ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ
"SVAMITVA" (ಗ್ರಾಮ ಪ್ರದೇಶಗಳಲ್ಲಿ ಸುಧಾರಿತ ತಂತ್ರಜ್ಞಾನದೊಂದಿಗೆ ಗ್ರಾಮ ಸಮೀಕ್ಷೆ ಮತ್ತು ನಕ್ಷೆ ರಚನೆ) ಯೋಜನೆಯ ಯಶೋಗಾಥೆ ನಾಗರಿಕರು ತಮ್ಮದೇ ಆದ ಹಣೆಬರಹವನ್ನು ನಿರ್ಧರಿಸಲು ಅಧಿಕಾರ ನೀಡುತ್ತದೆ: ಡಾ. ಜಿತೇಂದ್ರ ಸಿಂಗ್
"SVAMITVA" ಯೋಜನೆಯು ಪ್ರಪಂಚದಾದ್ಯಂತ ಅನುಸರಿಸಬಹುದಾದ ನಾಗರಿಕ-ಕೇಂದ್ರಿತ ಆಡಳಿತದ ಜಾಗತಿಕ ಮಾದರಿಯಾಗಿದೆ
ಡಾ. ಜಿತೇಂದ್ರ ಸಿಂಗ್ ಅವರು ಸರ್ವೆ ಆಫ್ ಇಂಡಿಯಾದ ಉನ್ನತ ಮಟ್ಟದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ; ರಾಷ್ಟ್ರೀಯ ಭೂ-ಪ್ರಾದೇಶಿಕ ನೀತಿ 2022 ಅನ್ನು ಶ್ಲಾಘಿಸಿದರು
ಸರ್ವೆ ಆಫ್ ಇಂಡಿಯಾದ ತಾಂತ್ರಿಕ ಪರಿಣತಿಯು ಅಮೃತ್, ಸ್ಮಾರ್ಟ್ ಸಿಟೀಸ್, ಡಿಜಿಟಲ್ ಟ್ವಿನ್ ಮಿಷನ್ ಮತ್ತು ನಕ್ಷಾ (NAKSHA) ಯೋಜನೆಯಂತಹ ಭಾರತ ಸರ್ಕಾರದ ಪ್ರಮುಖ ಯೋಜನೆಗಳನ್ನು ಸಹ ಮುನ್ನಡೆಸುತ್ತಿದೆ
2030ರ ವೇಳೆಗೆ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 5-10 ಸೆಂ.ಮೀ. ಮತ್ತು ಅರಣ್ಯ ಹಾಗೂ ಪಾಳುಭೂಮಿಗಳಲ್ಲಿ 50-100 ಸೆಂ.ಮೀ. ಉನ್ನತ ರೆಸಲ್ಯೂಶನ್ ನ ಭೂಪ್ರದೇಶ ಸಮೀಕ್ಷೆ ಮತ್ತು ನಕ್ಷೆ ತಯಾರಿಕೆಯ ಯೋಜನೆಯನ್ನು ರೂಪಿಸಲಾಗಿದೆ
Posted On:
12 AUG 2025 2:52PM by PIB Bengaluru
ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ರಾಜ್ಯ ಸಚಿವರಾದ (ಸ್ವತಂತ್ರ ಉಸ್ತುವಾರಿ) ಡಾ. ಜಿತೇಂದ್ರ ಸಿಂಗ್ ಅವರು ಇಂದು ಮಾತನಾಡುತ್ತಾ, SVAMITVA (ಗ್ರಾಮ ಪ್ರದೇಶಗಳಲ್ಲಿ ಸುಧಾರಿತ ತಂತ್ರಜ್ಞಾನದೊಂದಿಗೆ ಸಮೀಕ್ಷೆ ಮತ್ತು ಮ್ಯಾಪಿಂಗ್) ಯೋಜನೆಯಂತಹ ಯಶೋಗಾಥೆಗಳು, ನಾಗರಿಕರನ್ನು ತಮ್ಮ ಹಣೆಬರಹದ ಒಡೆಯರನ್ನಾಗಿ ಪರಿವರ್ತಿಸಿವೆ. ದಶಕಗಳಿಂದ ಕಂದಾಯ ಅಧಿಕಾರಿಗಳು ಮತ್ತು ಪಟ್ವಾರಿಗಳ (ಗ್ರಾಮ ಲೆಕ್ಕಿಗರ) ದಯಾ-ದಾಕ್ಷಿಣ್ಯಕ್ಕೆ ಕಾಯುತ್ತಿದ್ದ ಅವಲಂಬನೆಗೆ ಇವು ಅಂತ್ಯ ಹಾಡಿವೆ," ಎಂದು ಹೇಳಿದರು. ಈ ಕಾರ್ಯಕ್ರಮವು ನಾಗರಿಕ-ಕೇಂದ್ರಿತ ಆಡಳಿತದ ಜಾಗತಿಕ ಮಾದರಿಯಾಗಿ ಹೊರಹೊಮ್ಮಿದೆ. ನಾಗರಿಕರೇ ತಮ್ಮ ಭೂಮಿಯ ನಕ್ಷೆಯನ್ನು ಸ್ವತಃ ತಯಾರಿಸಲು ಅನುವು ಮಾಡಿಕೊಡುವ ಮೂಲಕ, ಇತರ ದೇಶಗಳಿಗೂ ಇದನ್ನು ಅಳವಡಿಸಿಕೊಳ್ಳಲು ಪ್ರೇರಣೆ ನೀಡಿದೆ ಎಂದು ಅವರು ತಿಳಿಸಿದರು.
ಸಂಸತ್ ಭವನದಲ್ಲಿ "ಸರ್ವೆ ಆಫ್ ಇಂಡಿಯಾ"ದ ಉನ್ನತ ಮಟ್ಟದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ. ಜಿತೇಂದ್ರ ಸಿಂಗ್ ಅವರು, ರಾಷ್ಟ್ರೀಯ ಭೂ-ಪ್ರಾದೇಶಿಕ ನೀತಿ 2022 (National Geospatial Policy 2022) ಒಂದು ಕ್ರಾಂತಿಕಾರಿ ಹೆಜ್ಜೆಯಾಗಿದ್ದು, ಇದು ಭೂ-ಪ್ರಾದೇಶಿಕ ದತ್ತಾಂಶವನ್ನು (geo-spatial data) ಎಲ್ಲರಿಗೂ ಲಭ್ಯವಾಗುವಂತೆ ಮಾಡಿದೆ ಎಂದು ಶ್ಲಾಘಿಸಿದರು. ಇದರ ಪರಿಣಾಮವಾಗಿ, ಸರ್ಕಾರದ ಮತ್ತು ಸಾರ್ವಜನಿಕ ವಲಯದಲ್ಲಿ ದತ್ತಾಂಶದ ಉಪಯುಕ್ತತೆ ಹೆಚ್ಚಿದೆ ಎಂದರು. ಭಾರತದ ರಿಜಿಸ್ಟ್ರಾರ್ ಜನರಲ್ ಅವರ ಸಹಯೋಗದೊಂದಿಗೆ ಗಡಿಗಳ ಸುವ್ಯವಸ್ಥಿತಗೊಳಿಸುವ ಕಾರ್ಯ ಪೂರ್ಣಗೊಂಡಿದೆ ಎಂದು ತಿಳಿಸಿದರು. ಇದು ಇತ್ತೀಚಿನ ವರ್ಷಗಳಲ್ಲಿ ಸರ್ವೆ ಆಫ್ ಇಂಡಿಯಾದ ಮಹತ್ವದ ರೂಪಾಂತರದಲ್ಲಿ ಒಂದು ಮೈಲಿಗಲ್ಲು ಎಂದು ಅವರು ಬಣ್ಣಿಸಿದರು.

