ಉಪರಾಷ್ಟ್ರಪತಿಗಳ ಕಾರ್ಯಾಲಯ
ವಿಐಪಿ ಸಂಸ್ಕೃತಿ ಒಂದು ಅಸಹಜ ವಿಪರ್ಯಾಸ ಮತ್ತು ಸಮಾಜದಲ್ಲಿ ಅದಕ್ಕೆ ಯಾವುದೇ ಸ್ಥಾನವಿಲ್ಲ, ಧಾರ್ಮಿಕ ಸಂಸ್ಥೆಗಳಲ್ಲಿ ಇದಕ್ಕೆ ಪ್ರಾಧಾನ್ಯ ಬಹಳ ಕಡಿಮೆ: ಉಪರಾಷ್ಟ್ರಪತಿ
ರಾಜಕೀಯ ಎಂದರೆ ಕಟುತ್ವ ಅಲ್ಲ; ಅದು ಸಮಾಜಕ್ಕೆ ಸೇವೆ ಸಲ್ಲಿಸುವ ಬಗ್ಗೆ ಇರಬೇಕು: ಉಪರಾಷ್ಟ್ರಪತಿ
ರಾಜಕೀಯ ತಾಪಮಾನವನ್ನು ತರ್ಕಬದ್ಧ ಮನಸ್ಸುಗಳಿಂದ ನಿಯಂತ್ರಿಸಬೇಕಾಗಿದೆ: ಉಪರಾಷ್ಟ್ರಪತಿ
ಸಾರ್ವಜನಿಕ ಆಸ್ತಿ ನಾಶವು ಸಾರ್ವಜನಿಕ ಅನಿಷ್ಟ; ಅಂತಹ ಅಂಶಗಳನ್ನು ನಿರ್ದಯವಾಗಿ, ಬಲವಾಗಿ ಎದುರಿಸಬೇಕು: ಉಪರಾಷ್ಟ್ರಪತಿ
ಪಂಚ ಪ್ರಾಣವು ಭಾರತದ ರಾಷ್ಟ್ರೀಯ ಪರಿವರ್ತನೆಗೆ ಮಾರ್ಗದರ್ಶನ ನೀಡಬೇಕು: ಉಪರಾಷ್ಟ್ರಪತಿ
ಸಂವಾದ ಮತ್ತು ಅಭಿವ್ಯಕ್ತಿಗಳು ಪ್ರಜಾಪ್ರಭುತ್ವವನ್ನು ವ್ಯಾಖ್ಯಾನಿಸುತ್ತವೆ; ಇವೆರಡೂ ಜೊತೆಜೊತೆಯಾಗಿ ಸಾಗಬೇಕು: ಉಪರಾಷ್ಟ್ರಪತಿ
ಧಾರ್ಮಿಕ ಸಂಸ್ಥೆಗಳ ಸುತ್ತಮುತ್ತ ಆರೋಗ್ಯ ಮತ್ತು ಶೈಕ್ಷಣಿಕ ಮೂಲಸೌಕರ್ಯಕ್ಕೆ ಕಾರ್ಪೊರೇಟ್ ಸಂಸ್ಥೆಗಳು ಉದಾರವಾಗಿ ಕೊಡುಗೆ ನೀಡಬೇಕು: ಉಪರಾಷ್ಟ್ರಪತಿ
ಕರ್ನಾಟಕದ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ 2024-25ನೇ ಸಾಲಿನ ಜ್ಞಾನದೀಪ ಕಾರ್ಯಕ್ರಮ ಮತ್ತು ಕ್ಯೂ ಕಾಂಪ್ಲೆಕ್ಸ್ ಉದ್ಘಾಟಿಸಿದ ಉಪರಾಷ್ಟ್ರಪತಿ
Posted On:
07 JAN 2025 5:38PM by PIB Bengaluru
ಭಾರತದ ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್ ಅವರು, "ವಿಐಪಿ ಸಂಸ್ಕೃತಿ ಒಂದು ಅಪದ್ಧ, ಅಸಹಜ ವಿಪರ್ಯಾಸ, ಸಮಾನತೆಯ ದೃಷ್ಟಿಕೋನದಿಂದ ನೋಡಿದಾಗ ಅದು ಅತಿಕ್ರಮಣವಾಗಿದೆ. ಅದಕ್ಕೆ ಸಮಾಜದಲ್ಲಿ ಯಾವುದೇ ಸ್ಥಾನ ಇರಬಾರದು, ಧಾರ್ಮಿಕ ಸ್ಥಳಗಳಲ್ಲಂತೂ ಅದು ಇನ್ನೂ ಕಡಿಮೆ ಆಗಬೇಕು. ವಿಐಪಿ ದರ್ಶನದ ಕಲ್ಪನೆಯೇ ದೈವತ್ವಕ್ಕೆ ವಿರುದ್ಧವಾಗಿದೆ. ಅದನ್ನು ಕೈಬಿಡಬೇಕು" ಎಂದು ಹೇಳಿದ್ದಾರೆ. ಧಾರ್ಮಿಕ ಸಂಸ್ಥೆಗಳಲ್ಲಿ ಸಮಾನತೆಗೆ ಕರೆ ನೀಡಿದ ಅವರು, "ಧಾರ್ಮಿಕ ಸಂಸ್ಥೆಗಳು ಸಮಾನತೆಯ ಸಂಕೇತವಾಗಿವೆ. ಏಕೆಂದರೆ ಸರ್ವಶಕ್ತನಾದ ದೇವರ ಮುಂದೆ ದೇವರಿಗಿಂತ ಉನ್ನತ ವ್ಯಕ್ತಿ ಯಾರೂ ಇಲ್ಲ. ನಾವು ಧಾರ್ಮಿಕ ಸಂಸ್ಥೆಗಳಲ್ಲಿ ಸಮಾನತೆಯ ಕಲ್ಪನೆಯನ್ನು ಮತ್ತೆ ಹುಟ್ಟುಹಾಕಬೇಕು. ಸಾರ್ವಕಾಲಿಕ ಶ್ರೇಷ್ಠರಿಂದ ಮುನ್ನಡೆಸಲ್ಪಡುವ ಈ ಧರ್ಮಸ್ಥಳವು ಸಮಾನತೆಗೆ ಉದಾಹರಣೆಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಸಮತಾವಾದದ ಉದಾಹರಣೆಯಾಗಿ ನಿಲ್ಲುತ್ತದೆ ಎಂದು ನಾನು ಭಾವಿಸುತ್ತೇನೆ ಮತ್ತು ನಾವು ಎಲ್ಲಾ ಹೊತ್ತಿನಲ್ಲೂ ವಿಐಪಿ ಸಂಸ್ಕೃತಿಯನ್ನು ತ್ಯಜಿಸೋಣ” ಎಂದು ಹೇಳಿದರು.
ಇಂದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಕ್ಯೂ ಕಾಂಪ್ಲೆಕ್ಸ್ ಮತ್ತು ಜ್ಞಾನದೀಪವನ್ನು ಉದ್ಘಾಟಿಸಿದ ನಂತರ ಸಭಿಕರನ್ನುದ್ದೇಶಿಸಿ ಮಾತನಾಡಿದ ಉಪರಾಷ್ಟ್ರಪತಿಗಳು, ನಾಯಕರು ಕಹಿಭಾವನೆಯಿಂದ ಹೊರಬರಬೇಕು ಎಂದು ಆಗ್ರಹಿಸಿದರು. "ರಾಜಕೀಯವು ಕಹಿಗಾಗಿ ಅಲ್ಲ. ರಾಜಕಾರಣಿಗಳು ವಿಭಿನ್ನ ಸಿದ್ಧಾಂತಗಳನ್ನು ಹೊಂದಿರುತ್ತಾರೆ. ಮತ್ತು ಅವರು ಹೊಂದಿರಬೇಕು. ಭಾರತವನ್ನು ಅದರ ವೈವಿಧ್ಯತೆಗಾಗಿ ವ್ಯಾಖ್ಯಾನಿಸಲಾಗಿದೆ ಏಕೆಂದರೆ ವೈವಿಧ್ಯತೆಯು ಏಕತೆಯಲ್ಲಿ ಒಟ್ಟುಗೂಡುತ್ತದೆ. ಹಾಗಿರುವಾಗ ರಾಜಕೀಯ ಕಹಿ ಏಕೆ ಇರಬೇಕು? ರಾಜಕೀಯದ ಉದ್ದೇಶ ಕೇವಲ ಅಧಿಕಾರವಾಗಬಾರದು. ಅಧಿಕಾರ ಮುಖ್ಯ. ಆದರೆ ಅದು ಸಮಾಜಕ್ಕೆ ಸೇವೆ ಸಲ್ಲಿಸುವುದಕ್ಕಾಗಿರಬೇಕು, ರಾಷ್ಟ್ರದ ಸೇವೆ ಮಾಡುವಂತಿರಬೇಕು" ಎಂದು ಪ್ರತಿಪಾದಿಸಿದರು.
