ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಮೂಲ ಆಲೋಚನೆಗಳಿಗೆ ದೀರ್ಘಾಯುಷ್ಯ: ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್
ವಿದೇಶಿ ಪ್ರವಾಸಿಗರನ್ನು ಆಕರ್ಷಿಸಲು ಸಂಗೀತ ರಂಗಭೂಮಿಯ ಮರುಶೋಧನೆ ಅಗತ್ಯ : ಎ.ಆರ್. ರೆಹಮಾನ್
ಜನರಿಗೆ ತಲ್ಲೀನಗೊಳಿಸುವ ಕಲಾ ಅನುಭವ ನೀಡಬೇಕಿದೆ : ಎ.ಆರ್. ರೆಹಮಾನ್
ಸಂಗೀತಕ್ಕೆ ಗುಣಪಡಿಸುವ ಶಕ್ತಿ ಇದೆ; ಸಂಗೀತದ ಪುನರುಜ್ಜೀವನದ ಮೂಲಕ ನಾಗಾಲ್ಯಾಂಡ್ ಮತ್ತೆ ಹೊರಹೊಮ್ಮಿದೆ: ಎ.ಆರ್. ರೆಹಮಾನ್
ಲತಾ ಮಂಗೇಶ್ಕರ್ ಶ್ರೇಷ್ಠತೆಯ ವ್ಯಾಖ್ಯಾನ: ಎ.ಆರ್. ರೆಹಮಾನ್
ಭಾರತದಲ್ಲಿ ಸಂಗೀತ ರಂಗಭೂಮಿ ಕುರಿತು "ಲತಾ ಮಂಗೇಶ್ಕರ್ ಸ್ಮಾರಕ ಉಪನ್ಯಾಸ" ದಲ್ಲಿನ ಸಂವಾದ ಕಾರ್ಯಕ್ರಮದಲ್ಲಿ ಎ ಆರ್ ರೆಹಮಾನ್
ವಾರ್ಷಿಕ ಹಾರ್ನ್ಬಿಲ್ ಸ್ಪರ್ಧೆಯಲ್ಲಿ ಅತಿಥಿಯಾಗಿ ಭಾಗವಹಿಸುವಂತೆ ನಾಗಾಲ್ಯಾಂಡ್ನಿಂದ ದೊರೆತೆ ಆಹ್ವಾನವು ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್ ಅವರು ಸಾಕ್ಷ್ಯಚಿತ್ರ ನಿರ್ಮಾಣದಲ್ಲಿ ತೊಡಗುವಂತೆ ಮಾಡಿತು.
ಅದರ ಫಲಿತಾಂಶವೇನು? "ಹೆಡ್ಹಂಟಿಂಗ್ ಟು ಬೀಟ್ಬಾಕ್ಸಿಂಗ್" ಎಂಬ ಶೀರ್ಷಿಕೆಯ ಸಾಕ್ಷ್ಯಚಿತ್ರ ಮೂಡಿಬಂದಿತು. ಈಶಾನ್ಯ ಭಾರತ ರಾಜ್ಯವಾದ ನಾಗಾಲ್ಯಾಂಡ್ನಲ್ಲಿ ನಾಗಾ ಬುಡಕಟ್ಟಿನ ಸಂಗೀತ ಪಯಣವನ್ನು ಇದು ತೆರೆದಿಡುತ್ತದೆ. ಒಂದೊಮ್ಮೆ ಹಿಂಸಾಚಾರ ಮತ್ತು ರಕ್ತಪಾತದಲ್ಲಿ ಮುಳುಗಿದ್ದ ನಾಗಾಲ್ಯಾಂಡ್ ಹೇಗೆ ಸಂಗೀತದ ಮೂಲಕ ಪುನರುತ್ಥಾನಗೊಳ್ಳಲು ಸಾಧ್ಯವಾಯಿತು ಮತ್ತು ಸಂಗೀತಮಯ ಮರುಹುಟ್ಟಿನೊಂದಿಗೆ ಹೊರಹೊಮ್ಮಿತು ಎಂಬ ಬಗ್ಗೆ ತಿಳಿಸುತ್ತಾ ಸಂಗೀತದ ಗುಣಪಡಿಸುವ ಮಾಂತ್ರಿಕ ಶಕ್ತಿಯನ್ನು ಈ ಸಾಕ್ಷ್ಯಚಿತ್ರ ಪರಿಶೋಧಿಸುತ್ತದೆ. ಗೋವಾದಲ್ಲಿ ನಡೆದ 55 ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐಎಫ್‌ಎಫ್ಐ) ನಲ್ಲಿ ಈ ಸಾಕ್ಷ್ಯಚಿತ್ರ ಪ್ರಥಮ ಪ್ರದರ್ಶನ ಕಂಡಿತು.

