ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ಹೈಪರ್ ಲೂಪ್ ಯೋಜನೆಗಾಗಿ ವಿದ್ಯುನ್ಮಾನ ತಂತ್ರಜ್ಞಾನವನ್ನು ಐಸಿಎಫ್ ಚೆನ್ನೈನಲ್ಲಿ ಅಭಿವೃದ್ಧಿಪಡಿಸಲಾಗುವುದು: ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ್
Posted On:
15 MAR 2025 9:57PM by PIB Bengaluru
ಕೇಂದ್ರ ರೈಲ್ವೆ, ವಾರ್ತಾ ಮತ್ತು ಪ್ರಸಾರ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು, ಹೈಪರ್ ಲೂಪ್ ಯೋಜನೆಗಾಗಿ ಎಲೆಕ್ಟ್ರಾನಿಕ್ಸ್ ಕಾಂಪೊನೆಂಟ್ ತಂತ್ರಜ್ಞಾನವನ್ನು ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ (ಐಸಿಎಫ್) ಅಭಿವೃದ್ಧಿಪಡಿಸಲಾಗುವುದು ಎಂದು ಮಾಹಿತಿ ನೀಡಿದರು. ಅವರು ಐಐಟಿ ಮದ್ರಾಸ್ ಡಿಸ್ಕವರಿ ಕ್ಯಾಂಪಸ್ ನಲ್ಲಿರುವ ಹೈಪರ್ ಲೂಪ್ ಪರೀಕ್ಷಾ ಸೌಲಭ್ಯಕ್ಕೆ ಭೇಟಿ ನೀಡಿದರು ಮತ್ತು ಲೈವ್ ಪ್ರಾತ್ಯಕ್ಷಿಕೆಗೆ ಸಾಕ್ಷಿಯಾದರು.
ಐಐಟಿ ಚೆನ್ನೈನಲ್ಲಿರುವ 410 ಮೀಟರ್ ಉದ್ದದ ಹೈಪರ್ ಲೂಪ್ ಟೆಸ್ಟ್ ಟ್ಯೂಬ್ ಏಷ್ಯಾದ ಅತಿ ಉದ್ದದ ಹೈಪರ್ ಲೂಪ್ ಪರೀಕ್ಷಾ ಸೌಲಭ್ಯವಾಗಿದೆ ಎಂದು ಸಚಿವ ಅಶ್ವಿನಿ ವೈಷ್ಣವ್ ಅವರು ಹೇಳಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡಿದ ಸಚಿವರು, ಹೈಪರ್ ಲೂಪ್ ಸಾರಿಗೆಗಾಗಿ ಸಂಪೂರ್ಣ ಪರೀಕ್ಷಾ ವ್ಯವಸ್ಥೆಯನ್ನು ಸ್ಥಳೀಯ ತಂತ್ರಜ್ಞಾನಗಳನ್ನು ಬಳಸಿಕೊಂಡು ಅಭಿವೃದ್ಧಿಪಡಿಸಲಾಗಿದೆ ಮತ್ತು ಈ ಸಾಧನೆಗಾಗಿ ಎಲ್ಲಾ ಯುವ ನಾವೀನ್ಯಕಾರರನ್ನು ಅಭಿನಂದಿಸಿದರು.
ಪ್ರಸ್ತುತ ಅಭಿವೃದ್ಧಿಯಲ್ಲಿರುವ ಹೈಪರ್ ಲೂಪ್ ಸಾರಿಗೆ ತಂತ್ರಜ್ಞಾನವು ಇಲ್ಲಿಯವರೆಗೆ ನಡೆಸಿದ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶಗಳನ್ನು ನೀಡಿರುವುದರಿಂದ ಭಾರತವು ಶೀಘ್ರದಲ್ಲೇ ಹೈಪರ್ ಲೂಪ್ ಸಾರಿಗೆಗೆ ಸಿದ್ಧವಾಗಲಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.
ರೈಲ್ವೆ ಸಚಿವಾಲಯವು ಹೈಪರ್ ಲೂಪ್ ಯೋಜನೆಗೆ ಆರ್ಥಿಕ ಧನಸಹಾಯ ಮತ್ತು ತಾಂತ್ರಿಕ ಸಹಾಯವನ್ನು ಒದಗಿಸಿದೆ, ಮತ್ತು ಈಗ, ಈ ಹೈಪರ್ ಲೂಪ್ ಯೋಜನೆಗೆ ಎಲ್ಲಾ ಎಲೆಕ್ಟ್ರಾನಿಕ್ಸ್ ತಂತ್ರಜ್ಞಾನವನ್ನು ಐಸಿಎಫ್ ಚೆನ್ನೈನಲ್ಲಿ ಅಭಿವೃದ್ಧಿಪಡಿಸಲಾಗುವುದು. ಐಸಿಎಫ್ ಕಾರ್ಖಾನೆಯ ಹೆಚ್ಚು ನುರಿತ ತಜ್ಞರು ವಂದೇ ಭಾರತ್ ಹೈಸ್ಪೀಡ್ ರೈಲುಗಳಿಗಾಗಿ ಲಾರ್ಹೆ ಎಲೆಕ್ಟ್ರಾನಿಕ್ಸ್ ವ್ಯವಸ್ಥೆಯನ್ನು ಯಶಸ್ವಿಯಾಗಿ ಅಭಿವೃದ್ಧಿಪಡಿಸಿದ್ದಾರೆ ಮತ್ತು ಈ ಹೈಪರ್ ಲೂಪ್ ಯೋಜನೆಗೆ ಎಲೆಕ್ಟ್ರಾನಿಕ್ಸ್ ತಂತ್ರಜ್ಞಾನವನ್ನು ಐಸಿಎಫ್ ನಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಸಚಿವರು ಹೇಳಿದ್ದಾರೆ.
