ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ
"ಅನೌಪಚಾರಿಕ ವಲಯದ ಕಾರ್ಮಿಕರಿಗೆ ಔಪಚಾರಿಕೀಕರಣ ಮತ್ತು ಸಾಮಾಜಿಕ ಭದ್ರತಾ ವ್ಯಾಪ್ತಿ: ಸವಾಲುಗಳು ಮತ್ತು ನಾವೀನ್ಯತೆಗಳು" ಎಂಬ ವಿಷಯ ಕುರಿತ ಅಂತರರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿದ ಡಾ.ಮನ್‌ಸುಖ್ ಮಾಂಡವೀಯಾ
ಭಾರತದ ಸಾಮಾಜಿಕ ರಕ್ಷಣಾ ವ್ಯಾಪ್ತಿಯು ಶೇ.24.4ರಿಂದ ಶೇ.48.8ಕ್ಕೆ ದ್ವಿಗುಣಗೊಂಡಿದೆ ಎಂದ ಕೇಂದ್ರ ಸಚಿವರಾದ ಡಾ. ಮನ್‌ಸುಖ್ ಮಾಂಡವಿಯಾ
ಭಾರತದ ಒಟ್ಟು ಜನಸಂಖ್ಯೆಯ ಶೇ.65ರಷ್ಟು ಮಂದಿ ಕೇಂದ್ರ ಸರ್ಕಾರದ ಕನಿಷ್ಠ ಒಂದು ಸಾಮಾಜಿಕ ರಕ್ಷಣಾ ಪ್ರಯೋಜನ ವ್ಯಾಪ್ತಿಯಲ್ಲಿದ್ದಾರೆ: ಡಾ. ಮಾಂಡವೀಯಾ
ಗಿಗ್ ಕಾರ್ಮಿಕರಿಗೂ ಸಾಮಾಜಿಕ ಭದ್ರತೆ ಸೌಲಭ್ಯ ವಿಸ್ತರಿಸುವ ಚಿಂತನೆ ಇದೆ ಎಂದು ಘೋಷಿಸಿದ ಕೇಂದ್ರ ಸಚಿವರು
ಭಾರತದ ಸಾಮಾಜಿಕ ಭದ್ರತಾ ವ್ಯವಸ್ಥೆಯಲ್ಲಿನ ಅತ್ಯಾಧುನಿಕತೆ ಹಾಗೂ ನಾವೀನ್ಯತೆಗೆ ಐಎಸ್ಎಸ್ಎ ಅಧ್ಯಕ್ಷ ಡಾ. ಮೊಹಮ್ಮದ್ ಅಜ್ಮಾನ್ ಶ್ಲಾಘನೆ
ಅನೌಪಚಾರಿಕ ವಲಯದ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುವಲ್ಲಿನ ಸವಾಲುಗಳನ್ನು ನಿವಾರಿಸುವ ಕಾರ್ಯತಂತ್ರಗಳ ಕುರಿತು ವಿಚಾರಗೋಷ್ಠಿಗಳಲ್ಲಿ ವಿಸ್ತೃತ ಚರ್ಚೆ
ವೈವಿಧ್ಯದ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಸಂಭ್ರಮಾಚರಣೆ ಮೂಲಕ ಮೊದಲ ವಿಚಾರಗೋಷ್ಠಿಗಳಿಗೆ ತೆರೆ
Posted On:
20 JAN 2025 6:20PM by PIB Bengaluru
"ಅನೌಪಚಾರಿಕ ವಲಯದ ಕಾರ್ಮಿಕರಿಗೆ ಔಪಚಾರಿಕೀಕರಣ ಮತ್ತು ಸಾಮಾಜಿಕ ಭದ್ರತಾ ವ್ಯಾಪ್ತಿ: ಸವಾಲುಗಳು ಮತ್ತು ನಾವೀನ್ಯತೆಗಳು" ಎಂಬ ವಿಷಯ ಕುರಿತಾಗಿ ನವದೆಹಲಿಯಲ್ಲಿ ಆಯೋಜನೆಗೊಂಡಿರುವ ಎರಡು ದಿನಗಳ ಅಂತಾರಾಷ್ಟ್ರೀಯ ವಿಚಾರ ಸಂಕಿರಣವನ್ನು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಹಾಗೂ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವರಾದ ಡಾ. ಮನ್‌ಸುಖ್ ಮಾಂಡವೀಯಾ ಅವರು ಇಂದು ಉದ್ಘಾಟಿಸಿದರು. ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ರಾಜ್ಯ ಸಚಿವರಾದ ಸುಶ್ರೀ ಶೋಭಾ ಕರಂದ್ಲಾಜೆ, ಕಾರ್ಯದರ್ಶಿ (ಕಾರ್ಮಿಕ ಮತ್ತು ಉದ್ಯೋಗ) ಶ್ರೀಮತಿ ಸುಮಿತಾ ದಾವ್ರಾ, ಐಎಸ್ಎಸ್ಎ ಅಧ್ಯಕ್ಷೆ ಡಾ. ಮೊಹಮ್ಮದ್ ಅಜ್ಮಾನ್ ಮತ್ತು ಇತರೆ ಅತಿಥಿಗಳು ತಾಂತ್ರಿಕ ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಡಾ. ಮಾಂಡವೀಯಾ ಅವರು ಎರಡು ದಿನಗಳ ವಿಚಾರ ಸಂಕಿರಣದ ಮಹತ್ವವನ್ನು ಒತ್ತಿ ಹೇಳಿದರು. "ಸಾಮಾಜಿಕ ಭದ್ರತೆಯು ಸಾಮಾನ್ಯ ಜನರನ್ನು ತಲುಪಬೇಕು. ಆ ಮೂಲಕ ಅವರು ತಮ್ಮ ಮೂಲಭೂತ ಅಗತ್ಯಗಳನ್ನು ಸಮರ್ಪಕವಾಗಿ ಪಡೆದುಕೊಳ್ಳುವಂತೆ ನೋಡಿಕೊಳ್ಳಬೇಕು,ʼʼ ಎಂದು ಒತ್ತಿ ಹೇಳಿದರು. ಸಾಮಾಜಿಕ ಭದ್ರತೆಯ ಪರಿಕಲ್ಪನೆಯು ಪ್ರಾಚೀನ ಕಾಲದಿಂದಲೂ ಚಾಲ್ತಿಯಲ್ಲಿದ್ದು, ನಿರಂತರ ಪ್ರಕ್ರಿಯೆಯಾಗಿ ಮುಂದುವರಿದುಕೊಂಡು ಬಂದಿದೆ. ಮಹಾನ್ ತತ್ವಜ್ಞಾನಿ ಚಾಣಕ್ಯ ಹೆಸರನ್ನು ಉಲ್ಲೇಖಿಸಿದ ಡಾ. ಮಾಂಡವೀಯಾ, "ಬಡತನ ರೇಖೆಗಿಂತ ಕೆಳಗಿರುವ ಜನರು, ವಿಶೇಷವಾಗಿ ಸಮಾಜದ ಅತ್ಯಂತ ಕೆಳಸ್ತರದ ಜನರಿಗೆ ಎಲ್ಲಾ ಪ್ರಯೋಜನಗಳು ಮತ್ತು ಜೀವನ ಸುಗಮಗೊಳಿಸವ ಸವಲತ್ತುಗಳು ಲಭ್ಯವಾಗುವಂತಿರಬೇಕು,ʼʼ ಎಂದು ಒತ್ತಿ ಹೇಳಿದರು. ಹಾಗೆಯೇ, ಸ್ವಯಂ ಉದ್ಯೋಗ ನಡೆಸುತ್ತಿರುವ ವ್ಯಕ್ತಿಗಳು ಸಹ ಸಾಮಾಜಿಕ ಭದ್ರತಾ ವ್ಯಾಪ್ತಿಯಲ್ಲಿರಬೇಕು,ʼʼ ಎಂದು ಪ್ರತಿಪಾದಿಸಿದರು.
ಭಾರತದ ಭೂವಿಸ್ತೀರ್ಣ ಮತ್ತು ವೈವಿಧ್ಯದ ಜನಸಂಖ್ಯೆಯನ್ನು ಉಲ್ಲೇಖಿಸಿ ಮಾತನಾಡಿದ ಡಾ.ಮಾಂಡವೀಯಾ ಅವರು, ಕಳೆದ ದಶಕದಲ್ಲಿ ಭಾರತವು ತನ್ನ ದೇಶದ ನಾಗರಿಕರಿಗೆ ಸಾಮಾಜಿಕ ಭದ್ರತೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಮಾಡಿದಷ್ಟು ಕೆಲಸವನ್ನು ಬೇರೆ ಯಾವುದೇ ದೇಶವೂ ಮಾಡಿಲ್ಲ ಎಂದು ಗಮನ ಸೆಳೆದರು. "ಐಎಲ್‌ಒನ ವಿಶ್ವ ಸಾಮಾಜಿಕ ರಕ್ಷಣಾ ವರದಿ 2024-26ರ ಪ್ರಕಾರ ಭಾರತದ ಸಾಮಾಜಿಕ ರಕ್ಷಣಾ ವ್ಯಾಪ್ತಿಯು ಶೇ.24.4%ರಿಂದ ಶೇ.48.8%ಕ್ಕೆ ಏರಿಕೆಯಾಗಿದ್ದು, ದ್ವಿಗುಣಗೊಂಡಿದೆ. ಜನಸಂಖ್ಯೆಯ ಶೇ.65%ರಷ್ಟು ಮಂದಿ ಅಂದರೆ ಸುಮಾರು 920 ದಶಲಕ್ಷ ಜನರು ಕೇಂದ್ರ ಸರ್ಕಾರದ ಯೋಜನೆಗಳಿಂದ ಕನಿಷ್ಠ ಒಂದು ಸಾಮಾಜಿಕ ರಕ್ಷಣಾ ಪ್ರಯೋಜನವನ್ನು (ನಗದು ಅಥವಾ ವಸ್ತು- ಉತ್ಪನ್ನ ಇತರೆ ರೂಪದಲ್ಲಿ) ಪಡೆದಿದ್ದಾರೆ. ಸಾಮಾಜಿಕ ರಕ್ಷಣಾ ವ್ಯಾಪ್ತಿಯನ್ನು ಹೆಚ್ಚಿಸುವಲ್ಲಿ ಭಾರತದ ಗಣನೀಯ ಪ್ರಗತಿಯಿಂದಾಗಿ ವಿಶ್ವದ ಸರಾಸರಿ ಸಾಮಾಜಿಕ ರಕ್ಷಣಾ ವ್ಯಾಪ್ತಿಯು ಶೇ.5%ರಷ್ಟು ಅಂಕಗಳನ್ನು ಹೆಚ್ಚಿಸಿಕೊಂಡಿದೆ,ʼʼ ಎಂದು ಹೆಮ್ಮೆಯಿಂದ ನುಡಿದರು. ಆರೋಗ್ಯ ಭದ್ರತೆ, ಪಿಂಚಣಿ ಭದ್ರತೆ, ಜೀವನೋಪಾಯ ಭದ್ರತೆ ಮತ್ತು ಆಹಾರ ಭದ್ರತೆಯಂತಹ ಕ್ಷೇತ್ರಗಳಲ್ಲಿ ಭಾರತವು ಗಮನಾರ್ಹ ಪ್ರಗತಿಯನ್ನು ಸಾಧಿಸಿದ್ದು, ಆ ಮೂಲಕ ತನ್ನ ಜನರಿಗೆ ಸಮಗ್ರ ಸಹಕಾರ ಸಿಗುತ್ತಿರುವುದನ್ನು ಖಾತರಿಪಡಿಸುತ್ತದೆ.
