ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
azadi ka amrit mahotsav

ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರು ಡಿಪೋ ದರ್ಪಣ್ ಪೋರ್ಟಲ್ ಮತ್ತು ಡಿಜಿಟಲ್ ಪ್ಲಾಟ್‌ಫಾರ್ಮ್‌ ಗಳಾದ ಅನ್ನ ಮಿತ್ರ ಮತ್ತು ಅನ್ನ ಸಹಾಯತ  ಉದ್ಘಾಟಿಸಿದರು


ಸರ್ಕಾರದ ಕಲ್ಯಾಣ ಯೋಜನೆಗಳನ್ನು ಕೊನೆಯ ವ್ಯಕ್ತಿಗೆ ತಲುಪಿಸುವುದು ನಮ್ಮ ಗುರಿ: ಶ್ರೀ ಜೋಶಿ

ಪ್ರಕ್ರಿಯೆಯ ದಕ್ಷತೆ, ಆದಾಯ ವರ್ಧನೆ ಮತ್ತು ಅತ್ಯುತ್ತಮ ಸ್ಥಳ ಬಳಕೆಯ ಮೂಲಕ ಡಿಪೋ ದರ್ಪಣ್, ಭಾರತೀಯ ಆಹಾರ ನಿಗಮ ಮತ್ತು ಕೇಂದ್ರ ಗೋದಾಮು ನಿಗಮದಲ್ಲಿ ಕೋಟ್ಯಂತರ ರೂಪಾಯಿಗಳನ್ನು ಉಳಿತಾಯ ಮಾಡುವ ಸಾಮರ್ಥ್ಯವನ್ನು ಹೊಂದಿದೆ: ಶ್ರೀ ಜೋಶಿ

Posted On: 20 MAY 2025 6:07PM by PIB Bengaluru

ಭಾರತದ ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು (ಪಿಡಿಎಸ್) ಪರಿವರ್ತಿಸುವ ಗುರಿಯನ್ನು ಹೊಂದಿರುವ ಡಿಪೋ ದರ್ಪಣ್ ಪೋರ್ಟಲ್ ಮತ್ತು ಡಿಜಿಟಲ್ ಪ್ಲಾಟ್‌ಫಾರ್ಮ್‌ ಗಳಾದ ಅನ್ನ ಮಿತ್ರ ಮತ್ತು ಅನ್ನ ಸಹಾಯತ ಎಂಬ ಮೂರು ಪ್ರಮುಖ ಡಿಜಿಟಲ್ ಉಪಕ್ರಮಗಳನ್ನು ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಶ್ರೀ ಪ್ರಲ್ಹಾದ್ ಜೋಶಿ ಇಂದು ಉದ್ಘಾಟಿಸಿದರು. ಇಂದು ಇಲ್ಲಿ ನಡೆದ ಈ ಉದ್ಘಾಟನಾ ಕಾರ್ಯಕ್ರಮವು ಪಾರದರ್ಶಕತೆಯನ್ನು ಹೆಚ್ಚಿಸುವ, ಮೂಲಸೌಕರ್ಯವನ್ನು ಸುಧಾರಿಸುವ ಮತ್ತು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿಯಲ್ಲಿ 81 ಕೋಟಿಗೂ ಹೆಚ್ಚು ಜನರಿಗೆ ಸಬ್ಸಿಡಿ ಆಹಾರ ಧಾನ್ಯಗಳ ವಿತರಣೆಯಲ್ಲಿ ತೊಡಗಿರುವ ಫಲಾನುಭವಿಗಳು ಮತ್ತು ಮುಂಚೂಣಿ ಕಾರ್ಮಿಕರನ್ನು ಸಬಲೀಕರಣಗೊಳಿಸುವ ಮಹತ್ವದ ಹೆಜ್ಜೆಯಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಜೋಶಿ ಅವರು ಸಮಾಜದ ಅತ್ಯಂತ ದುರ್ಬಲ ವರ್ಗಗಳನ್ನು ತಲುಪುವ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದರು. "ಸರ್ಕಾರದ ಕಲ್ಯಾಣ ಯೋಜನೆಗಳನ್ನು ಕೊನೆಯ ವ್ಯಕ್ತಿಗೆ ತಲುಪಿಸುವುದು ನಮ್ಮ ಗುರಿಯಾಗಿದೆ. ಸಮಾಜದ ಅತ್ಯಂತ ದುರ್ಬಲರು ನಮ್ಮ ಕಾರ್ಯಕ್ರಮಗಳಿಂದ ಪ್ರಯೋಜನ ಪಡೆಯಬೇಕು" ಎಂದು ಅವರು ಹೇಳಿದರು. ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಒದಗಿಸಲಾದ ವ್ಯಾಪಕ ಆಹಾರ ಬೆಂಬಲವನ್ನು ಅವರು ನೆನಪಿಸಿಕೊಂಡರು. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿ 80 ಕೋಟಿಗೂ ಹೆಚ್ಚು ವ್ಯಕ್ತಿಗಳು ಉಚಿತ ಆಹಾರ ಧಾನ್ಯಗಳನ್ನು ಪಡೆಯುತ್ತಿದ್ದಾರೆ.

