ಆಯುಷ್
ಸಾಂಪ್ರದಾಯಿಕ ಔಷಧದಲ್ಲಿ ಕೃತಕ ಬುದ್ಧಿಮತ್ತೆ (ಎ.ಐ.) ಕುರಿತಾದ ʻವಿಶ್ವ ಆರೋಗ್ಯ ಸಂಸ್ಥೆʼಯ ಮಹತ್ವದ ಸಂಕ್ಷಿಪ್ತ ವರದಿಯಲ್ಲಿ ಭಾರತದ ʻಆಯುಷ್ʼ ಆವಿಷ್ಕಾರಗಳು ಪ್ರಸ್ತಾವಗೊಂಡಿವೆ
ಸಾಂಪ್ರದಾಯಿಕ ಜ್ಞಾನದ ಡಿಜಿಟಲ್ ಗ್ರಂಥಾಲಯವನ್ನು ಪ್ರಾರಂಭಿಸಿದ ಮೊದಲ ದೇಶ ಭಾರತ: ವಿಶ್ವ ಆರೋಗ್ಯ ಸಂಸ್ಥೆ
ʻಆಯುಷ್ʼ ವಲಯವು ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡುತ್ತದೆ: ಭಾರತದ 43.4 ಶತಕೋಟಿ ಅಮೆರಿಕನ್ ಡಾಲರ್ ಮಾರುಕಟ್ಟೆಯನ್ನು ವಿಶ್ವ ಆರೋಗ್ಯ ಸಂಸ್ಥೆ ಉಲ್ಲೇಖಿಸಿದೆ
Posted On:
12 JUL 2025 1:01PM by PIB Bengaluru
ʻವಿಶ್ವ ಆರೋಗ್ಯ ಸಂಸ್ಥೆʼಯು(ಡಬ್ಲ್ಯು.ಎಚ್.ಒ) "ಸಾಂಪ್ರದಾಯಿಕ ಔಷಧದಲ್ಲಿ ಕೃತಕ ಬುದ್ಧಿಮತ್ತೆಯ ಅನ್ವಯವನ್ನು ಗುರುತಿಸುವುದು" ಎಂಬ ತಾಂತ್ರಿಕ ವರದಿಯನ್ನು ಬಿಡುಗಡೆ ಮಾಡಿದ್ದು, ಕೃತಕ ಬುದ್ಧಿಮತ್ತೆಯನ್ನು (ಎ.ಐ.) ಸಾಂಪ್ರದಾಯಿಕ ಔಷಧ ವ್ಯವಸ್ಥೆಗಳೊಂದಿಗೆ, ವಿಶೇಷವಾಗಿ ʻಆಯುಷ್ʼ ವ್ಯವಸ್ಥೆಗಳೊಂದಿಗೆ ಸಂಯೋಜಿಸುವಲ್ಲಿ ಭಾರತದ ಪ್ರವರ್ತಕ ಪ್ರಯತ್ನಗಳನ್ನು ಗುರುತಿಸಿದೆ. ಇದು ಜಾಗತಿಕ ಆರೋಗ್ಯ ಆವಿಷ್ಕಾರದ ವಿಚಾರದಲ್ಲಿ ಮಹತ್ವದ ಮೈಲಿಗಲ್ಲು ಎನಿಸಿಕೊಂಡಿದೆ. ಈ ವಿಷಯದ ಬಗ್ಗೆ ಭಾರತದ ಪ್ರಸ್ತಾಪವನ್ನು ʻಡಬ್ಲ್ಯೂ.ಎಚ್.ಒʼ ಅನುಸರಿಸಿದ್ದು, ಇದು ಸಾಂಪ್ರದಾಯಿಕ ಔಷಧದಲ್ಲಿ ಕೃತಕ ಬುದ್ಧಿಮತ್ತೆ ಅನ್ವಯಿಕೆ ಕುರಿತಾದ ವಿಶ್ವ ಆರೋಗ್ಯ ಸಂಸ್ಥೆಯ ಚೊಚ್ಚಲ ಮಾರ್ಗಸೂಚಿ ಬಿಡುಗಡೆಗೆ ಕಾರಣವಾಗಿದೆ.
