ಕೃಷಿ ಸಚಿವಾಲಯ
azadi ka amrit mahotsav

ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ರಾಜ್ಯ ಕೃಷಿ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದರು


ಹಿಂಗಾರು ಬೆಳೆಗಾಗಿ ‘ವಿಕಸಿತ ಕೃಷಿ ಸಂಕಲ್ಪ ಅಭಿಯಾನ’ ಅಕ್ಟೋಬರ್‌ 3ರಂದು ವಿಜಯ್‌ ಪರ್ವ್‌ ನೊಂದಿಗೆ ಪ್ರಾರಂಭವಾಗಲಿದೆ

ಅಭಿಯಾನವನ್ನು ಔಪಚಾರಿಕವಾಗಿ ಪ್ರಾರಂಭಿಸುವ ಮೊದಲು ಸೆಪ್ಟೆಂಬರ್‌ 15-16ರಂದು ನವದೆಹಲಿಯಲ್ಲಿ ಎರಡು ದಿನಗಳ ಸಮ್ಮೇಳನ ನಡೆಯಲಿದೆ

ಕೃಷಿಗೆ ಹೆಚ್ಚುವರಿ ಯೂರಿಯಾಕ್ಕೆ ಬೇಡಿಕೆ ಇದ್ದರೆ, ನಾವು ಅದರ ಲಭ್ಯತೆಯನ್ನು ಖಚಿತಪಡಿಸುತ್ತೇವೆ - ಶ್ರೀ ಶಿವರಾಜ್‌ ಸಿಂಗ್‌ ಚೌಹಾಣ್‌

ಕೃಷಿಯನ್ನು ಹೊರತುಪಡಿಸಿ ಇತರ ಉದ್ದೇಶಗಳಿಗಾಗಿ ಯೂರಿಯಾವನ್ನು ದುರುಪಯೋಗಪಡಿಸಿಕೊಳ್ಳದಂತೆ ರಾಜ್ಯ ಸರ್ಕಾರಗಳು ಮೇಲ್ವಿಚಾರಣೆ ಮಾಡಬೇಕು - ಶ್ರೀ ಶಿವರಾಜ್‌ ಸಿಂಗ್‌ ಚೌಹಾಣ್‌

ಯೂರಿಯಾ ಅಥವಾ ರಸಗೊಬ್ಬರಗಳ ಕಾಳಸಂತೆಯಲ್ಲಿ ಮಾರಾಟವಾಗುವ ಬಗ್ಗೆ ಯಾವುದೇ ಅನುಮಾನವಿದ್ದರೆ, ರಾಜ್ಯ ಸರ್ಕಾರಗಳು ತಕ್ಷ ಣ ಕ್ರಮ ತೆಗೆದುಕೊಳ್ಳಬೇಕು - ಕೇಂದ್ರ ಕೃಷಿ ಸಚಿವರು

ಈವರೆಗೆ ಪ್ರಮಾಣೀಕರಿಸಿದ 600 ಜೈವಿಕ ಉತ್ತೇಜಕಗಳನ್ನು ಮಾತ್ರ ಮಾರಾಟ ಮಾಡಬೇಕು - ಕೇಂದ್ರ ಕೃಷಿ ಸಚಿವರು ಅಧಿಕಾರಿಗಳಿಗೆ ನಿರ್ದೇಶನ

ಪ್ರಧಾನಮಂತ್ರಿ ಅವರ ನಾಯಕತ್ವದಲ್ಲಿ ಕೃಷಿ ಕ್ಷೇತ್ರ ಮತ್ತು ದೇಶದ ಜನರ ಹಿತಾಸಕ್ತಿಗಳಿಗೆ ಧಕ್ಕೆಯಾಗಲು ನಾವು ಅವಕಾಶ ನೀಡುವುದಿಲ್ಲ- ಶ್ರೀ ಶಿವರಾಜ್‌ ಸಿಂಗ್‌ ಚೌಹಾಣ್‌

