ಆಯುಷ್
azadi ka amrit mahotsav

ನಾಳೆ ಯುನಾನಿ ದಿನದ ಸಂದರ್ಭದಲ್ಲಿ, ದೆಹಲಿಯಲ್ಲಿ ನಡೆಯುವ ಸಮಗ್ರ ಆರೋಗ್ಯ ಪರಿಹಾರಗಳ ಕುರಿತಾದ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಭಾರತದ ರಾಷ್ಟ್ರಪತಿ ಉದ್ಘಾಟಿಸಲಿದ್ದಾರೆ


ಯುನಾನಿ ವೈದ್ಯಕೀಯದ ಅಭಿವೃದ್ಧಿಯನ್ನು ಮುನ್ನಡೆಸಲು ಭಾರತ ಸರ್ಕಾರ ಬದ್ಧವಾಗಿದೆ. ಇದು ಸಾರ್ವಜನಿಕ ಕಲ್ಯಾಣ ಮತ್ತು ಜಾಗತಿಕ ಸಮುದಾಯದ ಒಟ್ಟಾರೆ ಆರೋಗ್ಯಕ್ಕೆ ಅರ್ಥಪೂರ್ಣವಾಗಿ ಕೊಡುಗೆ ನೀಡುವುದನ್ನು ಖಚಿತಪಡಿಸುತ್ತದೆ: ಕೇಂದ್ರ ಆಯುಷ್ ಸಚಿವಾಲಯದ ರಾಜ್ಯ ಸಚಿವರಾದ ಶ್ರೀ ಪ್ರತಾಪ್ರಾವ್ ಜಾಧವ್

Posted On: 10 FEB 2025 3:40PM by PIB Bengaluru

ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ನಾಳೆ ನವದೆಹಲಿಯ ವಿಜ್ಞಾನ ಭವನದಲ್ಲಿ ಎರಡು ದಿನಗಳ ಯುನಾನಿ ದಿನದ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ಭೂ ವಿಜ್ಞಾನ ಸಚಿವಾಲಯದ ರಾಜ್ಯ ಸಚಿವರಾದ (ಸ್ವತಂತ್ರ ಉಸ್ತುವಾರಿ) ಡಾ. ಜಿತೇಂದ್ರ ಸಿಂಗ್ ಮತ್ತು ಆಯುಷ್ ಸಚಿವಾಲಯದ ರಾಜ್ಯ ಸಚಿವರಾದ (ಸ್ವತಂತ್ರ ಉಸ್ತುವಾರಿ) ಶ್ರೀ ಪ್ರತಾಪ್ರಾವ್ ಜಾಧವ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿರುತ್ತಾರೆ.

ಪ್ರತಿ ವರ್ಷ ಫೆಬ್ರವರಿ 11 ರಂದು ಯುನಾನಿ ದಿನವನ್ನು ಆಚರಿಸಲಾಗುತ್ತದೆ. ಇದು, ಖ್ಯಾತ ಯುನಾನಿ ವೈದ್ಯ, ಶಿಕ್ಷಣತಜ್ಞ ಮತ್ತು ಸ್ವಾತಂತ್ರ್ಯ ಹೋರಾಟಗಾರ ಶ್ರೀ ಹಕೀಮ್ ಅಜ್ಮಲ್ ಖಾನ್ ಅವರ ಜನ್ಮ ದಿನಾಚರಣೆಯ ಸ್ಮರಣಾರ್ಥ ಆಚರಿಸಲಾಗುತ್ತದೆ. ಭಾರತ ಸರ್ಕಾರದ ಆಯುಷ್ ಸಚಿವಾಲಯದ ಅಧೀನದಲ್ಲಿರುವ ಪ್ರಮುಖ ಸಂಶೋಧನಾ ಮಂಡಳಿಯಾದ ಸೆಂಟ್ರಲ್ ಕೌನ್ಸಿಲ್ ಫಾರ್ ರಿಸರ್ಚ್ ಇನ್ ಯುನಾನಿ ಮೆಡಿಸಿನ್ (ಸಿ.ಸಿ.ಆರ್.ಯು.ಎಂ), ಫೆಬ್ರವರಿ 11-12, 2025 ರಂದು ನವದೆಹಲಿಯ ವಿಜ್ಞಾನ ಭವನದಲ್ಲಿ "ಸಮಗ್ರ ಆರೋಗ್ಯ ಪರಿಹಾರಗಳಿಗಾಗಿ ಯುನಾನಿ ಔಷಧಗಳಲ್ಲಿ ನಾವೀನ್ಯತೆಗಳು - ಮುಂದಕ್ಕೆ ಒಂದು ಮಾರ್ಗ" ಎಂಬ ವಿಶಿಷ್ಟ ಅಂತರರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸುತ್ತಿದೆ.