ಈ ಬಗ್ಗೆ ತಮ್ಮ ಚಿಂತನೆಯನ್ನು ವಿಸ್ತರಿಸಿ ಮಾತನಾಡಿದ ಶ್ರೀ ಧನಕರ್, "ಆಳವಾದ ರಾಜಕೀಯ ವಿಭಜನೆಯ ಬಗ್ಗೆ ಖಚಿತಪಡಿಸಿಕೊಳ್ಳಲು, ಯೋಚಿಸಲು, ಮತ್ತು ಅದನ್ನು ಪ್ರತಿಬಿಂಬಿಸುವ ತುರ್ತು ಅವಶ್ಯಕತೆ ದೇಶದಲ್ಲೀಗ ಉಂಟಾಗಿದೆ. ದೇಶದಲ್ಲಿ ರಾಜಕೀಯ ವಾತಾವರಣವು ಹವಾಮಾನ ಬದಲಾವಣೆಯಷ್ಟೇ ದೊಡ್ಡ ಸವಾಲಾಗಿದೆ. ಅದನ್ನು ಸಮನ್ವಯಗೊಳಿಸಲು ನಾವು ಕೆಲಸ ಮಾಡಬೇಕು. ನಮ್ಮ ದೀರ್ಘಕಾಲೀನ ಲಾಭಗಳನ್ನು ನಾವು ನಿರ್ಲಕ್ಷಿಸಲು ಸಾಧ್ಯವಿಲ್ಲ. ದೇಶದ ರಾಜಕೀಯ ತಾಪಮಾನವನ್ನು ವೈಚಾರಿಕ ಮನಸ್ಸುಗಳು ನಿಯಂತ್ರಿಸಬೇಕಾಗಿದೆ. ನಮ್ಮ ಎಲ್ಲಾ ನಿಲುವುಗಳನ್ನು ಒಂದು ಪರಿಗಣನೆಯಿಂದ ನಿರ್ದೇಶಿಸಬೇಕು ಮತ್ತು ದೃಢವಾಗಿ ಶುದ್ಧೀಕರಿಸಬೇಕು- ಮತ್ತು ಅದೆಂದರೆ ರಾಷ್ಟ್ರಕ್ಕೆ ಒಳಿತನ್ನು ಉಂಟು ಮಾಡುವುದು. ನಾವು ಎಲ್ಲಾ ಸಂದರ್ಭಗಳಲ್ಲಿ ರಾಷ್ಟ್ರವನ್ನು ಮೊದಲ ಸ್ಥಾನದಲ್ಲಿಡಲು ಪ್ರಯತ್ನಿಸಬೇಕು. ಏಕೆಂದರೆ ಮಾನವಕುಲದ ಆರನೇ ಒಂದು ಭಾಗಕ್ಕೆ ನೆಲೆಯಾಗಿರುವ ಈ ದೇಶವು ಭೂಗ್ರಹದ ನರ ಕೇಂದ್ರ, ಸಾಂಸ್ಕೃತಿಕ ಕೇಂದ್ರ ಮತ್ತು ಆಧ್ಯಾತ್ಮಿಕ ಕೇಂದ್ರವಾಗಿದೆ” ಎಂದೂ ವಿವರಿಸಿದರು.
ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಸಾರ್ವಜನಿಕ ಆಸ್ತಿಪಾಸ್ತಿ ನಾಶ ಮತ್ತು ದುಷ್ಟ ಶಕ್ತಿಗಳ ದುಷ್ಕೃತ್ಯಗಳನ್ನು ಖಂಡಿಸಿದರು. "ನಮ್ಮಂತಹ ದೇಶದಲ್ಲಿ, ಜನರು ಕಾನೂನು ಜಾರಿಗೊಳಿಸುವ ಅಧಿಕಾರಿಗಳಿಗೆ ಸವಾಲು ಹಾಕುತ್ತಾರೆ ಎಂದು ಊಹಿಸಿಕೊಳ್ಳಿ. ಅವರು ಸಾರ್ವಜನಿಕ ಸುವ್ಯವಸ್ಥೆಯನ್ನು ಪ್ರಶ್ನಿಸುತ್ತಾರೆ. ನ್ಯಾಯಾಲಯದ ಸಮನ್ಸ್ ಬಂದರೆ ಅವರು ಬೀದಿಗೆ ಬರುತ್ತಾರೆ. ಭಾರತದಂತಹ ದೇಶದಲ್ಲಿ ಕಾರ್ಯನಿರ್ವಹಿಸುವ ವಿಧಾನ ಇದೇನಾ? ಕಾನೂನು ಮತ್ತು ಸಾರ್ವಜನಿಕ ಸುವ್ಯವಸ್ಥೆಯನ್ನು ಪ್ರಶ್ನಿಸುವ ಯಾರನ್ನೇ ಆದರೂ ಹೊಣೆಗಾರರನ್ನಾಗಿ ಮಾಡಬೇಕು. ಇದು ನಮಗೆ ಎಷ್ಟು ನಾಚಿಕೆಗೇಡಿನ ಸಂಗತಿ. ಸಾರ್ವಜನಿಕ ಆಸ್ತಿಪಾಸ್ತಿ ನಾಶವಾಗುವುದನ್ನು, ಸಾರ್ವಜನಿಕ ಆಸ್ತಿಪಾಸ್ತಿಗೆ ಬೆಂಕಿ ಹಚ್ಚುವುದನ್ನು ನೋಡಿದಾಗ ನಮಗೆ ಎಷ್ಟು ನೋವಾಗುತ್ತದೆ. ಅವರು ರಾಷ್ಟ್ರದ ಶತ್ರುಗಳು. ಈ ಜನರನ್ನು, ಈ ದುಷ್ಟ ಶಕ್ತಿಗಳನ್ನು ಕಠಿಣವಾದ ಅನುಕರಣೀಯ ರೀತಿಯಲ್ಲಿ ಎದುರಿಸಬೇಕು. ಅವರನ್ನು ಕಾನೂನಿನ ಮುಂದೆ ತರಬೇಕು. ಅವರ ಪ್ರಕರಣಗಳನ್ನು ತ್ವರಿತವಾಗಿ ವಿಚಾರಣೆ ಮಾಡಬೇಕು. 1.4 ಬಿಲಿಯನ್ ಜನಸಂಖ್ಯೆಯ ಈ ದೇಶವು ಈ ರೀತಿಯ ಸಾರ್ವಜನಿಕ ಉಪದ್ರವ, ಸಾರ್ವಜನಿಕ ಆಸ್ತಿಯ ನಾಶವನ್ನು ಅನುಭವಿಸಲು ಸಾಧ್ಯವಿಲ್ಲ" ಎಂದು ಎಚ್ಚರಿಸಿದರು, "ಜಗತ್ತು ನಮ್ಮ ರೈಲುಗಳನ್ನು ಪ್ರಶಂಸಿಸುತ್ತಿದೆ. ಒಂದರ ನಂತರ ಒಂದರಂತೆ ನಾವು ಉತ್ತಮ ರೈಲುಗಳನ್ನು ಹೊಂದಿದ್ದೇವೆ ಮತ್ತು ಅದಕ್ಕೆ ಕಲ್ಲು ಹೊಡೆಯುವ ಕೆಲವು ಜನರಿದ್ದಾರೆ. ಅವರು ಸಮಾಜದ ರಾಕ್ಷಸ ಅಂಶಗಳು. ಅವರಿಗೆ ನಮ್ಮ ಗೌರವ ಇರಬಾರದು. ಅವರನ್ನು ಪ್ರತ್ಯೇಕಿಸಬೇಕು, ಗುರುತಿಸಬೇಕು ಮತ್ತು ಬಲವಾಗಿ ಎದುರಿಸಬೇಕು." ಎಂದೂ ಉಪರಾಷ್ಟ್ರಪತಿ ಹೇಳಿದರು.
ಪ್ರಜಾಪ್ರಭುತ್ವದಲ್ಲಿ ಸಂವಾದದ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿದ ಉಪರಾಷ್ಟ್ರಪತಿಗಳು, "ಸಂವಾದ ಮತ್ತು ಅಭಿವ್ಯಕ್ತಿ - ಇವು ಪ್ರಜಾಪ್ರಭುತ್ವವನ್ನು ವ್ಯಾಖ್ಯಾನಿಸುತ್ತವೆ. ನಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮೊಟಕುಗೊಳಿಸಿದರೆ, ಕಡಿಮೆ ಮಾಡಿದರೆ, ಅತ್ಯುತ್ತಮ ವ್ಯಕ್ತಿಯು ಮುಂದೆ ಬರಲು ಸಾಧ್ಯವಿಲ್ಲ. ಆದರೆ ನಾವು ಅಭಿವ್ಯಕ್ತಿಗೆ ಮಾತ್ರ ಒತ್ತು ನೀಡಿದರೆ ಮತ್ತು ಸಂವಾದದಲ್ಲಿ ನಂಬಿಕೆ ಇಡದಿದ್ದರೆ, ನಾವು ಅಭಿವ್ಯಕ್ತಿಯನ್ನು ಮಾತ್ರ ನಂಬಿದರೆ ಮತ್ತು ನಾವು ಮಾತ್ರ ಸರಿ ಎಂದು ನಂಬಿದರೆ, ನಾವು ಮಾನವೀಯತೆಗೆ, ಇತರ ವ್ಯಕ್ತಿಗೆ ಅನ್ಯಾಯ ಮಾಡಿದಂತಾಗುತ್ತದೆ. ಸಂಭಾಷಣೆ ಮತ್ತು ಅಭಿವ್ಯಕ್ತಿ ಒಟ್ಟಿಗೆ ಸಾಗಬೇಕು. ಸಂವಾದವು ಇತರರ ದೃಷ್ಟಿಕೋನದ ಮಹತ್ವವನ್ನು ಅರಿತುಕೊಳ್ಳುವಂತೆ ಮಾಡುತ್ತದೆ ಎಂದೂ ಅವರು ಹೇಳಿದರು.
