ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಮಂತ್ರಿ ಮಾರ್ಚ್ 30 ರಂದು ಮಹಾರಾಷ್ಟ್ರ ಮತ್ತು ಛತ್ತೀಸ್ ಗಢಕ್ಕೆ ಭೇಟಿ
ನಾಗ್ಪುರದ ಸೃತಿ ಮಂದಿರದಲ್ಲಿ ದರ್ಶನ ಪಡೆಯಲಿರುವ ಪ್ರಧಾನಮಂತ್ರಿ
ನಾಗ್ಪುರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್‌ಗೆ ಗೌರವ ನಮನ ಸಲ್ಲಿಸಲು ದೀಕ್ಷಾ ಭೂಮಿಗೆ ಪ್ರಧಾನಮಂತ್ರಿ ಭೇಟಿ
ಪ್ರಧಾನಮಂತ್ರಿ ಅವರಿಂದ ನಾಗ್ಪುರದಲ್ಲಿ ಮಾಧವ ನೇತ್ರಾಲಯ ಪ್ರೀಮಿಯಂ ಕೇಂದ್ರಕ್ಕೆ ಶುಂಕುಸ್ಥಾಪನೆ
ನಾಗ್ಪುರದ ಸೋಲಾರ್ ಡಿಫೆನ್ಸ್ ಅಂಡ್ ಏರೋಸ್ಪೇಸ್ ಲಿಮಿಟೆಡ್‌ನಲ್ಲಿ ಯುಎವಿಗಳಿಗಾಗಿ ಲಾಟರಿಂಗ್ ಮ್ಯೂನಿಷನ್ ಟೆಸ್ಟಿಂಗ್ ರೇಂಜ್ ಮತ್ತು ರನ್‌ವೇ ಸೌಲಭ್ಯ ಉದ್ಘಾಟಿಸಲಿರುವ ಪ್ರಧಾನಮಂತ್ರಿ
ಪ್ರಧಾನಮಂತ್ರಿ ಅವರಿಂದ ಬಿಲಾಸ್ಪುರದಲ್ಲಿ 33,700 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ, ಕಾಮಗಾರಿ ಆರಂಭಕ್ಕೆ ಚಾಲನೆ ಮತ್ತು ರಾಷ್ಟ್ರಕ್ಕೆ ಸಮರ್ಪಣೆ
ಛತ್ತೀಸ್‌ಗಢದಾದ್ಯಂತ ಗ್ರಿಡ್ ಅನ್ನು ಬಲಪಡಿಸಲು ಮತ್ತು ವಿದ್ಯುತ್ ಲಭ್ಯತೆ ಹೆಚ್ಚಿಸಲು ಬಹು ವಿದ್ಯುತ್ ಉತ್ಪಾದನೆ ಮತ್ತು ಪ್ರಸರಣ ಯೋಜನೆಗಳನ್ನು ಕೈಗೊಳ್ಳಲಾಗುವುದು
ಛತ್ತೀಸ್‌ಗಢದ ಬುಡಕಟ್ಟು ಮತ್ತು ಕೈಗಾರಿಕಾ ಪ್ರದೇಶಗಳಲ್ಲಿ ಸಂಪರ್ಕ ಸುಧಾರಣೆಗೆ ಬಹು ರೈಲು ಮತ್ತು ರಸ್ತೆ ಯೋಜನೆಗಳ ಅಭಿವೃದ್ಧಿಗೆ ವಿಶೇಷ ಒತ್ತು
ಆ ಪ್ರದೇಶದಲ್ಲಿ ಶಿಕ್ಷಣ ಮೂಲಸೌಕರ್ಯಕ್ಕೆ ಪ್ರಮುಖ ಉತ್ತೇಜನ ನೀಡುವ ಭಾಗವಾಗಿ, ಪ್ರಧಾನಮಂತ್ರಿ ಅವರಿಂದ ಛತ್ತೀಸ್‌ಗಢದ 29 ಜಿಲ್ಲೆಗಳಲ್ಲಿ 130 ಪಿಎಂ ಶ್ರೀ ಶಾಲೆಗಳ ಲೋಕಾರ್ಪಣೆ
ಛತ್ತೀಸ್‌ಗಢದಲ್ಲಿ ಸರ್ವರಿಗೂ ವಸತಿ ಎಂಬ ದೂರದೃಷ್ಟಿ ಸಾಕಾರಗೊಳಿಸುವ ಸಲುವಾಗಿ ಪ್ರಧಾನ ಮಂತ್ರಿ ಆವಾಸ್ ಯೋಜನೆ - ಗ್ರಾಮೀಣ (ಪಿಎಂಎವೈ-ಜಿ) ಅಡಿಯಲ್ಲಿ 3 ಲಕ್ಷ ಫಲಾನುಭವಿಗಳ ಗೃಹ ಪ್ರವೇಶಕ್ಕೆ ಚಾಲನೆ
Posted On:
