ವಾರ್ತಾ ಮತ್ತು ಪ್ರಸಾರ ಸಚಿವಾಲಯ
55ನೇ ಐಎಫ್ಎಫ್ಐನ ನಾನ್-ಫೀಚರ್ ವಿಭಾಗದಲ್ಲಿ ಮೊದಲ ಬಾರಿಗೆ ಲಡಾಖಿ ಚಿತ್ರ "ಘರ್ ಜೈಸಾ ಕುಚ್" ಗೆ ಅವಕಾಶ
ಈ ಚಿತ್ರದ ಸೇರ್ಪಡೆಯು ಭಾರತದಲ್ಲಿ ಪ್ರಾದೇಶಿಕ ಸಿನೆಮಾದ ಹೆಚ್ಚುತ್ತಿರುವ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ
ಈ ಚಿತ್ರವು ಹೊಸ ಸ್ಥಳಕ್ಕೆ ಸೇರಲು ಹೆಣಗಾಡುವ ಮತ್ತು ಕಳೆದುಹೋದ ಮನೆಗಾಗಿ ಹಂಬಲಿಸುವ ಸಾರ್ವತ್ರಿಕ ವಿಷಯವನ್ನು ಚಿತ್ರಿಸುತ್ತದೆ - ನಿರ್ದೇಶಕ ಹರ್ಷ್ ಸಂಗಾನಿ
ಹೇಳಲಾಗದ ಕಥೆಗಳನ್ನು ಜಾಗತಿಕ ಮುಂಚೂಣಿಗೆ ತರುವ, ಭಾರತದ 55ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನಾನ್-ಫೀಚರ್ ಫಿಲ್ಮ್ ವಿಭಾಗವು ಲಡಾಖಿ ಭಾಷೆಯ ಚಲನಚಿತ್ರ “ಘರ್ ಜೈಸಾ ಕುಚ್” ನೊಂದಿಗೆ ಇಂದು ಪ್ರಾರಂಭವಾಯಿತು. 55ನೇ ಐಎಫ್ಎಫ್ಐನಲ್ಲಿ ಪಿಐಬಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಚಲನಚಿತ್ರ ನಿರ್ಮಾಪಕರು ಪಾತ್ರವರ್ಗ ಮತ್ತು ಸಿಬ್ಬಂದಿಯೊಂದಿಗೆ ಮಾಧ್ಯಮಗಳೊಂದಿಗೆ ಸಂವಹನ ನಡೆಸಿದರು.
“ಘರ್ ಜೈಸಾ ಕುಚ್” ಎಂಬುದು ಸ್ವತಂತ್ರ ನಿರ್ದೇಶಕ ಶ್ರೀ ಹರ್ಷ್ ಸಂಗಾನಿ ನಿರ್ದೇಶನದ ಕಿರುಚಿತ್ರವಾಗಿದೆ. ಈ ಕಿರುಚಿತ್ರವು ಐಎಫ್ಎಫ್ಐನಲ್ಲಿ ನಾನ್-ಫಿಕ್ಷನ್ ವಿಭಾಗದಲ್ಲಿ ಲಡಾಖಿನ ಮೊದಲ ಚಿತ್ರವಾಗಿ ಎಲ್ಲಾ ಕೋನಗಳಿಂದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.
