ಉಪರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ನವದೆಹಲಿಯಲ್ಲಿ ನಡೆದ ʻಇಂಡಿಯಾ ಮೆರಿಟೈಮ್ ಹೆರಿಟೇಜ್ ಕಾನ್‌ಕ್ಲೇವ್‌ʼ (ಐಎಂಎಚ್‌ಸಿ) ಉದ್ಘಾಟನಾ ಸಮಾರಂಭದಲ್ಲಿ ಉಪರಾಷ್ಟ್ರಪತಿಯವರ ಭಾಷಣದ ಪಠ್ಯ 

Posted On: 11 DEC 2024 2:24PM by PIB Bengaluru

ನಿಮ್ಮೆಲ್ಲರಿಗೂ ಶುಭ ಮಧ್ಯಾಹ್ನ.

ಜಾಗತಿಕ ಕಡಲ ವ್ಯವಹಾರಗಳಲ್ಲಿ ಭಾರತದ ಭವಿಷ್ಯದ ಪಥವನ್ನು ಗುರುತಿಸುವುದರ ಜೊತೆಗೆ, ನಮ್ಮ ಶ್ರೇಷ್ಠ ಕಡಲ ಪರಂಪರೆಯನ್ನು ಆಚರಿಸಲು ನಾವೆಲ್ಲರೂ ಒಟ್ಟುಗೂಡುವಂತಹ ಕಾರ್ಯಕ್ರಮ ʻಇಂಡಿಯಾ ಮೆರಿಟೈಮ್ ಹೆರಿಟೇಜ್ ಕಾನ್‌ಕ್ಲೇವ್‌-2024ʼ. ನಾನು ಇದರ ಭಾಗವಾಗಿರುವುದು ನನಗೆ ಸಂದ ವಿಶಿಷ್ಟ ಗೌರವವಾಗಿದೆ. ವಾಸ್ತವವಾಗಿ, ಇತಿಹಾಸಕಾರರು, ಪುರಾತತ್ವಶಾಸ್ತ್ರಜ್ಞರು, ನೀತಿ ನಿರೂಪಕರು ಮತ್ತು ಉದ್ಯಮದ ದಿಗ್ಗಜರು ಸೇರಿದಂತೆ ಈ ನಿರ್ದಿಷ್ಟ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರತಿಯೊಬ್ಬರ ಅನನ್ಯ ಮತ್ತು ಪರಿಣಾಮಕಾರಿ ಉಪಸ್ಥಿತಿಗೆ ನಾನು ಇಲ್ಲಿ ಸಾಕ್ಷಿಯಾಗಿದ್ದೇನೆ.

ಆದ್ದರಿಂದ, ಈ ಕ್ಷೇತ್ರದಲ್ಲಿ ಮೊದಲ ಬಾರಿ ಎನಿಸಿರುವ ಈ ರೀತಿಯ ಉಪಕ್ರಮವು ಮಹತ್ವದ ಪಾತ್ರ ವಹಿಸಲಿದೆ ಎಂಬುದನ್ನು ಈ ಸಮಾವೇಶವು ಸೂಚಿಸುತ್ತದೆ. ಗೌರವಾನ್ವಿತ ಸಭಿಕರೇ, ನಾನು ನಿಮ್ಮೊಂದಿಗೆ ಒಂದು ವಿಷಯವನ್ನು ಹಂಚಿಕೊಳ್ಳುತ್ತೇನೆ. ಕಳೆದ ಒಂದು ದಶಕದಲ್ಲಿ, ನಾವು ಈ ದೇಶದಲ್ಲಿ ಅನೇಕ ಪ್ರಥಮಗಳನ್ನು ನೋಡಿದ್ದೇವೆ. ಕಡಲ ಪರಂಪರೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅನೇಕ ಪ್ರಥಮಗಳಿಗೆ ಈ ದೇಶವು ಸಾಕ್ಷಿಯಾಗಿದೆ. ಈ ಉಪಕ್ರಮಗಳ ಪೈಕಿ ಈ ಕಾರ್ಯಕ್ರಮವೂ ಒಂದಾಗಿದೆ.

