ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಕರ್ನಾಟಕದ ಬೆಂಗಳೂರಿನಲ್ಲಿ ಶ್ರೀ ವಿಶ್ವೇಶತೀರ್ಥ ಸ್ಮಾರಕ ಆಸ್ಪತ್ರೆಯನ್ನು ಉದ್ಘಾಟಿಸಿದರು


ಶ್ರೀ ವಿಶ್ವೇಶತೀರ್ಥ ಸ್ಮಾರಕ ಆಸ್ಪತ್ರೆ ಬಡವರು ಮತ್ತು ಸಮಾಜದ ಅಂಚಿನಲ್ಲಿರುವ ದುರ್ಬಲರಿಗೆ ಉಚಿತ ಚಿಕಿತ್ಸೆಯ ಆಧುನಿಕ ಕೇಂದ್ರವಾಗಿ ಕಾರ್ಯನಿರ್ವಹಿಸಲಿದ್ದು, ಮುಂಬರುವ ಅನೇಕ ವರ್ಷಗಳವರೆಗೆ ಜನರಿಗೆ ಸೇವೆಗಳನ್ನು ಒದಗಿಸಲಿದೆ

ಪೇಜಾವರ ಮಠವು ರಾಷ್ಟ್ರೀಯ ಏಕತೆಯನ್ನು ಉತ್ತೇಜಿಸುವ ಮೂಲಕ, ಬಲವಂತದ ಮತಾಂತರವನ್ನು ತಡೆಯುವ ಮೂಲಕ, ರಾಮ ಮಂದಿರ ಚಳವಳಿಯನ್ನು ಬೆಂಬಲಿಸುವ ಮೂಲಕ ಮತ್ತು ಸನಾತನ ಧರ್ಮದ ಸೇವೆ ಮಾಡುವ ಮೂಲಕ ದೇಶಾದ್ಯಂತ ಗೌರವಾನ್ವಿತ ಸ್ಥಾನವನ್ನು ಗಳಿಸಿದೆ

ತಮ್ಮ 8ನೇ ವಯಸ್ಸಿನಲ್ಲಿ ಸನ್ಯಾಸ ಸ್ವೀಕರಿಸಿದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರು ತಮ್ಮ ಜೀವನವನ್ನು ಸಮಾಜ, ಧರ್ಮ ಮತ್ತು ಸಮುದಾಯಕ್ಕೆ ಮುಡಿಪಾಗಿಟ್ಟರು

ಸ್ವಾಮೀಜಿಯವರು ಧಾರ್ಮಿಕ ಬೋಧನೆಗಳನ್ನು ಆಧುನಿಕ ಶಿಕ್ಷಣದೊಂದಿಗೆ ಸಂಯೋಜಿಸಿದರು ಮತ್ತು ತಮ್ಮ ಇಡೀ ಜೀವನವನ್ನು ಶಿಕ್ಷಣ, ಸೇವೆ, ಆರೋಗ್ಯ ಮತ್ತು ವೇದಗಳ ಪ್ರಚಾರಕ್ಕಾಗಿ ಮುಡಿಪಾಗಿಟ್ಟರು

ದಕ್ಷಿಣ ಭಾರತದಲ್ಲಿ ಹಿಂದೂ ಸಮಾಜವನ್ನು ಜಾತಿಗಳಾಗಿ ವಿಭಜಿಸುವುದನ್ನು ನಿಯಂತ್ರಿಸುವಲ್ಲಿ  ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಮಹತ್ವದ ಕೊಡುಗೆ ನೀಡಿದ್ದಾರೆ

ಪೂಜ್ಯ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರು ಸ್ಥಾಪಿಸಿದ ಶ್ರೀ ಕೃಷ್ಣ ಸೇವಾ ಆಶ್ರಮ ಟ್ರಸ್ಟ್ ಸದಾ ಸಮಾಜದ ಬಡವರು ಮತ್ತು ಸಮಾಜದ ಅಂಚಿನಲ್ಲಿರುವ ಜನರ ಸೇವೆಗಾಗಿ ಕೆಲಸ ಮಾಡಿದೆ

Posted On: 07 MAR 2025 4:38PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ಕರ್ನಾಟಕದ ಬೆಂಗಳೂರಿನಲ್ಲಿ ಶ್ರೀ ವಿಶ್ವೇಶತೀರ್ಥ ಸ್ಮಾರಕ ಆಸ್ಪತ್ರೆಯನ್ನು ಉದ್ಘಾಟಿಸಿದರು.

ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ತಮ್ಮ ಭಾಷಣದಲ್ಲಿ, ಇಂದು ಕರ್ನಾಟಕದ ಬೆಂಗಳೂರಿನಲ್ಲಿ 2 ಎಕರೆ ಭೂಮಿಯಲ್ಲಿ 60 ಕೋಟಿ ರೂ.ಗಳ ವೆಚ್ಚದಲ್ಲಿ 150 ಹಾಸಿಗೆಗಳ ಮಲ್ಟಿ-ಸ್ಪೆಷಾಲಿಟಿ ಶ್ರೀ ವಿಶ್ವೇಶತೀರ್ಥ ಸ್ಮಾರಕ ಆಸ್ಪತ್ರೆಯನ್ನು ಉದ್ಘಾಟಿಸಲಾಗಿದೆ ಎಂದರು. ಸಮಾಜದ ಬಡ ಮತ್ತು ದೀನದಲಿತ ವರ್ಗಗಳಿಗೆ ಉಚಿತ ಚಿಕಿತ್ಸೆ ನೀಡುವ ಆಧುನಿಕ ಕೇಂದ್ರವು ಮುಂಬರುವ ಅನೇಕ ವರ್ಷಗಳವರೆಗೆ ಜನರಿಗೆ ಸೇವೆ ಸಲ್ಲಿಸಲಿದೆ ಎಂದು ಅವರು ಉಲ್ಲೇಖಿಸಿದರು. ಈ ಆಸ್ಪತ್ರೆಯಲ್ಲಿ ಶೇಕಡಾ 60 ರಷ್ಟು ಹಾಸಿಗೆಗಳನ್ನು ಬಡವರಿಗೆ ಮೀಸಲಿಡಲಾಗಿದೆ ಮತ್ತು ಕೇಂದ್ರವು ಹಲವಾರು ಅತ್ಯಾಧುನಿಕ ಸೇವೆಗಳನ್ನು ಹೊಂದಿದೆ ಎಂದು ಅವರು ಹೇಳಿದರು. ಶ್ರೀ ಕೃಷ್ಣ ಸೇವಾ ಆಶ್ರಮ ಟ್ರಸ್ಟ್ ಸದಾ ಸಮಾಜದ ಬಡವರು ಮತ್ತು ಸಮಾಜದ ಅಂಚಿನಲ್ಲಿರುವ ದುರ್ಬಲ ವರ್ಗದವರ ಸೇವೆಗಾಗಿ ಕೆಲಸ ಮಾಡಿದೆ ಎಂದೂ ಶ್ರೀ ಶಾ ಉಲ್ಲೇಖಿಸಿದರು. ಈ ಟ್ರಸ್ಟ್ ಅನ್ನು ಪೂಜ್ಯ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರು ಸ್ಥಾಪಿಸಿದರು ಮತ್ತು ಇಂದು ಅವರ ಉತ್ತರಾಧಿಕಾರಿ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಸಂಪ್ರದಾಯವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ ಎಂದು ಅವರು ಹೇಳಿದರು. ಶ್ರೀ ಕೃಷ್ಣ ವೈದ್ಯಕೀಯ ಕೇಂದ್ರ, ಶ್ರೀ ಕೃಷ್ಣ ನೇತ್ರಾಲಯ, ದಂತ ಕೇಂದ್ರ ಮತ್ತು ಶ್ರೀ ವಿಶ್ವಪ್ರಸನ್ನತೀರ್ಥ ಸ್ಮಾರಕ ಚಿಕಿತ್ಸಾಲಯವನ್ನು ಸ್ಥಾಪಿಸಲಾಗಿದ್ದು, ಬೆಂಗಳೂರಿನಲ್ಲಿ ಬಡವರಿಗೆ ಇದಕ್ಕಿಂತ ಉತ್ತಮವಾದ ಚಿಕಿತ್ಸಾ ಕೇಂದ್ರ ಬೇರೆ ಇರಲು ಸಾಧ್ಯವಿಲ್ಲ ಎಂದು ಅವರು ಒತ್ತಿ ಹೇಳಿದರು.

