ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
ಡಿ.ಪಿ.ಐ.ಐ.ಟಿ ಕಾರ್ಯದರ್ಶಿ ನೇತೃತ್ವದ ನಿಯೋಗವು ಬೆಂಗಳೂರಿನಲ್ಲಿನ ಐ.ಒ.ಟಿ ಮತ್ತು ಎ.ಐ ಗಾಗಿ ಇರುವ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಕೆ-ಟೆಕ್, ನಾಸ್ಕಾಮ್ ಸೆಂಟರ್ ಆಫ್ ಎಕ್ಸಲೆನ್ಸ್ ಗೆ ಭೇಟಿ ನೀಡಿತು
ಎನ್.ಐ.ಸಿ.ಡಿ.ಪಿ ಅಡಿಯಲ್ಲಿ ತುಮಕೂರು ಕೈಗಾರಿಕಾ ಪ್ರದೇಶವನ್ನು ಕಾರ್ಯದರ್ಶಿ ಪರಿಶೀಲಿಸಿದರು; ಹೂಡಿಕೆಗಳನ್ನು ಆಕರ್ಷಿಸಲು ಸಕಾಲಿಕ ಅನುಷ್ಠಾನ ಮತ್ತು ವಿಶ್ವ ದರ್ಜೆಯ ಮಾನದಂಡಗಳಿಗೆ ಒತ್ತು ನೀಡಬೇಕು ಎಂದು ಹೇಳಿದರು
Posted On:
03 AUG 2025 4:34PM by PIB Bengaluru
ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆಯ (ಡಿ.ಪಿ.ಐ.ಐ.ಟಿ) ಕಾರ್ಯದರ್ಶಿ ಶ್ರೀ ಅಮರದೀಪ್ ಸಿಂಗ್ ಭಾಟಿಯಾ ನೇತೃತ್ವದ ನಿಯೋಗವು ಎನ್.ಐ.ಸಿ.ಡಿ.ಸಿ ಯ ಸಿ.ಇ.ಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಶ್ರೀ ರಜತ್ ಕುಮಾರ್ ಸೈನಿ, ಡಿ.ಪಿ.ಐ.ಐ.ಟಿ ನಿರ್ದೇಶಕ ಮತ್ತು ಸ್ಟಾರ್ಟ್ಅಪ್ ಇಂಡಿಯಾದ ಮುಖ್ಯಸ್ಥರೊಂದಿಗೆ ಬೆಂಗಳೂರಿನಲ್ಲಿರುವ ಐ.ಒ.ಟಿ ಮತ್ತು ಎ.ಐ ಗಾಗಿ ಇರುವ ಮಾಹಿತಿ ತಂತ್ರಜ್ಞಾನ ಸಚಿವಾಲಯದ ಕೆ-ಟೆಕ್, ನಾಸ್ಕಾಮ್ ಸೆಂಟರ್ ಆಫ್ ಎಕ್ಸಲೆನ್ಸ್ ಗೆ ಭೇಟಿ ನೀಡಿತು. ನವೋದ್ಯಮ ಮತ್ತು ಇನ್ಕ್ಯುಬೇಷನ್ ವಲಯದ ನಾಯಕರೊಂದಿಗೆ ಸಂಪರ್ಕ ಸಾಧಿಸುವುದು, ಸ್ಥಳೀಯ ನಾವೀನ್ಯತೆ ಪರಿಸರ ವ್ಯವಸ್ಥೆಯ ಬಗ್ಗೆ ಒಳನೋಟಗಳನ್ನು ಪಡೆಯುವುದು ಮತ್ತು ಬೆಳವಣಿಗೆಯನ್ನು ವೇಗಗೊಳಿಸಲು ನೀತಿ ಬೆಂಬಲಕ್ಕಾಗಿ ಅವಕಾಶಗಳನ್ನು ಗುರುತಿಸುವುದು ಈ ಭೇಟಿಯ ಉದ್ದೇಶವಾಗಿತ್ತು.
ಭಾರತದ ಅತಿದೊಡ್ಡ ಡೀಪ್ ಟೆಕ್ ನಾವೀನ್ಯತೆ ಕೇಂದ್ರವಾದ ಸೆಂಟರ್ ಆಫ್ ಎಕ್ಸಲೆನ್ಸ್, ಐ.ಒ.ಟಿ, ಎ.ಐ., ಡೇಟಾ ಸೈನ್ಸ್, ಬಿಗ್ ಡೇಟಾ, ಎ.ಆರ್/ವಿ.ಆರ್, ಮೆಷಿನ್ ಲರ್ನಿಂಗ್ ಮತ್ತು ರೊಬೊಟಿಕ್ಸ್ ನಂತಹ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ನೈಜ-ಪ್ರಪಂಚದ ಸವಾಲುಗಳನ್ನು ಪರಿಹರಿಸಲು ನವೋದ್ಯಮಗಳು, ನಾವೀನ್ಯಕಾರರು, ಉದ್ಯಮಗಳು, ಶೈಕ್ಷಣಿಕ ಸಂಸ್ಥೆಗಳು ಮತ್ತು ಸರ್ಕಾರವನ್ನು ಸಂಪರ್ಕಿಸುತ್ತದೆ. ಈ ತಂತ್ರಜ್ಞಾನಗಳು ಉತ್ಪಾದನೆ, ಲಾಜಿಸ್ಟಿಕ್ಸ್ ಮತ್ತು ನಗರ ಪರಿಹಾರಗಳ ಭವಿಷ್ಯವನ್ನು ಹೇಗೆ ಮುನ್ನಡೆಸಬಹುದು ಎಂಬುದನ್ನು ಅನ್ವೇಷಿಸಲು ನಿಯೋಗವು ನವೋದ್ಯಮ ಸಂಸ್ಥಾಪಕರು ಮತ್ತು ಇನ್ಕ್ಯುಬೇಶನ್ ವ್ಯವಸ್ಥಾಪಕರೊಂದಿಗೆ ಸಂವಾದ ನಡೆಸಿತು.