ಭಾರತದ ವ್ಯಾಪಕವಾದ ಪಿಡಿಎಸ್ ಮೂಲಸೌಕರ್ಯವನ್ನು ಕೇಂದ್ರ ಸಚಿವರು ಒತ್ತಿ ಹೇಳಿದರು, 5.38 ಲಕ್ಷಕ್ಕೂ ಹೆಚ್ಚು ನ್ಯಾಯಬೆಲೆ ಅಂಗಡಿಗಳನ್ನು ಹೊಂದಿರುವ ದೇಶವು ಕೆಲವು ರಾಷ್ಟ್ರಗಳ ಜನಸಂಖ್ಯೆಗಿಂತ ದೊಡ್ಡದಾದ ವಿತರಣಾ ಜಾಲವನ್ನು ಹೊಂದಿದೆ ಎಂದು ಅವರು ಹೇಳಿದರು. ಜಾಗತಿಕ ಹಣದುಬ್ಬರದ ಒತ್ತಡಗಳ ಹೊರತಾಗಿಯೂ, ಭಾರತವು ಕಡಿಮೆ ಹಣದುಬ್ಬರ ಮಟ್ಟವನ್ನು ಕಾಯ್ದುಕೊಂಡಿದೆ ಮತ್ತು ಸಾರವರ್ಧಿತ ಅಕ್ಕಿ ವಿತರಣೆಯಂತಹ ಕ್ರಮಗಳ ಮೂಲಕ ಪೌಷ್ಠಿಕಾಂಶದ ಭದ್ರತೆಯನ್ನು ಬಲಪಡಿಸಿದೆ ಎಂದು ಅವರು ಹೇಳಿದರು.

ಇತ್ತೀಚೆಗೆ ಬಿಡುಗಡೆಯಾದ ಗೃಹಬಳಕೆ ವೆಚ್ಚ ಸಮೀಕ್ಷೆಯನ್ನು ಉಲ್ಲೇಖಿಸಿದ ಅವರು, ಆಹಾರಕ್ಕಾಗಿ ಮನೆಯ ಖರ್ಚು ಶೇ.50 ರಷ್ಟು ಕಡಿಮೆಯಾಗಿದೆ ಎಂದು ಹೇಳಿದರು. ಇದು ಹೆಚ್ಚಿದ ಕೈಗೆಟುಕುವಿಕೆ ಮತ್ತು ಹಾಲು, ಮೊಟ್ಟೆ, ಬೇಳೆಕಾಳುಗಳು ಮತ್ತು ಮೀನುಗಳಂತಹ ಅಗತ್ಯ ಆಹಾರ ಪದಾರ್ಥಗಳ ಉತ್ತಮ ಲಭ್ಯತೆಯಿಂದ ಸಾಧ್ಯವಾಗಿದೆ ಎಂದು ಅವರು ಹೇಳಿದರು. ಒಂದು ರಾಷ್ಟ್ರ ಒಂದು ಪಡಿತರ ಚೀಟಿ ಯೋಜನೆಯ ಪರಿಣಾಮವನ್ನು ಅವರು ಒತ್ತಿ ಹೇಳಿದರು, ಇದು ಫಲಾನುಭವಿಗಳು ದೇಶದ ಯಾವುದೇ ಭಾಗದಿಂದ ಸಬ್ಸಿಡಿ ಆಹಾರ ಧಾನ್ಯಗಳನ್ನು ಪಡೆಯಲು ಅನುವು ಮಾಡಿಕೊಟ್ಟಿದೆ, ಸಾಗಣೆ ಮತ್ತು ಪಾರದರ್ಶಕತೆಯನ್ನು ಹೆಚ್ಚಿಸುತ್ತದೆ ಎಂದು ಅವರು ಹೇಳಿದರು.