28 MAR 2025 12:41PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾರ್ಚ್ 30 ರಂದು ಮಹಾರಾಷ್ಟ್ರ ಮತ್ತು ಛತ್ತೀಸ್‌ಗಢಕ್ಕೆ ಭೇಟಿ ನೀಡಲಿದ್ದಾರೆ. ಅವರು ನಾಗ್ಪುರಕ್ಕೆ ಪ್ರಯಾಣಿಸಲಿದ್ದಾರೆ ಮತ್ತು ಬೆಳಿಗ್ಗೆ ಸುಮಾರು 9 ಗಂಟೆಗೆ ಸ್ಮೃತಿ ಮಂದಿರದಲ್ಲಿ ದರ್ಶನ ಪಡೆಯಲಿದ್ದಾರೆ ಮತ್ತು ನಂತರ ದೀಕ್ಷಾಭೂಮಿಗೆ ಭೇಟಿ ನೀಡಲಿದ್ದಾರೆ.
ಬೆಳಿಗ್ಗೆ ಸುಮಾರು 10 ಗಂಟೆಗೆ ಅವರು ನಾಗ್ಪುರದ ಮಾಧವ ನೇತ್ರಾಲಯ ಪ್ರೀಮಿಯಂ ಕೇಂದ್ರದ ಶಿಲಾನ್ಯಾಸ ನೆರವೇರಿಸಲಿದ್ದಾರೆ ಮತ್ತು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಮಧ್ಯಾಹ್ನ ಸುಮಾರು 12:30ಕ್ಕೆ ಅವರು ನಾಗ್ಪುರದ ಸೋಲಾರ್ ಡಿಫೆನ್ಸ್ ಮತ್ತು ಏರೋಸ್ಪೇಸ್ ಲಿಮಿಟೆಡ್‌ನಲ್ಲಿ ಯುಎವಿಗಳಿಗಾಗಿ ಲಾಯ್ಟರಿಂಗ್ ಮನಿಷನ್ ಟೆಸ್ಟಿಂಗ್ ರೇಂಜ್ ಮತ್ತು ರನ್‌ವೇ ಸೌಲಭ್ಯವನ್ನು ಉದ್ಘಾಟಿಸಲಿದ್ದಾರೆ.
ಅಲ್ಲದೆ, ಪ್ರಧಾನಮಂತ್ರಿ ಬಿಲಾಸ್ಪುರಕ್ಕೆ ಪ್ರಯಾಣಿಸಲಿದ್ದಾರೆ ಮತ್ತು ಮಧ್ಯಾಹ್ನ 3:30 ರ ಸುಮಾರಿಗೆ ಅವರು 33,700 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ, ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ ಮತ್ತು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಅವರು ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಮಹಾರಾಷ್ಟ್ರದಲ್ಲಿ ಪ್ರಧಾನಮಂತ್ರಿ
ಹಿಂದೂ ಹೊಸ ವರ್ಷದ ಆರಂಭವನ್ನು ಗುರುತಿಸುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರತಿಪದ ಕಾರ್ಯಕ್ರಮದ ವೇಳೆ ಕಾಕತಾಳೀಯವೆಂಬಂತೆ ಪ್ರಧಾನ ಮಂತ್ರಿ ಅವರು ಸ್ಮೃತಿ ಮಂದಿರದಲ್ಲಿ ದರ್ಶನ ಪಡೆದು ಆರ್‌ಎಸ್‌ಎಸ್‌ನ ಸ್ಥಾಪಕ ಪಿತಾಮಹರಿಗೆ ಗೌರವ ನಮನ ಸಲ್ಲಿಸಲಿದ್ದಾರೆ. ಅವರು ದೀಕ್ಷಾಭೂಮಿಗೆ ಭೇಟಿ ನೀಡಲಿದ್ದಾರೆ ಮತ್ತು 1956ರಲ್ಲಿ ತಮ್ಮ ಸಹಸ್ರಾರು ಅನುಯಾಯಿಗಳೊಂದಿಗೆ ಬೌದ್ಧಧರ್ಮವನ್ನು ಸ್ವೀಕರಿಸಿದ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಗೌರವ ನಮನ ಸಲ್ಲಿಸುವರು.
