ಪ್ರಧಾನ ಮಂತ್ರಿಯವರ ಕಛೇರಿ
G7 ಶೃಂಗಸಭೆಯ ಸಂದರ್ಭದಲ್ಲಿ ಮೆಕ್ಸಿಕೋ ಅಧ್ಯಕ್ಷರನ್ನು ಭೇಟಿಯಾದ ಪ್ರಧಾನಮಂತ್ರಿ
Posted On:
18 JUN 2025 12:08AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಕೆನಡಾದ ಕಾನನಾಸ್ಕಿಸ್ ನಲ್ಲಿ ನಡೆಯುತ್ತಿರುವ G7 ಶೃಂಗಸಭೆಯ ಸಂದರ್ಭದಲ್ಲಿ ಮೆಕ್ಸಿಕೋ ಅಧ್ಯಕ್ಷೆ, ಘನತೆವೆತ್ತ ಡಾ. ಕ್ಲೌಡಿಯಾ ಶೀನ್ ಬಾಮ್ ಪಾರ್ಡೋ ಅವರನ್ನು ಭೇಟಿಯಾದರು. ಇದು ಇಬ್ಬರು ನಾಯಕರ ನಡುವಿನ ಮೊದಲ ಭೇಟಿಯಾಗಿತ್ತು. ಪ್ರಧಾನಮಂತ್ರಿಯವರು ಐತಿಹಾಸಿಕ ವಿಜಯಕ್ಕಾಗಿ ಮೆಕ್ಸಿಕೋ ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದರು.
ಭಯೋತ್ಪಾದನೆ ವಿರುದ್ಧದ ಭಾರತದ ಹೋರಾಟಕ್ಕೆ ಮೆಕ್ಸಿಕೋ ನೀಡಿದ ಬೆಂಬಲಕ್ಕಾಗಿ ಪ್ರಧಾನಮಂತ್ರಿಯವರು ಅಧ್ಯಕ್ಷೆ ಶೀನ್ ಬಾಮ್ ಅವರಿಗೆ ಧನ್ಯವಾದ ಅರ್ಪಿಸಿದರು. ಭಾರತ ಮತ್ತು ಮೆಕ್ಸಿಕೋ ನಡುವಿನ ಐತಿಹಾಸಿಕ ಸ್ನೇಹ ಸಂಬಂಧಗಳನ್ನು ಒತ್ತಿ ಹೇಳಿದ ಉಭಯ ನಾಯಕರು, ವ್ಯಾಪಾರ, ಹೂಡಿಕೆ, ನವೋದ್ಯಮಗಳು(ಸ್ಟಾರ್ಟ್ಅಪ್ ಗಳು) ನಾವೀನ್ಯತೆ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ವಾಹನ ಉದ್ಯಮ ವಲಯಗಳಲ್ಲಿ ಸಂಬಂಧಗಳನ್ನು ಮತ್ತಷ್ಟು ವಿಸ್ತರಿಸಲು ಮತ್ತು ಜನ-ಜನರ ನಡುವಿನ ವಿನಿಮಯವನ್ನು ಉತ್ತೇಜಿಸಲು ಒಪ್ಪಿಕೊಂಡರು. ಎರಡೂ ದೇಶಗಳ ನಡುವೆ ಬೆಳೆಯುತ್ತಿರುವ ವ್ಯಾಪಾರ ಮತ್ತು ಹೂಡಿಕೆ ಸಹಕಾರದ ಬಗ್ಗೆ ಸಂತೃಪ್ತಿ ವ್ಯಕ್ತಪಡಿಸಿದ ನಾಯಕರು, 'ನಿಯರ್-ಶೋರಿಂಗ್' ನ (ಕಂಪನಿಯು ತನ್ನ ಉತ್ಪಾದನೆಯನ್ನು ಹತ್ತಿರದ ನೆರೆಯ ದೇಶಕ್ಕೆ ಸ್ಥಳಾಂತರಿಸುವ ಪ್ರಕ್ರಿಯೆ) ಹಿನ್ನೆಲೆಯಲ್ಲಿ ಮೆಕ್ಸಿಕೋ ಒದಗಿಸುತ್ತಿರುವ ಅವಕಾಶಗಳ ಬಗ್ಗೆ ಚರ್ಚಿಸಿದರು. ಕೈಗೆಟುಕುವ ದರದ ಗುಣಮಟ್ಟದ ಔಷಧಗಳು ಮತ್ತು ಇತರ ಔಷಧೀಯ ಉತ್ಪನ್ನಗಳನ್ನು ಪೂರೈಸುವ ಮತ್ತು ಉತ್ಪಾದಿಸುವಲ್ಲಿ ಭಾರತವು ಪ್ರಮುಖ ಪಾತ್ರ ವಹಿಸಬಹುದಾದ ಔಷಧ ವಲಯ ಹಾಗೂ ಕೃಷಿ ಮತ್ತು ಸಮಗ್ರ ಆರೋಗ್ಯ ಕ್ಷೇತ್ರಗಳಲ್ಲಿನ ಅವಕಾಶಗಳು ಚರ್ಚೆಯಲ್ಲಿ ಪ್ರಮುಖವಾಗಿ ಪ್ರಸ್ತಾಪವಾದವು.
