WAVES BANNER 2025
ವಾರ್ತಾ ಮತ್ತು ಪ್ರಸಾರ ಸಚಿವಾಲಯ

ವೇವ್ಸ್ 2025: ಮಾಧ್ಯಮ ಮತ್ತು ಮನರಂಜನಾ ವಲಯದಲ್ಲಿ ಲಭ್ಯತೆ ಕುರಿತು ಚರ್ಚೆ; ಎಲ್ಲರನ್ನೂ ಒಳಗೊಳ್ಳುವ ಇನೋವೇಶನ್ ಮತ್ತು ನೀತಿ ಸುಧಾರಣೆಗೆ ತಜ್ಞರ ಆಗ್ರಹ


ಲಭ್ಯತೆಯು ಕೇವಲ ನಿಯಮ ಪಾಲನೆಯ ಟಿಕ್ ಗುರುತಾಗಿರಬಾರದು, ಬದಲಿಗೆ ಸೃಜನಾತ್ಮಕ, ನೈತಿಕ ಮತ್ತು ಕಾರ್ಯತಂತ್ರದ ಅತ್ಯಗತ್ಯ ಅಂಶವಾಗಿರಬೇಕು

ಭಾರತವು ಕೇವಲ ಇತರರನ್ನು ಹಿಂಬಾಲಿಸುತ್ತಿಲ್ಲ; ಹಲವು ವಿಧಗಳಲ್ಲಿ, ಎಲ್ಲರನ್ನು ಒಳಗೊಳ್ಳುವ ವಿನ್ಯಾಸದ ಕುರಿತ ಸಂವಾದವನ್ನು ಮುನ್ನಡೆಸುತ್ತಿದ್ದೇವೆ" - ಬ್ರಿಜ್ ಕೊಠಾರಿ

"ಲಭ್ಯತೆಯನ್ನು ಹೇಗೆ ಅನುಷ್ಠಾನಗೊಳಿಸಲಾಗುತ್ತದೆ ಎಂಬುದರಲ್ಲಿ ವ್ಯವಸ್ಥಿತ ಬದಲಾವಣೆಗಾಗಿ ನಾವು ಈಗ ಬುನಾದಿ ಹಾಕುತ್ತಿದ್ದೇವೆ": ಕ್ರಿಸ್ಟೋಫರ್ ಪ್ಯಾಟ್ನೋ, ಮುಖ್ಯಸ್ಥರು, ಲಭ್ಯತೆ ಮತ್ತು ಅಂಗವೈಕಲ್ಯ ಸೇರ್ಪಡೆ ವಿಭಾಗ, ಗೂಗಲ್

 Posted On: 02 MAY 2025 5:20PM |   Location: PIB Bengaluru

ಇಂದು ವೇವ್ಸ್ 2025ರಲ್ಲಿ "ಮಾಧ್ಯಮ ಮತ್ತು ಮನರಂಜನಾ ವಲಯದಲ್ಲಿ ಲಭ್ಯತೆ ಮಾನದಂಡಗಳು" ಕುರಿತಂತೆ ಒಂದು ಆಳವಾದ ಚಿಂತನೆಗೆ ಹಚ್ಚುವ ಗೋಷ್ಠಿ ಗಮನ ಸೆಳೆಯಿತು. ಕಂಟೆಂಟ್‌ ಕ್ರಿಯೇಷನ್  ಮತ್ತು ವಿತರಣೆಯಲ್ಲಿ ಪ್ರವೇಶಿಸುವಿಕೆಯು ಹೇಗೆ ಬದಲಾಗುತ್ತಿದೆ ಮತ್ತು ಭಾರತದ ಡಿಜಿಟಲ್ ಕ್ರಾಂತಿಯ ಪಯಣದಲ್ಲಿ ಇದಕ್ಕೆ ಏಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು ಎಂಬುದನ್ನು ಪರಿಶೀಲಿಸಲು ಶಿಕ್ಷಣ, ತಂತ್ರಜ್ಞಾನ, ನೀತಿ ನಿರೂಪಣೆ, ಕಾನೂನು ಮತ್ತು ಪತ್ರಿಕೋದ್ಯಮ ಕ್ಷೇತ್ರಗಳ ಪ್ರಮುಖ ಚಿಂತಕರು ಚರ್ಚಿಸಿದರು.