ಡಾ. ಮಾಂಡವೀಯಾ ಅವರು ಕೆಲ ನಿರ್ದಿಷ್ಟ ಸಾಧನೆಗಳ ವಿವರವನ್ನು ಹಂಚಿಕೊಳ್ಳುತ್ತಾ, ಉದಾಹರಣೆಗೆ 600 ಮಿಲಿಯನ್ ಭಾರತೀಯರು ಈಗ ಆರೋಗ್ಯ ಭದ್ರತೆಯ ವ್ಯಾಪ್ತಿಯಲ್ಲಿದ್ದರೆ, ದೇಶಾದ್ಯಂತ 24,000ಕ್ಕೂ ಹೆಚ್ಚು ಆಸ್ಪತ್ರೆಗಳಲ್ಲಿ ₹5 ಲಕ್ಷದವರೆಗೆ ಉಚಿತ ಆರೋಗ್ಯ ರಕ್ಷಣೆ ಸೌಲಭ್ಯವಿದೆ. ಆಹಾರ ಭದ್ರತೆಯನ್ನು ಖಾತರಿಪಡಿಸುವ ಉಚಿತ ಆಹಾರ ಧಾನ್ಯ ವಿತರಣೆಯಿಂದ 800 ಮಿಲಿಯನ್ ಜನ ಪ್ರಯೋಜನ ಪಡೆಯುತ್ತಿದ್ದಾರೆ ಎಂದು ಅವರು ಉಲ್ಲೇಖಿಸಿದರು. ʼಇ-ಶ್ರಮ್ʼ ಪೋರ್ಟಲ್ ಅನ್ನು ಪ್ರಾರಂಭಿಸುವುದು ಮತ್ತೊಂದು ಪ್ರಮುಖ ಉಪಕ್ರಮವಾಗಿದ್ದು, 300 ಮಿಲಿಯನ್‌ಗಿಂತಲೂ ಹೆಚ್ಚು ಅನೌಪಚಾರಿಕ ಕಾರ್ಮಿಕರು ನೋಂದಾಯಿಸಿಕೊಳ್ಳಲು ಮತ್ತು ಸಾಮಾಜಿಕ ಭದ್ರತಾ ಪ್ರಯೋಜನಗಳನ್ನು ಪಡೆಯಲು ಅನುವು ಮಾಡಿಕೊಡುತ್ತದೆ. ಕಳೆದ 10 ವರ್ಷಗಳಲ್ಲಿ, ಈ ಸಾಮಾಜಿಕ ಭದ್ರತಾ ಕ್ರಮಗಳಿಂದಾಗಿ 248 ಮಿಲಿಯನ್ ಜನ ಬಹು ಆಯಾಮದ ಬಡತನದಿಂದ ಪಾರಾಗಿದ್ದಾರೆ ಎಂದು ಅವರು ಹೇಳಿದರು.
ಶೇ. 6.7%ರಷ್ಟು ಜಿಡಿಪಿ ಬೆಳವಣಿಗೆ ಮತ್ತು 643 ಮಿಲಿಯನ್ ಜನರ ಕಾರ್ಯಪಡೆಯನ್ನು ಹೊಂದಿರುವ ಭಾರತವು ಗಮನಾರ್ಹ ಆರ್ಥಿಕ ಬೆಳವಣಿಗೆ ಕಾಣುತ್ತಿದೆ ಎಂದು ಕೇಂದ್ರ ಸಚಿವರು ಪ್ರಖರವಾಗಿ ಪ್ರತಿಪಾದಿಸಿದರು. ಕಳೆದ 6 ವರ್ಷಗಳಲ್ಲಿ ಈ ಕಾರ್ಯಪಡೆಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಪ್ರಮಾಣ ಶೇ.23.3%ರಿಂದ ಶೇ.41.7%ಕ್ಕೆ ಏರಿದೆ ಎಂದು ಅವರು ಹೇಳಿದರು. ಡಾ. ಮಾಂಡವೀಯಾ ಅವರು ಉದಯೋನ್ಮುಖ ಗಿಗ್ ಆರ್ಥಿಕತೆ ಕುರಿತಂತೆಯೂ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದರು. ಹೊಸ ಕಾರ್ಮಿಕ ಸಂಹಿತೆಯು ಗಿಗ್ ಕೆಲಸಗಾರರನ್ನು ವ್ಯಾಖ್ಯಾನಿಸಿದ್ದು, ಅವರನ್ನೂ ಸಾಮಾಜಿಕ ಭದ್ರತೆಯ ವ್ಯಾಪ್ತಿಗೆ ತರಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಘೋಷಿಸಿದರು.
ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವೆ ಸುಶ್ರೀ ಶೋಭಾ ಕರಂದ್ಲಾಜೆ ಅವರು ವಿಚಾರ ಸಂಕಿರಣದ ಮಹತ್ವವನ್ನು ವಿವರಿಸುವ ಜೊತೆಗೆ ಇಂದಿನ ತುರ್ತು ಅಗತ್ಯವೆನಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಅನೌಪಚಾರಿಕ ಕಾರ್ಮಿಕರಿಗೆ ಸಾಮಾಜಿಕ ರಕ್ಷಣೆಯನ್ನು ಮುನ್ನಡೆಸುವಲ್ಲಿ ಈ ಅಂತರರಾಷ್ಟ್ರೀಯ ವಿಚಾರಸಂಕಿರಣವು ಒಂದು ಪ್ರಮುಖ ಮೈಲಿಗಲ್ಲು ಎನಿಸಿದೆ. ಕಾರ್ಮಿಕರ ಹಕ್ಕುಗಳನ್ನು ಉತ್ತೇಜಿಸಲು ಮತ್ತು ರಕ್ಷಿಸಲು, ಹಾಗೆಯೇ ಅವರನ್ನು ತಾರತಮ್ಯ ಮತ್ತು ಶೋಷಣೆಯಿಂದ ರಕ್ಷಿಸುವುದನ್ನು ಖಚಿತಪಡಿಸಿಕೊಳ್ಳಲು ಮತ್ತು ಸಮಾನ ಆರ್ಥಿಕ ಹಾಗೂ ಸಾಮಾಜಿಕ ಅವಕಾಶಗಳನ್ನು ಒದಗಿಸಲು ಸರ್ಕಾರದ ಅಚಲವಾದ ಬದ್ಧತೆಯನ್ನು ತೋರಿದೆ ಎಂದು ಸುಶ್ರೀ ಕರಂದ್ಲಾಜೆ ಅವರು ಪುನರುಚ್ಚರಿಸಿದರು. ರಾಷ್ಟ್ರ ನಿರ್ಮಾಣದಲ್ಲಿ ಅನೌಪಚಾರಿಕ ವಲಯದ ಕಾರ್ಮಿಕರ ನಿರ್ಣಾಯಕ ಪಾತ್ರವಿದೆ ಎಂಬುದನ್ನು ಒಪ್ಪಿಕೊಂಡಿರುವ ಪ್ರಧಾನಿ ಮೋದಿಯವರು "ವಿಕಸಿತ ಭಾರತ" (ಅಭಿವೃದ್ಧಿ ಹೊಂದಿದ ಭಾರತ) ಸಾಧಿಸುವಲ್ಲಿ ಅವರೂ ಪಾಲುದಾರರು ಎಂದು ಉಲ್ಲೇಖಿಸುವ ದೂರದರ್ಶಿತ್ವದ ಸ್ಪಷ್ಟ ನಿರ್ದೇಶನಕ್ಕೆ ಪೂರಕವಾಗಿ ಇಷ್ಟೆಲ್ಲಾ ಸಾಕಾರಗೊಂಡಿದೆ ಎಂದು ಅವರು ಗಮನ ಸೆಳೆದರು. ಕಾರ್ಮಿಕರಿಗೆ ಸಾಮಾಜಿಕ ರಕ್ಷಣೆ ಕಲ್ಪಿಸುವಲ್ಲಿನ ಅಂತರವನ್ನು ಪರಿಣಾಮಕಾರಿಯಾಗಿ ಪರಿಹರಿಸುವ ಮಾರ್ಗೋಪಾಯಗಳನ್ನು ರೂಪಿಸುವಲ್ಲಿ ಸರ್ಕಾರ ಮತ್ತು ಸಾಮಾಜಿಕ ಭದ್ರತಾ ಸಂಸ್ಥೆಗಳು ಪರಸ್ಪರ ನಾವೀನ್ಯತೆ ಮತ್ತು ಸಹಯೋಗವನ್ನು ಹೊಂದುವುದು ಅತ್ಯಗತ್ಯವೆನಿಸಿದೆ ಎಂದು ಅವರು ಪ್ರತಿಪಾದನೆ ಮಾಡಿದರು.