ನಮ್ಮ ಕಡಲ ಪರಂಪರೆಯು ಭಾರತದ ಪ್ರಾಚೀನ ನಾಗರಿಕತೆಯ ಚೌಕಟ್ಟಿನಲ್ಲಿ ಬೇರ್ಪಡಿಸಲಾಗದಷ್ಟು ಹೆಣೆದುಕೊಂಡಿದೆ. ಇದು ಶತಮಾನಗಳ ಹಳೆಯ ವ್ಯಾಪಾರ, ಸಾಂಸ್ಕೃತಿಕ ವಿನಿಮಯ ಮತ್ತು ಆಳವಾದ ಪೌರಾಣಿಕ ಮಹತ್ವವನ್ನು ಒಳಗೊಂಡಿದೆ. ಸಾವಿರಾರು ವರ್ಷಗಳ ನಮ್ಮ ನಾಗರಿಕ ನೀತಿಗಳು ಮತ್ತು ಪರಂಪರೆಗೆ ಕಡಲ ಪರಂಪರೆಯು ಪೂರಕವಾಗಿದೆ. ʻಲೋಥಾಲ್ʼ ಮತ್ತು ʻಧೋಲಾವಿರಾʼ ಬಂದರುಗಳನ್ನು ಒಳಗೊಂಡಿದ್ದ ಸಿಂಧೂ ಕಣಿವೆ ನಾಗರಿಕತೆಯು ಭಾರತದ ಆರಂಭಿಕ ಕಡಲೋದ್ಯಮ ಶ್ರೇಷ್ಠತೆಗೆ ಕನ್ನಡಿ ಹಿಡಿದಿದೆ. ಬಹ್ರೇನ್ ಮತ್ತು ಒಮಾನ್ ದೇಶಗಳಲ್ಲಿನ ಪುರಾತತ್ವ ಸಂಶೋಧನೆಗಳಿಂದ ಇದು ಸಾಬೀತಾಗಿದೆ.

ಗೌರವಾನ್ವಿತ ಸಭಿಕರೇ, ಚಾಣಕ್ಯನ ಅರ್ಥಶಾಸ್ತ್ರವು ನೌಕಾ ಆಡಳಿತವನ್ನು ಸೂಕ್ಷ್ಮವಾಗಿ ವಿವರಿಸುತ್ತದೆ. ಮೌರ್ಯ ಸಾಮ್ರಾಜ್ಯದ ಕಡಲ ಪ್ರಾಬಲ್ಯವು ಆಗ್ನೇಯ ಏಷ್ಯಾದವರೆಗೆ ಆಳವಾಗಿ ವಿಸ್ತರಿಸುವ ಮೂಲಕ ಈ ಭಾಗದಲ್ಲಿ ಅಳಿಸಲಾಗದ ಸಾಂಸ್ಕೃತಿಕ ಪರಂಪರೆಯನ್ನು ಅಜರಾಮರವಾಗಿಸಿದೆ. ಕಾಂಬೋಡಿಯಾದ ಭವ್ಯವಾದ ʻಅಂಕೋರ್ ವಾಟ್ʼ ದೇಗುಲ ಸಂಕೀರ್ಣ ಇದಕ್ಕೆ ಸಾಕ್ಷಿಯಾಗಿ ನಿಂತಿದೆ. ʻಅಂಕೋರ್ ವಾಟ್ʼಗೆ
ಭೇಟಿ ನೀಡುವ ಅವಕಾಶ ನನಗೆ ಒಮ್ಮೆ ಒದಗಿ ಬಂದಿತ್ತು. ಆ ಭವ್ಯತೆಯನ್ನು ನಾವು ನಂಬಬೇಕೆಂದರೆ, ಕಣ್ಣಿಂದ ಪ್ರತ್ಯಕ್ಷವಾಗಿ ನೋಡಲೇಬೇಕು. ಆದ್ದರಿಂದ, ಆಗ್ನೇಯ ಏಷ್ಯಾ ಮತ್ತು ಯುರೋಪಿನ ನಮ್ಮ ವಿದೇಶಿ ಸ್ನೇಹಿತರ ಉಪಸ್ಥಿತಿ ಬಹಳ ಮಹತ್ವದ್ದಾಗಿದೆ. ಮತ್ತು ಈ ಮಹಾನ್ ಸಂದರ್ಭದಲ್ಲಿ ಅವರಿಗೆ ನನ್ನ ಹೃತ್ಪೂರ್ವಕ ಸ್ವಾಗತ.

