ಸಂಸ್ಕೃತಿ ಸಚಿವಾಲಯ
azadi ka amrit mahotsav

2025ರ ಜುಲೈ 23 ರಿಂದ 27 ರವರೆಗೆ 'ಆದಿ ತಿರುವಥಿರೈ ಉತ್ಸವ'ದ ಮೂಲಕ ಒಂದನೇ ರಾಜೇಂದ್ರ ಚೋಳನ ವೈಭವಯುತ ಪರಂಪರೆಯ ಆಚರಣೆ


ಜುಲೈ 27ರಂದು ನಡೆಯಕೋರುವ ಗ್ರ್ಯಾಂಡ್ ಫಿನಾಲೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಇತರ ಗಣ್ಯರು ಉಪಸ್ಥಿತರಿರಲಿದ್ದಾರೆ

Posted On: 23 JUL 2025 2:38PM by PIB Bengaluru

2025ರ ಜುಲೈ 23 ರಿಂದ 27 ರವರೆಗೆ ತಮಿಳುನಾಡಿನ ಗಂಗೈಕೊಂಡ ಚೋಳಪುರಂನಲ್ಲಿ ನಡೆಯಲಿರುವ ಆದಿ ತಿರುವಥಿರೈ ಉತ್ಸವದೊಂದಿಗೆ ಮಹಾನ್ ಚೋಳ ಚಕ್ರವರ್ತಿ ಒಂದನೇ ರಾಜೇಂದ್ರ ಚೋಳನ ಜನ್ಮದಿನವನ್ನು ಆಚರಿಸಲು ಸಂಸ್ಕೃತಿ ಸಚಿವಾಲಯ ಸಜ್ಜಾಗಿದೆ. ಈ ವಿಶೇಷ ಆಚರಣೆಯು ಆಗ್ನೇಯ ಏಷ್ಯಾಕ್ಕೆ ರಾಜೇಂದ್ರ ಚೋಳನ ಪೌರಾಣಿಕ ಕಡಲ ದಂಡಯಾತ್ರೆಯ 1,000 ವರ್ಷಗಳನ್ನು ಮತ್ತು ಚೋಳ ವಾಸ್ತುಶಿಲ್ಪದ ಭವ್ಯವಾದ ಉದಾಹರಣೆಯಾದ ಅಪ್ರತಿಮ ಗಂಗೈಕೊಂಡ ಚೋಳಪುರಂ ದೇವಾಲಯದ ನಿರ್ಮಾಣದ ಪ್ರಾರಂಭವನ್ನು ನೆನಪಿಸುತ್ತದೆ.

ಉತ್ಸವದ ಗ್ರ್ಯಾಂಡ್ ಫಿನಾಲೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ತಮಿಳುನಾಡು ರಾಜ್ಯಪಾಲರಾದ ಶ್ರೀ ಆರ್.ಎನ್.ರವಿ, ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವರಾದ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಮತ್ತು ಮಾಹಿತಿ ಮತ್ತು ಪ್ರಸಾರ ಹಾಗೂ ಸಂಸದೀಯ ವ್ಯವಹಾರಗಳ ಸಚಿವಾಲಯದ ಸಹಾಯಕ ಸಚಿವರಾದ ಶ್ರೀ ಡಾ.ಎಲ್.ಮುರುಗನ್ ಮತ್ತು ಇತರ ಗಣ್ಯರು ಅವರೊಂದಿಗೆ ಪಾಲ್ಗೊಳ್ಳಲಿದ್ದಾರೆ.

ಈ ದಿನದಂದು, 'ಕಲಾಕ್ಷೇತ್ರ ಪ್ರತಿಷ್ಠಾನ'ವು ವಿಶೇಷ ಸಾಮೂಹಿಕ ಭರತನಾಟ್ಯ ಪ್ರದರ್ಶನವನ್ನು ಪ್ರಸ್ತುತಪಡಿಸುತ್ತದೆ, ನಂತರ ಸಾಂಪ್ರದಾಯಿಕ ವಟುಗಳಿಂದ 'ದೇವರಂ ತಿರುಮುರೈ' ಪಠಣ ನಡೆಯಲಿದೆ. ಸಾಹಿತ್ಯ ಅಕಾಡೆಮಿ ಪ್ರಕಟಿಸಿರುವ ದೇವರಂ ಸ್ತೋತ್ರಗಳ ಕಿರುಪುಸ್ತಕವನ್ನು ಔಪಚಾರಿಕವಾಗಿ ಬಿಡುಗಡೆ ಮಾಡಲಾಗುವುದು. ಪ್ರಸಿದ್ಧ ಸಂಗೀತ ಮಾಂತ್ರಿಕ ಪದ್ಮವಿಭೂಷಣ ಇಳಯರಾಜಾ ಮತ್ತು ಅವರ ತಂಡದಿಂದ ಸಂಗೀತ ಪ್ರಸ್ತುತಿಯೊಂದಿಗೆ ಉತ್ಸವವು ಕೊನೆಗೊಳ್ಳುತ್ತದೆ. ಈ ಕಾರ್ಯಕ್ರಮವು ಚೋಳ ಯುಗದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಪ್ರತಿಭೆಗೆ ಸೂಕ್ತ ಗೌರವವನ್ನು ಸಲ್ಲಿಸುತ್ತದೆ. 