ಬೆಂಗಳೂರಿನಲ್ಲಿ ನಡೆದ ಹೂಡಿಕೆದಾರರ ದುಂಡುಮೇಜಿನ ಸಮ್ಮೇಳನದ ನಂತರ, ಡಿ.ಪಿ.ಐ.ಐ.ಟಿ ಕಾರ್ಯದರ್ಶಿ ಶ್ರೀ ಅಮರದೀಪ್ ಸಿಂಗ್ ಭಾಟಿಯಾ ಅವರು ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮದ (ಎನ್.ಐ.ಸಿ.ಡಿ.ಪಿ) ಅಡಿಯಲ್ಲಿ ಪ್ರಮುಖ ಯೋಜನೆಯಾದ ತುಮಕೂರು ಕೈಗಾರಿಕಾ ಪ್ರದೇಶದ ವಿವರವಾದ ಪರಿಶೀಲನೆಯನ್ನು ಕೈಗೊಂಡರು.
ಡಿ.ಪಿ.ಐ.ಐ.ಟಿ ಕಾರ್ಯದರ್ಶಿಯವರು 1,736 ಎಕರೆ ವಿಸ್ತೀರ್ಣದಲ್ಲಿ ಎ ಹಂತದ ಅಭಿವೃದ್ಧಿ, ಆಂತರಿಕ ರಸ್ತೆಗಳು, ಒಳಚರಂಡಿ ಮತ್ತು ಯುಟಿಲಿಟಿ ಕಾರಿಡಾರ್ ಗಳಲ್ಲಿನ ಪ್ರಗತಿ ಮತ್ತು ಹೂಡಿಕೆದಾರರನ್ನು ಬೆಂಬಲಿಸುವ ಉಪಕ್ರಮಗಳು ಸೇರಿದಂತೆ ಪ್ರಮುಖ ಸಾಧನೆಗಳನ್ನು ಪರಿಶೀಲಿಸಿದರು.
ಇ.ಪಿ.ಸಿ ಗುತ್ತಿಗೆದಾರರಾದ ಲಾರ್ಸೆನ್ & ಟೂಬ್ರೊ (ಎಲ್ & ಟಿ) ಮತ್ತು ಯೋಜನೆಯ ಪಿ.ಎಮ್.ಸಿ ಗುತ್ತಿಗೆದಾರ ಹ್ಯಾಸ್ಕೋನಿಂಗ್ ಡಿ.ಹೆಚ್.ವಿ ಅವರೊಂದಿಗಿನ ಸಭೆಯಲ್ಲಿ, ನಿರ್ಮಾಣ ಪ್ರಗತಿ ಮತ್ತು ಪ್ರಮುಖ ಸಾಧನೆಗಳ ಕುರಿತು ವಿವರವಾದ ಮಾಹಿತಿ ಪಡೆದರು. ವರ್ಷಾಂತ್ಯದ ವೇಳೆಗೆ ಕೈಗಾರಿಕೆಗಳಿಗೆ ಭೂ ಹಂಚಿಕೆ ಪ್ರಾರಂಭವಾಗುವುದನ್ನು ಖಚಿತಪಡಿಸಿಕೊಳ್ಳಲು ಕೆಲಸವನ್ನು ವೇಗಗೊಳಿಸುವುದಾಗಿ ಮತ್ತು ಪ್ರಮುಖ ಕಾರ್ಯಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವುದಾಗಿ ಎಲ್ & ಟಿ ಅಧಿಕಾರಿಗಳಿಗೆ ಭರವಸೆ ನೀಡಿತು.
