ರಕ್ಷಣಾ ಸಚಿವಾಲಯ
ಏರೋ ಇಂಡಿಯಾ 2025
ಬಾಹ್ಯಾಕಾಶ ಮತ್ತು ರಕ್ಷಣಾ ನಾವೀನ್ಯತೆಯ ಭವಿಷ್ಯದ ಬಗ್ಗೆ ಒಂದು ನೋಟ
Posted On:
08 FEB 2025 11:41AM by PIB Bengaluru
ಪೀಠಿಕೆ
ಏರೋ ಇಂಡಿಯಾ ಏಷ್ಯಾದ ಬಹುದೊಡ್ಡ ವಾಯು ಪ್ರದರ್ಶನವಾಗಿದ್ದು, ಬೆಂಗಳೂರಿನಲ್ಲಿ ನಡೆಯುವ ಈ ದ್ವೈವಾರ್ಷಿಕ ವೈಮಾನಿಕ ಪ್ರದರ್ಶನ ಮತ್ತು ವಿಮಾನಗಳ ಪ್ರದರ್ಶನವಾಗಿದೆ. ಇದನ್ನು ರಕ್ಷಣಾ ಸಚಿವಾಲಯದ ರಕ್ಷಣಾ ಉತ್ಪಾದನಾ ಇಲಾಖೆ, ರಕ್ಷಣಾ ಪ್ರದರ್ಶನ ಸಂಸ್ಥೆಗಳು ಆಯೋಜಿಸಿವೆ. ಏರೋ ಇಂಡಿಯಾ, ಭಾರತದ ಪ್ರಮುಖ ಏರೋಸ್ಪೇಸ್ ಮತ್ತು ರಕ್ಷಣಾ ಪ್ರದರ್ಶನವಾಗಿದ್ದು, ಜಾಗತಿಕ ವೈಮಾನಿಕ ಮಾರಾಟಗಾರರು ಮತ್ತು ಭಾರತೀಯ ವಾಯುಪಡೆ (ಐಎಎಫ್) ಸತತ ಏರೋಬ್ಯಾಟಿಕ್ ಹಾರಾಟ ಪ್ರದರ್ಶನಗಳೊಂದಿಗೆ ಪ್ರೇಕ್ಷಕರನ್ನು ರೋಮಾಂಚನಗೊಳಿಸಲಿದೆ. ಇದು ಜಾಗತಿಕ ಉದ್ಯಮ ನಾಯಕರು, ಸರ್ಕಾರಿ ಅಧಿಕಾರಿಗಳು, ತಂತ್ರಜ್ಞಾನ ತಜ್ಞರು ಮತ್ತು ರಕ್ಷಣಾ ತಂತ್ರಜ್ಞರನ್ನು ಒಂದೇ ಸೂರಿನಡಿ ಒಗ್ಗೂಡಿಸುವ ಪ್ರಮುಖ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮವು ರಾಷ್ಟ್ರದ ತಾಂತ್ರಿಕ ಪರಾಕ್ರಮ ಮತ್ತು ನಾವೀನ್ಯತೆಗಳನ್ನು ಪ್ರದರ್ಶಿಸುವುದಲ್ಲದೆ, ಅಂತಾರಾಷ್ಟ್ರೀಯ ಸಹಕಾರ ಮತ್ತು ಕಾರ್ಯತಂತ್ರದ ಸಂವಾದಕ್ಕೆ ಕ್ರಿಯಾತ್ಮಕ ವೇದಿಕೆಯನ್ನು ಒದಗಿಸುತ್ತದೆ.
![](https://static.pib.gov.in/WriteReadData/userfiles/image/image006L92W.png)
![](https://static.pib.gov.in/WriteReadData/userfiles/image/image007AV1B.png)
ಏರೋ ಇಂಡಿಯಾದ ವೈಭವ ಮತ್ತು ಪ್ರಾಮುಖ್ಯತೆ
ಏರೋ ಇಂಡಿಯಾ ಒಂದು ಪ್ರಮುಖ ಅಂತಾರಾಷ್ಟ್ರೀಯ ಕಾರ್ಯಕ್ರಮವಾಗಿ ವಿಕಸನಗೊಂಡಿದೆ, ಇದು ವೈಮಾನಿಕ ತಂತ್ರಜ್ಞಾನದಲ್ಲಿನ ಇತ್ತೀಚಿನ ಪ್ರಗತಿಯನ್ನು ಎತ್ತಿ ತೋರಿಸುವುದಲ್ಲದೆ, ದೇಶೀಯ ಮತ್ತು ಅಂತಾರಾಷ್ಟ್ರೀಯ ಪಾಲುದಾರರ ನಡುವಿನ ಕಾರ್ಯತಂತ್ರದ ಸಂವಹನಗಳಿಗೆ ನಿರ್ಣಾಯಕ ವೇದಿಕೆಯಾಗಿಯೂ ಕಾರ್ಯನಿರ್ವಹಿಸುತ್ತದೆ. ಈ ಪ್ರದರ್ಶನವು ತನ್ನ ಏರೋಸ್ಪೇಸ್ ಮತ್ತು ರಕ್ಷಣಾ ಸಾಮರ್ಥ್ಯಗಳನ್ನು ಮುಂದುವರಿಸುವ ರಾಷ್ಟ್ರದ ಬದ್ಧತೆಯ ಪ್ರತಿಬಿಂಬವಾಗಿದೆ. ವರ್ಷದಿಂದ ವರ್ಷಕ್ಕೆ ಏರೋ ಇಂಡಿಯಾ ಈ ಕೆಳಗಿನವುಗಳಲ್ಲಿ ಪ್ರಮುಖ ಪಾತ್ರ ವಹಿಸಿದೆ
- ಅತ್ಯಾಧುನಿಕ ತಂತ್ರಜ್ಞಾನಗಳನ್ನು ಪ್ರದರ್ಶಿಸುವುದು: ಈ ಕಾರ್ಯಕ್ರಮವು ನಿಯಮಿತವಾಗಿ ಅತ್ಯಾಧುನಿಕ ಏರೋಸ್ಪೇಸ್ ವ್ಯವಸ್ಥೆಗಳು, ನವೀನ ರಕ್ಷಣಾ ಪರಿಹಾರಗಳು ಮತ್ತು ವಾಯು ಮತ್ತು ಬಾಹ್ಯಾಕಾಶ ಪ್ರಯಾಣದ ಭವಿಷ್ಯವನ್ನು ರೂಪಿಸುವ ಪ್ರಗತಿಪರ ತಂತ್ರಜ್ಞಾನಗಳ ಪ್ರದರ್ಶನಗಳನ್ನು ಒಳಗೊಂಡಿರುತ್ತದೆ.
- ಕಾರ್ಯತಂತ್ರದ ಸಂವಾದಗಳನ್ನು ಬೆಳೆಸುವುದು: ಉನ್ನತ ಮಟ್ಟದ ಸಂವಹನಗಳ ಮೂಲಕ ಏರೋ ಇಂಡಿಯಾ ನೀತಿ, ರಕ್ಷಣಾ ಸಹಯೋಗಗಳು ಮತ್ತು ವೈಮಾನಿಕ ಕ್ಷೇತ್ರದ ಭವಿಷ್ಯದ ಮಾರ್ಗಸೂಚಿಯ ಕುರಿತು ಚರ್ಚೆಗಳಿಗೆ ಒಂದು ವೇದಿಕೆಯನ್ನು ಒದಗಿಸಿದೆ.
- ಅಂತಾರಾಷ್ಟ್ರೀಯ ಪಾಲುದಾರಿಕೆಗಳನ್ನು ವರ್ಧಿಸುವುದು: ಜಾಗತಿಕ ವೈಮಾನಿಕ ಮುಂಚೂಣಿ ಸಂಸ್ಥೆಗಳು ಮತ್ತು ರಕ್ಷಣಾ ಸಂಸ್ಥೆಗಳ ಪಾಲ್ಗೊಳ್ಳುವಿಕೆಯೊಂದಿಗೆ ಈ ಪ್ರದರ್ಶನವು ಅಂತಾರಾಷ್ಟ್ರೀಯ ವೈಮಾನಿಕ ವಲಯದಲ್ಲಿ ಪ್ರಮುಖ ರಾಷ್ಟ್ರವಾಗಿ ಭಾರತದ ಬೆಳೆಯುತ್ತಿರುವ ಪರಿಯನ್ನು ಒತ್ತಿಹೇಳುತ್ತದೆ.
![](https://static.pib.gov.in/WriteReadData/userfiles/image/image009YWDI.jpg)
![](https://static.pib.gov.in/WriteReadData/userfiles/image/image010NZ9C.jpg)
ಈ ಪರಂಪರೆಯು ಪ್ರಸ್ತುತ ಆವೃತ್ತಿಯ ಕಾರ್ಯಕ್ರಮಗಳಿಗೆ ದಾರಿ ಮಾಡಿಕೊಟ್ಟಿರುವುದು ಮಾತ್ರವಲ್ಲದೆ ಭವಿಷ್ಯಕ್ಕೂ ಉನ್ನತ ಮಾನದಂಡವನ್ನು ನಿಗದಿಪಡಿಸಿದೆ. ಏರೋ ಇಂಡಿಯಾ ಕೇವಲ ಪ್ರದರ್ಶನಕ್ಕಿಂತ ಹೆಚ್ಚಾಗಿ- ಇದು ನಾವೀನ್ಯತೆ, ತಂತ್ರ ಮತ್ತು ರಾಷ್ಟ್ರೀಯ ಹೆಮ್ಮೆಯ ಸಂಗಮ ಬಿಂದುವಾಗಿದೆ.