ತನ್ನ ʻಆಯುಷ್ʼ ವ್ಯವಸ್ಥೆಗಳ ಸಾಮರ್ಥ್ಯವನ್ನು ಮುನ್ನಡೆಸಲು ಮತ್ತು ವರ್ಧಿಸಲು ಕೃತಕ ಬುದ್ಧಿಮತ್ತೆಯ (ಎ.ಐ.) ಸಾಮರ್ಥ್ಯವನ್ನು ಬಳಸಿಕೊಳ್ಳುವ ಭಾರತದ ಪ್ರಯತ್ನಗಳು ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ವಿಶಾಲ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತವೆ. ಡಿಜಿಟಲ್ ಆರೋಗ್ಯ ನಾವೀನ್ಯತೆ ಮತ್ತು ಸಾಂಪ್ರದಾಯಿಕ ಔಷಧದ ಸಂಯೋಜನೆಯಲ್ಲಿ ದೇಶವನ್ನು ಜಾಗತಿಕ ನಾಯಕನನ್ನಾಗಿ ಮಾಡಲು ಮೋದಿ ಅವರು ಬಯಸಿದ್ದಾರೆ. 2023ರಲ್ಲಿ ʻಕೃತಕ ಬುದ್ಧಿಮತ್ತೆಯ ಜಾಗತಿಕ ಪಾಲುದಾರಿಕೆʼ(ಜಿ.ಪಿ.ಎ.ಐ) ಶೃಂಗಸಭೆಯನ್ನು ಉದ್ಘಾಟಿಸಿ ಮಾತನಾಡಿದ ಗೌರವಾನ್ವಿತ ಪ್ರಧಾನಿ ಮೋದಿ ಅವರು, "ನಾವು 'ಎಲ್ಲರಿಗಾಗಿ ಎ.ಐ.' ಆಶಯದಿಂದ ಪ್ರೇರಿತರಾಗಿ ಸರ್ಕಾರದ ನೀತಿಗಳು ಮತ್ತು ಕಾರ್ಯಕ್ರಮಗಳನ್ನು ಅಭಿವೃದ್ಧಿಪಡಿಸಿದ್ದೇವೆ. ಸಾಮಾಜಿಕ ಅಭಿವೃದ್ಧಿ ಮತ್ತು ಎಲ್ಲರನ್ನೂ ಒಳಗೊಂಡ ಬೆಳವಣಿಗೆಗಾಗಿ ʻಎ.ಐ.ʼ ಸಾಮರ್ಥ್ಯಗಳ ಸಂಪೂರ್ಣ ಲಾಭವನ್ನು ಪಡೆಯುವುದು ನಮ್ಮ ಪ್ರಯತ್ನವಾಗಿದೆ,ʼʼ ಎಂದು ಹೇಳಿದ್ದರು.
ಕೇಂದ್ರ ಆಯುಷ್ ಖಾತೆ ರಾಜ್ಯ ಸಚಿವ (ಸ್ವತಂತ್ರ ನಿರ್ವಹಣೆ) ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವರಾದ ಶ್ರೀ ಪ್ರತಾಪರಾವ್ ಜಾಧವ್ ಅವರು ಈ ಕುರಿತು ಮಾತನಾಡಿದರು. “ವಿಶ್ವ ಆರೋಗ್ಯ ಸಂಸ್ಥೆಯು ತನ್ನ ತಾಂತ್ರಿಕ ವರದಿಯಲ್ಲಿ ಉಲ್ಲೇಖಿಸಿರುವ ಭಾರತದ ಎ.