ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ
azadi ka amrit mahotsav

ರಸಗೊಬ್ಬರ ವಲಯದಲ್ಲಿ ಸ್ವಾವಲಂಬನೆಗೆ ಐತಿಹಾಸಿಕ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಕರೆ 


ಮಣ್ಣಿನ ಆರೋಗ್ಯ ರಕ್ಷಣೆಗೆ ರಸಗೊಬ್ಬರಗಳನ್ನು ವಿವೇಚನೆಯಿಂದ ಬಳಸುವಂತೆ ರೈತರಲ್ಲಿ ಪ್ರಧಾನಮಂತ್ರಿ ಮನವಿ

ದೇಶೀಯ ರಸಗೊಬ್ಬರ ಉತ್ಪಾದನೆ ಹೆಚ್ಚಿಸುವ ಬದ್ಧತೆ ಸರ್ಕಾರದಿಂದ ಪುನರುಚ್ಚಾರ

Posted On: 15 AUG 2025 4:55PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 79ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಐತಿಹಾಸಿಕ ಕೆಂಪು ಕೋಟೆಯಿಂದ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿ, ಇಂಧನ ಸ್ವಾವಲಂಬನೆಗೆ ಭಾರತದ ಸಂಕಲ್ಪದಂತೆಯೇ, ರಸಗೊಬ್ಬರ ವಲಯದಲ್ಲಿಯೂ ಸ್ವಾವಲಂಬನೆ ಸಾಧಿಸುವ ಅಗತ್ಯವನ್ನು ಒತ್ತಿ ಹೇಳಿದರು.

ಪ್ರಸ್ತುತ, ಭಾರತವು ರಸಗೊಬ್ಬರ ಅಗತ್ಯಗಳಿಗೆ ಹೆಚ್ಚಾಗಿ ಆಮದಿನ ಮೇಲೆ ಅವಲಂಬಿತವಾಗಿದೆ ಎಂದು ತಿಳಿಸಿದ ಪ್ರಧಾನಮಂತ್ರಿ, ಮಣ್ಣಿನ ಆರೋಗ್ಯವನ್ನು ರಕ್ಷಿಸಲು ಕೃಷಿ ಸಮುದಾಯವು ರಸಗೊಬ್ಬರಗಳ ಸಮರ್ಪಕ ಮತ್ತು ವೈಜ್ಞಾನಿಕ ಬಳಕೆಯನ್ನು ಅಳವಡಿಸಿಕೊಳ್ಳುವಂತೆ ಮನವಿ ಮಾಡಿದರು. "ಭೂಮಿ ತಾಯಿ"ಗೆ ದೀರ್ಘಕಾಲೀನ ಹಾನಿಯನ್ನುಂಟಾಗುವಂತೆ ವಿವೇಚನಾರಹಿತವಾಗಿ ರಸಗೊಬ್ಬರ ಬಳಕೆ ಮಾಡದಂತೆ ಅವರು ಎಚ್ಚರಿಕೆ ನೀಡಿದರು.

ಅಗತ್ಯ ರಸಗೊಬ್ಬರಗಳ ಸ್ಥಳೀಯ ದಾಸ್ತಾನು ಸಂಗ್ರಹದ ಪ್ರಯತ್ನಗಳಲ್ಲಿ ಒಗ್ಗೂಡುವಂತೆ ಪ್ರಧಾನಮಂತ್ರಿಗಳು ದೇಶದ ಯುವಕರು, ಕೈಗಾರಿಕಾ ವಲಯ ಮತ್ತು ಖಾಸಗಿ ವಲಯಗಳಿಗೆ ಕರೆ ನೀಡಿದರು. ಸ್ಥಳೀಯ ಉತ್ಪಾದನೆಯ ಮೂಲಕ ದೇಶದ ರಸಗೊಬ್ಬರ ಅಗತ್ಯಗಳನ್ನು ಪೂರೈಸಲು ನವೀನ ವಿಧಾನಗಳ ಆವಿಷ್ಕಾರ ಮತ್ತು ಅಭಿವೃದ್ಧಿಗೆ ಅವರು ಪ್ರೋತ್ಸಾಹ ನೀಡಿದರು.

"ನಮ್ಮ ರಸಗೊಬ್ಬರ ಸಂಗ್ರಹಾಗಾರಗಳನ್ನು ಭರ್ತಿ ಮಾಡಿಕೊಳ್ಳೋಣ. ಹೊಸ ವಿಧಾನಗಳನ್ನು ಕಂಡುಕೊಳ್ಳೋಣ. ಭಾರತದ ಅಗತ್ಯಗಳಿಗೆ ಅನುಗುಣವಾಗಿ ರಸಗೊಬ್ಬರಗಳನ್ನು ತಯಾರಿಸೋಣ. ಇತರರ ಮೇಲೆ ಅವಲಂಬಿತರಾಗುವುದನ್ನು ನಿಲ್ಲಿಸೋಣ" ಎಂದು ಪ್ರಧಾನಮಂತ್ರಿ ಮನವಿ ಮಾಡಿದರು. 

ದೇಶೀಯ ಸಾಮರ್ಥ್ಯ ವೃದ್ಧಿಗೆ, ಸುಸ್ಥಿರ ಕೃಷಿ ಪದ್ಧತಿ ಉತ್ತೇಜನಕ್ಕೆ ಮತ್ತು ಆಮದು ಅವಲಂಬನೆ ತಗ್ಗಿಸಲು ಕೈಗಾರಿಕಾ ಪಾಲುದಾರರು, ಸಂಶೋಧನಾ ಸಂಸ್ಥೆಗಳು ಮತ್ತು ರಾಜ್ಯ ಸರ್ಕಾರಗಳೊಂದಿಗೆ ನಿಕಟವಾಗಿ ಸಮನ್ವಯದಿಂದ ಕಾರ್ಯ ನಿರ್ವಹಿಸುವ ಬದ್ಧತೆಯನ್ನು ಸರ್ಕಾರ ಪುನರುಚ್ಚರಿಸಿದೆ.

 

*****
 


(Release ID: 2156986)
Read this release in: English , Urdu , Marathi , Hindi