Posted On: 14 AUG 2025 6:13PM by PIB Bengaluru

ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ಇಂದು ನವದೆಹಲಿಯಲ್ಲಿ ವಿವಿಧ ರಾಜ್ಯಗಳ ಕೃಷಿ ಖಾತೆ ಸಚಿವರು, ಕೃಷಿ ಕಾರ್ಯದರ್ಶಿ ಶ್ರೀ ದೇವೇಶ್‌ ಚತುರ್ವೇದಿ, ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ಮಹಾನಿರ್ದೇಶಕ ಡಾ. ಎಂ.ಎಲ್‌. ಜಾಟ್‌ ಮತ್ತು ಹಲವಾರು ರಾಜ್ಯಗಳ ಹಿರಿಯ ಅಧಿಕಾರಿಗಳು ಮತ್ತು ವಿಜ್ಞಾನಿಗಳೊಂದಿಗೆ ಮಹತ್ವದ ಸಭೆ ನಡೆಸಿದರು.

ರಸಗೊಬ್ಬರ ಮತ್ತು ಯೂರಿಯಾ ಕೊರತೆ, ಜೈವಿಕ ಉತ್ತೇಜಕಗಳ ಪ್ರಮಾಣೀಕರಣ, ‘ವಿಕಸಿತ ಕೃಷಿ ಸಂಕಲ್ಪ ಅಭಿಯಾನ’ದಡಿ ಮುಂಬರುವ ಹಿಂಗಾರು ಬೆಳೆಗೆ ಸಿದ್ಧತೆಗಳು, ನೈಸರ್ಗಿಕ ಕೃಷಿಯ ರಾಷ್ಟ್ರೀಯ ಮಿಷನ್‌, ದ್ವಿದಳ ಧಾನ್ಯಗಳು ಮತ್ತು ಎಣ್ಣೆಕಾಳುಗಳ ಉತ್ಪಾದನೆಯನ್ನು ಹೆಚ್ಚಿಸುವುದು, 5 ವರ್ಷಗಳ ಕೃಷಿ ಕ್ರಿಯಾ ಯೋಜನೆ, ಪ್ರವಾಹ ಮತ್ತು ವಿಪತ್ತು ಪೀಡಿತ ಪ್ರದೇಶಗಳಲ್ಲಿ ಬೆಳೆ ವಿಮೆ ಕ್ಲೈಮ್‌ಗಳ ಇತ್ಯರ್ಥ ಮತ್ತು ರೈತರ ಕುಂದುಕೊರತೆಗಳನ್ನು ಪರಿಹರಿಸಲು ಟೋಲ್‌ ಫ್ರೀ ಸಂಖ್ಯೆಯನ್ನು ಪ್ರಚಾರ ಮಾಡುವುದು ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಚರ್ಚೆಗಳು ನಡೆದವು.