ಕಾರ್ಯದರ್ಶಿ (ಕಾರ್ಮಿಕ ಮತ್ತು ಉದ್ಯೋಗ) ಶ್ರೀಮತಿ ಸುಮಿತಾ ದಾವ್ರಾ ಅವರು ಹೆಚ್ಚುವರಿ ಸಾಮಾಜಿಕ ರಕ್ಷಣೆಯನ್ನು ಒದಗಿಸುವ ಮತ್ತು ಗುಣಮಟ್ಟದ ಉದ್ಯೋಗಗಳನ್ನು ಸೃಷ್ಟಿಸುವ ನಿಟ್ಟಿನಲ್ಲಿ ಭಾರತದ ಬದ್ಧತೆ ಬಗ್ಗೆ ಒತ್ತು ನೀಡಿ ಮಾತನಾಡಿದರು. ಜನಸಂಖ್ಯೆಯನ್ನು ಉಪಯುಕ್ತವಾಗಿ ಬಳಸಿಕೊಳ್ಳುವುದರ ಮಹತ್ವದ ಬಗ್ಗೆ ಪ್ರಸ್ತಾಪಿಸಿದ ಅವರು, ಭಾರತದ ಜನಸಂಖ್ಯೆಯ ಶೇ.65% ಕ್ಕಿಂತ ಹೆಚ್ಚು ಜನರು 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರು. ಔಪಚಾರಿಕ ವಲಯಕ್ಕೆ ಸಾಮಾಜಿಕ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು, ಸರ್ಕಾರವು ಕೇಂದ್ರ ಸಚಿವರಾದ ಡಾ.ಮನ್‌ಸುಖ್ ಮಾಂಡವೀಯಾ ಅವರ ಮಾರ್ಗದರ್ಶನದಲ್ಲಿ ಇಪಿಎಫ್‌ಒ ಮತ್ತು ಇಎಸ್‌ಐಸಿ ಮೂಲಕ ಸೇವೆಗಳನ್ನು ಬಲಪಡಿಸುವ ಜತೆಗೆ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ವ್ಯಾಪ್ತಿಯನ್ನು ವಿಸ್ತರಿಸುತ್ತಿದೆ ಎಂದು ಶ್ರೀಮತಿ ದಾವ್ರಾ ಉಲ್ಲೇಖಿಸಿದರು. ಅನೌಪಚಾರಿಕ ವಲಯದ ಕಾರ್ಮಿಕರಿಗೆ ಸಾಮಾಜಿಕ ರಕ್ಷಣೆಯನ್ನು ವಿಸ್ತರಿಸಲು ಸರ್ಕಾರದ ಪ್ರಯತ್ನಗಳ ಬಗ್ಗೆಯೂ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ ಅವರು, ಇ-ಶ್ರಮ್ ಪೋರ್ಟಲ್ ಸೇರಿದಂತೆ ಹಲವಾರು ಯೋಜನೆಗಳನ್ನು ಪ್ರಾರಂಭಿಸಿದ್ದು, ಈ ವೇದಿಕೆಯಡಿ ಈಗಾಗಲೇ ನೋಂದಣಿಯಾದ 300 ಮಿಲಿಯನ್‌ಗಿಂತಲೂ ಹೆಚ್ಚು ಅಸಂಘಟಿತ ವಲಯದ ಕಾರ್ಮಿಕರಿಗೆ ಕೇಂದ್ರ ಮತ್ತು ರಾಜ್ಯಗಳ ಕಲ್ಯಾಣ ಯೋಜನೆಗಳಿಗೆ ಸುಲಭ ಪ್ರವೇಶ ಕಲ್ಪಿಸುವ ಒಂದೇ ಸೂರಿನಡಿ ಸಿಗುವ ಪರಿಹಾರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ವಿವರಿಸಿದರು.
ದೇಶದಲ್ಲಿ ಸಾಮಾಜಿಕ ಭದ್ರತಾ ವ್ಯಾಪ್ತಿಯನ್ನು ಬಲಪಡಿಸಲು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಕೈಗೊಂಡಿರುವ ಇ-ಶ್ರಮ್, ರಾಷ್ಟ್ರೀಯ ವೃತ್ತಿಪರ ಸೇವಾ ಪೋರ್ಟಲ್ ಇತರೆ ಉಪಕ್ರಮಗಳನ್ನು ಪ್ರದರ್ಶಿಸುವ ವಿವಿಧ ಪ್ರದರ್ಶನ ಮಳಿಗೆಗಳಿಗೆ ಕೇಂದ್ರ ಸಚಿವರು, ಐಎಸ್‌ಎಸ್‌ಎ- ಇಎಸ್‌ಐಸಿ ಅಂತರರಾಷ್ಟ್ರೀಯ ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭದ ವೇಳೆ ಭೇಟಿ ನೀಡಿದರು.
ಇದೇ ಸಂದರ್ಭದಲ್ಲಿ ವಿವಿಧ ಸಾಮಾಜಿಕ ಕಲ್ಯಾಣ ಯೋಜನೆಗಳ ಮೂಲಕ ತನ್ನ ದೇಶದ ನಾಗರಿಕರಿಗೆ ಸಾಮಾಜಿಕ ರಕ್ಷಣೆಯನ್ನು ಖಾತರಿಪಡಿಸಿಕೊಳ್ಳುವಲ್ಲಿ ಭಾರತದ ಪ್ರಯಾಣವನ್ನು ಎತ್ತಿ ತೋರಿಸುವ "ಭಾರತದಲ್ಲಿ ಸಾಮಾಜಿಕ ರಕ್ಷಣೆ" ಎಂಬ ಕಾಫಿ ಟೇಬಲ್ ಪುಸ್ತಕವನ್ನು ಅವರು ಬಿಡುಗಡೆ ಮಾಡಿದರು.
