ರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ರಾಷ್ಟ್ರೀಯ ಪಂಚಾಯತ್‌ ಪ್ರಶಸ್ತಿ ಪ್ರದಾನ ಮಾಡಿದ ಭಾರತದ ರಾಷ್ಟ್ರಪತಿ

Posted On: 11 DEC 2024 6:58PM by PIB Bengaluru

ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಇಂದು (ಡಿಸೆಂಬರ್‌ 11, 2024) ನವದೆಹಲಿಯಲ್ಲಿ ಸುಸ್ಥಿರ ಮತ್ತು ಅಂತರ್ಗತ ಅಭಿವೃದ್ಧಿಯ ವಿಷಯಗಳಿಗೆ ಅವರ ಅನುಕರಣೀಯ ಕೊಡುಗೆಗಳನ್ನು ಗುರುತಿಸಿ ವಿವಿಧ ವಿಭಾಗಗಳಲ್ಲಿ ಆಯ್ಕೆಯಾದ 45 ಪ್ರಶಸ್ತಿ ವಿಜೇತರಿಗೆ ರಾಷ್ಟ್ರೀಯ ಪಂಚಾಯತ್‌ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರಪತಿ ಅವರು, ನಮ್ಮ ದೇಶದ ಜನಸಂಖ್ಯೆಯ ಸುಮಾರು ಶೇ. 64 ರಷ್ಟು ಜನರು ಹಳ್ಳಿಗಳಲ್ಲಿ ವಾಸಿಸುತ್ತಿದ್ದಾರೆ. ಆದ್ದರಿಂದ, ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು ಗ್ರಾಮಗಳು ಮತ್ತು ಗ್ರಾಮಸ್ಥರ ಅಭಿವೃದ್ಧಿ ಮತ್ತು ಸಬಲೀಕರಣ ಮುಖ್ಯವಾಗಿದೆ. ಕಳೆದ ಒಂದು ದಶಕದಲ್ಲಿಸರ್ಕಾರವು ಪಂಚಾಯತ್‌ಗಳ ಸಬಲೀಕರಣಕ್ಕಾಗಿ ಗಂಭೀರ ಪ್ರಯತ್ನಗಳನ್ನು ಮಾಡಿದೆ, ಇದು ದೃಢವಾದ ಫಲಿತಾಂಶಗಳನ್ನು ಸಾಧಿಸುವ ಗುರಿಯನ್ನು ಹೊಂದಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು.

ಸ್ವಾವಲಂಬಿ ಮತ್ತು ಸಮರ್ಥ ಸ್ಥಳೀಯ ಸಂಸ್ಥೆಗಳ ಆಧಾರದ ಮೇಲೆ ಮಾತ್ರ ಅಭಿವೃದ್ಧಿ ಹೊಂದಿದ ಭಾರತದ ಅಡಿಪಾಯವನ್ನು ಹಾಕಬಹುದು ಎಂದು ರಾಷ್ಟ್ರಪತಿ ಹೇಳಿದರು. ಪಂಚಾಯಿತಿಗಳು ತಮ್ಮದೇ ಆದ ಆದಾಯದ ಮೂಲಗಳನ್ನು ಅಭಿವೃದ್ಧಿಪಡಿಸುವ ಮೂಲಕ ಸ್ವಾವಲಂಬಿಗಳಾಗಲು ಪ್ರಯತ್ನಿಸಬೇಕು. ಈ ಸ್ವಾವಲಂಬನೆಯು ಗ್ರಾಮಸಭೆಗಳಿಗೆ ಆತ್ಮವಿಶ್ವಾಸವನ್ನು ನೀಡುತ್ತದೆ ಮತ್ತು ದೇಶಕ್ಕೆ ಶಕ್ತಿಯನ್ನು ನೀಡುತ್ತದೆ ಎಂದರು.