“ನಾಗ ಜನರು ಸಂಗೀತವನ್ನು ಪ್ರೀತಿಸುತ್ತಾರೆ. ಅಲ್ಲಿ ಸಂಗೀತ ಮತ್ತು ಕಲಾ ಸಚಿವರೂ ಇದ್ದಾರೆ” ಎಂದು ಐಎಫ್‌ಎಫ್‌ಐ 2024ರ ನೇಪಥ್ಯದಲ್ಲಿ ಗೋವಾದ ಕಲಾ ಅಕಾಡೆಮಿಯಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಎ.ಆರ್. ರೆಹಮಾನ್ ಹೇಳಿದ್ದಾರೆ. ಇದು "ಭಾರತದಲ್ಲಿ ಸಂಗೀತ ರಂಗಭೂಮಿ" ಎಂಬ ವಿಷಯಾಧಾರಿತ ಲತಾ ಮಂಗೇಶ್ಕರ್ ಸ್ಮಾರಕ ಊಪನ್ಯಾಸದ ಭಾಗವಾಗಿತ್ತು.
“ಪಾಶ್ಚಿಮಾತ್ಯ ಪ್ರಪಂಚವು ತನ್ನ ಸಂಗೀತ ರಂಗಭೂಮಿಯ ಮೂಲಕ ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ಸೆಳೆದಿದೆ. ಇಂತಹದ್ದೊಂದು ಆಕರ್ಷಣೆಯನ್ನು ರೂಪಿಸಲು ಅಗತ್ಯವಿರುವ ಎಲ್ಲಾ ಕಲಾ ಸಾಮರ್ಥ್ಯವನ್ನು ನಾವು ಹೊಂದಿದ್ದೇವೆ. ಆದಾಗ್ಯೂ, ಪ್ರವಾಸಿಗರನ್ನು ಆಕರ್ಷಿಸಲು ಮತ್ತು ಇತರ ದೇಶಗಳಿಂದ ಹಣಕಾಸು ಪಡೆಯಲು ನಾವು ಮೂಲಸೌಕರ್ಯಗಳನ್ನು ನಿರ್ಮಿಸಬೇಕಾಗಿದೆ ಮತ್ತು ಹೆಚ್ಚು ಆಕರ್ಷಕವಾಗಿ ಮಾಡಬೇಕಾಗಿದೆ ”ಎಂದು ರೆಹಮಾನ್ ವಿವರಿಸಿದ್ದಾರೆ.
“ಹೆಚ್ಚುತ್ತಿರುವ ನಗರೀಕರಣ ಮತ್ತು ಇಕ್ಕಟ್ಟಾದ ವಾಸದ ಸ್ಥಳಗಳೊಂದಿಗೆ, ಮನೆಗಳು ಆಗ್ಗಾಗ್ಗೆ ಬಂಧೀಖಾನೆಗಳಂತೆ ಭಾಸವಾಗುತ್ತವೆ. ಚಿಂತೆಗಳಿಂದ ಹೊರಬರಲು ಸಕಾರಾತ್ಮಕವಾಗಿ ಪರಿವರ್ತಕವಾಗಿ ನಾವು ಜನರಿಗೆ ತಲ್ಲೀನಗೊಳಿಸುವ ಕಲಾ ಅನುಭವಗಳನ್ನು ನೀಡಬೇಕಾಗಿದೆ. ದೇಶದ ಅನೇಕ ಭಾಗಗಳು ಶ್ರೀಮಂತ ಸಂಗೀತ ರಂಗಭೂಮಿ ಪರಂಪರೆಯನ್ನು ಹೊಂದಿದ್ದು, ಇದು ಒಗ್ಗೂಡಿಸುವ ಅಂಶವಾಗಬಹುದಾಗಿದೆ. ಸಂಗೀತ ರಂಗಭೂಮಿಗಾಗಿ ಪಾಶ್ಚಿಮಾತ್ಯ ದೇಶಗಳಿಗೆ ಭೇಟಿ ನೀಡುವ ಪ್ರವಾಸಿಗರನ್ನು ಆಕರ್ಷಿಸುವ ಉದ್ದೇಶದೊಂದಿಗೆ ವಿದೇಶಿ ಪ್ರವಾಸಿಗರನ್ನು ಸೆಳೆಯಲು ನಮ್ಮ ಸಂಗೀತ ರಂಗಭೂಮಿಯನ್ನು ಸಂಗೀತ ಮತ್ತು ತಂತ್ರಜ್ಞಾನದೊಂದಿಗೆ ಮರು-ಶೋಧಿಸುವ ಅಗತ್ಯವಿದೆ” ಎಂದು ಅವರು ಪ್ರತಿಪಾದಿಸಿದರು.

