ರೈಲ್ವೇ ಸಚಿವಾಲಯ
ಕಡಿಮೆ ಮತ್ತು ಮಧ್ಯಮ ಆದಾಯದ ಕುಟುಂಬಗಳಿಗೆ ಕೈಗೆಟುಕುವ ಪ್ರಯಾಣವನ್ನು ಒದಗಿಸಲು ರೈಲ್ವೆ ಬದ್ಧವಾಗಿದೆ; ಆಧುನಿಕ ಅಮೃತ ಭಾರತ ರೈಲುಗಳು ವಿಶ್ವ ದರ್ಜೆಯ ಅನುಭವದೊಂದಿಗೆ ಹವಾನಿಯಂತ್ರಣ ರಹಿತ ರೈಲು ಪ್ರಯಾಣವನ್ನು ಮರು ವ್ಯಾಖ್ಯಾನಿಸುತ್ತಿವೆ
ಶೇ.78 ರಷ್ಟು ಹವಾನಿಯಂತ್ರಣ ರಹಿತ ಸೀಟುಗಳು ಮತ್ತು ಶೇ.70 ರಷ್ಟು ಹವಾನಿಯಂತ್ರಣ ರಹಿತ ಬೋಗಿಗಳೊಂದಿಗೆ, ಹೆಚ್ಚಿನ ಸಂಖ್ಯೆಯ ಮೇಲ್, ಎಕ್ಸ್‌ಪ್ರೆಸ್ ಮತ್ತು ಪ್ಯಾಸೆಂಜರ್ ರೈಲುಗಳು ಸಾಮಾನ್ಯ ವರ್ಗದ ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣವನ್ನು ಒದಗಿಸುತ್ತಿವೆ
ಮುಂದಿನ 5 ವರ್ಷಗಳಲ್ಲಿ 17,000 ಹವಾನಿಯಂತ್ರಣ ರಹಿತ ಸಾಮಾನ್ಯ /ಸ್ಲೀಪರ್ ಬೋಗಿಗಳನ್ನು ಪರಿಚಯಿಸಲಾಗುವುದು; ಮಂಜೂರಾದ 100 ರಲ್ಲಿ 14 ಅಮೃತ ಭಾರತ ರೈಲುಗಳು ಕಾರ್ಯನಿರ್ವಹಿಸುತ್ತಿವೆ
ಸುರಕ್ಷತೆಗೆ ಪೂರಕವಾಗಿ ಸೌಕರ್ಯ: ಅಮೃತ ಭಾರತ ರೈಲುಗಳು ಜರ್ಕ್-ಮುಕ್ತ ಕಪ್ಲರ್ ಗಳನ್ನು ಪಡೆಯುತ್ತವೆ ಮತ್ತು ಕ್ರ್ಯಾಶ್ ಟ್ಯೂಬ್ ಮೂಲಕ ಕ್ರ್ಯಾಶ್ ನಿರೋಧಕತೆಯನ್ನು ಸುಧಾರಿಸುತ್ತವೆ
ಅಮೃತ ಭಾರತ ರೈಲುಗಳು ಸಿಸಿಟಿವಿಗಳು, ಎಲ್ ಇ ಡಿ ದೀಪಗಳು, ಇಪಿ ಬ್ರೇಕ್ ಸಿಸ್ಟಮ್, 11 ಸಾಮಾನ್ಯ ಬೋಗಿಗಳು, 8 ಸ್ಲೀಪರ್ ಬೋಗಿಗಳು ಮತ್ತು ಒಂದು ದಿವ್ಯಾಂಗ ಸ್ನೇಹಿ ಕಂಪಾರ್ಟ್‌ಮೆಂಟ್ ನೊಂದಿಗೆ ಸುರಕ್ಷತೆ ಮತ್ತು ಸುಗಮ ಬಳಕೆಯನ್ನು ಹೆಚ್ಚಿಸುತ್ತವೆ
Posted On:
30 JUL 2025 4:20PM by PIB Bengaluru
ಸಾಮಾನ್ಯ ವರ್ಗದಲ್ಲಿ ಪ್ರಯಾಣಿಸಲು ಬಯಸುವ ಪ್ರಯಾಣಿಕರಿಗೆ ರೈಲ್ವೆಯು ಸೌಲಭ್ಯಗಳನ್ನು ಗಣನೀಯವಾಗಿ ಹೆಚ್ಚಿಸಿದೆ. ಕಳೆದ 2024-25ನೇ ಹಣಕಾಸು ವರ್ಷದಲ್ಲಿಯೇ, ವಿವಿಧ ದೂರದ ರೈಲುಗಳಲ್ಲಿ 1250 ಸಾಮಾನ್ಯ ಬೋಗಿಗಳನ್ನು ಬಳಸಲಾಗಿದೆ.
