ಗೃಹ ವ್ಯವಹಾರಗಳ ಸಚಿವಾಲಯ
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ದೆಹಲಿಯಲ್ಲಿ ಯಮುನಾ ಶುದ್ಧೀಕರಣ, ಕುಡಿಯುವ ನೀರು ಮತ್ತು ಒಳಚರಂಡಿ ವ್ಯವಸ್ಥೆ ಕುರಿತು ಸಭೆ ನಡೆಸಿದರು, ಸಮಗ್ರ ವಿಧಾನದೊಂದಿಗೆ ಕೆಲಸ ಮಾಡಲು ನಿರ್ದೇಶನ ನೀಡಿದರು
ಯಮುನಾ ಕೇವಲ ನದಿ ಮಾತ್ರವಲ್ಲ, ನಮಗೆ ನಂಬಿಕೆಯ ಸಂಕೇತವಾಗಿದೆ, ಅದಕ್ಕಾಗಿಯೇ ಅದರ ಸ್ವಚ್ಛತೆ ನರೇಂದ್ರ ಮೋದಿ ಸರ್ಕಾರದ ಆದ್ಯತೆಯಾಗಿದೆ
ಜಲಶಕ್ತಿ ಸಚಿವಾಲಯವು ಎಲ್ಲಾ ಒಳಚರಂಡಿ ಸಂಸ್ಕರಣಾ ಘಟಕಗಳಿಗೆ ಎಸ್‌ಒಪಿಯನ್ನು ರಚಿಸಬೇಕು, ಅದು ಅವುಗಳ ಗುಣಮಟ್ಟ, ನಿರ್ವಹಣೆ ಮತ್ತು ವಿಸರ್ಜನೆಗೆ ಮಾನದಂಡಗಳನ್ನು ಸ್ಥಾಪಿಸುತ್ತದೆ; ಎಸ್‌ಒಪಿಯನ್ನು ಇತರ ಎಲ್ಲಾ ರಾಜ್ಯಗಳೊಂದಿಗೆ ಹಂಚಿಕೊಳ್ಳಬೇಕು
ದೆಹಲಿಯಲ್ಲಿ ಯಮುನಾ, ಕುಡಿಯುವ ನೀರು ಮತ್ತು ಒಳಚರಂಡಿಗೆ ಸಂಬಂಧಿಸಿದಂತೆ ನಾವು ಮಾಡುವ ಯಾವುದೇ ಯೋಜನೆಯನ್ನು ಮುಂದಿನ 20 ವರ್ಷಗಳನ್ನು ಗಮನದಲ್ಲಿಟ್ಟುಕೊಂಡು ಮಾಡಬೇಕು
ಯಮುನಾ ಶುದ್ಧೀಕರಣದಲ್ಲಿ ದೆಹಲಿ ಜಲ ಮಂಡಳಿ ಪ್ರಮುಖ ಪಾತ್ರ ವಹಿಸುತ್ತದೆ, ಅದನ್ನು ಬಲಪಡಿಸುವುದು ಅವಶ್ಯಕ, ದೆಹಲಿ ಜಲ ಮಂಡಳಿಯಲ್ಲಿ ಖಾಲಿ ಇರುವ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಬೇಕು
ದೆಹಲಿಯಲ್ಲಿ ನೀರು ಸರಬರಾಜಿಗೆ, ಜಲಮಂಡಳಿ ಪೈಪ್‌ಲೈನ್‌ಗಳಲ್ಲಿ ಸೋರಿಕೆಯನ್ನು ತಡೆಗಟ್ಟುವುದರ ಜತೆಗೆ ನೀರು ವಿತರಣಾ ರಚನೆಯನ್ನು ಬಲಪಡಿಸಬೇಕು
Posted On:
22 MAY 2025 6:20PM by PIB Bengaluru
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ನವದೆಹಲಿಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಯಮುನಾ ನದಿಯನ್ನು ಸ್ವಚ್ಛಗೊಳಿಸಲು, ಕುಡಿಯುವ ನೀರು ಸರಬರಾಜನ್ನು ಖಚಿತಪಡಿಸಿಕೊಳ್ಳಲು ಮತ್ತು ದೆಹಲಿಯಲ್ಲಿ ಒಳಚರಂಡಿ ವ್ಯವಸ್ಥೆಯನ್ನು ಸುಧಾರಿಸಲು ಸಮಗ್ರ ವಿಧಾನವನ್ನು ಅಳವಡಿಸಿಕೊಳ್ಳಲು ನಿರ್ದೇಶನ ನೀಡಿದರು. ಸಭೆಯಲ್ಲಿ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಶ್ರೀ ಮನೋಹರ್ ಲಾಲ್, ಕೇಂದ್ರ ಜಲಶಕ್ತಿ ಸಚಿವ ಶ್ರೀ ಸಿ.ಆರ್.