ಶ್ರೀ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ತಿಳಿಸುವ ಮೂಲಕ ಸಭೆಯನ್ನು ಪ್ರಾರಂಭಿಸಿದರು. ಹಿಂಗಾರು ಬೆಳೆಗಾಗಿ ‘ವಿಕಸಿತ ಕೃಷಿ ಸಂಕಲ್ಪ ಅಭಿಯಾನ’ ಕುರಿತು ಎರಡು ದಿನಗಳ ಸಮ್ಮೇಳನವನ್ನು ಸೆಪ್ಟೆಂಬರ್‌ 15-16ರಂದು ನವದೆಹಲಿಯಲ್ಲಿ ಆಯೋಜಿಸಲಾಗುವುದು ಮತ್ತು ಅಭಿಯಾನದ ಔಪಚಾರಿಕ ಪ್ರಾರಂಭವು 2025ರ ಅಕ್ಟೋಬರ್‌ 3ರಂದು ವಿಜಯ್‌ ಪರ್ವ್‌ ಸಂದರ್ಭದಲ್ಲಿ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು. ಈ ಅಭಿಯಾನವು ಅಕ್ಟೋಬರ್‌ 3ರಿಂದ ಅಕ್ಟೋಬರ್‌ 18ರಂದು ಧಂತೇರಸ್‌ವರೆಗೆ ನಡೆಯಲಿದೆ. ಈ ಉಪಕ್ರಮಕ್ಕಾಗಿ ಎಲ್ಲಾ ರಾಜ್ಯಗಳ ಕೃಷಿ ಸಚಿವರು ಗಂಭೀರವಾಗಿ ಸಿದ್ಧರಾಗಬೇಕು ಎಂದು ಅವರು ಒತ್ತಾಯಿಸಿದರು. ಸಮ್ಮೇಳನದಲ್ಲಿ ಕೃಷಿ ಸಚಿವರು ಮತ್ತು ಕೃಷಿ ಇಲಾಖೆಯ ಹಿರಿಯ ಅಧಿಕಾರಿಗಳ ಉಪಸ್ಥಿತಿಯನ್ನು ಖಚಿತಪಡಿಸಿಕೊಳ್ಳಲು ರಾಜ್ಯಗಳ ಮುಖ್ಯಮಂತ್ರಿಗಳಿಗೆ ಔಪಚಾರಿಕವಾಗಿ ಪತ್ರ ಬರೆಯುವುದಾಗಿ ಅವರು ಹೇಳಿದರು. ಹಿಂಗಾರು ಋುತುವಿನಲ್ಲಿ ರಸಗೊಬ್ಬರ ಅಗತ್ಯತೆಗಳ ಬಗ್ಗೆ ದತ್ತಾಂಶವನ್ನು ಸಂಗ್ರಹಿಸಲು ಮತ್ತು ಸಮ್ಮೇಳನದಲ್ಲಿ ಆಳವಾದ ಚರ್ಚೆಗೆ ಸಿದ್ಧರಾಗಿ ಬರುವಂತೆ ಶ್ರೀ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ಸಚಿವರಿಗೆ ಸೂಚಿಸಿದರು.

ಆಗಸ್ಟ್‌ 23ರಂದು ಪ್ರಧಾನಮಂತ್ರಿಯವರು ಪ್ರಾರಂಭಿಸಲಿರುವ ನೈಸರ್ಗಿಕ ಕೃಷಿಯ ರಾಷ್ಟ್ರೀಯ ಮಿಷನ್‌ನ ಸಿದ್ಧತೆಗಳನ್ನು ಸಭೆ ಪರಿಶೀಲಿಸಿತು. ಮಿಷನ್‌ನ ಗುರಿಗಳನ್ನು ಪೂರೈಸಲು ಸಂಪೂರ್ಣ ಸನ್ನದ್ಧತೆಯನ್ನು ಖಚಿತಪಡಿಸಿಕೊಳ್ಳಲು ಶ್ರೀ ಶಿವರಾಜ್‌ ಸಿಂಗ್‌ ಚೌಹಾಣ್‌ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು ಮತ್ತು 100 ಜಿಲ್ಲೆಗಳಲ್ಲಿ ಪ್ರಧಾನಮಂತ್ರಿ ಧನ್‌-ಧನ್ಯಾ ಕೃಷಿ ಯೋಜನೆ ಅಡಿಯಲ್ಲಿ ಪ್ರಗತಿಯ ಬಗ್ಗೆ ಚರ್ಚಿಸಿದರು.

ಬೇಳೆಕಾಳುಗಳು ಮತ್ತು ಎಣ್ಣೆಕಾಳುಗಳ ಉತ್ಪಾದನೆಯನ್ನು ಹೆಚ್ಚಿಸುವ ಬಗ್ಗೆಯೂ ಸಚಿವರು ಚರ್ಚಿಸಿದರು ಮತ್ತು ರಾಜ್ಯ ಕೃಷಿ ಸಚಿವರು ತಮ್ಮ ರಾಜ್ಯಗಳಲ್ಲಿಈ ಪ್ರಮುಖ ಕಾರ್ಯಾಚರಣೆಗಳು, ಯೋಜನೆಗಳು ಮತ್ತು ಅಭಿಯಾನಗಳನ್ನು ವೈಯಕ್ತಿಕವಾಗಿ ಮುನ್ನಡೆಸಬೇಕು ಮತ್ತು ಉತ್ತೇಜಿಸಬೇಕು ಎಂದು ಒತ್ತಾಯಿಸಿದರು. ನಮ್ಮ ರಾಷ್ಟ್ರೀಯ ಬೇಡಿಕೆಯನ್ನು ಪೂರೈಸಲು ದೇಶವು ಬೇಳೆಕಾಳುಗಳು ಮತ್ತು ಎಣ್ಣೆಕಾಳುಗಳ ಉತ್ಪಾದನೆಯನ್ನು ಬಲಪಡಿಸಬೇಕು ಎಂದು ಅವರು ಒತ್ತಿ ಹೇಳಿದರು.