ಕೆಳಗೆ ವಿವರಿಸಿದಂತೆ ಹವಾನಿಯಂತ್ರಣ ರಹಿತ ಬೋಗಿಗಳ ಶೇಕಡಾವಾರು ಪ್ರಮಾಣವು ಸುಮಾರು 70ಕ್ಕೆ ಗಮನಾರ್ಹವಾಗಿ ಹೆಚ್ಚಾಗಿದೆ:
ಕೋಷ್ಟಕ 1: ಬೋಗಿಗಳ ವಿತರಣೆ:
ಹವಾನಿಯಂತ್ರಣ ರಹಿತ ಬೋಗಿಗಳು (ಸಾಮಾನ್ಯ ಮತ್ತು ಸ್ಲೀಪರ್)
|
~57
|
~70%
|
ಹವಾನಿಯಂತ್ರಣ ಬೋಗಿಗಳು
|
~25
|
~30%
|
ಒಟ್ಟು ಬೋಗಿಗಳು
|
~82
|
100%
|
ಸಾಮಾನ್ಯ ಬೋಗಿಗಳ ಹೆಚ್ಚಿನ ಲಭ್ಯತೆಯಿಂದಾಗಿ, ಸಾಮಾನ್ಯ/ ಕಾಯ್ದಿರಿಸದ ಬೋಗಿಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆಯ ಹೆಚ್ಚುತ್ತಿರುವ ಪ್ರವೃತ್ತಿಯು ಈ ಕೆಳಕಂಡಂತಿದೆ:
ಕೋಷ್ಟಕ 2: ಸಾಮಾನ್ಯ/ಕಾಯ್ದಿರಿಸದ ಬೋಗಿಗಳಲ್ಲಿನ ಪ್ರಯಾಣಿಕರು:
ವರ್ಷ
|
ಪ್ರಯಾಣಿಕರ ಸಂಖ್ಯೆ
|
2020-21
|
99 ಕೋಟಿ (ಕೋವಿಡ್ ವರ್ಷ)
|
2021-22
|
275 ಕೋಟಿ (ಕೋವಿಡ್ ವರ್ಷ)
|
2022-23
|
553 ಕೋಟಿ
|
2023-24
|
609 ಕೋಟಿ
|
2024-25
|
651 ಕೋಟಿ
|
ವರ್ಷಗಳಲ್ಲಿ ಹವಾನಿಯಂತ್ರಣ ರಹಿತ ಪ್ರಯಾಣಿಕರಿಗೆ ಲಭ್ಯವಿರುವ ಆಸನಗಳ ಸಂಖ್ಯೆಯೂ ಹೆಚ್ಚಾಗಿದೆ. ಪ್ರಸ್ತುತ ಸಂಯೋಜನೆಯು ಈ ಕೆಳಗಿನಂತಿದೆ:
ಕೋಷ್ಟಕ 3: ಸೀಟುಗಳ ವಿತರಣೆ:
ಹವಾನಿಯಂತ್ರಣ ರಹಿತ ಸೀಟುಗಳು
|
~ 54 ಲಕ್ಷ
|
~ 78%
|
ಹವಾನಿಯಂತ್ರಣ ಸೀಟುಗಳು
|
~ 15 ಲಕ್ಷ
|
~ 22%
|
ಒಟ್ಟು
|
~ 69 ಲಕ್ಷ
|
100%
|
ಸಾಮಾನ್ಯ ಮತ್ತು ಹವಾನಿಯಂತ್ರಣ ರಹಿತ ಸ್ಲೀಪರ್ ಬೋಗಿಗಳನ್ನು ಬಳಸುವ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವನ್ನು ಒದಗಿಸುವ ಸಲುವಾಗಿ, ಮೇಲ್/ಎಕ್ಸ್‌ಪ್ರೆಸ್ ರೈಲುಗಳ ಸಂಯೋಜನೆಗೆ ಸಂಬಂಧಿಸಿದ ಅಸ್ತಿತ್ವದಲ್ಲಿರುವ ನೀತಿಯು 22 ಬೋಗಿಗಳ ರೈಲಿನಲ್ಲಿ 12 (ಹನ್ನೆರಡು) ಸಾಮಾನ್ಯ ವರ್ಗ ಮತ್ತು ಸ್ಲೀಪರ್ ವರ್ಗ ಹವಾನಿಯಂತ್ರಣ ರಹಿತ ಬೋಗಿಗಳು ಮತ್ತು 08 (ಎಂಟು) ಹವಾನಿಯಂತ್ರಣ ಬೋಗಿಗಳನ್ನು ಒಳಗೊಂಡಿರುತ್ತದೆ.
ಇದಲ್ಲದೆ, ಕಾಯ್ದಿರಿಸದ ಟಿಕೆಟ್ ಗಳನ್ನು ಬಯಸುವ ಪ್ರಯಾಣಿಕರ ಅಗತ್ಯಗಳನ್ನು ಪೂರೈಸಲು, ಭಾರತೀಯ ರೈಲ್ವೆ (ಐಆರ್) ಮೇಲ್/ಎಕ್ಸ್‌ಪ್ರೆಸ್ ಸೇವೆಗಳಲ್ಲಿ ಲಭ್ಯವಿರುವ ಕಾಯ್ದಿರಿಸದ ಟಿಕೆಟ್ ಸೌಕರ್ಯಗಳ (ಬೋಗಿಗಳು) ಜೊತೆಗೆ ಕೈಗೆಟುಕುವ ಪ್ರಯಾಣಕ್ಕಾಗಿ ಕಾಯ್ದಿರಿಸದ ಹವಾನಿಯಂತ್ರಣ ರಹಿತ ಪ್ಯಾಸೆಂಜರ್ ರೈಲುಗಳು/ ಮೆಮು/ ಎಮು ಇತ್ಯಾದಿಗಳನ್ನು ನಿರ್ವಹಿಸುತ್ತದೆ.
ಅಮೃತ ಭಾರತ ಎಕ್ಸ್‌ಪ್ರೆಸ್ ರೈಲುಗಳ ಅಭಿವೃದ್ಧಿ, ಮೆಮು ರೈಲುಗಳ ತಯಾರಿಕೆ ಮತ್ತು ಸಾಮಾನ್ಯ ಬೋಗಿಗಳ ಪಾಲಿನ ಹೆಚ್ಚಳವು ಭಾರತೀಯ ರೈಲ್ವೆ ಸಾಮಾನ್ಯ ದರ್ಜೆಯ ಪ್ರಯಾಣದ ಬೇಡಿಕೆಯನ್ನು ಪರಿಣಾಮಕಾರಿಯಾಗಿ ಪೂರೈಸುತ್ತಿದೆ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ.
ಪ್ರಸ್ತುತ ಹೆಚ್ಚಿನ ಹವಾನಿಯಂತ್ರಿತ ರಹಿತ ಬೋಗಿಗಳ (ಒಟ್ಟು ಬೋಗಿಗಳಲ್ಲಿ ಶೇ.70) ಪಾಲನ್ನು ಹೊರತುಪಡಿಸಿ, ಮುಂದಿನ 5 ವರ್ಷಗಳಲ್ಲಿ 17,000 ಹವಾನಿಯಂತ್ರಿತ ರಹಿತ ಸಾಮಾನ್ಯ/ಸ್ಲೀಪರ್ ಬೋಗಿಗಳಿಗೆ ವಿಶೇಷ ತಯಾರಿಕಾ ಕಾರ್ಯಕ್ರಮವನ್ನು ರೈಲ್ವೆಯು ಅನಿಷ್ಠಾನಗೊಳಿಸುತ್ತಿದೆ.
ಭಾರತೀಯ ರೈಲ್ವೆಯು ಸಂಪೂರ್ಣ ಹವಾನಿಯಂತ್ರಿತ ರಹಿತ ಅಮೃತ ಭಾರತ ರೈಲುಗಳನ್ನು ಪರಿಚಯಿಸಿದೆ, ಪ್ರಸ್ತುತ ಇದರಲ್ಲಿ 11 ಸಾಮಾನ್ಯ ದರ್ಜೆಯ ಬೋಗಿಗಳು, 8 ಸ್ಲೀಪರ್ ದರ್ಜೆಯ ಬೋಗಿಗಳು, 1 ಪ್ಯಾಂಟ್ರಿ ಕಾರ್ ಮತ್ತು 02 ಸೆಕೆಂಡ್ ಕ್ಲಾಸ್ ಕಮ್ ಲಗೇಜ್ ಕಮ್ ಗಾರ್ಡ್ ವ್ಯಾನ್ ಮತ್ತು ಅಂಗವಿಕಲ ಸ್ನೇಹಿ ಕಂಪಾರ್ಟ್‌ಮೆಂಟ್ ಸೇರಿವೆ. ಈ ರೈಲುಗಳನ್ನು ಹವಾನಿಯಂತ್ರಣ ರಹಿತ ವರ್ಗದ ಪ್ರಯಾಣಿಕರಿಗೆ ವಿಶ್ವ ದರ್ಜೆಯ ಆಧುನಿಕ ಮತ್ತು ಆರಾಮದಾಯಕ ರೈಲು ಪ್ರಯಾಣದ ಅನುಭವವನ್ನು ಒದಗಿಸುವ ಮೂಲಕ ಸಾರ್ವಜನಿಕರ ಅಗತ್ಯಗಳನ್ನು ಪೂರೈಸಲು ವಿನ್ಯಾಸಗೊಳಿಸಲಾಗಿದೆ ಮತ್ತು ತಯಾರಿಸಲಾಗಿದೆ. ಭಾರತೀಯ ರೈಲ್ವೆಯು 100 ಅಮೃತ ಭಾರತ್ ರೈಲುಗಳನ್ನು ತಯಾರಿಸಲು ಅವಕಾಶ ಕಲ್ಪಿಸಿದೆ.
