ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
azadi ka amrit mahotsav

ಭಾರತದ ನವೀಕರಿಸಬಹುದಾದ ಇಂಧನ ಸಾಮರ್ಥ್ಯವು ವರ್ಷದಿಂದ ವರ್ಷಕ್ಕೆ 15.84% ಬೆಳವಣಿಗೆಯನ್ನು ದಾಖಲಿಸಿದೆ


ಸೌರ ಮತ್ತು ಪವನ ವಿದ್ಯುತ್ ಕ್ಷೇತ್ರದಲ್ಲಿ ದಾಖಲೆಯ ಸಾಮರ್ಥ್ಯ ಹೆಚ್ಚಳ; ಸೌರಶಕ್ತಿ ವಿದ್ಯುತ್ 97.86 ಗಿಗಾವಾಟ್, ಪವನ ಸೌರಶಕ್ತಿ ವಿದ್ಯುತ್ 48.16 ಗಿಗಾವಾಟ್

ಒಟ್ಟು ಮರು ಸ್ಥಾಪಿಸಲಾದ ಇಂಧನ ಸಾಮರ್ಥ್ಯ 209.44 ಗಿಗಾವಾಟ್ ತಲುಪಿದೆ

Posted On: 13 JAN 2025 1:09PM by PIB Bengaluru

ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯವು (ಎಂ.ಎನ್.ಆರ್.ಇ.) ಭಾರತದ ನವೀಕರಿಸಬಹುದಾದ ಇಂಧನ ವಲಯದಲ್ಲಿ ಗಮನಾರ್ಹ ಪ್ರಗತಿಯನ್ನು ವರದಿ ಮಾಡಿದೆ. ಇದು ಡಿಸೆಂಬರ್ 2023 ಮತ್ತು ಡಿಸೆಂಬರ್ 2024ರ ನಡುವಿನ ಗಮನಾರ್ಹ ಸಾಧನೆಗಳನ್ನು ಎತ್ತಿ ತೋರಿಸುತ್ತದೆ. ಈ ಬೆಳವಣಿಗೆಯು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಘೋಷಿಸಿದ 'ಪಂಚಾಮೃತ' ಯೋಜನೆಯ ಗುರಿಗಳ ದೃಷ್ಟಿಕೋನದ ಅಡಿಯಲ್ಲಿ ತನ್ನ ಶುದ್ಧ ಇಂಧನ ಗುರಿಗಳನ್ನು ಸಾಧಿಸುವ ಭಾರತದ ದೃಢ ಬದ್ಧತೆ ಮತ್ತು ಅದರ ವಿಶಾಲ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ.

ಇಂಧನ ಸಾಮರ್ಥ್ಯ ಸೇರ್ಪಡೆಯಲ್ಲಿ ದಾಖಲೆ

ಡಿಸೆಂಬರ್ 2024ರ ಹೊತ್ತಿಗೆ, ಭಾರತದ ಒಟ್ಟು ನವೀಕರಿಸಬಹುದಾದ ಇಂಧನ ಸ್ಥಾಪಿತ ಸಾಮರ್ಥ್ಯವು 209.44 ಗಿಗಾವಾಟ್ ರಷ್ಟು ತಲುಪಿದೆ. ಇದು ಡಿಸೆಂಬರ್ 2023ರಲ್ಲಿ ಹೊಂದಿದ್ದ 180.80 ಗಿಗಾವಾಟ್ ಗೆ ಹೋಲಿಸಿದರೆ 15.84% ರಷ್ಟು ಹೆಚ್ಚಳವಾಗಿದೆ. 2024 ರಲ್ಲಿ ಹೆಚ್ಚುವರಿಯಾಗಿ ಸೇರಿಸಲಾದ ಒಟ್ಟು ಇಂಧನ ಸಾಮರ್ಥ್ಯವು 28.64 ಗಿಗಾವಾಟ್ ಆಗಿದ್ದು, 2023ರಲ್ಲಿ ಸೇರಿಸಲಾದ ಹೆಚ್ಚುವರಿ 13.05 ಗಿಗಾವಾಟ್ ಗೆ ಹೋಲಿಸಿದರೆ ವರ್ಷದಿಂದ ವರ್ಷಕ್ಕೆ 119.46% ರಷ್ಟು ಗಮನಾರ್ಹ ಇಂಧನ ಹೆಚ್ಚಳವಾಗಿರುತ್ತದೆ.