ನಕಲಿ ರಸಗೊಬ್ಬರಗಳು ಮತ್ತು ಯೂರಿಯಾ ವಿಷಯವನ್ನು ಮತ್ತೊಮ್ಮೆ ಪ್ರಸ್ತಾಪಿಸಿದ ಶ್ರೀ ಶಿವರಾಜ್‌ ಸಿಂಗ್‌ ಚೌಹಾಣ್‌, ಕಠಿಣ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಗಳಿಗೆ ಕರೆ ನೀಡಿದರು. ಈ ಹಿಂದೆ ಸುಮಾರು 30,000 ಜೈವಿಕ ಉತ್ತೇಜಕ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿತ್ತು, ಅವುಗಳಲ್ಲಿ ಹೆಚ್ಚಿನವು ಸರಿಯಾದ ಪ್ರಮಾಣೀಕರಣವಿಲ್ಲದೆ ಮಾರಾಟವಾಗುತ್ತಿದ್ದವು ಎಂದು ಅವರು ಗಮನಿಸಿದರು. ಇಲ್ಲಿಯವರೆಗೆ, ಕೇವಲ 600 ಜೈವಿಕ ಉತ್ತೇಜಕಗಳನ್ನು ಮಾತ್ರ ಪ್ರಮಾಣೀಕರಿಸಲಾಗಿದೆ. ಈ ಪ್ರಮಾಣೀಕೃತ ಉತ್ಪನ್ನಗಳು ಮಾತ್ರ ರೈತರಿಗೆ ತಲುಪುವುದನ್ನು ಖಚಿತಪಡಿಸಿಕೊಳ್ಳಲು ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು ಮತ್ತು ರಸಗೊಬ್ಬರಗಳ ಜೊತೆಗೆ ಇತರ ಉತ್ಪನ್ನಗಳನ್ನು ಖರೀದಿಸಲು ರೈತರನ್ನು ಒತ್ತಾಯಿಸುವುದು ತಪ್ಪು ಮತ್ತು ಅದರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಿ ಹೇಳಿದರು.

