ವಾರ್ತಾ ಮತ್ತು ಪ್ರಸಾರ ಸಚಿವಾಲಯ
ವೇವ್ಸ್: ಜಾಗತಿಕ ಸ್ಟ್ರೀಮಿಂಗ್ ಮತ್ತು ಚಲನಚಿತ್ರ ಆರ್ಥಿಕತೆಯಲ್ಲಿ ಭಾರತದ ವಿಕಾಸಗೊಳ್ಳುತ್ತಿರುವ ಪಾತ್ರದ ಪರಿಶೀಲನೆ
"ಕಂಟೆಂಟ್ ನಿಜವಾಗಿಯೂ ಗಡಿಗಳನ್ನು ದಾಟಿ ಪ್ರಯಾಣಿಸಲು, ಭಾರತವು ಸ್ಟುಡಿಯೋ ಮೂಲಸೌಕರ್ಯ, ನಿರ್ಮಾಣ ಕೇಂದ್ರಗಳು ಮತ್ತು ತಂತ್ರಜ್ಞಾನ-ಚಾಲಿತ ಪರಿಸರ ವ್ಯವಸ್ಥೆಗಳಲ್ಲಿ ಹೂಡಿಕೆ ಮಾಡಬೇಕು" ಎಂದು ಶಿಬಾಸಿಶ್ ಸರ್ಕಾರ್ ಹೇಳಿದ್ದಾರೆ
ಸೃಜನಾತ್ಮಕ ಅಪಾಯಗಳನ್ನು ತೆಗೆದುಕೊಳ್ಳುವುದು ಅತ್ಯಗತ್ಯವಾದರೂ, ಕಂಟೆಂಟ್ ಗಳ ಸಂಗ್ರಹವನ್ನು ಸಮತೋಲನಗೊಳಿಸಬೇಕು ಮತ್ತು ರಚನಾತ್ಮಕವಾಗಿ ಜೋಡಿಸಬೇಕು: ಏಕ್ತಾ ಕಪೂರ್
Posted On:
02 MAY 2025 5:29PM
|
Location:
PIB Bengaluru
ಇಂದು ಮುಂಬೈನಲ್ಲಿ ನಡೆದ "ಜಾಗತಿಕ ಚಲನಚಿತ್ರ ಮತ್ತು ಸ್ಟ್ರೀಮಿಂಗ್ ಆರ್ಥಿಕತೆಯಲ್ಲಿ ಭಾರತದ ಬೆಳೆಯುತ್ತಿರುವ ಪಾತ್ರ" ಕುರಿತ ಆಸಕ್ತಿದಾಯಕ ಗೋಷ್ಠಿಯಲ್ಲಿ ಮಾಧ್ಯಮ ಮತ್ತು ಕಂಟೆಂಟ್ ಭವಿಷ್ಯವನ್ನು ರೂಪಿಸುತ್ತಿರುವ ಪ್ರಮುಖ ಗಣ್ಯರು ಪಾಲ್ಗೊಂಡಿದ್ದರು.ಅವರಲ್ಲಿ ಎರೋಸ್ ನೌ ಮತ್ತು ಮ್ಜಾಲೋ (ಎಕ್ಸ್ಫೈನೈಟ್ ಗ್ಲೋಬಲ್) ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ವಿಕ್ರಮ್ ತನ್ನಾ; ಭಾರತೀಯ ಚಲನಚಿತ್ರ ನಿರ್ಮಾಪಕರ ಒಕ್ಕೂಟದ ಅಧ್ಯಕ್ಷ ಶ್ರೀ ಶಿಬಾಸಿಶ್ ಸರ್ಕಾರ್; ಬಾಲಾಜಿ ಟೆಲಿಫಿಲ್ಮ್ಸ್ನ ಜಂಟಿ ವ್ಯವಸ್ಥಾಪಕ ನಿರ್ದೇಶಕಿ ಶ್ರೀಮತಿ ಏಕ್ತಾ ಆರ್. ಕಪೂರ್; ಮತ್ತು ಗೂಗಲ್ನ ಆಂಡ್ರಾಯ್ಡ್ ಟಿವಿಯ ಉಪಾಧ್ಯಕ್ಷೆ ಹಾಗೂ ಜನರಲ್ ಮ್ಯಾನೇಜರ್ ಕುಮಾರಿ ಶಾಲಿನಿ ಗೋವಿಲ್ ಪೈ ಅವರು ಪ್ರಮುಖರಾಗಿದ್ದರು.