ಖ್ಯಾತ ಐಐಟಿ ದೆಹಲಿಯ ಪ್ರಾಧ್ಯಾಪಕ ಬ್ರಿಜ್ ಕೊಠಾರಿ ಅವರು ಅಧಿವೇಶನವನ್ನು ಉದ್ಘಾಟಿಸಿ ಮಾತನಾಡುತ್ತಾ, "ಭಾರತವು ಲಭ್ಯತೆ ಸಾಧ್ಯತೆಯನ್ನು ಮರುವ್ಯಾಖ್ಯಾನಿಸುವಲ್ಲಿ ಮುಂಚೂಣಿಯಲ್ಲಿದೆ. ನಾವು ಕೇವಲ ಇತರರನ್ನು ಹಿಂಬಾಲಿಸುತ್ತಿಲ್ಲ, ಬದಲಾಗಿ ಅಂತರ್ಗತ ವಿನ್ಯಾಸದ ಕುರಿತಾದ ಚರ್ಚೆಯಲ್ಲಿ ಅನೇಕ ವಿಧಗಳಲ್ಲಿ ಮುಂದಾಳತ್ವವನ್ನು ವಹಿಸುತ್ತಿದ್ದೇವೆ" ಎಂದು ಹೇಳಿದರು. ಕೇವಲ ದೃಷ್ಟಿ ಅಥವಾ ಶ್ರವಣದೋಷವುಳ್ಳವರಿಗೆ ಮಾತ್ರವಲ್ಲದೆ, 1.4 ಶತಕೋಟಿಗೂ ಹೆಚ್ಚು ನಾಗರಿಕರಿಗೆ ಪ್ರಯೋಜನವನ್ನು ನೀಡುವ ಸಾರ್ವತ್ರಿಕ ವಿನ್ಯಾಸ ತತ್ವ ಇದಾಗಿದೆ ಎಂದು ಅವರು ತಿಳಿಸಿದರು.

ಗೂಗಲ್ ನ, ಯುರೋಪ್, ಮಧ್ಯಪ್ರಾಚ್ಯ ಮತ್ತು ಆಫ್ರಿಕಾ ಪ್ರಾಂತ್ಯದ, ಲಭ್ಯತೆ ಮತ್ತು ಅಂಗವೈಕಲ್ಯ ಸೇರ್ಪಡೆ ವಿಭಾಗದ  ಮುಖ್ಯಸ್ಥರಾದ, ಕ್ರಿಸ್ಟೋಫರ್ ಪ್ಯಾಟ್ನೋ ಅವರು ಜಾಗತಿಕ ದೃಷ್ಟಿಕೋನವನ್ನು ನೀಡುತ್ತಾ, ಅಮೆರಿಕಾದಂತಹ ಬೆರಳೆಣಿಕೆಯಷ್ಟು ದೇಶಗಳು ಬಲವಾದ ಕಾನೂನುಗಳನ್ನು ಹೊಂದಿದ್ದರೂ, ಅವುಗಳ ಅನುಷ್ಠಾನವು ಸಾಮಾನ್ಯವಾಗಿ ಕೊರತೆಯನ್ನು ಹೊಂದಿದೆ ಎಂದು ಹೇಳಿದರು.  ಯುರೋಪಿಯನ್ ಲಭ್ಯತೆ ಕಾಯ್ದೆಯು ಭರವಸೆಯನ್ನು ತೋರಿಸುತ್ತಿದೆ ಮತ್ತು ಮುಂದಿನ ದಶಕವು ಪರಿವರ್ತನಾತ್ಮಕವಾಗಿರುತ್ತದೆ ಎಂದು ಅವರು ಹೇಳಿದರು. "ಲಭ್ಯತೆಯನ್ನು ಹೇಗೆ ಕಾರ್ಯಗತಗೊಳಿಸಲಾಗುತ್ತದೆ ಎಂಬುದರಲ್ಲಿ ವ್ಯವಸ್ಥಿತ ಬದಲಾವಣೆಗಾಗಿ ನಾವು ಈಗ ಅಡಿಪಾಯ ಹಾಕುತ್ತಿದ್ದೇವೆ," ಎಂದು ಅವರು ತಿಳಿಸಿದರು.