ಐದು ದಿನಗಳ ಉತ್ಸವವು ಜುಲೈ 23 ರಿಂದ ಪ್ರತಿದಿನ ಸಂಜೆ ರೋಮಾಂಚಕ ಸಾಂಸ್ಕೃತಿಕ ಪ್ರದರ್ಶನಗಳನ್ನು ಒಳಗೊಂಡಿರುತ್ತದೆ. 'ಕಲಾಕ್ಷೇತ್ರ ಪ್ರತಿಷ್ಠಾನ'ದ ಕಲಾವಿದರಿಂದ ಭರತನಾಟ್ಯ ಪ್ರದರ್ಶನಗಳು ಮತ್ತು ತಂಜಾವೂರಿನ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರದ ಅಡಿಯಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳಿಂದ ದೇವರಂ ತಿರುಮುರೈ ಪಠಣಕ್ಕೆ ಪ್ರವಾಸಿಗರು ಸಾಕ್ಷಿಯಾಗಲಿದ್ದಾರೆ - ಇವೆರಡೂ ಚೋಳರ ಆಳ್ವಿಕೆಯಲ್ಲಿ ಪ್ರವರ್ಧಮಾನಕ್ಕೆ ಬಂದ ಆಳವಾದ ಆಧ್ಯಾತ್ಮಿಕ ಮತ್ತು ಕಲಾತ್ಮಕ ಸಂಪ್ರದಾಯಗಳನ್ನು ಪ್ರತಿಬಿಂಬಿಸುತ್ತವೆ.

ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್ಐ) ಚೋಳ ಶೈವ ಧರ್ಮ ಮತ್ತು ದೇವಾಲಯದ ವಾಸ್ತುಶಿಲ್ಪದ ಬಗ್ಗೆ ವಿಶೇಷ ಪ್ರದರ್ಶನಗಳನ್ನು ಆಯೋಜಿಸುತ್ತದೆ, ಜೊತೆಗೆ ಪಾರಂಪರಿಕ ನಡಿಗೆಗಳು ಮತ್ತು ಮಾರ್ಗದರ್ಶಿ ಪ್ರವಾಸಗಳನ್ನು ಆಯೋಜಿಸುತ್ತದೆ, ಇದು ಆ ಕಾಲದ ಸಾಂಸ್ಕೃತಿಕ ಮತ್ತು ವಾಸ್ತುಶಿಲ್ಪದ ಪರಂಪರೆಯ ಬಗ್ಗೆ ಅಪರೂಪದ ಒಳನೋಟಗಳನ್ನು ನೀಡುತ್ತದೆ.