ಭಾರತದ ಆಳವಾಗಿ ಬೇರೂರಿರುವ ಕಥೆ ಹೇಳುವ ಸಂಪ್ರದಾಯವನ್ನು ಎತ್ತಿ ತೋರಿಸಿದ ಶ್ರೀ ಶಿಬಾಸಿಶ್ ಸರ್ಕಾರ್, ಒಂದು ಶತಮಾನದ ಹಿಂದಿನ ಭಾರತೀಯ ಚಿತ್ರರಂಗದಿಂದ ಹಿಡಿದು ಇಂದಿನ ಕ್ರಿಯಾತ್ಮಕ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ಗಳವರೆಗೆ ಆದ ವಿಕಾಸದ ಬಗ್ಗೆ ಮಾತನಾಡಿದರು. ಸ್ಟ್ರೀಮಿಂಗ್ ಭಾರತೀಯ ಕಥೆಗಳನ್ನು ಜಾಗತಿಕ ಪ್ರೇಕ್ಷಕರಿಗೆ ತಲುಪಿಸಿದೆ ಎಂದು ಅವರು ಪ್ರತಿಪಾದಿಸಿದರು. ಆದಾಗ್ಯೂ, ಕಂಟೆಂಟ್ ನಿಜಕ್ಕೂ ಎಲ್ಲೆಡೆ ಪಸರಿಸಲು, ಭಾರತವು ಸ್ಟುಡಿಯೋ ಮೂಲಸೌಕರ್ಯ, ನಿರ್ಮಾಣ ಕೇಂದ್ರಗಳು ಮತ್ತು ತಂತ್ರಜ್ಞಾನ ಆಧಾರಿತ ಪರಿಸರ ವ್ಯವಸ್ಥೆಗಳಲ್ಲಿ ಬಂಡವಾಳ ಹೂಡಿಕೆ ಮಾಡಬೇಕು ಎಂದು ಅವರು ತಿಳಿಸಿದರು. ಸಾಂಸ್ಥಿಕ ಬಂಡವಾಳ ಬೆಂಬಲಕ್ಕಾಗಿ ಒಂದು ನಿರ್ದಿಷ್ಟವಾದ, ರಾಷ್ಟ್ರವ್ಯಾಪಿ ಕಾರ್ಯತಂತ್ರದ ಅಗತ್ಯವಿದೆ ಎಂದೂ ಅವರು ಕರೆ ನೀಡಿದರು.
ಜಾಗತಿಕ ಯಶಸ್ಸಿಗೆ ಆಕರ್ಷಕ ಕಥಾ ನಿರೂಪಣೆಯೇ ಮುಖ್ಯ ಎಂದು ಬಲವಾಗಿ ಪ್ರತಿಪಾದಿಸಿದ ಶ್ರೀಮತಿ ಏಕ್ತಾ ಆರ್. ಕಪೂರ್ ಅವರು, ಒಂದು ಕಥೆಯು ಎಷ್ಟು ಹೆಚ್ಚು ಸಾಮ್ಯತೆ ಮತ್ತು ಭಾವನಾತ್ಮಕ ಆಳವನ್ನು ಹೊಂದಿರುತ್ತದೋ, ಅಷ್ಟೇ ಅದು ಅಂತರರಾಷ್ಟ್ರೀಯ ಪ್ರೇಕ್ಷಕರನ್ನು ತಲುಪುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಹೇಳಿದರು. ನೋವು, ಪ್ರೀತಿ ಮತ್ತು ಭರವಸೆಯಂತಹ ಭಾವನೆಗಳು ಜಾಗತಿಕವಾಗಿ ಒಂದೇ ಆಗಿರುತ್ತವೆ ಎಂದು ಅವರು ತಿಳಿಸಿದರು. ಸೃಜನಾತ್ಮಕ ಸಾಹಸಗಳನ್ನು ಮಾಡುವುದು ಅಗತ್ಯವಾದರೂ, ಹೂಡಿಕೆಗಳ ಅಪಾಯವನ್ನು ಕಡಿಮೆಗೊಳಿಸಲು ಮತ್ತು ಸ್ಪರ್ಧಾತ್ಮಕ ಪರಿಸರದಲ್ಲಿ ದೀರ್ಘಕಾಲೀನ ಅಸ್ತಿತ್ವವನ್ನು ಖಚಿತಪಡಿಸಿಕೊಳ್ಳಲು ಕಂಟೆಂಟ್ ಗಳ ಸಂಗ್ರಹವನ್ನು ಸಮತೋಲನಗೊಳಿಸಿ ವ್ಯವಸ್ಥಿತಗೊಳಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಕುಮಾರಿ ಶಾಲಿನಿ ಗೋವಿಲ್ ಪೈ ಅವರು ಜಾಗತೀಕರಣವು ಇಂದಿನ ವಿಷಯ ಜಗತ್ತಿನ ಅತಿ ದೊಡ್ಡ ಬದಲಾವಣೆಯಾಗಿದೆ ಎಂದು ಅಭಿಪ್ರಾಯಪಟ್ಟರು. ತಂತ್ರಜ್ಞಾನವು ವಿತರಣೆಯ ಎಲ್ಲ ಅಡೆತಡೆಗಳನ್ನು ದಾಟಿ, ಕಥೆಗಳನ್ನು ಜಾಗತಿಕ ಮಟ್ಟದಲ್ಲಿ ವಿಸ್ತರಿಸಲು ಸುಲಭಗೊಳಿಸಿದೆ ಎಂದು ಅವರು ತೋರಿಸಿದರು. ಕೃತಕ ಬುದ್ಧಿಮತ್ತೆ (AI), ಪ್ರೊಡಕ್ಷನ್ ವೇಗಗೊಳಿಸುವ, ಹೆಚ್ಚು ದಕ್ಷವಾಗಿಸುವ ಮತ್ತು ದತ್ತಾಂಶ ಆಧಾರಿತವಾಗಿಸುವ ಮೂಲಕ ಕಂಟಂಟ್ ಕ್ರಿಯೇಟ್ ಮಾಡುವ ದಿಕ್ಕನ್ನೇ ಬದಲಾಯಿಸುತ್ತಿದೆ ಎಂದು ಅವರು ಹೇಳಿದರು. ಭಾರತೀಯ ಕ್ರಿಯೇಟರ್ ಗಳು ಸಾಂಪ್ರದಾಯಿಕ ಮಾರ್ಗಗಳನ್ನು ಬಿಟ್ಟು AI ಮತ್ತು ತಂತ್ರಜ್ಞಾನವನ್ನು ಮುಂಚೂಣಿಯಲ್ಲಿಟ್ಟುಕೊಂಡು ಎಲ್ಲೆಡೆಯ ಪ್ರೇಕ್ಷಕರನ್ನು ತಲುಪುವ ಕಥೆಗಳನ್ನು ನೀಡಬೇಕು ಎಂದು ಅವರು ಕರೆ ನೀಡಿದರು. ಕಂಟೆಂಟ್ ಹುಡುಕುವುದು ಈಗ ಬಹಳ ಮುಖ್ಯವಾಗಿದ್ದು, ಮುಂದಿನ ಯಶಸ್ಸು ಸ್ಮಾರ್ಟ್ ನ್ಯಾವಿಗೇಷನ್, ಸುಲಭವಾಗಿ ಹುಡುಕುವಿಕೆ ಮತ್ತು ತಂತ್ರಜ್ಞಾನ ಆಧಾರಿತ ಕಥಾ ನಿರೂಪಣೆಯ ಮೇಲೆ ನಿಂತಿದೆ ಎಂದು ಅವರು ತಿಳಿಸಿದರು.