SVAMITVA ಯೋಜನೆ, AMRUT ಮಿಷನ್, ಸ್ಮಾರ್ಟ್ ಸಿಟೀಸ್, ಡಿಜಿಟಲ್ ಟ್ವಿನ್ ಮಿಷನ್ ಮತ್ತು ನಕ್ಷಾ ಯೋಜನೆ ಸೇರಿದಂತೆ ಹಲವಾರು ಪ್ರಮುಖ ಯೋಜನೆಗಳಿಗೆ ಸರ್ವೇ ಆಫ್ ಇಂಡಿಯಾದ ತಾಂತ್ರಿಕ ಪರಿಣತಿಯೇ ಆಧಾರವಾಗಿದೆ ಎಂದು ಡಾ. ಜಿತೇಂದ್ರ ಸಿಂಗ್ ಒತ್ತಿ ಹೇಳಿದರು. ವಿಭಾಗದ ತಾಂತ್ರಿಕ ಉನ್ನತೀಕರಣಕ್ಕಾಗಿ ಕೃತಕ ಬುದ್ಧಿಮತ್ತೆ (AI) ಮತ್ತು ಯಂತ್ರ ಕಲಿಕೆಯನ್ನು (Machine Learning) ಸಂಯೋಜಿಸುವ ಯೋಜನೆಗಳನ್ನು ವಿವರಿಸಿದರು. ಅಲ್ಲದೆ, ಇತರ ವಿಜ್ಞಾನ ಮತ್ತು ಸರ್ಕಾರಿ ಇಲಾಖೆಗಳೊಂದಿಗೆ ಸಹಯೋಗ ಸಾಧಿಸುವುದು ಹಾಗೂ ಆ ಇಲಾಖೆಗಳು ಸರ್ವೆ ಆಫ್ ಇಂಡಿಯಾದ ವಿಶ್ವ ದರ್ಜೆಯ ಸೌಲಭ್ಯಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳುವಂತೆ ಮಾಡುವುದು ಇದರ ಉದ್ದೇಶವಾಗಿದೆ ಎಂದು ಅವರು ತಿಳಿಸಿದರು.
ತಾಂತ್ರಿಕ ಪ್ರಗತಿಗಳನ್ನು ಎತ್ತಿ ತೋರಿಸಿದ ಡಾ. ಜಿತೇಂದ್ರ ಸಿಂಗ್ ಅವರು, "ಸರ್ವೆ ಆಫ್ ಇಂಡಿಯಾ" ಇಲಾಖೆಯು ನಕ್ಷೆಗಳನ್ನು ತಯಾರಿಸುವುದರಿಂದ ಹೊರಬಂದು, ಆರ್ಥಿಕತೆಯ ಹಲವು ವಲಯಗಳಿಗೆ ಭೂ-ಪ್ರಾದೇಶಿಕ ದತ್ತಾಂಶವನ್ನು ಒದಗಿಸುವ ಸಂಸ್ಥೆಯಾಗಿ ಮಾರ್ಪಟ್ಟಿದೆ ಎಂದು ಹೇಳಿದರು. ಈ ಪರಿವರ್ತನೆಯಲ್ಲಿ, ಅತ್ಯಂತ ನಿಖರವಾದ ಡಿಜಿಟಲ್ ಎಲಿವೇಶನ್ ಮಾಡೆಲ್ಸ್ (DEMs) ಅಭಿವೃದ್ಧಿಯು ಪ್ರಮುಖ ಪಾತ್ರ ವಹಿಸಿದೆ ಎಂದು ಅವರು ತಿಳಿಸಿದರು. ಇಲಾಖೆಯು ವಿವಿಧ ಸಚಿವಾಲಯಗಳೊಂದಿಗೆ ಸಕ್ರಿಯವಾಗಿ ಸಹಯೋಗ ಹೊಂದಿದ್ದಕ್ಕಾಗಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಹಾಗೆಯೇ, ನಿರಂತರವಾಗಿ ಕಾರ್ಯನಿರ್ವಹಿಸುವ ರೆಫರೆನ್ಸ್ ಸ್ಟೇಷನ್ ಗಳು (CORS) ಮತ್ತು ರಾಜ್ಯ, ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದಲ್ಲಿ ಜಿಯೋಡೆಟಿಕ್ ಆಸ್ತಿ ನೋಂದಣಿ (Geodetic Asset Register) ರಚನೆಯಂತಹ ಕ್ರಮಗಳ ಬಗ್ಗೆ ಅವರು ಉಲ್ಲೇಖಿಸಿದರು. ಈ ನೋಂದಣಿಗಳನ್ನು ತಹಶೀಲ್ದಾರರಿಗೆ ಲಭ್ಯವಾಗುವಂತೆ ಮಾಡುವುದರಿಂದ, ನಾಗರಿಕ ಕೇಂದ್ರಿತ ಸೇವೆಗಳನ್ನು ಇನ್ನಷ್ಟು ಸುಲಭವಾಗಿ ಒದಗಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.