ಐ. ಆಧರಿತ ಉಪಕ್ರಮಗಳು, ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಸಾಂಪ್ರದಾಯಿಕ ಔಷಧವನ್ನು ಮುನ್ನಡೆಸುವ ಭಾರತೀಯ ವಿಜ್ಞಾನಿಗಳ ಆಳವಾದ ಬದ್ಧತೆಯನ್ನು ಪ್ರತಿಬಿಂಬಿಸುತ್ತವೆ,ʼʼ ಎಂದು ಹೇಳಿದರು. "ಈ ಮಾನ್ಯತೆಯು ಸಾಂಪ್ರದಾಯಿಕ ಔಷಧದ ಜಾಗತಿಕ ಪ್ರಸ್ತುತತೆಯನ್ನು ವಿಸ್ತರಿಸಲು ಕೃತಕ ಬುದ್ಧಿಮತ್ತೆಯಂತಹ ಉದಯೋನ್ಮುಖ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವ ಗೌರವಾನ್ವಿತ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿಯ ಕರೆಗೆ ನಮ್ಮ ಹೊಂದಾಣಿಕೆಯನ್ನು ಒತ್ತಿಹೇಳುತ್ತದೆ. ಆಯುಷ್ ವ್ಯವಸ್ಥೆಗಳೊಂದಿಗೆ ಕೃತಕ ಬುದ್ಧಿಮತ್ತೆಯನ್ನು ಸಂಯೋಜಿಸುವ ಮೂಲಕ ಮತ್ತು ʻಸಾಹಿ (SAHI) ಪೋರ್ಟಲ್ʼ, ʻನಮಸ್ತೆ (NAMASTE) ಪೋರ್ಟಲ್ʼ ಮತ್ತು ʻಆಯುಷ್ ರಿಸರ್ಚ್ ಪೋರ್ಟಲ್ʼನಂತಹ ಕ್ರಾಂತಿಕಾರಿ ಡಿಜಿಟಲ್ ವೇದಿಕೆಗಳ ಮೂಲಕ ಭಾರತವು ತನ್ನ ಶತಮಾನಗಳಷ್ಟು ಹಳೆಯ ವೈದ್ಯಕೀಯ ಜ್ಞಾನವನ್ನು ರಕ್ಷಿಸುತ್ತಿದೆ. ಅಷ್ಟೇ ಅಲ್ಲದೆ, ವೈಯಕ್ತಿಕಗೊಳಿಸಿದ, ಪುರಾವೆ ಆಧಾರಿತ ಮತ್ತು ಜಾಗತಿಕವಾಗಿ ಲಭ್ಯವಾಗುವಂತಹ ಆರೋಗ್ಯ ರಕ್ಷಣೆಯ ಭವಿಷ್ಯವನ್ನು ರೂಪಿಸುವಲ್ಲಿ ಮುನ್ನಡೆಯುತ್ತಿದೆ,ʼʼ ಎಂದು ಹೇಳಿದರು.
ಆಯುಷ್ ಸಚಿವಾಲಯದ ಕಾರ್ಯದರ್ಶಿ ಶ್ರೀ ವೈದ್ಯ ರಾಜೇಶ್ ಕೊಟೆಚಾ ಅವರು ಮಾತನಾಡಿ, "ಪ್ರಕೃತಿ ಆಧಾರಿತ ʻಮಷಿನ್ ಲರ್ನಿಂಗ್ʼ ಮಾದರಿಗಳನ್ನು ಬಳಸಿಕೊಂಡು ಮುನ್ಸೂಚನೆಯ ರೋಗನಿರ್ಣಯದಿಂದ ಹಿಡಿದು ಆಯುರ್ವೇದ ಜ್ಞಾನ ಮತ್ತು ಆಧುನಿಕ ಜೀನೋಮಿಕ್ಸ್ ಅನ್ನು ಒಟ್ಟುಗೂಡಿಸುವ ಅದ್ಭುತ ಆಯುರ್ವೇದ ಯೋಜನೆಯವರೆಗೆ ಭಾರತ ನೇತೃತ್ವದ ಹಲವಾರು ಕ್ರಾಂತಿಕಾರಿ ಎ.ಐ.