ಅಲ್ಲದೆ, ಪ್ರಧಾನಿ ಅವರು ಮಾಧವ ನೇತ್ರಾಲಯ ಪ್ರೀಮಿಯಂ ಕೇಂದ್ರದ ಹೊಸ ವಿಸ್ತರಣಾ ಕಟ್ಟಡ ಮಾಧವ ಕಣ್ಣು ಮತ್ತು ಸಂಧೋನಾ ಸಂಸ್ಥೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. 2014ರಲ್ಲಿ ಸ್ಥಾಪನೆಯಾದ ಇದು ನಾಗ್ಪುರದಲ್ಲಿರುವ ಪ್ರಮುಖ ಸೂಪರ್-ಸ್ಪೆಷಾಲಿಟಿ ನೇತ್ರ ಚಿಕಿತ್ಸಾ ಸೌಲಭ್ಯವಾಗಿದೆ. ಈ ಸಂಸ್ಥೆಯನ್ನು ಗುರೂಜಿ ಶ್ರೀ ಮಾಧವರಾವ್ ಸದಾಶಿವರಾವ್ ಗೋಲ್ವಾಲ್ಕರ್ ಅವರ ಸ್ಮರಣಾರ್ಥ ಸ್ಥಾಪಿಸಲಾಯಿತು. ಮುಂಬರುವ ಯೋಜನೆಯು ಜನರಿಗೆ ಕೈಗೆಟುಕುವ ಮತ್ತು ವಿಶ್ವ ದರ್ಜೆಯ ನೇತ್ರ ಆರೈಕೆ ಸೇವೆಗಳನ್ನು ಒದಗಿಸುವ ಗುರಿಯನ್ನು ಹೊಂದಿರುವ 250 ಹಾಸಿಗೆಗಳ ಆಸ್ಪತ್ರೆ, 14 ಹೊರರೋಗಿ ವಿಭಾಗಗಳು (ಒಪಿಡಿಗಳು) ಮತ್ತು 14 ಮಾದರಿ ಶಸ್ತ್ರಚಿಕಿತ್ಸಾ (ಮಾಡ್ಯುಲರ್ ಆಪರೇಷನ್) ಥಿಯೇಟರ್‌ಗಳನ್ನು ಒಳಗೊಂಡಿದೆ.
ಪ್ರಧಾನಮಂತ್ರಿ ಅವರು ನಾಗ್ಪುರದಲ್ಲಿರುವ ಸೋಲಾರ್ ಡಿಫೆನ್ಸ್ ಮತ್ತು ಏರೋಸ್ಪೇಸ್ ಲಿಮಿಟೆಡ್‌ನ ಶಸ್ತ್ರಾಗಾರಕ್ಕೆ ಭೇಟಿ ನೀಡಲಿದ್ದಾರೆ. ಅವರು ಹೊಸದಾಗಿ ನಿರ್ಮಿಸಲಾದ 1250 ಮೀಟರ್ ಉದ್ದ ಮತ್ತು 25 ಮೀಟರ್ ಅಗಲದ ನಿರಾಯುಧ ವೈಮಾನಿಕ ವಾಹನಗಳಿಗಾಗಿ (ಯುಎವಿ) ವಾಯುನೆಲೆ ಮತ್ತು ಹಾರುವ ಯುದ್ಧಸಾಮಗ್ರಿ ಮತ್ತು ಇತರ ಮಾರ್ಗದರ್ಶಿ ಯುದ್ಧಸಾಮಗ್ರಿಗಳನ್ನು ಪರೀಕ್ಷಿಸಲು ಯುದ್ಧ ಸಾಮಗ್ರಿ ಮತ್ತು ಸಿಡಿತಲೆ ಪರೀಕ್ಷಾ ಸೌಲಭ್ಯವನ್ನು ಉದ್ಘಾಟಿಸಲಿದ್ದಾರೆ.