ದಕ್ಷಿಣದ ರಾಜವಂಶಸ್ಥರಾದ ಚೋಳರು, ಚೇರರು ಮತ್ತು ಪಾಂಡ್ಯರು ಕಡಲ ವ್ಯಾಪಾರದಲ್ಲಿ ಕ್ರಾಂತಿಯನ್ನು ತಂದರು. ನಂತರ ಕ್ಯಾಲಿಕಟ್‌ನ ದೂರದೃಷ್ಟಿಯ ಜಾಮೋರಿನ್ ಆಡಳಿತಗಾರರ ಅಡಿಯಲ್ಲಿ ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲಿ ಈ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆಗಳನ್ನು ಮಾಡಲಾಯಿತು. ಕಾಲಾವಕಾಶ ಕೊರತೆಯಿಂದಾಗಿ ಈ ಬಗ್ಗೆ ಹೆಚ್ಚಿನ ವಿವರಗಳಿಗೆ ನಾನು ಹೋಗುವುದಿಲ್ಲ. ಆದರೆ ಅದು ತುಂಬಾ ಆಸಕ್ತಿದಾಯಕ, ಮಾಹಿತಿಯುಕ್ತ, ಜ್ಞಾನಯುತ ವಿಚಾರ. ಈ ಕಡಲ ಪರಂಪರೆ ಸಂಕೀರ್ಣವು ಅನ್ವೇಷಕ ಮನಸ್ಸುಗಳಿಗೆ ಜ್ಞಾನೋದಯವನ್ನು ಉಂಟು ಮಾಡುತ್ತದೆ.

ಛತ್ರಪತಿ ಶಿವಾಜಿ ಮಹಾರಾಜರು ಹೊಂದಿದ್ದ ಅಸಾಧಾರಣ ನೌಕಾಬಲವು ವಿದೇಶಿ ಪ್ರಭುತ್ವಕ್ಕೆ ಯಶಸ್ವಿಯಾಗಿ ಸವಾಲು ಹಾಕಿದರೆ, ವಾಸ್ಕೋ ಡ ಗಾಮಾ ಅವರಿಗೆ ಗುಜರಾತಿ ನಾವಿಕರೊಬ್ಬರು ನಮ್ಮ ತೀರಕ್ಕೆ ಹೋಗುವ ಮಾರ್ಗವನ್ನು ತೋರಿದ್ದು ಭಾರತೀಯ ಕಡಲ ಪರಿಣತಿಗೆ ಸಾಕ್ಷಿಯಾಗಿದೆ. 'ಶಾಮ್-ನೋ ವರುಣಾ' ಎಂಬ ಭಾರತೀಯ ನೌಕಾಪಡೆಯ ಪವಿತ್ರ ಧ್ಯೇಯವಾಕ್ಯವು ಕಡಲ ಪಡೆಗಳ ಬಗ್ಗೆ ನಮ್ಮ ಗೌರವವನ್ನು ಎತ್ತಿ ತೋರುತ್ತದೆ. ʻಜಲ ದೈವವು ಸದಾ ನಮ್ಮ ಮೇಲೆ ಕೃಪೆ ತೋರಲಿʼ ಎಂಬುದು ಇದರರ್ಥ.

ಗೌರವಾನ್ವಿತ ಸಭಿಕರೇ, ಇದು ನಮ್ಮ ನಾಗರಿಕ ನೀತಿಯ ಸ್ಫೂರ್ತಿ ಮತ್ತು ಸಾರವಾಗಿದೆ. ʻಲೋಥಾಲ್ʼನಲ್ಲಿರುವ ರಾಷ್ಟ್ರೀಯ ಕಡಲ ಪರಂಪರೆ ಸಂಕೀರ್ಣವು ಭವಿಷ್ಯದ ಪೀಳಿಗೆಗೆ ಸ್ಫೂರ್ತಿ ನೀಡುವ ಜೊತೆಗೆ ನಮ್ಮ ಸಮುದ್ರಯಾನ ಪರಂಪರೆಯನ್ನು ಗೌರವಿಸುವ ಅಚಲ ಬದ್ಧತೆಗೆ ಉದಾಹರಣೆಯಾಗಿದೆ. ಗೌರವಾನ್ವಿತ ಸಭಿಕರೇ, ಈ ನಿಟ್ಟಿನಲ್ಲಿ ಕಳೆದ ದಶಕದಲ್ಲಿ ಸರ್ಕಾರ ಕೈಗೊಂಡ ಹಲವಾರು ಉಪಕ್ರಮಗಳಲ್ಲಿ ಇದು ಸಹ ಒಂದಾಗಿದೆ ಎಂಬುದು ಸಂತೋಷದ ವಿಷಯ.