ಯುನಾನಿ ವೈದ್ಯಕೀಯ ವ್ಯವಸ್ಥೆಯ ಬೆಳವಣಿಗೆ ಮತ್ತು ಮುಖ್ಯವಾಹಿನಿಯ ಆರೋಗ್ಯ ರಕ್ಷಣೆಯಲ್ಲಿ ಆಯುಷ್ ವ್ಯವಸ್ಥೆಗಳ ಏಕೀಕರಣದ ಕಡೆಗೆ ಸರ್ಕಾರದ ಗಮನವನ್ನು ಎತ್ತಿ ತೋರಿಸುತ್ತಾ, ಕೇಂದ್ರ ಆಯುಷ್ ಸಚಿವಾಲಯದ ರಾಜ್ಯ ಸಚಿವರಾದ (ಸ್ವತಂತ್ರ ಉಸ್ತುವಾರಿ) ಶ್ರೀ ಪ್ರತಾಪ್ರಾವ್ ಜಾಧವ್ ಅವರು, "ಜಾಗತಿಕ ಆರೋಗ್ಯ ಚೌಕಟ್ಟಿನಲ್ಲಿ ಯುನಾನಿ ಔಷಧದ ಹೆಚ್ಚುತ್ತಿರುವ ಏಕೀಕರಣವನ್ನು ವೀಕ್ಷಿಸಲು ನನಗೆ ಹೆಮ್ಮೆ ಇದೆ. ನಾವೀನ್ಯತೆ ಮತ್ತು ಸಹಯೋಗವನ್ನು ಬೆಳೆಸುವ ಮೂಲಕ, ಆಧುನಿಕ ಆರೋಗ್ಯ ಸವಾಲುಗಳನ್ನು ಎದುರಿಸುವಾಗ ನಮ್ಮ ಸಾಂಪ್ರದಾಯಿಕ ಪದ್ಧತಿಗಳನ್ನು ಗೌರವಿಸುವ ಸಮಗ್ರ ಆರೋಗ್ಯ ಪರಿಹಾರಗಳನ್ನು ಮುಂದಕ್ಕೆ ತರುವ ಗುರಿಯನ್ನು ನಾವು ಹೊಂದಿದ್ದೇವೆ. ಯುನಾನಿ ಔಷಧದ ಅಭಿವೃದ್ಧಿಯನ್ನು ಮುನ್ನಡೆಸಲು ಭಾರತ ಸರ್ಕಾರ ಬದ್ಧವಾಗಿದೆ, ಇದು ಸಾರ್ವಜನಿಕ ಕಲ್ಯಾಣ ಮತ್ತು ಜಾಗತಿಕ ಸಮುದಾಯದ ಒಟ್ಟಾರೆ ಆರೋಗ್ಯಕ್ಕೆ ಅರ್ಥಪೂರ್ಣವಾಗಿ ಕೊಡುಗೆ ನೀಡುತ್ತದೆ ಎಂದು ಖಚಿತಪಡಿಸುತ್ತದೆ." ಎಂದು ಹೇಳಿದರು