ಒಂದನೇ ರಾಜೇಂದ್ರ ಚೋಳ (ಕ್ರಿ.ಶ. 1014-1044) ಭಾರತೀಯ ಇತಿಹಾಸದ ಅತ್ಯಂತ ಶಕ್ತಿಶಾಲಿ ಮತ್ತು ದೂರದೃಷ್ಟಿಯ ಆಡಳಿತಗಾರರಲ್ಲಿ ಒಬ್ಬನಾಗಿದ್ದನು. ಅವನ ನಾಯಕತ್ವದಲ್ಲಿ, ಚೋಳ ಸಾಮ್ರಾಜ್ಯವು ದಕ್ಷಿಣ ಮತ್ತು ಆಗ್ನೇಯ ಏಷ್ಯಾದಾದ್ಯಂತ ತನ್ನ ಪ್ರಭಾವವನ್ನು ವಿಸ್ತರಿಸಿತು. ಅವನು ತನ್ನ ವಿಜಯಶಾಲಿ ದಂಡಯಾತ್ರೆಗಳ ನಂತರ ಗಂಗೈಕೊಂಡ ಚೋಳಪುರಂ ಅನ್ನು ಸಾಮ್ರಾಜ್ಯದ ರಾಜಧಾನಿಯಾಗಿ ಸ್ಥಾಪಿಸಿದನು, ಮತ್ತು ಅಲ್ಲಿ ಅವನು ನಿರ್ಮಿಸಿದ ದೇವಾಲಯವು 250 ವರ್ಷಗಳಿಗಿಂತ ಹೆಚ್ಚು ಕಾಲ ಶೈವ ಭಕ್ತಿ, ಸ್ಮಾರಕ ವಾಸ್ತುಶಿಲ್ಪ ಮತ್ತು ಆಡಳಿತ ಪರಾಕ್ರಮದ ಸಂಕೇತವಾಗಿ ಕಾರ್ಯನಿರ್ವಹಿಸಿತು. ಇಂದು, ಈ ದೇವಾಲಯವು 'ಯುನೆಸ್ಕೋ ವಿಶ್ವ ಪಾರಂಪರಿಕ ತಾಣ'ವಾಗಿ ಸ್ಥಾನ ಪಡೆದಿದೆ. ಇದು ಸಂಕೀರ್ಣ ಶಿಲ್ಪಗಳು, ಚೋಳ ಕಂಚುಗಳು ಮತ್ತು ಪ್ರಾಚೀನ ಶಾಸನಗಳಿಗೆ ಹೆಸರುವಾಸಿಯಾಗಿದೆ.

'ಆದಿ ತಿರುವಥಿರೈ ಉತ್ಸವ'ವು ಶ್ರೀಮಂತ ತಮಿಳು ಶೈವ ಭಕ್ತಿ ಸಂಪ್ರದಾಯವನ್ನು ಆಚರಿಸುತ್ತದೆ. ಇದನ್ನು ಚೋಳರು ಅಪಾರವಾಗಿ ಬೆಂಬಲಿಸಿದರು ಮತ್ತು ತಮಿಳು ಶೈವ ಧರ್ಮದ ಸಂತ-ಕವಿಗಳಾದ 63 ನಾಯನ್ಮಾರ್ ಗಳು ಇದನ್ನು ಚಿರಸ್ಥಾಯಿಗೊಳಿಸಿದರು. ವಿಶೇಷವೆಂದರೆ, ರಾಜೇಂದ್ರ ಚೋಳನ ಜನ್ಮ ನಕ್ಷತ್ರ, ತಿರುವಥಿರೈ (ಆರ್ದ್ರಾ) ಜುಲೈ 23 ರಂದು ಪ್ರಾರಂಭವಾಗುತ್ತದೆ, ಇದು ಈ ವರ್ಷದ ಹಬ್ಬವನ್ನು ಹೆಚ್ಚು ಮಹತ್ವದ್ದಾಗಿದೆ.

ಶೈವ ಸಿದ್ಧಾಂತದ ಆಳವಾದ ತಾತ್ವಿಕ ಬೇರುಗಳನ್ನು ಮತ್ತು ಅದರ ಪ್ರಚಾರದಲ್ಲಿ ತಮಿಳಿನ ಪಾತ್ರವನ್ನು ಎತ್ತಿ ತೋರಿಸುವುದು; ತಮಿಳು ಸಂಸ್ಕೃತಿಯ ಆಧ್ಯಾತ್ಮಿಕ ರಚನೆಗೆ ನಾಯನ್ಮಾರ್ ಗಳ ಕೊಡುಗೆಗಳನ್ನು ಗೌರವಿಸುವುದು; ಮತ್ತು ಶೈವ ಧರ್ಮ, ದೇವಾಲಯ ವಾಸ್ತುಶಿಲ್ಪ, ಸಾಹಿತ್ಯ ಮತ್ತು ಶಾಸ್ತ್ರೀಯ ಕಲೆಗಳನ್ನು ಉತ್ತೇಜಿಸುವಲ್ಲಿ ಒಂದನೇ ರಾಜೇಂದ್ರ ಚೋಳ ಮತ್ತು ಚೋಳ ರಾಜವಂಶದ ಅಸಾಧಾರಣ ಪರಂಪರೆಯನ್ನು ಆಚರಿಸುವುದು ಈ ಉತ್ಸವದ ಪ್ರಮುಖ ಉದ್ದೇಶಗಳಾಗಿವೆ.

 

*****
 


(Release ID: 2147587)
Read this release in: English , Urdu , Hindi , Tamil