7,500 ಕಿ.ಮೀ ಕರಾವಳಿ, 13 ಪ್ರಮುಖ ಬಂದರುಗಳು ಮತ್ತು 200 ಸಣ್ಣ ಬಂದರುಗಳೊಂದಿಗೆ ಆಧುನಿಕ ಭಾರತದ ಕಡಲ ಪರಾಕ್ರಮವು ಎಲ್ಲಾ ಕ್ಷೇತ್ರಗಳಿಗೂ ವ್ಯಾಪಿಸಿದ್ದು, ಇದು ನಿರ್ವಿವಾದಾಸ್ಪದವಾಗಿ ವಿಶ್ವದ ಕಡಲ ಶಕ್ತಿ ಕೇಂದ್ರವಾಗಿ ಭಾರತದ ಸ್ಥಾನವನ್ನು ಭದ್ರಪಡಿಸಿದೆ. ನಮ್ಮ ಬಂದರುಗಳು ವಾರ್ಷಿಕ 1,200 ಮಿಲಿಯನ್ ಟನ್ ಸರಕು ನಿರ್ವಹಣಾ ಸಾಮರ್ಥ್ಯ ಹೊಂದಿದ್ದು, ನಮ್ಮ ಆರ್ಥಿಕ ಕ್ಷೇತ್ರದಲ್ಲಿ ಕಡಲ ವಲಯದ ಪ್ರಮುಖ ಪಾತ್ರವನ್ನು ಒತ್ತಿಹೇಳುತ್ತವೆ. ಭಾರತದ ವ್ಯಾಪಾರ-ವಹಿವಾಟಿನ ಒಟ್ಟು ಪರಿಮಾಣದಲ್ಲಿ ಬರೋಬ್ಬರಿ 95% ಅನ್ನು ಕಡಲ ವಲಯವು ಸುಗಮಗೊಳಿಸುತ್ತದೆ. ಈ ಪ್ರಮಾಣವು ಭಾರತದ ವ್ಯಾಪಾರ ಮೌಲ್ಯದ 70% ರಷ್ಟಿದ್ದು, ಇದು ನಮ್ಮ ಹಿಂದೂ ಮಹಾಸಾಗರದ ವ್ಯೂಹಾತ್ಮಕ ನೆಲೆಯನ್ನು ಬಂಡವಾಳವನ್ನಾಗಿ ಮಾಡಿಕೊಂಡಿದೆ.

ಭಾರತವು ತನ್ನ ನೀಲಿ ಆರ್ಥಿಕತೆಯನ್ನು ವ್ಯೂಹಾತ್ಮಕವಾಗಿ ಅಭಿವೃದ್ಧಿಪಡಿಸುತ್ತಿದೆ. ಆರ್ಥಿಕ ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಗಾಗಿ ಸುಸ್ಥಿರ ಸಾಗರ ಸಂಪನ್ಮೂಲದ ಬಳಕೆಗೆ ಭಾರತ ಒತ್ತು ನೀಡುತ್ತಿದೆ. ಜಾಗತಿಕ ನೀಲಿ ಆರ್ಥಿಕತೆಯು 2030ರ ವೇಳೆಗೆ 6 ಟ್ರಿಲಿಯನ್ ಅಮೆರಿಕನ್‌ ಡಾಲರ್ ತಲುಪುವ ನಿರೀಕ್ಷೆಯಿದ್ದು, ಭಾರತದ ಕಡಲ ವಲಯವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮುವಲ್ಲಿ ಕ್ರಾಂತಿಕಾರಿ ಪಾತ್ರವನ್ನು ವಹಿಸಲು ಸಜ್ಜಾಗಿದೆ.