ಸೌರ ಮತ್ತು ಪವನ ಕ್ಷೇತ್ರದ ಇಂಧನ ಉತ್ಪಾದನೆಯಲ್ಲಿ ವೃದ್ಧಿ

2024ರಲ್ಲಿ, ಸೌರಶಕ್ತಿಯು 24.54 ಗಿಗಾವಾಟ್ ಸೇರ್ಪಡೆಯೊಂದಿಗೆ ಈ ಬೆಳವಣಿಗೆಗೆ ಮುಂಚೂಣಿಯಲ್ಲಿತ್ತು, ಇದು 2023ರಲ್ಲಿ 73.32 ಗಿಗಾವಾಟ್ ನಿಂದ 2024ರಲ್ಲಿ 97.86 ಗಿಗಾವಾಟ್ ಗೆ ಅದರ ಸಂಚಿತ ಸ್ಥಾಪಿತ ಸಾಮರ್ಥ್ಯದಲ್ಲಿ 33.47% ಏರಿಕೆಯನ್ನು ಪ್ರತಿಬಿಂಬಿಸುತ್ತದೆ. ಪವನ ಶಕ್ತಿಯು ಈ ವಿಸ್ತರಣೆಗೆ ಕೊಡುಗೆ ನೀಡಿದೆ, 2024ರಲ್ಲಿ ಹೆಚ್ಚುವರಿಯಾಗಿ 3.42 ಗಿಗಾವಾಟ್ ಸ್ಥಾಪಿಸಲಾಗಿದೆ, ಇದು ಒಟ್ಟು ಪವನ ಸಾಮರ್ಥ್ಯವನ್ನು ಹೆಚ್ಚಿಸಿದೆ 2023 ರಿಂದ 48.16 ಗಿಗಾವಾಟ್, 7.64% ಬೆಳವಣಿಗೆ ಕಂಡಿದೆ.

ಜೈವಿಕ ಇಂಧನ ಮತ್ತು ಸಣ್ಣ ಜಲ ವಿದ್ಯುತ್ ಉತ್ಪಾದನೆಯಲ್ಲಿ ಉತ್ತಮ ಬೆಳವಣಿಗೆ

ಜೈವಿಕ ಇಂಧನವು ಗಮನಾರ್ಹ ಬೆಳವಣಿಗೆಯನ್ನು ತೋರಿಸಿದೆ. ಅದರ ಸ್ಥಾಪಿತ ಸಾಮರ್ಥ್ಯವು ಡಿಸೆಂಬರ್ 2023ರಲ್ಲಿ 10.84 ಗಿಗಾವಾಟ್ ನಿಂದ ಡಿಸೆಂಬರ್ 2024ರಲ್ಲಿ 11.35 ಗಿಗಾವಾಟ್ ಗೆ ಏರಿದೆ. ಇದು 4.70% ಹೆಚ್ಚಳವನ್ನು ಪ್ರತಿಬಿಂಬಿಸುತ್ತದೆ. ಸಣ್ಣ ಜಲ ವಿದ್ಯುತ್ ಯೋಜನೆಗಳು ಹೆಚ್ಚುತ್ತಿರುವ ಬೆಳವಣಿಗೆಯನ್ನು ಕಂಡವು. ಸ್ಥಾಪಿತ ಸಾಮರ್ಥ್ಯವು 2023 ರಲ್ಲಿ 4.99 ಗಿಗಾವಾಟ್ ನಿಂದ 2024 ರಲ್ಲಿ 5.10 ಗಿಗಾವಾಟ್ ಗೆ ಏರಿದೆ, ಇದು 2.20% ಉತ್ಪಾದನೆಯಲ್ಲಿ ಏರಿಕೆಯನ್ನು ಸ್ಪಷ್ಟಪಡಿಸುತ್ತದೆ.

ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರ ನೇತೃತ್ವದಲ್ಲಿ ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯವು (ಎಂ.ಎನ್.ಆರ್.ಇ.), 2030ರ ವೇಳೆಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ 500 ಗಿಗಾವಾಟ್ ನವೀಕರಿಸಬಹುದಾದ ಇಂಧನದ ದೃಷ್ಟಿಕೋನವನ್ನು ಸಾಧಿಸಲು ವಿವಿಧ ಪ್ರಮುಖ ನೂತನ ಉಪಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇದು ಇಂಧನ ಸುರಕ್ಷತೆಯನ್ನು ಬಲಪಡಿಸುವುದರ ಜೊತೆಗೆ ತನ್ನ ಹವಾಮಾನ ಬದ್ಧತೆಗಳನ್ನು ಪೂರೈಸುವ ಭಾರತದ ಜಾಗತಿಕ ಸಮರ್ಪಣೆಯನ್ನು ಪ್ರತಿಬಿಂಬಿಸುತ್ತದೆ. ಈ ಪ್ರಭಾವಶಾಲಿ ಅಂಕಿಅಂಶಗಳು ಭಾರತದಲ್ಲಿ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಹೆಚ್ಚಿಸಲು ಭಾರತ ಸರ್ಕಾರದ ನಿರಂತರ ಪ್ರಯತ್ನಗಳನ್ನು ಸಾರಿ ಹೇಳುತ್ತವೆ.

 

*****
 


(Release ID: 2092606) Visitor Counter : 18