ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಸೂಫಿ ಸಂಗೀತ ಉತ್ಸವ, "ಜಹಾನ್-ಎ-ಖುಸ್ರೋ 2025" ರಲ್ಲಿ ಭಾಗವಹಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ


ಹಜರತ್ ಅಮೀರ್ ಖುಸ್ರೋ ಅವರು ಸ್ವರ್ಗಕ್ಕೆ ಹೋಲಿಸಿದ್ದ ಆ ಹಿಂದೂಸ್ತಾನ, ಆ ಹಿಂದೂಸ್ತಾನದ ಮಣ್ಣಿನ ಪರಿಮಳ, ಆ ವಿಶಿಷ್ಟವಾದ ಪರಿಮಳವನ್ನು ಈ ಜಹಾನ್-ಎ-ಖುಸ್ರೋ ಕಾರ್ಯಕ್ರಮವು ಹೊಂದಿದೆ : ಪ್ರಧಾನಮಂತ್ರಿ

ಸೂಫಿ ಸಂಪ್ರದಾಯವು ಭಾರತದಲ್ಲಿ ತನಗಾಗಿ ಒಂದು ವಿಶಿಷ್ಟ ಗುರುತನ್ನು ಸೃಷ್ಟಿಸಿಕೊಂಡಿದೆ: ಪ್ರಧಾನಮಂತ್ರಿ 

ಯಾವುದೇ ದೇಶದ ನಾಗರಿಕತೆ ಮತ್ತು ಸಂಸ್ಕೃತಿಯು ಅದರ ಸಂಗೀತ ಮತ್ತು ಹಾಡುಗಳಿಂದ ತಮ್ಮ ಅನನ್ಯ ಧ್ವನಿಯನ್ನು ಪಡೆಯುತ್ತದೆ: ಪ್ರಧಾನಮಂತ್ರಿ 

ಹಜರತ್ ಖುಸ್ರೋ ಅವರು ತಮ್ಮ ಕಾಲದಲ್ಲಿ ಭಾರತವನ್ನು ವಿಶ್ವದ ಎಲ್ಲಾ ಪ್ರಮುಖ ರಾಷ್ಟ್ರಗಳಿಗಿಂತ ಶ್ರೇಷ್ಠ ಎಂದು ಬಣ್ಣಿಸಿದರು, ಅವರು ಸಂಸ್ಕೃತವನ್ನು ವಿಶ್ವದ ಅತ್ಯುತ್ತಮ ಭಾಷೆ ಎಂದು ಪರಿಗಣಿಸಿದರು: ಪ್ರಧಾನಮಂತ್ರಿ 

ಹಜರತ್ ಖುಸ್ರೋ ಅವರು ಭಾರತದ ವಿದ್ವಾಂಸರನ್ನು ಶ್ರೇಷ್ಠ ವಿದ್ವಾಂಸರಿಗಿಂತ ಶ್ರೇಷ್ಠರೆಂದು ಪರಿಗಣಿಸಿದರು: ಪ್ರಧಾನಮಂತ್ರಿ 

Posted On: 28 FEB 2025 10:55PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ಸುಂದರ್ ನರ್ಸರಿಯಲ್ಲಿ ನಡೆದ ಸೂಫಿ ಸಂಗೀತ ಉತ್ಸವ, ಜಹಾನ್-ಎ-ಖುಸ್ರೋ 2025 ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಜಹಾನ್-ಎ-ಖುಸ್ರೋದಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, "ಹಜರತ್ ಅಮೀರ್ ಖುಸ್ರೋ ಅವರ ಶ್ರೀಮಂತ ಪರಂಪರೆಯ ಉಪಸ್ಥಿತಿಯಲ್ಲಿ ಉತ್ಕೃಷ್ಟತೆ ಯೊಂದಿಗೆ ಸಂತೋಷಪಡುವುದು ಸಹಜ. ಖುಸ್ರೋ ಅವರಿಗೆ ತುಂಬಾ ಇಷ್ಟವಾಗಿದ್ದ ವಸಂತ ಋತುವಿನ ಸಾರವು ಕೇವಲ ಋತುವಲ್ಲ, ಇಂದು ದೆಹಲಿಯಲ್ಲಿ ಜಹಾನ್-ಎ-ಖುಸ್ರೋದ ಗಾಳಿಯಲ್ಲಿಯೂ ಇದನ್ನು ಕಾಣಬಹುದು ಎಂದು ಹೇಳಿದರು.

"ಜಹಾನ್-ಎ-ಖುಸ್ರೋದಂತಹ ಕಾರ್ಯಕ್ರಮಗಳು ದೇಶದ ಕಲೆ ಮತ್ತು ಸಂಸ್ಕೃತಿಗೆ ಮಹತ್ವವನ್ನು ನೀಡುತ್ತವೆ, ಹಾಗೂ ಪ್ರಾಮುಖ್ಯತೆ ಮತ್ತು ಶಾಂತಿ ಎರಡನ್ನೂ ಒದಗಿಸುತ್ತವೆ. ಈಗ 25 ವರ್ಷಗಳನ್ನು ಪೂರೈಸುತ್ತಿರುವ ಈ ಕಾರ್ಯಕ್ರಮವು ಜನರ ಹೃದಯದಲ್ಲಿ ಪ್ರಮುಖ ಸ್ಥಾನವನ್ನು ಗಳಿಸಿದೆ, ಇದನ್ನು ಒಂದು ಪ್ರಮುಖ ಸಾಧನೆ ಎಂದು ಗುರುತಿಸಲಾಗಿದೆ ಎಂದು ಅವರು ಹೇಳಿದರು. ಡಾ. ಕರಣ್ ಸಿಂಗ್, ಮುಜಾಫರ್ ಅಲಿ, ಮೀರಾ ಅಲಿ ಮತ್ತು ಇತರ ಸಹಯೋಗಿಗಳ ಕೊಡುಗೆಗಳಿಗಾಗಿ ಪ್ರಧಾನಮಂತ್ರಿ ಅವರು ಅವರನ್ನು ಅಭಿನಂದಿಸಿದರು. ರೂಮಿ ಫೌಂಡೇಶನ್ ಮತ್ತು ಜಹಾನ್-ಎ-ಖುಸ್ರೋ ಜೊತೆ ಸಂಬಂಧ ಹೊಂದಿರುವ ಎಲ್ಲರಿಗೂ ಭವಿಷ್ಯದಲ್ಲಿ ಯಶಸ್ಸು ಸಿಗಲಿ ಎಂದು ಪ್ರಧಾನಮಂತ್ರಿ ಅವರು ಹಾರೈಸಿದರು. ಈ ಸಂದರ್ಭದಲ್ಲಿ, ಪವಿತ್ರ ಮಾಸ ಸಮೀಪಿಸುತ್ತಿರುವುದರಿಂದ, ಸಮಾರಂಭದಲ್ಲಿ ಹಾಜರಿದ್ದವರು ಮತ್ತು ದೇಶದ ಎಲ್ಲಾ ನಾಗರಿಕರಿಗೆ ಪ್ರಧಾನಮಂತ್ರಿಯವರು ತಮ್ಮ ರಂಜಾನ್ ಶುಭಾಶಯಗಳನ್ನು ತಿಳಿಸಿದರು. ಸುಂದರ್ ನರ್ಸರಿಯನ್ನು ವೃದ್ಧಿಸುವಲ್ಲಿ ರಾಜಕುಮಾರ ಕರೀಮ್ ಅಗಾ ಖಾನ್ ಅವರ ಮಾಡಿರುವ ಪ್ರಯತ್ನಗಳು ಲಕ್ಷಾಂತರ ಕಲಾ ಉತ್ಸಾಹಿಗಳಿಗೆ ವೇದಿಕೆಯಾಗಿ ಕಲಾಆಶೀರ್ವಾದವಾಗಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಈ ಸಂದರ್ಭದಲ್ಲಿ ಸ್ಮರಿಸಿದರು.