ತುಮಕೂರು ಕೈಗಾರಿಕಾ ಪ್ರದೇಶವು ಎಲೆಕ್ಟ್ರಾನಿಕ್ಸ್, ಆಟೋಮೋಟಿವ್, ಕ್ಲೀನ್ ಟೆಕ್ ಮತ್ತು ಲಾಜಿಸ್ಟಿಕ್ಸ್ ನಂತಹ ಕ್ಷೇತ್ರಗಳಲ್ಲಿ ಜಾಗತಿಕ ಮತ್ತು ದೇಶೀಯ ಹೂಡಿಕೆಯನ್ನು ಆಕರ್ಷಿಸುವುದನ್ನು ಖಚಿತಪಡಿಸಿಕೊಳ್ಳಲು ಅತ್ಯುನ್ನತ ಗುಣಮಟ್ಟದ ಮಾನದಂಡಗಳನ್ನು ಎತ್ತಿಹಿಡಿಯುವುದರೊಂದಿಗೆ ಯೋಜಿತ ಗುರಿಗಳನ್ನು ನಿಗದಿತ ಸಮಯದಲ್ಲಿ ತಲುಪಬೇಕೆಂದು ಶ್ರೀ ಭಾಟಿಯಾ ಎಲ್ಲಾ ಪಾಲುದಾರರನ್ನು ಒತ್ತಾಯಿಸಿದರು.
ನಿಯೋಗವು ಫಾಕ್ಸ್ ಕಾನ್ ಹಾನ್ ಹೈ ಟೆಕ್ನಾಲಜಿ ಇಂಡಿಯಾ ಮೆಗಾ ಡೆವಲಪ್ಮೆಂಟ್ ಪ್ರೈವೇಟ್ ಲಿಮಿಟೆಡ್ ಮತ್ತು ದೇವನಹಳ್ಳಿ ಏರೋಸ್ಪೇಸ್ ವಿಶೇಷ ಆರ್ಥಿಕ ವಲಯ (#SEZ) ಕ್ಕೆ ಭೇಟಿ ನೀಡಿತು, ನಂತರ ಏರೋಸ್ಪೇಸ್ ಘಟಕಗಳ ಪ್ರಮುಖ ತಯಾರಕರಾದ ಡೈನಮ್ಯಾಟಿಕ್ ಟೆಕ್ನಾಲಜೀಸ್ ಗೆ ಭೇಟಿ ನೀಡಿತು. ಈ ಭೇಟಿಯು ಸುಧಾರಿತ ಉತ್ಪಾದನಾ ಸಾಮರ್ಥ್ಯಗಳು, ನಿಖರ ಎಂಜಿನಿಯರಿಂಗ್ ಮತ್ತು ಜಾಗತಿಕ ಏರೋಸ್ಪೇಸ್ ಪೂರೈಕೆ ಸರಪಳಿಯಲ್ಲಿ ಭಾರತದ ಉದಯೋನ್ಮುಖ ಪಾತ್ರದ ಬಗ್ಗೆ ಒಳನೋಟವನ್ನು ಒದಗಿಸಿತು.
ಕರ್ನಾಟಕ ಸರ್ಕಾರದ ಪ್ರಧಾನ ಕಾರ್ಯದರ್ಶಿ ಡಾ. ಸೆಲ್ವಕುಮಾರ್ ಎಸ್; ಎನ್.ಐ.ಸಿ.ಡಿ.ಸಿ ಸಿ.ಇ.ಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಶ್ರೀ ರಜತ್ ಕುಮಾರ್ ಸೈನಿ; ಕೆ.ಐ.ಎ.ಡಿ.ಬಿ ವ್ಯವಸ್ಥಾಪಕ ನಿರ್ದೇಶಕ ಡಾ. ಮಹೇಶ್ ಎಂ; ಮತ್ತು ತುಮಕೂರು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್ ಶ್ರೀಮತಿ ಶುಭ ಕಲ್ಯಾಣ್ ಸೇರಿದಂತೆ ಪ್ರಮುಖ ಪಾಲುದಾರರು, ಎನ್.ಐ.ಸಿ.ಡಿ.ಸಿ ಮತ್ತು ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳು ಪ್ರಗತಿಯನ್ನು ಮೌಲ್ಯಮಾಪನ ಮಾಡಲು ಮತ್ತು ಸಕಾಲಿಕ ಅನುಷ್ಠಾನಕ್ಕಾಗಿ ಪ್ರಯತ್ನಗಳನ್ನು ಸಮನ್ವಯಗೊಳಿಸಲು ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದ್ದರು.
ಹೂಡಿಕೆ ಮತ್ತು ರಫ್ತು ಆಧಾರಿತ ಬೆಳವಣಿಗೆಯನ್ನು ಹೆಚ್ಚಿಸಲು ನಾವೀನ್ಯತೆ, ಕೈಗಾರಿಕಾ ಮೂಲಸೌಕರ್ಯ ಮತ್ತು ನೀತಿ ಬೆಂಬಲದ ನಡುವಿನ ಸಮನ್ವಯವನ್ನು ಬಳಸಿಕೊಳ್ಳಲು ಡಿ.ಪಿ.ಐ.ಐ.ಟಿ ಕಾರ್ಯದರ್ಶಿಯವರು ಪಾಲುದಾರರನ್ನು ಒತ್ತಾಯಿಸಿದರು.

*****
(Release ID: 2151977)