ಡಿಪೋ ದರ್ಪಣ್‌ ನಲ್ಲಿನ ಮೌಲ್ಯಮಾಪನದ ಪ್ರಕ್ರಿಯೆಯನ್ನು ಶ್ರೀ ಜೋಶಿ ಅವರು ಪ್ರಮುಖವಾಗಿ ವಿವರಿಸಿದರು ಮತ್ತು ಪ್ರಕ್ರಿಯೆಯ ದಕ್ಷತೆಯ ಮೂಲಕ ಎಫ್‌ ಸಿ ಐ ಒಡೆತನದ ಡಿಪೋಗಳಲ್ಲಿ ಸುಮಾರು ₹275 ಕೋಟಿ ಉಳಿತಾಯ ಮಾಡುವ ಮತ್ತು ಸಿಡಬ್ಲ್ಯೂಸಿ ನಿರ್ವಹಿಸುವ ಆಹಾರ ಧಾನ್ಯ ಗೋದಾಮುಗಳಲ್ಲಿ ಅತ್ಯುತ್ತಮ ಸ್ಥಳ ಬಳಕೆಯ ಮೂಲಕ ಸುಮಾರು ₹140 ಕೋಟಿ ಆದಾಯ ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಿದರು.

ಪ್ರಕ್ರಿಯೆಯ ಸುಧಾರಣೆಗಳಿಗೆ ಸಮಾನಾಂತರವಾಗಿ, ಮೌಲ್ಯಮಾಪನವು ಎಫ್‌ ಸಿ ಐ ಮತ್ತು ಸಿಡಬ್ಲ್ಯೂಸಿ ಗೋದಾಮು ಸೌಲಭ್ಯಗಳಲ್ಲಿ ಕಾರ್ಯಾಚರಣೆಯ ದಕ್ಷತೆ ಮತ್ತು ಸೇವಾ ಗುಣಮಟ್ಟಕ್ಕೆ ಅಡ್ಡಿಯಾಗುವ ನಿರ್ಣಾಯಕ ಮೂಲಸೌಕರ್ಯ ಕೊರತೆಯನ್ನು ಬಹಿರಂಗಪಡಿಸಿದೆ, ಇದು ಈ ಕೊರತೆಯನ್ನು ಪರಿಹರಿಸಲು ಮತ್ತು ಎಲ್ಲಾ ಗೋದಾಮುಗಳನ್ನು "ಅತ್ಯುತ್ತಮ" ಶ್ರೇಣೀಕರಣಕ್ಕೆ ಮೇಲ್ದರ್ಜೆಗೇರಿಸಲಾಗಿರುವುದನ್ನು ಖಚಿತಪಡಿಸಿಕೊಳ್ಳಲು ಗಮನಾರ್ಹ ಬಂಡವಾಳ ವೆಚ್ಚವನ್ನು ಯೋಜಿಸಲಾಗಿದೆ, ಸಿಡಬ್ಲ್ಯೂಸಿಗೆ ₹280 ಕೋಟಿ ಮತ್ತು ಎಫ್‌ ಸಿ ಐ ಗೆ ₹1000 ಕೋಟಿ ಬಜೆಟ್ ನಿಗದಿಪಡಿಸಲಾಗಿದೆ ಎಂದು ಅವರು ಹೇಳಿದರು.

