ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
ಹೆಚ್ಚಿನ ದಕ್ಷತೆಯ, ಕಡಿಮೆ ವೆಚ್ಚದ ಸಿಲಿಕಾನ್-ಪೆರೋವ್ಸ್ಕೈಟ್ ಟ್ಯಾಂಡೆಮ್ ಸೌರ ಕೋಶಗಳಲ್ಲಿ ಎನ್.ಸಿ.ಪಿ.ಆರ್.ಇ ಯ ಪ್ರವರ್ತಕ ಕಾರ್ಯವು ಭಾರತದ ಸೌರಶಕ್ತಿ ಭವಿಷ್ಯದ ದಿಕ್ಕನ್ನೇ ಬದಲಾಯಿಸುವಂತಿದೆ: ಕೇಂದ್ರ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ
ಭಾರತದ ಮಹತ್ವಾಕಾಂಕ್ಷೆಯ 100 ಗಿಗಾವಾಟ್ ಸೌರ ಮಿಷನ್ ಗೆ ಸಂಶೋಧನೆ ಮತ್ತು ಅಭಿವೃದ್ಧಿ ಮತ್ತು ಶೈಕ್ಷಣಿಕ ಬೆಂಬಲವನ್ನು ಒದಗಿಸಲು ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯವು ಕಳೆದ 15 ವರ್ಷಗಳಲ್ಲಿ ಎನ್.ಸಿ.ಪಿ.ಆರ್.ಇ, ಐ.ಐ.ಟಿ ಬಾಂಬೆಗೆ 200 ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ಒದಗಿಸಿದೆ
ಭಾರತವು ನವೀಕರಿಸಬಹುದಾದ ಇಂಧನವನ್ನು ಅಳವಡಿಸಿಕೊಳ್ಳುವುದು ಮಾತ್ರವಲ್ಲದೆ, ಪೆರೋವ್ಸ್ಕೈಟ್ ಸೌರ ಕೋಶಗಳು, ಇನ್ವರ್ಟರ್ ತಂತ್ರಜ್ಞಾನ, ಪಿವಿ-ವಿಶ್ವಾಸಾರ್ಹತೆ, ಹಸಿರು ಜಲಜನಕ ಮತ್ತು ಇಂಧನ ಸಂಗ್ರಹಣೆಯಲ್ಲಿ ಸಂಶೋಧನೆಯ ಮೂಲಕ ತನ್ನ ಭವಿಷ್ಯವನ್ನು ವ್ಯಾಖ್ಯಾನಿಸುತ್ತಿದೆ: ಶ್ರೀ ಪ್ರಲ್ಹಾದ್ ಜೋಶಿ
Posted On:
15 JUL 2025 5:40PM by PIB Bengaluru
ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಮತ್ತು ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರು ಐ.ಐ.ಟಿ ಬಾಂಬೆಯಲ್ಲಿರುವ ರಾಷ್ಟ್ರೀಯ ದ್ಯುತಿವಿದ್ಯುಜ್ಜನಕ ಸಂಶೋಧನೆ ಮತ್ತು ಶಿಕ್ಷಣ ಕೇಂದ್ರ (ಎನ್.ಸಿ.ಪಿ.ಆರ್.ಇ)ಕ್ಕೆ ಭೇಟಿ ನೀಡಿ ಅದರ ಸಂಶೋಧಕರು ಮತ್ತು ಸಲಹಾ ಮಂಡಳಿಯ ಸದಸ್ಯರೊಂದಿಗೆ ಸಂವಾದಾತ್ಮಕ ಸಭೆ ನಡೆಸಿದರು. ಶ್ರೀ ಜೋಶಿ ಅವರು ಎನ್.ಸಿ.ಪಿ.ಆರ್.ಇ ಯಲ್ಲಿ ಪೆರೋವ್ಸ್ಕೈಟ್ ಟ್ಯಾಂಡೆಮ್ ಸೌರ ಕೋಶ ಪ್ರಯೋಗಾಲಯ, ಸಿಲಿಕಾನ್ ಫ್ಯಾಬ್ ಪ್ರಯೋಗಾಲಯ ಮತ್ತು ಮಧ್ಯಮ ವೋಲ್ಟೇಜ್ ಪ್ರಯೋಗಾಲಯಕ್ಕೆ ಭೇಟಿ ನೀಡಿ ವಿಜ್ಞಾನಿಗಳೊಂದಿಗೆ ಸಂವಾದ ನಡೆಸಿದರು. ಐಐಟಿ ಬಾಂಬೆ ಅಭಿವೃದ್ಧಿಪಡಿಸಿದ ನವೋದ್ಯಮವಾದ ಅಡ್ವಾನ್ಸ್ಡ್ ರಿನ್ಯೂಯಬಲ್ ಟ್ಯಾಂಡೆಮ್-ಫೋಟೋವೋಲ್ಟಾಯಿಕ್ಸ್ ಇಂಡಿಯಾ (ಎ.