ಏರೋ ಇಂಡಿಯಾ 2025
ಏರೋ ಇಂಡಿಯಾದ 15ನೇ ಆವೃತ್ತಿಯಾದ ಏರೋ ಇಂಡಿಯಾ 2025 ತನ್ನ ಹಿಂದಿನ ಯಶಸ್ಸನ್ನು ಬಳಸಿಕೊಳ್ಳುವ ಮತ್ತು ಏರೋಸ್ಪೇಸ್ ಮತ್ತು ರಕ್ಷಣಾ ತಂತ್ರಜ್ಞಾನದಲ್ಲಿ ಹೊಸ ಪ್ರದೇಶಗಳನ್ನು ಪಟ್ಟಿ ಮಾಡುವ ಒಂದು ಹೆಗ್ಗುರುತನ್ನಾಗಿ ವಿನ್ಯಾಸಗೊಳಿಸಲಾಗಿದೆ. ಏರೋ ಇಂಡಿಯಾ 2025 ಫೆಬ್ರವರಿ 10 ರಿಂದ 14 ರವರೆಗೆ ಭಾರತದ ಕರ್ನಾಟಕದ ಬೆಂಗಳೂರಿನ ಯಲಹಂಕ ವಾಯು ನಿಲ್ದಾಣದಲ್ಲಿ ನಡೆಯಲಿದೆ. ಮೊದಲ ಮೂರು ದಿನಗಳು ವ್ಯಾಪಾರ ಸಂದರ್ಶಕರಿಗೆ ಮೀಸಲಾಗಿದ್ದರೆ, ಕೊನೆಯ ಎರಡು ದಿನಗಳು ಸಾರ್ವಜನಿಕರಿಗೆ ಮುಕ್ತವಾಗಿವೆ.
![](https://static.pib.gov.in/WriteReadData/userfiles/image/image011GC7W.jpg)
ವಿಸ್ತೃತ ಘೋಷವಾಕ್ಯ ‘ಬಿಲಿಯನ್ ಅವಕಾಶಗಳಿಗೆ ರನ್ ವೇ’
ಏರೋ ಇಂಡಿಯಾ 2025 ಕಾರ್ಯಕ್ರಮಗಳು
ಐದು ದಿನಗಳ ಈ ಕಾರ್ಯಕ್ರಮದಲ್ಲಿ ಕರ್ಟನ್ ರೈಸರ್ (ಪೂರ್ವಭಾವಿ) ಕಾರ್ಯಕ್ರಮ, ಉದ್ಘಾಟನಾ ಕಾರ್ಯಕ್ರಮ, ರಕ್ಷಣಾ ಸಚಿವರ ಸಮಾವೇಶ, ಸಿಇಒಗಳ ದುಂಡುಮೇಜಿನ ಸಭೆ, ಐಡೆಕ್ಸ್ ಸ್ಟಾರ್ಟ್-ಅಪ್ ಕಾರ್ಯಕ್ರಮ, ಉಸಿರು ಬಿಗಿ ಹಿಡಿದು ನೋಡುವಂತಹ ವೈಮಾನಿಕ ಪ್ರದರ್ಶನಗಳು, ಇಂಡಿಯಾ ಪೆವಿಲಿಯನ್ ಮತ್ತು ಏರೋಸ್ಪೇಸ್ ಕಂಪನಿಗಳ ವ್ಯಾಪಾರ ಮೇಳವನ್ನು ಒಳಗೊಂಡ ದೊಡ್ಡ ಪ್ರದರ್ಶನ ಪ್ರದೇಶ ಸೇರಿವೆ.
- ಮಿತ್ರ ರಾಷ್ಟ್ರಗಳೊಂದಿಗೆ ಕಾರ್ಯತಂತ್ರದ ಪಾಲುದಾರಿಕೆಯ ನಿಟ್ಟಿನಲ್ಲಿ ಸಂವಾದವನ್ನು ಸುಗಮಗೊಳಿಸಲು ಭಾರತವು 'ಬ್ರಿಡ್ಜ್ - ಅಂತಾರಾಷ್ಟ್ರೀಯ ರಕ್ಷಣೆ ಮತ್ತು ಜಾಗತಿಕ ಪಾಲುದಾರಿಕೆ ಮೂಲಕ ಸ್ಥಿತಿಸ್ಥಾಪಕತ್ವವನ್ನು ನಿರ್ಮಿಸುವುದು' ಎಂಬ ವಿಷಯದ ಕುರಿತು ರಕ್ಷಣಾ ಸಚಿವರ ಸಮಾವೇಶವನ್ನು ಆಯೋಜಿಸುತ್ತದೆ. ಇದು ಸಕ್ರಿಯ ಭೌಗೋಳಿಕ ರಾಜಕೀಯ ಪರಿಸ್ಥಿತಿಗಳು ಮತ್ತು ಪರಸ್ಪರ ಸಮೃದ್ಧಿಯ ಹಾದಿಯನ್ನು ಸಂಕ್ಷೇಪಿಸುತ್ತದೆ, ಇದನ್ನು ಭದ್ರತೆ ಮತ್ತು ಅಭಿವೃದ್ಧಿಯ ಹಂಚಿಕೆಯ ದೂರದೃಷ್ಟಿಯೊಂದಿಗೆ ರಾಷ್ಟ್ರಗಳ ನಡುವಿನ ಸಹಕಾರದ ಮೂಲಕ ಸೇತುವೆ ನಿರ್ಮಾಣ ಮಾಡಲು ಬಳಸಬಹುದು.
![](https://static.pib.gov.in/WriteReadData/userfiles/image/image01399NT.jpg)
- ಈ ಕಾರ್ಯಕ್ರಮ ಮಾತ್ರವಲ್ಲದೆ ರಕ್ಷಣಾ ಸಚಿವರು, ರಕ್ಷಣಾ ಖಾತೆ ರಾಜ್ಯ ಸಚಿವರು, ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಮತ್ತು ಕಾರ್ಯದರ್ಶಿ ಸೇರಿದಂತೆ ಹಲವಾರು ದ್ವಿಪಕ್ಷೀಯ ಸಭೆಗಳನ್ನು ಆಯೋಜಿಸಲಾಗಿದೆ. ಪಾಲುದಾರಿಕೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಹೊಸ ಮಾರ್ಗಗಳನ್ನು ಅನ್ವೇಷಿಸುವ ಮೂಲಕ ಮಿತ್ರ ರಾಷ್ಟ್ರಗಳೊಂದಿಗೆ ರಕ್ಷಣಾ ಮತ್ತು ವೈಮಾನಿಕ ಸಂಬಂಧಗಳನ್ನು ಬಲವರ್ಧನೆಗೊಳಿಸುತ್ತ ಗಮನ ಹರಿಸಲಾಗುವುದು.
- ಸಿಇಒಗಳ ದುಂಡುಮೇಜಿನ ಸಭೆಯು ಭಾರತದಲ್ಲಿ ಉತ್ಪಾದನೆಗಾಗಿ ವಿದೇಶಿ ಮೂಲ ಸಾಧನಗಳ ತಯಾರಕರಿಗೆ (ಒಇಎಂ) ಅನುಕೂಲಕರ ವೇದಿಕೆಯನ್ನು ಒದಗಿಸುವ ನಿರೀಕ್ಷೆಯಿದೆ. ಜಾಗತಿಕ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ (ಸಿಇಒ)ಗಳು, ದೇಶೀಯ ಪಿಎಸ್‌ಯುಗಳ ಅಧ್ಯಕ್ಷ-ವ್ಯವಸ್ಥಾಪಕ ನಿರ್ದೇಶಕರು (ಸಿಎಂಡಿ)ಗಳು ಮತ್ತು ಭಾರತದ ಪ್ರಮುಖ ಖಾಸಗಿ ರಕ್ಷಣಾ ಮತ್ತು ವೈಮಾನಿಕ ಉತ್ಪಾದನಾ ಕಂಪನಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿವೆ.
- ಭವಿಷ್ಯದ ನಿರೀಕ್ಷೆಗಳನ್ನು ಒಳಗೊಂಡಂತೆ ಸ್ಥಳೀಯ ರಕ್ಷಣಾ ಉತ್ಪಾದನಾ ಸಾಮರ್ಥ್ಯಗಳು ಮತ್ತು ಜಾಗತಿಕ ಹಂತಕ್ಕೆ ಸಿದ್ಧವಾಗಿರುವ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಪ್ರದರ್ಶಿಸುವ ಮೂಲಕ ಇಂಡಿಯಾ ಪೆವಿಲಿಯನ್ ತನ್ನ ಮೇಕ್-ಇನ್-ಇಂಡಿಯಾ ಉಪಕ್ರಮಕ್ಕೆ ಭಾರತದ ಬದ್ಧತೆಯನ್ನು ಪ್ರದರ್ಶಿಸುತ್ತದೆ. ಏರೋ ಇಂಡಿಯಾ 2025ರಲ್ಲಿ ಭಾರತೀಯ ನವೋದ್ಯಮಗಳ ಪ್ರಚಾರವು ಒಂದು ಕೇಂದ್ರಬಿಂದುವಾಗಿದೆ ಮತ್ತು ಅವರು ಅಭಿವೃದ್ಧಿಪಡಿಸಿದ ಅತ್ಯಾಧುನಿಕ ತಂತ್ರಜ್ಞಾನಗಳು/ಉತ್ಪನ್ನಗಳ ವ್ಯಾಪಕ ಶ್ರೇಣಿಯನ್ನು ವಿಶೇಷ ಐಡೆಕ್ಸ್ ಪೆವಿಲಿಯನ್ನಲ್ಲಿ ಪ್ರದರ್ಶಿಸಲಾಗುತ್ತದೆ.