ಕಿಂಟೆಲ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶಯ್ ವಿನಯ್ ಸಹಸ್ರಬುದ್ಧೆ ಅವರು ಮಾಧ್ಯಮದಲ್ಲಿ ಲಭ್ಯತೆಯ ಸೃಜನಾತ್ಮಕ ಆಯಾಮಗಳ ಮಹತ್ವವನ್ನು ಎತ್ತಿ ತೋರಿಸಿದರು. "ವಿಶೇಷವಾಗಿ ಸಿನೆಮಾದಲ್ಲಿ, ಕಂಟೆಂಟ್ ಅದರ ಸೃಷ್ಟಿಕರ್ತನ ಅನನ್ಯ ಕಣ್ಣೋಟದ ಮೂಲಕ ರೂಪುಗೊಳ್ಳುತ್ತದೆ. ವಿಷಯವು ನಿಜಕ್ಕೂ ಎಲ್ಲರಿಗೂ ಲಭ್ಯವಾಗುವಂತೆ ಮಾಡಲು, ನಾವು ಆ ಸೃಜನಶೀಲ ದೃಷ್ಟಿಯನ್ನು ಉಳಿಸಿಕೊಳ್ಳಬೇಕು - ಅದನ್ನು ಸಾರ್ವತ್ರಿಕ, ಯಾಂತ್ರಿಕ ಪರಿಹಾರಗಳಿಂದ ಮಂದಗೊಳಿಸಬಾರದು," ಎಂದು ಅವರು ವಿವರಿಸಿದರು. ಅಂಗವಿಕಲರನ್ನು ಒಳಗೊಂಡಂತೆ ಎಲ್ಲ ವೀಕ್ಷಕರಿಗೂ ನಿರ್ದೇಶಕರ ಕಲ್ಪನೆಯನ್ನು ಅರ್ಥಗರ್ಭಿತವಾಗಿ ತಲುಪಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು.

ಪತ್ರಕರ್ತೆ ಪ್ರೀತಿ ಸಾಲಿಯಾನ್ ಅವರು ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ ಹೇಗೆ ಲಭ್ಯತೆಯ ಪ್ರಯತ್ನಗಳನ್ನು ವೇಗಗೊಳಿಸುತ್ತಿವೆ ಎಂಬುದನ್ನು ವಿವರಿಸಿದರು. "ನಾವು ಸನ್ನೆ ಭಾಷಾ ಅನುವಾದಕರ ಅವತಾರಗಳನ್ನು ಒಳಗೊಂಡಿರುವ AI-ಆಧಾರಿತ ಚಾನೆಲ್ ಅನ್ನು ಪ್ರಾರಂಭಿಸಿದ್ದೇವೆ. ಆಡಿಯೋ ವಿವರಣೆಯಲ್ಲಿನ ಪ್ರಗತಿಯಿಂದಾಗಿ, ಹಿಂದೆ ವಾರಗಳನ್ನು ತೆಗೆದುಕೊಳ್ಳುತ್ತಿದ್ದ ಕೆಲಸ ಈಗ ಕೇವಲ 30 ಗಂಟೆಗಳನ್ನು ತೆಗೆದುಕೊಳ್ಳುತ್ತದೆ," ಎಂದು ಅವರು ಹೇಳಿದರು. ಭಾರತದಲ್ಲಿ ಲಭ್ಯತೆ ಯೋಗ್ಯ  ಮನರಂಜನೆಯನ್ನು ವಿಸ್ತರಿಸಲು ತಂತ್ರಜ್ಞಾನವೊಂದೇ ಸಾಕಾಗುವುದಿಲ್ಲ. ಹೆಚ್ಚಿನ ಸರ್ಕಾರಿ ಬೆಂಬಲ, ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಮತ್ತು ಟೆಂಡರ್ ಕಾರ್ಯವಿಧಾನಗಳು ಅಗತ್ಯವಿದೆ ಎಂದು ಅವರು ಒತ್ತಿ ಹೇಳಿದರು. 