“ಲತಾ ಜೀ ಅವರು ಪರಿಪೂರ್ಣತೆಯ ಮೂರ್ತರೂಪ. ಲತಾ ಅವರಲ್ಲದೇ ಮೈಕೆಲ್ ಜಾಕ್ಸನ್ ಅವರಂತಹ ಕಲಾವಿದರು ನನಗೆ ಸ್ಫೂರ್ತಿಯ ಸೆಲೆ” ಎಂದು ರೆಹಮಾನ್ ಅವರು ತಮ್ಮ ಪ್ರೇರಣೆಗಳ ಬಗ್ಗೆ ಮಾತನಾಡಿದರು.
ಇತ್ತೀಚಿಗೆ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಲ್ಲಿನ ತಮ್ಮ ಪ್ರದರ್ಶನದಲ್ಲಿ ಅಲ್ಲಿನ ಸಭಿಕರಿಗೆ ಭಾರತೀಯ ಸಂಗೀತವನ್ನು ಪ್ರಸ್ತುತಪಡಿಸಿದ ಬಗ್ಗೆ ಎ.ಆರ್. ರೆಹಮಾನ್ ತಿಳಿಸಿದರು.
ಸಂಗೀತ ಸಂಯೋಜನೆಯ ಪ್ರಮುಖ ಮಾರ್ಗಸೂಚಿಗಳ ಕುರಿತು ಸಂವಾದದಲ್ಲಿ ಭಾಗವಹಿಸಿದವರ ಪ್ರಶ್ನೆಗಳಿಗೆ ಉತ್ತರಿಸಿದ ರೆಹಮಾನ್ ಅವರು, ತನ್ನತನವನ್ನು ಕಳೆದುಕೊಳ್ಳಬಾರದು ಎಂದು ಹೇಳುತ್ತಾ ಮೂಲವನ್ನು ಉಳಿಸಿಕೊಳ್ಳಲು ಸಲಹೆ ನೀಡಿದರು. "ಮೂಲ ಕಲ್ಪನೆಗಳು ದೀರ್ಘಾಯುಷ್ಯವನ್ನು ಹೊಂದಿವೆ," ಎಂದು ಅವರು ಒತ್ತಿ ಹೇಳಿದರು.
ಸಂಗೀತ ರಂಗದ ಮೇಲೆ ಕೃತಕ ಬುದ್ಧಿಮತ್ತೆ (ಎಐ) ಪ್ರಭಾವದ ಬಗ್ಗೆ ಮಾತನಾಡುತ್ತಾ, ಉತ್ತಮ ಮತ್ತು ಅರ್ಥಪೂರ್ಣ ಡಬ್ಬಿಂಗ್ ರಚನೆಗೆ ಕೃತಕ ಬುದ್ಧಿಮತ್ತೆ ಬಳಸಿ ಜನರನ್ನು ಸಬಲೀಕರಣಗೊಳಿಸಬೇಕು ಎಂದು ರೆಹಮಾನ್ ಹೇಳಿದ್ದಾರೆ. "ಆದಾಗ್ಯೂ, ಅದು ಜನರ ಉದ್ಯೋಗಗಳನ್ನು ಕಸಿಯದಂತೆ ನಾವು ಜಾಗರೂಕರಾಗಿರಬೇಕು" ಎಂದು ಅವರು ಎಚ್ಚರಿಸಿದ್ದಾರೆ.
ಕ್ಲೌಡ್-ಆಧಾರಿತ ಸಂಗೀತದ ಬಗ್ಗೆ ಅವರು ವಿಭಿನ್ನ ನಿಲುವನ್ನು ಹೊಂದಿದ್ದಾರೆ. ಕ್ಲೌಡ್ ಆಧಾರಿತ ಸಂಗೀತವೆಲ್ಲ ಕಣ್ಮರೆಯಾದಾಗ ನಮ್ಮ ಬಳಿ ಅನಲಾಗ್ ಪ್ರತಿಗಳೂ ಇರಬೇಕು ಎಂದು ಸಂಗೀತ ಮಾಂತ್ರಿಕರು ಹೇಳಿದರು. "ಕಲಾವಿದರ ಸಂಗೀತದ ಧ್ವನಿಮುದ್ರಣದ ಭೌತಿಕ ಪ್ರತಿಯನ್ನು ಹೊಂದಿದಾಗ ಅದು ಕಲಾವಿದರಿಗೆ ನಮ್ಮ ಗೌರವವನ್ನು ತೋರಿಸುತ್ತದೆ" ಎಂದು ರೆಹಮಾನ್ ತಮ್ಮ ಮಾತು ಮುಗಿಸಿದರು.
ಖ್ಯಾತ ಪತ್ರಕರ್ತರಾದ ಶ್ರೀ ನಮನ್ ರಾಮಚಂದ್ರನ್ ಅವರು ಕಾರ್ಯಕ್ರಮವನ್ನು ನಡೆಸಿಕೊಟ್ಟರು.
*****
(ಪ್ರಕಟಣೆ ಐ.ಡಿ.: 2078837)
ವಿಸಿಟರ್ ಕೌಂಟರ್ : 39