ಪೇಜಾವರ ಮಠವು ಕರ್ನಾಟಕ ಮತ್ತು ದಕ್ಷಿಣ ಭಾರತದ ಪ್ರಮುಖ ಮಠ ಮಾತ್ರವಲ್ಲ, ಇಡೀ ಭಾರತದ ಪ್ರಮುಖ ಮಠವಾಗಿದ್ದು, ಬೆಳಕಿನ ದೀಪವಾಗಿ ಕಾರ್ಯನಿರ್ವಹಿಸುತ್ತಿದೆ ಎಂದೂ ಕೇಂದ್ರ ಗೃಹ ಸಚಿವರು ಮತ್ತು ಸಹಕಾರ ಸಚಿವರು ಮಠದ ಸಾಧನೆಯನ್ನು ಕೊಂಡಾಡಿದರು. ಶ್ರೀ ಶ್ರೀ ವಿಶ್ವೇಶತೀರ್ಥರ ನಾಯಕತ್ವದಲ್ಲಿ, ಪೇಜಾವರ ಮಠವು ರಾಷ್ಟ್ರೀಯ ಏಕತೆಯನ್ನು ಉತ್ತೇಜಿಸುವಲ್ಲಿ, ಬಲವಂತದ ಮತಾಂತರವನ್ನು ತಡೆಗಟ್ಟುವಲ್ಲಿ, ರಾಮ ಮಂದಿರ ಚಳವಳಿಯನ್ನು ಬೆಂಬಲಿಸುವಲ್ಲಿ ಮತ್ತು ದಕ್ಷಿಣ ಭಾರತ ಹಾಗು ರಾಷ್ಟ್ರದಾದ್ಯಂತ ಹಿಂದುತ್ವ ಮತ್ತು ಸನಾತನ ಧರ್ಮದ ಸೇವೆಯಲ್ಲಿ ದೀರ್ಘಕಾಲದ ಪ್ರಯತ್ನಗಳಿಗಾಗಿ ದೇಶಾದ್ಯಂತ ಗೌರವಾನ್ವಿತ ಸ್ಥಾನವನ್ನು ಗಳಿಸಿದೆ ಎಂದು ಅವರು ಉಲ್ಲೇಖಿಸಿದರು. ಉಡುಪಿಯಲ್ಲಿರುವ ಪೇಜಾವರ ಮಠವು ಎಂಟು ಮಠಗಳಲ್ಲಿ ಒಂದಾಗಿದ್ದು ಅದು ಶ್ರೀ ಮಧ್ವಾಚಾರ್ಯರ ಬೋಧನೆಗಳನ್ನು ಅನುಸರಿಸಿ ಶ್ರೀಕೃಷ್ಣನ ಭಕ್ತಿಯ ಹಾದಿಯಲ್ಲಿ ಅನೇಕ ಜನರಿಗೆ ಮಾರ್ಗದರ್ಶನ ನೀಡುವಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದೂ ಶ್ರೀ ಶಾ ಹೇಳಿದರು.

ಶ್ರೀ ವಿಶ್ವೇಶತೀರ್ಥ ಸ್ವಾಮಿಗಳಂತಹ ಸಂತನನ್ನು ಇಂದಿನ ಕಾಲದಲ್ಲಿ ಕಾಣುವುದು ಬಹಳ ಅಪರೂಪ ಎಂದು ಶ್ರೀ ಅಮಿತ್ ಶಾ ಹೇಳಿದರು. ಸ್ವಾಮೀಜಿಯವರು ತಮ್ಮ 8ನೇ ವಯಸ್ಸಿನಲ್ಲಿ ಸನ್ಯಾಸ ಸ್ವೀಕರಿಸಿ, ತಮ್ಮ 8 ದಶಕಗಳ ಜೀವನವನ್ನು ಅಧ್ಯಾತ್ಮಿಕತೆಗೆ ಮುಡಿಪಾಗಿಟ್ಟಿದ್ದರು. ಸ್ವಾಮೀಜಿ ಅವರು ಹಿಂದೂ ಧರ್ಮದ ಸೇವೆಯಲ್ಲಿ ಮಾತ್ರವಲ್ಲದೆ ಸಮಾಜ ಮತ್ತು ರಾಷ್ಟ್ರದ ಸೇವೆಯಲ್ಲೂ ಸದಾ ಮುಂಚೂಣಿಯಲ್ಲಿದ್ದರು ಎಂದು ಅವರು ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2020 ರಲ್ಲಿ ಸ್ವಾಮೀಜಿಗೆ ಪದ್ಮ ವಿಭೂಷಣ ಪ್ರಶಸ್ತಿಯನ್ನು ಪ್ರದಾನ ಮಾಡಿದರು ಎಂದೂ  ಶ್ರೀ ಶಾ ನೆನಪಿಸಿಕೊಂಡರು.

