ಕೃಷಿ ಸಚಿವಾಲಯ
15ನೇ ಹಣಕಾಸು ಆಯೋಗದ ಅವಧಿಯಲ್ಲಿ 2025-26ರ ವರೆಗೆ ಪ್ರಧಾನ ಮಂತ್ರಿ ಅನ್ನದಾತ ಆದಾಯ(ಆಯ್) ಸಂರಕ್ಷಣಾ ಅಭಿಯಾನ(ಪಿಎಂ-ಆಶಾ) ಯೋಜನೆಗೆ ಸರ್ಕಾರದ ಅನುಮೋದನೆ
ಮುಂದಿನ 4 ವರ್ಷಗಳ ಕಾಲ ರಾಜ್ಯಗಳ 100% ತೊಗರಿ, ಉದ್ದು ಮತ್ತು ಚನ್ನಂಗಿ (ಮಸೂರ್) ಬೇಳೆಯನ್ನು ಸರ್ಕಾರ ಖರೀದಿಸಲಿದೆ
2024-25ರ ಹಿಂಗಾರು(ಖಾರಿಫ್) ಋತುವಿನಲ್ಲಿ ಬೆಂಬಲ ಬೆಲೆ ಯೋಜನೆಯಡಿ 9 ರಾಜ್ಯಗಳಲ್ಲಿ ತೊಗರಿ ಖರೀದಿಗೆ ಕೇಂದ್ರ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅನುಮೋದನೆ
ಆಂಧ್ರ ಪ್ರದೇಶ, ಕರ್ನಾಟಕ, ಮಹಾರಾಷ್ಟ್ರ ಮತ್ತು ತೆಲಂಗಾಣದಲ್ಲಿ 0.15 ಲಕ್ಷ ಮೆಟ್ರಿಕ್ ಟನ್ ತೊಗರಿ ಖರೀದಿಯಿಂದ 12,006 ರೈತರು ಪ್ರಯೋಜನ ಪಡೆದಿದ್ದಾರೆ
ರೈತರು ಉತ್ಪಾದಿಸುವ 100% ತೊಗರಿಯನ್ನು ಕೇಂದ್ರ ನೋಡಲ್ ಏಜೆನ್ಸಿಗಳಾದ ನಫೆಡ್ ಮತ್ತು ಎನ್ ಸಿಸಿಎಫ್ ಮೂಲಕ ಖರೀದಿಸಲು ಕೇಂದ್ರದ ಭರವಸೆ
Posted On:
17 FEB 2025 5:30PM by PIB Bengaluru
ಸಂಯೋಜಿತ ಅಥವಾ ಸಮಗ್ರ ಪ್ರಧಾನಮಂತ್ರಿ ಅನ್ನದಾತ ಆದಾಯ(ಆಯ್) ಸಂರಕ್ಷಣಾ ಅಭಿಯಾನ(ಪಿಎಂ-ಆಶಾ) ಯೋಜನೆಯನ್ನು 15ನೇ ಹಣಕಾಸು ಆಯೋಗದ ಅವಧಿಯಲ್ಲಿ 2025-26ರ ವರೆಗೆ ಮುಂದುವರಿಸಲು ಭಾರತ ಸರ್ಕಾರ ಅನುಮೋದನೆ ನೀಡಿದೆ. ರೈತರಿಗೆ ತಮ್ಮ ಉತ್ಪನ್ನಗಳಿಗೆ ಲಾಭದಾಯಕ ಬೆಲೆಗಳನ್ನು ಒದಗಿಸುವಲ್ಲಿ ಇದು ಸಹಾಯ ಮಾಡುವುದಲ್ಲದೆ, ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಅಗತ್ಯ ವಸ್ತುಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವ ಮೂಲಕ ಬೆಲೆ ಏರಿಳಿತವನ್ನು ನಿಯಂತ್ರಿಸುವ ಖರೀದಿ ಕಾರ್ಯಾಚರಣೆಗಳ ಅನುಷ್ಠಾನದಲ್ಲಿ ಹೆಚ್ಚಿನ ಪರಿಣಾಮಕಾರಿತ್ವ ತರಲು ಸಂಯೋಜಿತ PM-AASHA ಯೋಜನೆಯನ್ನು ನಿರ್ವಹಿಸಲಾಗುತ್ತದೆ. ಸಂಯೋಜಿತ ಪಿಎಂ-ಆಶಾ ಯೋಜನೆಯ ಬೆಂಬಲ ಬೆಲೆ ಯೋಜನೆಯಡಿ, ನಿಗದಿತ ನ್ಯಾಯಯುತ ಸರಾಸರಿ ಗುಣಮಟ್ಟ(ಎಫ್ಎಕ್ಯು)ಕ್ಕೆ ಅನುಗುಣವಾಗಿ, ಅಧಿಸೂಚಿತ ದ್ವಿದಳ ಧಾನ್ಯಗಳು, ಎಣ್ಣೆಕಾಳುಗಳು ಮತ್ತು ಕೊಬ್ಬರಿಗಳ ಖರೀದಿಯನ್ನು ಕೇಂದ್ರ ನೋಡಲ್ ಏಜೆನ್ಸಿಗಳು(ಸಿಎನ್ಎಗಳು) ರಾಜ್ಯ ಮಟ್ಟದ ಏಜೆನ್ಸಿಗಳ ಮೂಲಕ ಪೂರ್ವ-ನೋಂದಾಯಿತ ರೈತರಿಂದ ನೇರವಾಗಿ ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿ ನಡೆಸುತ್ತವೆ.