ಛತ್ತೀಸ್ ಗಢದಲ್ಲಿ ಪ್ರಧಾನಮಂತ್ರಿ
ಮೂಲಸೌಕರ್ಯ ಅಭಿವೃದ್ಧಿ ಮತ್ತು ಸುಸ್ಥಿರ ಜೀವನೋಪಾಯವನ್ನು ಹೆಚ್ಚಿಸುವ ತಮ್ಮ ಬದ್ಧತೆಗೆ ಅನುಗುಣವಾಗಿ, ಪ್ರಧಾನಮಂತ್ರಿ ಅವರು ಬಿಲಾಸ್ಪುರದಲ್ಲಿ 33,700 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ವಿದ್ಯುತ್, ತೈಲ ಮತ್ತು ಅನಿಲ, ರೈಲು, ರಸ್ತೆ, ಶಿಕ್ಷಣ ಮತ್ತು ವಸತಿ ಕ್ಷೇತ್ರಗಳಿಗೆ ಸಂಬಂಧಿಸಿದ ಬಹು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ, ಕಾಮಗಾರಿ ಆರಂಭ ಮತ್ತು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.
ದೇಶಾದ್ಯಂತ ಇಂಧನ ವಲಯವನ್ನು ಸುಧಾರಿಸಲು ಪ್ರಧಾನಮಂತ್ರಿ ಅವರು ಬದ್ಧರಾಗಿದ್ದಾರೆ. ಅದಕ್ಕೆ ಅನುಗುಣವಾಗಿ ಕೈಗೆಟುಕುವ ಮತ್ತು ವಿಶ್ವಾಸಾರ್ಹ ಇಂಧನ ಒದಗಿಸುವಲ್ಲಿ ಮತ್ತು ಛತ್ತೀಸ್‌ಗಢವನ್ನು ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬಿಯನ್ನಾಗಿ ಮಾಡುವಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳಲಾಗುವುದು. ಪ್ರಧಾನಮಂತ್ರಿ ಅವರು ಬಿಲಾಸ್ಪುರ ಜಿಲ್ಲೆಯಲ್ಲಿ ನೆಲೆಗೊಂಡಿರುವ 9,790 ಕೋಟಿ ರೂ.ಗೂ ಅಧಿಕ ಮೌಲ್ಯದ ಎನ್‌ಟಿಪಿಸಿಯ ಸಿಪತ್ ಸೂಪರ್ ಥರ್ಮಲ್ ಪವರ್ ಪ್ರಾಜೆಕ್ಟ್ ಹಂತ-III (1x800MW) ಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಈ ಪಿಟ್ ಹೆಡ್ ಯೋಜನೆಯು ಹೆಚ್ಚಿನ ವಿದ್ಯುತ್ ಉತ್ಪಾದನಾ ದಕ್ಷತೆಯೊಂದಿಗೆ ಇತ್ತೀಚಿನ ಅತ್ಯಾಧುನಿಕ ಅಲ್ಟ್ರಾ-ಸೂಪರ್ ಕ್ರಿಟಿಕಲ್ ತಂತ್ರಜ್ಞಾನವನ್ನು ಆಧರಿಸಿದೆ. ಪ್ರಧಾನಮಂತ್ರಿ ಅವರು ಛತ್ತೀಸ್‌ಗಢ ರಾಜ್ಯ ವಿದ್ಯುತ್ ಉತ್ಪಾದನಾ ಕಂಪನಿ ಲಿಮಿಟೆಡ್ (ಸಿಎಸ್ ಪಿಜಿಸಿಎಲ್)ನ 15,800 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಮೊದಲ ಸೂಪರ್ ಕ್ರಿಟಿಕಲ್ ಥರ್ಮಲ್ ಪವರ್ ಪ್ರಾಜೆಕ್ಟ್ (2X660MW) ನ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ. ಪಶ್ಚಿಮ ಪ್ರದೇಶ ವಿಸ್ತರಣಾ ಯೋಜನೆ (ಡಬ್ಲೂಆರ್ ಇಎಸ್) ಅಡಿಯಲ್ಲಿ 560 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ಪವರ್‌ಗ್ರಿಡ್‌ನ ಮೂರು ವಿದ್ಯುತ್ ಪ್ರಸರಣ ಯೋಜನೆಗಳನ್ನು ಪ್ರಧಾನಿ ಅವರು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.
