ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ
ONGCಯ ಸಲಹಾ ಗುತ್ತಿಗೆಗಳು ನಿಯಮಾನುಸಾರ ಪ್ರಕ್ರಿಯೆ ಮತ್ತು ಜಾಗತಿಕ ಅತ್ಯುತ್ತಮ ಪದ್ಧತಿಗಳಿಗೆ ಅನುಗುಣವಾಗಿವೆ: ಸಚಿವರಾದ ಹರ್ ದೀಪ್ ಸಿಂಗ್ ಪುರಿ
Posted On:
21 AUG 2025 7:17PM by PIB Bengaluru
ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರಾದ ಶ್ರೀ ಹರ್ ದೀಪ್ ಸಿಂಗ್ ಪುರಿ ಅವರು, ಲೋಕಸಭೆಯಲ್ಲಿ ಮಹತ್ವಪೂರ್ಣವಾದ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡುತ್ತಾ, ಭಾರತದ ಆರ್ಥಿಕತೆಗೆ ಪ್ರಮುಖ ಕೊಡುಗೆ ನೀಡುತ್ತಿರುವ ಮಹಾರತ್ನ ಕೇಂದ್ರ ಸಾರ್ವಜನಿಕ ವಲಯದ ಉದ್ಯಮವಾದ (CPSE) ಆಯಿಲ್ ಅಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್ ಲಿಮಿಟೆಡ್ (ONGC), ಕೆಲವು ವಿಶೇಷ ಹಾಗೂ ಅನುಭವಿ ಸಂಸ್ಥೆಗಳ ಜೊತೆ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು. ಭಾರತದ ಆರ್ಥಿಕತೆಗೆ ಪ್ರಮುಖ ಕೊಡುಗೆ ನೀಡುತ್ತಿರುವ ಮಹಾರತ್ನ ಕೇಂದ್ರ ಸಾರ್ವಜನಿಕ ವಲಯದ ಉದ್ಯಮವಾದ (CPSE) ಆಯಿಲ್ ಅಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್ ಲಿಮಿಟೆಡ್ (ONGC), ಕೆಲವು ವಿಶೇಷ ಹಾಗೂ ಅನುಭವಿ ಸಂಸ್ಥೆಗಳ ಜೊತೆ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ವಿಶ್ವದಾದ್ಯಂತ ಬೆರಳೆಣಿಕೆಯಷ್ಟು ಸಂಸ್ಥೆಗಳು ಮಾತ್ರ ಈ ವಿಶೇಷ ಸೇವೆಗಳನ್ನು ಒದಗಿಸುತ್ತವೆ ಎಂದು ಸಚಿವರು ಮಾಹಿತಿ ನೀಡಿದರು. ಅವುಗಳಲ್ಲಿ ಒಂದು M/s ಬೀಸಿಪ್-ಫ್ರಾನ್‌ಲ್ಯಾಬ್ ಎಂಬ ಕಂಪನಿ. ಇದು ಫ್ರಾನ್ಸ್ ಸರ್ಕಾರದ ಇಂಧನ ಸಚಿವಾಲಯದ ಅಡಿಯಲ್ಲಿ ಬರುವ, ವಿಶ್ವಪ್ರಸಿದ್ಧ ಸಂಶೋಧನಾ ಮತ್ತು ಅಭಿವೃದ್ಧಿ (R&D) ಸಂಸ್ಥೆಯಾದ IFPEN (ಇನ್ಸ್ಟಿಟ್ಯೂಟ್ ಫ್ರಾಂಚೈಸ್ ಡು ಪೆಟ್ರೋಲ್ ಎನರ್ಜೀಸ್ ನೌವೆಲ್ಲೆಸ್) ನ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುತ್ತದೆ. IFPEN ಸಂಸ್ಥೆಯು ಈ ವಿಶೇಷ ಕ್ಷೇತ್ರಗಳಲ್ಲಿ, ವಿಶೇಷವಾಗಿ ಆಳ ಮತ್ತು ಅತಿ ಆಳದ ನೀರಿನ ಅಧ್ಯಯನಗಳಲ್ಲಿ ಮತ್ತು ಜಲಾಶಯಗಳ ಮಾದರಿ ವಿನ್ಯಾಸಕ್ಕೆ ಬಳಸುವ ತಾಂತ್ರಿಕವಾಗಿ ಸಂಕೀರ್ಣವಾದ, ಪೇಟೆಂಟ್ ಪಡೆದ ತಂತ್ರಾಂಶಗಳಲ್ಲಿ ಜಾಗತಿಕವಾಗಿ ಅಪಾರ ಅನುಭವ ಮತ್ತು ಮನ್ನಣೆಯನ್ನು ಗಳಿಸಿದೆ.