ತಂತ್ರಜ್ಞಾನ, ನಾವೀನ್ಯತೆ ಮತ್ತು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದಲ್ಲಿ ಭಾರತದ ಸಾಧನೆಗಳ ಬಗ್ಗೆ ಅಧ್ಯಕ್ಷೆ ಶೀನ್ ಬಾಮ್ ಅವರು ಮೆಚ್ಚುಗೆ ವ್ಯಕ್ತಪಡಿಸಿದರು ಈ ಕ್ಷೇತ್ರಗಳಲ್ಲಿ ಭಾರತದೊಂದಿಗೆ ಸಹಕರಿಸುವ ಇಚ್ಛೆಯನ್ನು ಅವರು ವ್ಯಕ್ತಪಡಿಸಿದರು. ಸೆಮಿಕಂಡಕ್ಟರ್ ಗಳು, ಕೃತಕ ಬುದ್ಧಿಮತ್ತೆ (AI), ಕ್ವಾಂಟಮ್ ಮತ್ತು ನಿರ್ಣಾಯಕ ಖನಿಜಗಳ ಕ್ಷೇತ್ರಗಳಲ್ಲಿ ಎರಡೂ ದೇಶಗಳು ಸಹಯೋಗವನ್ನು ಅನ್ವೇಷಿಸಬೇಕು ಎಂದು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. ಉಭಯ ದೇಶಗಳ "ಚಿಂತಕರ ಚಾವಡಿ" (ಥಿಂಕ್-ಟ್ಯಾಂಕ್) ಸಮುದಾಯಗಳ ನಡುವಿನ ಮುಂಬರುವ ಕಾರ್ಯಕ್ರಮಗಳನ್ನು ಮತ್ತು ಚೈತನ್ಯಪೂರ್ಣ ಸಾಂಸ್ಕೃತಿಕ ಹಾಗೂ ಜನ-ಜನರ ನಡುವಿನ ಬಾಂಧವ್ಯವನ್ನು ನಾಯಕರು ಪ್ರಸ್ತಾಪಿಸಿದರು, ಇದು ಪ್ರವಾಸೋದ್ಯಮದ ಹರಿವನ್ನೂ ಉತ್ತೇಜಿಸಲಿದೆ.
ಪಾಲುದಾರ ರಾಷ್ಟ್ರಗಳಾಗಿ, ನಾಯಕರು ತುರ್ತು ಜಾಗತಿಕ ಮತ್ತು ಪ್ರಾದೇಶಿಕ ಸಮಸ್ಯಗಳು ಹಾಗೂ 'ಗ್ಲೋಬಲ್ ಸೌತ್' ನ ಆದ್ಯತೆಗಳ ಕುರಿತು ಅಭಿಪ್ರಾಯ ವಿನಿಮಯ ಮಾಡಿಕೊಂಡರು. ಪ್ರಧಾನಮಂತ್ರಿಯವರು ತಮ್ಮ 2016ರ ಮೆಕ್ಸಿಕೋ ಭೇಟಿಯನ್ನು ಪ್ರೀತಿಯಿಂದ ಸ್ಮರಿಸಿದರು ಮತ್ತು ಭಾರತಕ್ಕೆ ಭೇಟಿ ನೀಡುವಂತೆ ಅಧ್ಯಕ್ಷೆ ಶೀನ್ ಬಾಮ್ ಅವರಿಗೆ ಆಹ್ವಾನ ನೀಡಿದರು.
*****
(Release ID: 2137184)
Read this release in:
Odia
,
Malayalam
,
Gujarati
,
English
,
Urdu
,
Marathi
,
Hindi
,
Manipuri
,
Bengali
,
Assamese
,
Punjabi
,
Tamil
,
Telugu