ಗುಜರಾತ್‌ನ ಸೂಫಿ ಸಂಪ್ರದಾಯದಲ್ಲಿ ಸರ್ಕೇಜ್ ರೋಜಾ ಅವರ ಮಹತ್ವದ ಪಾತ್ರದ ಬಗ್ಗೆ ಪ್ರಧಾನಮಂತ್ರಿ ಅವರು ಮಾತನಾಡಿದರು. "ಹಿಂದೆ, ಸ್ಥಳದ ಸ್ಥಿತಿ ಹದಗೆಟ್ಟಿತ್ತು, ಆದರೆ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ, ಅದರ ಪುನಃಸ್ಥಾಪನೆಯತ್ತ ತಾನು ಗಮನಹರಿಸಿದೆ ಎಂದು ಅವರು ಹೇಳಿದರು. ಸರ್ಕೇಜ್ ರೋಜಾ ಭವ್ಯ ಕೃಷ್ಣ ಉತ್ಸವ ಆಚರಣೆಗಳನ್ನು ಆಯೋಜಿಸಿದ್ದ ಸಮಯವನ್ನು ಪ್ರಧಾನಮಂತ್ರಿ ಅವರು ನೆನಪಿಸಿಕೊಂಡರು, ಇವುಗಳಿಗೆ ಹೆಚ್ಚಿನ ಜನ ಸೇರುತ್ತಿದ್ದರು. ಇಂದಿಗೂ, ಕೃಷ್ಣ ಭಕ್ತಿಯ ಸಾರವು ಕಾರ್ಯಕ್ರಮದ ವಾತಾವರಣದಲ್ಲಿದೆ ಎಂದು ಪ್ರಧಾನಮಂತ್ರಿ ಅವರು ಉಲ್ಲೇಖಿಸಿದರು. "ನಾನು ಸರ್ಕೇಜ್ ರೋಜಾದಲ್ಲಿ ನಡೆಯುವ ವಾರ್ಷಿಕ ಸೂಫಿ ಸಂಗೀತ ಉತ್ಸವದಲ್ಲಿ ನಿಯಮಿತವಾಗಿ ಭಾಗವಹಿಸುತ್ತಿದ್ದೆ" ಎಂದು ಶ್ರೀ ಮೋದಿ ಅವರು ತಮ್ಮ ಅನುಭವಗಳನ್ನು ಹಂಚಿಕೊಂಡರು. "ಸೂಫಿ ಸಂಗೀತವು ಎಲ್ಲಾ ಹಂತಗಳ ಜನರನ್ನು ಒಂದುಗೂಡಿಸುವ ಹಂಚಿಕೆಯ ಪರಂಪರೆಯನ್ನು ಪ್ರತಿನಿಧಿಸುತ್ತದೆ. ನಜ್ರೆ ಕೃಷ್ಣ ಅವರ ಪ್ರದರ್ಶನವು ಈ ಹಂಚಿಕೆಯ ಸಾಂಸ್ಕೃತಿಕ ಪರಂಪರೆಯನ್ನು ಸಹ ಪ್ರತಿಬಿಂಬಿಸುತ್ತದೆ" ಎಂದು ಶ್ರೀ ಮೋದಿ ಅವರು ಹೇಳಿದರು.

