ಸಂಸ್ಕೃತಿ ಸಚಿವಾಲಯ
ಭಾರತವು ಆರ್ಥಿಕ ಶಕ್ತಿ ಕೇಂದ್ರವಾಗುತ್ತಿದೆ ಮತ್ತು ವಿಶ್ವದ ಭವಿಷ್ಯದ ಪ್ರಮುಖ ಭಾಗವಾಗುತ್ತಿದೆ: ಸ್ಕಾಟ್ ಫಾಲ್ಕನರ್
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಶ್ವದ ಉನ್ನತ ನಾಯಕರಲ್ಲಿ ಒಬ್ಬರು ಮತ್ತು ಇತರರಿಗೆ ಸ್ಫೂರ್ತಿಯಾಗಿದ್ದಾರೆ ಎಂದು ಯುಎಸ್ ಹೌಸ್ ಮಾಜಿ ಮುಖ್ಯ ಆಡಳಿತಾಧಿಕಾರಿ ಸ್ಕಾಟ್ ಫಾಲ್ಕನರ್ ಹೇಳಿಕೆ
Posted On:
27 FEB 2025 6:08PM by PIB Bengaluru
ಭಾರತವು ಆರ್ಥಿಕ ಶಕ್ತಿ ಕೇಂದ್ರವಾಗುತ್ತಿದೆ ಮತ್ತು ವಿಶ್ವದ ಭವಿಷ್ಯವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಯುಎಸ್ ಹೌಸ್ ಮಾಜಿ ಮುಖ್ಯ ಆಡಳಿತಾಧಿಕಾರಿ ಸ್ಕಾಟ್ ಫಾಲ್ಕನರ್ ಗುರುವಾರ ಹೇಳಿದ್ದಾರೆ. ದೇಶವು 21ನೇ ಶತಮಾನದ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದೆ, ತನ್ನ ಜನರ ವಿಕಸನಗೊಳ್ಳುತ್ತಿರುವ ಅಗತ್ಯಗಳನ್ನು ಪೂರೈಸಲು ತಂತ್ರಜ್ಞಾನ ಮತ್ತು ಆಡಳಿತವನ್ನು ಅಡೆ-ತಡೆರಹಿತವಾಗಿ ಸಂಯೋಜಿಸುತ್ತಿದೆ ಎಂಬುದನ್ನು ಅವರು ಗಮನಿಸಿದರು. ಮಾಧ್ಯಮ ಸಂವಾದದಲ್ಲಿ ಭಾಗವಹಿಸಲು ಶ್ರೀ ಫಾಲ್ಕನರ್ ಅವರು ಒಂದು ವಾರ ಕಾಲ ಭಾರತ ಪ್ರವಾಸದಲ್ಲಿದ್ದಾರೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಶ್ಲಾಘಿಸಿದ ಶ್ರೀ ಫಾಲ್ಕನರ್, ವಿಶ್ವದ ಉನ್ನತ ನಾಯಕರಲ್ಲಿ ಮೋದಿ ಒಬ್ಬರು ಮತ್ತು ಅವರು ಇತರರಿಗೆ ಸ್ಫೂರ್ತಿ ಎಂದು ಬಣ್ಣಿಸಿದರು. ಪ್ರಧಾನಮಂತ್ರಿ ಸಂಗ್ರಾಹಾಲಯಕ್ಕೆ ಭೇಟಿ ನೀಡಿದ ನಂತರ, ವಿಶ್ವಾದ್ಯಂತ ಇಂತಹ ಹೆಚ್ಚಿನ ವಸ್ತುಸಂಗ್ರಹಾಲಯಗಳ ಅಗತ್ಯವನ್ನು ಒತ್ತಿ ಹೇಳಿದ ಅವರು, ವಸ್ತುಸಂಗ್ರಹಾಲಯವು ಸ್ಫೂರ್ತಿಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಅದನ್ನು ವ್ಯಾಪಕವಾಗಿ ಹಂಚಿಕೊಳ್ಳಬೇಕು ಎಂದೂ ಹೇಳಿದರು.