ಆಯುಷ್ ವ್ಯವಸ್ಥೆಗಳಲ್ಲಿ ವೈಜ್ಞಾನಿಕ ಸಂಶೋಧನಾ ಚಟುವಟಿಕೆಯನ್ನು ಹೆಚ್ಚಿಸುವ ಸರ್ಕಾರದ ಗಮನವನ್ನು ಒತ್ತಿಹೇಳುತ್ತಾ, ಕೇಂದ್ರ ಆಯುಷ್ ಸಚಿವಾಲಯದ ಕಾರ್ಯದರ್ಶಿ, ವೈದ್ಯ ಶ್ರೀ ರಾಜೇಶ್ ಕೋಟೆಚಾ ಅವರು, “ಆಯುಷ್ ವಲಯದಲ್ಲಿ ಸಂಶೋಧನಾ ಕೇಂದ್ರಗಳ ಸ್ಥಾಪನೆ, ಮುಖ್ಯವಾಹಿನಿಯ ಆರೋಗ್ಯ ನೀತಿಗಳಲ್ಲಿ ಆಯುಷ್ ಅನ್ನು ಸೇರಿಸುವುದು ಮತ್ತು ಸಾಂಪ್ರದಾಯಿಕ ವ್ಯವಸ್ಥೆಗಳನ್ನು ವಿಶಾಲ ಆರೋಗ್ಯ ಚೌಕಟ್ಟಿನಲ್ಲಿ ಸಂಯೋಜಿಸುವುದು ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವ ಮತ್ತು ಉತ್ತೇಜಿಸುವ ಭಾರತದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಈ ಅಂತರರಾಷ್ಟ್ರೀಯ ಸಮ್ಮೇಳನವು ಯುನಾನಿ ಔಷಧದಲ್ಲಿನ ಇತ್ತೀಚಿನ ಪ್ರಗತಿಗಳು ಮತ್ತು ಸಮಗ್ರ ಆರೋಗ್ಯ ವ್ಯವಸ್ಥೆಗಳಲ್ಲಿ ಅವುಗಳ ಉಪಯುಕ್ತತೆಯನ್ನು ಎತ್ತಿ ತೋರಿಸುವ ಗುರಿಯನ್ನು ಹೊಂದಿದೆ. " ಎಂದು ಹೇಳಿದರು

ಜಾಗತಿಕ ಆರೋಗ್ಯ ಮತ್ತು ಯೋಗಕ್ಷೇಮವನ್ನು ಉತ್ತೇಜಿಸುವಲ್ಲಿ ಯುನಾನಿ ಔಷಧದ ಪ್ರಮುಖ ಪಾತ್ರವನ್ನು ಎತ್ತಿ ತೋರಿಸುವ ಗುರಿಯನ್ನು ಹೊಂದಿರುವ ಅಂತಾರಾಷ್ಟ್ರೀಯ ಸಮ್ಮೇಳನವು ಸಂವಾದ, ಸಹಯೋಗ ಮತ್ತು ಜ್ಞಾನ ವಿನಿಮಯಕ್ಕಾಗಿ ಕ್ರಿಯಾತ್ಮಕ ವೇದಿಕೆಯನ್ನು ನೀಡುತ್ತದೆ. ಸಮ್ಮೇಳನದ ಪ್ರಮುಖ ಉದ್ದೇಶಗಳು ಸೇರಿವೆ :- ನಾವೀನ್ಯತೆಯನ್ನು ಬೆಳೆಸುವುದು: ಸಮಗ್ರ ಆರೋಗ್ಯ ರಕ್ಷಣಾ ಪರಿಹಾರಗಳಿಗಾಗಿ ಯುನಾನಿ ಔಷಧದಲ್ಲಿ ಹೊಸ ಗಡಿಗಳನ್ನು ಅನ್ವೇಷಿಸುವುದು; ಜಾಗತಿಕ ಸಹಯೋಗ: ಸಾಂಪ್ರದಾಯಿಕ ಮತ್ತು ಸಮಗ್ರ ಔಷಧದಲ್ಲಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ತಜ್ಞರಲ್ಲಿ ಜ್ಞಾನ ಹಂಚಿಕೆಯನ್ನು ಸುಗಮಗೊಳಿಸುವುದು; ಸಾಧನೆಗಳನ್ನು ಪ್ರದರ್ಶಿಸುವುದು: ಸಿ.ಸಿ.ಆರ್.ಯು.ಎಂ.ನಿಂದ ಯುನಾನಿ ಔಷಧದಲ್ಲಿನ ಇತ್ತೀಚಿನ ಸಂಶೋಧನೆ ಮತ್ತು ಪ್ರಗತಿಗಳನ್ನು ಎತ್ತಿ ತೋರಿಸುವುದು.