ಸಭೆಯಲ್ಲಿ, ವಿವಿಧ ಕೃಷಿ ಸಚಿವರು ತಮ್ಮ ನೆಲದ ಸವಾಲುಗಳನ್ನು ಕೇಂದ್ರ ಸಚಿವರೊಂದಿಗೆ ಹಂಚಿಕೊಂಡರು. ರಾಜಸ್ಥಾನ (ಡಾ. ಕಿರೋಡಿ ಲಾಲ್‌ ಮೀನಾ), ಉತ್ತರ ಪ್ರದೇಶ (ಶ್ರೀ ಸೂರ್ಯ ಪ್ರತಾಪ್‌ ಶಾಹಿ), ಮಧ್ಯಪ್ರದೇಶ (ಶ್ರೀ ಐಂದಲ್‌ ಸಿಂಗ್‌ ಕನ್ಶಾನಾ), ಬಿಹಾರ (ಉಪಮುಖ್ಯಮಂತ್ರಿ ಶ್ರೀ ಸಾಮ್ರಾಟ್‌ ಚೌಧರಿ), ಕರ್ನಾಟಕ (ಶ್ರೀ ಎನ್‌. ಚೆಲುವರಾಯಸ್ವಾಮಿ), ಉತ್ತರಾಖಂಡ (ಶ್ರೀ ಗಣೇಶ್‌ ಜೋಶಿ), ಛತ್ತೀಸ್‌ಗಢ (ಶ್ರೀ ರಾಮ್‌ ವಿರ್ಚಾ ನೇತಮ) ಮತ್ತು ಗುಜರಾತ್‌ (ಶ್ರೀ ರಾಘವ್‌ ಜಿಭಾಯ್‌ ಪಟೇಲ್‌) ಮತ್ತು ಪಂಜಾಬ್‌ (ಶ್ರೀ ಗುರ್ಮೀತ್‌ ಸಿಂಗ್‌ ಖುದ್ದಿಯಾನ್‌) ಪ್ರತಿನಿಧಿಗಳು ಹೆಚ್ಚುವರಿ ಯೂರಿಯಾ ಸರಬರಾಜನ್ನು ಕೋರಿದರು. ಉತ್ತರಾಖಂಡ ಮತ್ತು ಉತ್ತರ ಪ್ರದೇಶದ ಸಚಿವರು ನೈಸರ್ಗಿಕ ವಿಪತ್ತುಗಳಿಂದಾಗಿ ಬೆಳೆ ಹಾನಿಯನ್ನು ವರದಿ ಮಾಡಿದ್ದಾರೆ ಮತ್ತು ಹೆಚ್ಚುವರಿ ಆರ್ಥಿಕ ಸಹಾಯವನ್ನು ಕೋರಿದ್ದಾರೆ.

ಯೂರಿಯಾಕ್ಕೆ ಹೆಚ್ಚಿದ ಬೇಡಿಕೆಗೆ ಎರಡು ಪ್ರಮುಖ ಕಾರಣಗಳಿರಬಹುದು: ಮೊದಲನೆಯದು, ಉತ್ತಮ ಮಳೆಯಿಂದಾಗಿ ಭತ್ತ, ಮೆಕ್ಕೆಜೋಳ ಮತ್ತು ಇತರ ಬೆಳೆಗಳ ಬಿತ್ತನೆಯಲ್ಲಿ ಹೆಚ್ಚಳ; ಎರಡನೆಯದಾಗಿ, ಕೃಷಿಯೇತರ ಉದ್ದೇಶಗಳಿಗಾಗಿ ಯೂರಿಯಾದ ಸಂಭಾವ್ಯ ದುರುಪಯೋಗ. ಕೃಷಿ ಅಗತ್ಯಗಳಿಗೆ ಬೇಡಿಕೆ ನಿಜವಾಗಿಯೂ ಇದ್ದರೆ, ಯೂರಿಯಾವನ್ನು ಖಂಡಿತವಾಗಿಯೂ ಪೂರೈಸಲಾಗುವುದು - ಸಚಿವಾಲಯವು ಈ ಬಗ್ಗೆ ತ್ವರಿತವಾಗಿ ಕಾರ್ಯನಿರ್ವಹಿಸುತ್ತಿದೆ. ಆದಾಗ್ಯೂ, ದುರುಪಯೋಗದ ಬಗ್ಗೆ ಯಾವುದೇ ಅನುಮಾನವಿದ್ದರೆ, ಅದನ್ನು ಗಂಭೀರ ವಿಷಯವೆಂದು ನೋಡಲಾಗುತ್ತದೆ, ಅದು ಕಠಿಣ ಕ್ರಮವನ್ನು ಆಹ್ವಾನಿಸುತ್ತದೆ. ಮೇಲ್ವಿಚಾರಣಾ ಸಮಿತಿಗಳನ್ನು ರಚಿಸುವ ಮೂಲಕ ಮತ್ತು ಮೇಲ್ವಿಚಾರಣಾ ಕಾರ್ಯವಿಧಾನಗಳನ್ನು ಬಲಪಡಿಸುವ ಮೂಲಕ ಯೂರಿಯಾದ ಸರಿಯಾದ ಬಳಕೆಯನ್ನು ಖಚಿತಪಡಿಸಿಕೊಳ್ಳಲು ಶ್ರೀ ಚೌಹಾಣ್‌ ಎಲ್ಲಾ ರಾಜ್ಯ ಕೃಷಿ ಸಚಿವರನ್ನು ಒತ್ತಾಯಿಸಿದರು.