ದೂರದೃಷ್ಟಿಯ ʻಸಾಗರ ಮಾಲಾʼ ಕಾರ್ಯಕ್ರಮವು ಬಂದರುಗಳನ್ನು ಕೈಗಾರಿಕಾ ಕ್ಲಸ್ಟರ್‌ಗಳೊಂದಿಗೆ ಬೆಸೆಯುತ್ತದೆ, ಸರಕು-ಸಾಗಣೆ ಜಾಲಗಳನ್ನು ಉತ್ತಮಗೊಳಿಸುತ್ತದೆ ಮತ್ತು ಸಮಗ್ರ ಕರಾವಳಿ ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ. ʻಕರಾವಳಿ ಹಡಗು ವಿಧೇಯಕ-2024ʼ ಈ ನಿಟ್ಟಿನಲ್ಲಿ ನಿಯಂತ್ರಕ ಚೌಕಟ್ಟುಗಳನ್ನು ಸುಗಮಗೊಳಿಸುತ್ತದೆ ಮತ್ತು ಬಹು ಮಾದರಿ ವ್ಯಾಪಾರ ಸಂಪರ್ಕವನ್ನು ಹೆಚ್ಚಿಸುತ್ತದೆ.

ಗೌರವಾನ್ವಿತ ಸಭಿಕರೇ, ವಾಸ್ತವವಾಗಿ ಹೇಳುವುದಾದರೆ, ಕಳೆದ ದಶಕದಲ್ಲಿ, ಕಾನೂನುಗಳಿಗೆ ಸಂಬಂಧಿಸಿದಂತೆ ವಸಾಹತುಶಾಹಿ ಪರಂಪರೆಯಿಂದ ನಮ್ಮನ್ನು ನಾವು ಮುಕ್ತಗೊಳಿಸಿಕೊಂಡಿದ್ದೇವೆ. ಜೊತೆಗೆ ಕ್ರಾಂತಿಕಾರಿ ತಂತ್ರಜ್ಞಾನಗಳು ಸೇರಿದಂತೆ ಆಧುನಿಕ ತಂತ್ರಜ್ಞಾನಗಳನ್ನು ಬಳಸುವ ವಿಚಾರದಲ್ಲಿ ನಮ್ಮ ಕಾನೂನುಗಳು ಬಹಳ ಮುಂದಾಲೋಚನೆಯಿಂದ ಕೂಡಿವೆ. ವಾಸ್ತವವಾಗಿ, ನಾವು ಹೊಸ ಕೈಗಾರಿಕಾ ಕ್ರಾಂತಿಯ ಹೊಸ್ತಿಲಲ್ಲಿದ್ದೇವೆ. ಈ ಹೊಸ ಕೈಗಾರಿಕಾ ಕ್ರಾಂತಿಯೊಂದಿಗೆ ಭಾರತವು ಮುಂಚೂಣಿ ರಾಷ್ಟ್ರಗಳಲ್ಲಿ ಒಂದಾಗಿದೆ ಎಂಬುದನ್ನು ತಿಳಿಯಲು ಸಭಿಕರಿಗೆ ಹರ್ಷವೆನಿಸಬಹುದು.

