಗುಜರಾತ್‌ನಲ್ಲಿ ಕೈಗಾರಿಕಾ ಕ್ಷೇತ್ರದಲ್ಲಿ  ಅಭಿವೃದ್ಧಿ ಹೊಂದಿದ ತಹಸಿಲ್ ಆಗಿ ಹೊರಹೊಮ್ಮಲಿದೆ ಎಂದೂ ಶ್ರೀ ಶಾ ಹೇಳಿದರು. ಗುಜರಾತ್ ಸರ್ಕಾರ ಈಗಾಗಲೇ ಇದಕ್ಕಾಗಿ ಯೋಜಿಸಿದೆ ಎಂಬುದರತ್ತಲೂ  ಅವರು ಬೆಟ್ಟು ಮಾಡಿದರು. 

ಹಲವು ವರ್ಷಗಳಿಂದ ಸನಂದ್‌ನ 111 ಗ್ರಾಮಗಳಿಗೆ ನೀರಾವರಿ ಮತ್ತು ಕುಡಿಯುವ ನೀರಿನ ಸೌಲಭ್ಯಗಳ ಕೊರತೆ ಇತ್ತು, ಆದರೆ ಈ ಸಮಸ್ಯೆಯನ್ನು ಪರಿಹರಿಸುವ ಮೊದಲ ಹಂತವು ಈಗ ಬಹುತೇಕ ಪೂರ್ಣಗೊಂಡಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು, ಹೇಳಿದರು. ಈ ಗ್ರಾಮಗಳಿಗೆ ಸುಮಾರು ₹750 ಕೋಟಿ ವೆಚ್ಚದಲ್ಲಿ ನೀರು ಸರಬರಾಜು ಮಾಡಲಾಗಿದೆ ಎಂದು ಅವರು ಹೇಳಿದರು. ಹೆಚ್ಚುವರಿಯಾಗಿ, ₹1,000 ಕೋಟಿ ಅಂದಾಜು ವೆಚ್ಚದಲ್ಲಿ ಮನೆಗಳು ಮತ್ತು ಹೊಲಗಳಿಗೆ ನೀರು ತಲುಪಿಸುವ ಕೆಲಸ ಪುನರಾರಂಭಗೊಳ್ಳಲಿದೆ. ಸನಂದ್ ವಿಧಾನಸಭಾ ಕ್ಷೇತ್ರದಲ್ಲಿ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ (ಸಿಎಸ್‌ಆರ್) ಉಪಕ್ರಮಗಳ ಮೂಲಕ ಸುಮಾರು ₹150 ಕೋಟಿ ಮೌಲ್ಯದ ಅಭಿವೃದ್ಧಿ ಯೋಜನೆಗಳನ್ನು ಯೋಜಿಸಲಾಗಿದೆ ಎಂದೂ  ಶ್ರೀ ಶಾ ಹೇಳಿದರು. ಕಲೆಕ್ಟರ್, ಶಾಸಕರು ಮತ್ತು ಇತರ ಪಾಲುದಾರರ ಸಹಯೋಗದೊಂದಿಗೆ ಪ್ರತಿ ಗ್ರಾಮದ ಅಗತ್ಯಗಳನ್ನು ಗುರುತಿಸಲಾಗಿದೆ. ಕೈಗಾರಿಕೋದ್ಯಮಿಗಳೊಂದಿಗೆ ಇತ್ತೀಚೆಗೆ ನಡೆದ ಚರ್ಚೆಗಳ ಆಧಾರದ ಮೇಲೆ, ದೃಢವಾದ ಆಡಳಿತಾತ್ಮಕ ಚೌಕಟ್ಟನ್ನು ಸ್ಥಾಪಿಸಲಾಗಿದೆ ಎಂದು ಅವರು ಹೇಳಿದರು. ಸನಂದ್‌ನ ಹಳ್ಳಿಗಳಲ್ಲಿ ಪ್ರಸ್ತುತ ಇಲ್ಲದಿರುವ ಮೂಲಭೂತ ಸೌಕರ್ಯಗಳನ್ನು ಮುಂದಿನ ಒಂದೂವರೆ ವರ್ಷದಿಂದ ಎರಡು ವರ್ಷಗಳಲ್ಲಿ ಸುಮಾರು ₹150 ಕೋಟಿ ವೆಚ್ಚದಲ್ಲಿ ಪೂರ್ಣಗೊಳಿಸುವ ಗುರಿಯನ್ನು ಹೊಂದಲಾಗಿದೆ ಎಂದೂ ಗೃಹ ಸಚಿವರು ಹೇಳಿದರು.