ಸಂವಾದವನ್ನು ಉತ್ತೇಜಿಸುವಲ್ಲಿ ಸಂಸದರ ಪಾತ್ರವನ್ನು ಉಪರಾಷ್ಟ್ರಪತಿಗಳು ಮತ್ತಷ್ಟು ಒತ್ತಿ ಹೇಳಿದರು. "ಪ್ರಜಾಪ್ರಭುತ್ವದಲ್ಲಿ ಸಂವಾದಕ್ಕೆ ಅತ್ಯಂತ ಅಧಿಕೃತ ವೇದಿಕೆ ಜನರಿಂದ ರೂಪಿಸಲ್ಪಟ್ಟಿದೆ. ಜನರು ತಮ್ಮ ಪ್ರತಿನಿಧಿಗಳನ್ನು ಸಂಸತ್ತು ಮತ್ತು ಶಾಸಕಾಂಗಗಳಿಗೆ ಆಯ್ಕೆ ಮಾಡುತ್ತಾರೆ. ಜನರ ಸಮಸ್ಯೆಗಳಿಗೆ ಧ್ವನಿ ಎತ್ತುವುದು ಜನಪ್ರತಿನಿಧಿಗಳ ಕರ್ತವ್ಯವಾಗಿದೆ. ಅವರು ಪರಿಹಾರಗಳನ್ನು ನೀಡಬೇಕು. ಅವರು ಜನರ ಆಕಾಂಕ್ಷೆಗಳನ್ನು ಸಾಕಾರಗೊಳಿಸಲು ಕೆಲಸ ಮಾಡಬೇಕು. ಆದರೆ ಅದಕ್ಕೆ ಬದ್ಧರಾಗಿರಬೇಕಾದವರು, ಸಾಂವಿಧಾನಿಕವಾಗಿ ಅದನ್ನು ಕಡ್ಡಾಯವಾಗಿ ನಡೆಸಬೇಕಿರುವವರು ಸಂವಾದದಲ್ಲಿ ತೊಡಗಿಸಿಕೊಳ್ಳುವುದಕ್ಕೆ ಅಡ್ಡಿಪಡಿಸಿದರೆ, ವಿಷಯಗಳು ಹಳಿತಪ್ಪುತ್ತವೆ, ದಾರಿ ತಪ್ಪುತ್ತವೆ. ಏಕೆಂದರೆ ಸಮಾಜದಲ್ಲಿ ನಿರ್ವಾತ ಇರಲು ಸಾಧ್ಯವಿಲ್ಲ. ಸಂಸದರು ಮತ್ತು ಜನ ಪ್ರತಿನಿಧಿಗಳು ತಮ್ಮ ಚಟುವಟಿಕೆಯಲ್ಲಿ ತೊಡಗದಿದ್ದರೆ, ನಿರ್ವಾತವನ್ನು ತುಂಬಲಾಗುತ್ತದೆ. ಜನರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಾರೆ. ಅವರು ತಮ್ಮ ಸಮಸ್ಯೆಗಳ ಬಗ್ಗೆ ಅಭಿವ್ಯಕ್ತಿಯನ್ನು ಕಂಡುಕೊಳ್ಳಬೇಕಾದರೆ ಅವರು ಅಸ್ತವ್ಯಸ್ತ ಕ್ರಿಯಾವಿಧಾನವನ್ನು ಹುಡುಕಿಕೊಳ್ಳುತ್ತಾರೆ. ಅವರಿಗೆ ಪರಿಹಾರಗಳು ಬೇಕು. ಆದ್ದರಿಂದ, ಎಚ್ಚರಗೊಳ್ಳಬೇಕೆಂದು ನಾನು ಒತ್ತಾಯಿಸುತ್ತೇನೆ. ನಾವು ಸಂಸದೀಯ ಸಂಸ್ಥೆಯಾಗಿ ಸ್ಥಿರವಾಗಿ ಗುರುತಿಸಲ್ಪಡುತ್ತಿದ್ದೇವೆ. ಆದರೆ ನಾವೀಗ ಅದಕ್ಕೆ ಗ್ರಹಣ ಹಿಡಿಯುವಂತೆ ಮಾಡುವ ಸ್ಥಿತಿಯಲ್ಲಿದ್ದೇವೆ. ನಾವು ಅಪ್ರಸ್ತುತ ಮಾದರಿಯತ್ತ ಹೋಗುತ್ತಿದ್ದೇವೆ. ನಮ್ಮ ಸಂವಿಧಾನದ ವಿಕಸನದಲ್ಲಿ ಸಂವಿಧಾನ ಸಭೆಯು ಪ್ರತಿಬಿಂಬಿಸಿದ ಅಭಿಪ್ರಾಯಗಳಾದ ರೋಮಾಂಚಕ ಅಭಿವ್ಯಕ್ತಿ, ಆರೋಗ್ಯಕರ ಸಂವಾದ, ಒಮ್ಮತದ ವಿಧಾನಕ್ಕಾಗಿ ಪ್ರಜಾಪ್ರಭುತ್ವದ ದೇವಾಲಯದಂತಾಗಬೇಕಾದ ಸಮಯ ಇದಾಗಿದೆ" ಎಂದು ಅವರು ಹೇಳಿದರು.