- ಅದಲ್ಲದೆ, ಕ್ರಿಯಾಶೀಲ ಏರೋಬ್ಯಾಟಿಕ್ ಪ್ರದರ್ಶನಗಳು ಮತ್ತು ತಂತ್ರಜ್ಞಾನಗಳ ನೇರ ಪ್ರದರ್ಶನಗಳು ಆಧುನಿಕ ಏರೋಸ್ಪೇಸ್ ವೇದಿಕೆಗಳು ಮತ್ತು ತಂತ್ರಜ್ಞಾನಗಳ ಸಾಮರ್ಥ್ಯವನ್ನು ಪ್ರದರ್ಶಿಸುವ ಮೂಲಕ ಮನಮೋಹಕ ಅನುಭವವನ್ನು ಒದಗಿಸುತ್ತವೆ. ಈ ಕಾರ್ಯಕ್ರಮದ ಭಾಗವಾಗಿ ವಿವಿಧ ಪ್ರಮುಖ ವಿಷಯಗಳ ಕುರಿತು ಹಲವಾರು ವಿಚಾರ ಸಂಕಿರಣಗಳನ್ನು ಸಹ ಆಯೋಜಿಸಲಾಗಿದೆ.
![](https://static.pib.gov.in/WriteReadData/userfiles/image/image014MQUU.jpg)
ಏರೋ ಇಂಡಿಯಾ 2023: ಒಂದು ಹಿಂದಿನ ವಿಶ್ಲೇಷಣೆ
![](https://static.pib.gov.in/WriteReadData/userfiles/image/image016FGBR.png)
ಭಾರತದ ವೈಮಾನಿಕ ಮತ್ತು ರಕ್ಷಣಾ ಕ್ಷೇತ್ರದ ನಿರಂತರ ವಿಕಸನಕ್ಕೆ ಅಡಿಪಾಯ ಹಾಕುವಲ್ಲಿ ಏರೋ ಇಂಡಿಯಾದ ಹಿಂದಿನ ಆವೃತ್ತಿಗಳು ನಿರ್ಣಾಯಕ ಪಾತ್ರ ವಹಿಸಿವೆ. ಏರೋ ಇಂಡಿಯಾ 2023 ರ 14 ನೇ ಆವೃತ್ತಿಯು ಫೆಬ್ರವರಿ 13 ರಿಂದ 17 ರವರೆಗೆ ಕರ್ನಾಟಕದ ಬೆಂಗಳೂರಿನಲ್ಲಿ ನಡೆಯಿತು ಮತ್ತು 1996ರಲ್ಲಿ ಆರಂಭವಾದಾಗಿನಿಂದ ಈವರೆಗಿನ ಅತಿದೊಡ್ಡ ಆವೃತ್ತಿಯಾಗಿದ್ದು, 100ಕ್ಕೂ ಅಧಿಕ ದೇಶಗಳು, 809 ಪ್ರದರ್ಶಕರು, ಮೊದಲ ಬಾರಿಗೆ 53 ವಿಮಾನಗಳು ಜಾಗತಿಕ ಪಾಲ್ಗೊಳ್ಳುವವರಿಗೆ ನಮ್ಮ ವಾಯುಶಕ್ತಿಯನ್ನು ಪ್ರದರ್ಶಿಸಿದವು ಮತ್ತು ಐದು ದಿನಗಳಲ್ಲಿ ಒಟ್ಟು 7 ಲಕ್ಷಕ್ಕೂ ಅಧಿಕ ಸಂದರ್ಶಕರ ಭೇಟಿ ನೀಡಿದ್ದರು. ಏರೋ ಇಂಡಿಯಾ 2023 ಗಮನಾರ್ಹ ಮೈಲಿಗಲ್ಲುಗಳು ಮತ್ತು ಪ್ರಭಾವಶಾಲಿ ಪ್ರದರ್ಶನಗಳಿಂದ ನಿರೂಪಿಸಲ್ಪಟ್ಟಿದೆ. 2023 ರ ಆವೃತ್ತಿಯ ಪ್ರಮುಖ ಅಂಶಗಳು:
- ಸುಧಾರಿತ ವೈಮಾನಿಕ ತಂತ್ರಜ್ಞಾನಗಳ ಪ್ರದರ್ಶನ: 2023ರ ಕಾರ್ಯಕ್ರಮವು ಕಂಪನಿಗಳಿಗೆ ಅತ್ಯಾಧುನಿಕ ಏರೋಸ್ಪೇಸ್ ವ್ಯವಸ್ಥೆಗಳು ಮತ್ತು ರಕ್ಷಣಾ ಪರಿಹಾರಗಳನ್ನು ಪ್ರದರ್ಶಿಸಲು ವೇದಿಕೆಯನ್ನು ಒದಗಿಸಿತು. ಇದು ತಾಂತ್ರಿಕ ನಾವೀನ್ಯತೆಯನ್ನು ಪ್ರದರ್ಶಿಸುವುದಲ್ಲದೆ, ಕ್ಷೇತ್ರದಲ್ಲಿ ಭವಿಷ್ಯದ ಪ್ರಗತಿಗೆ ವೇದಿಕೆಯನ್ನು ಹೊಂದಿಸಿತು.
- ಕಾರ್ಯತಂತ್ರದ ತೊಡಗಿಸಿಕೊಳ್ಳುವಿಕೆಗಳನ್ನು ಸುಗಮಗೊಳಿಸುವುದು: ಸರ್ಕಾರಿ ಅಧಿಕಾರಿಗಳು, ಉದ್ಯಮ ತಜ್ಞರು ಮತ್ತು ಅಂತಾರಾಷ್ಟ್ರೀಯ ನಿಯೋಗಗಳು ಸೇರಿದಂತೆ ವೈವಿಧ್ಯಮಯ ಪಾಲುದಾರರ ಗುಂಪನ್ನು ಒಗೂಡಿಸುವಲ್ಲಿ ಏರೋ ಇಂಡಿಯಾ 2023 ಪ್ರಮುಖ ಪಾತ್ರ ವಹಿಸಿತು. ಈ ಕಾರ್ಯಕ್ರಮವು ಸಹಯೋಗದ ಉದ್ಯಮಗಳು ಮತ್ತು ತಾಂತ್ರಿಕ ಪಾಲುದಾರಿಕೆಗಳ ಮೇಲೆ ಕೇಂದ್ರೀಕರಿಸಿದ ಕಾರ್ಯತಂತ್ರದ ಸಂವಾದದ ವಾತಾವರಣವನ್ನು ಬೆಳೆಸಿತು.
- ಭಾರತದ ಜಾಗತಿಕ ಸ್ಥಾನ ಬಲವರ್ಧನೆ: ಸಮಗ್ರ ಮತ್ತು ಸುಸಂಘಟಿತ ಪ್ರದರ್ಶನವನ್ನು ಯಶಸ್ವಿಯಾಗಿ ಆಯೋಜಿಸುವ ಮೂಲಕ ಏರೋ ಇಂಡಿಯಾ 2023 ತನ್ನ ವೈಮಾನಿಕ ಸಾಮರ್ಥ್ಯಗಳನ್ನು ಮುಂದುವರಿಸುವ ಭಾರತದ ಬದ್ಧತೆಯನ್ನು ಬಲಪಡಿಸಿತು. ಏರೋಸ್ಪೇಸ್ ನಾವೀನ್ಯತೆಯ ಮುಂದಿನ ಅಲೆಯನ್ನು ಮುಂದಕ್ಕೆ ಕೊಂಡೊಯ್ಯುವಲ್ಲಿ ಜಾಗತಿಕ ಪಾಲುದಾರರೊಂದಿಗೆ ತೊಡಗಿಸಿಕೊಳ್ಳಲು ದೇಶದ ಸಿದ್ಧತೆಯನ್ನು ಪ್ರದರ್ಶನವು ಒತ್ತಿಹೇಳಿತು.
![](https://static.pib.gov.in/WriteReadData/userfiles/image/image017S0O0.png)
ಏರೋ ಇಂಡಿಯಾ 2023ರ ಯಶಸ್ಸು ಮತ್ತು ಸವಾಲುಗಳು ಅಮೂಲ್ಯವಾದ ಪಾಠಗಳನ್ನು ಕಲಿಸಿವೆ, ಅವುಗಳನ್ನು ಏರೋ ಇಂಡಿಯಾ 2025 ರ ಯೋಜನೆ ಮತ್ತು ಜಾರಿಯಲ್ಲಿ ಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ. ಕಾರ್ಯಾಚರಣೆಯ ಶ್ರೇಷ್ಠತೆ, ಅಂತಾರಾಷ್ಟ್ರೀಯ ಸಹಯೋಗ ಮತ್ತು ತಾಂತ್ರಿಕ ನಾವೀನ್ಯತೆಗಳ ಮೇಲಿನ ಗಮನ - 2023 ರಲ್ಲಿ ಪ್ರಮುಖವಾಗಿ ಪ್ರದರ್ಶಿಸಲಾದ ಅಂಶಗಳು - ಮುಂಬರುವ ಆವೃತ್ತಿಗೆ ಅವು ಮೂಲಾಧಾರವಾಗಿದೆ. ಹಿಂದಿನ ಆವೃತ್ತಿಯಿಂದ ಉತ್ಪತ್ತಿಯಾಗುವ ಮುಂದುವರಿಕೆಯ ಆವೇಗವು ವರ್ಧಿತ ಶಿಷ್ಟಾಚಾರಗಳು, ಸುಧಾರಿತ ತಂತ್ರಗಳು ಮತ್ತು ವಿಸ್ತೃತ ಜಾಗತಿಕ ಭಾಗವಹಿಸುವಿಕೆಯ ಹೆಜ್ಜೆಗುರುತನ್ನು ಹೊಂದಿರುವ 2025ರಲ್ಲಿ ಇನ್ನೂ ಹೆಚ್ಚಿನ ಪರಿವರ್ತನಾತ್ಮಕ ಸಾಧನೆಗಳಾಗುವ ನಿರೀಕ್ಷೆಯಿದೆ.