ಅಂತಾರಾಷ್ಟ್ರೀಯ ಸಾಮಾಜಿಕ ಭದ್ರತಾ ಸಂಸ್ಥೆಯ (ಐಎಸ್‌ಎಸ್‌ಎ) ಅಧ್ಯಕ್ಷರಾದ ಡಾ. ಮೊಹಮ್ಮದ್ ಅಜ್ಮಾನ್ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿ ಇಂತಹ ಮಹತ್ವದ ತಾಂತ್ರಿಕ ವಿಚಾರ ಸಂಕಿರಣವನ್ನು ಆಯೋಜಿಸಿದ್ದಕ್ಕಾಗಿ ಕೇಂದ್ರ ಸಚಿವರು ಮತ್ತು ಇಎಸ್‌ಐಸಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು. ಹಾಗೆಯೇ ಭಾರತದ ಸಾಮಾಜಿಕ ಭದ್ರತಾ ವ್ಯವಸ್ಥೆಯನ್ನು ಬಲಪಡಿಸುವಲ್ಲಿನ ಅಸಾಧಾರಣ ಪ್ರಗತಿಯನ್ನು ಶ್ಲಾಘಿಸಿದ ಅವರು, ಈ ಕ್ಷೇತ್ರದಲ್ಲಿ ದೇಶದ ಆತಿಥ್ಯ ಮತ್ತು ನಾಯಕತ್ವವು ಈ ರೀತಿಯ ಸಭೆ ಆಯೋಜನೆಗೆ ಸೂಕ್ತ ಸ್ಥಳವನ್ನಾಗಿಸಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಸಾಧ್ಯವಾದಷ್ಟು ಸಮಗ್ರ ಮತ್ತು ಸದೃಢ ಸಾಮಾಜಿಕ ಭದ್ರತಾ ಚೌಕಟ್ಟನ್ನು ರೂಪಿಸುವಲ್ಲಿ ಇಎಸ್‌ಐಸಿ ಮತ್ತು ಇಪಿಎಫ್‌ಒ ಪ್ರದರ್ಶಿಸಿದ ಬದ್ಧತೆ ಮತ್ತು ನಾವೀನ್ಯತೆಯನ್ನು ಡಾ. ಅಜ್ಮಾನ್ ಶ್ಲಾಘಿಸಿದರು. ಹಾಗೆಯೇ ಬಯೋಮೆಟ್ರಿಕ್ ದಾಖಲಾತಿ ವ್ಯವಸ್ಥೆಗಳಿಂದ ಇ-ಆಡಳಿತ ವೇದಿಕೆವರೆಗೆ ಭಾರತವು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಂಡಿದ್ದು, ಪಾರದರ್ಶಕತೆ ಮತ್ತು ದಕ್ಷತೆಯಲ್ಲಿ ಜಾಗತಿಕ ಮಾನದಂಡವನ್ನು ಕಾಯ್ದುಕೊಳ್ಳುವ ಮೂಲಕ ಸೌಲಭ್ಯಗಳು ಹೆಚ್ಚು ಅಗತ್ಯವಿರುವವರಿಗೆ ತಲುಪುವಂತೆ ಖಚಿತಪಡಿಸಿಕೊಳ್ಳುತ್ತಿದೆ. 2021ರಲ್ಲಿ ಪ್ರಾರಂಭಿಸಲಾದ ಇ-ಶ್ರಮ್ ಪೋರ್ಟಲ್ ಅನ್ನು ಅವರು ಮಹತ್ವದ ಹೆಜ್ಜೆ ಎಂದು ಶ್ಲಾಘಿಸಿದರು. ಇದು ಸಾಮಾಜಿಕ ಭದ್ರತಾ ಸಂಹಿತೆ 2020ರ ಮೂಲಕ ಸಾಮಾಜಿಕ ಭದ್ರತಾ ವ್ಯಾಪ್ತಿಯ ಪ್ರಗತಿಪರ ಸಾರ್ವತ್ರೀಕರಣಕ್ಕೆ ಭಾರತದ ಬದ್ಧತೆಯನ್ನು ಎತ್ತಿ ತೋರಿಸುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮುಂದುವರಿದ ಭಾಗವಾಗಿ, ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣವನ್ನು ಉತ್ತೇಜಿಸಲು ಸಾಮಾಜಿಕ ಭದ್ರತಾ ವ್ಯಾಪ್ತಿಯನ್ನು ವಿಸ್ತರಿಸುವುದರ ಜೊತೆಗೆ ಆರೋಗ್ಯ ಮತ್ತು ವೈದ್ಯಕೀಯ ಆರೈಕೆ ವಿಮಾ ರಕ್ಷಣೆಯ ಅಂಶಗಳ ಕುರಿತು ಹಲವು ಮಹತ್ವದ ಚರ್ಚೆಗಳು ನಡೆದವು. "ಔಪಚಾರಿಕೀಕರಣ ಮತ್ತು ಸಾಮಾಜಿಕ ಭದ್ರತಾ ವ್ಯಾಪ್ತಿ: ಅವಕಾಶಗಳು, ಸವಾಲುಗಳು ಮತ್ತು ಕಾರ್ಯತಂತ್ರಗಳು" ವಿಷಯ ಕುರಿತಂತೆ ಮೊದಲ ವಿಚಾರಗೋಷ್ಠಿ ನಡೆಯಿತು. ಈ ಪ್ರದೇಶದಲ್ಲಿನ ಕಾರ್ಮಿಕ ಮಾರುಕಟ್ಟೆ ಬೆಳವಣಿಗೆಗಳ ಅನ್ವೇಷಣೆ ಮತ್ತು ಅನೌಪಚಾರಿಕ ವಲಯದ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ವ್ಯಾಪ್ತಿಯನ್ನು ಸವಾಲಿನಂತೆ ಮಾಡುವ ಅಂಶಗಳನ್ನು ಗುರುತಿಸಲಾಯಿತು. ಇದು ಸಾಂಸ್ಥಿಕ ನಾವೀನ್ಯತೆಗಳಿಗೆ ಚೌಕಟ್ಟನ್ನು ಒದಗಿಸುವ ಅಂತರರಾಷ್ಟ್ರೀಯ ಕಾರ್ಯತಂತ್ರಗಳು ಮತ್ತು ಸಮಗ್ರ ರಾಷ್ಟ್ರೀಯ ನೀತಿಯ ವಿಧಾನಗಳ ಬಗ್ಗೆಯೂ ಪ್ರಸ್ತುತಪಡಿಸಿತು.