ಭಾರತದ ಡಿಜಿಟಲ್-ಪ್ರಧಾನ ಪ್ರೇಕ್ಷಕರ ವರ್ತನೆಯು ಕಥೆ ಹೇಳುವ ವಿಧಾನಗಳಲ್ಲಿ ಬದಲಾವಣೆಯನ್ನು ಅಪೇಕ್ಷಿಸುತ್ತದೆ ಎಂದು ಅಭಿಪ್ರಾಯಪಟ್ಟ ಶ್ರೀ ವಿಕ್ರಮ್ ತನ್ನಾ ಅವರು, ಗಮನದ ಅವಧಿ ಕಡಿಮೆಯಾಗುತ್ತಿರುವುದರಿಂದ ಮತ್ತು ಮೊಬೈಲ್ ಬಳಕೆಯು ಹೆಚ್ಚುತ್ತಿರುವುದರಿಂದ, ಕಂಟೆಂಟ್ ಧ್ವನಿ-ಪ್ರಧಾನ, ಅಭಿಪ್ರಾಯ-ಆಧಾರಿತ ಮತ್ತು ತಲ್ಲೀನಗೊಳಿಸುವಂತಿರಬೇಕು ಎಂದು ಪ್ರತಿಪಾದಿಸಿದರು. ಯಶಸ್ಸಿಗೆ ಮೂರು ಮುಖ್ಯ ಅಂಶಗಳನ್ನು ಅವರು ವಿವರಿಸಿದರು: ತಂತ್ರಜ್ಞಾನದ ಮರು ವ್ಯಾಖ್ಯಾನ, ಅನುಭವ-ಕೇಂದ್ರಿತ ನಿರೂಪಣೆಗಳ ರಚನೆ ಮತ್ತು ನಿಷ್ಠಾವಂತ ಅಭಿಮಾನಿಗಳನ್ನು ಗಳಿಸುವ ಐಪಿಗಳ ನಿರ್ಮಾಣ. ಜನರೇಟಿವ್ AI ಕ್ರಿಯೇಟರ್ ಮತ್ತು ಪ್ಲಾಟ್ಫಾರ್ಮ್ಗಳಿಗೆ ಸಮಾನವಾಗಿ ಆಟ ಬದಲಾಯಿಸುವ ಅವಕಾಶವನ್ನು ನೀಡುತ್ತದೆ, ಇದು ಕಥೆ ಹೇಳುವಿಕೆಯನ್ನು ತೊಡಗಿಸಿಕೊಳ್ಳಲು, ಹಣಗಳಿಸಲು ಮತ್ತು ವೈಯಕ್ತೀಕರಿಸಲು ಹೊಸ ಮಾರ್ಗಗಳನ್ನು ಒದಗಿಸುತ್ತದೆ ಎಂದು ಅವರು ಗುರುತಿಸಿದರು.
ಅಧಿವೇಶನವು ಭಾರತವು ಜಾಗತಿಕ ಕಂಟೆಂಟ್ ಶಕ್ತಿಕೇಂದ್ರವಾಗಲು ಉತ್ತಮವಾಗಿ ಸಿದ್ಧವಾಗಿರುವುದೆಂಬ ದೃಷ್ಟಿಕೋನದೊಂದಿಗೆ ಮುಕ್ತಾಯವಾಯಿತು. ಮೂಲಸೌಕರ್ಯದಲ್ಲಿ ಕಾರ್ಯತಂತ್ರದ ಹೂಡಿಕೆ, ತಂತ್ರಜ್ಞಾನದ ದಿಟ್ಟ ಬಳಕೆ ಮತ್ತು ಅಧಿಕೃತ ಕಥೆ ಹೇಳುವಿಕೆಗೆ ಬದ್ಧತೆ ಇತ್ಯಾದಿಗಳ ಮೂಲಕ, ಭಾರತ ಮುಂದಿನ ಜಾಗತಿಕ ಮಾಧ್ಯಮ ಇನೋವೇಶನ್ ನ ಮುಂದಿನ ಹಂತವನ್ನು ಮುನ್ನಡೆಸಲು ಸಾಧ್ಯವೆಂದು ಅಭಿಪ್ರಾಯಪಟ್ಟರು.
*****
Release ID:
(Release ID: 2126610)
| Visitor Counter:
7