ದೇಶೀಯ ದ್ವಿದಳ ಧಾನ್ಯಗಳ ಉತ್ಪಾದನೆ ಹೆಚ್ಚಿಸಲು ಕೊಡುಗೆ ನೀಡುವ ರೈತರನ್ನು ಪ್ರೋತ್ಸಾಹಿಸುವ ಸಲುವಾಗಿ ಮತ್ತು ಆಮದು ಅವಲಂಬನೆ ಕಡಿಮೆ ಮಾಡುವ ಸಲುವಾಗಿ, 2024-25ನೇ ಖರೀದಿ ವರ್ಷದಲ್ಲಿ ಬೆಂಬಲ ಬೆಲೆ ಯೋಜನೆ ಅಡಿ, ರಾಜ್ಯಗಳು ಉತ್ಪಾದಿಸುವ 100% ತೊಗರಿ, ಉದ್ದು ಮತ್ತು ಮಸೂರ್ ಖರೀದಿಗೆ ಸರ್ಕಾರ ಅವಕಾಶ ನೀಡಿದೆ.
ದೇಶದಲ್ಲಿ ದ್ವಿದಳ ಧಾನ್ಯಗಳ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವ ಉದ್ದೇಶದಿಂದ, ಕೇಂದ್ರ ನೋಡಲ್ ಏಜೆನ್ಸಿಗಳ ಮೂಲಕ ರಾಜ್ಯಗಳ ಉತ್ಪಾದನೆಯ 100% ಪ್ರಮಾಣದವರೆಗೆ ತೊಗರಿ, ಉದ್ದು ಮತ್ತು ಚನ್ನಂಗಿ(ಮಸೂರ್) ಬೇಳೆಗಳ ಖರೀದಿಯನ್ನು ಇನ್ನೂ 4 ವರ್ಷಗಳ ಕಾಲ ಮುಂದುವರಿಸಲಾಗುವುದು ಎಂದು ಸರ್ಕಾರ 2025ರ ಬಜೆಟ್‌ನಲ್ಲಿ ಘೋಷಣೆ ಮಾಡಿದೆ.
ಕೇಂದ್ರ ಕೃಷಿ ಮತ್ತು ಕೃಷಿಕರ ಕಲ್ಯಾಣ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು 2024-25ರ ಹಿಂಗಾರು(ಖಾರಿಫ್) ಋತುವಿನಲ್ಲಿ ಬೆಲೆ ಬೆಂಬಲ ಯೋಜನೆಯಡಿ ಆಂಧ್ರ ಪ್ರದೇಶ, ಛತ್ತೀಸ್‌ಗಢ, ಗುಜರಾತ್, ಹರಿಯಾಣ, ಕರ್ನಾಟಕ, ಮಧ್ಯ ಪ್ರದೇಶ, ಮಹಾರಾಷ್ಟ್ರ, ತೆಲಂಗಾಣ ಮತ್ತು ಉತ್ತರ ಪ್ರದೇಶದಲ್ಲಿ ಒಟ್ಟು 13.22 ಲಕ್ಷ ಮೆಟ್ರಿಕ್ ಟನ್ ತೊಗರಿ ಬೇಳೆ ಖರೀದಿಸಲು ಅನುಮೋದನೆ ನೀಡಿದ್ದಾರೆ.
ಆಂಧ್ರ ಪ್ರದೇಶ, ಕರ್ನಾಟಕ, ಮಹಾರಾಷ್ಟ್ರ ಮತ್ತು ತೆಲಂಗಾಣದಲ್ಲಿ ಈಗಾಗಲೇ ಬೇಳೆಗಳ ಖರೀದಿ ಆರಂಭವಾಗಿದ್ದು, 15.02.2025ರ ತನಕ ಈ ರಾಜ್ಯಗಳಲ್ಲಿ ಒಟ್ಟು 0.15 ಲಕ್ಷ ಮೆಟ್ರಿಕ್ ಟನ್ ತೊಗರಿಬೇಳೆ ಖರೀದಿಸಲಾಗಿದೆ, ಇದರಿಂದ ಈ ರಾಜ್ಯಗಳ 12,006 ರೈತರಿಗೆ ಪ್ರಯೋಜನವಾಗಿದೆ. ಇತರೆ ರಾಜ್ಯಗಳಲ್ಲಿ ತೊಗರಿ ಖರೀದಿ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ರೈತರು ಉತ್ಪಾದಿಸುವ ತೊಗರಿಯ 100% ಪ್ರಮಾಣವನ್ನು ಕೇಂದ್ರ ನೋಡಲ್ ಏಜೆನ್ಸಿಗಳಾದ ನಫೆಡ್ ಮತ್ತು ಎನ್ ಸಿಸಿಎಫ್ ಮೂಲಕ ಖರೀದಿಸಲು ಭಾರತ ಸರ್ಕಾರ ಬದ್ಧವಾಗಿದೆ.
*****
(Release ID: 2104239)
Visitor Counter : 36