ಎರಡನೇ ವಿಚಾರಗೋಷ್ಠಿಯಲ್ಲಿ ದುರ್ಬಲ ಕಾರ್ಮಿಕರು ಮತ್ತು ಅನೌಪಚಾರಿಕ ವಲಯದಲ್ಲಿರುವವರು ಸಾಮಾಜಿಕ ಭದ್ರತೆಯ ವ್ಯಾಪ್ತಿಯನ್ನು ಪ್ರವೇಶಿಸುವಂತೆ ಮಾಡುವ ಗುರಿಯನ್ನು ಹೊಂದಿರುವ ಉತ್ತಮ ಅಭ್ಯಾಸಗಳು ಮತ್ತು ನವೀನ ಉದಾಹರಣೆಗಳ ಬಗ್ಗೆ ಬೆಳಕು ಚೆಲ್ಲಿತು. ಪ್ರಯೋಜನಗಳನ್ನು ಪಡೆಯುವ ವಿಧಾನ, ಹಣಕಾಸು, ಸರಳೀಕೃತ ದಸ್ತಾವೇಜು, ನೋಂದಣಿ, ಪಾಲು ಸಂಗ್ರಹ ಪ್ರಕ್ರಿಯೆಗಳು ಮತ್ತು ಸರಳತೆಯನ್ನು ಹೆಚ್ಚಿಸುವ ಇತರ ಕ್ರಮಗಳನ್ನು ಒಳಗೊಂಡಿದ್ದು, ಈ ಕಷ್ಟಕರವಾದ ಗುಂಪುಗಳಿಗೆ ಸಾಮಾಜಿಕ ಭದ್ರತೆಯನ್ನು ಹೆಚ್ಚು ಪ್ರವೇಶಿಸುವಂತೆ ಮಾಡುತ್ತದೆ ಎಂಬುದರ ಕುರಿತೂ ಚರ್ಚೆಯಾಯಿತು.
ದಿನದ ಮೂರನೇ ಮತ್ತು ಕೊನೆಯ ವಿಚಾರಗೋಷ್ಠಿಯಲ್ಲಿ ಸಾಮಾಜಿಕ ಭದ್ರತಾ ವ್ಯಾಪ್ತಿಯನ್ನು ವಿಸ್ತರಿಸುವ ಬಗ್ಗೆ ಚರ್ಚೆ ಆರಂಭವಾಗಿ ಇದನ್ನು ಹೆಚ್ಚು ಪ್ರಸ್ತುತ ಮತ್ತು ಸುಲಭಗೊಳಿಸುವ ಪ್ರಕ್ರಿಯೆಗಳು ನಿರೀಕ್ಷಿತ ಮಟ್ಟದಲ್ಲಿಲ್ಲ ಎಂದು ಒತ್ತಿಹೇಳಿತು. ಕೊಡುಗೆ ಸಬ್ಸಿಡಿಗಳು, ಕುಟುಂಬ ಸದಸ್ಯರ ವ್ಯಾಪ್ತಿ ಮತ್ತು ಸಣ್ಣ ಉದ್ಯಮಗಳು ಉದ್ಯೋಗಿಗಳನ್ನು ನೋಂದಾಯಿಸಲು ಸಹಾಯ ಮಾಡುವ ಕ್ರಮಗಳಂತಹ ಉತ್ತೇಜಕಗಳು ಕಷ್ಟಕರವಾದ ಗುಂಪುಗಳನ್ನು ತಲುಪಲು ನಿರ್ಣಾಯಕವಾಗಿವೆ ಎಂಬುದರ ಕುರಿತೂ ಚರ್ಚೆ ಹೊರಳಿತು.