ಡಿಪೋ ದರ್ಪಣ್ ಒಂದು ಡಿಜಿಟಲ್ ಸ್ವಯಂ-ಮೌಲ್ಯಮಾಪನ ಮತ್ತು ಮೇಲ್ವಿಚಾರಣಾ ಪೋರ್ಟಲ್ ಆಗಿದ್ದು, ಡಿಪೋ ಅಧಿಕಾರಿಗಳು ತಮ್ಮ ಕಾರ್ಯಾಚರಣೆಗಳನ್ನು ವ್ಯವಸ್ಥಿತವಾಗಿ ಮೌಲ್ಯಮಾಪನ ಮಾಡಲು ಮತ್ತು ಸುಧಾರಿಸಲು ಅಧಿಕಾರ ನೀಡುವ ಗುರಿಯನ್ನು ಹೊಂದಿದೆ. ಆಹಾರ ಧಾನ್ಯ ಡಿಪೋಗಳು ಗೋದಾಮಿನ ಶ್ರೇಷ್ಠತೆಯ ಅತ್ಯುನ್ನತ ಮಾನದಂಡಗಳನ್ನು ಸಾಧಿಸಲು ಸಹಾಯ ಮಾಡಲು ವಿನ್ಯಾಸಗೊಳಿಸಲಾದ ಈ ವೇದಿಕೆಯು ಸುರಕ್ಷತಾ ಮಾನದಂಡಗಳು, ಪರಿಸರ ಸುಸ್ಥಿರತೆ ಮತ್ತು ಶಾಸನಬದ್ಧ ಅನುಸರಣೆಯಂತಹ ಮೂಲಸೌಕರ್ಯ ನಿಯತಾಂಕಗಳು ಮತ್ತು ಆಕ್ಯುಪೆನ್ಸಿ ಮಟ್ಟಗಳು, ಲಾಭದಾಯಕತೆ ಮತ್ತು ಶೇಖರಣಾ ದಕ್ಷತೆಯಂತಹ ಕಾರ್ಯಾಚರಣೆಯ ನಿಯತಾಂಕಗಳನ್ನು ಆಧರಿಸಿ ಸಂಯೋಜಿತ ರೇಟಿಂಗ್ ಅನ್ನು ನೀಡುತ್ತದೆ. ಸುಧಾರಿತ ತಂತ್ರಜ್ಞಾನಗಳನ್ನು ಬಳಸಿಕೊಂಡು, ಡಿಪೋ ದರ್ಪಣ್ ಪರಿಸರ ಮತ್ತು ದಾಸ್ತಾನು ಪರಿಸ್ಥಿತಿಗಳ ನೈಜ-ಸಮಯದ ಮೇಲ್ವಿಚಾರಣೆಗಾಗಿ ಐಒಟಿ ಸಂವೇದಕಗಳು, ಸುಧಾರಿತ ಭದ್ರತೆಗಾಗಿ ಸಿಸಿಟಿವಿ ಕಣ್ಗಾವಲು ಮತ್ತು ಮಾಹಿತಿಯುಕ್ತ, ಡೇಟಾ-ಚಾಲಿತ ನಿರ್ಧಾರ ತೆಗೆದುಕೊಳ್ಳುವಿಕೆ ಮತ್ತು ನಿರಂತರ ಸುಧಾರಣೆಯನ್ನು ಬೆಂಬಲಿಸಲು ವಿಶ್ಲೇಷಣೆಯೊಂದಿಗೆ ಲೈವ್ ವೀಡಿಯೊ ಫೀಡ್‌ ಗಳನ್ನು ಸಂಯೋಜಿಸುತ್ತದೆ.