ಜಹಾನ್-ಎ-ಖುಸ್ರೋ ಕಾರ್ಯಕ್ರಮವು ಭಾರತದ ಮಣ್ಣನ್ನು ಪ್ರತಿನಿಧಿಸುವ ವಿಶಿಷ್ಟ ಪರಿಮಳವನ್ನು ಹೊಂದಿದೆ ಎಂದು ಪ್ರಧಾನಮಂತ್ರಿ ಅವರು ಗಮನಿಸಿದರು.  ಹಜರತ್ ಅಮೀರ್ ಖುಸ್ರೋ  ಭಾರತವನ್ನು ಸ್ವರ್ಗಕ್ಕೆ ಹೋಲಿಸಿದ ರೀತಿಯನ್ನು, ದೇಶವನ್ನು ನಾಗರಿಕತೆಯ ಉದ್ಯಾನವೆಂದು ಬಣ್ಣಿಸಿದ ರೀತಿಯನ್ನು ಸ್ಮರಿಸುತ್ತಾ, ಅಲ್ಲಿ ಸಂಸ್ಕೃತಿಯ ಪ್ರತಿಯೊಂದು ಅಂಶವೂ ಪ್ರವರ್ಧಮಾನಕ್ಕೆ ಬಂದಂತಿದೆ ಎಂದು ಹೇಳಿದರು. "ಭಾರತದ ಮಣ್ಣು ವಿಶಿಷ್ಟ ಪಾತ್ರವನ್ನು ಹೊಂದಿದೆ, ಮತ್ತು ಸೂಫಿ ಸಂಪ್ರದಾಯವು ಇಲ್ಲಿಗೆ ಬಂದಾಗ, ಅದು ಈ ಭೂಮಿಯೊಂದಿಗೆ ಸಂಪರ್ಕವನ್ನು ಕಂಡುಕೊಂಡಿತು. ಬಾಬಾ ಫರೀದ್ ಅವರ ಆಧ್ಯಾತ್ಮಿಕ ಬೋಧನೆಗಳು, ಹಜರತ್ ನಿಜಾಮುದ್ದೀನ್ ಅವರ ಸಭೆಗಳಿಂದ ಉರಿಯುವ ಪ್ರೀತಿ ಮತ್ತು ಹಜರತ್ ಅಮೀರ್ ಖುಸ್ರೋ ಅವರ ವಚನಗಳಿಂದ ಸೃಷ್ಟಿಸಲ್ಪಟ್ಟ ಹೊಸ ರತ್ನಗಳು, ಇವು ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಸಾರವನ್ನು ಸಾಮೂಹಿಕವಾಗಿ ಸಾಕಾರಗೊಳಿಸುತ್ತವೆ" ಎಂದು ಶ್ರೀ ಮೋದಿ ಅವರು ಹೇಳಿದರು.

ಸೂಫಿ ಸಂತರು ಕುರಾನ್ ಬೋಧನೆಗಳನ್ನು ವೈದಿಕ ತತ್ವಗಳು ಮತ್ತು ಭಕ್ತಿ ಸಂಗೀತದೊಂದಿಗೆ ಬೆರೆಸುವ ಭಾರತದಲ್ಲಿ ಸೂಫಿ ಸಂಪ್ರದಾಯದ ವಿಶಿಷ್ಟ ಗುರುತನ್ನು ಪ್ರಧಾನಮಂತ್ರಿ ಅವರು ವಿವರಿಸಿ ಹೇಳಿದರು. ಹಜರತ್ ನಿಜಾಮುದ್ದೀನ್ ಔಲಿಯಾ ಅವರು ತಮ್ಮ ಸೂಫಿ ಹಾಡುಗಳ ಮೂಲಕ ವೈವಿಧ್ಯತೆಯಲ್ಲಿ ಏಕತೆಯನ್ನು ವ್ಯಕ್ತಪಡಿಸಿದ್ದಕ್ಕಾಗಿ ಅವರು ಶ್ಲಾಘಿಸಿದರು. "ಜಹಾನ್-ಎ-ಖುಸ್ರೋ ಈಗ ಈ ಶ್ರೀಮಂತ, ಅಂತರ್ಗತ ಸಂಪ್ರದಾಯದ ಆಧುನಿಕ ಪ್ರತಿಬಿಂಬವಾಗಿದೆ" ಎಂದು ಶ್ರೀ ಮೋದಿ ಅವರು ಹೇಳಿದರು.