ಆರ್.ಟಿ - ಪಿ.ವಿ ಇಂಡಿಯಾ), ಶೇ.29.8 ರಷ್ಟು ಪರಿವರ್ತನಾ ದಕ್ಷತೆಯೊಂದಿಗೆ 4-ಟರ್ಮಿನಲ್ ಸಿಲಿಕಾನ್/ಸಿ.ಡಿ.ಟಿ.ಈ(CdTe)-ಪೆರೋವ್ಸ್ಕೈಟ್ ಟ್ಯಾಂಡೆಮ್ ಸೌರ ಕೋಶವನ್ನು ಅಭಿವೃದ್ಧಿಪಡಿಸಿದೆ. ಇದು ರಾಷ್ಟ್ರೀಯ ಸಾಧನೆಯಾಗಿದೆ ಮತ್ತು ಭಾರತದಲ್ಲಿ ಇದುವರೆಗೆ ಸಾಧಿಸಿದ ಅತ್ಯುನ್ನತ ಕಾರ್ಯಕ್ಷಮತೆಯ ಮಟ್ಟಗಳಲ್ಲಿ ಒಂದಾಗಿದೆ.

ಭಾರತ ಸರ್ಕಾರದ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ಹಣಕಾಸು ನೆರವಿನೊಂದಿಗೆ 2010ರಲ್ಲಿ ಐಐಟಿ ಬಾಂಬೆಯಲ್ಲಿ ಎನ್.ಸಿ.ಪಿ.ಆರ್.ಇ ಪ್ರಾರಂಭವಾಯಿತು. ಭಾರತದ ಮಹತ್ವಾಕಾಂಕ್ಷೆಯ 100 ಗಿಗಾವಾಟ್ ಸೌರಶಕ್ತಿ ಮಿಷನ್ ಗೆ ಸಂಶೋಧನೆ ಮತ್ತು ಅಭಿವೃದ್ಧಿ ಮತ್ತು ಶೈಕ್ಷಣಿಕ ಬೆಂಬಲವನ್ನು ಒದಗಿಸುವುದು ಎನ್.ಸಿ.ಪಿ.ಆರ್.ಇ ಯ ವಿಶಾಲ ಉದ್ದೇಶವಾಗಿದೆ. ಇಲ್ಲಿಯವರೆಗೆ, ಸಚಿವಾಲಯವು ಕಳೆದ 15 ವರ್ಷಗಳಲ್ಲಿ ಎನ್.ಸಿ.ಪಿ.ಆರ್.ಇ, ಐಐಟಿ ಬಾಂಬೆಗೆ 200 ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ಒದಗಿಸಿದೆ.

ದೇಶೀಯ ಬೌದ್ಧಿಕ ಆಸ್ತಿಯನ್ನು ಉತ್ತೇಜಿಸಲು ಮತ್ತು ಭಾರತೀಯ ನಾವೀನ್ಯತೆಗಳನ್ನು ಜಾಗತಿಕ ಮಾರುಕಟ್ಟೆಗಳಿಗೆ ಕೊಂಡೊಯ್ಯುವ ಬದ್ಧತೆಗೆ ಅನುಗುಣವಾಗಿ, ಐಐಟಿ-ಬಾಂಬೆ ಕ್ಯಾಂಪಸ್ ನಲ್ಲಿ ಅತ್ಯಾಧುನಿಕ ಪೈಲಟ್ ಉತ್ಪಾದನಾ ಸೌಲಭ್ಯವನ್ನು ಸ್ಥಾಪಿಸಲು ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯವು ಎ.ಆರ್.ಟಿ-ಪಿ.ವಿ ಇಂಡಿಯಾಗೆ 10 ಮಿಲಿಯನ್ ಡಾಲರ್ (ಸುಮಾರು ರೂ. 83 ಕೋಟಿ) ಬೆಂಬಲವನ್ನು ನೀಡುತ್ತಿದೆ. ನಾವೀನ್ಯತೆ ಮತ್ತು ಸ್ವಾವಲಂಬನೆಯ ಆಧಾರದ ಮೇಲೆ ಭಾರತದ ನವೀಕರಿಸಬಹುದಾದ ಇಂಧನ ವಲಯವನ್ನು ಮುನ್ನಡೆಸಲು ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯವು ನೀತಿ ಮತ್ತು ಆರ್ಥಿಕ ಬೆಂಬಲವನ್ನು ನೀಡುವುದನ್ನು ಮುಂದುವರಿಸುತ್ತದೆ ಎಂದು ಕೇಂದ್ರ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಹೇಳಿದರು.

ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ, "ಭಾರತದ ಸೌರಶಕ್ತಿ ಭವಿಷ್ಯಕ್ಕೆ ಒಂದು ಪ್ರಮುಖ ಬದಲಾವಣೆ ತರುವಂತಹ, ಹೆಚ್ಚಿನ ದಕ್ಷತೆ, ಕಡಿಮೆ ವೆಚ್ಚದ ಸಿಲಿಕಾನ್-ಪೆರೋವ್ಸ್ಕೈಟ್ ಟ್ಯಾಂಡೆಮ್ ಸೌರ ಕೋಶಗಳಲ್ಲಿ ಎನ್.ಸಿ.ಪಿ.ಆರ್.ಇ ಯ ಪ್ರವರ್ತಕ ಕಾರ್ಯವನ್ನು ಬೆಂಬಲಿಸಲು ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ ಹೆಮ್ಮೆಪಡುತ್ತದೆ" ಎಂದು ಹೇಳಿದರು. ಜಗತ್ತು ದಕ್ಷ, ಕೈಗೆಟುಕುವ ಮತ್ತು ಹೆಚ್ಚಿಸಬಹುದಾದ ಸೌರಶಕ್ತಿ ಪರಿಹಾರಗಳನ್ನು ಹುಡುಕುತ್ತಿರುವ ಸಮಯದಲ್ಲಿ, ಈ ನಾವೀನ್ಯತೆಯು ಭಾರತಕ್ಕೆ ನಾಯಕತ್ವದ ಅವಕಾಶವನ್ನು ನೀಡುತ್ತದೆ ಎಂದು ಸಚಿವರು ಹೇಳಿದರು. ಈ ತಂತ್ರಜ್ಞಾನವು ಶೇ.30 ಕ್ಕಿಂತ ಹೆಚ್ಚಿನ ದಕ್ಷತೆಯನ್ನು ಸಾಧಿಸುವ ಸಾಮರ್ಥ್ಯವನ್ನು ಹೊಂದಿದೆ, ಇದು ಸಾಂಪ್ರದಾಯಿಕ ಸೌರ ಫಲಕಗಳಿಗಿಂತ ಹೆಚ್ಚಿನದಾಗಿದೆ, ಇದು ಭಾರತವನ್ನು ಮುಂದಿನ ಪೀಳಿಗೆಯ ದ್ಯುತಿವಿದ್ಯುಜ್ಜನಕಗಳಲ್ಲಿ ಜಾಗತಿಕ ನಾಯಕನನ್ನಾಗಿ ಮಾಡುತ್ತದೆ ಮತ್ತು ಅಂತಹ ನಾವೀನ್ಯತೆಗಳಲ್ಲಿ ಹೂಡಿಕೆ ಮಾಡುವ ಮೂಲಕ, ನಾವು ಸೌರಶಕ್ತಿಯ ವೆಚ್ಚವನ್ನು ಕಡಿಮೆ ಮಾಡುತ್ತಿದ್ದೇವೆ, ಇದು ಎಲ್ಲಾ ಭಾರತೀಯರಿಗೆ ಹೆಚ್ಚು ಲಭ್ಯವಾಗುವಂತೆ ಮಾಡುತ್ತಿದೆ ಎಂದು ಅವರು ಹೇಳಿದರು. ಇದು ಕೇವಲ ಪ್ರಯೋಗಾಲಯ ಮಟ್ಟದ ಪ್ರಗತಿಯಲ್ಲ, ಶುದ್ಧ, ಹೆಚ್ಚಿಸಬಹುದಾದ ಮತ್ತು ಆತ್ಮನಿರ್ಭರ ಇಂಧನ ಉತ್ಪಾದನೆಗೆ ನೀಲನಕ್ಷೆ ಎಂದು ಶ್ರೀ ಜೋಶಿ ಹೇಳಿದರು. ಭಾರತವು ನವೀಕರಿಸಬಹುದಾದ ಇಂಧನವನ್ನು ಅಳವಡಿಸಿಕೊಳ್ಳುವುದಲ್ಲದೆ, ಪೆರೋವ್ಸ್ಕೈಟ್ ಸೌರ ಕೋಶಗಳು, ಇನ್ವರ್ಟರ್ ತಂತ್ರಜ್ಞಾನ, ಪಿ.ವಿ-ವಿಶ್ವಾಸಾರ್ಹತೆ, ಹಸಿರು ಜಲಜನಕ ಮತ್ತು ಇಂಧನ ಸಂಗ್ರಹಣೆಯಲ್ಲಿ ಸಂಶೋಧನೆಯ ಮೂಲಕ ತನ್ನ ಭವಿಷ್ಯವನ್ನು ವ್ಯಾಖ್ಯಾನಿಸುತ್ತಿದೆ ಎಂದು ಕೇಂದ್ರ ಸಚಿವರು ಹೇಳಿದರು.