ಏರೋ ಇಂಡಿಯಾ 2023 ಕಾರ್ಯಕ್ರಮಗಳು
ಈ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವರ ಸಮಾವೇಶ; ಸಿಇಒಗಳ ರೌಂಡ್ ಟೇಬಲ್; ಮಂಥನ್ ಸ್ಟಾರ್ಟ್-ಅಪ್ ಕಾರ್ಯಕ್ರಮ; ಬಂಧನ ಸಮಾರಂಭ; ಉಸಿರುಬಿಗಿ ಹಿಡಿದು ನೋಡುವಂತಹ ವೈಮಾನಿಕ ಪ್ರದರ್ಶನಗಳು; ದೊಡ್ಡ ಪ್ರದರ್ಶನ; ಇಂಡಿಯಾ ಪೆವಿಲಿಯನ್ ಮತ್ತು ಏರೋಸ್ಪೇಸ್ ಕಂಪನಿಗಳ ವ್ಯಾಪಾರ ಮೇಳ ಸೇರಿವೆ.
ಪ್ರಮುಖ ಪ್ರದರ್ಶನಕಾರರು ಮತ್ತು ಸಾಧನಗಳು
ಪ್ರಮುಖ ಪ್ರದರ್ಶಕರಲ್ಲಿ ಏರ್‌ಬಸ್, ಬೋಯಿಂಗ್, ಡಸಾಲ್ಟ್ ಏವಿಯೇಷನ್, ಲಾಕ್‌ಹೀಡ್ ಮಾರ್ಟಿನ್, ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರಿ, ಬ್ರಹ್ಮೋಸ್ ಏರೋಸ್ಪೇಸ್, ಆರ್ಮಿ ಏವಿಯೇಷನ್, ಎಚ್‌ಸಿ ರೊಬೊಟಿಕ್ಸ್, ಎಸ್‌ಎಎಬಿ, ಸಫ್ರಾನ್, ರೋಲ್ಸ್ ರಾಯ್ಸ್, ಲಾರ್ಸೆನ್ & ಟೂಬ್ರೊ, ಭಾರತ್ ಫೋರ್ಜ್ ಲಿಮಿಟೆಡ್, ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್), ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್), ಭಾರತ್ ಡೈನಾಮಿಕ್ಸ್ ಲಿಮಿಟೆಡ್ (ಬಿಡಿಎಲ್) ಮತ್ತು ಬಿಇಎಂಎಲ್ ಲಿಮಿಟೆಡ್ ಸೇರಿವೆ.
![](https://static.pib.gov.in/WriteReadData/userfiles/image/image019Z8EI.jpg)
ಏರೋ ಇಂಡಿಯಾ 2023 ಯುಎವಿ ವಲಯ, ರಕ್ಷಣಾ ಬಾಹ್ಯಾಕಾಶ ಮತ್ತು ಭವಿಷ್ಯದ ತಂತ್ರಜ್ಞಾನಗಳಲ್ಲಿ ವಿನ್ಯಾಸ ನಾಯಕತ್ವ ಮತ್ತು ಬೆಳವಣಿಗೆಯನ್ನು ಪ್ರದರ್ಶಿಸಿತು. ಈ ಕಾರ್ಯಕ್ರಮವು ಲಘು ಯುದ್ಧ ವಿಮಾನ (ಲೈಟ್ ಕಾಂಬ್ಯಾಟ್ ಏರ್‌ಕ್ರಾಫ್ಟ್ -ಎಲ್‌ಸಿಎ)-ತೇಜಸ್, ಎಚ್‌ಟಿಟಿ -40, ಡಾರ್ನಿಯರ್ ಲೈಟ್ ಯುಟಿಲಿಟಿ ಹೆಲಿಕಾಪ್ಟರ್ (ಎಲ್‌ಯುಎಚ್), ಲೈಟ್ ಕಾಂಬ್ಯಾಟ್ ಹೆಲಿಕಾಪ್ಟರ್ (ಎಲ್‌ಸಿಎಚ್) ಮತ್ತು ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್ (ಎಎಲ್‌ಎಚ್) ನಂತಹ ಸ್ಥಳೀಯವಾಗಿ ಉತ್ಪಾದಿಸಿದ ವಿಮಾನಗಳ ರಫ್ತು ಉತ್ತೇಜಿಸುವ ಗುರಿಯನ್ನು ಹೊಂದಿದೆ.
ರಕ್ಷಣಾ ಸಚಿವರ ಸಮಾವೇಶ
2023ರ ಫೆ.14ರಂದು ರಕ್ಷಣಾ ಸಚಿವರ ಸಮಾವೇಶವು ನಡೆಯಿತು. 'ರಕ್ಷಣಾ ಕ್ಷೇತ್ರದಲ್ಲಿ ಸುಧಾರಿತ ತೊಡಗಿಸಿಕೊಳ್ಳುವಿಕೆಗಳ ಮೂಲಕ ಹಂಚಿಕೆಯ ಸಮೃದ್ಧಿ (SPEED)' ಎಂಬ ವಿಷಯದ ಮೇಲೆ ಆಯೋಜಿಸಲಾದ ಸಭೆಯಲ್ಲಿ ಮಿತ್ರದೇಶಗಳ ರಕ್ಷಣಾ ಸಚಿವರು ಭಾಗವಹಿಸಿದ್ದರು. ಸಾಮರ್ಥ್ಯ ವೃದ್ಧಿ (ಹೂಡಿಕೆಗಳು, ಸಂಶೋಧನೆ ಮತ್ತು ಅಭಿವೃದ್ಧಿ, ಜಂಟಿ ಉದ್ಯಮ, ಸಹ-ಅಭಿವೃದ್ಧಿ, ಸಹ-ಉತ್ಪಾದನೆ ಮತ್ತು ರಕ್ಷಣಾ ಉಪಕರಣಗಳ ಪೂರೈಕೆಯ ಮೂಲಕ), ತರಬೇತಿ, ಬಾಹ್ಯಾಕಾಶ, ಕೃತಕ ಬುದ್ಧಿಮತ್ತೆ (AI) ಮತ್ತು ಸಾಗರ ಭದ್ರತೆ ಒಟ್ಟಿಗೆ ಬೆಳೆಯಲು ಸಹಕಾರವನ್ನು ಹೆಚ್ಚಿಸುವ ಅಂಶಗಳನ್ನು ಈ ಸಮಾವೇಶವು ಚರ್ಚಿಸಿತು. 'ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದಿ ವರ್ಲ್ಡ್' ದೂರದೃಷ್ಟಿಯನ್ನು ಮುಂದೆ ಕೊಂಡೊಯ್ಯಲು ರಕ್ಷಣಾ ಮಂತ್ರಿಗಳು ಪರಸ್ಪರ ತೊಡಗಿಸಿಕೊಳ್ಳಲು ಈ ಸಮಾವೇಶವು ಒಂದು ಅವಕಾಶವಾಗಿತ್ತು.
ದ್ವೀಪಕ್ಷೀಯ ಸಮಾಲೋಚನೆಗಳು
ಏರೋ ಇಂಡಿಯಾ 2023ರ ಸಂದರ್ಭದಲ್ಲಿ, ರಕ್ಷಣಾ ಸಚಿವರು, ರಕ್ಷಣಾ ಖಾತೆ ರಾಜ್ಯ ಸಚಿವರು, ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಮತ್ತು ರಕ್ಷಣಾ ಕಾರ್ಯದರ್ಶಿ ಸೇರಿದಂತೆ ಹಲವಾರು ಹಂತಗಳಲ್ಲಿ ದ್ವಿಪಕ್ಷೀಯ ಸಭೆಗಳನ್ನು ನಡೆಸಲಾಯಿತು. ಪಾಲುದಾರಿಕೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಹೊಸ ಮಾರ್ಗಗಳನ್ನು ಅನ್ವೇಷಿಸುವ ಮೂಲಕ ಸ್ನೇಹಪರ ರಾಷ್ಟ್ರಗಳೊಂದಿಗೆ ರಕ್ಷಣಾ ಮತ್ತು ಏರೋಸ್ಪೇಸ್ ಸಂಬಂಧಗಳನ್ನು ಬಲಪಡಿಸುವತ್ತ ಗಮನ ಹರಿಸಲಾಯಿತು.
ಸಿಇಒಗಳ ದುಂಡು ಮೇಜಿನ ಸಭೆ
ರಕ್ಷಣಾ ಸಚಿವರ ಅಧ್ಯಕ್ಷತೆಯಲ್ಲಿ 2023ರ ಫೆಬ್ರವರಿ 13 ರಂದು 'ಆಕಾಶಕ್ಕೆ ಮಿತಿಯೇ ಇಲ್ಲ: ಮಿತಿಗಳನ್ನು ಮೀರಿದ ಅವಕಾಶಗಳು' ಎಂಬ ವಿಷಯದ ಮೇಲೆ 'ಸಿಇಒಗಳ ದುಂಡು ಮೇಜಿನ ಸಭೆ’ ನಡೆಯಿತು. 'ಮೇಕ್ ಇನ್ ಇಂಡಿಯಾ' ಅಭಿಯಾನವನ್ನು ಬಲಪಡಿಸುವ ಉದ್ದೇಶದಿಂದ ಇದು ಕೈಗಾರಿಕಾ ಪಾಲುದಾರರು ಮತ್ತು ಸರ್ಕಾರದ ನಡುವೆ ಹೆಚ್ಚು ದೃಢವಾದ ಸಂವಾದಕ್ಕೆ ಬುನಾದಿ ಹಾಕಿತು.