ಈ ಕಾರ್ಯಕ್ರಮದ ಪ್ರಮುಖ ಮುಖ್ಯಾಂಶಗಳು :- ವೈಜ್ಞಾನಿಕ ಅಧಿವೇಶನಗಳು: ಯುನಾನಿ ಔಷಧವನ್ನು ಆಧುನಿಕ ಆರೋಗ್ಯ ರಕ್ಷಣೆಯಲ್ಲಿ ಸಂಯೋಜಿಸುವ ಕುರಿತು ತಜ್ಞರ ನೇತೃತ್ವದ ಪ್ರಮುಖ ಭಾಷಣಗಳು ಮತ್ತು ಚರ್ಚೆಗಳು; ಪ್ರದರ್ಶನ: ಯುನಾನಿ ಮತ್ತು ಗಿಡಮೂಲಿಕೆ ಔಷಧಗಳು, ಶಿಕ್ಷಣ ಸಂಸ್ಥೆಗಳು, ಸಂಶೋಧನಾ ಸಂಸ್ಥೆಗಳು ಮತ್ತು ಸೇವಾ ಪೂರೈಕೆದಾರರಲ್ಲಿನ ನಾವೀನ್ಯತೆಗಳ ರೋಮಾಂಚಕ ಪ್ರದರ್ಶನ; ಜಾಗತಿಕ ಭಾಗವಹಿಸುವಿಕೆ: ಯು.ಎಸ್.ಎ, ದಕ್ಷಿಣ ಆಫ್ರಿಕಾ, ಇರಾನ್, ಮಲೇಷ್ಯಾ, ಯು.ಎ.ಇ, ತಜಿಕಿಸ್ತಾನ್, ಉಜ್ಬೇಕಿಸ್ತಾನ್, ಶ್ರೀಲಂಕಾ ಮತ್ತು ಬಾಂಗ್ಲಾದೇಶ ಸೇರಿದಂತೆ ದೇಶಗಳ ಪ್ರತಿನಿಧಿಗಳು ಅವರುಗಳ ಻ನುಭೌ-ಒಳನೋಟವುಳ್ಳ ಚರ್ಚೆಗಳಿಗೆ ಉತ್ತಮ ಕೊಡುಗೆ ನೀಡುತ್ತಾರೆ.

ಈ ಸಂದರ್ಭದಲ್ಲಿ, ಅಂತಾರಾಷ್ಟ್ರೀಯ ಸಮ್ಮೇಳನದ ಸ್ಮರಣಿಕೆ ಸೇರಿದಂತೆ ಸಿ.ಸಿ.ಆರ್.ಯು.ಎಂ.ನ ಹಲವಾರು ಪ್ರಕಟಣೆಗಳನ್ನು ಬಿಡುಗಡೆ ಮಾಡಲಾಗುತ್ತದೆ. ಹೆಚ್ಚುವರಿಯಾಗಿ, ಸಿ.ಸಿ.ಆರ್.ಯು.ಎಂ. ಸಂಸ್ಥೆಗಳಿಗೆ ಎನ್.ಎ.ಬಿ.ಎಲ್. ಮತ್ತು ಎನ್.ಎ.ಬಿ.ಹೆಚ್. ಪ್ರಮಾಣಪತ್ರಗಳನ್ನು ನೀಡಲಾಗುತ್ತದೆ. ಕೌನ್ಸಿಲ್ ನ ಇತ್ತೀಚಿನ ಉಪಕ್ರಮಗಳನ್ನು ಪ್ರದರ್ಶಿಸುವ ಕಿರು ವೀಡಿಯೊವನ್ನು ಸಹ ಬಿಡುಗಡೆ ಮಾಡಲಾಗುತ್ತದೆ. ಇದಲ್ಲದೆ, ಅತ್ಯುತ್ತಮ ಸಂಶೋಧನಾ ಪ್ರಬಂಧಗಳು, ಯುನಾನಿ ಔಷಧಕ್ಕೆ ಅತ್ಯುತ್ತಮ ಕೊಡುಗೆಗಳು ಮತ್ತು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವ ಸಂಸ್ಥೆಗಳಿಗೆ ಮೆಚ್ಚುಗೆಯ ಪ್ರಮಾಣಪತ್ರಗಳನ್ನು ನೀಡಲಾಗುತ್ತದೆ.

 

*****
 


(Release ID: 2101380) Visitor Counter : 48