ಭಾರತದ ನಿವ್ವಳ-ಶೂನ್ಯ ಇಂಗಾಲ ಹೊರಸೂಸುವಿಕೆ ಗುರಿಗಳಾದ ವಾಯು ಮಾಲಿನ್ಯ ತಗ್ಗಿಸುವುದು ಮತ್ತು ಶುದ್ಧ ಇಂಧನ ಪರಿಹಾರಗಳನ್ನು ಒದಗಿಸುವುದಕ್ಕೆ ಅನುಗುಣವಾಗಿ ಪ್ರಧಾನಮಂತ್ರಿ ಅವರು ಕೊರಿಯಾ, ಸೂರಜ್‌ಪುರ, ಬಲರಾಂಪುರ್ ಮತ್ತು ಸುರ್ಗುಜಾ ಜಿಲ್ಲೆಗಳಲ್ಲಿ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ನ ನಗರ ಅನಿಲ ವಿತರಣಾ (ಸಿಜಿಡಿ) ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಅದರಲ್ಲಿ 200 ಕಿ.ಮೀ.ಗೂ ಅಧಿಕ ಹೈ ಪ್ರೆಶರ್ ಪೈಪ್‌ಲೈನ್ ಮತ್ತು 800 ಕಿ.ಮೀ.ಗೂ ಅಧಕಿ ಎಂಡಿಪಿಇ (ಮಧ್ಯಮ ಸಾಂದ್ರತೆ ಪಾಲಿಥಿಲೀನ್) ಪೈಪ್‌ಲೈನ್ ಮತ್ತು 1,285 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ಹಲವು ಸಿಎನ್ ಜಿ ವಿತರಣಾ ಮಳಿಗೆಗಳು ಸೇರಿವೆ. 2210 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ 540 ಕಿ.ಮೀ. ಉದ್ದದ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್ ಪಿಸಿಎಲ್) ನ ವಿಶಾಖ-ರಾಯಪುರ ಪೈಪ್‌ಲೈನ್ (ವಿಆರ್ ಪಿಎಲ್) ಯೋಜನೆಯ ಶಂಕುಸ್ಥಾಪನೆಯನ್ನು ಪ್ರಧಾಮಂತ್ರಿ ಅವರು ನೆರವೇರಿಸಲಿದ್ದಾರೆ. ಈ ಬಹುಉತ್ಪನ್ನ (ಪೆಟ್ರೋಲ್, ಡೀಸೆಲ್, ಸೀಮೆಎಣ್ಣೆ) ಪೈಪ್‌ಲೈನ್ ವರ್ಷಕ್ಕೆ 3 ಮಿಲಿಯನ್ ಮೆಟ್ರಿಕ್ ಟನ್‌ಗಿಂತಲೂ ಅಧಿಕ ಸಾಮರ್ಥ್ಯವನ್ನು ಹೊಂದಿದೆ.