ಬೋಯಿಂಗ್, ಲಾಕ್ಹೀಡ್, ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್, ಜನರಲ್ ಅಟಾಮಿಕ್ಸ್, ಲೈಬರ್ ಗ್ರೂಪ್, ರೇಥಿಯಾನ್ ಟೆಕ್ನಾಲಜೀಸ್, ಸಫ್ರಾನ್, ಜನರಲ್ ಅಥಾರಿಟಿ ಆಫ್ ಮಿಲಿಟರಿ ಇಂಡಸ್ಟ್ರೀಸ್ (GAMI) ಮುಂತಾದ ಜಾಗತಿಕ ಹೂಡಿಕೆದಾರರು ಸೇರಿ 26 ದೇಶಗಳ ಅಧಿಕಾರಿಗಳು, ಪ್ರತಿನಿಧಿಗಳು ಮತ್ತು ಜಾಗತಿಕ ಸಿಇಒಗಳು ದುಂಡು ಮೇಜಿನ ಸಭೆಯಲ್ಲಿ ಭಾಗವಹಿಸಿದ್ದರು. ದೇಶೀಯ ಪಿಎಸ್ಯುಗಳಾದ HAL, BEL, BDL, BEML ಲಿಮಿಟೆಡ್ ಮತ್ತು ಮಿಶ್ರಾ ಧಾತು ನಿಗಮ್ ಲಿಮಿಟೆಡ್ ಸಹ ಭಾಗವಹಿಸಿದ್ದವು.
ಬಂಧನ್ ಕಾರ್ಯಕ್ರಮ
ಬಂಧನ್ ಸಮಾರಂಭವು ಫೆಬ್ರವರಿ 15 ರಂದು ತಿಳಿವಳಿಕೆ ಪತ್ರಗಳು (ಎಂಒಯುಗಳು)/ಒಪ್ಪಂದಗಳು, ತಂತ್ರಜ್ಞಾನಗಳ ವರ್ಗಾವಣೆ, ಉತ್ಪನ್ನ ಬಿಡುಗಡೆ ಮತ್ತು ಇತರ ಪ್ರಮುಖ ಘೋಷಣೆಗಳಿಗೆ ಸಹಿ ಹಾಕಿತು. ಬಂಧನ ಸಮಾರಂಭದಲ್ಲಿ B2B ಪಾಲುದಾರಿಕೆಗಳನ್ನು ರೂಪಿಸುವ ನಿಟ್ಟಿನಲ್ಲಿ ಸಂಘಟಿತ ಪ್ರಯತ್ನ ಮಾಡಲಾಯಿತು ಮತ್ತು ಒಟ್ಟು 75,000 ಕೋಟಿ ರೂ.ಗಳಿಗಿಂತ ಅಧಿಕ ಮೌಲ್ಯದ 250 ಕ್ಕೂ ಅಧಿಕ ಪಾಲುದಾರಿಕೆಗಳನ್ನು ಅಂತಿಮಗೊಳಿಸಲಾಯಿತು.
ಮಂಥನ್
ವಾರ್ಷಿಕ ರಕ್ಷಣಾ ನಾವೀನ್ಯತೆ ಕಾರ್ಯಕ್ರಮವಾದ ಮಂಥನ್, ಫೆಬ್ರವರಿ 15 ರಂದು ನಡೆದ ಪ್ರಮುಖ ತಂತ್ರಜ್ಞಾನ ಪ್ರದರ್ಶನ ಕಾರ್ಯಕ್ರಮವಾಗಿತ್ತು. ಇನ್ನೋವೇಶನ್ಸ್ ಫಾರ್ ಡಿಫೆನ್ಸ್ ಎಕ್ಸಲೆನ್ಸ್ (ಐಡಿಇಎಕ್ಸ್) ಆಯೋಜಿಸಿರುವ ಮಂಥನ್ ವೇದಿಕೆಯು ಪ್ರಮುಖ ನಾವೀನ್ಯಕಾರರು, ನವೋದ್ಯಮಗಳು, ಎಂಎಸ್‌ಎಂಇಗಳು, ಸಂಪೋಷಣಾ ಕೇಂದ್ರಗಳು (ಇನ್ಕ್ಯುಬೇಟರ್‌ಗಳು), ಶೈಕ್ಷಣಿಕ ಮತ್ತು ರಕ್ಷಣಾ ಮತ್ತು ವೈಮಾನಿಕ ಪೂರಕ ವ್ಯವಸ್ಥೆಯ ಹೂಡಿಕೆದಾರರನ್ನು ಒಂದೇ ಸೂರಿನಡಿ ತರುತ್ತದೆ.
ಮಂಥನ್ ಅನೇಕ ಪ್ರಥಮಗಳನ್ನು ಹೊಂದಿದ್ದು, ಅವುಗಳಲ್ಲಿ ಸೈಬರ್ ಭದ್ರತೆಯ ಮೇಲಿನ ಸವಾಲುಗಳು, ಐಡಿಇಎಕ್ಸ್ ಹೂಡಿಕೆದಾರರ ಕೇಂದ್ರದ ಸ್ಥಾಪನೆ, ಹೂಡಿಕೆದಾರರೊಂದಿಗೆ ಒಪ್ಪಂದಗಳು ಇತ್ಯಾದಿ ಸೇರಿವೆ. ರಕ್ಷಣಾ ವಲಯದಲ್ಲಿ ನಾವೀನ್ಯತೆ ಮತ್ತು ತಂತ್ರಜ್ಞಾನ ಅಭಿವೃದ್ಧಿಯನ್ನು ಉತ್ತೇಜಿಸಲು ಸ್ಟಾರ್ಟ್-ಅಪ್ ಪರಿಸರ ವ್ಯವಸ್ಥೆಯನ್ನು ಉತ್ತೇಜಿಸಲು ಮಂಥನ್ 2023 ಐಡಿಇಎಕ್ಸ್‌ನ ಭವಿಷ್ಯದ ದೂರದೃಷ್ಟಿ/ಮುಂದಿನ ಉಪಕ್ರಮಗಳ ಕುರಿತು ಒಂದು ಅವಲೋಕನವನ್ನು ಒದಗಿಸಿತು.
ಭಾರತೀಯ ಮಳಿಗೆಗಳು
‘ಫಿಕ್ಸೆಡ್ ವಿಂಗ್ ಪ್ಲಾಟ್ಫಾರ್ಮ್' ಧೇಯವನ್ನು ಆಧರಿಸಿದ ಇಂಡಿಯಾ ಪೆವಿಲಿಯನ್, ಭವಿಷ್ಯದ ನಿರೀಕ್ಷೆಗಳನ್ನು ಒಳಗೊಂಡಂತೆ ಈ ಪ್ರದೇಶದಲ್ಲಿ ಭಾರತದ ಬೆಳವಣಿಗೆಯನ್ನು ಪ್ರದರ್ಶಿಸಿತು. ಒಟ್ಟು 115 ಕಂಪನಿಗಳು 227 ಉತ್ಪನ್ನಗಳನ್ನು ಪ್ರದರ್ಶಿಸಿದವು. ಖಾಸಗಿ ಪಾಲುದಾರರು ಉತ್ಪಾದಿಸುತ್ತಿರುವ LCA-ತೇಜಸ್ ವಿಮಾನಗಳ ವಿವಿಧ ರಚನಾತ್ಮಕ ಮಾದರಿಗಳು, ಸಿಮ್ಯುಲೇಟರ್‌ಗಳು, ವ್ಯವಸ್ಥೆಗಳು (LRUಗಳು) ಇತ್ಯಾದಿಗಳ ಪ್ರದರ್ಶನವನ್ನು ಒಳಗೊಂಡಿರುವ ಫಿಕ್ಸೆಡ್ ವಿಂಗ್ ಪ್ಲಾಟ್‌ಫಾರ್ಮ್‌ಗಾಗಿ ಪೂರಕ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವಲ್ಲಿ ಭಾರತದ ಬೆಳವಣಿಗೆಯನ್ನು ಮತ್ತಷ್ಟು ಪ್ರದರ್ಶಿಸಿತು. ರಕ್ಷಣಾ ಸ್ಥಳ, ಹೊಸ ತಂತ್ರಜ್ಞಾನಗಳು ಮತ್ತು ಪ್ರತಿಯೊಂದು ವಲಯದಲ್ಲಿ ಭಾರತದ ಬೆಳವಣಿಗೆಯ ಬಗ್ಗೆ ಒಳನೋಟವನ್ನು ನೀಡುವ ಯುಎವಿ ವಿಭಾಗವೂ ಒಂದು ಭಾಗವಾಗಿವಿತ್ತು
ಪೂರ್ಣ ಕಾರ್ಯಾಚರಣಾ ಸಾಮರ್ಥ್ಯ (FOC) ಸಂರಚನೆಯಲ್ಲಿ ಪೂರ್ಣ ಪ್ರಮಾಣದ LCA-ತೇಜಸ್ ವಿಮಾನವು ಇಂಡಿಯಾ ಪೆವಿಲಿಯನ್ನ ಪ್ರಮುಖ ಕೇಂದ್ರ ಬಿಂದುವಾಗಿತ್ತು. LCA ತೇಜಸ್ ಒಂದೇ ಎಂಜಿನ್, ಹಗುರವಾದ, ಹೆಚ್ಚು ಚುರುಕಾದ, ಬಹು-ಪಾತ್ರದ ಸೂಪರ್‌ಸಾನಿಕ್ ಫೈಟರ್ ಆಗಿದೆ. ಇದು ಕ್ವಾಡ್ರುಪ್ಲೆಕ್ಸ್ ಡಿಜಿಟಲ್ ಫ್ಲೈ-ಬೈ-ವೈರ್ ಫ್ಲೈಟ್ ಕಂಟ್ರೋಲ್ ಸಿಸ್ಟಮ್ (FCS) ಅನ್ನು ಸಂಬಂಧಿತ ಸುಧಾರಿತ ಹಾರಾಟ ನಿಯಂತ್ರಣ ಕಾನೂನುಗಳೊಂದಿಗೆ ಹೊಂದಿದೆ. ಡೆಲ್ಟಾ ವಿಂಗ್ ಹೊಂದಿರುವ ವಿಮಾನವನ್ನು 'ವಾಯು ಯುದ್ಧ' ಮತ್ತು 'ಆಕ್ರಮಣಕಾರಿ ವಾಯು ಬೆಂಬಲ'ಕ್ಕಾಗಿ ವಿನ್ಯಾಸಗೊಳಿಸಲಾಗಿದ್ದು, 'ವಿಚಕ್ಷಣ' ಮತ್ತು 'ನೌಕಾ ನಿಗ್ರಹ'ವಾಗಿ ಎರಡು ಪಾತ್ರಗಳನ್ನು ನಿರ್ವಹಿಸುತ್ತಿದೆ.