ಯಾವುದೇ ದೇಶದ ನಾಗರಿಕತೆ ಮತ್ತು ಸಂಸ್ಕೃತಿಯು ಅದರ ಸಂಗೀತ ಮತ್ತು ಹಾಡುಗಳಿಂದ ತಮ್ಮ ಧ್ವನಿಯನ್ನು ಪಡೆಯುತ್ತದೆ ಎಂದು ಶ್ರೀ ಮೋದಿ ಅವರು ವಿಷಯದ ಮಹತ್ವವನ್ನು ಎತ್ತಿ ತೋರಿಸಿದರು.  "ಸೂಫಿ ಮತ್ತು ಶಾಸ್ತ್ರೀಯ ಸಂಗೀತ ಸಂಪ್ರದಾಯಗಳು ವಿಲೀನಗೊಂಡಾಗ, ಅವು ಪ್ರೀತಿ ಮತ್ತು ಭಕ್ತಿಯ ಹೊಸ ಅಭಿವ್ಯಕ್ತಿಗಳಿಗೆ ಜನ್ಮ ನೀಡಿದವು, ಇದು ಹಜರತ್ ಖುಸ್ರೋ ಅವರ ಕವ್ವಾಲಿಗಳು, ಬಾಬಾ ಫರೀದ್ ಅವರ ಪದ್ಯಗಳು, ಬುಲ್ಲಾ ಶಾ, ಮೀರ್, ಕಬೀರ್, ರಹೀಮ್ ಮತ್ತು ರಾಸ್ ಖಾನ್ ಅವರ ಕಾವ್ಯಗಳಲ್ಲಿ ಸ್ಪಷ್ಟವಾಗಿ ಕಂಡುಬರುತ್ತದೆ. ಈ ಸಂತರು ಮತ್ತು ಅತೀಂದ್ರಿಯರು ಭಕ್ತಿಗೆ ಹೊಸ ಆಯಾಮವನ್ನು ನೀಡಿದರು" ಎಂದು ಅವರು ಹೇಳಿದರು.

ಸೂರದಾಸ, ರಹೀಮ್, ರಸಖಾನ್ ಅವರನ್ನು ಓದಿದರೂ ಅಥವಾ ಹಜರತ್ ಖುಸ್ರೋ ಅವರನ್ನು ಕೇಳಿದರೂ, ಈ ಎಲ್ಲಾ ಅಭಿವ್ಯಕ್ತಿಗಳು ಒಂದೇ ರೀತಿಯ ಆಧ್ಯಾತ್ಮಿಕ ಪ್ರೀತಿಗೆ ಕಾರಣವಾಗುತ್ತವೆ, ಅಲ್ಲಿ ಮಾನವ ಮಿತಿಗಳನ್ನು ಮೀರಲಾಗುತ್ತದೆ ಮತ್ತು ಮನುಷ್ಯ ಮತ್ತು ದೇವರ ನಡುವಿನ ಒಕ್ಕೂಟವನ್ನು ಅನುಭವಿಸಲಾಗುತ್ತದೆ ಎಂದು ಹೇಳಿದರು. "ರಸ್ ಖಾನ್ ಮುಸ್ಲಿಮರಾಗಿದ್ದರೂ, ಶ್ರೀಕೃಷ್ಣನ ನಿಷ್ಠಾವಂತ ಅನುಯಾಯಿಯಾಗಿದ್ದರು, ಅವರ ಕಾವ್ಯದಲ್ಲಿ ವ್ಯಕ್ತವಾಗಿರುವ ಪ್ರೀತಿ ಮತ್ತು ಭಕ್ತಿಯ ಸಾರ್ವತ್ರಿಕ ಸ್ವರೂಪವನ್ನು ಪ್ರತಿಬಿಂಬಿಸುತ್ತಾರೆ. ಈ ಕಾರ್ಯಕ್ರಮದಲ್ಲಿ ನಡೆದ ಭವ್ಯ ಪ್ರದರ್ಶನವು ಆಧ್ಯಾತ್ಮಿಕ ಪ್ರೀತಿಯ ಈ ಆಳವಾದ ಅರ್ಥವನ್ನು ಪ್ರತಿಬಿಂಬಿಸುತ್ತದೆ" ಎಂದು ಶ್ರೀ ಮೋದಿ ಅವರು ವಿಷಯವನ್ನು ವಿಶ್ಲೇಷಿಸುತ್ತಾ ಒತ್ತಿ ಹೇಳಿದರು.