ಜಾಗತಿಕ ಕಡಲ ಉಪಕ್ರಮಗಳನ್ನು ಮುನ್ನಡೆಸುವ ನಿಟ್ಟಿನಲ್ಲಿ ಭಾರತ ಇಂದು ಉದಯೋನ್ಮುಖ ಕಡಲ ಶಕ್ತಿಕೇಂದ್ರವಾಗಿ ನಿಂತಿದೆ. ನಮ್ಮ ಭೌಗೋಳಿಕ ಸ್ಥಳ ಮತ್ತು ಸುಧಾರಿತ ಮೂಲಸೌಕರ್ಯಗಳನ್ನು ವ್ಯೂಹಾತ್ಮಕವಾಗಿ ಬಳಸಿಕೊಳ್ಳುವ ಮೂಲಕ ಇದನ್ನು ಸಾಧಿಸಲಿದೆ. ʻಸಾಗರ್-ಮಾಲಾʼದಂತಹ ಅತ್ಯಾಧುನಿಕ ಕಡಲ ರಾಜತಾಂತ್ರಿಕತೆಯ ಮೂಲಕ  ಈ ಪ್ರದೇಶದ ಎಲ್ಲರಿಗೂ ಭದ್ರತೆ ಮತ್ತು ಬೆಳವಣಿಗೆಯ ಅವಕಾಶ ಕಲ್ಪಿಸಲು ನಾವು ದೃಢವಾದ ಅಂತರರಾಷ್ಟ್ರೀಯ ಪಾಲುದಾರಿಕೆಯನ್ನು ಬೆಳೆಸುತ್ತಿದ್ದೇವೆ. ಜೊತೆಗೆ ʻಇಂಡೋ-ಪೆಸಿಫಿಕ್ʼ ಪ್ರಾಂತ್ಯದುದ್ದಕ್ಕೂ ಪ್ರಾದೇಶಿಕ ಸ್ಥಿರತೆಯನ್ನು ಖಚಿತಪಡಿಸುತ್ತಿದ್ದೇವೆ. ನಿಯಮ ಆಧಾರಿತ ವ್ಯವಹಾರವು ಅತ್ಯಗತ್ಯವಾಗಿದ್ದು, ಭಾರತವು ಈ ನಿಟ್ಟಿನಲ್ಲಿ ಉಪಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಸಮುದ್ರಗಳಲ್ಲಿ ನಿಯಮ ಆಧಾರಿತ ವ್ಯವಹಾರಕ್ಕೆ ಹೆಚ್ಚಿನ ಬದ್ಧತೆಯನ್ನು ಖಚಿತಪಡಿಸಿಕೊಳ್ಳಲು ಮುಂದಾಳತ್ವ ವಹಿಸುತ್ತಿದೆ.

ಈ ಎರಡು ದಿನಗಳ ʻಮೆರಿಟೈಮ್‌ ಹೆರಿಟೇಜ್‌ ಕಾನ್‌ಕ್ಲೇವ್‌- 2024ʼ ನಮ್ಮ ಕಡಲ ಪರಂಪರೆಯನ್ನು ಗೌರವಿಸುವ ನಮ್ಮ ಸಾಮೂಹಿಕ ಸಮರ್ಪಣೆಗೆ ಹೊಸ ಚೈತನ್ಯವನ್ನು ತುಂಬುತ್ತದೆ. ಜೊತೆಗೆ ಸುಸ್ಥಿರ ನಾವೀನ್ಯತೆಯತ್ತ ನಮ್ಮ ಪ್ರಯಾಣಕ್ಕೆ ಇಂಬು ಕೊಡುತ್ತದೆ ಎಂಬ ವಿಶ್ವಾಸ ಮತ್ತು ಆಶಾವಾದ ನನಗಿದೆ.

ಗೌರವಾನ್ವಿತ ಸದಸ್ಯರೇ, ಭಾರತವು ಅಸಾಧಾರಣ ಆರ್ಥಿಕ ಬೆಳವಣಿಗೆ, ವೇಗದ ಮೂಲಸೌಕರ್ಯ ಬೆಳವಣಿಗೆ, ಆಳವಾದ ಡಿಜಿಟಲೀಕರಣಕ್ಕೆ ಸಾಕ್ಷಿಯಾಗಿದೆ. ಇನ್ನು ಕೇವಲ ಒಂದು ಅಥವಾ ಎರಡು ವರ್ಷಗಳಲ್ಲಿ ಮೂರನೇ ಅತಿದೊಡ್ಡ ಜಾಗತಿಕ ಆರ್ಥಿಕತೆಯಾಗುವ ಹಾದಿಯಲ್ಲಿದೆ. ಅಭಿವೃದ್ಧಿ ಹೊಂದಿದ ರಾಷ್ಟ್ರವಾದ ಭಾರತ ಇನ್ನು ಮುಂದೆ ಕನಸಲ್ಲ, ಅದೊಂದು ಗುರಿ. ಖಂಡಿತವಾಗಿಯೂ ಸಾಧಿಸಬಹುದಾದ ಗುರಿ. ಭಾರತವು ಇನ್ನು ಮುಂದೆ ಕೇವಲ ಸಾಮರ್ಥ್ಯ ಹೊಂದಿರುವ ರಾಷ್ಟ್ರವಾಗಿ ಉಳಿಯುವುದಿಲ್ಲ, ಭಾರತವು ಏಳಿಗೆಯಾಗುತ್ತಿದೆ, ಅದರ ಏರುಗತಿಯನ್ನು ತಡೆಯಲಾಗುವುದಿಲ್ಲ. ಜಾಗತಿಕ ಸಂಸ್ಥೆಗಳು ಭಾರತದ ಪ್ರಗತಿಯನ್ನು ವಿಶ್ವದ ಇತರ ಭಾಗಗಳಿಗೆ ಮಾದರಿಯಾಗಿದೆ ಎಂದು ಶ್ಲಾಘಿಸಿವೆ.