ಈ ಚಿತ್ರವು ತನ್ನ ಆನುವಂಶಿಕ, ಸಂಪ್ರದಾಯಗಳಿಗೆ, ಪರಂಪರೆಗಳಿಗೆ ಅಂಟಿಕೊಳ್ಳುವ ವ್ಯಕ್ತಿಯ ಇಚ್ಛೆ ಮತ್ತು ಅವನ ಭವಿಷ್ಯದ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳುವಲ್ಲಿ ಎದುರಾಗುವ ನಿರಂತರ ಸಂಘರ್ಷವನ್ನು ಅನ್ವೇಷಿಸುತ್ತದೆ. ಈ ಚಿತ್ರವು ಈ ಹೋರಾಟವನ್ನು ವಿಶಿಷ್ಟ ರೀತಿಯಲ್ಲಿ ಚಿತ್ರಿಸಿದೆ, ಅಲ್ಲಿ ನಾಯಕನ ಪೋಷಕರ ಆತ್ಮಗಳು ನಿರೂಪಣೆಯನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಕಥಾವಸ್ತುವು ಲಡಾಖ್ ಸಮುದಾಯದ ಭಾಷೆ, ಸಂಪ್ರದಾಯಗಳು ಮತ್ತು ಅವುಗಳ ತಿರುಳನ್ನು ತನ್ನ ವೀಕ್ಷಕರಿಗೆ ದೃಗ್ಗೋಚರವಾಗಿಸುತ್ತದೆ ಮತ್ತು ಭಾವನಾತ್ಮಕವಾಗಿ ಆಕರ್ಷಿಸುವ ರೀತಿಯಲ್ಲಿ ಅದನ್ನು ಸೆರೆಹಿಡಿಯಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ನಿರ್ದೇಶಕ ಹರ್ಷ್ ಸಂಗಾನಿ, "ನಾನು ಸದಾ ನನ್ನೊಳಗೆ ಕಥೆಯನ್ನು ಹೊಂದಿದ್ದೆ, ಆದರೆ ಅದು ಇಲ್ಲಿಯವರೆಗೆ ವಾಸ್ತವವಾಗಿ ಕಾರ್ಯರೂಪಕ್ಕೆ ಬಂದಿರಲಿಲ್ಲ. ಒಂದು ಕಾಲದಲ್ಲಿ ಅಸ್ತಿತ್ವದಲ್ಲಿದ್ದ ಮನೆಯನ್ನು ಹುಡುಕಲು ಪ್ರಯತ್ನಿಸುವ ಮುಖ್ಯ ಪಾತ್ರದ ಹೋರಾಟಗಳನ್ನು ನಾನು ಪ್ರತಿಬಿಂಬಿಸಿದೆ; ಏಕೆಂದರೆ ನಾನು ನನ್ನ ಸ್ವಂತ ಜೀವನದಲ್ಲಿ ಇದೇ ರೀತಿಯ ಸಂದರ್ಭಗಳನ್ನು ಅನುಭವಿಸಿದ್ದೇನೆ " ಎಂದರು.
ಈ ಚಿತ್ರವು ಪ್ರತಿಯೊಬ್ಬರ ಸಾರ್ವತ್ರಿಕ ಹೋರಾಟಗಳನ್ನು ಮಾರ್ಮಿಕವಾಗಿ ಸೆರೆಹಿಡಿಯುತ್ತದೆ, ತಮ್ಮ ಊರುಗಳ ಪರಿಚಿತ ಪರಿಸರವನ್ನು ಬಿಟ್ಟು ಹೊಸ ಮತ್ತು ಉಜ್ವಲ ಭವಿಷ್ಯವನ್ನು ಹುಡುಕುತ್ತಾ ಅಪರಿಚಿತ ನಗರದ ಕಡೆಗೆ ಹೋಗುವ ವ್ಯಕ್ತಿಗಳು, ತಮ್ಮ ಮನೆಯ ಬಗ್ಗೆ ನೆನಪುಗಳ ಭಾರವನ್ನು (ನಾಸ್ಟಾಲ್ಜಿಯಾವನ್ನು) ಎದುರಿಸುತ್ತಾರೆ.ಅದನ್ನು ಈ ಚಿತ್ರವು ಸೊಗಸಾಗಿ ಚಿತ್ರಿಸಿದೆ.
"ಒಂದು ಕಾಲದಲ್ಲಿ ಆರಾಮದಾಯಕ ಮತ್ತು ಆತ್ಮೀಯತೆಯನ್ನು ಹೊಂದಿದ್ದ ಸ್ಥಳದ ಹಂಬಲವನ್ನು ಪ್ರೇಕ್ಷಕರು ಅನುಭವಿಸುವಂತೆ ಮಾಡುವುದು ನಮ್ಮ ಬಯಕೆ, ಅದಕ್ಕಾಗಿಯೇ ಘರ್ ಜೈಸಾ ಕುಚ್ - ಸಮ್ಥಿಂಗ್ ಲೈಕ್ ಹೋಮ್ ಎಂಬ ಹೆಸರು ಚಿತ್ರಕ್ಕೆ ಸರಿಹೊಂದುತ್ತದೆ ಎಂದು ನಾವು ಭಾವಿಸಿದ್ದೇವೆ" ಎಂದು ಚಿತ್ರದ ನಿರ್ದೇಶಕರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದ ಚಿತ್ರದ ಛಾಯಾಗ್ರಹಣ ನಿರ್ದೇಶಕ ಶ್ರೀ ಕಬೀರ್ ನಾಯಕ್, "ಛಾಯಾಗ್ರಾಹಕರಾಗಿ, ಲಡಾಖ್ ನಂತಹ ಸ್ಥಳಗಳಲ್ಲಿ ಚಿತ್ರೀಕರಣ ಮಾಡುವುದು ಒಂದು ಕನಸಾಗಿತ್ತು. ಅಂತಹ ರಮಣೀಯ ಸ್ಥಳದಲ್ಲಿ ಪಾತ್ರಗಳನ್ನು ಎದ್ದು ಕಾಣುವಂತೆ ಮಾಡಲು ಯಾರೇ ಆದರೂ ಯಾವಾಗಲೂ ಹೆಚ್ಚು ಶ್ರಮಿಸಬೇಕಾಗಿರುವುದರಿಂದ ಇದು ಸಾಕಷ್ಟು ಸಂತೋಷದಾಯಕವಾಗಿರುತ್ತದೆ” ಎಂದರು.