‘ರಾಷ್ಟ್ರೀಯ ಪಂಚಾಯತ್‌ ಪ್ರಶಸ್ತಿ’ಯ ಎಲ್ಲ ವಿಜೇತರನ್ನು ರಾಷ್ಟ್ರಪತಿ ಅವರು ಅಭಿನಂದಿಸಿದರು. ಈ ಪ್ರಶಸ್ತಿ ಅವರ ಸಮರ್ಪಣೆ ಮತ್ತು ಪ್ರಯತ್ನಗಳಿಗೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು. ಈ ಗೌರವವು ಇನ್ನೂ ಉತ್ತಮ ಕೆಲಸ ಮಾಡಲು ಅವರನ್ನು ಉತ್ತೇಜಿಸುತ್ತದೆ ಮತ್ತು ಗ್ರಾಮದ ಅಭಿವೃದ್ಧಿಗೆ ಅರ್ಥಪೂರ್ಣ ಪ್ರಯತ್ನಗಳನ್ನು ಮಾಡಲು ಇತರ ಗ್ರಾಮ ಪಂಚಾಯಿತಿಗಳಿಗೆ ಸ್ಫೂರ್ತಿ ನೀಡುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಪಂಚಾಯತ್‌ ರಾಜ್‌ ಸಂಸ್ಥೆಗಳು ಮಹಿಳೆಯರನ್ನು ರಾಜಕೀಯವಾಗಿ ಸಬಲೀಕರಣಗೊಳಿಸುತ್ತಿವೆ ಎಂದು ರಾಷ್ಟ್ರಪತಿ ಹೇಳಿದರು. ತಳಮಟ್ಟದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರುವಲ್ಲಿ ಮಹಿಳಾ ಪ್ರತಿನಿಧಿಗಳು ಪ್ರಮುಖ ಪಾತ್ರ ವಹಿಸುತ್ತಿರುವುದು ಸಂತೋಷದ ವಿಷಯವಾಗಿದೆ. ಪಂಚಾಯತ್‌ಗಳಲ್ಲಿ ಚುನಾಯಿತ ಪ್ರತಿನಿಧಿಗಳಾಗಿ ತಮ್ಮ ಕರ್ತವ್ಯಗಳನ್ನು ನಿರ್ಭೀತಿಯಿಂದ ಮತ್ತು ತಮ್ಮ ಎಲ್ಲಾ ದಕ್ಷ ತೆಯಿಂದ ನಿರ್ವಹಿಸುವಂತೆ ಅವರು ಒತ್ತಾಯಿಸಿದರು. ಮಹಿಳಾ ಪಂಚಾಯತ್‌ ಪ್ರತಿನಿಧಿಗಳ ಕುಟುಂಬ ಸದಸ್ಯರು ತಮ್ಮ ಕರ್ತವ್ಯಗಳನ್ನು ನಿರ್ವಹಿಸುವ ಪ್ರವೃತ್ತಿ ಇನ್ನೂ ಕೆಲವು ಸ್ಥಳಗಳಲ್ಲಿಅಸ್ತಿತ್ವದಲ್ಲಿದೆ ಎಂದು ಅವರು ಒತ್ತಿ ಹೇಳಿದರು. ಅಂತಹ ಅಭ್ಯಾಸಗಳನ್ನು ತೊಡೆದುಹಾಕಲು ಮತ್ತು ತಮ್ಮನ್ನು ಸ್ವತಂತ್ರ ನಾಯಕರಾಗಿ ಸ್ಥಾಪಿಸಲು ಅವರು ಮಹಿಳಾ ಪ್ರತಿನಿಧಿಗಳಿಗೆ ಹೇಳಿದರು.

ಚುನಾವಣೆಗಳು ಸಾರ್ವಜನಿಕ ಪ್ರತಿನಿಧಿಗಳನ್ನು ಜನರ ಬಗ್ಗೆ ಜವಾಬ್ದಾರಿಯುತರನ್ನಾಗಿ ಮಾಡುತ್ತವೆ ಎಂದು ರಾಷ್ಟ್ರಪತಿ ಹೇಳಿದರು. ಆದ್ದರಿಂದ, ಪಂಚಾಯತ್‌ ಚುನಾವಣೆಗಳು ಸಮಯೋಚಿತವಾಗಿ ಮತ್ತು ನ್ಯಾಯಸಮ್ಮತವಾಗಿ ನಡೆಯುವುದು ಬಹಳ ಮುಖ್ಯ. ಚುನಾವಣೆಯ ಸಮಯದಲ್ಲಿಮತ್ತು ನಂತರವೂ ಚುನಾವಣಾ ಹಿಂಸಾಚಾರದ ನಿದರ್ಶನಗಳತ್ತ ಅವರು ಗಮನಸೆಳೆದರು. ಚುನಾವಣಾ ಪ್ರಕ್ರಿಯೆಯನ್ನು ಯಾವಾಗಲೂ ಸೌಹಾರ್ದಯುತ ವಾತಾವರಣದಲ್ಲಿ ನಡೆಸಬೇಕು ಎಂದು ಅವರು ಹೇಳಿದರು. ಹಳ್ಳಿಗರು ತಮ್ಮ ಒಳಿತಿಗಾಗಿ ತಮ್ಮೊಳಗೆ ತಮ್ಮದೇ ಆದ ಪ್ರತಿನಿಧಿಗಳನ್ನು ಆಯ್ಕೆ ಮಾಡುತ್ತಿದ್ದಾರೆ ಎಂಬುದನ್ನು ನೆನಪಿನಲ್ಲಿಡಬೇಕು ಎಂದರು.

ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳನ್ನು ಉತ್ತರದಾಯಿಗಳನ್ನಾಗಿ ಮಾಡುವುದು ಮತ್ತು ಆಡಳಿತದಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸುವುದು ಪಂಚಾಯತ್‌ ರಾಜ್‌ ವ್ಯವಸ್ಥೆಯ ಉದ್ದೇಶವಾಗಿದೆ ಎಂದು ರಾಷ್ಟ್ರಪತಿ ಹೇಳಿದರು. ಮತದಾರರು ತಮ್ಮ ಪ್ರತಿನಿಧಿಗಳನ್ನು ಬಹಳ ವಿಶ್ವಾಸದಿಂದ ಆಯ್ಕೆ ಮಾಡುತ್ತಾರೆ ಎಂದು ಅವರು ಹೇಳಿದರು. ಆದ್ದರಿಂದ, ಚುನಾಯಿತ ಪ್ರತಿನಿಧಿಗಳು ತಮ್ಮ ನಡವಳಿಕೆ ಮತ್ತು ಕ್ರಿಯೆಗಳ ಮೂಲಕ ಈ ನಂಬಿಕೆಯನ್ನು ಕಾಪಾಡಿಕೊಳ್ಳುವುದು ಕರ್ತವ್ಯವಾಗಿದೆ ಎಂದು ಹೇಳಿದರು.