ʻಐಎಂಎಫ್ʼ, ʻವಿಶ್ವ ಬ್ಯಾಂಕ್ʼ, ʻವಿಶ್ವ ಆರ್ಥಿಕ ವೇದಿಕೆʼಯಂತಹ ಜಾಗತಿಕ ಸಂಸ್ಥೆಗಳು ಭಾರತವನ್ನು ಹೂಡಿಕೆ ಮತ್ತು ಅವಕಾಶಗಳ ನೆಚ್ಚಿನ ತಾಣವೆಂದು ಪರಿಗಣಿಸುತ್ತವೆ. ಈ ವಿಚಾರಕ್ಕೆ ನಾವು ಖಂಡಿತವಾಗಿಯೂ ಹೆಮ್ಮೆಪಡಬೇಕು. ಯಾವುದೇ ಕ್ಷೇತ್ರದಲ್ಲಿ, ಅದು ಸಮುದ್ರವಾಗಿರಲಿ, ನೀಲಿ ಆರ್ಥಿಕತೆಯಾಗಿರಲಿ, ಅದು ಭೂಮಿಯ ಮೇಲಿರಲಿ, ಆಕಾಶದಲ್ಲಿರಲಿ ಅಥವಾ ಬಾಹ್ಯಾಕಾಶವಾಗಿರಲಿ, ಭಾರತದ ಪ್ರಗತಿ ಅಸಾಧಾರಣವಾಗಿದೆ. ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ನಮ್ಮ ಸ್ವಾತಂತ್ರ್ಯದ ಶತಮಾನೋತ್ಸವವನ್ನು ಆಚರಿಸುವ 2047ರ ನಮ್ಮ ಮ್ಯಾರಥಾನ್‌ಗೆ ನಮ್ಮ ಯುವಕರು, ನಮ್ಮ ನಾಗರಿಕರು ಇಂಧನ ತುಂಬುತ್ತಿದ್ದಾರೆ. ಗೌರವಾನ್ವಿತ ಸಭಿಕರಿಗೆ ನಾನು ಭರವಸೆ ನೀಡುವುದೇನೆಂದರೆ, ಈ ಬೆಳವಣಿಗೆಯ ಎಂಜಿನ್ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲಿದೆ. ಯಾವುದೇ ಕ್ಷೇತ್ರದಲ್ಲಿ ಭಾರತದ ಏಳಿಗೆ ಜಾಗತಿಕ ಸಾಮರಸ್ಯ, ಜಾಗತಿಕ ಶಾಂತಿಗೆ ಶುಭವಾಗಿದೆ. ಭಾರತವು ಜಾಗತಿಕ ಒಳಗೊಳ್ಳುವಿಕೆಯಲ್ಲಿ ನಂಬಿಕೆ ಇರಿಸಿದೆ ಎಂಬುದನ್ನು ಜಾಗತಿಕ ವೇದಿಕೆಯಲ್ಲಿ, ಇತ್ತೀಚೆಗಿನ ʻಜಿ-20ʼ ಅಧ್ಯಕ್ಷತೆಯ ವೇಳೆ ಜಗತ್ತಿಗೆ ಭಾರತವು ತೋರಿಸಿದೆ.