ವಿಚಾರಸಂಕಿರಣಗಳು
ಐದು ದಿನಗಳ ಈ ಕಾರ್ಯಕ್ರಮದಲ್ಲಿ ಹಲವು ವಿಚಾರ ಸಂಕಿರಣಗಳನ್ನು ನಡೆಸಲಾಯಿತು. ಭಾರತೀಯ ರಕ್ಷಣಾ ಉದ್ಯಮಕ್ಕಾಗಿ ಮಾಜಿ ಸೈನಿಕರ ಸಾಮರ್ಥ್ಯವನ್ನು ಬಳಸಿಕೊಳ್ಳುವುದು; ಭಾರತದ ರಕ್ಷಣಾ ಬಾಹ್ಯಾಕಾಶ ಉಪಕ್ರಮ: ಭಾರತೀಯ ಖಾಸಗಿ ಬಾಹ್ಯಾಕಾಶ ಪೂರಕ ವ್ಯವಸ್ಥೆಯನ್ನು ರೂಪಿಸುವ ಅವಕಾಶಗಳು; ಏರೋ ಎಂಜಿನ್‌ಗಳು ಸೇರಿದಂತೆ ಭವಿಷ್ಯದ ಏರೋಸ್ಪೇಸ್ ತಂತ್ರಜ್ಞಾನಗಳ ಸ್ಥಳೀಯ ಅಭಿವೃದ್ಧಿ; ಕರ್ನಾಟಕ ಉತ್ತಮ ತಾಣ: ಯುಎಸ್-ಭಾರತ ರಕ್ಷಣಾ ಸಹಕಾರ ನಾವೀನ್ಯತೆ ಮತ್ತು ಮೇಕ್ ಇನ್ ಇಂಡಿಯಾ; ಸಾಗರ ಕಣ್ಗಾವಲು ಸಾಧನಗಳು ಮತ್ತು ಸ್ವತ್ತುಗಳಲ್ಲಿ ಪ್ರಗತಿ; ಎಂಆರ್ ಒ ಮತ್ತು ರಕ್ಷಣಾ ದರ್ಜೆಯ ಡ್ರೋಣ್ ಗಳಲ್ಲಿ ಶ್ರೇಷ್ಠತೆಯನ್ನು ಸಾಧಿಸುವುದು ಮತ್ತು ಏರೋ ಶಸ್ತ್ರಾಸ್ತ್ರ ಪೋಷಣೆಯಲ್ಲಿ ಆತ್ಮನಿರ್ಭರತೆ ಮತ್ತಿತರ ವಿಷಯಗಳು ಒಳಗೊಂಡಿವೆ.
2023ರ ಏರೋ ಇಂಡಿಯಾದಲ್ಲಿ ಪ್ರಮುಖ ಒಪ್ಪಂದಗಳು
- ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಮತ್ತು ಫ್ರಾನ್ಸ್‌ನ ಸಫ್ರಾನ್ ಹೆಲಿಕಾಪ್ಟರ್ ಎಂಜಿನ್‌ಗಳ ನಡುವೆ ಹೆಲಿಕಾಪ್ಟರ್ ಎಂಜಿನ್ಗಳ ವಿನ್ಯಾಸ, ಅಭಿವೃದ್ಧಿ, ಉತ್ಪಾದನೆ ಮತ್ತು ಜೀವಿತಾವಧಿ ಬೆಂಬಲಕ್ಕಾಗಿ ಜಂಟಿ ಉದ್ಯಮವನ್ನು ರಚಿಸುವ ಕೆಲಸದ ಹಂಚಿಕೆಗಾಗಿ ಒಪ್ಪಂದ.
- ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಮತ್ತು ಏರೋನಾಟಿಕಲ್ ಡೆವಲಪ್‌ಮೆಂಟ್ ಏಜೆನ್ಸಿ ನಡುವೆ ಸುಧಾರಿತ ಮಧ್ಯಮ ಯುದ್ಧ ವಿಮಾನ (AMCA) ಗಾಗಿ IWBC ಮತ್ತು ಇತರ LRU ಗಳಲ್ಲಿ ಒಪ್ಪಂದ.
- ಗಾಳಿ/ಬಿರುಗಾಳಿ ಸ್ಥಿತಿಗತಿ, ಮಳೆ/ಹಿಮ ಇತ್ಯಾದಿಗಳಲ್ಲಿ ಕಾರ್ಯಾಚರಣೆಯ ಸಾಮರ್ಥ್ಯವನ್ನು ಹೊಂದಿರುವ ಗಡಿ ಪ್ರದೇಶಗಳಲ್ಲಿ ನಿಯೋಜಿಸಲಾದ ಮುಂಚೂಣಿ ಪಡೆಗಳಿಗೆ ಕೊನೆಯ ಮೈಲು ಸಂಪರ್ಕ ಒದಗಿಸಲು ಭಾರತೀಯ ಸೇನೆಗಾಗಿ ಲಾಜಿಸ್ಟಿಕ್ ಡ್ರೋಣ್ ಗಳಿಗಾಗಿ ADUSEA ಇಂಕ್ ವಿಭಾಗ (USA) BSS ಮೆಟೀರಿಯಲ್ ಲಿಮಿಟೆಡ್ ಮತ್ತು ಪೆಗಾಸಸ್ ಎಂಜಿನಿಯರಿಂಗ್ ನಡುವೆ ಸಹಕಾರ.
- ಗೋಪಾಲನ್ ಏರೋಸ್ಪೇಸ್ ಇಂಡಿಯಾ ಪ್ರೈ. ಲಿಮಿಟೆಡ್ ಮತ್ತು ಜೆಕ್ ಗಣರಾಜ್ಯದ ಓಮ್ನಿಪೋಲ್ ನಡುವೆ ಭಾರತದಲ್ಲಿ ಖಾಸಗಿ ಕಂಪನಿಯಿಂದ ಮೊದಲ ಪ್ರಯಾಣಿಕ ವಿಮಾನ (L 410 UVP-E20 ಆವೃತ್ತಿ) ಉತ್ಪಾದನೆ ಮತ್ತು ಜೋಡಣೆಗಾಗಿ ಒಪ್ಪಂದ.
- ಭಾರತೀಯ ನೌಕಾಪಡೆಗಾಗಿ IDEX ಚಾಲೆಂಜ್ "ಸ್ವಾಯತ್ತ ಶಸ್ತ್ರಾಸ್ತ್ರ ದೋಣಿ ಸಮೂಹ" ಕ್ಕಾಗಿ ಸಾಗರ್ ಡಿಫೆನ್ಸ್ ಎಂಜಿನಿಯರಿಂಗ್ ಪ್ರೈವೇಟ್ ಲಿಮಿಟೆಡ್ (SDEPL) ಮತ್ತು ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್ (IAI) ಸಹಯೋಗದ ಕುರಿತು ಒಪ್ಪಂದ.
- ಭಾರತದಲ್ಲಿ 122mm GRAD BM ER ಮತ್ತು NONER ರಾಕೆಟ್ಗಳ ಉತ್ಪಾದನಾ ಸೌಲಭ್ಯಗಳನ್ನು ಸ್ಥಾಪಿಸಲು ಮತ್ತು ಅವಶ್ಯಕತೆಗಳನ್ನು (ToT ಸೇರಿದಂತೆ) ಪೂರೈಸಲು ಭಾರತ್ ಡೈನಾಮಿಕ್ಸ್ ಲಿಮಿಟೆಡ್ ಮತ್ತು ಬಲ್ಟೆಕ್ಸ್‌ಪ್ರೊ ಲಿಮಿಟೆಡ್ ನಡುವೆ ಒಪ್ಪಂದ.
- ಭಾರತೀಯ ನೌಕಾಪಡೆಗಾಗಿ ಮುಂದಿನ ಪೀಳಿಗೆಯ ವೇಗದ ದಾಳಿ ಕ್ರಾಫ್ಟ್ ಹಡಗಿಗೆ ಸ್ಥಳೀಯ ವಿಷಯವನ್ನು ಬೆಂಬಲಿಸಲು MTU 16V4000M73L ಎಂಜಿನ್‌ನ ಸ್ಥಳೀಕರಣದೊಂದಿಗೆ ಪರವಾನಗಿ ಉತ್ಪಾದನೆಗಾಗಿ GRSE ಮತ್ತು ರೋಲ್ಸ್-ರಾಯ್ಸ್ ಸೊಲ್ಯೂಷನ್ಸ್ GmbH (MTU) ನಡುವೆ ಒಪ್ಪಂದ.
- T-72/T-90 ಟ್ಯಾಂಕ್‌ಗಳಿಗೆ TRAWL ಅಸೆಂಬ್ಲಿಯ ಅಭಿವೃದ್ಧಿ ಮತ್ತು ಪೂರೈಕೆಗಾಗಿ BEML R&DEE, DRDO ಜೊತೆ ತಂತ್ರಜ್ಞಾನ ವರ್ಗಾವಣೆ (ToT) ಗಾಗಿ ಪರವಾನಗಿ ಒಪ್ಪಂದವನ್ನು ಮಾಡಿಕೊಂಡಿದೆ.