ಸೂಫಿ ಸಂಪ್ರದಾಯವು ಮಾನವರ ನಡುವಿನ ಆಧ್ಯಾತ್ಮಿಕ ಅಂತರವನ್ನು ಕಡಿಮೆ ಮಾಡುವುದಲ್ಲದೆ, ರಾಷ್ಟ್ರಗಳ ನಡುವಿನ ಅಂತರವನ್ನು ಕಡಿಮೆ ಮಾಡಿದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು. ಎಂಟು ಶತಮಾನಗಳ ಹಿಂದೆ ಅಫ್ಘಾನಿಸ್ತಾನದ ಬಾಲ್ಖ್‌ನಲ್ಲಿ ಜನಿಸಿದ ರೂಮಿಯ ಬಗ್ಗೆ ಭಾವನಾತ್ಮಕವಾಗಿ ಮಾತನಾಡಿದ ಪ್ರಧಾನಮಂತ್ರಿಯವರು, 2015 ರಲ್ಲಿ ಆಫ್ಘನ್ ಸಂಸತ್ತಿಗೆ ನೀಡಿದ ಭೇಟಿಯನ್ನು ಈ ಸಂದರ್ಭದಲ್ಲಿ ನೆನಪಿಸಿಕೊಂಡರು. ಭೌಗೋಳಿಕ ಗಡಿಗಳನ್ನು ಮೀರಿದ ರೂಮಿಯ ಚಿಂತನೆಯನ್ನು ಶ್ರೀ ಮೋದಿ ಅವರು ಹಂಚಿಕೊಂಡರು: "ನಾನು ಪೂರ್ವ ಅಥವಾ ಪಶ್ಚಿಮದವನಲ್ಲ, ನಾನು ಸಮುದ್ರ ಅಥವಾ ಭೂಮಿಯಿಂದ ಹುಟ್ಟಿಲ್ಲ, ನನಗೆ ಯಾವುದೇ ಸ್ಥಾನವಿಲ್ಲ, ನಾನು ಎಲ್ಲೆಡೆ ಇದ್ದೇನೆ."  

ಪ್ರಧಾನಮಂತ್ರಿಯವರು ಈ ತತ್ವಶಾಸ್ತ್ರವನ್ನು ಭಾರತದ ಪ್ರಾಚೀನ ನಂಬಿಕೆಯಾದ "ವಸುಧೈವ ಕುಟುಂಬಕಂ" (ಇಡೀ ಜಗತ್ತೇ ಒಂದು ಕುಟುಂಬ) ಗೆ ಜೋಡಿಸಿದರು, ಜಾಗತಿಕ ಕಾರ್ಯಕ್ರಮಗಳ ಸಮಯದಲ್ಲಿ ಅಂತಹ ಆಲೋಚನೆಗಳಿಂದ ಬಲವನ್ನು ಪಡೆದರು. ಶ್ರೀ ಮೋದಿ ಅವರು ಇರಾನ್‌ನಲ್ಲಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಿರ್ಜಾ ಗಾಲಿಬ್ ಅವರ ದ್ವಿಪದಿಯನ್ನು ಓದಿದ್ದನ್ನು ನೆನಪಿಸಿಕೊಂಡರು, ಇದು ಭಾರತದ ಸಾರ್ವತ್ರಿಕ ಮತ್ತು ಎಲ್ಲರನ್ನೂ ಒಳಗೊಳ್ಳುವ ಮೌಲ್ಯಗಳನ್ನು ಪ್ರತಿಬಿಂಬಿಸುತ್ತದೆ.