ಹೆಚ್ಚಿನ ವೇಗ, ಸುಧಾರಿತ ಸುರಕ್ಷತಾ ಮಾನದಂಡಗಳು ಮತ್ತು ವಿಶ್ವ ದರ್ಜೆಯ ಸೇವೆಯು ಈ ರೈಲಿನ ವಿಶಿಷ್ಟ ಲಕ್ಷಣಗಳಾಗಿವೆ, ಇವು ಈ ಕೆಳಗಿನ ಸುಧಾರಿತ ವೈಶಿಷ್ಟ್ಯಗಳು ಮತ್ತು ಸೌಕರ್ಯಗಳನ್ನು ಹೊಂದಿವೆ:
- ವಂದೇ ಭಾರತ್ ಸ್ಲೀಪರ್ ಮಾದರಿಯಲ್ಲಿ ವರ್ಧಿತ ನೋಟ ಮತ್ತು ಅನುಭವದೊಂದಿಗೆ ಸೀಟ್ ಮತ್ತು ಬರ್ತ್‌ಗಳ ಉತ್ತಮ ಸೌಂದರ್ಯ.
- ಜರ್ಕ್ ಮುಕ್ತ ಸೆಮಿ-ಆಟೋಮ್ಯಾಟಿಕ್ ಕಪ್ಲರ್ ಗಳು.
- ಸುಧಾರಿತ ಕ್ರ್ಯಾಶ್ ನಿರೋಧಕ ವೈಶಿಷ್ಟ್ಯಗಳು.
- ಎಲ್ಲಾ ಬೋಗಿಗಳು ಮತ್ತು ಲಗೇಜ್ ಕೋಣೆಯಲ್ಲಿ ಸಿಸಿಟಿವಿ ವ್ಯವಸ್ಥೆಯನ್ನು ಒದಗಿಸುವುದು.
- ಶೌಚಾಲಯಗಳ ಸುಧಾರಿತ ವಿನ್ಯಾಸ.
- ಬರ್ತ್‌ಗೆ ಸುಲಭವಾಗಿ ಹತ್ತಲು ಏಣಿಯ ಸುಧಾರಿತ ವಿನ್ಯಾಸ.
- ಸುಧಾರಿತ ಎಲ್ ಇ ಡಿ ಬೆಳಕು ಮತ್ತು ಚಾರ್ಜಿಂಗ್ ಸಾಕೆಟ್ ಗಳು.
- ಇಪಿ ನೆರವಿನ ಬ್ರೇಕಿಂಗ್ ವ್ಯವಸ್ಥೆ.
- ಶೌಚಾಲಯಗಳು ಮತ್ತು ವಿದ್ಯುತ್ ಕ್ಯುಬಿಕಲ್ ಗಳಲ್ಲಿ ಏರೋಸಾಲ್ ಆಧಾರಿತ ಅಗ್ನಿಶಾಮಕ ವ್ಯವಸ್ಥೆ.
- ಯು ಎಸ್ ಬಿ ಟೈಪ್-ಎ ಮತ್ತು ಟೈಪ್-ಸಿ ಮೊಬೈಲ್ ಚಾರ್ಜಿಂಗ್ ಸಾಕೆಟ್ ಗಳು.
- ಪ್ರಯಾಣಿಕರು ಮತ್ತು ಗಾರ್ಡ್/ರೈಲು ವ್ಯವಸ್ಥಾಪಕರ ನಡುವೆ ದ್ವಿಮುಖ ಸಂವಹನಕ್ಕಾಗಿ ತುರ್ತು ಟಾಕ್ ಬ್ಯಾಕ್ ವ್ಯವಸ್ಥೆ.