ಈ ಪ್ರದೇಶದಲ್ಲಿ ಸಂಪರ್ಕವನ್ನು ಸುಧಾರಿಸುವತ್ತ ಒತ್ತು ನೀಡಿ, ಪ್ರಧಾನಮಂತ್ರಿ ಅವರು ಒಟ್ಟು 108 ಕಿ.ಮೀ ಉದ್ದದ ಏಳು ರೈಲ್ವೆ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಮತ್ತು ಒಟ್ಟು 2,690 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ 111 ಕಿ.ಮೀ ಉದ್ದದ ಮೂರು ರೈಲ್ವೆ ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಅವರು ಮಂದಿರ ಹಸೌದ್ ಮೂಲಕ ಅಭನ್ಪುರ್-ರಾಯ್ಪುರ್ ವಿಭಾಗದಲ್ಲಿ ಮೆಮು ರೈಲು ಸೇವೆಗೆ ಹಸಿರು ನಿಶಾನೆ ತೋರಲಿದ್ದಾರೆ. ಛತ್ತೀಸ್‌ಗಢದಲ್ಲಿ ಭಾರತೀಯ ರೈಲ್ವೆಯ ರೈಲು ಜಾಲದ ಶೇ.100ರಷ್ಟು ವಿದ್ಯುದ್ದೀಕರಣವನ್ನು ಸಹ ಅವರು ಲೋಕಾರ್ಪಣೆ ಮಾಡಲಿದ್ದಾರೆ. ಈ ಯೋಜನೆಗಳು ಜನದಟ್ಟಣೆಯನ್ನು ತಗ್ಗಿಸುತ್ತದೆ, ಸಂಪರ್ಕವನ್ನು ಸುಧಾರಿಸುತ್ತದೆ ಮತ್ತು ಪ್ರದೇಶದಾದ್ಯಂತ ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.
ಈ ಪ್ರದೇಶದಲ್ಲಿ ರಸ್ತೆ ಮೂಲಸೌಕರ್ಯ ವೃದ್ಧಿಯನ್ನು ಖಾತ್ರಿಪಡಿಸಲು, ಪ್ರಧಾನಮಂತ್ರಿ ಅವರು ಝಲ್ಮಾಲಾದಿಂದ ಶೆರ್ಪರ್ ಎನ್ ಎಚ್-930 (37 ಕಿ.ಮೀ)ರ ಮೇಲ್ದರ್ಜೆಗೇರಿಸಿದ ವಿಭಾಗವನ್ನು ಮತ್ತು ಅಂಬಿಕಾಪುರ್-ಪಾತಲ್‌ಗಾಂವ್ ನಡುವಿನ ಎನ್ ಎಚ್-43 (75 ಕಿ.ಮೀ) ರ ವಿಭಾಗವನ್ನು ನೆಲಮಟ್ಟದೊಂದಿಗೆ ಎರಡು ಪಥದ ರಸ್ತೆಯನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಪ್ರಧಾನಮಂತ್ರಿ ಅವರು ಕೊಂಡಗಾಂವ್-ನಾರಾಯಣಪುರ ನಡುವಿನ ಎನ್ ಎಚ್-130D (47.5 ಕಿ.ಮೀ) ನ ವಿಭಾಗವನ್ನು ಎರಡು ಪಥದ ರಸ್ತೆಗೆ ಮೇಲ್ದರ್ಜೆಗೇರಿಸುವ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಅಲ್ಲದೆ, 1,270 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ಈ ಯೋಜನೆಗಳು ಬುಡಕಟ್ಟು ಮತ್ತು ಕೈಗಾರಿಕಾ ಪ್ರದೇಶಗಳಿಗೆ ಪ್ರವೇಶವನ್ನು ಸುಲಭ ಮತ್ತು ಗಮನಾರ್ಹವಾಗಿ ಸುಧಾರಿಸುತ್ತದೆ, ಇದರಿಂದಾಗಿ ಈ ಪ್ರದೇಶದ ಸಮಗ್ರ ಅಭಿವೃದ್ಧಿ ಸಾಧ್ಯವಾಗಲಿದೆ.