-ಆಧರಿತ ಆವಿಷ್ಕಾರಗಳನ್ನು ವಿಶ್ವ ಆರೋಗ್ಯ ಸಂಸ್ಥೆಯ ವರದಿಯು ಎತ್ತಿ ತೋರಿಸುತ್ತದೆ. ಈ ಡಿಜಿಟಲ್ ರೂಪಾಂತರದ ಕೇಂದ್ರಬಿಂದುವೆಂದರೆ ಅದು 2018ರಲ್ಲಿ ಪ್ರಾರಂಭಿಸಲಾದ ಸಮಗ್ರ ಡಿಜಿಟಲ್ ಆರೋಗ್ಯ ವೇದಿಕೆ - ʻಆಯುಷ್ ಗ್ರಿಡ್ʼ. ಇದು ʻಸಾಹಿʼ ಪೋರ್ಟಲ್, ʻನಮಸ್ತೆʼ ಪೋರ್ಟಲ್ ಮತ್ತು ʻಆಯುಷ್ ಸಂಶೋಧನಾ ಪೋರ್ಟಲ್ʼನಂತಹ ಹಲವಾರು ನಾಗರಿಕ ಕೇಂದ್ರಿತ ಉಪಕ್ರಮಗಳಿಗೆ ಅಡಿಪಾಯವಾಗಿ ಕಾರ್ಯನಿರ್ವಹಿಸುತ್ತದೆ. ಒಟ್ಟಾಗಿ, ಈ ಎ.ಐ.-ಸಶಕ್ತ ವೇದಿಕೆಗಳು ಭಾರತದ ಸಾಂಪ್ರದಾಯಿಕ ಜ್ಞಾನ ವೈದ್ಯ ಪದ್ಧತಿಗಳನ್ನು ಸಂರಕ್ಷಿಸುವುದು ಮತ್ತು ಮೌಲ್ಯೀಕರಿಸುವುದು ಮಾತ್ರವಲ್ಲದೆ ಪುರಾವೆ ಆಧಾರಿತ, ಡಿಜಿಟಲ್ ಆರೋಗ್ಯ ನೀತಿಗಳಲ್ಲಿ ತಮ್ಮ ಜಾಗತಿಕ ಏಕೀಕರಣವನ್ನು ಮುನ್ನಡೆಸುತ್ತಿವೆ,ʼʼ ಎಂದು ಹೇಳಿದರು.
ವಿಶ್ವ ಆರೋಗ್ಯ ಸಂಸ್ಥೆಯ ಈ ಪ್ರಕಟಣೆಯು ಜಾಗತಿಕ ಸಾಂಪ್ರದಾಯಿಕ ಔಷಧ ವಲಯದಲ್ಲಿ ಭಾರತದ ಬೆಳೆಯುತ್ತಿರುವ ಪ್ರಭಾವವನ್ನು ಮೌಲ್ಯೀಕರಿಸುವುದಲ್ಲದೆ, ʻಎ.ಐ.ʼ ಮತ್ತು ಆಯುಷ್ ಕ್ಷೇತ್ರದಲ್ಲಿ ಹಲವಾರು ಪ್ರಮುಖ ಭಾರತೀಯ ಆವಿಷ್ಕಾರಗಳನ್ನು ಗುರುತಿಸುತ್ತದೆ.
ಈ ವರದಿಯು ಆಯುರ್ವೇದ, ಸಿದ್ಧ, ಯುನಾನಿ, ಸೋವಾ ರಿಗ್ಪಾ ಮತ್ತು ಹೋಮಿಯೋಪತಿಯಲ್ಲಿ ಎ.ಐ.-ಚಾಲಿತ ತಂತ್ರಾಂಶಗಳ ಶ್ರೇಣಿಯನ್ನು ಪ್ರದರ್ಶಿಸುತ್ತದೆ. ಜೊತೆಗೆ ಸಾಂಪ್ರದಾಯಿಕ ವಿಧಾನಗಳಾದ ನಾಡಿಮಿಡಿತ ಓದುವಿಕೆ, ನಾಲಿಗೆ ಪರೀಕ್ಷೆ ಸೇರಿದಂತೆ ಹಲವು ರೋಗ ಪರೀಕ್ಷೆಗಳು ಹಾಗೂ ಮಷಿನ್ ಲರ್ನಿಂಗ್ ಕ್ರಮಾವಳಿಗಳು (ಅಲ್ಗರಿಥಮ್) ಮತ್ತು ಆಳವಾದ ನ್ಯೂರಲ್ ಜಾಲಗಳೊಂದಿಗೆ ಪ್ರಕೃತಿ ಚಿಕಿತ್ಸೆ ಮೌಲ್ಯಮಾಪನಗಳು ಇದರಲ್ಲಿ ಸೇರಿವೆ. ಈ ಪ್ರಯತ್ನಗಳು ರೋಗನಿರ್ಣಯದ ನಿಖರತೆಯನ್ನು ಹೆಚ್ಚಿಸುತ್ತಿವೆ ಮತ್ತು ವೈಯಕ್ತಿಕಗೊಳಿಸಿದ ರೋಗತಡೆ ಆರೈಕೆಯನ್ನು ಸಕ್ರಿಯಗೊಳಿಸುತ್ತಿವೆ.