ಆತ್ಮನಿರ್ಭರ ಭಾರತದ ದೃಷ್ಟಿಕೋನದಡಿಯಲ್ಲಿ, ಭಾರತವನ್ನು ಶುದ್ಧ ಇಂಧನ ನಾವೀನ್ಯತೆಯಲ್ಲಿ ಮುಂಚೂಣಿಯಲ್ಲಿರಿಸಲು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯವು ಅತ್ಯಾಧುನಿಕ ನವೀಕರಿಸಬಹುದಾದ ಇಂಧನ ತಂತ್ರಜ್ಞಾನಗಳನ್ನು ಮುಂದುವರಿಸಲು ಬದ್ಧವಾಗಿದೆ ಎಂದು ಶ್ರೀ ಪ್ರಲ್ಹಾದ್ ಜೋಶಿ ಹೇಳಿದರು. ಈ ನಿಟ್ಟಿನಲ್ಲಿ, ಎನ್.ಸಿ.ಪಿ.ಆರ್.ಇ ಮತ್ತು ಐಐಟಿ ಬಾಂಬೆಯಂತಹ ಪ್ರಮುಖ ಸಂಸ್ಥೆಗಳಿಗೆ ಸಚಿವಾಲಯದ ಬೆಂಬಲವು ದೇಶೀಯ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಬಲಪಡಿಸುತ್ತದೆ, ಆಮದು ತಂತ್ರಜ್ಞಾನದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ ಮತ್ತು ದೇಶೀಯ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ನವೀಕರಿಸಬಹುದಾದ ಇಂಧನ ಸಂಶೋಧನೆ ಮತ್ತು ತಂತ್ರಜ್ಞಾನ ಅಭಿವೃದ್ಧಿ (ಆರ್.ಇ – ಆರ್.ಟಿ.ಡಿ) ಮತ್ತು ಆರ್&ಡಿ ಹಣಕಾಸು ಯೋಜನೆಗಳಂತಹ ಉಪಕ್ರಮಗಳ ಮೂಲಕ, ಸಚಿವಾಲಯವು ಎನ್.ಸಿ.ಪಿ.ಆರ್.ಇ ಯಂತಹ ಸಂಸ್ಥೆಗಳಿಗೆ ಪ್ರಯೋಗಾಲಯದಿಂದ ಮಾರುಕಟ್ಟೆಗೆ ಪರಿವರ್ತನೆಯನ್ನು ವೇಗಗೊಳಿಸಲು ಅನುವು ಮಾಡಿಕೊಡುತ್ತಿದೆ ಎಂದು ಶ್ರೀ ಜೋಶಿ ಹೇಳಿದರು. ಸಾರ್ವಜನಿಕ ಅನುದಾನಿತ ಸಂಶೋಧನೆಯು ನೀತಿ ಬೆಂಬಲದೊಂದಿಗೆ ಸೇರಿಕೊಂಡಾಗ, ಭಾರತವನ್ನು ಜಾಗತಿಕ ಶುದ್ಧ ಇಂಧನ ಕೇಂದ್ರವಾಗಿ ಹೇಗೆ ಇರಿಸಬಹುದು ಎಂಬುದನ್ನು ಎನ್.ಸಿ.ಪಿ.ಆರ್.ಇ ಯ ಕೆಲಸವು ಉದಾಹರಣೆಯಾಗಿ ತೋರಿಸಿದೆ ಎಂದು ಅವರು ಹೇಳಿದರು.