ಸರ್ವರಿಗೂ ಶಿಕ್ಷಣವನ್ನು ಖಾತ್ರಿಪಡಿಸಿಕೊಳ್ಳುವ ಬದ್ಧತೆಗೆ ಅನುಗುಣವಾಗಿ ಪ್ರಧಾನಮಂತ್ರಿ ಅವರು ರಾಜ್ಯದ 29 ಜಿಲ್ಲೆಗಳಲ್ಲಿ 130 ಪಿಎಂ ಶ್ರೀ ಶಾಲೆಗಳು ಮತ್ತು ರಾಯ್‌ಪುರದಲ್ಲಿ ವಿದ್ಯಾ ಸಮಿಕ್ಷಾ ಕೇಂದ್ರ (ವಿಎಸ್ ಕೆ) ಎಂಬ ಎರಡು ಪ್ರಮುಖ ಶೈಕ್ಷಣಿಕ ಉಪಕ್ರಮಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ. ಪಿಎಂ ಸ್ಕೂಲ್ಸ್ ಫಾರ್ ರೈಸಿಂಗ್ ಇಂಡಿಯಾ (PM Schools for Rising India) ಯೋಜನೆಯಡಿಯಲ್ಲಿ 130 ಶಾಲೆಗಳನ್ನು ಮೇಲ್ದರ್ಜೆಗೇರಿಸಲಾಗುವುದು. ಈ ಶಾಲೆಗಳು ಉತ್ತಮವಾಗಿ ರಚನಾತ್ಮಕ ಮೂಲಸೌಕರ್ಯ, ಸ್ಮಾರ್ಟ್ ಬೋರ್ಡ್‌ಗಳು, ಆಧುನಿಕ ಪ್ರಯೋಗಾಲಯಗಳು ಮತ್ತು ಗ್ರಂಥಾಲಯಗಳ ಮೂಲಕ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಒದಗಿಸಲು ಸಹಾಯ ಮಾಡುತ್ತವೆ. ರಾಯ್‌ಪುರದ ವಿಎಸ್ ಕೆ ವಿವಿಧ ಶಿಕ್ಷಣ ಸಂಬಂಧಿತ ಸರ್ಕಾರಿ ಯೋಜನೆಗಳ ಆನ್‌ಲೈನ್ ಮೇಲ್ವಿಚಾರಣೆ ಮತ್ತು ದತ್ತಾಂಶ ವಿಶ್ಲೇಷಣೆಗೆ ಅನುವು ಮಾಡಿಕೊಡುತ್ತದೆ.
ಗ್ರಾಮೀಣ ಕುಟುಂಬಗಳಿಗೆ ಸೂಕ್ತ ವಸತಿ ಸೌಲಭ್ಯವನ್ನು ಖಾತ್ರಿಪಡಿಸಿಕೊಳ್ಳುವ ಮತ್ತು ಅವರ ಆರೋಗ್ಯ, ಭದ್ರತೆ ಮತ್ತು ಒಟ್ಟಾರೆ ಜೀವನದ ಗುಣಮಟ್ಟ ಸುಧಾರಿಸುವ ಬದ್ಧತೆಯನ್ನು ಪೂರೈಸುವ ಸಲುವಾಗಿ ಪ್ರಧಾನಮಂತ್ರಿ ಆವಾಸ್ ಯೋಜನೆ - ಗ್ರಾಮೀಣ (ಪಿಎಂಎವೈ-ಜಿ) ಅಡಿಯಲ್ಲಿ 3 ಲಕ್ಷ ಫಲಾನುಭವಿಗಳ ಗೃಹ ಪ್ರವೇಶ ಕಾರ್ಯಕ್ರಮ ನಡೆಯಲಿದೆ ಮತ್ತು ಪ್ರಧಾನ ಮಂತ್ರಿ ಈ ಯೋಜನೆಯಡಿ ಕೆಲವು ಫಲಾನುಭವಿಗಳಿಗೆ ಮನೆಗಳ ಕೀಲಿ ಕೈಗಳನ್ನು ಹಸ್ತಾಂತರ ಮಾಡಲಿದ್ದಾರೆ.
*****
(Release ID: 2116111)
Visitor Counter : 35
Read this release in:
Odia
,
Bengali
,
Assamese
,
English
,
Urdu
,
Marathi
,
Hindi
,
Manipuri
,
Punjabi
,
Gujarati
,
Tamil
,
Telugu
,
Malayalam