ರಂಗಭೂಮಿ, ಒಟಿಟಿ ಮತ್ತು ದೂರದರ್ಶನದಂತಹ ವೇದಿಕೆಗಳಲ್ಲಿ ಎಲ್ಲರನ್ನೂ ಒಳಗೊಳ್ಳುವ ವಿಷಯಗಳಿಗಾಗಿ ವಕೀಲರಾಗಿರುವ ರಾಹುಲ್ ಬಜಾಜ್ ಅವರು ಬಲವಾದ ಕಾನೂನು ವ್ಯವಸ್ಥೆಗಳು ಮತ್ತು ಉದ್ಯಮದ ಸಹಕಾರದ ಅಗತ್ಯವನ್ನು ಒತ್ತಿ ಹೇಳಿದರು.

ರೇಡಿಯೋ ಉದಾನ್ ಸಂಸ್ಥಾಪಕರಾದ ದಾನಿಶ್ ಮಹಾಜನ್ ಅವರು ಇತ್ತೀಚಿನ ನೀತಿಗಳನ್ನು ಕಠಿಣವಾಗಿ ಜಾರಿಗೆ ತರಬೇಕೆಂದು, ಮತ್ತು ನೀತಿ ರೂಪಿಸುವ ಹಾಗೂ ನಿಯಂತ್ರಣ ಸಂಸ್ಥೆಗಳಲ್ಲಿ ಅಂಗವಿಕಲರ ಪ್ರತಿನಿಧಿತ್ವ ಹೆಚ್ಚಳವಾಗಬೇಕೆಂದು ಒತ್ತಾಯಿಸಿದರು. “ಪ್ರತಿನಿಧಿತ್ವವಿದ್ದಾಗ ಲಭ್ಯತೆ ಯೋಗ್ಯತೆ ಪಶ್ಚಾತ್ತಾಪದ ವಿಚಾರವಾಗಿರದೆ, ವ್ಯವಸ್ಥೆಯೊಳಗೇ ಅಡಗಿರುತ್ತದೆ,” ಎಂದು ಅವರು ಹೇಳಿದರು.  

ಲಭ್ಯತೆಯನ್ನು ಕೇವಲ ನಿಯಮ ಪಾಲನೆಯ ಗುರುತು ಎಂದು ಪರಿಗಣಿಸದೆ, ಸೃಜನಾತ್ಮಕ, ನೈತಿಕ ಮತ್ತು ಕಾರ್ಯತಂತ್ರದ ಅತ್ಯಗತ್ಯ ಅಂಶವೆಂದು ನೋಡಬೇಕು. ಭಾರತವು ಕಂಟೆಂಟ್ ಕ್ರಾಂತಿಯ ಹೊಸ್ತಿಲಲ್ಲಿ ನಿಂತಿರುವಾಗ, ಪ್ರತಿಯೊಬ್ಬ ನಾಗರಿಕನ ಸಂಪೂರ್ಣ ಸಾಮರ್ಥ್ಯವನ್ನು ತೆರೆಯಲು ಲಭ್ಯತೆಯು ಮುಖ್ಯವಾಗಿರುತ್ತದೆ ಎಂದು ಈ ಗೋಷ್ಠಿ ಒಂದು ಸಾಮೂಹಿಕ ಕರೆ ನೀಡಿತು.

 

*****


Release ID: (Release ID: 2126608)   |   Visitor Counter: 5