- ಎಲ್ಲಾ ಸಿಸ್ಟಮ್ ಘಟಕಗಳಿಗೆ DLRL DRDO ನಿಂದ BEL ಹೈದರಾಬಾದ್ ಘಟಕಕ್ಕೆ ಶಕ್ತಿ ಇಡಬ್ಲ್ಯೂ ವ್ಯವಸ್ಥೆಯ ಒಪ್ಪಂದ, ವಸ್ತುಗಳ ಬಿಲ್, ಪರೀಕ್ಷಾ ಕಾರ್ಯವಿಧಾನಗಳು, ಏಕೀಕರಣ ಮತ್ತು ಕೊಡುಗೆ ವಿಧಾನ.
- ಭಾರತೀಯ ಪ್ಲಾಟ್ಫಾರ್ಮ್ಗಳಿಗಾಗಿ ಕಡಲ ಗಸ್ತು ರಾಡಾರ್ (MPR) ನಲ್ಲಿ ಭವಿಷ್ಯದ ವ್ಯವಹಾರದ ಸಹಕಾರಕ್ಕಾಗಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಮತ್ತು ಇಸ್ರೇಲ್‌ನ ಎಲ್ಟಾ ಸಿಸ್ಟಮ್ಸ್ ಲಿಮಿಟೆಡ್ ನಡುವೆ ಒಪ್ಪಂದ.
ಏರೋ ಇಂಡಿಯಾ 2023 ರಲ್ಲಿ ಪ್ರದರ್ಶಿಸಿದ ಉತ್ಪನ್ನಗಳು
- ಲಂಬವಾಗಿ ಉಡಾವಣೆ ಮಾಡುವ ಶಾರ್ಟ್ ರೇಂಜ್ ಸರ್ಫೇಸ್-ಟು-ಏರ್ ಕ್ಷಿಪಣಿ (ಭಾರತ್ ಡೈನಾಮಿಕ್ಸ್ ಲಿಮಿಟೆಡ್): VLSRSAM ಮುಂದಿನ ಪೀಳಿಗೆಯ, ಹಡಗು ಆಧಾರಿತ, ಎಲ್ಲಾ ಹವಾಮಾನ, ವಾಯು ರಕ್ಷಣಾ ಆಯುಧವಾಗಿದ್ದು, ಇದನ್ನು ನೌಕಾಪಡೆಯು ವಿಮಾನ ಮತ್ತು UAV ಗಳಂತಹ ಸೂಪರ್ ಸಾನಿಕ್ ಸಮುದ್ರ ಸ್ಕಿಮ್ಮಿಂಗ್ ಗುರಿಗಳ ವಿರುದ್ಧ ತ್ವರಿತ ಪ್ರತಿಕ್ರಿಯೆ ಬಿಂದು ರಕ್ಷಣೆಯಾಗಿ ಬಳಸಬಹುದು. ಈ ಕ್ಷಿಪಣಿ ಎಲ್ಲಾ ಹವಾಮಾನ ಸಾಮರ್ಥ್ಯದೊಂದಿಗೆ ಹೊಗೆರಹಿತ ವ್ಯವಸ್ಥೆಯನ್ನು ಹೊಂದಿದೆ. ಇದು ಅತ್ಯಾಧುನಿಕ ಎಲೆಕ್ಟ್ರಾನಿಕ್ ಕೌಂಟರ್-ಕೌಂಟರ್ ಅಳತೆಗಳ ವೈಶಿಷ್ಟ್ಯಗಳೊಂದಿಗೆ ಹೆಚ್ಚು ಚುರುಕಾದ ಸಂರಚನೆಯನ್ನು ಹೊಂದಿದೆ.
- BMP II ಗಾಗಿ SAL ಸೀಕರ್ ATGM (ಭಾರತ್ ಡೈನಾಮಿಕ್ಸ್ ಲಿಮಿಟೆಡ್): BMP-II ಗಾಗಿ ಸೆಮಿ-ಆಕ್ಟಿವ್ ಲೇಸರ್ ಸೀಕರ್ ಆಧಾರಿತ ಆಂಟಿ-ಟ್ಯಾಂಕ್ ಗೈಡೆಡ್ ಕ್ಷಿಪಣಿ 4,000 ಮೀಟರ್ ವ್ಯಾಪ್ತಿ ಮತ್ತು 25 ಸೆಕೆಂಡುಗಳ ಹಾರಾಟದ ಸಮಯವನ್ನು ಹೊಂದಿರುವ ಉಪ ಕ್ಷಿಪಣಿಯಾಗಿದೆ. ಉಡಾವಣಾ ಟ್ಯೂಬ್ ನಿಂದ ಕ್ಷಿಪಣಿ 23 ಕೆಜಿ ತೂಗುತ್ತದೆ ಮತ್ತು ಟ್ಯಾಂಕ್‌ಗಳು ಮತ್ತು ಪದಾತಿ ದಳದ ಯುದ್ಧ ವಾಹನಗಳಂತಹ ಚಲಿಸುವ ಮತ್ತು ಸ್ಥಿರ ಗುರಿಗಳನ್ನು ನಿಷ್ಕ್ರಿಯಗೊಳಿಸಲು ವಿವಿಧ ರೀತಿಯ ಭೂಪ್ರದೇಶಗಳಲ್ಲಿ ಬಳಸಬಹುದು.
- ಜಿಷ್ಣು (ಭಾರತ್ ಡೈನಾಮಿಕ್ಸ್ ಲಿಮಿಟೆಡ್): ಜಿಷ್ಣು, ಡ್ರೋಣ್ ಮೂಲಕ ತಲುಪಿಸಲಾದ ಕ್ಷಿಪಣಿಯಾಗಿದ್ದು, ಇದು ಹಗುರವಾದ ಮತ್ತು ಚಿಕ್ಕದಾದ ಕ್ಷಿಪಣಿಯಾಗಿದ್ದು, ಸಾಫ್ಟ್ ಸ್ಕಿನ್ ಗುರಿಗಳನ್ನು ಗುರಿಯಾಗಿರಿಸಿಕೊಂಡಿದೆ. ಇದು 9 ಸೆಕೆಂಡುಗಳ ಹಾರಾಟದ ಸಮಯದೊಂದಿಗೆ 1.5 ಕಿ.ಮೀ ವ್ಯಾಪ್ತಿಯನ್ನು ಹೊಂದಿದೆ. ಕ್ಷಿಪಣಿಯು ವ್ಯವಸ್ಥೆಯ ಸಂರಚನೆಗಳ ಆಧಾರದ ಮೇಲೆ ಅರೆ-ಸ್ವಯಂಚಾಲಿತ ಅಥವಾ ಸಂಪೂರ್ಣವಾಗಿ ಸ್ವಾಯತ್ತವಾಗಿರಬಹುದು.
- ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಪ್ರೊಸೆಸರ್ಗಳನ್ನು ಆಧರಿಸಿದ ಸಾಫ್ಟ್ವೇರ್ ವ್ಯಾಖ್ಯಾನಿಸಲಾದ NAVIC/GPS ರಿಸೀವರ್ ಮಾಡ್ಯೂಲ್ (ಆಸ್ಟ್ರಾ ಮೈಕ್ರೋವೇವ್ ಪ್ರಾಡಕ್ಟ್ಸ್ ಲಿಮಿಟೆಡ್).
- DRDO (ಆಸ್ಟ್ರಾ ಮೈಕ್ರೋವೇವ್ ಪ್ರಾಡಕ್ಟ್ಸ್ ಲಿಮಿಟೆಡ್) ತಂತ್ರಜ್ಞಾನವನ್ನು ಆಧರಿಸಿದ ಸ್ಥಳೀಯವಾಗಿ ನಿರ್ಮಿಸಲಾದ 'ಕೌಂಟರ್ ಡ್ರೋನ್ ರಾಡಾರ್'.
- 9 mm ಸಬ್-ಸಾನಿಕ್ ಮದ್ದುಗುಂಡುಗಳು (ಮ್ಯೂನಿಷನ್ಸ್ ಇಂಡಿಯಾ ಲಿಮಿಟೆಡ್).
- IOS (ಐಡಿಯಾಫೋರ್ಜ್ ಟೆಕ್ನಾಲಜಿ ಲಿಮಿಟೆಡ್) ನಲ್ಲಿ BFT: ನಮ್ಮ ಗ್ರೌಂಡ್ ಕಂಟ್ರೋಲ್ ಸ್ಟೇಷನ್ (GCS) ಸಾಫ್ಟ್‌ವೇರ್ ಬ್ಲೂಫೈರ್ ಟಚ್, ಬ್ಲೂಫೈರ್ ಟಚ್, ವೇಪಾಯಿಂಟ್-ಆಧಾರಿತ ನ್ಯಾವಿಗೇಷನ್ ಮೂಲಕ ಕಾರ್ಯಾಚರಣೆಗಳನ್ನು ಪೂರ್ವ-ಯೋಜಿಸುವ ಸಾಮರ್ಥ್ಯದೊಂದಿಗೆ ಮ್ಯಾಪಿಂಗ್ ಮತ್ತು ಕಣ್ಗಾವಲು ಕಾರ್ಯಾಚರಣೆಗಳನ್ನು ಯೋಜಿಸಲು ಮತ್ತು ಆದೇಶಿಸಲು ನಿರ್ಮಿಸಲಾಗಿದೆ.