ಅದಕ್ಕಾಗಿಯೇ ಮೂರು ವಿಭಿನ್ನ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ: ಆಫ್ರಿಕನ್ ಒಕ್ಕೂಟವನ್ನು ʻಜಿ 20ʼ ಸದಸ್ಯ ರಾಷ್ಟ್ರವಾಗಿ ಸೇರ್ಪಡೆಗೊಳಿಸಿದ್ದು; ಜಾಗತಿಕ ದಕ್ಷಿಣದತ್ತ ಆಳವಾದ ಗಮನವನ್ನು ವಹಿಸುವುದು; ಹಾಗೂ ಕಡಲ ವ್ಯಾಪಾರಕ್ಕೆ ಸಂಬಂಧಿಸಿದಂತೆ ಬಹಳ ಹಿಂದೆಯೇ ಅಸ್ತಿತ್ವದಲ್ಲಿದ್ದ ಮಾರ್ಗಗಳನ್ನು ಪುನರ್‌ರಚಿಸುವುದು. ಆದ್ದರಿಂದ, ಇಂತಹ ಉಪಕ್ರಮಗಳನ್ನು ಯಶಸ್ವಿಯಾಗಿ ಕೈಗೊಂಡಾಗ, ಈ ಬಗ್ಗೆ ನನ್ನ ಆಳವಾದ ಮೆಚ್ಚುಗೆಯನ್ನು ವ್ಯಕ್ತಪಡಿಸುವುದು ಅತ್ಯಗತ್ಯವೆಂದು ನಾನು ಭಾವಿಸುತ್ತೇನೆ.

ಇದನ್ನು ಅನುಷ್ಠಾನಗೊಳಿಸುತ್ತಿರುವವರೆಂದರೆ ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯ; ಗುಜರಾತ್ ಸರ್ಕಾರ ಮತ್ತು ಈ ಮಹತ್ವದ ಕಾರ್ಯಕ್ರಮಕ್ಕೆ ಕೊಡುಗೆ ನೀಡಿದ ಎಲ್ಲಾ ಪ್ರಮುಖರು. ನಾನು ಮೊದಲೇ ಸೂಚಿಸಿದಂತೆ, ಇವರಲ್ಲಿ ಯುರೋಪ್ ಮತ್ತು ಆಗ್ನೇಯ ಏಷ್ಯಾದ ನಮ್ಮ ಸ್ನೇಹಿತರು, ಇತಿಹಾಸಕಾರರು, ಪುರಾತತ್ವಶಾಸ್ತ್ರಜ್ಞರು, ನೀತಿ ನಿರೂಪಕರು, ವಿಶೇಷವಾಗಿ ಈ ವಿಭಾಗದಲ್ಲಿ ಆಸಕ್ತಿ ಹೊಂದಿರುವವರು ಇದ್ದಾರೆ ಎಂದು ಗೌರವಾನ್ವಿತ ಸಚಿವರಿಂದ ನಾನು ತಿಳಿಯಲ್ಪಟ್ಟಿದ್ದೇನೆ. ಮುಂಬರುವ ವರ್ಷಗಳಲ್ಲಿ ನಾವು ನಮ್ಮ ನಿರೀಕ್ಷೆಗಳನ್ನು ಮೀರಿ ಗಮನಾರ್ಹವಾಗಿ ಸಾಧನೆ ಮಾಡುತ್ತೇವೆ ಎಂಬುದರಲ್ಲಿ ನನಗೆ ಯಾವುದೇ ಸಂದೇಹವಿಲ್ಲ.

ನಾಳೆಯ ಸಾಧ್ಯತೆಗಳನ್ನು ಸ್ವೀಕರಿಸುವುದರ ಜೊತೆ ಜೊತೆಗೆ ನಮ್ಮ ಗತವನ್ನು ಗೌರವಿಸುವ ಮೂಲಕ ಸಮೃದ್ಧ ಮತ್ತು ಸುಸ್ಥಿರ ಕಡಲ ಭವಿಷ್ಯಕ್ಕಾಗಿ ನಾವು ಒಟ್ಟಾಗಿ ನಮ್ಮ ಹಾದಿಯನ್ನು ರೂಪಿಸೋಣ.

ಇಂತಹ ಮೊದಲ ಸಂದರ್ಭಕ್ಕೆ ಸಾಕ್ಷಿಯಾಗಲು ನನಗೆ ಈ ಅವಕಾಶವನ್ನು ನೀಡಿದ್ದಕ್ಕಾಗಿ ಮತ್ತು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೈಗೊಂಡ ಅನೇಕ ಚೊಚ್ಚಲ ಕ್ರಮಗಳಿಗಾಗಿ ಗೌರವಾನ್ವಿತ ಸಚಿವರಿಗೆ ನಾನು ಆಭಾರಿಯಾಗಿದ್ದೇನೆ.

ಅನಂತಾನಂತ ಧನ್ಯವಾದಗಳು.

 

*****


(Release ID: 2083621) Visitor Counter : 8


Read this release in: English , Urdu , Hindi