ಶ್ರೀ ಫಾಲ್ಕನರ್ ಅವರು ಪ್ರಧಾನ ಮಂತ್ರಿ ಸಂಗ್ರಾಹಾಲಯ ಮತ್ತು ಹೊಸದಾಗಿ ನಿರ್ಮಿಸಲಾದ ಸಂಸತ್ತಿಗೆ ಭೇಟಿ ನೀಡಿದರು. ತಮ್ಮ ಭೇಟಿಯ ನಂತರ, ಅವರು ಜಾಗತಿಕ ವೇದಿಕೆಯಲ್ಲಿ ಭಾರತದ ಪ್ರಗತಿ ಮತ್ತು ನಾಯಕತ್ವವನ್ನು ಶ್ಲಾಘಿಸಿದರು. ಅವರು ಈ ಹಿಂದೆ ರೇಗನ್ ಅಭಿಯಾನದಲ್ಲಿ ಸಿಬ್ಬಂದಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು ಮತ್ತು ಅಧ್ಯಕ್ಷೀಯ ಪರಿವರ್ತನೆ ಹಾಗು ಶ್ವೇತಭವನದ ಸಿಬ್ಬಂದಿಯ ಭಾಗವಾಗಿದ್ದರು. ಅವರು ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್, ಜನರಲ್ ಸರ್ವೀಸಸ್ ಅಡ್ಮಿನಿಸ್ಟ್ರೇಷನ್ ಮತ್ತು ಇತರ ದೇಶಗಳಿಗೆ ಶಾಂತಿ ಮತ್ತು ಸ್ನೇಹಾಚಾರ ಉತ್ತೇಜಿಸಲು ಸ್ವಯಂಸೇವಕರನ್ನು ಕಳುಹಿಸುವ ಶಾಂತಿ ಪಡೆ ಕಾರ್ಯನಿರ್ವಾಹಕ ಸ್ಥಾನಗಳನ್ನು ಹೊಂದಿದ್ದರು.

ಫಾಲ್ಕನರ್ ಅಮೆರಿಕನ್ ವಿಶ್ವವಿದ್ಯಾಲಯದಿಂದ ಸಾರ್ವಜನಿಕ ಆಡಳಿತದಲ್ಲಿ ಸ್ನಾತಕೋತ್ತರ ಪದವಿ ಮತ್ತು ಲಾರೆನ್ಸ್ ವಿಶ್ವವಿದ್ಯಾಲಯದಿಂದ ಸರ್ಕಾರದಲ್ಲಿ ಪದವಿ ಪಡೆದರು. ಅವರು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಮತ್ತು ಜಾರ್ಜ್ಟೌನ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿದರು ಮತ್ತು ಪ್ರಸ್ತುತ ಶೆಫರ್ಡ್ ವಿಶ್ವವಿದ್ಯಾಲಯದ ಜಾರ್ಜ್ ವಾಷಿಂಗ್ಟನ್ ಇನ್ಸ್ಟಿಟ್ಯೂಟ್ ಆಫ್ ಲಿವಿಂಗ್ ಎಥಿಕ್ಸ್ನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಹೊಸ ಸಂಸತ್ತಿಗೆ ಭೇಟಿ ನೀಡಿದ ನಂತರ ಮಾತನಾಡಿದ ಶ್ರೀ ಫಾಲ್ಕನರ್ ಅವರು ಅದರ ಅತ್ಯಾಧುನಿಕ ವಾಸ್ತುಶಿಲ್ಪ ಮತ್ತು ತಾಂತ್ರಿಕ ಆವಿಷ್ಕಾರಗಳಿಂದ ಹೆಚ್ಚು ಪ್ರಭಾವಿತರಾಗಿರುವುದಾಗಿ ಹೇಳಿದರು. ಬಹು ಭಾಷೆಗಳ ಸಮರ್ಥ ನಿರ್ವಹಣೆ, ಏಕಕಾಲಿಕ ಭಾಷಾಂತರ ಸೌಲಭ್ಯಗಳು ಮತ್ತು ಸಂಪೂರ್ಣ ಸ್ವಯಂಚಾಲಿತ ದಾಖಲೆ ವ್ಯವಸ್ಥೆಯನ್ನು ಅವರು ವಿಶೇಷವಾಗಿ ಗಮನಿಸಿದರು, ಅವುಗಳನ್ನು ಜಗತ್ತು ಕಲಿಯಬಹುದಾದ ಆವಿಷ್ಕಾರಗಳು ಎಂದು ಅವರು ಕರೆದರು.
*****
(Release ID: 2107335)