ಭಾರತ ಸರ್ಕಾರದ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯ ಕಾರ್ಯದರ್ಶಿ ಶ್ರೀ ಸಂಜೀವ್ ಚೋಪ್ರಾ ಅವರ ಪ್ರಕಾರ, ಈ ಉಪಕ್ರಮವು ವಿಕಸಿತ ಭಾರತದ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ ಮತ್ತು ಡಿಪೋಗಳ ಮೂಲಸೌಕರ್ಯ ಮತ್ತು ಕಾರ್ಯಾಚರಣೆಯ ದಕ್ಷತೆಯಲ್ಲಿ ಸುಧಾರಣೆಗಳನ್ನು ತರುತ್ತದೆ. ಕಾರ್ಯಾಚರಣೆಯ ಕಾರ್ಯಕ್ಷಮತೆ ಮತ್ತು ಮೂಲಸೌಕರ್ಯ ಮಾನದಂಡಗಳ 60:40 ಅನುಪಾತದಲ್ಲಿ ಡಿಪೋಗಳನ್ನು ನಿರ್ಣಯಿಸುವ ಶ್ರೇಣೀಕರಣ ಚೌಕಟ್ಟನ್ನು ಪರಿಚಯಿಸಲಾಗಿದೆ. ಮಾಪನಗಳಲ್ಲಿ ಸಂಗ್ರಹಣೆ ಮತ್ತು ಸಾಗಣೆ ನಷ್ಟ, ಸ್ಥಳ ಬಳಕೆ, ಮಾನವಶಕ್ತಿ ದಕ್ಷತೆ ಮತ್ತು ಲಾಭದಾಯಕತೆ ಸೇರಿವೆ. ಶ್ರೇಷ್ಠತೆಯನ್ನು ಸಾಧಿಸುವ ಡಿಪೋಗಳಿಗೆ ಐದು ನಕ್ಷತ್ರಗಳ ರೇಟಿಂಗ್‌ ಗಳನ್ನು ನೀಡಲಾಗುತ್ತದೆ. ಸ್ಮಾರ್ಟ್ ಗೋದಾಮು ತಂತ್ರಜ್ಞಾನಗಳನ್ನು ಪ್ರಸ್ತುತ ಪ್ರಾಯೋಗಿಕವಾಗಿ ಬಳಸಲಾಗುತ್ತಿದ್ದು, ವರ್ಷದ ಅಂತ್ಯದ ವೇಳೆಗೆ ದೇಶಾದ್ಯಂತ ವಿಸ್ತರಿಸುವ ನಿರೀಕ್ಷೆಯಿದೆ.

ಇದಲ್ಲದೆ, ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವರು, ರಾಜ್ಯ ಸಚಿವರಾದ ಶ್ರೀಮತಿ ನಿಮುಬೆನ್ ಜಯಂತಿಭಾಯಿ ಬಂಭಾನಿಯಾ ಮತ್ತು ಶ್ರೀ ಬಿ.ಎಲ್. ವರ್ಮಾ ಅವರೊಂದಿಗೆ, ಸಾರ್ವಜನಿಕ ವಿತರಣಾ ವ್ಯವಸ್ಥೆಯ (ಪಿಡಿಎಸ್) ಪ್ರಮುಖ ಕ್ಷೇತ್ರ ಮಟ್ಟದ ಪಾಲುದಾರರಿಗೆ ಅಗತ್ಯ ಕಾರ್ಯಾಚರಣೆಯ ದತ್ತಾಂಶಕ್ಕೆ ಸುರಕ್ಷಿತ, ನೈಜ-ಸಮಯದ ಪ್ರವೇಶವನ್ನು ನೀಡುವ 'ಅನ್ನ ಮಿತ್ರ' ಮೊಬೈಲ್ ಅಪ್ಲಿಕೇಶನ್ ಗೆ ಚಾಲನೆ ನೀಡಿದರು. ಜೊತೆಗೆ ಪಿಎಂಜಿಕೆಎವೈ ಫಲಾನುಭವಿಗಳಲ್ಲಿ ಪ್ರವೇಶ, ಸ್ಪಂದಿಸುವಿಕೆ ಮತ್ತು ಪಾರದರ್ಶಕತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಸುಧಾರಿತ ಕುಂದುಕೊರತೆ ನಿವಾರಣಾ ವ್ಯವಸ್ಥೆಯಾದ 'ಅನ್ನ ಸಹಾಯತ' ಅಪ್ಲಿಕೇಶನ್ ಗೂ ಚಾಲನೆ ನೀಡಿದರು.

ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಪ್ರಮುಖ ಪಾಲುದಾರರ ನಿರ್ದಿಷ್ಟ ಕಾರ್ಯಾಚರಣೆಯ ಅಗತ್ಯಗಳನ್ನು ಪೂರೈಸಲು ಅನ್ನ ಮಿತ್ರ ಅಪ್ಲಿಕೇಶನ್ ವಿನ್ಯಾಸಗೊಳಿಸಲಾಗಿದೆ. ಎಫ್‌ ಪಿ ಎಸ್ ಡೀಲರ್‌‌ ಗಳಿಗೆ, ಇದು ಸ್ಟಾಕ್ ರಶೀದಿಗಳನ್ನು ವೀಕ್ಷಿಸಲು, ಮಾಸಿಕ ಮಾರಾಟ ವರದಿಗಳನ್ನು ಪ್ರವೇಶಿಸಲು ಮತ್ತು ಅಧಿಕಾರಿಗಳಿಂದ ಸಕಾಲಿಕ ಎಚ್ಚರಿಕೆಗಳನ್ನು ಪಡೆಯಲು ನೆರವಾಗುತ್ತದೆ. ಡಿ ಎಫ್‌ ಎಸ್‌ ಒ ಅಧಿಕಾರಿಗಳು ಎಫ್‌ ಪಿ ಎಸ್‌ ಕಾರ್ಯಕ್ಷಮತೆಯನ್ನು ಮೇಲ್ವಿಚಾರಣೆ ಮಾಡಲು, ಕುಂದುಕೊರತೆಗಳನ್ನು ಟ್ರ್ಯಾಕ್ ಮಾಡಲು ಮತ್ತು ನಿರ್ವಹಿಸಲು ಮತ್ತು ವಿವರವಾದ ಫಲಾನುಭವಿ ಡೇಟಾವನ್ನು ಪ್ರವೇಶಿಸಲು ಅನುವು ಮಾಡಿಕೊಡುವ ವೈಶಿಷ್ಟ್ಯಗಳಿಂದ ಪ್ರಯೋಜನ ಪಡೆಯುತ್ತಾರೆ. ಆಹಾರ ನಿರೀಕ್ಷಕರು ಜಿಯೋ-ಟ್ಯಾಗ್ ಮಾಡಲಾದ ತಪಾಸಣೆಗಳನ್ನು ನಡೆಸಲು, ಸ್ಟಾಕ್ ವಿತರಣೆಯ ನಿಖರತೆಯನ್ನು ಪರಿಶೀಲಿಸಲು ಮತ್ತು ಎಫ್‌ ಪಿ ಎಸ್ ರೇಟಿಂಗ್‌‌ ಗಳನ್ನು ಪರಿಶೀಲಿಸಲು ಅಪ್ಲಿಕೇಶನ್ ಅನ್ನು ಬಳಸಿಕೊಳ್ಳಬಹುದು, ಪೂರೈಕೆ ಸರಪಳಿಯಾದ್ಯಂತ ಹೆಚ್ಚಿನ ಹೊಣೆಗಾರಿಕೆ ಮತ್ತು ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಬಹುದು.

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (ಪಿಎಂಜಿಕೆಎವೈ) ಯ 81 ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ ಸೇವೆ ಒದಗಿಸಲು ವಿನ್ಯಾಸಗೊಳಿಸಲಾದ ಅನ್ನ ಸಹಾಯತ ನಾಗರಿಕ-ಮೊದಲು ಕುಂದುಕೊರತೆ ಪರಿಹಾರ ವೇದಿಕೆಯನ್ನು, ಪ್ರವೇಶ, ಹೊಣೆಗಾರಿಕೆ ಮತ್ತು ದಕ್ಷತೆಯ ಆಧಾರಸ್ತಂಭಗಳ ಮೇಲೆ ರೂಪಿಸಲಾಗಿದೆ. ಇದು WhatsApp, IVRS ಮತ್ತು ಸ್ವಯಂಚಾಲಿತ ಧ್ವನಿ ಗುರುತಿಸುವಿಕೆ (ASR) ಯಂತಹ ಆಧುನಿಕ ಸಾಧನಗಳನ್ನು ಬಳಸಿಕೊಂಡು ಕುಂದುಕೊರತೆಗಳನ್ನು ಸಂದೇಶ ಕಳುಹಿಸುವ ಅಥವಾ ಕರೆ ಮಾಡವ ಮೂಲಕ ದಾಖಲಿಸಬಹುದು.