ಸರ್ವೇ ಆಫ್ ಇಂಡಿಯಾದ ವ್ಯಾಪಕ ಸಾಮರ್ಥ್ಯಗಳ ಬಗ್ಗೆ ಎಲ್ಲಾ ಸಚಿವಾಲಯಗಳು, ಇಲಾಖೆಗಳು ಮತ್ತು ರಾಜ್ಯಗಳಲ್ಲಿ ಅರಿವು ಮೂಡಿಸಲು ರಾಷ್ಟ್ರೀಯ ಕಾರ್ಯಾಗಾರವನ್ನು ಆಯೋಜಿಸುವಂತೆ ಸಚಿವರು ಇಲಾಖೆಗೆ ನಿರ್ದೇಶನ ನೀಡಿದರು. ರಾಷ್ಟ್ರೀಯ ಭೂಮಾಪನ ಉಲ್ಲೇಖ ಚೌಕಟ್ಟನ್ನು (National Geodetic Reference Framework) ಶ್ಲಾಘಿಸಿದ ಅವರು, ಇತರ ಇಲಾಖೆಗಳ ಸಹಯೋಗದೊಂದಿಗೆ ಈಗಾಗಲೇ 478 CORS ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದರು.
ಭೂ-ಪ್ರಾದೇಶಿಕ ಡೇಟಾ ಮತ್ತು ಸಮೀಕ್ಷೆ ಕ್ಷೇತ್ರದಲ್ಲಿ ರಷ್ಯಾ ಮತ್ತು ನೈಜೀರಿಯಾದೊಂದಿಗೆ ದ್ವಿಪಕ್ಷೀಯ ತಿಳಿವಳಿಕೆ ಒಪ್ಪಂದಗಳಿಗೆ (MoUs) ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅನುವು ಮಾಡಿಕೊಟ್ಟಿದ್ದನ್ನು ಸ್ಮರಿಸಿದ ಡಾ. ಸಿಂಗ್, ಇನ್ನೂ ಆರು ಅಂತಹ ಅಂತರರಾಷ್ಟ್ರೀಯ ಸಹಯೋಗಗಳು ಪ್ರಕ್ರಿಯೆಯಲ್ಲಿವೆ ಎಂದು ತಿಳಿಸಿದರು.
ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೆ 5-10 ಸೆಂ.ಮೀ. ಹಾಗೂ ಅರಣ್ಯ ಮತ್ತು ಪಾಳುಭೂಮಿಗಳಿಗೆ 50-100 ಸೆಂ.ಮೀ. ಅಧಿಕ-ಸ್ಪಷ್ಟತೆಯ (ಹೈ-ರೆಸಲ್ಯೂಶನ್) ಸ್ಥಳಾಕೃತಿ ಸಮೀಕ್ಷೆ ಮತ್ತು ಮ್ಯಾಪಿಂಗ್ ಮಾಡುವ ಯೋಜನೆಯನ್ನು ಸಹ ಸಚಿವರು ವಿವರಿಸಿದರು. ಇದನ್ನು 2030ನೇ ಇಸವಿಯೊಳಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.

ಸಭೆಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಡಾ. ಅಭಯ್ ಕರಂದಿಕರ್, ಸರ್ವೆ ಆಫ್ ಇಂಡಿಯಾದ ಸರ್ವೇಯರ್ ಜನರಲ್ ಹಿತೇಶ್ ಕುಮಾರ್ ಎಸ್. ಮಕ್ವಾನಾ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಸರ್ವೆ ಆಫ್ ಇಂಡಿಯಾದ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
*****
(Release ID: 2155606)