ಹೈಡ್ರೋಕಾರ್ಬನ್ ನಿಕ್ಷೇಪಗಳ ಅನ್ವೇಷಣೆ ಮತ್ತು ಅಭಿವೃದ್ಧಿ, ಹಾಗೂ ನವೀಕರಿಸಬಹುದಾದ ಇಂಧನವನ್ನು ಒಳಗೊಂಡಂತೆ ಹೊಸ ತಂತ್ರಜ್ಞಾನಗಳ ಅನುಷ್ಠಾನಕ್ಕಾಗಿ, ONGCಯು IFPEN ಸಂಸ್ಥೆಯೊಂದಿಗೆ ಜಂಟಿ ಸಂಶೋಧನೆ ಮತ್ತು ತಾಂತ್ರಿಕ ಸಹಯೋಗದ ತಿಳುವಳಿಕಾ ಒಪ್ಪಂದವನ್ನು (MoU) ಹೊಂದಿದೆ ಎಂದು ಶ್ರೀ ಪುರಿ ಅವರು ತಿಳಿಸಿದರು. ಈ ಒಪ್ಪಂದವನ್ನು ಕೊನೆಯ ಬಾರಿಗೆ 2023ರಲ್ಲಿ ನವೀಕರಿಸಲಾಗಿದೆ.
ಸಚಿವರು ಸ್ಪಷ್ಟಪಡಿಸಿದಂತೆ, ONGCಯು ತನ್ನೆಲ್ಲಾ ಯೋಜನೆಗಳನ್ನು, ಸಾಮಾನ್ಯ ಹಣಕಾಸು ನಿಯಮಗಳು (GFR) ಮತ್ತು ಕೇಂದ್ರ ಜಾಗೃತ ಆಯೋಗದ (CVC) ತತ್ವಗಳಿಗೆ ಅನುಗುಣವಾಗಿ ರೂಪಿಸಲಾದ ತನ್ನದೇ ಆದ ಮಂಡಳಿ-ಅನುಮೋದಿತ ಮಾರ್ಗಸೂಚಿಗಳ ಅಡಿಯಲ್ಲೇ ನಿರ್ವಹಿಸುತ್ತದೆ. ಈ ನಿಯಮಗಳ ಅನ್ವಯವೇ ದೇಶದಾದ್ಯಂತ ಹಲವಾರು ಅನ್ವೇಷಣೆ ಮತ್ತು ಉತ್ಪಾದನಾ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಇನ್ನು ಸಲಹಾ ಗುತ್ತಿಗೆಗಳ ಕುರಿತಂತೆ, ONGCಯ ಈಶಾನ್ಯ ವಲಯದಲ್ಲಿ M/s ಬೀಸಿಪ್-ಫ್ರಾನ್‌ಲ್ಯಾಬ್ ಸಂಸ್ಥೆಗೆ ಯಾವುದೇ ಗುತ್ತಿಗೆಯನ್ನು ನೀಡಿಲ್ಲ ಎಂಬುದನ್ನು ಪುನಃ ದೃಢಪಡಿಸಲಾಯಿತು. ಅಷ್ಟೇ ಅಲ್ಲದೆ, ಇತರೆ ವಲಯಗಳಲ್ಲಿಯೂ ಕಳೆದ ಐದು ವರ್ಷಗಳಲ್ಲಿ ಈ ಸಂಸ್ಥೆಗೆ ನೀಡಲಾದ ಎಲ್ಲಾ ಕಾಮಗಾರಿಗಳ ಒಟ್ಟು ಮೌಲ್ಯ ಕೇವಲ 6.5 ಕೋಟಿ ರೂಪಾಯಿಗಳಿಗಿಂತ ಕಡಿಮೆ ಇದೆ. ಕಳೆದ ಐದು ವರ್ಷಗಳಿಂದ ವಾರ್ಷಿಕವಾಗಿ ಸರಾಸರಿ 33,000 ಕೋಟಿ ರೂಪಾಯಿಗಳಿಗೂ ಅಧಿಕ ತೆರಿಗೆ ನಂತರದ ಲಾಭವನ್ನು (PAT) ದಾಖಲಿಸುತ್ತಿರುವ ONGCಯ ಬೃಹತ್ ಕಾರ್ಯಾಚರಣಾ ಪ್ರಮಾಣಕ್ಕೆ ಇದನ್ನು ಹೋಲಿಸಿದಾಗ, ಈ ಗುತ್ತಿಗೆಯ ಮೊತ್ತವು ತೀರಾ ಅತ್ಯಲ್ಪ ಮತ್ತು ನಗಣ್ಯವೆಂದೇ ಹೇಳಬಹುದು.
*****
(Release ID: 2159706)