ಲಡಾಖ್ ಮತ್ತು ದೇಶದ ಇತರ ಭಾಗಗಳಲ್ಲಿ ಪ್ರೇಕ್ಷಕರನ್ನು ಹುಡುಕುವ ಆಶಯವನ್ನು ವ್ಯಕ್ತಪಡಿಸಿದ, ನಿರ್ದೇಶಕರು "ಐಎಫ್ಎಫ್ಐ ಆಯ್ಕೆಗೆ ಪ್ರವೇಶಿಸುವ ಮೊದಲಷ್ಟೇ ನಾವು ಚಲನಚಿತ್ರವನ್ನು ತಯಾರಿಸುವುದನ್ನು ಮುಗಿಸಿದ್ದರಿಂದ, ಚಿತ್ರವನ್ನು ವೀಕ್ಷಕರಿಗೆ ತೋರಿಸಲು ನಮಗೆ ಅವಕಾಶ ಇನ್ನೂ ಸಿಕ್ಕಿಲ್ಲ; ಚಲನಚಿತ್ರವನ್ನು ಗುರುತಿಸುವ ಮತ್ತು ಸ್ಪಂದಿಸುವ ಪ್ರೇಕ್ಷಕರನ್ನು ಕಂಡುಕೊಳ್ಳುವ ಭರವಸೆಯನ್ನು ನಾನು ಹೊಂದಿದ್ದೇನೆ ಎಂದರು.
55ನೇ ಐಎಫ್ಎಫ್ಐಗೆ ನಾನ್-ಫೀಚರ್ ಫಿಲ್ಮ್ ವಿಭಾಗದಲ್ಲಿ 262 ಚಲನಚಿತ್ರಗಳು ಬಂದಿದ್ದು, ದೇಶದಾದ್ಯಂತದ ಖ್ಯಾತ ಚಲನಚಿತ್ರ ವ್ಯಕ್ತಿಗಳು ತೀರ್ಪುಗಾರರಾಗಿರುವ ಸಮಿತಿ 20 ಚಲನಚಿತ್ರಗಳನ್ನು ಆಯ್ಕೆ ಮಾಡಿದೆ.
ಐಎಫ್ಎಫ್ಐನಲ್ಲಿ ನಾನ್-ಫೀಚರ್ ಫಿಲ್ಮ್ ವಿಭಾಗವು ಉದಯೋನ್ಮುಖ ಮತ್ತು ಪ್ರಖ್ಯಾತ ಚಲನಚಿತ್ರ ನಿರ್ಮಾಪಕರು ಸಾಕ್ಷ್ಯಚಿತ್ರಗಳು ಮತ್ತು ಕಿರುಚಿತ್ರಗಳ ಮೂಲಕ ತಮ್ಮ ಕೃತಿಗಳನ್ನು ಪ್ರದರ್ಶಿಸಲು ನಡೆಸುವ ಪ್ರಯತ್ನಗಳಿಗೆ ಅವಕಾಶ ನೀಡುತ್ತದೆ.
ಈ ಚಿತ್ರದ ಸೇರ್ಪಡೆಯು ಭಾರತದಲ್ಲಿ ಅದರಲ್ಲೂ ವಿಶೇಷವಾಗಿ ಲಡಾಖ್ ನಂತಹ ಕಡಿಮೆ ಪ್ರಾತಿನಿಧ್ಯದ ಪ್ರದೇಶಗಳಿಂದ ಬರುತ್ತಿರುವ ಪ್ರಾದೇಶಿಕ ಸಿನೆಮಾದ ಪ್ರಾಮುಖ್ಯತೆ ಹೆಚ್ಚುತ್ತಿರುವುದನ್ನು ಎತ್ತಿ ತೋರಿಸುತ್ತದೆ.
*****
(Release ID: 2075893)
Visitor Counter : 20