ಭಾರತದ ಶ್ರೀಮಂತ ವೈವಿಧ್ಯತೆ ಮತ್ತು ಪರಂಪರೆಯನ್ನು ಸಾರುವಂತಹ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಮೊದಲ ದಿನದ ಕಾರ್ಯಕ್ರಮಕ್ಕೆ ತೆರೆ ಬಿತ್ತು.
ಹಿನ್ನೆಲೆ:
ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಕಾರ್ಮಿಕರ ರಾಜ್ಯ ವಿಮಾ ನಿಗಮ (ಇಎಸ್‌ಐಸಿ) ಮತ್ತು ಅಂತಾರಾಷ್ಟ್ರೀಯ ಸಾಮಾಜಿಕ ಭದ್ರತಾ ಸಂಸ್ಥೆ (ಐಎಸ್‌ಎಸ್‌ಎ) ಸಹಯೋಗದೊಂದಿಗೆ ಯಶೋಭೂಮಿ - ಭಾರತ ಅಂತಾರಾಷ್ಟ್ರೀಯ ಸಮಾವೇಶ ಮತ್ತು ಎಕ್ಸ್‌ಪೋ ಕೇಂದ್ರದಲ್ಲಿ ಈ ಅಂತಾರಾಷ್ಟ್ರೀಯ ಸಂವಾದವನ್ನು ಆಯೋಜಿಸಿದೆ.
ತಾಂತ್ರಿಕ ವಿಚಾರ ಸಂಕಿರಣದಲ್ಲಿ ಏಷ್ಯಾ-ಪೆಸಿಫಿಕ್ ದೇಶಗಳ ನೀತಿ ನಿರೂಪಕರು, ಸಾಮಾಜಿಕ ಭದ್ರತಾ ನಿರ್ವಾಹಕರು ಮತ್ತು ತಜ್ಞರು ಒಳಗೊಂಡಂತೆ 150ಕ್ಕೂ ಹೆಚ್ಚು ಪಾಲುದಾರರನ್ನು ಒಟ್ಟುಗೂಡಿಸಿ ಅನೌಪಚಾರಿಕ ವಲಯದ ಕಾರ್ಮಿಕರನ್ನು ಔಪಚಾರಿಕಗೊಳಿಸುವ ಮತ್ತು ಸಾಮಾಜಿಕ ಭದ್ರತಾ ವ್ಯಾಪ್ತಿಯನ್ನು ವಿಸ್ತರಿಸುವ ಕಾರ್ಯತಂತ್ರಗಳ ಕುರಿತು ಚರ್ಚಿಸುವ ಗುರಿ ಹೊಂದಿದೆ. ವಿಶ್ವ ಬ್ಯಾಂಕ್, ವಿಶ್ವಸಂಸ್ಥೆ ಮತ್ತು ಐಎಲ್‌ಒ ನಂತಹ ಪ್ರತಿಷ್ಠಿತ ಅಂತರರಾಷ್ಟ್ರೀಯ ಸಂಸ್ಥೆಗಳ ಹಿರಿಯ ತಜ್ಞರು ವಿಚಾರಗೋಷ್ಠಿಯ ಸಮಯದಲ್ಲಿ ತಮ್ಮ ಒಳನೋಟಗಳನ್ನು ಪ್ರಸ್ತುತಪಡಿಸಲಿದ್ದಾರೆ. ಔಪಚಾರಿಕೀಕರಣ, ಉತ್ತೇಜಕಗಳು, ಡಿಜಿಟಲ್ ಪರಿಹಾರಗಳು ಮತ್ತು ವಿಸ್ತರಣಾ ಕಾರ್ಯತಂತ್ರಗಳ ಕೇಂದ್ರಿತ ಚರ್ಚೆಗಳೊಂದಿಗೆ ಅನೌಪಚಾರಿಕ ವಲಯದ ಕಾರ್ಮಿಕರಿಗೆ ಸಾಮಾಜಿಕ ರಕ್ಷಣೆಯನ್ನು ವಿಸ್ತರಿಸಲು ಪಾಲುದಾರರ ಸಾಮರ್ಥ್ಯವನ್ನು ಬಲಪಡಿಸುವುದು ಕಾರ್ಯಕ್ರಮದ ಪ್ರಾಥಮಿಕ ಗುರಿಯಾಗಿದೆ. ಇ-ಶ್ರಮ್ ಪೋರ್ಟಲ್, ರಾಷ್ಟ್ರೀಯ ವೃತ್ತಿಪರ ಸೇವಾ ಪೋರ್ಟಲ್ ಮತ್ತು ಕಾರ್ಮಿಕ ಸುಧಾರಣೆಗಳಂತಹ ಭಾರತದ ಹೆಗ್ಗುರುತು ಎನಿಸಿರುವ ಉಪಕ್ರಮಗಳತ್ತ ವಿಶೇಷ ಗಮನ ಸೆಳೆಯಲಾಗುತ್ತಿದೆ. ಜೊತೆಗೆ ಔಪಚಾರಿಕ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯನ್ನು ಮುನ್ನಡೆಸುವಲ್ಲಿ ಇಎಸ್‌ಐಸಿ ಮತ್ತು ಇಪಿಎಫ್‌ಒನ ಪ್ರಗತಿಯನ್ನು ಎತ್ತಿ ತೋರಿಸಲಾಗುತ್ತಿದೆ.
*****
(Release ID: 2094667)
Visitor Counter : 7