ಶ್ರೀ ಮೋದಿ ಅವರು 'ತುಟಿ-ಎ-ಹಿಂದ್' ಎಂದು ಪ್ರಸಿದ್ಧರಾದ ಹಜರತ್ ಅಮೀರ್ ಖುಸ್ರೋ ಅವರ ಬಗ್ಗೆ ಮಾತನಾಡಿದರು. ಖುಸ್ರೋ ತಮ್ಮ ಕೃತಿಗಳಲ್ಲಿ ಭಾರತದ ಶ್ರೇಷ್ಠತೆ ಮತ್ತು ಮೋಡಿಯನ್ನು ಹೊಗಳಿದ್ದಾರೆ ಎಂದು ಅವರು ಎತ್ತಿ ತೋರಿಸಿದರು, ಇದನ್ನು ಅವರ ಪುಸ್ತಕ ನುಹ್-ಸಿಫ್ರ್‌ನಲ್ಲಿ ಕಾಣಬಹುದು. ಖುಸ್ರೋ ತಮ್ಮ ಕಾಲದ ಮಹಾನ್ ರಾಷ್ಟ್ರಗಳಿಗಿಂತ ಭಾರತವನ್ನು ಶ್ರೇಷ್ಠವೆಂದು ಪರಿಗಣಿಸಿದ್ದರು ಮತ್ತು ಸಂಸ್ಕೃತವನ್ನು ವಿಶ್ವದ ಅತ್ಯುತ್ತಮ ಭಾಷೆ ಎಂದು ಪರಿಗಣಿಸಿದ್ದರು ಎಂದು ಪ್ರಧಾನಮಂತ್ರಿ ಅವರು  ಹೇಳಿದರು.  ಶ್ರೀ ಮೋದಿ ಅವರು ಖುಸ್ರೋ ಅವರು ಭಾರತೀಯರನ್ನು ಶ್ರೇಷ್ಠ ವಿದ್ವಾಂಸರಿಗಿಂತ ಶ್ರೇಷ್ಠರು ಎಂದು ಗೌರವಿಸುತ್ತಿದ್ದರು ಎಂದು ಒಪ್ಪಿಕೊಂಡರು. "ಭಾರತದ ಶೂನ್ಯ, ಗಣಿತ, ವಿಜ್ಞಾನ ಮತ್ತು ತತ್ವಶಾಸ್ತ್ರದ ಜ್ಞಾನವು ಪ್ರಪಂಚದ ಉಳಿದ ಭಾಗಗಳಿಗೆ ಹೇಗೆ ಹರಡಿತು, ವಿಶೇಷವಾಗಿ ಭಾರತೀಯ ಗಣಿತಶಾಸ್ತ್ರವು ಅರಬ್ಬರನ್ನು ತಲುಪಿ "ಹಿಂದ್ಸಾ" ಎಂದು ಪ್ರಸಿದ್ಧವಾಯಿತು ಎಂಬುದರ ಬಗ್ಗೆ ಖುಸ್ರೋ ಅವರು ಹೆಮ್ಮೆಪಟ್ಟರು" ಎಂದು ಶ್ರೀ ಮೋದಿ ಅವರು ಗಮನಿಸಿದರು. ದೀರ್ಘ ವಸಾಹತುಶಾಹಿ ಆಳ್ವಿಕೆ ಮತ್ತು ನಂತರದ ವಿನಾಶದ ಹೊರತಾಗಿಯೂ, ಹಜರತ್ ಖುಸ್ರೋ ಅವರ ಬರಹಗಳು ಭಾರತದ ಶ್ರೀಮಂತ ಭೂತಕಾಲವನ್ನು ಸಂರಕ್ಷಿಸುವಲ್ಲಿ ಮತ್ತು ಅದರ ಪರಂಪರೆಯನ್ನು ಜೀವಂತವಾಗಿಡುವಲ್ಲಿ ಮಹತ್ವದ ಪಾತ್ರ ವಹಿಸಿವೆ ಎಂದು ಪ್ರಧಾನಮಂತ್ರಿಯವರು ಮತ್ತಷ್ಟು ವಿವರಗಳನ್ನು ಉಲ್ಲೇಖಿಸಿ ಸಭಿಕರ ಗಮನಸೆಳೆದರು.