ದೇಶಾದ್ಯಂತ ಹಳ್ಳಿಗಳಲ್ಲಿನ ಹೆಚ್ಚಿನ ವಿವಾದಗಳು ಸ್ಥಳೀಯ ಮಟ್ಟದಲ್ಲಿ ಪರಿಹರಿಸಬಹುದು ಎಂದು ರಾಷ್ಟ್ರಪತಿ ಹೇಳಿದರು. ನ್ಯಾಯಾಲಯಕ್ಕೆ ಹೋಗುವುದು ಅವರ ಹಣ ಮತ್ತು ಸಮಯವನ್ನು ವ್ಯರ್ಥ ಮಾಡುವುದಲ್ಲದೆ ನ್ಯಾಯಾಲಯ ಮತ್ತು ಆಡಳಿತದ ಮೇಲೆ ಅನಗತ್ಯ ಒತ್ತಡವನ್ನು ಹೆಚ್ಚಿಸುತ್ತದೆ. ಗ್ರಾಮಸ್ಥರ ನಡುವಿನ ವಿವಾದಗಳನ್ನು ಪಂಚಾಯತ್‌ ಮಟ್ಟದಲ್ಲಿಯೇ ಪರಿಹರಿಸಲು ಎಲ್ಲಾ ಚುನಾಯಿತ ಪ್ರತಿನಿಧಿಗಳು ಪ್ರಯತ್ನಿಸಬೇಕು ಎಂದು ಅವರು ಒತ್ತಾಯಿಸಿದರು. ಇದನ್ನು ಮಾಡಲು ಅವರಿಗೆ ಹಕ್ಕಿದೆ ಮತ್ತು ಅದು ಅವರ ಕರ್ತವ್ಯವೂ ಆಗಿದೆ ಎಂದು ಅವರು ಹೇಳಿದರು.

2024ರ ರಾಷ್ಟ್ರೀಯ ಪಂಚಾಯತ್‌ ಪ್ರಶಸ್ತಿಗಳಲ್ಲಿ ದೀನ್‌ ದಯಾಳ್‌ ಉಪಾಧ್ಯಾಯ ಪಂಚಾಯತ್‌ ಸತ್‌ ವಿಕಾಸ್‌ ಪುರಸ್ಕಾರ್‌, ನಾನಾಜಿ ದೇಶ್‌ಮುಖ್‌ ಸರ್‌ ವೋತ್ತಮ್‌ ಪಂಚಾಯತ್‌ ಸತತ್‌ ವಿಕಾಸ್‌ ಪುರಸ್ಕಾರ್‌, ಗ್ರಾಮ ಉರ್ಜಾ ಸ್ವರಾಜ್‌ ವಿಶೇಷ ಪಂಚಾಯತ್‌ ಪುರಸ್ಕಾರ, ಕಾರ್ಬನ್‌ ನ್ಯೂಟ್ರಲ್‌ ವಿಶೇಷ್‌ ಪಂಚಾಯತ್‌ ಪುರಸ್ಕಾರ ಮತ್ತು ಪಂಚಾಯತ್‌ ಕ್ಷ ಮ್ತಾ ನಿರ್ಮಾಣ್‌ ಸರ್ವೋತ್ತಮ್‌ ಸಂಸ್ಥಾನ್‌ ಪುರಸ್ಕಾರ್‌ ಮುಂತಾದ ವಿಭಾಗಗಳು ಸೇರಿವೆ. ಬಡತನ ನಿರ್ಮೂಲನೆ, ಆರೋಗ್ಯ, ಮಕ್ಕಳ ಕಲ್ಯಾಣ, ಜಲ ಸಂರಕ್ಷಣೆ, ನೈರ್ಮಲ್ಯ, ಮೂಲಸೌಕರ್ಯ, ಸಾಮಾಜಿಕ ನ್ಯಾಯ, ಆಡಳಿತ ಮತ್ತು ಮಹಿಳಾ ಸಬಲೀಕರಣದಲ್ಲಿ ಪಂಚಾಯಿತಿಗಳ ಪ್ರಯತ್ನಗಳನ್ನು ಗುರುತಿಸುವ ಮತ್ತು ಪ್ರೋತ್ಸಾಹಿಸುವ ಗುರಿಯನ್ನು ಈ ಪ್ರಶಸ್ತಿಗಳು ಹೊಂದಿವೆ.

Please click here to see the President's Speech - 

 

*****


(Release ID: 2083583) Visitor Counter : 10