WhatsApp Image 2025-09-10 at 20.58.31.jpeg

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ "ಏಕ್ ಪೆಡ್ ಮಾ ಕೆ ನಾಮ್" ಅಭಿಯಾನದಲ್ಲಿ ಭಾಗವಹಿಸಲು ಮತ್ತು ಗ್ರಾಮಗಳು, ಶಾಲೆಗಳು ಹಾಗು ಪುರಸಭೆಗಳಲ್ಲಿನ ತೆರೆದ ಸ್ಥಳಗಳಲ್ಲಿ ಸಾಧ್ಯವಾದಷ್ಟು ಗಿಡಗಳನ್ನು ನೆಡುವಂತೆ  ಅವರು ಸಾರ್ವಜನಿಕರಿಗೆ ಮನವಿ ಮಾಡಿದರು. ಹಸಿರು ಗಾಂಧಿನಗರ ಯೋಜನೆಯಡಿಯಲ್ಲಿ, ಗಾಂಧಿನಗರ ಲೋಕಸಭಾ ಕ್ಷೇತ್ರದಲ್ಲಿ ಮರಗಳ ಸಂಖ್ಯೆ ಪ್ರತಿದಿನ ಹೆಚ್ಚುತ್ತಿದೆ ಎಂಬುದನ್ನು ಅವರು ಎತ್ತಿ ತೋರಿಸಿದರು. ಗುಜರಾತ್‌ನಾದ್ಯಂತ ಅತಿ ಹೆಚ್ಚು ಗಿಡಗಳನ್ನು ನೆಟ್ಟ ದಾಖಲೆಯನ್ನು ಗಾಂಧಿನಗರ ಲೋಕಸಭೆ ನಿರ್ಮಿಸಿದೆ ಎಂದು ಶ್ರೀ ಶಾ ಹೆಮ್ಮೆಯಿಂದ ಗಮನಿಸಿದರು.

ಇತ್ತೀಚಿನ ಸೆಮಿಕಾನ್ ಇಂಡಿಯಾ 2025 ಕಾರ್ಯಕ್ರಮದ ಸಂದರ್ಭದಲ್ಲಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತದ ಮೊದಲ ಸಂಪೂರ್ಣವಾಗಿ ಅಭಿವೃದ್ಧಿಪಡಿಸಿದ 32-ಬಿಟ್ ಪ್ರೊಸೆಸರ್ ಚಿಪ್ 'ವಿಕ್ರಮ್ -32' ಅನ್ನು ಅನಾವರಣಗೊಳಿಸಿದ್ದಾರೆ ಎಂದು ಶ್ರೀ ಅಮಿತ್ ಶಾ ಉಲ್ಲೇಖಿಸಿದರು. ಮೈಕ್ರಾನ್ ಟೆಕ್ನಾಲಜಿಯಿಂದ ಚಿಪ್ ತಯಾರಿಕೆಯು ಸನಂದ್‌ನಲ್ಲಿ ಪ್ರಾರಂಭವಾಗಲಿದೆ, ಇದು ಈ ಪ್ರದೇಶದ ಅಭಿವೃದ್ಧಿಗೆ ಹೊಸ ಆಯಾಮವನ್ನು ನೀಡುತ್ತದೆ ಎಂದು ಅವರು ಹೇಳಿದರು. ಶ್ರೀ ಮೋದಿ ಅವರ ನಾಯಕತ್ವದಲ್ಲಿ, ದೇಶವು ಪ್ರತಿಯೊಂದು ಕ್ಷೇತ್ರದಲ್ಲೂ ಪ್ರಗತಿ ಸಾಧಿಸುತ್ತಿದೆ ಎಂದು ಅವರು ಒತ್ತಿ ಹೇಳಿದರು.

ಇಂದಿನ ಕಾರ್ಯಕ್ರಮದಲ್ಲಿ 29 ಯೋಜನೆಗಳನ್ನು ಉದ್ಘಾಟಿಸಲಾಯಿತು, 23 ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಲಾಯಿತು, ಸುಮಾರು ₹66 ಕೋಟಿ ಮೌಲ್ಯದ ಅಭಿವೃದ್ಧಿ ಕಾರ್ಯಗಳನ್ನು ಪ್ರಾರಂಭಿಸಲಾಗಿದೆ ಅಥವಾ ಪೂರ್ಣಗೊಳಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಹೇಳಿದರು. ಈ ಯೋಜನೆಗಳು ಅರಣ್ಯೀಕರಣ, ರಸ್ತೆ ನಿರ್ಮಾಣ, ಗ್ರಾಮೀಣ ರಸ್ತೆ ಯೋಜನೆಗಳು, ಗ್ರಾಮ ರಸ್ತೆಗಳು ಮತ್ತು ಶಾಲಾ ಅಭಿವೃದ್ಧಿಯನ್ನು ಒಳಗೊಂಡಿವೆ.

 

*****
 


(Release ID: 2165492) Visitor Counter : 2