25 ವರ್ಷಗಳಿಂದ ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಯಶಸ್ವಿಯಾಗಿ ಪ್ರಚಾರ ಮಾಡುತ್ತಿರುವ ಮತ್ತು ಶ್ರೀಮಂತಗೊಳಿಸುತ್ತಿರುವ ಜಹಾನ್-ಎ-ಖುಸ್ರೋ ಅವರ ಪ್ರಯತ್ನಗಳ ಬಗ್ಗೆ ಪ್ರಧಾನಮಂತ್ರಿಯವರು ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಕಾಲು ಶತಮಾನದಿಂದ ಈ ಉಪಕ್ರಮವನ್ನು ನಿರ್ವಹಿಸುವುದು ಸಣ್ಣ ಸಾಧನೆಯಲ್ಲ ಎಂದು ಶ್ರೀ ಮೋದಿ ಅವರು ಆಯೋಜಕರನ್ನು ಶ್ಲಾಘಿಸಿದರು. ಭಾಗವಹಿಸಿ, ಆಚರಣೆಯನ್ನು ಆನಂದಿಸುವ ಅವಕಾಶ ನೀಡಿದ್ದಕ್ಕಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.  ಮತ್ತು ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರಿಗೂ ತಮ್ಮ ಹೃತ್ಪೂರ್ವಕ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಈ ಮೂಲಕ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.

ಹಿನ್ನೆಲೆ

ಪ್ರಧಾನಮಂತ್ರಿಯವರು ದೇಶದ ವೈವಿಧ್ಯಮಯ ಕಲೆ ಮತ್ತು ಸಂಸ್ಕೃತಿಯನ್ನು ಉತ್ತೇಜಿಸುವ ಬಲವಾದ ಪ್ರತಿಪಾದಕರಾಗಿದ್ದಾರೆ. ಇದಕ್ಕೆ ಅನುಗುಣವಾಗಿ, ಅವರು  ಸೂಫಿ ಸಂಗೀತ, ಕಾವ್ಯ ಮತ್ತು ನೃತ್ಯಕ್ಕೆ ಮೀಸಲಾಗಿರುವ ಅಂತರರಾಷ್ಟ್ರೀಯ ಉತ್ಸವವಾದ ಜಹಾನ್-ಎ-ಖುಸ್ರೋದಲ್ಲಿ ಭಾಗವಹಿಸಿದರು. ಇದು ಅಮೀರ್ ಖುಸ್ರೋ ಅವರ ಪರಂಪರೆಯನ್ನು ಆಚರಿಸಲು ಪ್ರಪಂಚದಾದ್ಯಂತದ ಕಲಾವಿದರನ್ನು ಒಟ್ಟುಗೂಡಿಸುತ್ತಿದೆ. ರೂಮಿ ಫೌಂಡೇಶನ್ ಆಯೋಜಿಸಿರುವ ಈ ಉತ್ಸವವು 2001 ರಲ್ಲಿ ಪ್ರಸಿದ್ಧ ಚಲನಚಿತ್ರ ನಿರ್ಮಾಪಕ ಮತ್ತು ಕಲಾವಿದ ಮುಜಾಫರ್ ಅಲಿ ಅವರಿಂದ ಪ್ರಾರಂಭವಾಯಿತು, ಈ ವರ್ಷ ತನ್ನ 25 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ ಮತ್ತು ಫೆಬ್ರವರಿ 28 ರಿಂದ ಮಾರ್ಚ್ 2, ರವರೆಗೆ ಕಾರ್ಯಕ್ರಮ ನಡೆಯಲಿದೆ.

 

 

*****

 


(Release ID: 2159585) Visitor Counter : 3