ಈ ಯಶಸ್ವಿ ಪರೀಕ್ಷೆಗಾಗಿ ಐಐಟಿ ಚೆನ್ನೈನ ಯುವ ನಾವೀನ್ಯಕಾರರ ತಂಡ ಮತ್ತು ಅವಿಷ್ಕರ್ ಸಂಸ್ಥೆಯನ್ನು ಸಚಿವರು ಅಭಿನಂದಿಸಿದರು. ನಂತರ, ಸಚಿವರು ಗಿಂಡಿಯ ಐಐಟಿ ಚೆನ್ನೈ ಕ್ಯಾಂಪಸ್ ಗೆ ಭೇಟಿ ನೀಡಿದರು, ಅಲ್ಲಿ ಅವರು ಐಐಟಿಯ ಸೆಂಟರ್ ಫಾರ್ ಇನ್ನೋವೇಶನ್ ಆಯೋಜಿಸಿದ್ದ ಓಪನ್ ಹೌಸ್ 2025 ಎಂಬ ವಸ್ತುಪ್ರದರ್ಶನವನ್ನು ಪರಿಶೀಲಿಸಿದರು. ಅವರು ವಿದ್ಯಾರ್ಥಿಗಳು ಮತ್ತು ಯುವ ಆವಿಷ್ಕಾರಕರೊಂದಿಗೆ ಸಂವಾದ ನಡೆಸಿದರು. ಸಂವಾದದ ವೇಳೆ, ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತವು ಎಲ್ಲಾ ಕ್ಷೇತ್ರಗಳಲ್ಲಿ ಪ್ರಮುಖ ದೇಶವಾಗಲಿದೆ ಎಂದು ಅವರು ಹೇಳಿದರು.
ಡೇಟಾ ಸೈನ್ಸ್, ಕೃತಕ ಬುದ್ಧಿಮತ್ತೆ ಮತ್ತು ಅರೆವಾಹಕ ಕ್ಷೇತ್ರಗಳಲ್ಲಿ ಯುವಕರು ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಮತ್ತು ಭಾರತವು ವಿಶ್ವದಲ್ಲೇ ಅತಿ ಹೆಚ್ಚು ನುರಿತ ಯುವಕರನ್ನು ಹೊಂದಿದೆ, ಅವರು ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಲಿದ್ದಾರೆ ಎಂದು ಸಚಿವರು ಹೇಳಿದರು. ಪ್ರಸ್ತುತ ದೇಶದಲ್ಲಿ ಐದು ಅರೆವಾಹಕ ಸೌಲಭ್ಯಗಳು ಕಾರ್ಯನಿರ್ವಹಿಸುತ್ತಿವೆ ಮತ್ತು ಈ ವರ್ಷದ ಅಂತ್ಯದ ವೇಳೆಗೆ ಮೊದಲ ಭಾರತ ನಿರ್ಮಿತ ಅರೆವಾಹಕವನ್ನು ಹೊರತರಲಾಗುವುದು ಎಂದು ಅವರು ಘೋಷಿಸಿದರು.
ವಸ್ತುಪ್ರದರ್ಶನದಲ್ಲಿ ನಡೆದ ಆವಿಷ್ಕಾರ ಸ್ಪರ್ಧೆಯ ವಿಜೇತರಿಗೆ ಸಚಿವರು ಬಹುಮಾನಗಳು ಮತ್ತು ಶೀಲ್ಡ್ ಗಳನ್ನು ನೀಡಿದರು ಮತ್ತು ಹೆಚ್ಚಿನ ಹೊಸ ಆವಿಷ್ಕಾರಗಳನ್ನು ನಡೆಸಲು ಪ್ರೋತ್ಸಾಹಿಸಿದರು. ಐಐಟಿ ಚೆನ್ನೈನ ನಿರ್ದೇಶಕ ಡಾ.ಕಾಮಕೋಟಿ ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.











*****
(Release ID: 2112114)
Visitor Counter : 26