"ನಾವು ನಮ್ಮ ಸ್ವಾತಂತ್ರ್ಯದ ಶತಮಾನೋತ್ಸವ ಆಚರಣೆಯ ಕೊನೆಯ ಕಾಲು ಶತಮಾನ ಭಾಗದಲ್ಲಿ ಇದ್ದೇವೆ. ನಾವು 2047ರ ವೇಳೆಗೆ ನಮ್ಮ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಗುರಿಯನ್ನು ನಿಗದಿಪಡಿಸಿದ್ದೇವೆ. ಇದು ಇನ್ನು ಮುಂದೆ ಕನಸಾಗಿ ಉಳಿಯಲಾರದು. ಅದು ನಮ್ಮ ಉದ್ದೇಶ. ಅದನ್ನು ಸಾಧಿಸಬಹುದು. ಆದರೆ ನಾವೆಲ್ಲರೂ ನಮ್ಮ ರಾಷ್ಟ್ರದಲ್ಲಿ, ರಾಷ್ಟ್ರದ ಸೇವೆಯಲ್ಲಿ ನಂಬಿಕೆ ಇಡಬೇಕು ಮತ್ತು ರಾಷ್ಟ್ರೀಯ ಕಲ್ಯಾಣದ ಅಭಿವೃದ್ಧಿಯ ವಿಷಯಕ್ಕೆ ಬಂದಾಗ ಪಕ್ಷಪಾತದ ವಿಧಾನಗಳನ್ನು ಮೀರಿ ನಿಲ್ಲಬೇಕು ಎಂದು ಶ್ರೀ ಧನಕರ್ ಅವರು ಪ್ರತಿನಿಧಿಗಳು ಮತ್ತು ನಾಗರಿಕರಿಗೆ ಕರೆ ನೀಡಿದರು. ಜನರಿಗೆ ಸಾಮಾಜಿಕ ಮಾಧ್ಯಮದ ಶಕ್ತಿ ಇದೆ. ಅವರಿಗೆ ನಾನು ಕರೆ ನೀಡುತ್ತೇನೆ. ನಾನು ಯುವಜನರಿಗೆ ಕರೆ ನೀಡುತ್ತೇನೆ, ನಿಮ್ಮ ಪ್ರತಿನಿಧಿಗಳ ಮೇಲೆ ಒತ್ತಡ ಹೇರಿ. ನಿಮ್ಮ ಪ್ರತಿನಿಧಿಗಳ ಲೆಕ್ಕಪರಿಶೋಧನೆ ನಡೆಸಿ, ಏಕೆಂದರೆ ನಿಮ್ಮ ವಾಚ್ ಡಾಗ್ ಸ್ಥಾನೀಕರಣವು (ಕಾವಲು ನಾಯಿಯ ಸ್ಥಾನಮಾನವು) ಪ್ರಜಾಪ್ರಭುತ್ವದ ಯಶಸ್ಸಿಗೆ ಕಾರಣವಾಗುತ್ತದೆ. ಒಮ್ಮೆ ನೀವು ಅದನ್ನು ಮಾಡಿದರೆ, ಪ್ರತಿನಿಧಿಗಳು ರಾಷ್ಟ್ರದ ಸೇವೆಯಲ್ಲಿ ಮಿಂಚುತ್ತಾರೆ ಮತ್ತು ಒಬ್ಬರನ್ನು ಒಬ್ಬರು ಮೀರಿಸುತ್ತಾರೆ ಎಂದೂ ಉಪರಾಷ್ಟ್ರಪತಿ ಹೇಳಿದರು.
ಭಾರತವನ್ನು ವಿಶ್ವದ ಆಧ್ಯಾತ್ಮಿಕ ಕೇಂದ್ರ ಎಂದು ಬಣ್ಣಿಸಿದ ಶ್ರೀ ಧನಕರ್ ಅವರು ಹಳ್ಳಿಗಳ ಮಹತ್ವವನ್ನು ಒತ್ತಿ ಹೇಳಿದರು. "ನಮ್ಮ ಭಾರತವು ಹಳ್ಳಿಗಳಲ್ಲಿ ವಾಸಿಸುತ್ತದೆ. ನಮ್ಮ ಪ್ರಗತಿಯ ಹಾದಿ ಹಳ್ಳಿಗಳ ಮೂಲಕ ಸಾಗಬೇಕು. ಹಳ್ಳಿಗಳು ನಮ್ಮ ಜೀವನ ವಿಧಾನ, ನಮ್ಮ ಪ್ರಜಾಪ್ರಭುತ್ವ, ನಮ್ಮ ಆರ್ಥಿಕತೆಯನ್ನು ವ್ಯಾಖ್ಯಾನಿಸುತ್ತವೆ. ಹಳ್ಳಿಗಳಲ್ಲಿಯೇ ಭಾರತದ ಹೃದಯ ಬಡಿತ ಪ್ರತಿಧ್ವನಿಸುತ್ತದೆ. ಈ ಪ್ರದೇಶಗಳ ಅಭಿವೃದ್ಧಿ ನಮ್ಮ ಮೊದಲ ಆದ್ಯತೆಯಾಗಿರಬೇಕು. ಇದು ನಮ್ಮ ಪವಿತ್ರ ಕರ್ತವ್ಯ. ಮತ್ತು ಪರಿವರ್ತನೆಗೆ ಉತ್ತಮ ಮಾರ್ಗವೆಂದರೆ ಶಿಕ್ಷಣ" ಎಂದು ಅವರು ಹೇಳಿದರು.