- ಸುಧಾರಿತ ತಾಪನ ಸಾಮರ್ಥ್ಯದೊಂದಿಗೆ ಹವಾನಿಯಂತ್ರಿತವಲ್ಲದ ಪ್ಯಾಂಟ್ರಿ.
- ಸುಲಭವಾದ ಜೋಡಣೆ ಮತ್ತು ಬೇರ್ಪಡುವಿಕೆಗಾಗಿ ತ್ವರಿತ ಬಿಡುಗಡೆ ಕಾರ್ಯವಿಧಾನದೊಂದಿಗೆ ಸಂಪೂರ್ಣವಾಗಿ ಮುಚ್ಚಿದ ಗ್ಯಾಂಗ್ ವೇ ಗಳು.
ಭಾರತೀಯ ರೈಲ್ವೆಯು ಸೇವೆಯ ವೆಚ್ಚ, ಸೇವೆಯ ಮೌಲ್ಯ, ಪ್ರಯಾಣಿಕರ ಭರಿಸಬಹುದಾದ ಸಾಮರ್ಥ್ಯ, ಇತರ ಸ್ಪರ್ಧಾತ್ಮಕ ವಿಧಾನಗಳಿಂದ ಸ್ಪರ್ಧೆ, ಸಾಮಾಜಿಕ-ಆರ್ಥಿಕ ಪರಿಗಣನೆಗಳು ಇತ್ಯಾದಿಗಳನ್ನು ಪರಿಗಣಿಸಿ ದರಗಳನ್ನು ನಿಗದಿಪಡಿಸುತ್ತದೆ. ವಿವಿಧ ರೈಲುಗಳು/ವರ್ಗಗಳ ದರಗಳು ಈ ರೈಲುಗಳಲ್ಲಿ ಒದಗಿಸಲಾದ ಸೌಲಭ್ಯಗಳನ್ನು ಆಧರಿಸಿರುತ್ತವೆ. ಭಾರತೀಯ ರೈಲ್ವೆಯು ವಿವಿಧ ರೀತಿಯ ಪ್ರಯಾಣಿಕರ ವಿಭಾಗಗಳಿಗೆ ವಿವಿಧ ರೀತಿಯ ರೈಲು ಸೇವೆಗಳನ್ನು ಒದಗಿಸುತ್ತದೆ.
ಭಾರತೀಯ ರೈಲ್ವೆಯು ಬಡವರು ಮತ್ತು ಕೆಳ ಮಧ್ಯಮ ವರ್ಗದವರು ಸೇರಿದಂತೆ ಸಾರ್ವಜನಿಕರ ಅನುಕೂಲಕ್ಕಾಗಿ ಮೇಲ್/ಎಕ್ಸ್‌ಪ್ರೆಸ್ ಮತ್ತು ಪ್ಯಾಸೆಂಜರ್ ರೈಲುಗಳು ಸೇರಿದಂತೆ ಕೈಗೆಟುಕುವ ದರದ ರಚನೆಯೊಂದಿಗೆ ಹೆಚ್ಚಿನ ಸಂಖ್ಯೆಯ ರೈಲುಗಳನ್ನು ಓಡಿಸುತ್ತಿದೆ. ಭಾರತೀಯ ರೈಲ್ವೆಯು ಅಮೃತ ಭಾರತ ರೈಲುಗಳ ಸೇವೆಗಳು ಮತ್ತು ನಮೋ ಭಾರತ್ ಕ್ಷಿಪ್ರ ರೈಲು ಸೇವೆಗಳನ್ನು ಪ್ರಾರಂಭಿಸಿದೆ, ಇದು ಜನಸಂಖ್ಯೆಯ ಹೆಚ್ಚಿನ ಭಾಗಕ್ಕೆ, ವಿಶೇಷವಾಗಿ ಕಡಿಮೆ ಆದಾಯದ ವರ್ಗಕ್ಕೆ ಉತ್ತಮ ಗುಣಮಟ್ಟದ ಸೇವೆಗಳನ್ನು ಒದಗಿಸುತ್ತದೆ.
ಈ ಮಾಹಿತಿಯನ್ನು ಕೇಂದ್ರ ರೈಲ್ವೆ, ವಾರ್ತಾ ಮತ್ತು ಪ್ರಸಾರ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಇಂದು ಲೋಕಸಭೆಯಲ್ಲಿ ಪ್ರಶ್ನೆಗಳಿಗೆ ಲಿಖಿತ ಉತ್ತರದ ಮೂಲಕ ನೀಡಿದ್ದಾರೆ.
*****
(Release ID: 2150251)