ಪ್ರಸ್ತುತ ಬಿಡುಗಡೆಯಲ್ಲಿ, ಅನ್ನ ಮಿತ್ರ ಅಸ್ಸಾಂ, ಉತ್ತರಾಖಂಡ, ತ್ರಿಪುರ ಮತ್ತು ಪಂಜಾಬ್ ನಾಲ್ಕು ರಾಜ್ಯಗಳನ್ನು ಒಳಗೊಂಡಿದೆ ಮತ್ತು ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಲಭ್ಯವಿದೆ. ಅನ್ನ ಸಹಾಯತ ಪ್ರಾಯೋಗಿಕ ಹಂತದಲ್ಲಿ ಐದು ರಾಜ್ಯಗಳನ್ನು ಒಳಗೊಂಡಿದೆ - ಗುಜರಾತ್, ಜಾರ್ಖಂಡ್, ತೆಲಂಗಾಣ, ತ್ರಿಪುರ ಮತ್ತು ಉತ್ತರ ಪ್ರದೇಶ. ಇದು ಹಿಂದಿ, ಗುಜರಾತಿ, ತೆಲುಗು, ಬಾಂಗ್ಲಾ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಲಭ್ಯವಿದೆ, ರಾಜ್ಯ ವ್ಯವಸ್ಥೆಗಳು ಸಂಯೋಜಿಸಲ್ಪಟ್ಟಂತೆ ಅಂತಿಮವಾಗಿ ಎರಡೂ ವ್ಯವಸ್ಥೆಗಳನ್ನು ಭಾರತದಾದ್ಯಂತ ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಾರಿಗೆ ತರಲಾಗುತ್ತದೆ.

ಎರಡೂ ಪ್ಲಾಟ್‌ಫಾರ್ಮ್‌ ಗಳು ಕಲ್ಯಾಣ ಕಾರ್ಯಕ್ರಮಗಳ ವಿತರಣೆಯಲ್ಲಿ ಪಾರದರ್ಶಕತೆ, ವೇಗ ಮತ್ತು ದಕ್ಷತೆಯನ್ನು ಹೆಚ್ಚಿಸುವ ಡಿಜಿಟಲ್ ಇಂಡಿಯಾದ ದೃಷ್ಟಿಕೋನಕ್ಕೆ ಅನುಗುಣವಾಗಿವೆ. ಇಂತಹ ಉಪಕ್ರಮಗಳೊಂದಿಗೆ, ಇಲಾಖೆಯು ಉತ್ತಮ ಆಡಳಿತಕ್ಕಾಗಿ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಗುರಿಯನ್ನು ಹೊಂದಿದೆ. ಪ್ರಧಾನ ಮಂತ್ರಿಯವರ ದೃಷ್ಟಿಕೋನಕ್ಕೆ ಅನುಗುಣವಾಗಿ ಕುಂದುಕೊರತೆ ಪರಿಹಾರ ಪ್ರಕ್ರಿಯೆ ಮತ್ತು ಮೂಲಭೂತ ಕಾರ್ಯಾಚರಣೆಗಳನ್ನು ಹೆಚ್ಚು ಸುಲಭ, ನಾಗರಿಕ ಸ್ನೇಹಿ ಮತ್ತು ಪರಿಣಾಮಕಾರಿಯಾಗಿ ಮಾಡುತ್ತದೆ.

ಈ ಪ್ಲಾಟ್‌ಫಾರ್ಮ್‌ ಗಳನ್ನು ಪ್ರಾರಂಭಿಸುವುದರೊಂದಿಗೆ, ಭಾರತ ಸರ್ಕಾರವು ಪ್ರತಿಯೊಬ್ಬ ಭಾರತೀಯನಿಗೂ ಆಹಾರ ಭದ್ರತೆಯನ್ನು ಖಾತ್ರಿಪಡಿಸುವ ಡಿಜಿಟಲ್ ಶಕ್ತ, ನಾಗರಿಕ ಕೇಂದ್ರಿತ ಮತ್ತು ಪಾರದರ್ಶಕ ಸಾರ್ವಜನಿಕ ವಿತರಣಾ ವ್ಯವಸ್ಥೆಯ ದೃಷ್ಟಿಕೋನವನ್ನು ಬಲಪಡಿಸುತ್ತದೆ.

 

*****

 


(Release ID: 2130055)
Read this release in: English , Urdu , Marathi