- HF SDR ರೇಡಿಯೋ (ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್): ಇದು ಸುಧಾರಿತ ಸಾಫ್ಟ್‌ವೇರ್ ವ್ಯಾಖ್ಯಾನಿಸಲಾದ ರೇಡಿಯೋ ಆಗಿದೆ. ರೇಡಿಯೋ ಹಗುರವಾದ 20 W ಟ್ರಾನ್ಸ್ಮಿಟ್ ಸಾಮರ್ಥ್ಯದ ರೇಡಿಯೋ ಆಗಿದೆ. ಇದು ಜನದಟ್ಟಣೆಯ HF ಬ್ಯಾಂಡ್‌ನಲ್ಲಿ ಅಲ್ಪ-ಶ್ರೇಣಿಯ ಸಂವಹನ ಅವಶ್ಯಕತೆಗಳಿಗೆ ಮತ್ತು ದೃಷ್ಟಿ ರೇಖೆಯನ್ನು ಮೀರಿದ ದೀರ್ಘ-ಶ್ರೇಣಿಯ ಸಂವಹನಗಳಿಗೆ ಸಂಪೂರ್ಣ ಪರಿಹಾರ ಒದಗಿಸುತ್ತದೆ.
- ಗೋನಿಯೋಮೀಟರ್ (ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್): ಇದು ಫಿರಂಗಿದಳದ ಹಗಲು ಅಥವಾ ರಾತ್ರಿಯ ಬಳಕೆಗಾಗಿ ಯಾವುದೇ ಸಂಯೋಜಿತ ವೀಕ್ಷಣೆ ಮತ್ತು ಅಗ್ನಿಶಾಮಕ ನಿಯಂತ್ರಣ ಮೇಲ್ವಿಚಾರಣಾ ವ್ಯವಸ್ಥೆಯ ಭಾಗವಾಗಿದೆ.
ಮುನ್ನೋಟ: ಭಾರತದಲ್ಲಿ ಏರೋಸ್ಪೇಸ್ ಮತ್ತು ರಕ್ಷಣೆಯ ಭವಿಷ್ಯ
![](https://static.pib.gov.in/WriteReadData/userfiles/image/image02367DI.jpg)
ಏರೋ ಇಂಡಿಯಾ ಸದಾ ಕೇವಲ ಪ್ರದರ್ಶನಕ್ಕಿಂತ ಹೆಚ್ಚಿನದಾಗಿದೆ - ಇದು ಬಾಹ್ಯಾಕಾಶ ಮತ್ತು ರಕ್ಷಣೆಯಲ್ಲಿ ಜಾಗತಿಕ ನಾಯಕನಾಗಲು ಭಾರತದ ಬದ್ಧತೆಯನ್ನು ಒತ್ತಿಹೇಳುವ ಕಾರ್ಯತಂತ್ರದ ಭಾಗವಾಗಿದೆ. ಈ ಕಾರ್ಯಕ್ರಮವು ಪ್ರಮುಖ ಪಾತ್ರ ವಹಿಸುತ್ತದೆ:
- ತಾಂತ್ರಿಕ ಪ್ರಗತಿಗಳನ್ನು ಚಾಲನೆ ಮಾಡುವುದು: ನಾವೀನ್ಯಕಾರರು ಮತ್ತು ಉದ್ಯಮ ನಾಯಕರನ್ನು ಒಗೂಡಿಸುವ ಮೂಲಕ ಏರೋ ಇಂಡಿಯಾ ಮುಂದಿನ ಪೀಳಿಗೆಯ ಬಾಹ್ಯಾಕಾಶ ವ್ಯವಸ್ಥೆಗಳ ಅಭಿವೃದ್ಧಿ ಮತ್ತು ನಿಯೋಜನೆಗೆ ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ.
- ರಾಷ್ಟ್ರೀಯ ಭದ್ರತೆಯನ್ನು ವೃದ್ಧಿಸುವುದು: ಈ ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾದ ತಂತ್ರಜ್ಞಾನಗಳು ಮತ್ತು ತಂತ್ರಗಳು ಭಾರತದ ರಕ್ಷಣಾ ಸಾಮರ್ಥ್ಯಗಳನ್ನು ವೃದ್ಧಿಸಲು ನೇರ ಕೊಡುಗೆ ನೀಡುತ್ತವೆ, ಸಮಕಾಲೀನ ಮತ್ತು ಭವಿಷ್ಯದ ಭದ್ರತಾ ಸವಾಲುಗಳನ್ನು ಎದುರಿಸಲು ರಾಷ್ಟ್ರವು ಉತ್ತಮವಾಗಿ ಸಿದ್ಧವಾಗಿದೆ ಎಂಬುದನ್ನು ಖಾತ್ರಿಪಡಿಸುತ್ತದೆ.
- ಆರ್ಥಿಕ ಬೆಳವಣಿಗೆಯನ್ನು ಬಲಪಡಿಸುವುದು: ರಕ್ಷಣೆಯ ಹೊರತಾಗಿಯೂ ಬಾಹ್ಯಾಕಾಶದಲ್ಲಿನ ಪ್ರಗತಿಗಳು ಆರ್ಥಿಕ ಬೆಳವಣಿಗೆ, ಕೈಗಾರಿಕಾ ಅಭಿವೃದ್ಧಿ ಮತ್ತು ತಾಂತ್ರಿಕ ಸ್ವಾವಲಂಬನೆಗೆ ದೂರಗಾಮಿ ಪರಿಣಾಮಗಳನ್ನು ಬೀರುತ್ತವೆ.
ಉಪಸಂಹಾರ : ಏರೋ ಇಂಡಿಯಾದೊಂದಿಗೆ ಭವಿಷ್ಯವನ್ನು ಅಪ್ಪಿಕೊಳ್ಳುವುದು
ಏರೋ ಇಂಡಿಯಾ ನಾವೀನ್ಯತೆ, ಕಾರ್ಯತಂತ್ರದ ಸಹಯೋಗ ಮತ್ತು ವೈಮಾನಿಕ ಮತ್ತು ರಕ್ಷಣಾ ಕ್ಷೇತ್ರದಲ್ಲಿನ ಶ್ರೇಷ್ಠತೆಗೆ ಭಾರತದ ಅಚಲ ಬದ್ಧತೆಗೆ ಸಾಕ್ಷಿಯಾಗಿದೆ. ಏರೋ ಇಂಡಿಯಾ 2025 ಅನ್ನು ಆಯೋಜಿಸಲು ರಾಷ್ಟ್ರವು ಸಿದ್ಧತೆ ನಡೆಸುತ್ತಿರುವ ಹೊತ್ತಿನಲ್ಲಿ ಈ ಕಾರ್ಯಕ್ರಮವು ಹಿಂದಿನ ಆವೃತ್ತಿಗಳ ಶ್ರೀಮಂತ ಪರಂಪರೆಯನ್ನು - ವಿಶೇಷವಾಗಿ ಮಹತ್ವದ ಬದಲಾವಣೆಯ ಏರೋ ಇಂಡಿಯಾ 2023 ವೈಭವವನ್ನು ಮತ್ತೆ ನೆನಪಿಸುವ ಭರವಸೆ ನೀಡುತ್ತದೆ. ಕಠಿಣ ಕಾರ್ಯಾಚರಣೆಯ ಶಿಷ್ಟಾಚಾರಗಳು, ಕಾರ್ಯತಂತ್ರದ ಪಾಲುದಾರಿಕೆಗಳು ಮತ್ತು ಮುಂದಾಲೋಚನೆಯ ಕಾರ್ಯಸೂಚಿಯ ಮೂಲಕ ಏರೋ ಇಂಡಿಯಾ 2025 ಜಾಗತಿಕ ವೈಮಾನಿಕ ವೇದಿಕೆಯಲ್ಲಿ ಭಾರತದ ವರ್ಚಸ್ಸನ್ನು ಮತ್ತಷ್ಟು ವೃದ್ಧಿಸಲು ಸಜ್ಜಾಗಿದೆ.
ಅಡಕಗಳು
- ಏರೋ ಇಂಡಿಯಾದ ವಿಸ್ತೃತ ಕಾರ್ಯಕ್ರಮದ ಪಟ್ಟಿ: https://www.aeroindia.gov.in/assets/front/broad_programme.pdf
- ವಿಚಾರಸಂಕಿರಣಗಳ ಪಟ್ಟಿ: https://www.aeroindia.gov.in/assets/front/seminar_list.pdf
- ಆಹ್ವಾನಿತ ಭಾಷಣಕಾರರ ಪಟ್ಟಿಗಾಗಿ: https://www.aeroindia.gov.in/assets/front/speakers_list.pdf
- ವೀಕ್ಷಕರ ನೋಂದಣಿಗಾಗಿ: https://www.aeroindia.gov.in/visitor-registration
ಉಲ್ಲೇಖಗಳು
https://www.aeroindia.gov.in/
https://www.aeroindia.gov.in/faq
https://www.aeroindia.gov.in/whyexhibit
https://pib.gov.in/PressReleseDetailm.aspx?PRID=1899388
https://pib.gov.in/PressReleasePage.aspx?PRID=2091447
https://www.ddpmod.gov.in/resources/photos/aero-india
https://x.com/aeroindiashow?lang=en
https://pib.gov.in/PressReleasePage.aspx?PRID=1898547
https://pib.gov.in/PressReleasePage.aspx?PRID=2090516
https://pib.gov.in/PressReleaseIframePage.aspx?PRID=1989502
https://x.com/MIB_India/status/1887124348617760992
https://x.com/AeroIndiashow/status/1887371647331516549
https://x.com/MIB_India/status/1886725544823415252
https://x.com/AeroIndiashow/status/1887050312281641266
https://x.com/AeroIndiashow/status/1869024504485208160/photo/1
https://x.com/AeroIndiashow/status/1849117379852132485/photo/1
https://x.com/AeroIndiashow/status/1626582275365441537/photo/3
https://x.com/AeroIndiashow/status/1626530283892903936/photo/1
https://www.ddpmod.gov.in/resources/photos/aero-india
Click here to download PDF
*****
(Release ID: 2100995)
Visitor Counter : 24