ಸಂಶೋಧನೆ ಮತ್ತು ಅಭಿವೃದ್ಧಿ ಮತ್ತು ವಾಣಿಜ್ಯೀಕರಣಕ್ಕಾಗಿ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ಕಾರ್ಯತಂತ್ರದ ಬೆಂಬಲವನ್ನು ಎತ್ತಿ ತೋರಿಸಿದ ಶ್ರೀ ಜೋಶಿ, ಪೆರೋವ್ಸ್ಕೈಟ್ ಟ್ಯಾಂಡೆಮ್ ಸೌರ ಕೋಶಗಳು ಹೆಚ್ಚಿಸಬಹುದಾದವು ಮಾತ್ರವಲ್ಲದೆ ಲಾಭದಾಯಕವೂ ಆಗಿವೆ ಎಂದು ವಾಣಿಜ್ಯಿಕವಾಗಿ ತೋರಿಸುವಂತೆ ಐಐಟಿ ಬಾಂಬೆ-ಎ.ಆರ್.ಟಿ–ಪಿ.ವಿ ತಂಡವನ್ನು ಒತ್ತಾಯಿಸಿದರು. ಸುಧಾರಿತ ತಂತ್ರಜ್ಞಾನಗಳನ್ನು ಉದ್ಯಮಕ್ಕೆ ಪ್ರವೇಶಿಸುವಂತೆ ಮಾಡುವ ಮೂಲಕ, ನಾವು ದಕ್ಷತೆಯನ್ನು ಹೆಚ್ಚಿಸುವುದಲ್ಲದೆ ಬಲವಾದ ನಾವೀನ್ಯತೆ ಪರಿಸರ ವ್ಯವಸ್ಥೆಯನ್ನು ನಿರ್ಮಿಸುತ್ತೇವೆ ಎಂದು ಅವರು ಹೇಳಿದರು. ಭಾರತೀಯ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಜಾಗತಿಕ ಮಾನದಂಡಗಳಾಗಿ ಪರಿವರ್ತಿಸುವ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರದ ಸಮಗ್ರ ದೃಷ್ಟಿಕೋನದೊಂದಿಗೆ ಈ ವಿಧಾನವು ಪರಿಪೂರ್ಣವಾಗಿ ಹೊಂದಿಕೆಯಾಗುತ್ತದೆ ಎಂದು ಶ್ರೀ ಜೋಶಿ ಹೇಳಿದರು. ಕೇಂದ್ರ ಸಚಿವ ಸಂಪುಟವು ಕೇವಲ ಎರಡು ವಾರಗಳ ಹಿಂದೆ ಸಂಶೋಧನಾ ಅಭಿವೃದ್ಧಿ ಮತ್ತು ನಾವೀನ್ಯತೆ (ಆರ್.ಡಿ.ಐ) ಯೋಜನೆಯನ್ನು ಅನುಮೋದಿಸಿದೆ ಮತ್ತು ಸಂಶೋಧನೆ ಮತ್ತು ಅಭಿವೃದ್ಧಿಯ ಒಟ್ಟು ವೆಚ್ಚ (ಜಿ.ಇ.ಆರ್.ಡಿ) 1.27 ಲಕ್ಷ ಕೋಟಿ ರೂ.ಗಳಷ್ಟಿದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಐಐಟಿ ಬಾಂಬೆ ನಿರ್ದೇಶಕ ಪ್ರೊ. ಶಿರೀಶ್ ಕೇದಾರೆ, ಎನ್.ಸಿ.ಪಿ.ಆರ್.ಇ ಪ್ರಧಾನ ಸಂಶೋಧಕ ಪ್ರೊ. ಬೇಲಾನ್ ಜಿ. ಫರ್ನಾಂಡಿಸ್ ಮತ್ತು ಎ.ಆರ್.ಟಿ-ಪಿವಿ ಇಂಡಿಯಾ ಸಹ-ಸಂಸ್ಥಾಪಕ ಪ್ರೊ. ದಿನೇಶ್ ಕಬ್ರಾ ಉಪಸ್ಥಿತರಿದ್ದರು.
*****
(Release ID: 2145059)
Visitor Counter : 2