ಪ್ರಗತಿಪರ ರೈತರು, ತಜ್ಞರು ಮತ್ತು ಇತರ ಮಧ್ಯಸ್ಥಗಾರರ ಸಲಹೆಗಳನ್ನು ಸೇರಿಸಿ 5 ವರ್ಷಗಳ ಕೃಷಿ ಕ್ರಿಯಾ ಯೋಜನೆಯ ರೂಪುರೇಷೆಯನ್ನು ಸಿದ್ಧಪಡಿಸುವಂತೆ ಕೇಂದ್ರ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಾರ್ವಜನಿಕ ಕಲ್ಯಾಣ ಸಮಸ್ಯೆಗಳನ್ನು ಪರಿಹರಿಸಲು ಸಚಿವಾಲಯದ ಟೋಲ್‌ ಫ್ರೀ ಸಂಖ್ಯೆಯನ್ನು ವ್ಯಾಪಕವಾಗಿ ಪ್ರಚಾರ ಮಾಡಲು ಅವರು ನಿರ್ದೇಶನ ನೀಡಿದರು.

ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆಯ ಬಗ್ಗೆ ಮಾತನಾಡಿದ ಶ್ರೀ ಶಿವರಾಜ್‌ ಸಿಂಗ್‌ ಚೌಹಾಣ್‌, ಅದರ ಅನುಷ್ಠಾನದಲ್ಲಿ ಸಂಪೂರ್ಣ ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಬದ್ಧವಾಗಿದೆ ಎಂದು ಒತ್ತಿ ಹೇಳಿದರು. ಡಿಜಿಟಲ್‌ ಪಾವತಿ ಮೂಲಕ ಪರಿಹಾರವನ್ನು ನೇರವಾಗಿ ರೈತರ ಖಾತೆಗಳಿಗೆ ವರ್ಗಾಯಿಸಲಾಗುತ್ತಿದೆ. ಯಾವುದೇ ವಿಮಾ ಕಂಪನಿ ಅಥವಾ ರಾಜ್ಯ ಸರ್ಕಾರವು ಕ್ಲೈಮ್‌ ಇತ್ಯರ್ಥವನ್ನು ವಿಳಂಬ ಮಾಡಿದರೆ, ಹೆಚ್ಚುವರಿ ಶೇ. 12ರಷ್ಟು ಬಡ್ಡಿಯನ್ನು ನೇರವಾಗಿ ರೈತರ ಖಾತೆಗಳಿಗೆ ಪಾವತಿಸಬೇಕಾಗುತ್ತದೆ.

ಕೊನೆಯಲ್ಲಿ, ಶ್ರೀ ಶಿವರಾಜ್‌ ಸಿಂಗ್‌ಚೌಹಾಣ್‌ ಅವರು ಸ್ವದೇಶಿಯನ್ನು ಅಳವಡಿಸಿಕೊಳ್ಳುವ ಪ್ರಧಾನಮಂತ್ರಿಯವರ ಕರೆಯನ್ನು ಪುನರುಚ್ಚರಿಸಿದರು ಮತ್ತು ಯಾವುದೇ ಸಂದರ್ಭದಲ್ಲೂ ಕೃಷಿ ಕ್ಷೇತ್ರದ ಅಥವಾ ದೇಶದ ನಾಗರಿಕರ ಹಿತಾಸಕ್ತಿಗಳೊಂದಿಗೆ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಪ್ರತಿಪಾದಿಸಿದರು. ರೈತರು, ಜಾನುವಾರು ಸಾಕಣೆದಾರರು ಮತ್ತು ಮೀನುಗಾರರ ಹಿತಾಸಕ್ತಿಗಳನ್ನು ರಕ್ಷಿಸಲಾಗುವುದು ಮತ್ತು ಕೃಷಿ ಅಭಿವೃದ್ಧಿಯ ರಾಷ್ಟ್ರದ ಗುರಿಗೆ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.

 

*****
 


(Release ID: 2156597)