ವಿಶ್ವ ಆರೋಗ್ಯ ಸಂಸ್ಥೆಯ ಸಂಕ್ಷಿಪ್ತ ವರದಿಯ ಒಂದು ವಿಶೇಷವೆಂದರೆ ಆಯುರ್ವೇದ ತತ್ವಗಳೊಂದಿಗೆ ಜೀನೋಮಿಕ್ಸ್ ಅನ್ನು ಸಂಯೋಜಿಸುವ ವೈಜ್ಞಾನಿಕ ಸಂಶೋಧನೆಯಾದ ʻಆಯುರ್ಜೆನಾಮಿಕ್ಸ್ʼನ ಉಲ್ಲೇಖ. ಈ ಉಪಕ್ರಮವು ರೋಗದ ಮುನ್ಸೂಚಕ ಗುರುತುಗಳನ್ನು ಗುರುತಿಸುವ ಮತ್ತು ಆಯುರ್ವೇದ ದಾಖಲೆಗಳ ಪ್ರಕಾರಗಳ ʻಎ.ಐ.ʼ ಆಧಾರಿತ ವಿಶ್ಲೇಷಣೆಯನ್ನು ಬಳಸಿಕೊಂಡು ಆರೋಗ್ಯ ಶಿಫಾರಸುಗಳನ್ನು ವೈಯಕ್ತೀಕರಿಸುವ ಗುರಿಯನ್ನು ಹೊಂದಿದೆ. ಗಿಡಮೂಲಿಕೆ ಸಂಯೋಜನೆಗಳ ಜೀನೋಮಿಕ್ ಮತ್ತು ಆಣ್ವಿಕ ಮೂಲವನ್ನು ಭೇದಿಸುವ ಮೂಲಕ ಆಧುನಿಕ ರೋಗದ ಪರಿಸ್ಥಿತಿಗಳಲ್ಲಿ ಅವುಗಳನ್ನು ಅನ್ವಯಿಕೆ ಮಾಡುವ ಪ್ರಯತ್ನಗಳನ್ನು ಈ ದಾಖಲೆಯು ಎತ್ತಿ ತೋರಿಸುತ್ತದೆ - ಇದು ಸಾಂಪ್ರದಾಯಿಕ ಜ್ಞಾನವನ್ನು ಸಮಕಾಲೀನ ವಿಜ್ಞಾನದೊಂದಿಗೆ ಸಂಯೋಜಿಸುವಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ.
ʻಸಾಂಪ್ರದಾಯಿಕ ಜ್ಞಾನ ಡಿಜಿಟಲ್ ಗ್ರಂಥಾಲಯʼ(ಟಿ.ಕೆ.ಡಿ.ಎಲ್) ನಂತಹ ಸಾಂಪ್ರದಾಯಿಕ ಜ್ಞಾನವನ್ನು ಡಿಜಿಟಲೀಕರಣಗೊಳಿಸುವ ಭಾರತದ ಉಪಕ್ರಮಗಳನ್ನು ಸ್ಥಳೀಯ ವೈದ್ಯಕೀಯ ಪರಂಪರೆಯ ಸಂರಕ್ಷಣೆ ಮತ್ತು ಜವಾಬ್ದಾರಿಯುತ ಬಳಕೆಯ ಜಾಗತಿಕ ಮಾದರಿಗಳು ಎಂದು ಶ್ಲಾಘಿಸಲಾಗಿದೆ. ಇದಲ್ಲದೆ, ಪ್ರಾಚೀನ ಪಠ್ಯಗಳ ಕ್ಯಾಟಲಾಗಿಂಗ್ ಮತ್ತು ಶಬ್ದಾರ್ಥ ವಿಶ್ಲೇಷಣೆಗಾಗಿ ಎ.ಐ.-ಚಾಲಿತ ಸಾಧನಗಳನ್ನು ಬಳಸಲಾಗುತ್ತಿದೆ, ಇದು ಪ್ರಾಚೀನ ಚಿಕಿತ್ಸಕ ಜ್ಞಾನಕ್ಕೆ ಸುಲಭ ಪ್ರವೇಶವನ್ನು ಶಕ್ತಗೊಳಿಸುತ್ತದೆ.