ಪಾಟೀಲ್, ದೆಹಲಿ ಮುಖ್ಯಮಂತ್ರಿ ಶ್ರೀಮತಿ ರೇಖಾ ಗುಪ್ತಾ, ಕೇಂದ್ರ ಗೃಹ ಕಾರ್ಯದರ್ಶಿ, ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಮತ್ತು ಜಲಶಕ್ತಿ ಸಚಿವಾಲಯದ ಕಾರ್ಯದರ್ಶಿಗಳು, ದೆಹಲಿಯ ಮುಖ್ಯ ಕಾರ್ಯದರ್ಶಿ ಮತ್ತು ಕೇಂದ್ರ ಮತ್ತು ದೆಹಲಿ ಸರ್ಕಾರಗಳ ಹಲವಾರು ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಗೃಹ ಸಚಿವರು ಮತ್ತು ಸಹಕಾರ ಸಚಿವರು, ಯಮುನಾ ಕೇವಲ ನದಿ ಮಾತ್ರವಲ್ಲ, ನಂಬಿಕೆಯ ಸಂಕೇತವಾಗಿದೆ, ಅದರ ಸ್ವಚ್ಛತೆಯು ನರೇಂದ್ರ ಮೋದಿ ಸರ್ಕಾರದ ಆದ್ಯತೆಯಾಗಿದೆ ಎಂದು ಹೇಳಿದರು. ಜಲಶಕ್ತಿ ಸಚಿವಾಲಯವು ಎಲ್ಲಾ ಒಳಚರಂಡಿ ಸಂಸ್ಕರಣಾ ಘಟಕಗಳಿಗೆ (ಎಸ್‌ಟಿಪಿ) ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನವನ್ನು (ಎಸ್‌ಒಪಿ) ಅಭಿವೃದ್ಧಿಪಡಿಸಬೇಕು, ಅವುಗಳ ಗುಣಮಟ್ಟ, ನಿರ್ವಹಣೆ ಮತ್ತು ವಿಸರ್ಜನೆಗೆ ಮಾನದಂಡಗಳನ್ನು ಸ್ಥಾಪಿಸಬೇಕು ಎಂದು ಶ್ರೀ ಅಮಿತ್ ಶಾ ಹೇಳಿದರು. ಈ ಎಸ್‌ಒಪಿಯನ್ನು ಇತರ ರಾಜ್ಯಗಳೊಂದಿಗೆ ಹಂಚಿಕೊಳ್ಳಬೇಕು ಎಂದು ಅವರು ಒತ್ತಿ ಹೇಳಿದರು.
ದೆಹಲಿಯಲ್ಲಿ ಯಮುನಾ, ಕುಡಿಯುವ ನೀರು ಮತ್ತು ಒಳಚರಂಡಿ ಯೋಜನೆಗಳನ್ನು 20 ವರ್ಷಗಳ ದೂರದೃಷ್ಟಿಯೊಂದಿಗೆ ರೂಪಿಸಬೇಕು ಎಂದು ಶ್ರೀ ಅಮಿತ್ ಶಾ ಒತ್ತಿ ಹೇಳಿದರು. ಯಮುನಾವನ್ನು ಸ್ವಚ್ಛಗೊಳಿಸುವಲ್ಲಿ ದೆಹಲಿ ಜಲ ಮಂಡಳಿಯ ನಿರ್ಣಾಯಕ ಪಾತ್ರವನ್ನು ಅವರು ಬಿಂಬಿಸಿದರು ಮತ್ತು ಅದನ್ನು ಬಲಪಡಿಸುವ ಅಗತ್ಯವನ್ನು ಒತ್ತಿ ಹೇಳಿದರು, ಇದೇ ವೇಳೆ ಮಂಡಳಿಯಲ್ಲಿಖಾಲಿ ಇರುವ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡುವಂತೆ ನಿರ್ದೇಶನ ನೀಡಿದರು.

ದೆಹಲಿಯ ನೀರು ವಿತರಣಾ ದಕ್ಷತೆಯನ್ನು ಹೆಚ್ಚಿಸುವ ಅಗತ್ಯವನ್ನು ಕೇಂದ್ರ ಗೃಹ ಸಚಿವರು ಒತ್ತಿಹೇಳಿದರು, ನಗರದಾದ್ಯಂತ ಕುಡಿಯುವ ನೀರು ಸರಬರಾಜನ್ನು ಖಚಿತಪಡಿಸಿಕೊಳ್ಳಲು ಪರಿಣಾಮಕಾರಿ ನೀರಿನ ನಿರ್ವಹಣೆ ಅತ್ಯಗತ್ಯ ಎಂದು ಹೇಳಿದರು. ದೆಹಲಿಯಲ್ಲಿ ನೀರು ಸರಬರಾಜಿಗಾಗಿ, ಜಲ ಮಂಡಳಿಯು ಪೈಪ್‌ಲೈನ್‌ಗಳಲ್ಲಿ ಸೋರಿಕೆಯನ್ನು ತಡೆಗಟ್ಟುವುದರ ಜತೆಗೆ ನೀರು ವಿತರಣಾ ರಚನೆಯನ್ನು ಬಲಪಡಿಸಬೇಕು ಎಂದು ಅವರು ಹೇಳಿದರು. ಚರಂಡಿಗಳ ಹೂಳೆತ್ತಲು ವಿಶ್ವದರ್ಜೆಯ ತಂತ್ರಜ್ಞಾನದ ಬಳಕೆಯನ್ನು ಶ್ರೀ ಅಮಿತ್ ಶಾ ಪ್ರತಿಪಾದಿಸಿದರು.
*****
(Release ID: 2130670)