ಸ್ವಾಮೀಜಿ ಸದಾ ರಾಷ್ಟ್ರೀಯ ಏಕತೆಗಾಗಿ ಕೆಲಸ ಮಾಡಿದ್ದಾರೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ದಕ್ಷಿಣ ಭಾರತದಲ್ಲಿ ಹಿಂದೂ ಸಮಾಜವನ್ನು ಜಾತಿಗಳಾಗಿ ವಿಭಜಿಸುವುದನ್ನು ನಿಯಂತ್ರಿಸುವಲ್ಲಿ ಸ್ವಾಮೀಜಿ ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ಅವರು ಉಲ್ಲೇಖಿಸಿದರು. ಸ್ವಾಮೀಜಿಯವರು ತಮ್ಮ ಇಡೀ ಜೀವನವನ್ನು ಶಿಕ್ಷಣ, ಸೇವೆ, ಆರೋಗ್ಯ ಮತ್ತು ವೇದಗಳ ಪ್ರಚಾರಕ್ಕಾಗಿ ಮುಡಿಪಾಗಿಟ್ಟರು ಎಂದು ಅವರು ಹೇಳಿದರು. ಧಾರ್ಮಿಕ ಬೋಧನೆಗಳನ್ನು ಆಧುನಿಕ ಶಿಕ್ಷಣದೊಂದಿಗೆ ಸಂಯೋಜಿಸಲು ಸ್ವಾಮೀಜಿ ಕೆಲಸ ಮಾಡಿದರು ಎಂದು ಶ್ರೀ ಶಾ ನುಡಿದರು. ಇಂದು ಸ್ವಾಮೀಜಿಯವರ ಪರಂಪರೆ ಮುಂದುವರಿಯುತ್ತಿದ್ದು, ಉಡುಪಿ ಮಠವು ದೇಶದ ಬಗ್ಗೆ ಅಪಾರ ನಿರೀಕ್ಷೆಗಳನ್ನು ಹೊಂದಿದೆ ಎಂದರು. ರಾಮ ಮಂದಿರದಲ್ಲಿ ಭಗವಾನ್ ರಾಮನ ಪ್ರತಿಷ್ಠಾಪನೆಯ ಧಾರ್ಮಿಕ ಸಮಾರಂಭಗಳಲ್ಲಿ ಪೇಜಾವರ ಮಠವು ನಿರ್ಣಾಯಕ ಪಾತ್ರ ವಹಿಸಿದೆ ಎಂದು ಅವರು ಒತ್ತಿ ಹೇಳಿದರು. ಶ್ರೀ ನರೇಂದ್ರ ಮೋದಿ ಅವರು 2014 ರಲ್ಲಿ ಭಾರತದ ಪ್ರಧಾನಿಯಾದಾಗ, ಅವರನ್ನು ಆಶೀರ್ವದಿಸಲು ದಿಲ್ಲಿಗೆ ಹೋದ ಪ್ರಮುಖ ಸಂತರಲ್ಲಿ ಸ್ವಾಮೀಜಿ ಒಬ್ಬರು ಎಂದೂ ಶ್ರೀ ಶಾ ಹೇಳಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕಳೆದ 10 ವರ್ಷಗಳಲ್ಲಿ ಜನರ ಆರೋಗ್ಯ ಮತ್ತು ಯೋಗಕ್ಷೇಮದ ಬಗ್ಗೆ ಹೆಚ್ಚಿನ ಗಮನ ಹರಿಸಿದ್ದಾರೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಸ್ವಚ್ಛ ಭಾರತ ಅಭಿಯಾನ, ಫಿಟ್ ಇಂಡಿಯಾ ಆಂದೋಲನ, ಪೌಷ್ಟಿಕ ಅಭಿಯಾನ, ಮಿಷನ್ ಇಂದ್ರಧನುಷ್, ಆಯುಷ್ಮಾನ್ ಭಾರತ್ ಯೋಜನೆ ಮತ್ತು ಜಲ ಜೀವನ್ ಮಿಷನ್ ನಂತಹ ಅಭಿಯಾನಗಳು ಆರೋಗ್ಯಕರ ಭಾರತ ಅಭಿಯಾನದ ವಿವಿಧ ಘಟಕಾಂಶಗಳಾಗಿವೆ ಎಂದು ಅವರು ಉಲ್ಲೇಖಿಸಿದರು. ಸ್ವಚ್ಛತೆಯು ಆರೋಗ್ಯವನ್ನು ನಿರ್ವಹಿಸಬಲ್ಲದು, ಫಿಟ್ನೆಸ್ ಆರೋಗ್ಯವನ್ನು ಶಾಶ್ವತಗೊಳಿಸುತ್ತದೆ ಹಾಗು ಪೌಷ್ಟಿಕ ಮತ್ತು ಸಮತೋಲಿತ ಆಹಾರ ಮಾತ್ರ ಮಾನವ ದೇಹವನ್ನು ಆರೋಗ್ಯಕರವಾಗಿಡಬಹುದು ಎಂದು ಅವರು ಒತ್ತಿ ಹೇಳಿದರು. ಮಿಷನ್ ಇಂದ್ರಧನುಷ್ ಎಲ್ಲಾ ರೀತಿಯ ಲಸಿಕೆಗಳನ್ನು ಒಳಗೊಂಡಿದೆ, ಜಲ ಜೀವನ್ ಮಿಷನ್ ಪ್ರತಿ ಮನೆಗೂ ಫ್ಲೋರೈಡ್ ಮುಕ್ತ ನೀರನ್ನು ತಲುಪುವುದನ್ನು ಖಚಿತಪಡಿಸಿದೆ ಮತ್ತು ಆಯುಷ್ಮಾನ್ ಭಾರತ್ ಯೋಜನೆಯಡಿ ಪ್ರಧಾನಿ ಮೋದಿ 60 ಕೋಟಿ ಜನರಿಗೆ 5 ಲಕ್ಷ ರೂ.ಗಳವರೆಗೆ ಉಚಿತ ಚಿಕಿತ್ಸೆಯನ್ನು ಒದಗಿಸಿದ್ದಾರೆ ಎಂದುದೂ ಶ್ರೀ ಶಾ ಹೇಳಿದರು. ಧಾರ್ಮಿಕ ಮತ್ತು ಸೇವಾ ಆಧಾರಿತ ಸಂಸ್ಥೆಗಳು ಅವುಗಳನ್ನು ಸಕ್ರಿಯವಾಗಿ ಉತ್ತೇಜಿಸದ ಹೊರತು ಆರೋಗ್ಯ ಉಪಕ್ರಮಗಳು ಯಶಸ್ವಿಯಾಗುವುದಿಲ್ಲ ಎಂಬುದನ್ನೂ  ಅವರು ಉಲ್ಲೇಖಿಸಿದರು. ಸ್ವಾಮೀಜಿಯವರ ಸ್ಮರಣಾರ್ಥ ನಿರ್ಮಿಸಲಾದ ಆಸ್ಪತ್ರೆ ಸಮಾಜವನ್ನು ಆರೋಗ್ಯವಾಗಿಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಹೇಳುವ ಮೂಲಕ ಅವರು ತಮ್ಮ ಮಾತುಗಳನ್ನು ಮುಕ್ತಾಯಗೊಳಿಸಿದರು.

 

*****

 


(Release ID: 2109167) Visitor Counter : 22