ವಿಶ್ವ ಆರೋಗ್ಯ ಸಂಸ್ಥೆಯು ಗುರುತಿಸಿರುವ ಮತ್ತೊಂದು ನಿರ್ಣಾಯಕ ಅಂಶವೆಂದರೆ ಔಷಧ ಕ್ರಿಯಾ ಮಾರ್ಗ ಗುರುತಿಸುವಿಕೆಗಾಗಿ ಎ.ಐ. ಬಳಕೆ; ಆಯುರ್ವೇದ, ಟಿ.ಸಿ.ಎಂ ಮತ್ತು ಯುನಾನಿಯಂತಹ ವ್ಯವಸ್ಥೆಗಳಾದ್ಯಂತ ತುಲನಾತ್ಮಕ ಅಧ್ಯಯನಗಳು ಹಾಗೂ ರಸ, ಗುಣ ಮತ್ತು ವೀರ್ಯದಂತಹ ಸಾಂಪ್ರದಾಯಿಕ ನಿಯತಾಂಕಗಳನ್ನು ನಿರ್ಣಯಿಸಲು ಕೃತಕ ರಾಸಾಯನಿಕ ಸಂವೇದಕಗಳ ಅಭಿವೃದ್ಧಿ. ಈ ತಾಂತ್ರಿಕ ಮಧ್ಯಸ್ಥಿಕೆಗಳು ಸಾಂಪ್ರದಾಯಿಕ ಸಂಯೋಜನೆಗಳನ್ನು ಮೌಲ್ಯೀಕರಿಸಲು ಮತ್ತು ಆಧುನೀಕರಿಸಲು ಸಹಾಯ ಮಾಡುತ್ತಿವೆ.
ಆನ್ಲೈನ್ ಸಮಾಲೋಚನೆಗಳಿಗಾಗಿ ಡಿಜಿಟಲ್ ವೇದಿಕೆಗಳನ್ನು ಅಳವಡಿಸಿಕೊಳ್ಳುವಲ್ಲಿ, ಆಯುಷ್ ವೈದ್ಯರಲ್ಲಿ ಡಿಜಿಟಲ್ ಸಾಕ್ಷರತೆಯನ್ನು ಉತ್ತೇಜಿಸುವಲ್ಲಿ ಮತ್ತು ಸಾಂಪ್ರದಾಯಿಕ ಔಷಧವನ್ನು ಮುಖ್ಯವಾಹಿನಿಯ ಆರೋಗ್ಯ ಸೇವೆಯೊಂದಿಗೆ ಸಂಯೋಜಿಸಲು ಪರಸ್ಪರ ಕಾರ್ಯಸಾಧ್ಯವಾದ ವ್ಯವಸ್ಥೆಗಳನ್ನು ನಿರ್ಮಿಸುವಲ್ಲಿ ಭಾರತದ ವಿಶಾಲ ಪ್ರಯತ್ನಗಳನ್ನು ಈ ವರದಿಯು ಶ್ಲಾಘಿಸಿದೆ.
ಆಯುಷ್ ಸಚಿವಾಲಯವು ಈ ಮಾನ್ಯತೆಯನ್ನು ಸಾಂಪ್ರದಾಯಿಕ ಔಷಧಕ್ಕಾಗಿ ದೃಢವಾದ ವೈಜ್ಞಾನಿಕ ಪರಿಸರ ವ್ಯವಸ್ಥೆಯನ್ನು ರೂಪಿಸುವಲ್ಲಿ ಭಾರತದ ನಾಯಕತ್ವಕ್ಕೆ ಸಂದ ಹಿರಿಮೆ ಎಂದು ಸ್ವಾಗತಿಸುತ್ತದೆ. ಕೃತಕ ಬುದ್ಧಿಮತ್ತೆ ಮತ್ತು ಸಾಂಪ್ರದಾಯಿಕ ಔಷಧಕ್ಕಾಗಿ ವಿಶ್ವ ಆರೋಗ್ಯ ಸಂಸ್ಥೆಯ ವಿಶಾಲ ನೀತಿಯ ಅಡಿಯಲ್ಲಿ ಜಾಗತಿಕ ಸಹಯೋಗ ಮತ್ತು ಜವಾಬ್ದಾರಿಯುತ ನಾವೀನ್ಯತೆಯನ್ನು ಉತ್ತೇಜಿಸುವ ದೇಶದ ಬದ್ಧತೆಯನ್ನು ಇದು ಪುನರುಚ್ಚರಿಸುತ್ತದೆ.
*****
(Release ID: 2144227)