ರಾಷ್ಟ್ರೀಯ ಪರಿವರ್ತನೆಯಲ್ಲಿ ಪಂಚಪ್ರಾಣದ ಪಾತ್ರವನ್ನು ಉಪರಾಷ್ಟ್ರಪತಿಗಳು ಒತ್ತಿ ಹೇಳಿದರು. "ಎಲ್ಲಾ ವ್ಯಕ್ತಿಗಳು, ಎಲ್ಲಾ ನಾಗರಿಕರು ಐದು ಸ್ತಂಭಗಳಿಗೆ ಬದ್ಧರಾದರೆ, ಈಗ ಸಾಗುತ್ತಿರುವ ನಮ್ಮ ರಾಷ್ಟ್ರೀಯ ಪರಿವರ್ತನೆಯ ಅಡಿಪಾಯವು ತ್ವರಿತಗೊಳ್ಳುತ್ತದೆ, ಅದನ್ನು ನಾನು 'ಪಂಚ ಪ್ರಾಣ' ಎಂದು ಕರೆಯುತ್ತೇನೆ. ಒಂದು, ನಾವು ಸಾಮಾಜಿಕ ಸಾಮರಸ್ಯವನ್ನು ಉತ್ತೇಜಿಸಬೇಕು. ವೈವಿಧ್ಯತೆಯನ್ನು ಮೀರುವ, ವೈವಿಧ್ಯತೆಯನ್ನು ರಾಷ್ಟ್ರೀಯ ಏಕತೆಯನ್ನಾಗಿ ಪರಿವರ್ತಿಸುವ ಸಾಮಾಜಿಕ ಸಾಮರಸ್ಯವನ್ನು ನಾವು ನಂಬಬೇಕು. ಮಕ್ಕಳೊಂದಿಗೆ ತಳಮಟ್ಟದಲ್ಲಿ ದೇಶಭಕ್ತಿ ಮೌಲ್ಯಗಳನ್ನು ಬೆಳೆಸುವ ಮೂಲಕ ನಾವು ಕುಟುಂಬ ಜೀವನ, ಕುಟುಂಬ ಜ್ಞಾನದಲ್ಲಿ ನಂಬಿಕೆ ಇಡಬೇಕು. ನಾವು ನಮ್ಮ ಪರಿಸರ, ಪರಿಸರ ಸ್ನೇಹಿ ಜೀವನಶೈಲಿ, ಪರಿಸರ ಮೌಲ್ಯಗಳ ಬಗ್ಗೆ ಕಾಳಜಿ ವಹಿಸಬೇಕು. ನಮ್ಮ ಪೂಜೆಗಳನ್ನು, ಆರಾಧನೆಗಳನ್ನು ನೋಡಿ, ಅವು ಪರಿಸರ ಸ್ನೇಹಿ. ಸಹಬಾಳ್ವೆ ನಡೆಸಲು ನಮಗೆ ಮತ್ತೊಂದು ಭೂಮಿ ಇಲ್ಲ ಎಂಬುದು ನಮಗೆ ಖಾತ್ರಿಯಿದೆ. ಈ ಅಸ್ತಿತ್ವದ ಸವಾಲು ನಮ್ಮನ್ನು ಹಿಂದಿಕ್ಕಿ ಮುನ್ನಡೆ ಸಾಧಿಸಲು ನಾವು ಅವಕಾಶ ಕೊಡಬಾರದು. ನಾವು ಪರಿಸರ ಸ್ನೇಹಿಯಾಗಿರಬೇಕು. ದೇಶದ ಪ್ರತಿಯೊಬ್ಬರೂ ಸ್ವದೇಶಿಯಲ್ಲಿ ನಂಬಿಕೆ ಇಡಬೇಕು ಎಂದು ನಾನು ಕರೆ ನೀಡುತ್ತೇನೆ. ಸ್ಥಳೀಯ ಉತ್ಪನ್ನಗಳ ಬಗ್ಗೆ ಧ್ವನಿ ಎತ್ತಿ. ಅದು ಉದ್ಯೋಗವನ್ನು ಉತ್ತೇಜಿಸುತ್ತದೆ. ಇದು ಅಮೂಲ್ಯವಾದ ವಿದೇಶಿ ವಿನಿಮಯವನ್ನು ಉಳಿಸುತ್ತದೆ. ನೀವು ಅದನ್ನು ನಂಬುತ್ತೀರಿ. ಮತ್ತು ಕೊನೆಯದಾಗಿ, ನಮ್ಮ ಸಂವಿಧಾನವು ನಮಗೆ ಮೂಲಭೂತ ಹಕ್ಕುಗಳನ್ನು ನೀಡುತ್ತದೆ. ಆದರೆ ನಾವು ಮೂಲಭೂತ ಕರ್ತವ್ಯಗಳತ್ತ ಗಮನ ಹರಿಸಬೇಕು. ನಮ್ಮ ಕರ್ತವ್ಯಗಳು ಪವಿತ್ರವಾದವು. ಅವು ಹೆಚ್ಚೇನನ್ನು ಬಯಸುವುದಿಲ್ಲ. ನೀವು ಮೂಲಭೂತ ಕರ್ತವ್ಯಗಳ ಮೂಲಕ ಹೋದರೆ, ನೀವು ಅವುಗಳನ್ನು ಅನುಸರಿಸಲು ಸ್ಫೂರ್ತಿ ಪಡೆಯುತ್ತೀರಿ, ಪ್ರೇರೇಪಿಸಲ್ಪಡುತ್ತೀರಿ" ಎಂದು ಅವರು ಹೇಳಿದರು.
ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ (ಸಿಎಸ್ಆರ್) ಮೂಲಕ ಧಾರ್ಮಿಕ ಸಂಸ್ಥೆಗಳನ್ನು ಸಕ್ರಿಯವಾಗಿ ಬೆಂಬಲಿಸುವಂತೆ ಕಾರ್ಪೊರೇಟ್ ಸಂಸ್ಥೆಗಳಿಗೆ ಉಪರಾಷ್ಟ್ರಪತಿಗಳು ಮನವಿ ಮಾಡಿದರು. "ಕಾರ್ಪೊರೇಟ್ಗಳು, ಭಾರತೀಯ ಕಾರ್ಪೊರೇಟ್ಗಳು ಮುಂದೆ ಬರಬೇಕು, ತಮ್ಮ ಸಿಎಸ್ಆರ್ ನಿಧಿಯಿಂದ ಮೂಲಸೌಕರ್ಯ ಅಭಿವೃದ್ಧಿ, ಆರೋಗ್ಯ, ಶಿಕ್ಷಣ, ಮತ್ತು ಅಂತಹ ಧಾರ್ಮಿಕ ಸಂಸ್ಥೆಗಳ ಸುತ್ತಲಿನ ಮೂಲಸೌಕರ್ಯಗಳಿಗೆ ಉದಾರವಾಗಿ ಕೊಡುಗೆ ನೀಡಬೇಕು, ಏಕೆಂದರೆ ಈ ಧಾರ್ಮಿಕ ಸಂಸ್ಥೆಗಳು ಪೂಜಾ ಸ್ಥಳಗಳನ್ನು ಮೀರಿದಂತಹ ಕೆಲಸಗಳನು ಮಾಡುತ್ತಿವೆ. ಅವು ನಮ್ಮ ಸಂಸ್ಕೃತಿಯ ನರವ್ಯೂಹ ಕೇಂದ್ರ. ಇದು ನಮ್ಮ ಯುವಜನರಲ್ಲಿ, ನಮ್ಮ ಮಕ್ಕಳಲ್ಲಿ, ಈ ದೇಶವನ್ನು ಇತರ ದೇಶಗಳಿಗಿಂತ ಭಿನ್ನವಾಗಿಸುವ ಸಾಂಸ್ಕೃತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಸಹಾಯ ಮಾಡುತ್ತದೆ" ಎಂದೂ ಅವರು ಹೇಳಿದರು.
ಶಿಕ್ಷಣ, ಆರೋಗ್ಯ ಮತ್ತು ಗ್ರಾಮೀಣಾಭಿವೃದ್ಧಿಯಲ್ಲಿ ಧರ್ಮಸ್ಥಳದ ಅನುಕರಣೀಯ ಪ್ರಯತ್ನಗಳನ್ನು ಶ್ಲಾಘಿಸುವ ಮೂಲಕ ಉಪರಾಷ್ಟ್ರಪತಿಗಳು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು. ಭಗವಾನ್ ಶ್ರೀ ಮಂಜುನಾಥನ ದೈವಿಕತೆಯಲ್ಲಿ ಧಾರ್ಮಿಕತೆ, ವಿನೀತ ಭಾವನೆ, ಸಾಮರಸ್ಯ ಮತ್ತು ಮನಸ್ಸಿನ ಶಾಂತಿಯ ಪ್ರತಿಬಿಂಬವಿದೆ. ಸಾನಿಧ್ಯ ಕ್ಯೂ ಸಂಕೀರ್ಣವು ಭೌತಿಕ ರಚನೆಯನ್ನು ಮೀರಿದೆ. ಇದು ಕೇವಲ ಕಟ್ಟಡವಲ್ಲ. ಇದು ಒಳಗೊಳ್ಳುವಿಕೆ, ಆತಿಥ್ಯ ಮತ್ತು ಸೇವೆಗೆ ನಮ್ಮ ಸಾಮೂಹಿಕ ಬದ್ಧತೆಯ ಅಭಿವ್ಯಕ್ತಿಯಾಗಿದೆ" ಎಂದೂ ಅವರು ಹೇಳಿದರು.
ಸಂಸದ ಶ್ರೀ ಬ್ರಿಜೇಶ್ ಚೌಟ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಧ್ಯಕ್ಷರಾದ ಶ್ರೀ ಡಿ.ವೀರೇಂದ್ರ ಹೆಗ್ಗಡೆ, ಜ್ಞಾನವಿಕಾಸ ಕಾರ್ಯಕ್ರಮದ ಅಧ್ಯಕ್ಷೆ ಶ್ರೀಮತಿ ಹೇಮಾವತಿ ವಿ.ಹೆಗ್ಗಡೆ, ಎಸ್ ಕೆ ಡಿ ಆರ್ ಡಿ ಪಿ ಟ್ರಸ್ಟಿ ಶ್ರೀ ಡಿ.ಸುರೇಂದ್ರ ಕುಮಾರ್, ಎಸ್ ಡಿ ಎಂ ಇ ಸೊಸೈಟಿಯ ಕಾರ್ಯದರ್ಶಿ ಶ್ರೀ ಡಿ.ಹರ್ಷೇಂದ್ರ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
*****
(Release ID: 2091003)
Visitor Counter : 25